ಮಧುಚಂದ್ರ ಕೆಡಿಸಲು ಬಂದಳಪ್ಪ ಮೇನಕೆ

ಅಪ್ಪ ಅಮ್ಮನ ಒತ್ತಾಯಕ್ಕೆ ಮನಸ್ಸಿಲ್ಲದೆ
ಅಂದು ಮದುವೆಗೆ ಅಂದಿದ್ದೆ ಒಪ್ಪಿ ಜೈ..
ಸರಸಳ ನೋಡಿ ಮನದಲ್ಲೇ ಅಂದೆ
ಇಂದು.. ಅಪ್ಪ-ಅಮ್ಮ, ನಿಮ್ಮ ಸೆಲೆಕ್ಶನ್ ಸೂಪರ್ ಸೈ!
ಹಾಗೇ ಒಂದು ಗಳಿಗೆ ಅವಳ ಸೌಂದರ್ಯ ಸಿರಿ ನೋಡುತ್ತಾ ಮೈ ಮರೆತಿದ್ದಾಗ, ಹಲೋ ಹಲೋ ಅನ್ನೋ ಧ್ವನಿಗೆ ಎಚ್ಚೆತ್ತು ಅವಳಿಗೆ ಡಿಸ್ಟರ್ಬ್ ಆಗದಂತೆ ಮೆಲ್ಲಗೆ ಮೊಬೈಲಿನಲ್ಲಿ ಮಾತಾಡತೊಡಗಿದ್ದೆ. "ಹಲೋ ಹೇಳಪ್ಪ ..ಓಹ್ ಹೌದಾ.. ಸರಿ.. ಸೋಮವಾರ ಮಧ್ಯಾನ್ಹ 3 ಗಂಟೆಗೆ ಸುಜಾತ ಹತ್ತಿರ, 5 ಗಂಟೆಗೆ ಕಾವೇರಿ, 7ಕ್ಕೆ ಮೇನಕೆ ಬಳಿ ಇರ್ತೀನಿ... ಮತ್ತೆ ಮಂಗಳವಾರ ಬೆಳೆಗ್ಗೆ 10ಕ್ಕೆ ಊರ್ವಶಿ ಹತ್ತಿರ, 2ಕ್ಕೆ ಕಲ್ಪನಾ ಹತ್ತಿರ, ಆಮೇಲೆ ಸಂಜೆ 7ಕ್ಕೆ ಶಾಂತಲ ಬಳಿ ಇರ್ತೀನಿ... ಅವೊತ್ತು ಮನೆಗೆ ಹೋಗಲು ಸ್ವಲ್ಪ ಲೇಟ್ ಆಗಬಹುದು... ನೀನೂ ಅಲ್ಲಿಗೆ ಬಾ, ನಿಂಗೂ ಪರಿಚಯ ಮಾಡಿಸಿಕೊಡುತ್ತೇನೆ, ಆಮೇಲೆ ನೀನೆ ಅವರ ಜೊತೆ ಫಾಲೋ ಅಪ್ ಮಾಡ್ಕೋಬಹುದು" ಅಂತ ಶಾರ್ಟ್ ಅಂಡ್ ಸ್ವೀಟ್ ಆಗಿ ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಬಂದಿದ್ದೆ ಮಧು ಮಂಚಕ್ಕೆ!
ಆ ಕಡೆ ಹೊರಳಿ ಮಲಗಿದ್ದ ಸರಸಳನ್ನು ಸರಸದಿಂದ ಹಿಡಿದು ಮಲಗಲು ಯತ್ನಿಸಿದಾಗ ಸರಕ್ಕಂತ ದೂರ ಸರಿದ್ದಿದ್ದಳು! ಸಾರೀ ಡಿಸ್ಟರ್ಬ್ ಆಯಿತಾ ಚಿನ್ನಾ? ಅಂತ ಅಂದಾಗ ಏನು ಮಾತನಾಡದ ಅವಳಿಂದ 5 ನಿಮಿಷ ಆದ ಮೇಲೆ ತೂರಿ ಬಂದಿತ್ತು "ಯಾರ್ರಿ ಅದು ಸುಜಾತ, ಕಲ್ಪನಾ, ಶಾಂತಲಾ?" ಯಾಕೋ ವಾಯ್ಸ್ ಸ್ವೀಟ್ ಇರದೇ ಖಾರ ಇದ್ದಂತೆ ಭಾಸವಾಗಿತ್ತು.
ಆಗ ಫ್ಲಾಶ್ ಆಗಿತ್ತು ನಂಗೆ. ಓ ಮೇಡಂ ಯಾಕೆ ಗರಂ ಆಗಿದಾರಂತಾ. "ಓ ಅದಾ..." ಅಂತ ಇನ್ನೂ ಬಾಯ್ಬಿಡಲು ತಡವರಿಸುತ್ತಿರುವಾಗಲೇ... ಅವಳು "ಗೊತ್ರೀ ಗೊತ್ತು ನಂಗೂ.. ನೀವು ಎಲ್ಲ ಗಂಡಸರೇ ಹಿಂಗ... ನಮ್ಮ ಅವ್ವ ಹೇಳಿದ್ದು ಖರೆ ಆತು ನೋಡ್ರಿ.. ಬೆಂಗಳೂರಿನ್ಯಾಗ ಇರವ್ರನ್ನ ಜಾಸ್ತಿ ನಂಬಬೇಡ ಅಂತ" ಆಗಲೇ ಗಂಗಮ್ಮ ಬರಲು ಹತ್ತಿದ್ದಳು ಸರಸಳ ಕಣ್ಣಲ್ಲಿ!
"ಅಯ್ಯೋ ಸರಸು... ನೀ ಹಿಂಗ್ಯಾಕೆ ಯೋಚನೆ ಮಾಡ್ತಿ? ನಾ ಮಾತಾಡ್ತಿದ್ದಿದ್ದು ನಮ್ಮ ಆಫೀಸಿನಲ್ಲಿ ಹೊಸದಾಗಿ ಸೇರಿರುವ ಅಸಿಸ್ಟಂಟ್ ಪ್ರಸಾದ್ ಹತ್ತಿರ... ಅವನಿಂಗೆ ಸ್ವಲ್ಪ clients/customerನ ಪರಿಚಯ ಮಾಡಿಸಬೇಕಂತೆ. ಅದಕ್ಕೆ ಮುಂದಿನ ವಾರ ಹೇಗಿದ್ದರೂ ನಾ ಅವರನ್ನ ಭೇಟಿ ಮಾಡಬೇಕು. ಅದೇ ಸಮಯಕ್ಕೆ ಅವನಿಗೂ ಬರಲಿಕ್ಕೆ ಹೇಳಿದೆ ಅಷ್ಟೇ. ಅದಕ್ಕೆ ನೀ ಹೀಗೆ ಸಿಟ್ಟಾಗೋದಾ?" ಅಂತ ರಮಿಸಲು ಯತ್ನಿಸಿದೆ.
ಆದರೂ ಅಳೋದು ನಿಲ್ಲಿಸದ ಅವಳು... "ಮತ್ತೆ ಯಾರದು ಅದು ಸುಜಾತ , ಕಾವೇರಿ, ಶಾಂತಲಾ?" ಅಂತ ಒತ್ತಿ ಒತ್ತಿ ಕೇಳಿದಾಗ. "ಅಯ್ಯೋ ಅದು.. ಯಾರು ಇಲ್ಲ ಕಣೆ.. ನಾನು ಹೇಳಿದ್ದು ಬೆಂಗಳೂರಿನಲ್ಲಿರುವ ಬಸ್ ಸ್ಟಾಪ್ ಹೆಸರುಗಳು... ಸುಜಾತ ಚಿತ್ರಮಂದಿರದ ಸ್ಟಾಪ್ ಬಳಿ, ಕಾವೇರಿ ಟಾಕೀಸ್ ಹತ್ತಿರ, ಶಾಂತಲಾ ಸಿಲ್ಕ್ ಸ್ಯಾರಿಸ್ ಸ್ಟಾಪ್ ಹತ್ತಿರ ಇರ್ತೀನಿ.. ನೀನು ಅಲ್ಲಿಗೆ ಬಾ ಅಂತ ಪ್ರಸಾದನಿಗೆ ಹೇಳುತ್ತಿದ್ದೆ... ಅದಕ್ಕೆ ನೀನು ಇಷ್ಟೊಂದು ರಂಪ ಮಾಡೋದಾ?" ಅಂತ ಎಲ್ಲ ವಿವರಿಸಿ ಹೇಳುವಷ್ಟರಲ್ಲಿ ನಾ ಹುಸ್ಸ್ ಎಂದಿದ್ದೆ .. ಆದರೂ ಯಾಕೋ ಅವಳ ಮನಸ್ಸು ಇನ್ನೂ ಸಂಶಯದ ಗೂಡಾಗಿತ್ತು ಅನ್ನಿಸ್ಸುತ್ತೆ.. ಹಾಗೇ ಮುಸುಕೆಳೆದು ಮಲಗೇ ಬಿಟ್ಟಳು ವಿರಸದಿಂದ ಸರಸ.
ಮಧುಚಂದ್ರದ ದಿನವೇ ಯಾವ ಮಧುವು ಇಲ್ಲದೆ, ಚಂದ್ರನೂ ಇಲ್ಲದೆ... ಕತ್ತಲಲ್ಲಿ ಮಲಗಿದೆ ಸೋಫಾದ ಮೇಲೆ... ಹಿಡಿದು ತಲೆದಿಂಬು.
ಕಿಟಕಿಯಲ್ಲಿ ನೋಡಿದರೆ
ಕಾಣಲಿಲ್ಲ ಆ ಚಂದ್ರನ ಬಿಂಬ...
ಮಲಗಿದ್ದೆ ಸೋಫಾದಲ್ಲಿ
ಹಿಡಿದು ನಾ ತಲೆದಿಂಬ!












Click it and Unblock the Notifications