ಚಂದ್ರ ಗ್ರಹಣದ ಪೋಸ್ಟ್‌ ಮಾರ್ಟಮ್

Venkat Singapore
ಈ ಗ್ರಹಣ ಅಂದ್ರೆನೆ, ಒಂದು ತರಹ ಮುಸುಕು ಕವಿದ ವಾತಾವರಣ ಮನದಲ್ಲಿ ಮೂಡಿಬಿಡುತ್ತೆ. ನಾನು ಚಿಕ್ಕವನಿದ್ದಾಗ ಗ್ರಹಣ ಅಂದ್ರೆ ಅದೇನೊ ಭಯಮಿಶ್ರಿತ ಆನಂದ, ಏಕೆಂದರೆ ಒಂದುಕಡೆ ಅಮ್ಮ ಅದೂ-ಇದೂ ಹೇಳಿ ಗ್ರಹಣಗಳ ಬಗ್ಗೆ ಬರೀ ಭಯವಡುವಂತಹ ವಿಷಯಗಳು ತಲೆಯೊಳಗೆ ಹೋಗಿದ್ದರೆ, ಇನ್ನೊಂದು ಕಡೆ ಗ್ರಹಣ ಮುಗಿದ ಮೇಲೆ ಹಗಲು-ರಾತ್ರಿಗಳ ವ್ಯತ್ಯಾಸವಿಲ್ಲದೆ ಮನೆಯಲ್ಲಿನ ವೀರ-ಶೂರ so called ಗಂಡಸರು ಕಾಲುವೆ-ಬಾವಿಗಳಿಗೆ ಹೋಗಿ ಧುಮುಕಿ ಆಟ ಆಡಿ, ಮನೆಯಲ್ಲಿದ್ದ ನೀರನ್ನೆಲ್ಲಾ ಚೆಲ್ಲಾಡಿ ಸಾಲು-ಸಾಲು ಬಿಂದಿಗೆಗಳೊಂದಿಗೆ ಬಾವಿ-ನಲ್ಲಿಗಳಿಗೆ ಹೋಗಿ ನೀರು ತುಂಬುವ ಉತ್ಸಾಹ.

ಇನ್ನು ಮನೆಯಲ್ಲಿ ಅಮ್ಮ-ಅಕ್ಕಂದಿರು ಇದ್ದ-ಬದ್ದ ಪಾತ್ರೆಗಳನ್ನೆಲ್ಲಾ ಹರಡಿಕೊಂಡು ಕುಡಿಯುವ ನೀರಿನ ಸಂಗ್ರಹಣೆಯ ತಾಮ್ರ/ಹಿತ್ತಾಳೆಯ ದೊಡ್ದ ದೊಡ್ದ ಕೊಪ್ಪರಗಳನ್ನು ಹುಣಿಸೆಹಣ್ಣಿನಿಂದ facial ಮಾಡ್ತಾ ಮಾತಾಡಿಕೊಂಡು ಕುಳಿತುಬಿಡುತ್ತಿದ್ದರು. ಇನ್ನು ದೇವರ ಮನೆಯ ಕೆಲಸ ಆ ದೇವರಿಗೆ ಪ್ರೀತಿ. ಪಾಪ ಚಳಿ-ಬಿಸಿಲೆನ್ನದೆ ತಾನು ಸಹ ಎಲ್ಲದಕ್ಕೂ ಸಹಕರಿಸಿಕೊಂಡು ಹೋಗುತ್ತಿದ್ದ-ಇಲ್ಲದಿದ್ದರೆ ಬಿಡುವುದಿಲ್ಲವೆಂದು ಗೊತ್ತು ಅನಿಸುತ್ತೆ. ಆಮೇಲೆ ಪೂಜೆ /ಅಡುಗೆ ತಯಾರಿ ನಡೆಯುತ್ತಿದ್ದರೆ ನಮ್ಮನ್ನಂತು ಯಾರೂ ಕೇಳುವವರಿಲ್ಲದೆ ಚೆನ್ನಾಗಿ ಆಟಕ್ಕಿಳಿದು ಸಮಯ ಕಳೆಯುತ್ತಿದ್ದೆವು.

ಇದೆಲ್ಲಾ ಅಲ್ಲಿ. ಆದ್ರೆ ಅಂತಹದೇ ಒಂದು ಗ್ರಹಣ ಹೇಳ್ದೆ-ಕೇಳ್ದೆ ಸಿಂಗಪುರಕ್ಕೂ ಬಂದ್ಬಿಡ್ತು. ಮೊನ್ನೆ ಹೀಗೆ ಆಯಿತು. ಇದ್ದಕ್ಕಿದ್ದಂತೆ ದೂರವಾಣಿ ಮೂಲಕ ಶನಿವಾರ ಗ್ರಹಣವಂತೆ ಎಂಬ ಒಂದು (ದೊಡ್ಡ) ಶರೀರವಾಣಿ - ನನ್ನ ಅತ್ತೆಯವರದು. ಬೆಂಗಳೂರಿನ ಆ-ಶರೀರ-ವಾಣಿ ನನ್ನವಳ ಕಿವಿಯೊಳಗೆ ಮೊಳಗಿ, ಮೆದುಳಿಗೆ ತೂರಿ, ಇಡೀ ನರಮಂಡಲದಲ್ಲಿ ಸಂಚಲಿಸಿ ಅವಳ ಕಣ್ಣುಗಳ ಮೂಲಕ ಹಾದು ಹೊರಬಂದು, ಎಂದಿನಂತೆ ಬಡಪಾಯಿ ನನ್ನ ಮೇಲೆ ತನ್ನ ತರಂಗಗಳನ್ನೆಬ್ಬಿಸಿ ನನ್ನ ಸ್ಥಿರತೆಯನ್ನು ಸ್ವಲ್ಪ ಅಲ್ಲಾಡಿಸಿಬಿಟ್ಟಿತು. ನಾನು ಅಷ್ಟೊಂದು ತಲೆಕೆಡಿಸಿಕೊಳ್ಳದಿದ್ದರೂ ಬಲವಂತವಾಗಿ ನನ್ನ ತಲೆಯಲ್ಲಿ ತೂರಲ್ಪಟ್ಟು, ಇಡೀ ಮನೆಯೇ ಪೂರ್ವಗ್ರಹ ಪೀಡಿತವೆಂಬಂತೆ ಗ್ರಹಣಕ್ಕೆ ತಯಾರಿ ನಡೆಸಿತ್ತು.

ಹೊರಗಡೆ ಇದ್ದಕಾರಣ ಬೇಗ ಮನೆಗೆ ಹೋಗಬೇಕು, ಸಂಜೆ 7ರ ಒಳಗೆ ಅಡುಗೆ ಮಾಡಿ ತಿನ್ನಬೇಕು ಎಂಬ ಎಚ್ಚರಿಕೆಯ ಗಂಟೆ ಆಗಾಗ ನನ್ನವಳಿಗೆ ಬಡಿದು ಅವಳ್ಮೂಲಕ ನನಗೂ ಬಡಿಯತೊಡಗಿತ್ತು. ಇಷ್ಟರ ಮದ್ಯೆ ಶರೀರವಾಣಿ ಆಗಾಗ ಮೊಳಗಿ ನಮ್ಮ ಆಗು-ಹೋಗುಗಳ ಬಗೆಗಿನ ನಿಖರ ಮಾಹಿತಿ ಸಂಗ್ರಹಣೆ ನಡೆಸಿತ್ತು. “ಚಂದ್ರ ಸಿಂಗಾಪುರಕ್ಕೆ ಆಗ್ಲೆ ಬಂದ್ನಾ?” ಎಂದು ಕೇಳಿದಂತಿತ್ತು. ನಾನು “ಇಲ್ಲ ಇನ್ನು ರಾಹು/ಕೇತುನೊ ನುಂಗುವುದಕ್ಕೆ ಬಂದಿಲ್ಲ” ಅಂತಂದೆ. ಯಾವುದಕ್ಕೂ ಫೋನ್ ಮಾಡಿ ಕೇಳ್ಲಾ? ಅಂದೆ. ಯಾರಿಗೆ ಅಂದಳು, ನೇರವಾಗಿ ಚಂದ್ರನ್ನೇ ಕೇಳಿಬಿಡೋಣವೆಂದೆ. ಗುರ್ರನೆ ನೋಡಿದಳು, ಯಾಕೋ ಸ್ವಲ್ಪ ಅವಳು ರಾಹು ತರ ನುಂಗುವಂತೆ ಕಂಡಿದ್ದರಿಂದ ನಾನು ಭಯದಿಂದ ಚಂದಿರನಂತಾದೆ.

ಆದರೂ ಅವರ ದೂರವಾಣಿ ಸಂಭಾಷಣೆ ಕೇಳಿದರೆ ಚಂದ್ರನನ್ನು GPSನಿಂದ track ಮಾಡ್ತಾಯಿರೊ ತರಹ ಅನಿಸ್ತು. ಆಗಸದ ಕಡೆ ನೋಡಿದೆ, ಚಂದ್ರ ಇನ್ನು ಬಂದಿರಲಿಲ್ಲ. ದೂರವಾಣಿಯಲ್ಲಿ ಗ್ರಹಣದ ಗುರಿ, ಗತಿ, ದೋಷ ನಿವಾರಣೆ ವಿಷಯಗಳು ನಿರರ್ಗಳವಾಗಿ ಸಾಗುತ್ತಿದ್ದವು. ನನಗೇನೊ ಖುಷಿಯೋ ಖುಷಿ ಇವತ್ತು ಚೈನೀಸ್ ಡಿನ್ನರ್ (6 ಗಂಟೆಗೆ) ಎಂದು. ಮನೆಗೆ ಬಂದ ತಕ್ಷಣ ಅವಳು ನೇರ ಅಡುಗೆ ಮನೆಗೆ ದಾಳಿ ನಡೆಸಿದರೆ ನಾನು ದರ್ಭೆಯನ್ನು ಎಲ್ಲ ಕಡೆ ನೆಡುವ ಕಾರ್ಯಕ್ಕೆ ಮುನ್ನುಗ್ಗಿದೆ. ಇಷ್ಟೆಲ್ಲಾ ಮಾಡುವುದಕ್ಕಿಂತ ಮನೆಯ ತೋರಣಕ್ಕೊಂದು ಮತ್ತು ನಮ್ಮಿಬ್ಬರ ಶಿರಗಳಿಗೊಂದು ದರ್ಭೆ ಸಿಗಿಸಿಕೊಂಡರೆ ಸಾಕಲ್ಲವೆಂಬ ಅಧಿಕ ಪ್ರಸಂಗದ ಪ್ರಶ್ನೆಗೆ ನನ್ನವಳ ಮುಖಾರವಿಂದದಲ್ಲಿ ಮತ್ತೊಮ್ಮೆ ರಾಹುವಿನ ದರ್ಶನಮಾಡಿಕೊಂಡೆ. [ಮುಂದೆ ಓದಿ : ಭಾಗ 2]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+