ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಗೇ ಸುಮ್ಮನೆ...

By Staff
|
Google Oneindia Kannada News

Vani Ramdas, Singaporeಕೆಲವು ಪದಗಳ ಪ್ರಯೋಗ ಬಹಳಷ್ಟು ಬಾರಿ ಅರ್ಥವಿದ್ದು/ಇಲ್ಲದೆಯೂ ಹೇಗೆ ನಾಲಿಗೆಯಲ್ಲಿ ಪದೇ ಪದೇ ನಲಿದಾಡುತ್ತೆ "ಹಾಗೇ ಸುಮ್ಮನೆ". ಏನೂ ಇಲ್ಲದ ಸುಮ್ಮನೆ ಹಿಂದೆಯೂ ನಾನಾ ಅರ್ಥಗಳಿರುತ್ತವೆ. ಈ ಲೇಖನವನ್ನೂ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಹಾಗೆ ಸುಮ್ಮನೆ ಓದಿ ನೀವೇ ಅರ್ಥ ಕಂಡುಕೊಳ್ಳಿ, ಹಾಗೆ ಸುಮ್ಮನೆ!

*ವಾಣಿ ರಾಮದಾಸ್, ಸಿಂಗಪುರ

ಬರ್ತೀಯಾ ಇಲ್ಲಿ ಎಂದು ಬುಲಾವ್ ಬಂತು ನನ್ನ ರಾಯನಿಂದ. ಒಮ್ಮೆ ರೂಮಿನತ್ತ ನೋಡಿ, ಸದಾ ಇದ್ದದ್ದೇ ಇವನ ಬುಲಾವ್ ಎಂದು ನನ್ನದೇ ಪ್ರಪಂಚದಲ್ಲಿ ಮಗ್ನಳಾದೆ. ಎಷ್ಟು ಸಲ ಕರೆಯೋದು, ಬರ್ತೀಯಾ ಇಲ್ಲಿ ಎಂದು ಮತ್ತದೇ ಬುಲಾವ್. ಏನಾದರು ಇದ್ದದ್ದೇ ಇವನದು ಎಂದು ಗೊಣಗುತ್ತಾ, ಏನ್ ಕರೆದದ್ದು ಎಂದು ರೂಮಿನತ್ತ ನಡೆದೆ. ಟೈಪಿಸುತ್ತಾ ಕೂತಿದ್ದವ, ಏನ್ ಮಾಡ್ತಾ ಇದ್ದೆ ಅಂದ. ಅಯ್ಯೋ, ಅದೇನೋ ಬರ್ತಾ ಇತ್ತು, ಸುಮ್ನೆ ನೋಡ್ತಾ ಇದ್ದೆ ಎಂದೆ. ನನ್ ಮಾತಿಗೆ ಹೆ, ಹೆ ಎಂದು ಜೋರಾಗಿ ನಕ್ಕ. ನಗೋದೇನು ನಾನಂದಿದ್ದು ಎಂದು ಸಿಡುಕಿದೆ. ಈಗ್ ಸಿಡುಕಿದ್ದು ಯಾಕೆ ಎಂದಾಗ "ಸುಮ್ನೆ" ಎಂದು ಹೊರನಡೆದೆ. ಮತ್ತೆ ಜೋರು ನಗು ಕೇಳಿಸಿತು. ಚಚ್ಚಿ ಬಿಡುವಷ್ಟು ಕೋಪ ಬಂದಿತ್ತು. ಎಲ್ಲೋ ಇವನಿಗೆ ಇವತ್ತು ಎಂದು ಸಿಡುಕುವಷ್ಟ್ರಲ್ಲಿ ಹೊಳೆಯಿತು ನಗುವಿನ ಕಾರಣ "ಸುಮ್ನೆ".

ಹೌದಲ್ಲವೇ, ಸುಮ್ಮನೆ ನೋಡ್ತಾ ಇರಲಿಲ್ಲ ನಾನು. ಸೊಪ್ಪು ಬಿಡಿಸ್ತಾ, ಸೋಪ್ ಅಪೇರಾ ನೋಡ್ತಾ ಇದ್ದೆ. ಕೆಲವೊಮ್ಮೆ ನಾವೇ ಹೇಳೋಲ್ವೇ ಸುಮ್ನೆ ಕೂತಿದ್ದೆ ಎಂದು. ಅದು ಹ್ಯಾಗ್ರಿ ಸುಮ್ಮನೆ ಕೂರ್ತೀವಿ? ತಲೆಯಲ್ಲಿ ಯೋಚೆನೆ ಓಡ್ತಾ ಇರುತ್ತೆ, ಮೈಯಲ್ಲಿ ರಕ್ತ ಓಡ್ತಾ ಇರುತ್ತೆ, ಹೃದಯ ಬಡ್‌ಕೊಳ್ತಾ ಇರುತ್ತೆ. ಆದ್ರೂ ಸುಮ್ನೆ ಕೂತಿರ್‍ತೀವಿ. ಇನ್ನು ಸುಮ್ನೆ ಓದೋದು, ಸುಮ್ನೆ ಬರೆಯೋದು, ಸುಮ್ನೆ ನೋಡೋದು ಎಲ್ಲವೂ ಸುಮ್ನೆ ಹೇಗಾಗುತ್ತೆ ನೀವೇ ಹೇಳಿ? ಅದೆಷ್ಟ್ ಸಲ ನಮ್ಮಗಳ ಬಾಯಲ್ಲಿ ಈ ಪದ ನಲಿದಾಡುತ್ತೆ ಅಂತ ನೀವು ಸುಮ್ನೆ ಲೆಕ್ಕ ಹಾಕಿ.

ಇಪ್ಪತ್ತು ವರುಷಗಳ ಹಿಂದಿನ ಕಾಲ ಪತ್ರ ವ್ಯವಹಾರ ಕಾಲ. ದೂರವಾಣಿ ಅಪರೂಪ. ನನ್ನ ಅಕ್ಕನಿಗೆ ಮದುವೆ ನಿಗದಿಯಾಗಿತ್ತು. ನಿಶ್ಚಿತಾರ್ಥ ಆಗಿರಲಿಲ್ಲ. ನನ್ನ ಭಾವೀ ಭಾವ ಮನೆಗೆ ಬಂದ್ರು. ಅಮ್ಮ, ಏನಪ್ಪಾ ಎಂದಾಗ ಸುಮ್ಮನೆ ಬಂದೆ ಅಂದ್ರು. ಆಗ ಅಮ್ಮ ಸುಮ್ಮನೆ ಯಾಕಪ್ಪಾ ಬರ್ತೀಯಾ, ಉಷಾ ಇವತ್ತು ಲೇಟಾಗಿ ಬರ್ತಾಳೆ ಎಂದಾಗ ನನ್ನ ಭಾವನ ಮುಖ ನೋಡಬೇಕಿತ್ತು. ಭಾವೀ ಅತ್ತೆ ಎದುರು ಮೊದಲ ಬಾರಿ ಹೇಳೋಕ್ಕೆ ಆಗ್ತಾ ಇತ್ತ ನಿಮ್ಮ ಮಗಳನ್ನ ನೋಡೋಕ್ಕೆ ಬಂದೆ ಅಂತ? ಪಾಪ, ಅದಕ್ಕೆ ಅವ್ರು ಸುಮ್ನೆ ಬಂದಿದ್ರು ಅವತ್ತು. ಇಂದಿಗೂ ಭಾವ "ಸುಮ್ಮನೆ" ಬಂದಿದ್ರು ಎಂದು ಎಂದು ರೇಗಿಸಿ ನಗ್ತೀವಿ ಹಾಗೆ ಸುಮ್ಮನೆ.

ಎರಡು ದಶಕಗಳ ಹಿಂದಿನ ಮಾತು. ಮಧ್ಯಮ ವರ್ಗದ ಮನೆಗಳಲ್ಲಿ ತಿಂಗಳ ಕೊನೆಯಲ್ಲಿ ಇದ್ದದ್ದೇ ತಾಪತ್ರಯ. ಹಣ ಕೇಳಬೇಕಾದ ಪರಿಸ್ಥಿತಿಗಳಲ್ಲಿ "ಹೆ, ಹೆ, ಹೆ ಹಾಗೇ ಸುಮ್ಮನೆ ನೋಡಿ ಹೋಗೋಣ ಅಂತಾ ಬಂದೆ, ಒಂದೈವತ್ತು ರುಪಾಯಿ ಇದ್ರೆ ಬೇಕಾಗಿತ್ತು" ಎಂಬುದು ಅನೇಕ ನಾಲಿಗೆಗಳಲಿ ನುಡಿಯುತ್ತಿತ್ತು. ಆ ಸುಮ್ಮನೆಯಲ್ಲಿ ತಿಂಗಳ ಕೊನೆಯಲ್ಲಿ ಹಣವಿಲ್ಲದ ಅಸಹಾಯಕತೆಯ ನೋವಿರುತ್ತಿತ್ತು.

ನಮ್ ಮನೇಲಿ ನಂಜ ಎಂದು ಹಸು ನೋಡಿಕೊಳ್ಳುವವನಿದ್ದ. ತಳ್ಳುವ ಗಾಡಿಯಲ್ಲಿ ಬಣ್ಣ ಬಣ್ಣದ ಐಸ್‌ಕ್ರೀಂ 5 ಪೈಸೆಗೆ 1 ಸಿಗುತ್ತಿತ್ತು ನಮ್ಮೂರಲ್ಲಿ. ಆ ಐಸ್‌ಕ್ರೀಮ್ ತಾನೂ ತಿಂದು ಅದನ್ನು ನಮ್ಮ ಹಸು ನಂದಳಿಗೆ ನೆಕ್ಕಿಸಿ ಆನಂದ ಪಡುತ್ತಿದ್ದ. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಅದೋ ಐಸ್‌ಕ್ರೀಂ ರುಚಿ ಕಂಡು ಗಾಡಿ ನೋಡಿದರೆ ಅಂಬಾ ಎನ್ನುತ್ತಿತ್ತು. ಥು, ನಂಜಾ, ನೀ ತಿನ್ನೋ ಅದಕ್ಕೆ ಯಾಕೋ ತಿನ್ನಿಸ್ತೀಯಾ ಎಂದರೆ ಏ ಸುಮ್ಕಿರವ್ವ, ಸುಮ್ಕೆ ಅದ್ಕೂ ರುಚಿ ತೋರಿಸ್ತೀವ್ನಿ ಅನ್ನೋವ್ನು. ಸುಮ್ಕೆ, ಸುಮ್ಕೆ ಎಂದು ತಾನೂ ತಿನ್ನುವ ಮುದ್ದೆ, ಹುಳಿ, ಕಾಫಿ, ತಿಂಡಿಗಳನ್ನು ನಂದಳಿಗೂ ತಿನಿಸುವ ಅವನಲ್ಲಿ "ಸುಮ್ಕೆ" ಅವನ-ನಂದಳ ಬಾಂಧವ್ಯ ಅಡಗಿತ್ತು. ಇನ್ನು ಕೆಲವರು ಇಲ್ಲೇ ಮಾರ್ಕೆಟ್ಟಿಗೆ ಸುಮ್ನೆ ಬಂದಿದ್ದೆ. ಹಾಗೆ ನಿಮ್ ಮನೆಗೂ ಸುಮ್ನೆ ಬಂದೆ. ಅಲ್ಲಾ, ಮಾರ್ಕೆಟ್ಟಿಗೆ ಸುಮ್ಮನೆ ಯಾರಾದ್ರೂ ಬರ್ತಾರಾ?

ಈ ಸುಮ್ಮನೆ ಇದೆಯಲ್ಲ ಅದು ಬಾಲ್ಯದಿಂದ ವೃದ್ಧಾಪ್ಯದವರೆಗೂ ನುಸುಳ್ತಾನೇ ಇರುತ್ತೆ. ಅದೂ "ಸುಳ್ಳಿಗೂ ಸುಮ್ಮನೆಗೂ" ಅವಿನಾಭಾವ ಸಂಬಂಧ. ನಾನ್ ಸುಮ್ಮನೆ ಕೂತಿದ್ದೆ ಅವ್ಳೇ ಸುಮ್ನೆ ಜಿಗುಟಿದ್ದು. ಸುಮ್ನೆ ಬನ್ನಿ ಅಜ್ಜೀ ಇಲ್ಲಿ ಎಂದು ಸುಮ್ಮನೆ ಕರೆದು ಚಾಕಲೇಟ್ ಡಬ್ಬ ತೋರಿಸೋದು. ಸುಮ್ನೆ ಸುಮ್ನೆ ಹೊಡಿತಾನೆ ನೋಡಮ್ಮಾ ಇದು ಬಾಲ್ಯದ ಸುಮ್ಮನೆ. ಸುಮ್ಮನೆ ನೋಡೋದು, ಸುಮ್ಮನೆ ಕಾಲ್ ಮಾಡೋದು, ಸುಮ್ಮನೆ ಮಾತನಾಡೋದು, ಸುಮ್ಮನೆ ಯೋಚಿಸೋದು ಹರೆಯ. ನಮ್ಮ ಅಸಹನೆ ಹೋಗಿಸಿಕೊಳ್ಳೋಕ್ಕೆ ಸುಮ್ಮನೆ ಹೆಂಡತಿ/ಗಂಡ, ಮಕ್ಕಳನ್ನು ಬೈಯೋದು ಮಧ್ಯ ವಯಸ್ಸು. ಇನ್ನು ವೃದ್ಧಾಪ್ಯದಲ್ಲೋ ತೂಕಡಿಕೆ ಸಹಜ. ಹೋಗಿ ಮಲ್ಕೋಳಿ ತೂಕಡಿಸ್ತಾ ಇದೀರ ಅಂತ ಹೇಳಿ ನೋಡಿ. ನಿದ್ದೆ ಏನ್ ಬಂದಿಲ್ಲ, ಹಾಗೇ ಸುಮ್ಮನೆ ಕಣ್ ಎಳೀತು ಎಂದು ಛಟ್ಟನೆ ಉತ್ತರ ನೀಡುತ್ತಾರೆ. ಅದೇ ಆ ತೂಕಡಿಕೆಯ ಸುಮ್ಮನೆ ಹೇಳಿದರೆ ಅವ್ರು ಬಿಮ್ಮನಾಗ್ತಾರೆ.

ಸುಮ್ಮನೆಗೆ ವೈವಿಧ್ಯಮಯ ರೂಪ. ಇನ್ನು ಕೆಲವರು ಯಾರಿಗೋ ಸಂಪತ್ತು ಬಂದರೆ ಯಾತಕ್ಕೋ ಸುಮ್ಮನೆ ಚಿಂತಿಸುತ್ತಾರೆ, ಯಾರಿಗೋ ಬಡತನ ಬಂದರೆ ಸುಮ್ಮನೆ ಮರುಗುತ್ತಾರೆ. ಯಾರ ಜಗಳದಲ್ಲೋ ಇವರು ಸುಮ್ಮನೆ ತಲೆ ಇಡುತ್ತಾರೆ. ಮತ್ತೋರ್ವರ ಸ್ವ-ವಿಚಾರಗಳಲ್ಲಿ ಸುಮ್ಮನೆ ಸಲಹೆ ನೀಡುತ್ತಾರೆ. ಸುಮ್ಮನೆ ಓದೋದು, ಬರೆಯೋದು, ಮಾತನಾಡೋದು, ಸುಳ್ಳು ಹೇಳೋದು ಕಡೆಗೆ ಅಳೋದು ಕೂಡ ಆಗುತ್ತೆ ಅಲ್ಲವೇ.

ದಾಸರ ಪದಗಳಲ್ಲಿ ಮೂಡಿ ಬಂದ ಸುಮ್ಮನೆ "ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ", "ಸುಮ್ಮನೆ" ಇದ್ದೇನು ಅಮ್ಮಿಯ ಬೇಡೆನು. ಇತ್ತೀಚೆಗೆ ಬಿಡುಗಡೆಯಾಗ 'ಗೂಳಿ' ಚಿತ್ರದ ಹಾಡು ಹೀಗಿದೆ "ಸುಮ್ ಸುಮ್ನೆ ಯಾಕೊ ನೀ ತುಟಿಯಾ ಚುಂಬಿಸಿದೆ". ಮುಂಗಾರು ಮಳೆಯ ಹಾಡು ಗೊತ್ತೇ ಇದೆ "ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ". ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ "ಒಮ್ಮೆಯು ಸುಮ್ಮನೆ ನಿನ್ನನು ಕಂಡೆನೆ, ನೀ ಕದ್ದು ನೋಡಿಲ್ಲವೇನು". ಇನ್ನು ಚಿತ್ರವೂ ಬಂದಾಯ್ತು ಹೆಸರು "ಹಾಗೇ ಸುಮ್ಮನೆ" ಅಂತ. ಇನ್ನೊಂದು ಸೊಗಸಾದ ಹಾಡಿದೆ ಅದು "ಯಾಕೆ ಕಾಡುತಿದೆ ಸುಮ್ಮನೆ ನಮ್ಮನು ಯಾವುದು ಈ ರಾಗ". ಇಲ್ಲಿ ಸುಮ್ಮನೆಯಲ್ಲಿ ಅಡಗಿದೆ ಅಂತರಾಳದ ಮಾತುಗಳು. ಈ ಹಾಡುಗಳನ್ನೂ ಸುಮ್ಮನೆ ಬರೆದಿದ್ದಾ? ಅಷ್ಟೇ ಏಕೆ ಸೂಪರ್ ಸ್ಟಾರ್ ಉಪೇಂದ್ರ ಮನೆಯ ಹೆಸರು ಕೂಡ 'ಸುಮ್ಮನೆ'.

ರಾಜಕೀಯದಲ್ಲಿ ಮಾತ್ರ ಈ ಸುಮ್ಮನೆ ಅತೀ ಪ್ರಯೋಜನಕಾರಿ. ಸುಮ್ಮನೆ ಆಶ್ವಾಸನೆಗಳನ್ನು ಕೊಡುವುದು, ಸುಮ್ಮನೆ ತಗಾದೆ ತೆಗೆಯುವುದು, ಸುಮ್ಮನೆ ಗಲಾಟೆಗಳಿಗೆ ಕಾರಣವಾಗಿ, ಸುಮ್ಮನೆ, ಸುಮ್ಮನೆ ಧಾಂದಲೆ ಎಬ್ಬಿಸೋದು, ಸುಮ್ನೆ ಮತ್ತೋರ್ವರಿಗೆ ಕಿರಿ ಕಿರಿ ಮಾಡೋದು ಹೀಗೆ ಅವರು ಬಿಮ್ಮನೆ ಕುಳಿತು, ಸುಮ್ಮನೆ ಮಾಡಿಸುವ ಈ ಎಲ್ಲ ಕ್ರಿಯೆಗಳೂ ಶ್ರೀ ಸಾಮಾನ್ಯನ ಪಾಲಿಗೆ, ಬಾಳಿಗೆ ಮಾತ್ರ "ಸುಮ್ಮನೆ" ಆಗಿರುವುದಿಲ್ಲ ಎಂಬುದಂತೂ ಕಟು ಸತ್ಯ.

ಕನ್ನಡದಲ್ಲಿ "ಸುಮ್ಮನೆ", ತೆಲುಗಿನಲ್ಲಿ "ಊರ್ಕೆ", ತಮಿಳಿನಲ್ಲಿ "ಚುಮ್ಮ", ಹಿಂದಿಯಲ್ಲಿ ಐಸೆಹೀ, ಆಂಗ್ಲದಲ್ಲಿ "ಜಸ್ಟ್ ಲೈಕ್ ದಟ್" ಪದದ ಈ ಸುಮ್ಮನೆ ಹಾಗೇ ಬರೆಸಿಕೊಂಡೂ ಹೋಗುತ್ತೆ, ಓದಿಸಿಕೊಂಡೂ ಹೋಗುತ್ತೆ, ಬೋರ್ ಹೊಡೆಸಿಕೊಂಡೂ ಹೋಗುತ್ತೆ ಅಲ್ವಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X