ಚಂದ್ರ ಗ್ರಹಣದ ಪೋಸ್ಟ್ ಮಾರ್ಟಮ್ (ಭಾಗ 2)

ಚೈನೀಸ್ ಡಿನ್ನರ್ ನ ಪ್ರಭಾವ ಅಂತ ಕಾಣುತ್ತೆ ನಮ್ಮಯ ಸಂಜೆ ದೀರ್ಘವಾಗತೊಡಗಿತು. TV ನೋಡಾಯಿತು, ಅಲ್ಲಲ್ಲಿ ಫೋನ್‍ಗಳ ಸುದ್ದಿಯಾಯಿತು, ಚಂದ್ರನ್ನ ನೋಡಿದೆ - ಪೂರ್ಣವಾಗೆ ಇದ್ದ ಆಮೇಲೆ ಪಾಪ ರಾಹುಗೆ ಹಸಿವಾಯಿತು ಅಂತ ಕಾಣುತ್ತೆ ಸ್ವಲ್ಪ ಸ್ವಲ್ಪ ಮಗು ಆಪಲ್ ತಿನ್ನೋ ತರ ತಿಂದು ಮತ್ತೆ ಪೂರ್ಣವಾಗಿ ಉಗುಳಿದ. ನನ್ನವಳು ಹೆದರಿಕೆಯಿಂದಲೇ ನೋಡುತ್ತಿದ್ದಳು. ಹಾಗೆ ರಾತ್ರಿ ಜಾರಿದಂತೆಲ್ಲಾ ಎನೋ ಕಳೆದುಕೊಂಡಂತಹ, ವ್ಯಕ್ತಪಡಿಸಿಲಾರದಂತಹ ಅನುಭವ. ಏನು ಅಂತ ಅರ್ಥವಾಗದೆ ಹೋಯಿತು ಸ್ವಲ್ಪ ಮನೆಯಲ್ಲಾ ಓಡಾಡಿದೆ - ಸಮಾಧಾನವಾಗಲಿಲ್ಲ; ಅಡುಗೆ ಮನೆಗೆ ಕಾಲಿಟ್ಟ ಮೇಲೆ ತಿಳಿಯಿತು ಹಸಿವಿನ ಪ್ರಭಾವವೆಂದು. ಇವಳು ದೂರದಿಂದಲೇ ನನ್ನನ್ನು ಗಮನಿಸುತ್ತಿದ್ದಳು - ಎಲ್ಲಿ ಅವಳಿಗೆ ತಿಳಿಯದಂತೆ ಏನಾದರು ಬಾಯಿಗೆ ಗಬಕ್ಕನೆ ಹಾಕಿಕೊಂಡು ಬಿಟ್ಟಾನೆಂಬ ಭಯ.
ಇನ್ನೂ ಸಮಯ ವ್ಯರ್ಥ ಮಾಡಿದರೆ ಪ್ರಕೃತಿ ರೊಚ್ಚಿಗೆದ್ದು ಬಿಟ್ಟಿತೆಂಬ ಭಯದಲ್ಲಿ ಮಲಗಲು ಹೋದೆ, ಹಾಗೆ-ಹೀಗೆ ಒದ್ದಾಡಿ ಬರಲಾರದ ನಿದ್ದೆಯನ್ನು ಬರಸಿಕೊಂಡು ಮಲಗಿದ್ದಾಯಿತು. ಬೆಳಿಗ್ಗೆ ಎದ್ದಾಗ ಹೊಟ್ಟೆ ಚುರುಗುಟ್ಟುತಿತ್ತು . ಕಾಫಿ ಕೊಡು ಅಂದೆ ಅವಳು ಒಮ್ಮೆಲೆ ಗುರ್ರೆಂದು ಮೊದಲು ಮನೆ ಸಾರಿಸಿ, ದೇವರ ಪೂಜೆ ಆಮೇಲೆ ಏನಾದರು ಹೊಟ್ಟೆಗೆಂದು ತಾಕೀತು ಮಾಡಿದಳು. ನನ್ನ ಜಂಘಾಬಲವೇ ಉಡುಗಿಹೋದಂತಾಯಿತು. ಅದ್ಹೇಗೆ ಪೆಟ್ರೋಲ್ ಇಲ್ದೆ ಗಾಡಿ ಓಡುತ್ತೆ? ಹಾಲಿಗೆ ನೀರಿಗೆ ದೋಷವಿಲ್ಲವೆಂದು ಏನೇನೋ ಸಮಜಾಯಿಸಿ ಕೊಟ್ಟೆ - ಕಾಫಿಯ ಫಲಮಾತ್ರ ನೀಡಲಿಲ್ಲ. ಇನ್ನೂ ಅವಸರದಲ್ಲಿ ಮನೆ ಸಾರಿಸಿ-ಗುಡಿಸಿ, ಕತ್ತಲು ಕೋಣೆಯಲ್ಲಿ ಕೂಡಿಹಾಕಿದ್ದ ದೇವರುಗಳನ್ನೆಲ್ಲಾ ಬೇಗಬೇಗನೆ ನೀರಿನಲ್ಲಿ ಅದ್ದಿ ತೆಗೆದು ಪೂಜೆಯ ಶಾಸ್ತ್ರಮುಗಿಸಿ ಬರುವುದರೊಳಗಾಗಿ ಊಟ ರೆಡಿಯಾಗಿತ್ತು. ಊಟ ಮಾಡಿ ಕುಳಿತೆವು. ಹೋದ ಜೀವ ಬಂದಂತಾಗಿ, ರೇಗಾಡಿಕೊಂಡು ಓಡಾಡುತ್ತಿದ್ದವರು ಕುಳಿತು ಮಾತಾಡುವಂತಾದೆವು. ಮೊಗದಲ್ಲಿ ಕೊಳೆ ಹೋಗಿ ಕಳೆಯು ಮರುಕಳಿಸಿತ್ತು.
ಏನೇ ಆದ್ರೂ ಚೈನೀಸ್ ಡಿನ್ನರ್‌ಗಿಂತ ನಮ್ಮ ಏಕಾದಶಿ ಉಪವಾಸ ಬಹುಮೇಲು ಎನಿಸಿತು. ಅಷ್ಟರಲ್ಲಿ ಶರೀರವಾಣಿ ಮತ್ತೆ ಮೊಳಗಿತು, ಗ್ರಹಣದ ಪೋಸ್ಟ್ ಮಾರ್ಟಮ್ ನಡೆಯುತಿತ್ತು! ಇನ್ನೊಂದು ವಿಷಯ ನಿಮಗೆ ಹೇಳ್ಲೇ ಬೇಕು. ನಿನ್ನೆ ಇವಳು ತನ್ನ ಗರ್ಭಿಣಿ ಸ್ನೇಹಿತೆಗೆ ಗ್ರಹಣದ ಸಮಯದಲ್ಲಿ ಹೇಗಿರಬೇಕೆಂದು ಒಂದು ದೊಡ್ಡ ಪ್ರವಚನ ಕೊಟ್ಟು ಇಲ್ಲ ಸಲ್ಲದ ಬೆದರಿಕೆ(ಅನುಭವದ ಸಲಹೆ)ಗಳನ್ನು ಹೇಳಿದ್ದಳು. ಅವರು ಅಂದು ರಾತ್ರಿ ನಮ್ಮ ಮನೆಗೆ ಬಂದಿದ್ದರು, ಅವರನ್ನು ನೋಡಿದರೆ ಭಯದಿಂದ ಗಾಬರಿಯಾದಂತೆ ಕಾಣುತಿತ್ತು. ಉಭಯ ಕುಶುಲೋಪರಿಯ ನಂತರ ಆವರು ಗ್ರಹಣದ ಸಮಯದಲ್ಲಿ ಮರೆತು ಆಪಲ್ ಕಟ್ಟುಮಾಡಿಬಿಟ್ಟೆ ಏನು ಆಗೊಲ್ಲ ತಾನೆ? ಅಂತ ಯಾರನ್ನೋ ಕೊಲೆ ಮಾಡಿಬಂದಷ್ಟು ಅಂಜಿಕೆಯಲ್ಲಿ ಕೇಳುತ್ತಿದ್ದರು.
ಇವಳಿಗೂ ಏನು ತೋಚಲಿಲ್ಲ ನನ್ನ ಮುಖನೋಡಿದಳು ನಾನೇನು ಭಾರಿ ವಿಷಯಗಳನ್ನು ತಿಳಿದುಕೊಂಡವನಂತೆ ಕಂಡೆನೊ ಏನೋ ಆ ಚಂದ್ರನೆ ಬಲ್ಲ. ನಾನು ಒಳ್ಳೇ ಅಣ್ಣಾ ಹಜಾರೆ ಸ್ಟೈಲ್‌ನಲ್ಲಿ "ಆಪಲ್ ಕಟ್ಟು ಮಾಡಿದ್ರಾ? ಒಂದೇ ಆಪಲ್ ಕಟ್ಟು ಮಾಡಿದ್ರಾ?" ಅಂತ ಕೇಳಿ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಅದಾದ ಮೇಲೆ "ಏನು ಆಗೊಲ್ಲ-ಧೈರ್ಯವಾಗಿರೆಂಬ"ವೆಂಬ ಸರ್ವಕಷ್ಟನಿವಾರಣೆಯ ಮಂತ್ರವನ್ನು ಬೋಧಿಸಿ ಆಲ್ಲಿಂದ ಜಾಗ ಖಾಲಿಮಾಡಿದೆ. ಅವರೆಲ್ಲಾ ಹೋದ ಮೇಲೆ ಮತ್ಯಾವಾಗ ಚೈನೀಸ್ ಡಿನ್ನರ್ ಅಂತ ಕೇಳಿ ಅದರ ಬಗೆಗಿನ ಮಹತ್ವದ ಬಗ್ಗೆ ಹೇಳುವಷ್ಟರಲ್ಲಿ ನನ್ನ ನೋಡಿ ವಿಚಿತ್ರವಾಗಿ ನಕ್ಕಳು - ಬಹುಶಃ ಉತ್ತರಭೂಪನ ದರ್ಶನವಾಗಿರಬೇಕು ಅವಳಿಗೆ!












Click it and Unblock the Notifications