ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಠಲ, ಗಣೇಶ ಮತ್ತು ನಮೀಸೆ

By Staff
|
Google Oneindia Kannada News

Why Ganesh's head is not looking upward?ಕ್ಷೌರ ಮಾಡುವಾಗ ನಾಪಿತ ಗಿರಾಕಿಗಳೊಂದಿಗೆ, ಗಿರಾಕಿ ನಾಪಿತನೊಂದಿಗೆ ಮಾತಾಡುವುದು ನಿಷಿದ್ಧ. ಯಾಕೆ ಅಂತ ಕೇಳ್ಬೇಡಿ. ಉತ್ತರ ನಿಮಗೆ ಗೊತ್ತೇ ಇರತ್ತೆ. ಆದರೆ, ಈ ನಾಪಿತ ಮಾತ್ರ ಬಲೇ ಆಸಾಮಿ. ವಿಕ್ರಮನ ಬೆನ್ನಿಗೆ ಬಿದ್ದ ಬೇತಾಳದಂತೆ ಪ್ರಶ್ನೆ ಕೇಳುವುದು ಮಾತ್ರವಲ್ಲ, ಉತ್ತರ ಬರುವವರೆಗೂ ಬಿಡುವುದಿಲ್ಲ. ಪ್ರಶ್ನೆಗಳೇನು? ಉತ್ತರಗಳೇನು? ಇಲ್ಲಿವೆ ಓದಿ, ಸುಮ್ನೆ ತಮಾಷೆಗೆ.

ಲೇಖನ : ಆರ್. ಶರ್ಮಾ, ತಲವಾಟ, ಶಿವಮೊಗ್ಗ

ತ್ರಿವಿಕ್ರಮ ಮಹಾರಾಜ ಬೇತಾಳವನ್ನು ಹೆಗಲ ಮೇಲೇರಿಸಿಕೊಂಡು ಹೋಗುತ್ತಿದ್ದನೋ ಇಲ್ಲವೊ, ಬೇತಾಳ ಮಹಾರಾಜನಿಗೆ ಪ್ರಶ್ನೆಗಳನ್ನು ಎಸೆಯುತ್ತಿತ್ತೋ ಇಲ್ಲವೋ, ಅವೆಲ್ಲಾ ಕೇವಲ ಕಥೆಯೋ ಅಥವಾ ಸತ್ಯಘಟನೆಯೋ ನನಗೆ ಗೊತ್ತಿಲ್ಲ, ಆದರೆ ತಿಂಗಳಿಗೊಂದು ದಿನ ನನಗೆ ಮಾತ್ರ ರಾಜ ಬೇತಾಳನಿಂದ ಕೇಳುವ ಪ್ರಶ್ನೆಯಂತೆ ಪ್ರಶ್ನೆ ಕೇಳಿಸಿಕೊಳ್ಳೂವ ಯೋಗ ಹಲವಾರು ವರ್ಷದಿಂದ ನಡೆದುಕೊಂಡು ಬಂದಿದೆ. ರಾಜನಾಗುವ ಯೋಗವಿಲ್ಲದಿದ್ದರೂ ಅವನಂತೆ ಫಜೀತಿಗೆ ಬೀಳುವ ಅವಸ್ಥೆಯಾದರೂ ಇದೆಯಲ್ಲ! ಸಮಾಧಾನದ ವಿಚಾರವೆಂದರೆ ಉತ್ತರ ಗೊತ್ತಿದ್ದೂ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ತಲೆ ಒಡೆದು ಚೂರು ಚೂರಾಗುವ ಸಂಭವ ಇಲ್ಲ. ಹಾಗಂತ ಇಲ್ಲವೇ ಇಲ್ಲ ಅಂತ ಪುರ್ಣ ಸಮಾಧಾನದಿಂದ ಕುಳಿತುಕೊಳ್ಳುವಂತಿಲ್ಲ, ತೀರಾ ಉದ್ದಟತನದ ಉತ್ತರ ಕೊಟ್ಟರೆ ತಲೆ ಚೂರಾಗದಿದ್ದರೂ ತಲೆಯೋ ಕೆನ್ನೆಯೋ ಸೊಯಕ್ ಅಂತ ಗಾಯವಾಗಬಹುದು. ಬುಳ್ ಅಂತ ರಕ್ತ ಬರಬಹುದು.

ಇಷ್ಟು ಹೇಳುವ ಹೊತ್ತಿಗೆ ಈ ಸಮಸ್ಯೆ ಯಾರಿಂದ ಬರಬಹುದೆಂದು ನಿಮಗೆ ಸುಮಾರು ಗೊತ್ತಾಗಿರಬಹುದು. ಹೌದು ಆ ಪ್ರಶ್ನೆ ಬರುವುದು ನೀವಂದುಕೊಂಡಂತೆ ನನ್ನ ಬಾರ್ಬರ್‌ನಿಂದ. ನಮ್ಮೂರಿನಲ್ಲಿರುವ ಏಕೈಕ ಕಟಿಂಗ್ ಶಾಪ್ ಓನರ್ ವಿಠಲ ಬೇತಾಳದ ಪ್ರಶ್ನೆಗಳನ್ನೆಲ್ಲಾ ಬಾಯಿಪಾಠ ಮಾಡಿಕೊಂಡವನಂತೆ ಸಿದ್ಧನಾಗಿರುತ್ತಾನೆ. ಮತ್ತು ಸುಮಾರು ಅರ್ದ ತಲೆಯ ಕೂದಲು ಕತ್ತರಿಸುವವರೆಗೂ ಅವನದು ಮೌನ, ಅಲ್ಲಿಯವರೆಗೆ ನಮ್ಮದೇ ಮಾತು ನಂತರ ಅವನದೇ ಒಂದು ಪ್ರಶ್ನೆ. ಅಲ್ಲಿಂದ ಅವನಿಗೆ ಇಷ್ಟವಾದ ಸಮರ್ಪಕವಾದ ಉತ್ತರ ನಮ್ಮಿಂದ ದೊರಕುವವರೆಗೂ, ಆ ಸರಿಯಾದ ಉತ್ತರದ ಅಣಿಮುತ್ತು ನಮ್ಮಿಂದ ಉದುರುವವರೆಗೂ ಅವನ ವಾಗ್ದಾಳಿ ಮುಂದುವರೆಯುತ್ತಿರುತ್ತದೆ. ಅವನ ಪ್ರಶ್ನೆಗಳ ಬತ್ತಳಿಕೆಯಲ್ಲಿ ಸಕಲಸಾಂಬಾರು ಇದೆ, ರಾಜಕೀಯದಿಂದ ಆರಂಭವಾಗಿ ಧರ್ಮ, ಕೃಷಿ, ಕೈಗಾರಿಕೆ, ಮಹಿಳೆ. ಸಿನೆಮಾ ನಟಿ ಹೀಗೆ ಆಯಾ ಗಿರಾಕಿಗಳ ಮನದ ಮರ್ಮಕ್ಕನುಗುನವಾಗಿ ಪ್ರಶ್ನೆಗಳು ಎಸೆಯಲ್ಪಡುತ್ತವೆ. ತಲೆಯನ್ನು ಅವನ ಕೈಗೆ ಕೊಟ್ಟು ಕುಳಿತಿರುವುದರಿಂದ ಅವನು ಎಸೆಯುವ ಪ್ರಶ್ನೆಗಳಿಂದ ಪಾರಾಗಲು ಸಾಧ್ಯವೇ ಇಲ್ಲ. ಉತ್ತರ ಗೊತ್ತಾಗದಿದ್ದರೆ ಕ್ಷೌರ ಮುಗಿಯುವವರೆಗೂ ಸುಮ್ಮನೆ ಕೂರಬಹುದಷ್ಟೆ. ಆನಂತರ ಅವನ ಉತ್ತರಕ್ಕೆ ತಲೆ ಆಡಿಸಲೇಬೇಕು.

ಮೊನ್ನೆ ನಾನು ತಲೆಕೊಡಲು ಹೋದಾಗ ದೊಡ್ಡ ಪುರೋಹಿತರೊಬ್ಬರು ಗುಂಡು ಹೊಡೆಸಿಕೊಳ್ಳುತ್ತಾ ಕುಳಿತಿದ್ದರು. ವಿಠಲ ಅವರ ಬಳಿ ಧರ್ಮಸೂಕ್ಷ್ಮ ಸಂಬಂಧಿ ಪ್ರಶ್ನೆಗಳನ್ನು ಹೇಗೂ ಕೇಳಿಯೇ ಕೇಳುತ್ತಾನೆ. ಅದಕ್ಕೆ ಅವರು ಯಾವ ತರಹದ ಉತ್ತರ ನೀಡುತ್ತಾರೆ ಎಂಬ ಕುತೂಹಲ ನನ್ನಲ್ಲಿತ್ತು. "ನನ್ನ ಸರದಿಗೆ ಇನ್ನೂ ಅರ್ದಗಂಟೆ ಕಾಯಬೇಕಾ?" ಎಂದು ವಿಠಲನ ಬಳಿ ಕೇಳಿ ಸಿನಿಮಾ ಪತ್ರಿಕೆಯ ಪುಟಗಳನ್ನು ತಿರುವುತ್ತಾ ಬೆಂಚಿನ ಮೇಲೆ ಕುಳಿತೆ.

"ಈ ಗಣಪತಿ ಮುಖದ ವಿಚಾರದಾಗೆ ನಂಗೊಂದು ಡೌಟು" ನನ್ನ ಮಾತು ಕೇಳಿಸಿಕೊಳ್ಳದವನಂತೆ ವಿಠಲ ಪುರೋಹಿತರ ಬಳಿ ಹೇಳಿದ. ಅವರು ತಲೆ ಅವನ ಕೈಯಲ್ಲಿ ಕೊಟ್ಟಾಗಿದೆ ಅವನ ಇಚ್ಛೆಗನುಸಾರವಾಗಿ ನಡೆಯಲೇಬೇಕು ವಿಧಿಯಿಲ್ಲದೆ. "ಏನಪ್ಪಾ . ಅದು..?" ಅಂತ ತುಸು ಹೆದರಿಕೆಯಿಂದ ಕೇಳಿದರು.

"ಪಾರ್ವತಿ ಸ್ನಾನಮಾಡಿದ್ದು, ಆವಾಗ ಅವಳ ಮೈಯಲ್ಲಿದ್ದ ಮಣ್ಣಿನಿಂದ ಗಣಪತಿ ಹುಟ್ಟಿದ್ದು, ಈಶ್ವರ ಗಣಪನ ತಲೆ ಕಡಿದದ್ದು ಎಲ್ಲಾ ತುಸು ಅತಿ ಅಂತ ಅನ್ನಿಸಿದರೂ ಸುಧಾರಿಸಿಕೊಳ್ಳಬಹುದು. ಆದರೆ... " ಎಂದು ನಿಲ್ಲಿಸಿದ. ಪುರೋಹಿತರಿಗೂ ಸ್ವಲ್ಪ ಧೈರ್ಯ ಇನ್ನೇನು ಕೊಂಚ ದೂರದ ಕಥೆ ಬಾಕಿ ಇದೆ, ಅಂತಹಾ ಘನಂದಾರಿ ಪ್ರಶ್ನೆ ಇರಲಿಕ್ಕಿಲ್ಲ ಎಂದು ಮುಂದೆ ಹೇಳು ನಿನ್ನ ಡೌಟು ಏನು ಅಂತ ಅವನ ಮುಖವನ್ನ ಕನ್ನಡಿಯಲ್ಲಿ ನೋಡಿ ಹೇಳಿದರು.

"ನಂಗೆ ಸ್ವಲ್ಪ ಯಡವಟ್ಟು ಅಂತ ಅನ್ಸಿರೋದು ಅಲ್ಲೇ. ಉತ್ತರ ದಿಕ್ಕಿನತ್ತ ತಲೆಹಾಕಿ ಮಲಗಿದ ಆನೆಯ ತಲೆ ಕಡಿದು ತಂದು ಅವನಿಗೆ ಜೋಡಿಸಿದ್ದು ಅಂತಾರೆ. ಈಶ ತುಂಡರಿಸಿದ ಗಣಪನ ತಲೆ ಅಲ್ಲೇ ಬಿದ್ದಿತ್ತು ಅದನ್ನೇ ಎತ್ತಿ ಜೋಡಿಸಿ ಇಟ್ರೆ ಕೆಲ್ಸ ಸುಲಭದಲ್ಲಿ ಮುಗಿತಿತ್ತು. ಇರ್ಲಿ ಬಿಡಿ ಅದಕ್ಕೇನೋ ತೊಂದ್ರೆ ಬಂದಿರಬಹುದು, ಅಥವಾ ರುಂಡಕ್ಕೆ ಮಣ್ಣು,ಧೂಳು ಕಸಕಡ್ಡಿ ಮೆತ್ತಿಕೊಂಡಿದ್ದಿರಬಹುದು. ಆದರೆ ಆನೆ ಅಂದ್ರೆ ನಾಲ್ಕು ಕಾಲಿನ ಮೇಲೆ ನಡೆಯೋ ಪ್ರಾಣಿ, ಮಲಗಿದ ಅದರ ತಲೆ ತಂದು ಎರಡುಕಾಲಿನ ಪ್ರಾಣಿ ಮನುಷ್ಯನ ಕುತ್ತಿಗೆಯೆ ಮೇಲಿಟ್ಟರೆ ತಲೆ ಹೇಗಿರಬೇಕು? ಮುಖ ಎತ್ತ ನೋಡುತ್ತಿರಬೇಕು?" ವಿಠಲನ ಪ್ರಶ್ನೆ ಸಿಕ್ಕಾಪಟ್ಟೆ ಆಳವಾಗಿತ್ತು.

ಹೌದು ಆನೆಯ ತಲೆ ತಂದು ಮನುಷ್ಯ ಶರೀರಕ್ಕೆ ಜೋಡಿಸಿದರೆ ಮುಖ ಆಕಾಶ ನೋಡುತ್ತಿರಬೇಕು, ಯಾವ ಕಾರಣಕ್ಕೂ ಈಗಿನ ಗಣಪನಂತೆ ನಮ್ಮತ್ತ ಮುಖಮಾಡಿ ನೋಡುತ್ತಿರಲು ಸಾಧ್ಯವೇ ಇಲ್ಲ. ಆನೆ ಎರಡು ಕಾಲಿನಲ್ಲಿ ನಿಂತರೆ ಸೊಂಡಿಲು ಇರುತ್ತಲ್ಲ ಹಾಗೆ ಗಣಪನ ಮುಖ ಇರಬೇಕಿತ್ತು. ಆದರೆ ಆನೆ ನಾಲ್ಕು ಕಾಲಮೇಲೆ ನಿಂತಾಗ ಹೇಗಿದೆಯೋ ಈಗ ಅವನ ಮುಖ ಹಾಗಿದೆ. ತಲೆಯನ್ನು ಓರೆಯಾಗಿ ಕತ್ತರಿಸಿಕೂರಿಸುವಷ್ಟು ವ್ಯವಧಾನವೂ ಇರಲಿಲ್ಲ. ಹಾಗಾದರೆ ಇದು ಹೇಗಾಯಿತು ಎಂದು ನಾನೂ ಆಲೋಚಿಸಿದೆ. ಇರಲಿ ನಾವು ಪಾಮರರು ಪಂಡಿತರೇ ತಲೆಕೊಟ್ಟು ಕುಳಿತಿದ್ದಾರಲ್ಲ. ಅವರಿಗೆ ಉತ್ತರ ನೀಡುವುದು ಅನಿವಾರ್ಯ. ಮಿಕ್ಕ ಸಮಯದಲ್ಲಾದರೆ ಅವೆಲ್ಲಾ ದೇವರ ವಿಚಾರ ಅಧಿಕಪ್ರಸಂಗತನ ಸಲ್ಲದು ಎಂದು ಅವರು ಜಾರಿಕೊಳ್ಳಬಹುದಿತ್ತು. ಆದರೆ ಇಲ್ಲಿ ಹಾಗಲ್ಲ. ಹಿಡಿತ ಪ್ರಶ್ನೆ ಕೇಳಿದವನ ಬಳಿ ಇದೆ. ಉತ್ತರ ಹೇಳದಿದ್ದರೆ ಇನ್ನರ್ಧ ಗುಂಡು ಹೊಡೆಯುವುದಿಲ್ಲ ಎಂದುಬಿಟ್ಟರೆ ಗತಿ..? ಪಾಪ ಪುರೋಹಿತರ ಫಜೀತಿ ಯಾವ ಜನ್ಮದ ವೈರಿಗೂ ಬೇಡವಾಗಿತ್ತು ಅವರಿಗೂ ಉತ್ತರ ನಿಲುಕಲಿಲ್ಲ.

"ಅವೆಲ್ಲಾ ನಮ್ಮ ನಂಬಿಕೆ ಕಣಯ್ಯಾ, ಗಣಪ ದೇವರು ಅಂತ ಲಾಗಾಯ್ತಿನಿಂದ ನಂಬಿಕೊಂಡು ಬಂದಿದ್ದೇವೆ. ಹಾಗಾಗಿ ಅದು ಹೇಗೆ ಅಂತ ಆಲೋಚನೆ ಮಾಡದ ನಂಬಿಕೆ ನಮ್ಮಲ್ಲಿ ಹುಟ್ಟಿದೆ. ಹಾಗಾಗಿ ಗಣಪನ ಮುಖ ನೇರವಾಗಿದೆ" ಎಂಬ ಅಡ್ಡ ಉತ್ತರ ನೀಡಿದರು ಪುರೋಹಿತರು.

ವಿಠಲ ಸಮಾಧಾನಗೊಂಡಂತೆ ಕಾಣಲಿಲ್ಲ. "ಅಲ್ಲಾ ಸ್ವಾಮಿ ನಾವು ನಂಬಿದ್ದು ನಂತರ ಆಯ್ತು ಬಿಡಿ, ನಾನು ಅದನ್ನ ಕೇಳ್ತಿಲ್ಲ. ದೇವಾನು ದೇವತೆಗಳೆ ಲೆಕ್ಕ ತಪ್ಪಿದ್ದು ಹೇಗೆ? ಯಾವುದೇ ತರ್ಕದ ಪ್ರಕಾರವೂ ಗಣಪನ ಮುಖ ಆಕಾಶ ನೋಡಲೇ ಬೇಕಲ್ಲವೆ?" ಬಡಪೆಟ್ಟಿಗೆ ಬಗ್ಗದ ವಿಠಲನ ಬಗ್ಗೆ ಪುರೋಹಿತರಿಗೆ ಅಸಹನೆ. ಗೊತ್ತಿಲ್ಲ ಅಂದರೆ ಮರ್ಯಾದೆಗೆ ಕುತ್ತು. ಉತ್ತರಿಸೋಣ ಎಂದರೆ ಗೊತ್ತಿಲ್ಲ. ಆದರೂ "ಇಲ್ಲ ಅದು ಮೊದಲು ಹಾಗೆ ಇತ್ತು ಆನಂತರ ಚಿತ್ರಕಾರರು ತಪ್ಪಾಗಿ ಬಿಡಿಸಿದ್ದಾರೆ" ಎಂಬ ಉತ್ತರ ಹೇಳಿ ಮೌನಕ್ಕೆ ಶರಣಾದರು ಪುರೋಹಿತ ಮಹಾಶಯರು. ಚಂಡಿ ಹವನಕ್ಕೋ, ಶತರುದ್ರ ಯಾಗಕ್ಕೋ ಎಷ್ಟು ಹಣ ಬೇಕು? ಎಷ್ಟು ಹೊತ್ತು ಬೇಕು? ಎಂಬಂತಹ ಪ್ರಶ್ನೆಗೆ ಅವರ ಬಳಿ ಉತ್ತರ ಇತ್ತು. ಆದರೆ ವಿಠಲ ಕೇಳಿದ ಪ್ರಶ್ನೆಗೆ ಅವರಾದರೂ ಉತ್ತರ ಎಲ್ಲಿಂದ ತಂದಾರು ಪಾಪ. ಅವರ ಪರಿಸ್ಥಿತಿ ಅರಿತ ವಿಠಲನೇ ಮುಂದುವರೆಸಿದ.

"ಸೋಮಿ ಅದು ಹಂಗಲ್ಲ, ಗಣಪನಿಗೆ ಆನೆ ಮುಖ ತಂದು ಜೋಡಿಸಿದಾಗ ಗಣಪನ ಮುಖ ಮೊದಲು ಆಕಾಶ ನೋಡ್ತಾನೆ ಇತ್ತು. ರಾವಣ ಆತ್ಮಲಿಂಗ ಪೂಜೆ ಮಾಡೊ ಸಮಯದಲ್ಲಿ ಗಣಪ ರಾವಣ ರಾವಣ ರಾವಣ ಅಂತ ಗಡಿಬಿಡಿಯಲ್ಲಿ ಕರೆದು ಮೋಸ ಮಾಡಿದ್ನಲ್ಲ ಆವಾಗ ರಾವಣಂಗೆ ಸಿಟ್ಟು ಬಂದು ಗಣಪನ ತಲೆ ಮೇಲೆ ಗುದ್ದಿದ ತಾನೆ? ನಂತರ ಆಕಾಶ ನೋಡುತ್ತಿದ್ದ ಗಣಪನ ಮುಖ ಈಗಿನಂತೆ ಸರಿ ಆಯಿತು ಅಂತ ಒಂದು ಕಥೆ ಮುಂದುವರೆಸಿದರೆ ಹೇಗೆ? ಧರ್ಮ ಸೂಕ್ಷ್ಮಾನೂ ಪರಿಹರಸಿದಂಗೆ ಆಗುತ್ತೆ, ದೇವತೆಗಳು ಬುದ್ದಿವಂತರು ಅಂದ ಹಾಗೂ ಆಗುತ್ತೆ" ಎಂಬ ಪ್ರಶ್ನಾರ್ಥಕ ಉತ್ತರವನ್ನು ಬೇತಾಳದ ಗತ್ತಿನಲ್ಲಿ ನೀಡಿದ ವಿಠಲ.

ಪುರೋಹಿತರಿಗೆ ಕಾದ ಹೆಂಚಿನಮೇಲೆ ಕುಳಿತ ಅನುಭವ "ಹೌದು ಹೌದು, ಸರಿ ಸರಿ" ಎನ್ನುತ್ತಾ, ನುಣ್ಣನೆಯ ತಲೆಯ ಬೆವರನ್ನು ಒರೆಸಿಕೊಳ್ಳುತ್ತಾ ಅಲ್ಲಿಂದ ಜಾರಿಕೊಂಡರು. ನಂತರದ್ದು ನನ್ನ ಸರದಿ. ಬಾ ಬಾ ನಿನಗೂ ಕಾದಿದೆ ಎನ್ನುವ ಸ್ಟೈಲಿನಲ್ಲಿ ಟವೆಲ್ ನಲ್ಲಿ ಒಮ್ಮೆ ಕುರ್ಚಿಯನ್ನು ಜಾಡಿಸಿ ನನ್ನನ್ನು ಆಹ್ವಾನಿಸಿದ. ನಾನು ಈ ಬಾರಿ ವಿಠಲನಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಲೇಬಾರದೆಂಬ ದೃಢಸಂಕಲ್ಪದೊಂದಿಗೆ ಯಥಾಪ್ರಕಾರ ರಾಜಕೀಯದ ಚಿತಾವಣೆಯಿಂದ ಹಿಡಿದು ಹವಾಮಾನದ ವೈಪರಿತ್ಯ, ಕೆಡುತ್ತಿರುವ ಕಾಲ ಏರುತ್ತಿರುವ ಬೆಲೆ ಮುಂತಾದವುಗಳ ಬಗ್ಗೆ ಅವ್ಯಾಹತವಾಗಿ ಕೊರೆಯತೊಡಗಿದೆ. ಆದರೆ ವಿಠಲ ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಹ್ಞೂಕಾರದ ಹೊರತಾದ ಮಾತು ಇರಲಿಲ್ಲ. ಪೂರ್ತಿ ಕಟಿಂಗ್ ಮುಗಿಯಿತು. ಅಬ್ಬಾ ಇಷ್ಟು ವರ್ಷಕ್ಕೆ ಮೊದಲ ಬಾರಿಗೆ ನಾನು ಗೆದ್ದೆ ಅನ್ನೋ ಉತ್ಸಾಹದಲ್ಲಿ ಮೀಸೆಯ ಮೇಲೆ ಕೈಯಿಟ್ಟು ಕ್ಷೌರದ ನಂತರದ ಮುಖ ನೋಡಿಕೊಂಡೆ. ಮೀಸೆಯ ಒಂದೆರಡು ಕೂದಲು ಉದ್ದ ಹಾಗೆ ಇತ್ತು.

"ಇಲ್ಲಿ ಸರಿಯಾಗಿಲ್ಲ ಕತ್ತರಿಸು" ಎಂದು ವಿಠಲನ ಬಳಿ ಹೇಳಿದೆ.
"ಅಯ್ಯಾ ಇದು ನಿಮಗೆ ಗೊತ್ತಾ" ಎಂದು ಮೌನ ಮುರಿದ ವಿಠಲ.
ಮತ್ತೆ ಸಿಗ್ಹಾಕ್ಕೊಂಡ್ನಲ್ಲಪ್ಪಾ ಅಂತ ಯೋಚಿಸುತ್ತ "ಏನು?" ಎಂದು ಹುಬ್ಬು ಹಾರಿಸಿದೆ.

"ಕಣ್ಣು ಕಿವಿ ಮೂಗು ಹೀಗೆ ನಮ್ಮ ಎಲ್ಲಾ ಅವಯವಗಳಿಗೂ ಒಂದೊಂದು ಹೆಸರಿದೆ. ಅದೇ ರೀತಿ ದೇಹದ ಒಂದು ಜಾಗಕ್ಕೆ ಗಂಡಸರಿಗೆ ಮಾತ್ರಾ ಹೆಸರಿದೆ, ಅದೇ ಜಾಗಕ್ಕೆ ಹೆಂಗಸರಿಗೆ ಹೆಸರಿಲ್ಲ. ಅದು ಯಾವ ಜಾಗ?" ಎಷ್ಟು ತಲೆಕೆಡಿಸಿಕೊಂಡರೂ ಹೊಳೆಯಲಿಲ್ಲ, ವಿಠಲನೇ ಗೆದ್ದನೆಂದು ಮೀಸೆಯ ಮೇಲಿಟ್ಟ ಕೈಯನ್ನು ವಾಪಾಸು ಜೇಬಿಗಿಳಿಸಿ ಮರುಮಾತಾಡದೆ ಮನೆಗೆ ಹೊರಡಲನುವಾದೆ.

"ಅಯ್ಯೋ ಮಗು ಕಂಕುಳಲ್ಲೇ ಇಟಕಂಡು ಊರೆಲ್ಲಾ ಹುಡುಕುತ್ತೀರಲ್ಲ ನಿಮಗೆ ಮೂಗಿನಕೆಳಗಿನ ಜಾಗವನ್ನು ಕೂದಲು ಇದ್ದರೂ ಇಲ್ಲದಿದ್ದರೂ ಮೀಸೆ ಅಂತ ಕರಿತಾರೆ, ಹೆಂಗಸರಿಗೆ ಆ ಜಾಗಕ್ಕೆ ಏನಂತ ಕರೀತಾರೆ ಹೇಳಿ" ಎಂದು ಒಂದು ಪ್ರಶ್ನೆಗೆ ಉತ್ತರಿಸಿ ಮತ್ತೊಂದು ಪ್ರಶ್ನೆ ಹುಟ್ಟು ಹಾಕಿದ ವಿಠಲ ಥೇಟ್ ವಿಕ್ರಮನ ಬೇತಾಳದಂತೆ ಗಹಗಹಿಸಿ ನಕ್ಕು ಹೆಗಲಮೇಲಿದ್ದ ಟವಲ್ ಬೀಸಿ ಕುರ್ಚಿಯಲ್ಲಿದ್ದ ಕೂದಲನ್ನು ಜಾಡಿಸತೊಡಗಿದ.

ಹೌದು ಹೆಂಗಸರ ಮೂಗಿನ ಕೆಳಗಿನ ತುಟಿಯ ಮೇಲ್ಗಡೆ ಜಾಗಕ್ಕೆ ಹೆಸರು ಹೊಳೆಯಲಿಲ್ಲ "ನಮೀಸೆ" ಅಂತ ಕರೆಯಬಹುದು ಎಂದು ಮನದಲ್ಲೇ ಹೇಳಿಕೊಂಡು ಗುರಿತಲುಪದ ಜೋಲುಮುಖದ ವಿಕ್ರಮಾದಿತ್ಯನ ತರಹ ಮನೆಯತ್ತ ಹೆಜ್ಜೆ ಹಾಕಿದೆ. "ಮುಂದಿನ ತಿಂಗಳು ಬರೋವಾಗ ಉತ್ತರ ಕಂಡ್ಕೊಂಡು ಬನಿ" ಎಂದು ವಿಠಲ ಕೂಗಿ ಹೇಳಿದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X