ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ವೋಟ್ ಕೌಂಟಿಂಗ್, ಸ್ಮಶಾನದಲ್ಲಿ ಮಧ್ಯರಾತ್ರಿ ನಿಗೂಢ ಮೀಟಿಂಗ್!

By ಯಶೋಧರ ಪಟಕೂಟ
|
Google Oneindia Kannada News

ಎಕ್ಸಿಟ್ ಪೋಲ್ ರಿಸಲ್ಟ್ ಹಲವರ ಎದೆಬಡಿತವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿಸಿರುವುದರಿಂದ, ಇಡೀ ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕದ ಕೆಲವರ ಕಣ್ಣಲ್ಲಿ ಆತಂಕದ ಕಾರ್ಮೋಡ ಆವರಿಸಿಕೊಂಡಿದೆ. ಫಲಿತಾಂಶ ಬರುವ ಹೊತ್ತಿಗೆ ಅಥವಾ ನಂತರ ಕೆಲವರ ಕಂಗಳಲ್ಲಿ ತುಂತುರು ಹನಿ ಬೀಳುವ ಅಥವಾ ಭೋರ್ಗರೆಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಎಲ್ಲೆಡೆ 'ಆತಂಕ'ವಾದಿಗಳು ಚೆದುರಿಕೊಂಡಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಒಂದಾಗಿರುವ, ಆಗಾಗ ದ್ವೇಷದ, ಆಕ್ರೋಶದ ಮಾತುಗಳ ಗುಡುಗು ಸಿಡಿಲನ್ನು ಸಿಡಿಸುತ್ತಿದ್ದವರು, ಫಲಿತಾಂಶ ಏನಾಗುವುದೋ ಏನೋ, ಎಕ್ಸಿಟ್ ಪೋಲ್ ಫಲಿತಾಂಶ ನಿಜವಾದರೆ ಗತಿಯೇನು, ತಮಗೆ ಆಗದವರು ಪ್ರಧಾನಿಯಾದರೆ ಮುಂದೇನು ಮಾಡುವುದು ಎಂಬುದನ್ನು ಚರ್ಚಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮೇ 23ರ ಮುನ್ನಾದಿನವೇ ತುರ್ತು ಸಭೆ ಸೇರಲು ನಿರ್ಧರಿಸಿದ್ದಾರಂತೆ.

2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ 2019 ಎಕ್ಸಿಟ್ ಪೋಲ್ ಸರಾಸರಿ: 'ಚೌಕಿದಾರ್' ಮೋದಿ ಮತ್ತೊಮ್ಮೆ

ಇವರಲ್ಲಿ ಹೆಚ್ಚೂಕಡಿಮೆ ಎಲ್ಲರಿಗೂ ದೇವರಲ್ಲಿ ಅಂತಹ ಹೇಳಿಕೊಳ್ಳುವಂತಹ ಶ್ರದ್ಧಾಭಕ್ತಿ ಇಲ್ಲದಿರುವುದರಿಂದ ಮತ್ತು ದೇವರನ್ನು, 'ಭಕ್ತ'ರನ್ನು ಉಡಾಫೆಯಿಂದಲೇ ನೋಡುವುದರಿಂದ, ಕೆಣಕುವುದರಿಂದ, ಕಿಚಾಯಿಸುವುದರಿಂದ, ದೇವಸ್ಥಾನದ ಆವರಣದಲ್ಲಿ ಸಭೆ ಸೇರುವ ಬದಲು ಯಾವುದಾದರೊಂದು ಪ್ರಶಾಂತವಾದ ಸ್ಮಶಾನದಲ್ಲೇ ಮೇ 22ರ ಮಧ್ಯರಾತ್ರಿ ಎಲ್ಲರೂ ಕೂಡುವುದೆಂದು, ಮಾತಿನ ಬಿಲ್ಲುಬಾಣಗಳಿಂದ ಸಜ್ಜಾಗಿಯೇ ಬರಬೇಕೆಂದು ತೀರ್ಮಾನಿಸಿದ್ದಾರೆ. ಸ್ಮಶಾನದಲ್ಲಿ ಮಧ್ಯರಾತ್ರಿ ಏಕೆಂದರೆ, ಆ ಸಮಯದಲ್ಲಿ ಅಲ್ಲ ಮನುಷ್ಯರಾರೂ ಇರುವುದಿಲ್ಲ.

Mysterious meeting at burial ground before election results

ಸ್ಮಶಾನದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಸರಕಾರದ ವಿರುದ್ಧ ಸಿಡಿಗುಂಡುಗುಳುವ ಕೆಲ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳು, ಅವರನ್ನು ಸೋಷಿಯಲ್ ವಾರ್ ಗಾಗಿ ತಯಾರ್ ಮಾಡಿರುವ ವಿದ್ಯಾರ್ಥಿಗಳ ಜೊತೆ ಬರಲಿದ್ದಾರೆ ಎಂಬ ಬಾತ್ಮಿ ದೊರೆತಿದೆ. ಜೊತೆಗೆ ಕೆಲ ಕವಯಿತ್ರಿಯರು, ಕಲಾಕ್ಷೇತ್ರಗಳಲ್ಲಿ ಬಿಟ್ಟಿ ಟಿಕೆಟ್ ಗಾಗಿ ಕಾದು ಕುಳಿತಿರುವ ಕೆಲ ಕವಿಗಳು, ಕೆಲ ಹವ್ಯಾಸಿ ಪತ್ರಕರ್ತರು, ದೇಶ ಬಿಟ್ಟು ಓಡಿಹೋದವರು ಕೆಲವರು, ಖರಖರ ಪ್ರಖರ ಪ್ರಕಾಂಡ ಪಂಡಿತರು, ನಟನೆಗೆ ತಿಲಾಂಜಲಿ ಇಟ್ಟಿರುವ ಕೆಲ ನಟರು, ಒಂದೆರಡು ಟಿವಿ ಸೀರಿಯಲ್ ನಲ್ಲಿ ನಟಿಸಿರುವ ಕೆಲ ಸಂಗೀತಗಾರರು, ಇನ್ನೂ ಹಲವಾರು ಜನರು ಸೇರಲಿದ್ದಾರೆ ಎಂದು ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಸ್ಮಶಾನದಲ್ಲಿನ ಸಭೆಯೆಂದರೆ ಸಭೆ ಸೇರಿದರೆ ಅಷ್ಟೇ ಸಾಕೆ? ಗುಂಡು ತುಂಡುಗಳೂ, ಪಾನೀಯಗಳೂ ಇರಬೇಕೆಂದು ಕಂಡೀಷನ್ ಇಟ್ಟವರೂ ಕೆಲವರಿದ್ದಾರೆ. ಈ ಎಲ್ಲ ಖರ್ಚುವೆಚ್ಚಗಳನ್ನು ತಮ್ಮನ್ನು ಬೆಂಬಲಿಸುವ, ತಮ್ಮಿಂದ ಬೆಂಬಲ ಪಡೆದಿರುವ ಕೆಲ ರಾಜಕಾರಣಿಗಳೇ ಭರಿಸಿದರೆ ಉತ್ತಮ ಎಂದು ಕವಿಯೂ ಆಗಿರುವ, ಲೇಖಕರೂ ಆಗಿರುವ, ಸಿನೆಮಾ ನಿರ್ದೇಶಕರೂ ಆಗಿರುವ, ಸಮಾಜ ಸೇವಕರೂ ಆಗಿರುವ, ಖಾಲಿಯೂ ಕುಳಿತುವ ಆಸಾಮಿಯೊಬ್ಬರು ಸಲಹೆ ನೀಡಿದ್ದಾರೆ. ಇದ್ದಕ್ಕೆ ಚಪ್ಪಾಳೆಯೊಂದಿಗೆ ಎಲ್ಲರೂ ಒಮ್ಮತ ಸೂಚಿಸಿದ್ದಾರೆ.

ಕೈಬೆರಳಿಗೆ ಹಾಕೋ ಮಸಿ ನಂಗ್ ಸ್ವಲ್ಪ ಕೊಡ್ತಿಯೇನು?ಕೈಬೆರಳಿಗೆ ಹಾಕೋ ಮಸಿ ನಂಗ್ ಸ್ವಲ್ಪ ಕೊಡ್ತಿಯೇನು?

ಆದರೆ, ಈ ಬಾರಿ ಯಾರೂ ಕವಿತೆಯನ್ನೂ ಓದುವಂತಿಲ್ಲ, ಬರಹಗಳ ಚರ್ಚೆ ನಡೆಯುವಂತಿಲ್ಲ, ಬೇಂದ್ರೆ ಕುವೆಂಪು ಬಗ್ಗೆ ಮಾತಾಡುವಂತಿಲ್ಲ ಎಂಬ ಮುಂತಾದ ನಿಬಂಧನೆಗಳನ್ನು ಹಾಕಿಕೊಂಡಿದ್ದಾರೆ. ಮತ್ತೊಂದು ಗಮನಿಸಬೇಕಾದ ಸಂಗತಿಯೇನೆಂದರೆ, ಗಂಡಸರು ಸಾಂಕೇತಿಕವಾಗಿ ಬಿಳಿಯ ಜುಬ್ಬಾ ಪೈಜಾಮಾ ಧರಿಸಬೇಕೆಂದೂ, ಹೆಂಗಸರು ಗರಿಗರಿಯಾದ ಬಣ್ಣಬಣ್ಣದ ಕಾಟನ್ ಸೀರೆ ಉಟ್ಟುಕೊಂಡು ಬರಬೇಕೆಂದೂ ಠರಾವು ಮಾಡಲಾಗಿದೆ. ಸ್ಮಶಾನದಲ್ಲಿನ ದೆವ್ವಭೂತಗಳನ್ನು ಗಮನದಲ್ಲಿಟ್ಟುಕೊಂಡು ಯಾರೂ ಕಪ್ಪು ದಿರಿಸಿನಲ್ಲಿ ಬರಬಾರದೆಂದು ಕಟ್ಟುನಿಟ್ಟಿನ ಅಪ್ಪಣೆ ಮಾಡಲಾಗಿದೆ.

ಒಂದು ವೇಳೆ, ಮೇ 23ರ ಬೆಳಗಾಗಿ, ಮತಗಣನೆ ಆರಂಭವಾಗಿ, ಇವಿಎಂಗಳು ಕೈಕೊಟ್ಟು ಫಲಿತಾಂಶ ಎಕ್ಸಿಟ್ ಪೋಲ್ ಫಲಿತಾಂಶಕ್ಕೆ ತದ್ವಿರುದ್ಧವಾದರೆ ಮಹಾಘಟಬಂಧನ್ ದಿಂದ ಯಾರನ್ನು ಪ್ರಧಾನಿ ಮಾಡಬೇಕು ಎಂಬುದನ್ನು ಮೊದಲೇ ತೀರ್ಮಾನಿಸಿಕೊಂಡು ಬರಬೇಕಾಗಿ ಆದೇಶ ನೀಡಲಾಗಿದೆ. ಇಂಥವರನ್ನೇ ಪ್ರಧಾನಿ ಮಾಡಬೇಕಾದರೆ, ಯಾಕೆ ಮಾಡಬೇಕು, ಅವರಿಗಿರುವ ಜಾತಿ ಅರ್ಹತೆಯೇನು, ಅವರು ನಮಗೆ ಮುಂದೇನು ಮಾಡಬಲ್ಲರು, ಎಡಪಂಥೀಯರಾಗಿದ್ದರೆ ಎಷ್ಟು ಎಡಪಂಥೀಯರು ಇತ್ಯಾದಿ ವಿಷಯಗಳನ್ನು ಮನದಲ್ಲಿ ಇಟ್ಟುಕೊಂಡು ವಿವರವಾದ ಟಿಪ್ಪಣಿ ಬರೆದುಕೊಂಡು ಬರಬೇಕಾಗಿ ಸಂದೇಶ ರವಾನಿಸಲಾಗಿದೆ. ಜೊತೆಗೆ ಇವಿಎಂ ಅನ್ನು ದೂರಲು ತರಹೇವಾರಿ ಕಾರಣಗಳನ್ನು ಸಿದ್ದಪಡಿಸಿಕೊಂಡು ಬರಲು ಸೂಚಿಸಲಾಗಿದೆ.

ಒಂದು ವೇಳೆ, ಮೇ 23ರಂದು ಬೆಳಗಾಗಿ, ಫಲಿತಾಂಶ ಹೊರಬಂದು ಎಕ್ಸಿಟ್ ಪೋಲ್ ಫಲಿತಾಂಶ ನಿಖರವಾಗಿ ಬಂದು, ಆ ಸಮೀಕ್ಷೆಗಳು ಹೇಳಿದಂತೆಯೇ ಎಲ್ಲವೂ ನಿಜವಾದರೆ ಮತ್ತು ಈಗಿರುವ ಪಕ್ಷವೇ ಮತ್ತೆ ಅಧಿಕಾರಕ್ಕೆ ಬಂದರೆ, ಎಲ್ಲರೂ ಸಂಜೆಯ ಹೊತ್ತಿಗೆ ಮತ್ತೆ ಟೌನ್ ಹಾಲ್ ಕಟ್ಟೆಯ ಮೇಲೆ ಸೇರಬೇಕೆಂದು ಒಕ್ಕೊರಲಿನಿಂದ ತೀರ್ಮಾನಿಸಿದ್ದಾರೆ. ಯಾರಾದರೂ ಬರದಿದ್ದರೆ ಅವರನ್ನು ಮತ್ತೆ ತಮ್ಮ ಸಂಘಟನೆಗೆ ಸೇರಿಸಿಕೊಳ್ಳಬಾರದೆಂಬ ನಿಲುವಿಗೂ ಬರಲಾಗಿದೆ. ಈ ಸಭೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

English summary
Political Satire : Mysterious meeting at burial ground before Lok Sabha election results 2019 in Bengaluru by intellectuals, writers, professors, actors, poli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X