• search

ಹಾಸ್ಯ : ನಿಮಗೂ ಹಿಂಗೇ ಅನ್ಸುತ್ತಾ? ನಿಜ ಹೇಳಿ!

By ನಾಗರಾಜ ಎಂ, ಕನೆಕ್ಟಿಕಟ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  "ರೀ... ರೀ... ಹತ್ತು ಗಂಟೆ... ಇನ್ನು ಮಲಗಿದಿರಲ್ಲಾ..? ಎದ್ದೇಳಿ... " ಅಂತ ಹೆಂಡ್ತಿ ಜೋರಾಗಿ ಟಿವಿ ರೂಮಿನಿಂದಲೇ ಕೂಗಿ ಕರೆದಿದ್ದ ಕೇಳಿ... ಸಿಹಿ ಕನಸ ಕಾಣುತ್ತಾ ಸವಿಯಾದ ನಿದ್ದೆಯಲ್ಲಿದ್ದ ನನಗೆ... ಧಡಕ್ಕಂತ ಎಚ್ಚರ ಆಗಿತ್ತು.

  "ಲೇ... ಭಾನುವಾರ ಇವತ್ತು.. ಇವತ್ತಾದ್ರು ನೆಮ್ಮದಿಯಾಗಿ ನಿದ್ದೆ ಮಾಡಾಕೆ ಬಿಡಲ್ವಲ್ಲಾ ನೀನು? ಈಗ ಎದ್ದು ಏನು ಮಾಡ್ಬೇಕಾಗಿದೆ ಅಂತದ್ದು?" ಅಂತ ಹೇಳುತ್ತ ಮತ್ತೆ ಮುಸುಕು ಎಳೆದುಕೊಂಡೆ.

  "ಶಾಪಿಂಗ್ಗೆ ಹೋಗ್ಬೇಕು ಎದ್ದು ಬನ್ನಿ ಸಾಕು".. ಅವಳ ಉತ್ತರ ಕೇಳಿ, ಒಮ್ಮೆ ಎದೆ ಧಸಕ್ಕ್ ಅಂತ ಅಂದ್ರೂ ಬಿಡದೆ ತಿರುಗಿ ಕೇಳಿದ್ದೆ "ಮೊನ್ನೆ ತಾನೇ ದೀಪಾವಳಿ ಹಬ್ಬಕ್ಕೆ ಅಂತ ಇದ್ದಬದ್ದದ್ದನ್ನೆಲ್ಲ ಖರೀದಿ ಮಾಡಿ ಆಯಿತಲ್ಲ... ಮತ್ತೇನು ನಿಂದು ಈಗ?"

  "ದೀಪಾವಳಿ ಎಲ್ಲ ಮುಗಿದು ಹೋದ ಕಥೆ. ನಿನ್ನೆ ನಮ್ಮ ಮಹಿಳಾ ಮಂಡಳಿ ಸಭೆಯಲ್ಲಿ ಆ ಸರೋಜಾ ಒಂದು ಹೊಸ ಡಿಸೈನ್ ಇರೋ ಗೋಲ್ಡನ್ ನೆಕ್ಲೆಸ್ ಹಾಕೊಂಡು ಬಂದಿದ್ಲು.. ಎಷ್ಟು ಚೆನ್ನಾಗಿ ಇದೆ ಗೊತ್ತಾ? ಅವರದೇ ಗೋಲ್ಡ್ ಶಾಪ್ ನಲ್ಲಿ ಮಾಡಿದ್ದಂತೆ... ಏನೋ ಹೊಸ ಆಫರ್ ಇಟ್ಟಿದಾರಂತೆ... ಅದಕ್ಕೆ ನಾವು ಹೋಗಿ ನೋಡಿ ತಗಂಡು ಬರಬಹುದಲ್ವಾ?" ಅಂತ ನಿಧಾನವಾಗಿ ಪ್ರೀತಿಯಿಂದ ಅವಳು ಉಲಿಯುವುದ ನೋಡಿ.. ನನಗೆ ನಿಧಾನವಾಗೇ ಬಿಪಿ ಏರ್ತಾ ಇತ್ತು! [ಏನ್ಮಾಡ್ತೀರಿ? ಕಟಗೊಂಡೇವಿ ಅನಭವಿಸಬೇಕ ಇಷ್ಟ!]

  Demonetisation and humor : Conversation between husband and wife

  "ಅಲ್ಲೇ... ಇದ್ದ ಬದ್ದ ದುಡ್ಡನ್ನೆಲ್ಲ ಹಬ್ಬಕ್ಕೆ ಖರ್ಚು ಮಾಡಿ ಆಯಿತು... ತಿಂಗಳ ಮಧ್ಯೆ ಬೇರೆ... ಇನ್ನು 15 ದಿನ ಕಾಯ್ಬೇಕು ಸಂಬಳಕ್ಕೆ.. ನೀನು ನೋಡಿದ್ರೆ ಗೋಲ್ಡ್ ನೆಕ್ಲೇಸ್ ಬೇಕು ಅಂತಿಯಲ್ಲಾ?" ಸ್ವಲ್ಪ ಜೋರಾಗೆ ಕೇಳಿದ್ದಕ್ಕೆ..

  "ಅಲ್ಲರೀ, ನಿನ್ನೆ ರಾತ್ರಿ ಮಲಗೋವಾಗ ನೀವೇ ಹೇಳಿದ್ರಿ... ನೀನು ಖುಷಿಯಾಗಿದ್ರೆ.. ಮನೆ-ಮನವೆಲ್ಲಾ ಖುಷಿ ಖುಷಿ ಕಣೆ ಅಂತ... ಅಷ್ಟು ಬೇಗ ಮರಿತೀರಲ್ಲಾ ನೀವು? ಏನು ಜನನೋ ಏನೋ.." ಸಿಡುಕಿದ್ಳು ನನ್ನ ಸಿಡುಕಿ!

  ಮನದಲ್ಲೇ ಅಂದುಕೊಂಡಿದ್ದೆ... ಅಲ್ಲಲ್ಲಾ ಬಯ್ದುಕೊಂಡಿದ್ದೆ ನನ್ನನ್ನೇ ನಾನು.. ಯಾಕಾದ್ರೂ ಹಂಗೆ ಹೇಳಿದ್ನೋ ಅಂತ!

  ಹ್ಹ್ಹ್ಮ್ಮ್ ..ನೋಡು... ಈಗ ನನ್ನ ಹತ್ರ ದುಡ್ಡಿಲ್ಲಾ... ನಿನ್ನ ಫ್ರೆಂಡ್ ಆ ಸರೋಜಮ್ಮನ ಶಾಪ್ ನಲ್ಲಿ ಕ್ರೆಡಿಟ್ ಕಾರ್ಡ್ ತಗೋತಾರಾ? ಅಂತ ಕೇಳಿದ್ದಕ್ಕೆ... ಅದಕ್ಕೆ ಅಡ್ಡಡ್ಡ ತಲೆಯಾಡಿಸಿದ್ದ ಕಂಡು .. ಮತ್ತೆ ಕೇಳಿದ್ದೆ... ದೀಪಾವಳಿ ಹಬ್ಬಕ್ಕೆ ಲಕ್ಷ್ಮಿ ಪೂಜೆಗೆ ಅಂತ ಇಟ್ಟಿದ್ದೆಯಲ್ಲಾ... ಆ ಐನೂರು, ಸಾವಿರ ನೋಟುಗಳು... ಸುಮಾರು ಒಂದು ಹತ್ತು ಹದಿನೈದು ಸಾವಿರ ಇರಬಹುದಲ್ವಾ? ಅಷ್ಟು ದುಡ್ಡಿಗೆ ಬರುತ್ತಾ ಆ ಸರ?" ಅಂದಿದ್ದಕ್ಕೆ... ಖುಷಿಯಿಂದಲೇ ಯಸ್ ಯಸ್ ಅಂತ ಮೇಲೆ ಕೆಳಗೆ ತಲೆಯಾಡಿಸಿದ್ದಳು.

  ಸರಿ... ಹೋಗೋಣ... ಅಂದ್ರೆ ಒಂದು ಪ್ರಾಬ್ಲಮ್ ಇದೆಯಲ್ಲೇ? ಅಂತ ನಾ ಗೊಣಗಿದಾಗ... ಏನ್ರೀ ಅದು ಪ್ರಾಬ್ಲಮ್? ಖುಷಿಯಾಗಿದ್ದ ಅವಳು ಸ್ವಲ್ಪ ಗಾಬರಿಯಲ್ಲೇ ಕೇಳಿದ್ದಳು. [ಗೂಗಲನಾಗ ಯಾವದರ ಕನ್ಯಾ ಇದ್ದರ ನೋಡಪಾ!]

  "ನೋಡು ಮೊನ್ನೆ ಮೋದಿಜಿ... ಈ ಐನೂರು, ಸಾವಿರದ ನೋಟುಗಳನ್ನೆಲ್ಲ ಬ್ಯಾನ್ ಮಾಡಿದರಲ್ಲಾ... ಈಗ ನಮ್ಮ ಹತ್ತಿರ ಇರೋ ಈ ನೋಟುಗಳನ್ನು ಆ ಬಂಗಾರದ ಅಂಗಡಿಯೋರು ತಗೋಣಲ್ಲಾ... ಏನು ಮಾಡೋದು?" ಅಂತ ಸುಮ್ಮನೆ ಅವಳನ್ನೇ ನೋಡುತ್ತಾ ಯೋಚನೆ ಮಾಡೋ ಹಾಗೆ ತಲೆ ಕೆರೆದುಕೊಂಡಿದ್ದೆ!

  "ರೀ... ನ್ಯೂಸ್ನಲ್ಲಿ ನಾನೂ ನೋಡಿದೆ... ಆದ್ರೆ ಹಳೆ ನೋಟು ಕೊಟ್ಟು ಹೊಸ ನೋಟು ಎಕ್ಸ್ಚೇಂಜ್ ಮಾಡಿಸಬಹುದಂತೆ... ಇವತ್ತು ಭಾನುವಾರನು ಬ್ಯಾಂಕ್ಸ್ ಓಪನ್ ಇದಾವಂತೆ..." ಅವಳೇಳಿದ್ದ ಕೇಳಿ.. ಎಲಾ ಇವಳಾ? ಇಷ್ಟುದಿನ ಆ ತಲೆಕೆಟ್ಟ ಧಾರಾವಾಹಿಗಳ ಬಿಟ್ಟು ನ್ಯೂಸ್ ಚಾನೆಲ್ ಕಡೆ ಒಮ್ಮೆಯೂ ತಿರುಗಿ ನೋಡದ ಇವಳು... ನ್ಯೂಸ್ ಚಾನೆಲ್ ನೋಡಿದ್ದಾಳೆ ಅಂದ್ರೆ.. ಭೇಷ್ ಅಂತ ನನಗೆ ನಾನೇ ಅಂದುಕೊಂಡಿದ್ದೆ!

  "ನೋಡು... ನೀ ಕೇಳಿದ ಹಾಗೆ, ಬಂಗಾರದ ನೆಕ್ಲೇಸ್ ತಗೆಸಿ ಕೊಡ್ತೀನಿ... ಆದ್ರೆ... ನೀನೆ ಬ್ಯಾಂಕ್ಗೆ ಹೋಗಿ ನೋಟು ಎಕ್ಸ್ಚೇಂಜ್ ಮಾಡಿಸಿಕೊಂಡು ಬರ್ಬೇಕು... ಅದೂ ಒಂದೇ ದಿನಕ್ಕೆ ಆಗೋಲ್ಲ... ದಿನಕ್ಕೆ ಬರಿ 2 ಸಾವಿರ ಎಕ್ಸ್ಚೇಂಜ್ ಮಾಡಿಸ್ಕೊಬೋದು... ಸೋ ..ಏಳೆಂಟು ಬಾರಿ ಬ್ಯಾಂಕ್ಗೆ ಅಡ್ಡಾಡಬೇಕು.. ಅದರಲ್ಲೂ ದೊಡ್ಡ ಲೈನ್ ಇರುತ್ತೆ ಇವಾಗ... ನಾನೇ ಹೋಗ್ತಿದ್ದೆ... ಅದೇನೋ ಎಲ್ಲರೂ ಹೇಳ್ತಾರಲ್ಲ... ಹೆಣ್ಮಕ್ಕಳಿಗೇ ಸ್ವಲ್ಪ ಸಹನೆ, ಸಹಿಷ್ಣುತೆ ಜಾಸ್ತಿ ಅಂತ.. ಅದನ್ನಾ ನಾ ಪೂರ್ತಿ ಒಪ್ಪುತ್ತೀನಿ... ನಂಗೆ ನಿನ್ನಷ್ಟು ಸಹನೆ ಇಲ್ಲ ಅಷ್ಟೊಂದು ದೊಡ್ಡ ಕ್ಯೂನಲ್ಲಿ ಗಂಟೆಗಂಟ್ಲೆ ನಿಲ್ಲೋ ಅಷ್ಟು.... ಅದಕ್ಕೆ ನೀನೇ ಹೋಗಿ ಎಕ್ಸ್ಚೇಂಜ್ ಮಾಡಿಕೊಂಡು ಬರ್ತಿಯಾ?" ಅಂತ (ಕಿರುನಗೆ ಬಂದ್ರೂ.. ತೋರದೆ, ಮೀಸೆಯಲ್ಲೇ ನಗೆ ಅಡಗಿಸಿ) ಅವಳಿಗೆ ಕೇಳಿದ್ದೆ.

  "ಹ್ಮ್ಮ್... ಅಲ್ಲರೀ ನಾನೂ ಹೆಂಗೆ ಗಂಟೆಗಟ್ಲೆ ಹೋಗಿ ನಿಲ್ಲಲಿ ಆ ಲೈನ್ ನಲ್ಲಿ... ಅದೂ ಒಳ್ಳೊಳ್ಳೆ ಧಾರಾವಾಹಿಗಳು ಬರೋ ಟೈಮಲ್ಲಿ... ಹಾ" ಅಂತ ಅವಳಂದಿದ್ದ ಕೇಳಿ... ಮತ್ತೆ ಎಲ್ಲಿ ನಾನೇ ಹೋಗ್ಬೇಕಾಗುತ್ತೋ ಅಂತ ಯೋಚಿಸಿ... ಇವಳಿಗೆ ಹೆಂಗೆ ಹೇಳಿದ್ರೆ ಒಪ್ತಾಳೆ ಅಂತ ತಲೆ ಕೆರೆದುಕೊಂಡು ಯೋಚಿಸಿದ್ದೆ ಒಂದು ಕ್ಷಣ!

  "ನೋಡು... ನಿಂಗೆ ಧಾರಾವಾಹಿಗಳು ಎಲ್ಲಿ ಮಿಸ್ ಆಗ್ತಾವೋ ಅಂತ ಯೋಚನೆ... ಗಂಟೆಗಂಟ್ಲೆ ಲೈನಲ್ಲಿ ನಿಲ್ಲೋಕೆ ಕಷ್ಟ ಅಂತೀಯಾ... ನೀನೆ ಯೋಚನೆ ಮಾಡು... ನಮ್ಮ ದೇಶದ ಗಡಿಯಲ್ಲಿ ಚಳಿ-ಮಳೆ-ಬಿಸಿಲು ಅನ್ನೋದೇ ಜೀವಕ್ಕೆ ಯಾವಾಗ ಆಪತ್ತು ಬರುತ್ತೋ ಅಂತ ಯೋಚನೆ ಇದ್ರೂ, ದಿನವಿಡೀ ಬಂದೂಕು ಹೊತ್ತು ಗಡಿ ಕಾಯ್ತಾರಲ್ಲ ನಮ್ಮ ಸೈನಿಕರು... ಅವರ ಮುಂದೆ ನಾವೆಲ್ಲಾ ಏನು?"

  "ಅದೂ ಅಲ್ದೆ, ಗಂಟೆಗಂಟ್ಲೆ ಲೈನಲ್ಲಿ ನಿಲ್ಲೋಕೆ ಕಷ್ಟ ಅಂತ ನೀ ಹೇಳ್ತಿಯಲ್ಲಾ... ಮೋದಿಜಿ ನಮ್ಮ ದೇಶಕ್ಕೆ ಎಪ್ಪತ್ತು ವರುಷಗಳಿಂದ ಅಂಟಿಕೊಂಡಿರೋ ಈ ಕಪ್ಪು ಹಣ-ಭ್ರಷ್ಟಾಚಾರ ನಿವಾರಣೆ ಮಾಡ್ಲಿಕ್ಕೆ ಎಷ್ಟು ಕಷ್ಟದ ನಿರ್ಧಾರ ತಗೊಂಡು... ಬಲಾಢ್ಯರನ್ನು ಎದುರು ಹಾಕೊಂಡು ಹಗಲಿರುಳು ಕೆಲ್ಸಾ ಮಾಡ್ತಿದಾರಲ್ಲಾ... ಅವರನ್ನ ನೋಡಿಯಾದ್ರು ಕಲೀಬೇಕಲ್ವಾ?"

  "ನೋಡು... ಹೇಗೂ ಸ್ವಲ್ಪ ದಿನ ಟೈಮ್ ಕೊಟ್ಟಿದಾರೆ... ಈ ಹಳೆ ಹಣವನ್ನು ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಿ ಹೊಸ ನೋಟು ಬಿಡಿಸಿಕೊಳ್ಳಲಿಕ್ಕೆ... ಸುಮ್ನೆ ಈಗ್ಲೇ ಯಾಕೆ ಅವಸರ ಮಾಡ್ಕೋಬೇಕು... ಸ್ವಲ್ಪ ದಿನಗಳಾದ ಮೇಲೆ ಒಮ್ಮೆ ಸಹಜ ಸ್ಥಿತಿಗೆ ಬಂದಮೇಲೆ ನಾನೇ ಹೋಗಿ ಡೆಪಾಸಿಟ್ ಮಾಡಿ ಬಿಡುಸ್ಕೊಂಡು ಬರ್ತೀನಿ.. ಸೋ, ಡಿಸೆಂಬರ್ ನಲ್ಲಿ ನಿನ್ನ ಬಂಗಾರದ ಸರ ತಗೊಂಡ್ರೆ ಆಗೋಲ್ವಾ? ನೋಡು ಏನಂತೀಯಾ?" ಅಂತ ನನ್ನ ದೀರ್ಘ ಭಾಷಣ ಮುಗಿಸಿ ಕೇಳಿದಾಗ...

  ನನ್ನವಳು "ಸೈನಿಕರು, ದೇಶದ ಗಡಿ, ಮೋದಿಜಿ" ಅಂತ ಏನೋ ಗೊಣ-ಗೊಣ ಅಂತ ಯೋಚನೆ ಮಾಡ್ತಾ... ಸರಿ ಬಿಡ್ರಿ.. ನೀವೂ ಹೇಳೋದ್ರಲ್ಲಿ ಖರೆ ಅಯ್ತಿ... ನೋಡೋಣ ಮುಂದಿನ ತಿಂಗಳು ಬಿಡ್ರಿ " ಅಂತ ನಗುತ್ತಲೇ ಒಪ್ಪಿಗೆ ಸೂಚಿಸಿ.. ಸರಿ ನೀವು ಇನ್ನು ಸ್ವಲ್ಪ ಹೊತ್ತು ಮಲ್ಕೊಳ್ಳಿ ಅಂತ ನುಡಿದು, ಅವಳು ನಡೆದದ್ದ ಕಂಡು... ನಂಗೆ ಒಂದೆಡೆ ಆಶ್ಚರ್ಯ... ಜೊತೆಗೆ ಸಂತೋಷ ಆದ್ರೂ ತೋರಿಸದೆ "ಅಬ್ಬಾ...ಮದುವೆ ಆಗಿ ಇಷ್ಟು ವರ್ಷಕ್ಕೆ... ಮೊದಲ ಬಾರಿ ನಾ ಹೇಳಿದ್ದಕ್ಕೆ, ಎದುರು ವಾದಿಸದೆ ಒಮ್ಮೆಲೇ ಒಪ್ಪಿಗೆ ಸೂಚಿಸಿದಳಲ್ಲಾ ..ಓಹ್ ಮೈ ಗಾಡ್! ಓ ಮೋದಿಜಿ, ಸೈನಿಕರೇ... ನೀವೇ ಗ್ರೇಟ್... ನಿಮ್ಮಿಂದಾಗಿ ಇಂದು ನಾ ಬಚಾವ್ ಆದೆ... ನೀವು ಮಾಡ್ತಿರೋ ಒಳ್ಳೆ ಕೆಲ್ಸಕ್ಕೆ ನನ್ನ ಪೂರ್ಣ ಸಹಮತ ಯಾವಾಗ್ಲೂ!" ಅಂತ ಅವರಿಗೆ ಮನದಲ್ಲೇ ವಂದಿಸಿ ..ಮತ್ತೆ ಬೆಡ್ ಶೀಟ್ ಎಳೆದುಕೊಂಡು ಮಲಗ್ತಾ ಅಂದುಕೊಂಡಿದ್ದೆ....

  "ಯಾಕೆ ಮೋದಿಜಿ... ಈ ಐನೂರು, ಸಾವಿರದ ನೋಟುಗಳು
  ಬರೀ ಖಾಲಿ ಕಾಗದ ಅಂತ ಹೆಂಗೆ ಹೇಳಿದ್ರೋ...
  ಹಾಗೇನೇ... ಈ ಬಂಗಾರ ಎಂಬ ಮೆಟಲ್
  ಬರೀ ಒಂದು ಬೆಲೆಯಿಲ್ಲದ ಖಾಲಿ ತಗಡು" ..ಅಂತ ಡಿಕ್ಲೇರ್ ಮಾಡಬಾರ್ದು?

  ಯಾರಿಗೆ ಇದರಿಂದ ಲಾಭ-ಲೂಕ್ಸಾನು ಆಗುತ್ತೋ ಗೊತ್ತಿಲ್ಲ...ಅದರ ಚಿಂತೆ ನಂಗೆ ಯಾಕೆ? ಅಂಗೇನಾದ್ರು ಡಿಕ್ಲೇರ್ ಮಾಡಿದ್ರೆ... ನನಗಂತೂ ತುಂಬಾ ಲಾಭಾನೇ".... ನಿಮಗೂ ಹಿಂಗೇ ಅನ್ಸುತ್ತಾ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Demonetisation and humor : Conversation between husband and wife regarding purchase of golden ornaments. But, conversion of old notes to new one has created lots of practical problems. Hope one day gold is also declared as waste metal!

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more