ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದೇ ಪದೇ- ಪದ ಪುರಾಣ

By Staff
|
Google Oneindia Kannada News

Rekha Hegade Balesara
ಹಾಸ್ಯಕ್ಕಾಗಿ ನಾವು ಸಿನೆಮಾ ಸಂಭಾಷಣೆಗಳಿಗೇ ಮೊರೆ ಹೋಗಬೇಕಾಗಿಲ್ಲ. ಹಾಸ್ಯ ನಮ್ಮ ನಡುವೆಯೇ ಹಾಸುಹೊಕ್ಕಾಗಿರುತ್ತದೆ. ತಮಗೆ ಅರಿವಿದ್ದೋ ಅರಿವಿಲ್ಲದೆಯೋ ಕೆಲ ಪದಗಳನ್ನು ಪದೇಪದೇ ಬಳಸುತ್ತಿರುವುದನ್ನು ಗಮನಿಸಿರುತ್ತೀರಾ. ಒಬ್ಬ ಒಳ್ಳೆಯ 'ಕೆಟ್ಟ' ಮನುಷ್ಯನಿದ್ದ. ಕೆಟ್ಟ ಅನ್ನುವ ಪದ ಬಳಸದೆ ಆತನ ಮಾತೇ ಮುಗಿಯುತ್ತಿರಲಿಲ್ಲ. ಕೆಟ್ಟ ದೂರೈತಿ, ಕೆಟ್ಟ ಸಿಟ್ಟಬರಾಕತ್ತೈತಿ, ಸಚಿನ್ ಭಾರೀ ಕೆಟ್ಟ(ಛೊಲೋ) ಹೊಡೀತಾನ. ಅವನ ಮಾತಿಗೆ ನೀವು ಏನೇ ಹೇಳ್ರಿ. ಅವ ಮಾತ್ರ ಭಾರೀ 'ಕೆಟ್ಟ' ಒಳ್ಳೆಯ ಮನಷಾ!

* ರೇಖಾ ಹೆಗಡೆ, ಬಾಳೇಸರ

'ಇವ್ನು ಕೂತ್ರೆ ನಂದಿ, ಎದ್ರೆ ಗೂಳಿ'
'ನಾನು ಅಯ್ಯೋ ಅಂದ್ರೆ ನೂರು ವರ್ಷ; ಏಯ್ ಅಂದ್ರೆ ಮೂರು ನಿಮಿಷ'
'ಶಿವನೇ ಶಂಭುಲಿಂಗ'
'ಐಯಾಮ್ ದ ಗಾಡ್; ಗಾಡ್ ಈಸ್ ಗ್ರೇಟ್'
'ದುನಿಯಾ ಸಿಕ್ಕಾಪಟ್ಟೆ ಕಾಸ್ಟ್ಲಿ; ಔಟ್‌ಲುಕ್ ಈಸ್ ವೆರಿ ವೆರಿ ಇಂಪಾರ್ಟೆಂಟ್'

ನೀವು ಸಿನೆಮಾ ಪ್ರಿಯರಾಗಿದ್ದರೆ ಇಂಥ ಸಂಭಾಷಣೆಗಳನ್ನು ಧಾರಾಳ ಕೇಳಿರುತ್ತೀರಿ. ನಾಯಕ ಇಲ್ಲಾ ಇನ್ಯಾವುದೋ ಮುಖ್ಯ ಪಾತ್ರವೊಂದು ಸರಾಸರಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಉದುರಿಸುವ ಪಂಚ್ ಮುತ್ತುಗಳು ಇವು. ಒಂದು ಪಾತ್ರವನ್ನು ಅದರೆಲ್ಲಾ ಆಯಾಮಗಳೊಂದಿಗೆ ಪರಿಚಯಿಸುವ ಮಾತು ಕೆಲವಾದರೆ ಇನ್ನು ಕೆಲವು ಮೂಗಿಂದ ಬಿಸಿಗಾಳಿ ಹೊರಬೀಳುವಷ್ಟು ಸಲೀಸಾಗಿ ಉದುರುವ ಪದಪುಂಜಗಳು.

ಚಲನಚಿತ್ರಗಳಲ್ಲಿ ಮಾತ್ರವಲ್ಲ, ನಮ್ಮ ಸುತ್ತಮುತ್ತಲ ಜನರಲ್ಲೂ ಇಂಥ ಕೆಲವು ಮಾತುಗಳು ಮತ್ತೆ ಮತ್ತೆ ಬಳಕೆಯಾಗುತ್ತವೆ. ಉದ್ದೇಶಪೂರ್ವಕವಾಗಿಯೋ, ಗಮನವೇ ಇಲ್ಲದೆಯೋ ಯಾವುದೋ ಒಂದು ಪದವನ್ನೋ, ವಾಕ್ಯವನ್ನೋ ತಮ್ಮ ವ್ಯಕ್ತಿತ್ವಕ್ಕೆ ಗಂಟು ಹಾಕಿಕೊಂಡಿರುತ್ತಾರೆ ಜನ. ನೆರಳಿನಷ್ಟು ನಿಷ್ಠವಾಗಿ ಅದು ಅವರಿಗೆ ಅಂಟಿಕೊಂಡಿರುತ್ತದೆ.

ನಮ್ಮೂರಲ್ಲಿ ಮಾದಕ್ಕ ಎಂಬುವರೊಬ್ಬರಿದ್ದಾರೆ. ಮೇಲ್ನೋಟಕ್ಕೆ ಇಳಿವಯಸ್ಕ, ಸಂಪ್ರದಾಯಸ್ಥ, ರೂಪವತಿ ಮಹಿಳೆ. ಮಾತಿನಲ್ಲಿ 'ಕರ್ಮಾವತಾರಿ'. 'ಕರ್ಮ, ಬೆಳಿಗ್ಗಿಂದ ಹೊಟ್ಟೆನೋವು. ಯಾವ ಮದ್ದಿಗೂ ಕರ್ಮ ಕಡಿಮೆ ಆಜಿಲ್ಲೆ. ಯಂಥಾರೂ ಒಂದು ಕರ್ಮ ಔಷಧಿ ಇದ್ರೆ ಕೊಡಿ, ಕರ್ಮಕ್ಕೆ ಕಡಿಮೆ ಆಗ್ತ ನೋಡ್ತಿ'- ಹೀಗೆ ಕತೃ, ಕ್ರಿಯಾಪದಗಳ ಜೊತೆಗೆ ಡಬ್ಬಲ್ ಕರ್ಮ ಬಳಸಿಯೇ ಅವರು ಪ್ರತಿಯೊಂದು ವಾಕ್ಯವನ್ನೂ ಕಟ್ಟುತ್ತಿದ್ದುದು. ಹಿಂದೊಮ್ಮೆ 'ನಿರ್ಮಾ' ವಾಷಿಂಗ್ ಪೌಡರ್ ಜನಪ್ರಿಯವಾಗಿತ್ತಲ್ಲ, ಆಗ ಅದನ್ನು ಅನುಸರಿಸಿ ನಾವೆಲ್ಲ 'ವಾಷಿಂಗ್ ಪೌಡರ್ ನಿರ್ಮಾ, ನಮ್ಮೂರ್ ಮಾದಕ್ಕನ ಕರ್ಮ' ಎಂದು ಹಾಡುತ್ತಿದ್ದೆವು.

ಹಿಂದೆ ನಾನಿದ್ದ ಬಾಡಿಗೆ ಮನೆಯ ಮಾಲೀಕರ ಪತ್ನಿ ಬಾಯ್ತೆಗೆದರೆ ಬುಡಕ್ಕೊಂದು 'ಪಾಪ', ತುದಿಗೊಂದು 'ಪಾಪ' ಉದುರಿಸುವ 'ಪಾಪ+ಇಷೆ'. ಆದರೆ ಗುಣದಲ್ಲಿ ಬಂಗಾರ; ಪುಣ್ಯಾತ್ಗಿತ್ತಿ. ಬೆಳಿಗ್ಗೆ ಎದ್ದು ಹಾಲಿನ ಪ್ಯಾಕೆಟ್‌ಗೆ, ಕುಡಿಯುವ ನೀರಿಗೆಂದು ಕೆಳಗೆ ಹೋಗುತ್ತಿದ್ದಂತೆ 'ಪಾಪ, ರಾತ್ರಿ ತಡವಾಗಿ ಬಂದು ಮಲಗಿರ್‍ತೀರಿ, ಏಳ್ತಿದ್ಹಂಗೆ ಮೆಟ್ಟಿಲು ಇಳಿದು ಹತ್ತೋ ತಾಪತ್ರಯ ನಿಮ್ಗೆ, ಪಾಪ' ಎಂದು ಅಕ್ಕರೆಯನ್ನು ಪಾಪ್-ಇಸುತ್ತುದ್ದರು. ಒಂದಿನ ಅವರ ಸೊಸೆಗೆ ಹೆರಿಗೆಯಾಯಿತು. ರಾತ್ರಿ ಮನೆಗೆ ಬರುತ್ತಿದ್ದಂತೆ ಸುದ್ದಿ ಮುಟ್ಟಿಸಿದರು-'ನಮ್ ಸೊಸೆಗೆ ಪಾಪ, ಇವತ್ತು ಮಗು ಆಯ್ತು. ನಾರ್ಮಲ್ ಡೆಲಿವರಿನೇ, ಪಾಪ, ಏನೂ ತೊಂದರೆ ಆಗ್ಲಿಲ್ಲ'. ಹೇಳಿ ಕೇಳಿ ಪತ್ರಕರ್ತೆ ನಾನು- 'ಪಾಪ'ದ ಬದಲು 'ಪಾಪು' ಅಂದಿದ್ರೆ ಸರಿಯಾಗ್ತಿತ್ತಾ ಎಂದು ಯೋಚಿಸುತ್ತಾ ಮೇಲೆ ಬಂದೆ.

ಕೊನೆಗೊಮ್ಮೆ ನಾವು ಆ ಮನೆ ಬಿಡುವ ದಿನ ಬಂತು. 'ಅಮ್ಮಾವ್ರೆ, ಹೋಗಿ ಬರ್‍ತೇವೆ' ಅಂದೆ. 'ಪಾಪ, ನಮ್ ಮನೆಗೆ ಮದ್ವೆ ಆಗಿ ಬಂದ್ರಿ, ಮಗೂನು ಆಯ್ತು. ಪಾಪ, ಫಾರಿನ್ಗೂ ಹೋಗಿ ಬಂದ್ರಿ. ಈಗ ಸ್ವಂತ ಮನೆಗೆ ಹೋಗ್ತಿದ್ದೀರಿ. ಪಾಪ, ಎಲ್ಲಾ ಒಳ್ಳೆದಾಯ್ತು, ಮುಂದೂ ಹೀಗೆ ಇರ್‍ಲಿ- ಪಾಪ' ಎಂದು ಬೀಳ್ಕೊಟ್ಟರು. ಪಾಪ, ಅವರೂ ಚೆನ್ನಾಗಿರ್‍ಲಿ.

ಒಬ್ಬ ಸಹೋದ್ಯೋಗಿ ಇದ್ದರು. ಮಾತಿಗೊಮ್ಮೆ 'ಬೈ ದ ವೇ' ಎನ್ನುವ ರೂಢಿ ಅವರಿಗೆ. 'ಬೈ ದ ವೇ ಇಂಥವರು' ಎಂದೇ ಅವರನ್ನು ಜನ ಹಿಂದಿನಿಂದ ಕರೆಯುತ್ತಿದ್ದರು. 'ಬೈ ದ ವೇ, ನಿಮ್ದು ಊಟ ಆಗಿಲ್ಲೇನು, ಛೊಲೋ ಆತು, ಬೈ ದ ವೇ ನನ್ಗೂ ಜೋಡಿ ಇರ್‍ಲಿಲ್ಲ, ಕೂಡಿ ಹೋಗೋಣು'... ಹೀಗೆ ಮುಂದುವರೆಯುತ್ತಿತ್ತು ಅವರ ಮಾತು. ಇನ್ನೊಬ್ಬರು ಹಿರಿಯ ಸಹೋದ್ಯೋಗಿ ನಯವಾದ ಮಾತುಗಾರಿಕೆಗೆ ಹೆಸರಾಗಿದ್ದವರು, ಹಿರಿ ಕಿರಿಯರೆನ್ನದೇ ಎಲ್ಲರನ್ನೂ 'ಗುರುವೆ' ಎಂದು ಸಂಬೋಧಿಸುತ್ತಿದ್ದರು. ಅವರು ತಪ್ಪು ಮಾಡಿದ ಕಿರಿಯರನ್ನು ಮಾತನಾಡಿಸುವ ರೀತಿ ಕೂಡ ನಯವಾಗಿರುತ್ತಿತ್ತು, ಕಲ್ಲಿಗೆ ಸುತ್ತಿದ ರೇಷ್ಮೆ ಬಟ್ಟೆಯಂತೆ- 'ಏನ್ ಗುರುವೆ, ಎಷ್ಟೊಂದು ಕಷ್ಟಪಟ್ಟು ಇಷ್ಟು ಕೆಟ್ಟ ರಿಪೋರ್ಟ್ ಬರೆದಿದ್ದೀರಲ್ಲ, ನೀವು ಪಟ್ಟಷ್ಟೇ ಕಷ್ಟ ಈಗ ಓದುಗ ಮಹಾಶಯರೂ ಪಡಬೇಕಲ್ಲ ಗುರುವೆ'....

ಕೆಲವರಿರುತ್ತಾರೆ, ನೀವು ಏನೇ ವಿಷಯ ಹೇಳಿ. ಅವರಿದ್ದು ಸಿದ್ಧ ಉತ್ತರವಿರುತ್ತದೆ- 'ನಾನು ಮೊದ್ಲೇ ಹೇಳಿದ್ದೆ/ನಂಗೆ ಮೊದ್ಲೇ ಗೊತ್ತಿತ್ತು ಹೀಗೇ ಆಗುತ್ತೆ ಅಂತ'. ಈ ಕಾಲಜ್ಞಾನಿಗಳು ಯಾವಾಗಲೂ ಎಲ್ಲ ಬಲ್ಲವರು- ಪತಿ/ಪತ್ನಿಗೆ ಬಸ್ ತಪ್ಪುವುದರಿಂದ ಹಿಡಿದು ಪಕ್ಕದ್ಮನೆ ಹುಡುಗಿ ಯಾರನ್ನೋ ಲವ್ ಮಾಡುವವರೆಗೆ, ಬೆಳೆಗೆ ಬೆಲೆ ಕುಸಿಯುವುದರಿಂದ ಹಿಡಿದು ಬೇರೆ ರಾಜ್ಯದ ಮುಖ್ಯಮಂತ್ರಿ ಪದವಿ ಕಳೆದುಕೊಳ್ಳುವುದರ ತನಕ ಮೊದಲೇ ಗೊತ್ತಿಲ್ಲದ ವಿಷಯವೇ ಇರುವುದಿಲ್ಲ. ಪರಿಚಯದ ಒಬ್ಬ ಮಹಿಳೆ ಇದ್ದಾರೆ, ಅವರಿಗೂ ಹೀಗೆ 'ಮೊದ್ಲೇ ಹೇಳಿದ್ದೆ' ಎನ್ನುವ ಚಟ. ಒಂದಿನ ಅವರ ಮನೆಯ ಚಿಕ್ಕ ಮಗುವೊಂದು ಬಾವಿಯಲ್ಲಿ ಬಿದ್ದು ಹೋಯ್ತು. ತಕ್ಷಣ ಗೊತ್ತಾಗಿ ಅದನ್ನು ಹೊರ ತೆಗೆದು ಬದುಕಿಸಿದರೆನ್ನಿ. ಜನ ಸೇರುತ್ತಿದ್ದಂತೆ ಈ ಮಹಿಳೆ ಮಾತಿಗೆ ಶುರುವಿಟ್ಟುಕೊಂಡರು, 'ನಾನು ಮೊದ್ಲೇ ಹೇಳಿದ್ದೆ ಹೀಗಾಗುತ್ತೆ ಅಂತ..' ಅಲ್ಲೇ ನಿಂತಿದ್ದ ಮನೆ ಯಜಮಾನನಿಗೆ ಮೊದಲೇ ಟೆನ್ಶನ್, ರೇಗಿ ಬಿಟ್ಟರು ಅವರು- 'ಇಂಥಾ ಅಪಶಕುನನಾ ನೀನು ಹೇಳೋದು, ಇದರ ಬದಲು ಬಾಯಿಗೆ ಬೀಗ ಹಾಕ್ಕೊಳ್ಳೋದು ಒಳ್ಳೇದು'- ಇದಾದ ಮೇಲೆ 'ಮೊದ್ಲೇ ಹೇಳಿದ್ದೆ' ಎಂಬ 'ನಂತರ ಉವಾಚ' ಕೇಳಿದ್ದು ಕಡಿಮೆ.

'ಹಾಗೆ ನೋಡಿದರೆ.....'- ಹೇಗೆ ನೋಡಿದರೆ ಎಂದು ಯೋಚಿಸುತ್ತಿದ್ದೀರಾ? ನನಗೂ ಗೊತ್ತಿಲ್ಲ. ಆದರೆ ಒಂದಷ್ಟು ಜನ ಮಾತಿಗೆ ಶುರುವಿಟ್ಟುಕೊಳ್ಳುವ ರೀತಿ ಇದು. ಒಬ್ಬ ಹಿರಿಯ ಪತ್ರಕರ್ತರಿದ್ದಾರೆ. ಅವರ ಬರಹಗಳಲ್ಲಿ ಹತ್ತಕ್ಕೆ ಎಂಟು ಪ್ಯಾರಾಗಳು ಶುರುವಾಗುವುದು ಇದೇ ಅವತರಣಿಕೆಯೊಂದಿಗೆ. ನಾನು ಪತ್ರಿಕೋದ್ಯಮ ಓದುತ್ತಿದ್ದ ಕಾಲದಲ್ಲಿ ಅವರದೊಂದು ಅಂಕಣ ವಾರಕ್ಕೊಮ್ಮೆ ಬರುತ್ತಿತ್ತು. ಆ ದಿನ ನಮ್ಮ ಅಭ್ಯಾಸ (ಅನಧಿಕೃತವಾಗಿ) ಶುರುವಾಗುತ್ತಿದ್ದುದೇ ಲೇಖನದಲ್ಲಿ ಎಷ್ಟು ಕಡೆ 'ಹಾಗೆ ನೋಡಿದರೆ' ಬಂದಿದೆ ಎಂಬುದನ್ನು ಲೆಕ್ಕ ಹಾಕುವುದರೊಂದಿಗೆ.

'ನಿಮ್ಗೆ ಹೇಳ್ಬೇಕು ಅಂದ್ರೆ..'- ಇನ್ನೊಂದಿಷ್ಟು ಜನರಿಗೆ ಆರಂಭಿಕ ಪದಗಳು ಇವು. ನೀವೇ ಹೇಳಿ, ಎಲ್ಲ ಜನರೂ ಹೇಳುವುದು ಹೇಳಬೇಕು ಎಂದಿರುವ ಸಂಗತಿಯನ್ನೇ ತಾನೇ? ಹೇಳಬಾರದು ಅಂದುಕೊಂಡಿರುವ ವಿಷಯವನ್ನೂ ಹೇಳುವುದು ಬಾಯ್ತಪ್ಪಿದಾಗ ಮಾತ್ರ. ಅದಾಗುವುದು ಅಪರೂಪಕ್ಕೆ. ಹಲವರಿಗೆ ತಾವು ಹೇಳುತ್ತಿರುವ ಸಂಗತಿಯನ್ನು ಎದುರಿರುವವರು ನಂಬುತ್ತಾರೋ ಇಲ್ಲವೋ ಎಂಬ ಅನುಮಾನವಿರಬೇಕು. ಪದೇ ಪದೇ -'ಸತ್ಯವಾಗ್ಲೂ ಹೇಳ್ತೀನಿ', 'ದೇವರಾಣೆ ಸರ್'- ಎಂಬೆಲ್ಲ ಪ್ರಮಾಣಗಳನ್ನು ಮಾತಿಗೆ ಮೆತ್ತುತ್ತಿರುತ್ತಾರೆ. ಅಲ್ಲಿಯವರೆಗೆ ಅವರ ಮಾತನ್ನು ತಣ್ಣಗೆ ಆಲಿಸುತ್ತಿದ್ದವರಿಗೆ ಈ ಪ್ರಮಾಣ ಕೇಳುತ್ತಿದ್ದಂತೆ ಸತ್ಯ-ಸುಳ್ಳಿನ ಮಾಯೆ ಆವರಿಸಿಕೊಳ್ಳುವುದೂ ಉಂಟು.

ಇನ್ನು ಕೆಲವರಿಗೆ ಮಾತಿಗೊಮ್ಮೆ ಯಾವುದೋ ದೈವವನ್ನು ನೆನೆಯುವ ರೂಢಿ. 'ಮಹಾಗಣಪತಿ, ನಾರಾಯಣ, ತಿರುಪತಿ ತಿಮ್ಮಪ್ಪ, ವೆಂಕಟರಮಣ, ರಾಮಾ...' ಹೀಗೆ ಒಂದೊಂದು ದೇವರ ಹೆಸರನ್ನು ಪುಣ್ಯ ಪ್ರಾಪ್ತಿಗೆ ಆಶ್ರಯಿಸಿರುತ್ತಾರೆ. ಕನ್ನಡದ ನಿರ್ಮಾಪಕರೊಬ್ಬರು 'ಪಾಂಡುರಂಗ ಇಂಥವರು' ಎಂದೇ ಪ್ರಸಿದ್ಧಿ, ಗೊತ್ತಿರಬಹುದಲ್ಲ. ನಮ್ಮ ಶಿಕ್ಷಕಿಯೊಬ್ಬರಿದ್ದರು, ವಿದ್ಯಾರ್ಥಿಗಳನ್ನು ಬೈಯುವುದಕ್ಕೆ ಭಾರಿ ಪ್ರಸಿದ್ಧಿ. ಸಂದರ್ಭಾನುಸಾರ ಬತ್ತಳಿಕೆ ಭರ್ತಿ ಹೊಸ ಹೊಸ ಬಾಣಗಳನ್ನು ಬಿಡುತ್ತಿದ್ದರೂ 'ಬರೀ ಕಲಲಲ ಅನ್ನಾಕ್ಹತ್ತೀರಲ್ಲ, ಉಲ್ಲೂ ಕೇ ಪಟ್ಟೇ' ಎಂಬ ಮಾಮೂಲಾಸ್ತ್ರವನ್ನು ಮಾತ್ರ ತಪ್ಪದೇ ಅದಕು, ಇದಕು, ಯದಕು ಬಳಸುತ್ತಿದ್ದರು ಅವರು.

ನಮ್ಮ ಪಕ್ಕದೂರಿನಲ್ಲಿ ಒಬ್ಬ ಹುಚ್ಚ ಇದ್ದ. ಮನೆಯವರು ಆತನನ್ನು ಒಳಸೇರಿಸುತ್ತಿರಲಿಲ್ಲ. ಹಲುಬುತ್ತ, ಊರೂರು ತಿರುಗುತ್ತ, ಅನ್ನ ಕೊಟ್ಟಲ್ಲಿ ಉಂಡು, ಹಾಸಲು ಕೊಟ್ಟಲ್ಲಿ ಮಲಗಿ ದಿನ ದೂಡುತ್ತಿದ್ದ. ತಲೆ ಮರುಳಾಗಿದ್ದರೂ ಸುತ್ತ ಮುತ್ತಲ ಬಹುತೇಕ ಜನರಿಗಿಂತ ಉತ್ತಮ ಇಂಗ್ಲಿಷ್ ಜ್ಞಾನ ಅವನಿಗಿತ್ತು. ಮಾತಿಗೆ ಮುಂಚೆ 'ಐಯಾಮ್ ದ ಪರ್ಸನಲ್ ಸೆಕ್ರೆಟರಿ ಟು ಪ್ರೈಮ್ ಮಿನಿಸ್ಟರ್ ರಾಜೀವ್ ಗಾಂಧಿ' ಎನ್ನುತ್ತಿದ್ದ. ಅವನ ಇಂಥ ಅನೇಕ 'ಪದೇ ಪದೇ' ಪದಪುಂಜಗಳಲ್ಲಿ ವಿಚಿತ್ರ ವೇದಾಂತವೂ ಅಡಗಿರುತ್ತಿತ್ತು. ಸ್ಯಾಂಪಲ್‌ಗೊಂದು: 'ಜಗತ್ತೇ ಹುಚ್ಚು; ಅದರಲ್ಲಿ ನನಗೆ, ನಿಮಗೆ ಸ್ವಲ್ಪ ಹೆಚ್ಚು'.

ಪುನರಾಯಿಸುವ ಮಾತಿನಲ್ಲಿ ಪಂಚ್ ಇದ್ದರೆ, ಸಂದರ್ಭಾನುಸಾರ ಬಳಸುತ್ತಿದ್ದರೆ ಕೇಳಲು ಮಜ. ಅದಿಲ್ಲದಲ್ಲಿ ಪುನರಾವರ್ತಿತ ಮಾತು ಸೀದಾ ತಲೆಗೆ ಪಂಚ್ ಮಾಡುವುದು ಸುಳ್ಳಲ್ಲ. ಅದೇ ಹಳಸಲು ಹುಗ್ಗಿಯನ್ನು ಎಷ್ಟು ಸಲ ಸವಿಯುವುದು? ಹ(ಪ)ದ ಬದಲಾಗುತ್ತಿರಬೇಕು. ಏಕೆಂದರೆ, ಚಿತ್ರವೊಂದರಲ್ಲಿ ನಟ ರಮೇಶ್ ಭಟ್ ಹೇಳುವಂತೆ 'ಜನ ಚೇಂಜ್ ಕೇಳ್ತಾರೆ'! ಪದ ಸವೆದು ಸಣಕಲಾದ ಮೇಲೂ ಬಿಡದೇ ಪದೇ ಪದೇ ಅದನ್ನೇ ಉದುರಿಸುತ್ತಿದ್ದರೆ ಅಂಥ ಮಾತು, ಅದನ್ನು ಆಲಿಸಲೇಬೇಕಾದವರ ಗತಿ- ನಮ್ಮ ಶಿಕ್ಷಕರೊಬ್ಬರು ಹೇಳುತ್ತಿದ್ದಂತೆ- 'ಯದಕ್ಕೂ ಬ್ಯಾಡ ಸರ್ವಜ್ಞ!'

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X