• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?

By Super
|

(...ಹಿಂದಿನ ಪುಟದಿಂದ)

"ಕತ್ಲಾಗ್ ಕಾಣ್ಬ್ಯಾಡ್ವೆ?"

"ಓ...ಅಂಗೆ.!.....ಗೆಜ್ಜೆ ಆಕ್ಕಮದೂ? ಕುಳ್ಡ್ರು ಅಡ್ಬಂದ್ರೆ ಕೇಳ್ಲೀ ಅಂತನೆನೋ? ಯಾಕ್ ಒಂದ್ ಸೈಕಲ್ ಬೆಲ್ಲು ಮಡಿಕಬುಡ್ಲೇಳು....ಟ್ರಿನ್ ಟ್ರೀನ್....ಮೋಯ್ನಿ ಬಂತು ಮೋಯ್ನೀ...ದಾರಿಬುಡೀ, ಅಂತ..........ಪೆಕರ್ ನನ್ಮಗುನ್ ತಂದು" ರಾಮಣ್ಣ ಅಸಹನೆಯಿಂದ ಮೂದಲಿಸಿದ. "ನಿಮ್ಮಂತೋರಿಂದ್ಲೆ ಕಣ್ಲ ನಮ್ ದೇಸ್ದಗ್ ಗಲ್ಲಿಗೊಬ್ಬ ಗಿಣಿಸಾಸ್ತ್ರ ಯೇಳವ್ನು ಬೀದಿಗೊಬ್ಬ ಬುಡ್ಬುಡ್ಕೆ ಬಾಬ ಉಟ್ಗಂಡಿರದು.....ಮೋಯ್ನಿಯಂತೆ ಮೋಯ್ನಿ.....ಯಾವ್ತಾರ ಕಂಡೀಯೇನ್ಲ ಕಣ್ಣಗೆ? ಯಾವನೋ ಪಂಗ್ನಾಮ ಆಕೋ ಸಿಂಗ್ಳೀಕ ಯೋಳ್ತನೆ ನೀನ್ ಪೆಂಗ್ನಂಗ್ ಕ್ಯೋಳುಸ್ಕಂಬ..! "

"ಇವಗ್ ನೀನ್ ದ್ಯಾವುಸ್ತಾನುಕ್ ಓಗಲ್ವೇ....ನೀನೇನ್ ದ್ಯಾವುರ್ನ್ ಕಣ್ಣಾರೆ ಕಂಡೀಯಾ?...ಅಂಗೇಯ ಇದೂವೆ...ಅವ್ರವ್ರ್ ನಂಬ್ಕೆ" ಎಂದ ಬಚ್ಚಪ್ಪ ಸೋಲದೆ.

"ಲೈ, ನಾನ್ ದ್ಯಾವುಸ್ತಾನುಕ್ ಓಗದೂ ಅಬ್ಬ ಅರಿದಿನಾಂತ್ ಮಾಡದೂ ನಮ್ಮ್ ಇರೇಕುರ್ ಸಂಪುರ್ದಾಯ್ಗುಳ್ನ ಮುಂದ್ವರ್ಸ್ಕಂಡ್ ಓಗಕ್ಕೆ - ದ್ಯಾವುರ್ ಮೆಚ್ಲೀಂತ ದಕ್ಸ್ಣೆ ಆಕಕ್ಕೂ ಅಲ್ಲ ದೆವ್ವ್‌ಗುಳ್ ಬುಡ್ಸೂಂತ್ ಕೋಳಿ ಕೂಸಕ್ಕೂ ಅಲ್ಲ. ದ್ಯಾವುರ್ ಮೇಲ್ ಬಾರ ಆಕ್ದೋರ್ಗ್ ಯಾವ್ತಾರ ನೆಮ್ದಿ ಸಿಗ್ಬೋದೆನೊ, ಮಂತುರ್ವಾದಿ ಮೇಲ್ ಬಾರ ಆಕ್ದೋರ್ಗ್ ಯಾವತ್ತೂ ನೆಮ್ದಿ ಇಲ್ಲ, ತಿಳ್ಕ....ಸುಮ್ಕ್ ಎಂಗಂದ್ರಂಗ್-"

ಎನ್ನುವಷ್ಟರಲ್ಲಿ ಆಕಾಶವಾಣಿಯಲ್ಲಿ ಪ್ರಯಾಣಿಕರು ವಿಮಾನದೊಳಗೆ ಹೋಗಲು ಅನುವಾಗಿ ಎಂಬ ಸೂಚನೆ ಬಂತು. ವಿಮಾನದಲ್ಲಿ ಸೀಟು ಸಿಗುವುದೋ ಇಲ್ಲವೋ ಎಂಬಂತೆ ಎಲ್ಲರೂ ಸರಸರನೆ ಸುರಂಗದ ಬಾಗಿಲ ಬಳಿ ಸಾಲಾಗಿ ನಿಂತರು. ಇವರೂ ಮಿಕ್ಕವರನ್ನು ಹಿಂಬಾಲಿಸಿ ವಿಮಾನದ ಬಾಗಿಲಿಗೆ ಬಂದರು. ಬಚ್ಚಪ್ಪ ಒಳಗೆ ಹೆಜ್ಜೆ ಇಡುತ್ತಿದ್ದ ಹಾಗೇ ಬಾಗಿಲಲ್ಲಿದ್ದ ಲಲನಾಮಣಿ ಕೈಜೋಡಿಸಿ "ನಮಶ್ಕಾರ್ !" ಎಂದಳು.

ನಮಸ್ಕಾರ ಎಲ್ಲರಿಗೂ ಮಾಡುತಿದ್ದಳೆಂಬುದನ್ನು ಗಮನಿಸದ ಬಚ್ಚಪ್ಪ ವಿಸ್ಮಯಗೊಂಡು "ಯಾರೋ ಗುರ್ತ್‌ಸಿಗುಲ್ವೇ..." ಎಂದು ರಾಗವೆಳೆಯುತ್ತಿದ್ದಹಾಗೆ ರಾಮಣ್ಣ ಅವನನ್ನು ಅವಸರವಾಗಿ ಸೀಟುಗಳ ಕಡೆಗೆ ತಳ್ಳಿಕೊಂಡು ಒಳನಡೆದ. ಒಳಗಿದ್ದೊಬ್ಬ ಪರಿಚಾರಕ ಇವರ ಕೈಲಿದ್ದ ಚೀಟಿ ನೋಡಿ ಸೀಟಿಗೆ ತೋರಿಸಿ ಬೆಲ್ಟು ಹಾಕಿಸಿದ. ವಿಮಾನ ಹೊರಟಾಗ ಮುಂದಿನ ಸೀಟನ್ನು ಭದ್ರವಾಗಿ ತಬ್ಬಿ ಹಿಡಿದಿದ್ದ ಬಚ್ಚಪ್ಪ ಅದು ಮೇಲಕ್ಕೆ ಹಾರಿ ಅದುರುವುದು ನಿಂತ ಮೇಲೆ ನೆಮ್ಮದಿಯಾಗಿ ಹಿಂದಕ್ಕೊರಗಿ ಕುಳಿತ. ಸ್ವಲ್ಪ ಹೊತ್ತಿಗೆ ಏರ್ ಹೋಸ್ಟೆಸ್ ಒಬ್ಬಳು ಕೈಲಿದ್ದ ಚೀಟಿ ಓದುತ್ತ ಸೀಟು ನಂಬರುಗಳನ್ನು ಗಮನಿಸುತ್ತ ಇವರ ಕಡೆಗೆ ಬಂದಳು.

"ಅಗಳೋ, ಯಾವ್ದೋ ಮೋಯ್ನಿ ಏನೋ ಪೇಪರಿಡ್ಕಂಡ್ ನಿನ್ ಕಡೀಕೆ ಬತ್ತಾವ್ಳೆ.." ಎಂದ ರಾಮಣ್ಣ.

ಬಳಿಗೆ ಬಂದ ಅವಳು ಪ್ರಶ್ನಾರ್ಥಕವಾಗಿ "ಸರ್, ಹ್ಯಾವ್ ಯೂ ಬುಕ್ಡ್ ಎ ಸ್ಪೆಶಲ್ ವೆಜಿಟೇರಿಯನ್ ಮೀಲ್?" ಎಂದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ರಾಮಣ್ಣ ಪ್ರಯಾಣಕ್ಕಾಗಿ ಕಲಿತ ಪದಗಳಲ್ಲಾಗಲೀ ಬರೆಸಿಕೊಂಡು ಬಂದಿದ್ದ ಚೀಟಿಗಳಲ್ಲಾಗಲೀ ಈ ಸದ್ದುಗಳು ಇರಲಿಲ್ಲ. ಪಕ್ಕದಲ್ಲಿದ್ದವನನ್ನು "ಏನಂತ್ ಸೋಮಿ ಈವಮ್ಮ ಕ್ಯೋಳ್ತಿರದು?" ಎಂದು ಕೇಳಿದ.

"ನೀವು ಸ್ಪೆಶಲ್ ಊಟಕ್ ಏನಾದ್ರೂ ಹೇಳಿದ್ರಾ ಅಂತ ಕೇಳ್ತಿದರೆ" ಎಂದು ಆತ ವಿವರಿಸಿದ. ಬಚ್ಚಪ್ಪ ಥಟ್ಟನೆ "ಪೆಸಲ್ ಏನಿಲ್ರ, ಮುದ್ದೇ ಉಪ್ಪೆಸ್ರಾದ್ರಾಯ್ತೂಂತ್ ಯೋಳ್ಬುಡ್ರಣ" ಎಂದ.

ರಾಮಣ್ಣ ಬಚ್ಚಪ್ಪನನ್ನು ಕಣ್ಣಲ್ಲೇ ಸುಡುವಂತೆ ದುರುಗುಟ್ಟುತ್ತಾ "ಲೈ, ಇದೇನ್ ನಿಮ್ಮ್ ಗುಳುವ್ನಳ್ಳಿ ಮಿಲ್ಟ್ರಿ ಓಟ್ಲು ಅನ್ಕಂಡೀಯ? ಅಮಿಕ್ಕಂಡ್ ಕುಂತ್ಗಬೆಕು ಅಂತೇಳಿರ್ಲಿಲ್ಲ?" ಎಂದು ಉಗ್ರವಾಗಿ ಪಿಸುಗುಟ್ಟಿ ಪಕ್ಕದವನಿಗೆ, "ನಮ್ ತಿಗೀಟ್ ಮಾಡ್ದೋರ್ ಯೋಳಿರ್ಬೊದೆನೊ.. ಯಾವ್ದಾದ್ರಾಯ್ತು ಅಂತೇಳಿ ಸೋಮಿ" ಎಂದು ವಿನಮ್ರವಾಗಿ ವಿನಂತಿಸಿದ.

"ಸುಮ್ನೆ ಹೂಂ ಅನ್ನಿ, ಯಾವ್ದಾದ್ರೂ ಆಯ್ತು ಅಂದ್ರೆ ದನದ್ ಗಿನದ್ ಹಾಕ್ಕೊಟ್ಬುಟ್ಟಾರು" ಎನ್ನುತ್ತ ಪಕ್ಕದವನು ಇವರ ಪರವಾಗಿ ತಲೆಯಾಡಿಸಿದ. ಅವಳು ಅತ್ತ ಹೋಗುತ್ತಿದ್ದಂತೆ ಪಾನೀಯಗಳ ಗಾಡಿ ಬಂದು ನಿಂತಿತು. ಪಕ್ಕದವನು ವಿಸ್ಕಿ ಹಾಕಿಸಿಕೊಂಡಿದ್ದನ್ನು ನೋಡಿದ ಬಚ್ಚಪ್ಪ ಉತ್ಸಾಹದಿಂದ "ತ್ರಿಬ್ಲೆಕ್ಸು ಐತೇನ್ ಕ್ಯೋಳವ?" ಎಂದ.

"ಯಾಕ್ ಕಳ್ಳ್ ಪಾಕಿಟ್ ಐತೆನ್ ಕ್ಯೋಳ್ತಿನ್ ತಡಿ ! ಲೈ, ಸುಮ್ಕ್ ನಾನ್ ಈಸ್ಕೊಟ್ಟಿದ್ದನ್ ಕುಡ್ದ್ ತೆಪ್ಪುಗ್ ಬಿದ್ಗಳದ್ ಕಲ್ಕಬೆಕು" ಎಂದು ರಾಮಣ್ಣ ಖಾರವಾಗಿ ಬಚ್ಚಪ್ಪನ ಚಪಲದ ಚಿಗುರನ್ನು ಚಿವುಟಿಹಾಕಿದ.

ಸ್ವಲ್ಪ ಹೊತ್ತಿಗೆ ಊಟದ ತಟ್ಟೆಗಳು ಬಂದವು. ಕರ್ಚೀಫ್ ಅಗಲದ ತಟ್ಟೆಯ ಅರ್ಧಭಾಗವನ್ನು ಬರೀ ಚಮಚ ಲೋಟಾಗಳೇ ಆಕ್ರಮಿಸಿಕೊಂಡಿದ್ದವು. ಉಳಿದದ್ದರಲ್ಲಿ ಒಂದು ಚಿನ್ನಾರಿ ಮುಚ್ಚಿದ್ದ ಬಟ್ಟಲಲ್ಲಿ ಅಲ್ಲಲ್ಲಿ ಅರಿಶಿನ ಚೆಲ್ಲಿದಂತಿದ್ದ ಬಿಸಿ ಬಿಸಿ ಒಣಕಲು ಅನ್ನ, ಒಂದೆರಡು ಸಪ್ಪೆ ಸೊಪ್ಪಿನ ದಂಟುಗಳು, ನಾಲ್ಕಾಣೆಯಗಲದ ಬೆಣ್ಣೆ, ಎಂಟಾಣೆಯಗಲದ ಬನ್ನು ಮತ್ತು ಒಂದು ಕುಂಕುಮದ ಭರಣಿಯಷ್ಟು ಕಲ್ಲಂಗಡಿ ಹಣ್ಣು ಇದ್ದವು. ಅಕ್ಕಪಕ್ಕದವರನ್ನು ನೋಡಿಕೊಂಡು ಪ್ಯಾಕೆಟ್ಟುಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದ ಬಚ್ಚಪ್ಪ "ಇದ್ರಗ್ ಊಟ ಯಾವ್ದಪೋ?" ಎಂದು ಕೇಳಿದ.

ಅದೇ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ರಾಮಣ್ಣ "ಸುಮ್ಕ್ ಅಷ್ಟುನ್ನೂ ಒಂದುಂಡೆ ಮಾಡಿ ಬಾಯ್ಗಾಕ್ಕಳ್ಳ" ಎಂದ. "ನಮ್ಮೂರ್ ಮಿಲ್ಟ್ರಿಓಟ್ಲು ಊಟುಕಿನ್ನ ಇವ್ರ್ ಕೊಟ್ಟಿರ ಔಸ್ದಿ ಬಲ್ ಪಸಂದಾಗದೆನೊ" ಎಂದು ಗೊಣಗಿಕೊಂಡು ಬಚ್ಚಪ್ಪ ಊಟದ ಶಾಸ್ತ್ರ ಮುಗಿಸಿದ.

ಸಿಂಗಾಪುರದಲ್ಲಿ ವಿಮಾನ ಬದಲಿಸಿದಾಗ ಯಾರ ನೆರವಿಲ್ಲದೆ ತಾನೇ ಬೆಲ್ಟು ಹಾಕಿಕೊಂಡ ಬಚ್ಚಪ್ಪ ವಿಮಾನ ಮೇಲೇರುತ್ತಿದ್ದಾಗ ಕಿಟಕಿಯಿಂದ ಒಪ್ಪವಾಗಿ ಜೋಡಿಸಿಟ್ಟ ಸಂಕ್ರಾಂತಿಯ ಸಕ್ಕರೆ ಅಚ್ಚುಗಳಂತೆ ಕಾಣುತ್ತಿದ್ದ ಸಿಂಗಾಪುರದ ಮುಗಿಲೆತ್ತರದ ಕಟ್ಟಡಗಳನ್ನು ನೋಡುತ್ತ ಈ ವಿಮಾನದಲ್ಲಾದರೂ ಒಂದಿಷ್ಟು ಟ್ರಿಬಲೆಕ್ಸ್ ಸಿಗಬಹುದೇ ಎಂದು ತುಟಿ ತೇವ ಮಾಡಿಕೊಂಡು ಕುಳಿತ. ಅದೊಂದನ್ನು ಬಿಟ್ಟು ಪ್ರಪಂಚದ ಇನ್ನೆಲ್ಲ ಮದ್ಯಗಳನ್ನು ಹೊತ್ತಂತಿದ್ದ ಗಾಡಿ ಬಂದು ನಿಂತು ಅವನಾಸೆಯ ಮೇಲೆ ಮತ್ತೆ ತಣ್ಣೀರೆರಚಿ ಹೋಯಿತು.

ಇನ್ನೊಂದು ಸಪ್ಪೆರಡ್ಡು ಊಟ ಉಂಡು ಲೋಟದಲ್ಲಿದ್ದ ಕರಿ ಕಾಫಿಗೆ ಪುಟಾಣಿ ಪ್ಯಾಕೆಟ್ಟಿನಿಂದ ತಂಗಳು ಹಾಲು ಬೆರೆಸಿ ಕುಡಿದ ಬಚ್ಚಪ್ಪ ತಿಳಿಯದೆ ಡೆಟಾಲನ್ನು ನೆಕ್ಕಿರುವ ಬೆಕ್ಕಿನಂತೆ ಮುಖಮಾಡಿಕೊಂಡು ಟೀವಿಯಲ್ಲಿ ಬರುತ್ತಿದ್ದ ಇಂಗ್ಲಿಷ್ ಸಿನಿಮಾ ನೋಡುತ್ತಾ ತೂಕಡಿಸಿದ. ಎಚ್ಚರಗೊಂಡಾಗ ಇಂಗ್ಲಿಷ್ ಸಿನಿಮಾದ ಗುಂಗಿನಿಂದಲೋ ಅಥವಾ ಪಾಶ್ಚಿಮಾತ್ಯರ ಪ್ಯಾಕೆಟ್ ನೀರು ಕುಡಿದಿದ್ದರಿಂದಲೋ ಏನೋ "ತಾಳೆಟ್ಗೋಬೇಕಪೋ.." ಎಂದ.

ಒಮ್ಮೆ ಹೋಗಿಬಂದು ಅನುಭವಿಯಾಗಿದ್ದ ರಾಮಣ್ಣ ಬಚ್ಚಪ್ಪನಿಗೆ ಮಾರ್ಗದರ್ಶನವಿತ್ತು, "ನೀರಿನ್ ಗುಂಡಿ ಬುಟ್ ಬ್ಯಾರೆ ಯಾವ್ದನ ಒತ್ತ್‌ಗಿತ್ತೀಯ, ಇಮಾನ್ದಿಂದ್ ಆಚ್ಗಾಕ್ಬುಡ್ತೈತೆ" ಎಂದು ಎಚ್ಚರಿಸಿ ಕಳಿಸಿದ. ಟಾಯ್ಲೆಟ್ಟಿನಿಂದ ಹೊರಬಂದಾಗ ಬಚ್ಚಪ್ಪನ ಕಣ್ಣುಗಳಲ್ಲಿ ಆಕಸ್ಮಿಕವಾಗಿ ಅಲಿಬಾಬಾನ ಗುಹೆಯೊಳಗಿನ ಅದ್ಭುತಗಳನ್ನು ಕಂಡುಹಿಡಿದ ಬೆರಗಿತ್ತು.

"ಎಲಾ ನನ್ಮಗುಂದೆ.!....ಗುಂಡಿ ಒತ್ದೇಟ್ಗೆ ಬಟ್ಲಗಿರದ್ನೆಲ್ಲ ಸೊಯ್ಕ್‌ಅಂತ ಒಳ್ಳೆ ಆನೆ ಕೆರೇಲ್ ನೀರೆಳ್ದಂಗ್ ಯಳ್ಕಬುಡ್ತದಲ್ಲಾ, ಇನ್ನೆಂತಾ ಮೆಕಾನಿಕ್ ಮಡ್ಗಿರ್ಬೋದು ಅದ್ರಗೆ!" ಎಂದು ಅರಳಿದ ಅವನ ಮುಖ ಮರುಕ್ಷಣವೇ ಅಲ್ಲಿಯ ಅತಿದೊಡ್ಡ ಕೊರತೆಯೊಂದನ್ನು ನೆನೆಸಿಕೊಂಡು ಸ್ವಲ್ಪ ಕುಂದಿತು. "ಆದ್ರೆ ಈ ಪೇಪರ್ ಶಿಶ್ಟಮ್ಮು ಸಟ್ಟಾಯ್ಕಿಲ್ಲ ಬುಡಪ.." ಎಂದ.

"ಲೇ ಬಚ್ಚೆಗೌಡ, ಇನ್ನ್ ನಮ್ಮೂರ್ಗ್ ವಾಪಸ್ ಓಗಗಂಟ ಎಲ್ಲೂ ತೊಳ್‌ಗಿಳ್ಯೋ ಬಾಬತ್ತಿಲ್ಲ, ತಿಳ್ಕಬುಡು. ಎಲ್ಲೋದ್ರೂ ಬರೇ ಪೇಪರೇ ಗತಿ..."

"ಮುದ್ದುನ್ ಮನ್ಯಗೆ..?"

"ಅಲ್ಲೂವೆ.."

"ಯೇ..ಬೈಲ್ಗೋದ್ರಾಯ್ತು.."

"ಬೈಲ್ಗೋದ್ರ್ ಜೈಲ್ಗಾಕ್ತರೆ.!...ಆಮ್ಯಾಕ್ ಅಂಗೆಲ್ಲಾರ ಮಾಡಿ ಕುಲ್ಗೆಡ್ಸಿಕ್ಕೀಯಲೇ ತಿಕ್ಕುಲ್‌ಸುಬ್ಬ!" ಬಚ್ಚಪ್ಪನ ಸಲಹೆಯನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡ ರಾಮಣ್ಣ ಗಾಬರಿಯಾಗಿ ಗದರಿದ.

ಪಾಶ್ಚಿಮಾತ್ಯರ ಈ ಒಣ ಶೌಚಾಭ್ಯಾಸ ತನ್ನಿಂದ ತಿಂಗಳುಗಟ್ಟಲೆ ಸಾಧಿಸಲಾದೀತೇ ಎಂದು ಮಂಕಾಗಿ ಯೋಚಿಸುತ್ತ ಕಿಟಕಿಗೆ ತಲೆಯಿಟ್ಟ ಬಚ್ಚಪ್ಪ ಹೊಸೆದ ಹತ್ತಿಯ ಮೆತ್ತನೆ ಹಾಸಿನಂತಿದ್ದ ಬಿಳಿಮೋಡವನ್ನು ನೋಡಿ ಜೋಂಪು ಹತ್ತಿ ಮತ್ತೆ ನಿದ್ದೆ ಹೋದ. ಕನಸಿನಲ್ಲಿ ಮೋಹಿನಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ನೇವರಿಸುತ್ತ ಕೆಂಪು ಹಲ್ಲುಗಳ ನಗೆ ಸೂಸಿ "ಯಾಕಿಂಗ್ ಯೇಚ್ನೆ ಮಾಡೀ ಬುಡತ್ಲಗೆ....ಎಲ್ಲಾ ಸರೋಯ್ತದೆ" ಎಂದು ಸಮಾಧಾನ ಮಾಡುತ್ತಿದ್ದಳು. ಸಣ್ಣಗೆ ತಿಣುಕುತ್ತ ಗಾಳಿಯನ್ನು ಗುದ್ದುತ್ತ ಕಾಲು ಝಾಡಿಸಿ ಧಡಕ್ಕನೆ ಎದ್ದು ಕುಳಿತ ಬಚ್ಚಪ್ಪ ಕೋರೆ ಒರೆಸಿಕೊಂಡು ಚೇತರಿಸಿಕೊಳ್ಳುವ ಹೊತ್ತಿಗೆ ವಿಮಾನ ಬಿಳಿಮೋಡದ ಹಾಸನ್ನು ಸೀಳಿಕೊಂಡು ರೆಕ್ಕೆಯಂಚುಗಳನ್ನು ಓರೆಮಾಡಿಕೊಂಡು ಆಕ್ಲೆಂಡಿನ ಹಚ್ಚ ಹಸಿರಿನ ಅಂಗಳಕ್ಕೆ ಇಳಿಜಾರು ಮಾಡಿಕೊಳ್ಳತೊಡಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Humorous article by Na Bhaskar, NewZealand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more