• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ವಿಳಾಸಗಳು

By Staff
|

ಮುಂದೆ ಎಂದಾದರೊಂದು ದಿನ, ಒಬ್ಬ ಪಕ್ಕ ಕನ್ನಡ ಧುರೀಣ ಬೆಂಗಳೂರಿಗೆ ಬರುವ ಕಾಗದಗಳು, ಅವುಗಳ ವಿಳಾಸಗಳು ಎಲ್ಲ ಕನ್ನಡದಲ್ಲೆ ಇರಬೇಕು, ಇಲ್ಲದಿದ್ದರೆ ಅಂಚೆ ಇಲಾಖೆಯನ್ನೆ ಸುಟ್ಟುಹಾಕಿಬಿಡುತ್ತೇವೆ ಎಂದು ಚಳವಳಿ ಹೂಡಿದರೆ ಆಗ ಈ ವಿಳಾಸಬ್ರಹ್ಮ ಏನು ಮಾಡುತ್ತಾನೆ? ಬ್ಲಾಕು, ಸ್ಟೇಜು, ಇವಕ್ಕೆಲ್ಲ ಬೇರೆಬೇರೆ ಸಮಾನ ಕನ್ನಡ ಪದಗಳು ಗೊತ್ತೆ ಈ ಬ್ರಹ್ಮನಿಗೆ?

  • ಎಚ್.ವೈ.ರಾಜಗೋಪಾಲ್

ಈಚೆಗೆ ನೀವು ಯಾರಾದರೂ ಬೆಂಗಳೂರಿಗೆ ಕಾಗದ ಬರೆದಿದ್ದೀರಾ? ನಾನು ಹೇಳುವುದು ನಿಜವಾದ ಕಾಗದ, ಈಮೈಲ್ ಅಲ್ಲ. ಬಿಳಿ ಕಾಗದದ ಹಾಳೆಯಲ್ಲಿ, ಕೈಯಲ್ಲೇ ಬರೆದು, ಕವರಿನಲ್ಲಿ ಹಾಕಿ ಅದನ್ನು ಅಂಟಿಸಿ, ಅದರ ಮೇಲೆ ವಿಳಾಸ ಬರೆದು, ಅಂಚೆ ಚೀಟಿ ಲಗತ್ತಿಸಿ, ಅಂಚೆ ಡಬ್ಬಿಗೆ ಹಾಕುವಂಥ ಕಾಗದ. ಆ ವಿಳಾಸ ಬರೆಯುವ ಹಿಂಸೆ ನೆನಪಿದೆಯೆ ನಿಮಗೆ? ಮೊದಲೇ ಕಾಗದ ಬರೆದು ಕೈ ಸೋತಿದೆ. ಈಗ ಸುಮಾರು ಅದರ ಅರ್ಧದಷ್ಟು ಉದ್ದದ ವಿಳಾಸ ಬರೆಯಬೇಕು.

ಹೊಸ ಬೆಂಗಳೂರಿನ ವಿಳಾಸಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮಂಥವರಿಗೆ ಅಸಾಧ್ಯದ ಮಾತು. ಅದು ಶತಾವಧಾನಿ ಗಣೇಶ್ ಅಂಥವರಿಗೆ ಮಾತ್ರ ಸಾಧ್ಯ. ಅದಕ್ಕೆ ನಿಮ್ಮ ಅಡ್ರೆಸ್ ಪುಸ್ತಕದ ನೆರವು ಬೇಕೇಬೇಕು. ಆ ಅಡ್ರ್ರೆಸ್ ಪುಸ್ತಕ ಹುಡುಕುವುದೇ ನಿಮ್ಮ ಮೊದಲ ಸವಾಲು. ಅದು ಯಾವಾಗಲೂ ಬೇಡದಿದ್ದಾಗ ಮಾತ್ರ ಕಾಣುವ, ಬೇಕಾದಾಗ ಕಳೆದೇ ಹೋಗಿರುವ ವಸ್ತು. ಅದು ಹೇಗೋ ಏನೋ ಈವತ್ತು ಅದು ನಿಮ್ಮ ಮೇಜಿನ ಡ್ರ್ರಾಯರ್ ತೆಗೆದಕೂಡಲೆ ಕಣ್ಣಿಗೆ ಬಿದ್ದಿದೆ. ಅಡ್ರೆಸ್ ಪುಸ್ತಕ ಕಳೆದುಹೋಗಿದೆ ಎಂದು ನೆಪ ಹೇಳುವಂತೆಯೂ ಇಲ್ಲ. ನೀವು ಅದರ ಪುಟಗಳನ್ನು ತಿರುವಿಹಾಕಿದ ಕೂಡಲೆ ನಿಮಗೆ ಬೇಕಾದ ವಿಳಾಸವೂ ಸಿಕ್ಕಿಬಿಟ್ಟಿದೆ. ಈಗ ಇನ್ನು ವಿಳಾಸ ಬರೆಯದೆ ವಿಧಿ ಇಲ್ಲ. ರೆಡಿ? ಹಾಗಾದರೆ ಬರೆಯಿರಿ:

*ಮೊದಲು ಕಾಗದ ಯಾರಿಗೆ ಕಳಿಸಬೇಕೋ ಅವರ ಹೆಸರು ಇದಂತೂ ತಪ್ಪಿದ್ದಲ್ಲ.

*ಮನೆ ನಂಬರು, ಮನೆಯ ಹೆಸರು (ಮರೆತಿದ್ದರೆ ಶ್ರೀ ಗುರುಕೃಪ ಎಂತಲೋ, ಅನುಗ್ರಹ ಅಂತಲೋ, ಅಶೀರ್ವಾದ ಅಂತಲೋ ಬರೆಯಿರಿ, ಮುಕ್ಕಾಲು ಸಲ ಅದು ಸರಿಯಾಗಿಯೆ ಇರುತ್ತದೆ.)

*ಮೈನ್ ರಸ್ತೆ ನಂಬರು ಅಥವ ಹೆಸರು, ಕ್ರಾಸ್ ರಸ್ತೆಯ ನಂಬರು (ಎರಡೂ ಯಾಕೆ ಬೇಕೋ ತಿಳಿಯದು, ಅದರೂ ಬರೆಯಿರಿ; ಇವುಗಳಲ್ಲಿ ಸೂಕ್ತ ಕಡೆಗಳಲ್ಲಿ ,a,b,c,d...ಇತ್ಯಾದಿಗಳನ್ನೂ ಸೇರಿಸಬೇಕಾಗಬಹುದು.)

*ಆಮೇಲೆ ಬ್ಲಾಕು, ಫೇಸು, ಬಡಾವಣೆ ಮತ್ತು ಅದರ ಸ್ಟೇಜುಗಳ ಸಂಖ್ಯೆಗಳು (ಇವನ್ನು ವ್ಯಾವಹಾರಿಕ ಹಿಂದು-ಅರಾಬಿಕ್ ಅಂಕೆಗಳಲ್ಲಿ ಬರೆಯಬೇಕೋ ಅಥವ ರೋಮನ್ ಅಂಕೆಗಳಲ್ಲಿ ಬರೆಯಬೇಕೋ ಎಂಬ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ.)

*ಈ ಮಧ್ಯೆ ಲೇ ಔಟ್, ಕಾಲೊನಿ ಹೆಸರುಗಳು ಸೇರಿಸಿ .

*ಇಷ್ಟೇ ಸಾಲದು ಎಂದು Behind Sri Venkataramanaswami Temple ಎಂದೂ ಸೇರಿಸಬೇಕಾಗಬಹುದು.

*ಒಂದೊಂದು ಸಲ ಇವೆಲ್ಲದರ ಜೊತೆಗೆ ಅ ಸ್ಥಳದ ಮೊದಲಿನ ಹೆಸರನ್ನೂ ಸೇರಿಸಬೇಕಾಗಬಹುದು. (ಮೊನ್ನೆ ಒಂದು ವಿಳಾಸದಲ್ಲಿ ಬಡಾವಣೆಯ ಸ್ಟೇಜು ಇತ್ಯಾದಿಗಳ ನಡುವೆ ಅನಿರೀಕ್ಷಿತವಾಗಿ ಕತ್ತರಿಗುಪ್ಪೆ ಎಂಬ ಹೆಸರೂ ಇತ್ತು.

*ಕಡೆಯಲ್ಲಿ ಬೆಂಗಳೂರು, ಪಿನ್ ಕೋಡು, ಇಂಡಿಯ... (ಮರೆಯಬೇಡಿ.)

ಆಯಿತು, ನೀವು ಸಿದ್ಧಪಡಿಸಿದ್ದ ಕವರು ತೆಗೆದುಕೊಂಡು ಅದನ್ನು ಅಂಚೆಗೆ ಹಾಕಲು ಹೋಗುತ್ತೀರಿ. ನೀವು ಬರೆದಿರುವ ಕಾಗದ ಒಂದೇ ಪುಟವಾದರೂ ಅಡ್ರೆಸ್ಸಿನಿಂದಾಗಿ ಭಾರ ಹೆಚ್ಚಿರಬಹುದು ಎಂಬ ಅನುಮಾನ ಬಂದು ಅದನ್ನು ತೂಗಿಸಿ ಸರಿಯಾದ ಪೋಸ್ಟೇಜನ್ನೇ ಹಾಕೋಣ ಎಂದು ಅಂಚೆ ಕಛೇರಿಗೇ ಹೋಗುತ್ತೀರಿ. ಅಲ್ಲಿ ಹೊರಗೇ ಇರುವ ತೂಕದ ಯಂತ್ರವನ್ನು ನಂಬದೆ ಲೈನಿನಲ್ಲಿ ನಿಂತು ನಿಮ್ಮನ್ನು ಕಂಡರೆ ಯಾವಾಗಲೂ ನಗುನಗುತ್ತ್ತ ಹಾಯ್ ಎಂದು ರಾಗ ಎಳೆಯುವ ಚೆಲುವಿ ಕ್ಯಾಥಿ ಸಿಕ್ಕುತ್ತಾಳೇನೋ ಎಂದು ನೋಡಿ ಅವಳು ಕಾಣದೆ ಇನ್ಯಾರ ಕೈಲೋ ಅದನ್ನು ತೂಗಿಸಿ ಅವರು ಹೇಳಿದ ಅಂಚೆ ಬೆಲೆ ತೆತ್ತು ಅಂತೂ ಅದನ್ನು ಅವರ ವಶಕ್ಕೆ ಕೊಟ್ಟು ಬಂದು, ಇನ್ನೇನು ಕಾರಲ್ಲಿ ಮತ್ತೆ ಕೂಡಬೇಕು ಆಗಲೇ ನಿಮ್ಮನ್ನು ಹಿಡಿಯುತ್ತದೆ ಅನುಮಾನದ ಭೂತ.

ಆ ಫೇಜು ನಂಬರ್ ಸರಿಯಾಗಿ ಬರೆದನೇ ಇಲ್ಲವೋ ? ಸ್ಟೇಜ್ ಅಂತ ಬರೆದೆನೋ ಫೇಜ್ ಅಂತ ಬರೆದೆನೋ? ಆ ಬ್ಲಾಕಿನ ನಂಬರು ಬರೆಯುವಾಗ ಆ ಹಾಳು ಬಾಲ್ ಪಾಯಿಂಟಿನ ಇಂಕು ಸ್ವಲ್ಪ ಒಣಗಿಹೋಯಿತು, ಆ ಅಂಕೆ ಸರಿಯಾಗಿ ಕಾಣುತ್ತದೆಯೋ ಇಲ್ಲವೋ...ಕಾಗದ ತಲಪುತ್ತದೆಯೋ ಇಲ್ಲವೋ...ಈ ನೂರಾರು ಸಂಶಯಗಳನ್ನು ತಾಳಲಾರದೆ ಕೂಡಲೆ ಮನೆಗೆ ಹೋಗಿ ನಿಮ್ಮ ಕಂಪ್ಯೂಟರಿನ ಮುಂದೆ ಕುಳಿತು ಈಗ ತಾನೆ ನಿಮಗೆ ಕಾಗದ ಬರೆದು ಅಂಚೆಗೆ ಹಾಕಿದ್ದೇನೆ, ಅದು ತಲುಪದಿದ್ದರೆ ತಿಳಿಸಿ ಎಂದು ಒಂದು ಈಮೈಲ್ ಝಾಡಿಸಿ, ಮತ್ತೆ ನಿಮ್ಮ ಕೆಲಸದ ಸರಪಣಿ ಹಿಡಿದು ಹೊರಡುತ್ತೀರಿ...

ಆ ರಾತ್ರಿ ಮತ್ತೆ ನಡೆಯುತ್ತದೆ ಭೂತವಿಲಾಸ. ನೀವು ಕಣ್ಣು ಮುಚ್ಚಿ ಹತ್ತು ನಿಮಿಷ ಆಗಿಲ್ಲ, ಆಗಲೇ ಕಾಣಿಸಿಕೊಳ್ಳುತ್ತಾನೆ ಆ ವಿಳಾಸಭೂತ. ನೀನು ಆ ಬ್ಲಾಕಿನ ನಂಬರನ್ನು ಸರಿಯಾಗಿ ಹೇಳು... ಇಲ್ಲದಿದ್ದರೆ ನಿನ್ನನ್ನು ಈ ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ...ಅಯ್ಯೊ, ಬೇಡ, ಬೇಡ, ಅದು ಒಂಬತ್ತನೇ ಬ್ಲಾಕು...ಇಲ್ಲ, ಅಲ್ಲಿರುವುದು ಏಳೇ ಬ್ಲಾಕು..ಹಹಹಹಾ....ಲೋ ಯಾರಲ್ಲಿ, ಇವನನ್ನು... ಅಯ್ಯೊ, ಅಯ್ಯೊ ಬೇಡ...please, please.....ಹೆಂಡತಿ ನಿಮ್ಮ ಮೈ ಅಲುಗಿಸಿ ಯಾಕೆ ಏನಾಯ್ತು, ಎಚ್ಚರ ಮಾಡಿಕೊಳ್ಳಿ ಎನ್ನುತ್ತಾಳೆ. ಅವಳಿಗೆ ಕಾರಣ ಹೇಳಿಕೊಳ್ಳಲು ನಾಚಿ, ಅಕೆಗೆ ನಿಮ್ಮ ಮುಖ ಕಾಣದಂತೆ ಮಗ್ಗುಲು ತಿರುಗಿ ಮಲಗಿಕೊಳ್ಳುತ್ತೀರಿ.

ಇದು ಬೆಂಗಳೂರಿನ ವಿಳಾಸದ ಕತೆ. ಬಹುಶಃ ಪ್ರ್ರಪಂಚದ ಇನ್ನಾವ ಮಹಾನಗರದಲ್ಲೂ ಇಷ್ಟು ಗಜಿಬಿಜಿಯಾದ ಗೋಜಲುಗೋಜಲಾದ ಅವ್ಯವಸ್ಥಿತ ವಿಳಾಸಗಳಿಲ್ಲ. ಆ ಇತರ ಮಹಾನಗರಗಳೂ ಹುಟ್ಟಿನಿಂದಲೇ ಮಹಾನಗರಗಳಾಗಲಿಲ್ಲ, ಅವೂ ಕ್ರಮೇಣ ಸ್ಟೇಜು, ಫೇಜುಗಳಲ್ಲಿ ಬೆಳೆದವುಗಳೆ. ಆದರೆ ಆ ವಿವರಗಳೆಲ್ಲ ಖಾಯಂ ಅಗಿ ವಿಳಾಸಗಳಲ್ಲಿ ಸೇರಿಹೋಗಿಲ್ಲ. ಇಷ್ಟು ಉದ್ದುದ್ದದ ಅಡ್ರೆಸ್‌ಗಳಿಲ್ಲ. ನಮ್ಮೆಲ್ಲರಿಗೂ ಒಂದಲ್ಲ ಒಂದು ಸಲ ಮೇಲೆ ಹೇಳಿದ ಅನುಭವ ಆಗಿಯೇ ಇರುತ್ತದೆ. ಇದು ಬೆಂಗಳೂರಿಂದ ಹೊರಗಿರುವವರಿಗೆ ಮಾತ್ರವೇ ಅಲ್ಲ, ಅಲ್ಲಿನವರಿಗೂ ಆಗಿರುವುದೇ. ಅದಕ್ಕೇ ಅವರು ಬೇಗ ಈ-ಮೈಲ್‌ಗೆ ಶರಣು ಬಿದ್ದರು. ಅರ್ಧ ಪೇಜು ಹಿಡಿಯುವ ವಿಳಾಸವನ್ನು ಕೇವಲ ನಾಲ್ಕು ಇಂಚು ಉದ್ದದ ಸಾಲಿಗೆ ಇಳಿಸಿಬಿಟ್ಟಿತಲ್ಲ ಈ ಈ-ಮೈಲು! ಅದರ ಶಕ್ತಿಯನ್ನು ಏನೆನ್ನೋಣ! ಅಲ್ಲಿಂದ ಮೊದಲಾಯಿತು ನೋಡಿ ಬೆಂಗಳೂರಿನವರ ಡಾಟು (.) ಪ್ರೇಮ. ಈಗ ಅವರೆಲ್ಲ ಡಾಟುಕಾಮಿಗಳೇ! ಅದರಿಂದಲೆ ನಮ್ಮ ಬೆಂಗಳೂರು IT ಯಲ್ಲಿ ಇಷ್ಟು ಮುಂದುವರೆದಿರುವುದು! ನಮ್ಮ ಬೆಂಗಳೂರಿನ IT ಪ್ರಾಮುಖ್ಯತೆಗೆ ಅದರ ವಿಳಾಸದ ಅವ್ಯವಸ್ಥೆಯೇ ಮುಖ್ಯ ಕಾರಣ, ಮುಖ್ಯ ಪ್ರೇರಕ ಶಕ್ತಿ ಎಂದು ನನ್ನ ತೀರ್ಮಾನ.

ವಿಳಾಸ ಇರುವುದು ಬರೀ ಅಂಚೆಯವರ ಉಪಯೋಗಕ್ಕೆ ಎಂಬ ಒಂದು ಅಭಿಪ್ರಾಯ ನಮ್ಮಲ್ಲಿ ಬಹಳ ಹಿಂದಿನಿಂದ ಬೆಳೆದು ಬಂದಿದೆ. ವಿಳಾಸ ಇತರರಿಗೂ ಬೇಕು: ಬಂದು ಹೋಗುವ ಸ್ನೇಹಿತರಿಗೆ, ಬಂಧುಗಳಿಗೆ, ಕೆಲಸಗಾರರಿಗೆ, ಸಮಾನು ಸರಂಜಾಮು ತಲುಪಿಸುವವರಿಗೆ, ವೋಟು ಕೇಳುವವರಿಗೆ, ಇತ್ಯಾದಿ. ನಮ್ಮಲ್ಲಿ ಯಾರನ್ನಾದರೂ ಅವರ ಮನೆಗೆ ದಾರಿ ಕೇಳಿ. ನೀವು ಅಲ್ಲಿಯವರೆಗೂ ಬಂದು ನಮ್ಮನೆ ಎಲ್ಲಿದೆ ಅಂತ ಕೇಳಿ, ಯಾರು ಬೇಕಾದರೂ ತೋರಿಸುತ್ತಾರೆ ಎನ್ನುತ್ತಾರೆ. (ಇವರಿಗೆ ಇಷ್ಟು ಪ್ರಖ್ಯಾತಿ,ಬರಲು ಕಾರಣ ಏನಿರಬಹುದು ಎಂದು ನಾನು ಬಹಳ ಸಲ ಯೋಚಿಸಿದ್ದೇನೆ! ಅಲ್ಲದೆ ವಿಳಾಸ ಹೇಳುವುದರಲ್ಲೂ ಎರಡು ಸ್ಟೇಜಿದೆ ನೋಡಿ!) ಅದು ಎಲ್ಲಿದೆ, ಅಲ್ಲಿಗೆ ಹೇಗೆ ಹೋಗಬೇಕು ಅಂತ ಕೇಳಿ, ಯಾರಿಗೂ ಯಾವುದೂ ಎಲ್ಲಿದೆ, ಅದಕ್ಕೆ ಹೇಗೆ ಹೋಗಬೇಕು ಖಚಿತವಾಗಿ ಗೊತ್ತಿರುವುದಿಲ್ಲ, ಅಥವ ಹೇಳುವುದಿಲ್ಲ.

ಅಲ್ಲೇ ಹಾಗೇ ಸ್ವಲ್ಪ ಮುಂದೆ ಹೋಗಿ ಯಾರನ್ನ ಬೇಕಾಗರೂ ಕೇಳಿ, ಹೇಳ್ತಾರೆ ಎನ್ನುತ್ತಾರೆ (ಎರಡು ಪ್ರಶ್ನೆಗಳು: 1. ಅದನ್ನು ನೀನೇನು ಹೇಳೋದು, ನಿನಗೆ ಗೊತ್ತಿಲ್ಲದಿದ್ದರೆ ಇನ್ನೊಬ್ಬರನ್ನ ಕೇಳೇಕೇಳ್ತೀವಿ; 2. ಆ ಮುಂದಿನವರು ಹೇಳೇಹೇಳ್ತಾರೆ ಅಂತ ನಿನಗೆ ಹೇಗೆ ಗೊತ್ತು?) ಕೈಯನ್ನು ಈ ಕಡೆ ಆ ಕಡೆ ತಿರುಗಿಸುತ್ತಾ ಹಾಗೆ ಹೋಗಿ ಹೀಗೆ ಹೋಗಿ ಅಂತ ನಿಮ್ಮನ್ನು ಕಕ್ಕಾಬಿಕ್ಕಿ ಮಾಡುತ್ತಾರೆ. ಅವರ ಕೈ ತಿರುಗಣೆಗಳಿಂದ ಎಡಕ್ಕೆ ತಿರುಗಬೇಕೋ, ಬಲಕ್ಕೋ, ಯಾವ ರಸ್ತೆಗೆ, ಅವೆಲ್ಲ ಏನೂ ವಿವರ ಇರುವುದಿಲ್ಲ. ಇದಕ್ಕೆ ನಮ್ಮ ಅನಾದಿಕಾಲದಿಂದ ಬಂದ philosophy ಯೆ ಕಾರಣವಾಗಿರಬಹುದು. ನೀನು ಯಾರು, ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ ಇವನ್ನು ಮೊದಲು ತಿಳಿಯಯ್ಯ ಮನುಜ, ಆಮೇಲೆ ಉಳಿದ ಜುಜುಬಿ ಪ್ರಶ್ನೆಗಳು ಎಂದು ನಮಗೆ ಅರೆದು ಕುಡಿಸಿದ್ದಾರೆ ನಮ್ಮ ಗುರುವರ್ಯರು! ಇದು ಬರಿ ಸಾಮಾನ್ಯ ಜನರ ಮಾತಷ್ಟೇ ಅಲ್ಲ, ನಮ್ಮ ಮಹಾನ್ ಆಟೋ ಚಾಲಕರದೂ ಕೂಡ. ಅವರಿಗೆ ವಿಳಾಸ ಹೇಳಿದರೆ ಸಾಲದು, ಅವರನ್ನು ಪ್ರತಿ ಕಡೆಯೂ ಇಲ್ಲಿ ಎಡಕ್ಕೆ ತಿರುಗಿಕೊಳ್ಳೀಪ್ಪ, ಅಲ್ಲಿ ಬಲಕ್ಕೆ ತಿರುಗಿ, ಸೀದ ಹೋಗಿ ಎಂದು ಹೇಳುತ್ತಲೇ ಇರಬೇಕು..

ಈ ಸಲ ಬೆಂಗಳೂರಿಗೆ ಹೋಗಿದ್ದಾಗ ನಮ್ಮಾಕೆ ತನ್ನ ಚಿಕ್ಕಂದಿನ ಕನಸಿನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತ, ತಾನು ತುಂಬ ಪ್ರೀತಿಸುತ್ತಿದ ಬ್ಯೂಗಲ್ ರಾಕ್ ನೋಡಬೇಕೆಂದು ನಮ್ಮ ಟ್ಯಾಕ್ಸಿ ಚಾಲಕನಿಗೆ ಹೇಳಿದಳು. ಆತ 30-35 ವರ್ಷದ ಯುವಕ. ಅತ ನಮ್ಮನ್ನು ಸೀದ Kamat Restaurant Bugle Rock ಬಳಿ ಇಳಿಸಿ ಇದೇನಮ್ಮ ಬ್ಯೂಗಲ್ ರಾಕ್ಕು ಎಂದ! ಅದನ್ನು ಆಕೆ ಯಾರಿಗೋ ಹೇಳಿದಾಗ ಅವರು ಅಯ್ಯೋ, ದೊಡ್ಡ ಗಣಪತಿ ದೇವಸ್ಥನದ ಹಿಂದೆ ಅಂತ ಯಾಕೆ ಹೇಳಲಿಲ್ಲ? ಎಂದರು! ಲಂಡನ್ನಿನ ಟ್ಯಾಕ್ಸಿ ಚಾಲಕರು ಲೈಸೆನ್ಸ್ ಪಡೆಯಬೇಕಾದರೆ ಒಂದು ಪರೀಕ್ಷೆ ತೆಗೆದುಕೊಳ್ಳಬೇಕಂತೆ. ಅದನ್ನು ಅವರ ಪರಿಭಾಷೆಯಲ್ಲಿ ನಾಲಿಜ್ (knowledge) ಎನ್ನುತ್ತಾರೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಅತ್ಯಂತ ಹತ್ತಿರದ ದಾರಿ ಯಾವುದು ಎಂಬ ಸುಮಾರು 360 ದಾರಿಗಳನ್ನು (ರೂಟ್ ಗಳನ್ನು) ಅವರು ನೆನಪಿಟ್ಟುಕೊಳ್ಳಬೇಕಂತೆ. ಅದನ್ನು ತಿಳಿದಿರುವುದಷ್ಟೇ ಅಲ್ಲ, ಅದನ್ನು ಅಕ್ಷರಶಃ ಪಾಲಿಸಲೂ ಬೇಕಂತೆ.

ಒಂದು ವಿಳಾಸದ ನಿಜವಾದ ಪರೀಕ್ಷೆ ಏನೆಂದರೆ ಅದನ್ನು ಹಿಡಿದು ಹೊರಟರೆ ಮಧ್ಯೆ ಯಾರನ್ನೂ ಅದು ಎಲ್ಲಿದೆ, ಇದು ಎಲ್ಲಿದೆ ಎಂದು ಕೇಳದೆ ಅಲ್ಲಿಗೆ ಹೋಗಿ ತಲಪುವಂತಿರಬೇಕು. ಅದು ನಮ್ಮಲ್ಲಿ ಸಾಧ್ಯವೇ ಇಲ್ಲ. ನಮ್ಮಲ್ಲಿ ಈಗಲೂ ಎಲ್ಲವನ್ನೂ ಇನ್ನೊಬ್ಬರಿಂದ ಕೇಳಿ ತಿಳಿಯುವ ಪದ್ಧತಿ ಹೋಗಿಲ್ಲ. ಗುರು-ಶಿಷ್ಯ ಪರಂಪರೆಯ, ಶ್ರವಣ ಶಿಕ್ಷಣದ ಪ್ರಭಾವ ಇರಬೇಕು. ಮೊನ್ನೆ ಬೆಂಗಳೂರಿಗೆ ಹೋಗಿದ್ದ್ದಾಗ ನನ್ನ ಹಳೆಯ ಮಿತ್ರ ಶಿವರಾಮೂನ ನೋಡೋಣ ಎನ್ನಿಸಿತು. ಅವನ ವಿಳಾಸ ಇತ್ತು. ಅದನ್ನು ಹಿಡಿದುಕೊಂಡು ಅವನ ಮನೆ ಹುಡುಕಿಕೊಂಡು ಹೊರಟೆ. ದಾರಿಯಲ್ಲಿ ಎಲ್ಲೂ ಇದು ಯಾವ ಬ್ಲಾಕು, ಯಾವ ಸ್ಟೇಜು, ಯಾವ ಫೇಜು ಎಂಬ ಬೋರ್ಡುಗಳೇನೂ ಇರಲಿಲ್ಲ. ಆಟೋ ಚಾಲಕ ನನ್ನನ್ನು ಅಲ್ಲಿ ಇಲ್ಲಿ ತಿರುಗಿಸಿ ಇಲ್ಲೇ ಸಾರ್ ಎಂದು ಒಂದು ಕಡೆ ಕುಕ್ಕಿ ಹೋದ.

ಅಲ್ಲೇ ಒಬ್ಬಾತನನ್ನು ಕೇಳಿದೆ: ಇಲ್ಲಿ ಎ.ಆರ್. ಶಿವರಾಮ್ ಅನ್ನೋವರು ಎಲ್ಲಿದ್ದಾರೆ? ಆತ ನನ್ನ ಕಡೆ ಒಂದು ಬಗೆಯ ನಿರ್ಲಕ್ಷ್ಯ, ತಿರಸ್ಕಾರ, ಅನುಕಂಪ ಎಲ್ಲ ಸೇರಿದ ರೀತಿಯಲ್ಲಿ ಒಂದು ಸಲ ನೋಡಿ, ಓ ಅವರೇ, ಅವರು....ಅವರು ನಿಮಗೆ ಏನಾಗಬೇಕು ಸಾರ್...(ನಿನಗೆ ಯಾಕೆ ಅದೆಲ್ಲ ಎಂದುಕೊಳ್ಳುತ್ತಿರುವಂತೆ)...ಅವರು ಲಾಸ್ಟ್ ಸ್ಟೇಜಿನಲ್ಲಿದ್ದಾರೆ ಸಾರ್! ಎಂದು ಮತ್ತೆ ನನ್ನ ಕಡೆಗೆ ಅಯ್ಯೋ ಪಾಪ ಎಂಬಂತೆ ನೋಡಿದ. ಈ ಮನುಷ್ಯ ಏನು ಹೇಳುತ್ತಿದ್ದಾನೆ, ನಮ್ಮ ಶಿವರಾಮುಗೆ ಏನಾಯ್ತು? ಚೆನ್ನಾಗಿದ್ದಾನೆ ಅಂತ ಅನಂತು ಹೇಳಿದ್ದನಲ್ಲ. ನಾನು ಅಲ್ಲ ಸ್ವಾಮಿ, ಅವರ ಮನೆ ಎಲ್ಲಿ ಎಂತ ಕೇಳಿದೆ...ಅದೇ ಹೇಳಿದೆನಲ್ಲ ಸಾರ್, ಫೈನಲ್ ಸ್ಟೇಜು, ಅವರು ಕಡೇ ಸ್ಟೇಜಲ್ಲಿದ್ದಾರೆ ಸಾರ್...ಎನ್ನುತ್ತಾ ಆ ಮನುಷ್ಯ ಕಾಲಪುರುಷನ ಹಾಗೆ ಹೊರಟುಹೋದ.

ನಮ್ಮ ಶಿವರಾಮು ಬದುಕಿದ್ದಾನೋ ಇಲ್ಲವೋ, ಇವನು ಮಾತುಮಾತಿಗೂ ಫೈನಲ್ ಸ್ಟೇಜು, ಕಡೇ ಸ್ಟೇಜು ಅನ್ನುತ್ತಿದ್ದನಲ್ಲ, ಏನಾದರೂ ಹಾರ್ಟ್ ಅಟ್ಯಾಕ್, ಗೀರ್ಟ್ ಆಟ್ಯಾಕ್ ಆಗಿಬಿಟ್ಟಿತೋ ಅಂದುಕೊಳ್ಳುತ್ತಿರುವಷ್ಟರಲ್ಲಿ ನನ್ನ ಕೈಲಿ ಮೊಬೈಲ್ ಇರುವುದು ಜ್ಞಾಪಕಕ್ಕೆ ಬಂದು ಅವನಿಗೆ ಫೋನ್ ಮಾಡಿದೆ. ಅವನು ಇದ್ದದ್ದು ಅಲ್ಲಿಂದ ಇನ್ನೂ ಒಂದು ಮೈಲಿ ಆಚೆ. ಅವನು ಹೇಳಿದಂತೆ ನಡೆದು ಹೋಗಿ ಅವನ ಮನೆ ತಲುಪಿದೆ. ಸದ್ಯ, ಅವನೇನೂ ಫೈನಲ್ ಸ್ಟೇಜಿನಲ್ಲಿರುವವನಂತೆ ಕಾಣಲಿಲ್ಲ! ಧಾಂಡಿಗ ಹಾಗೇ ಇದ್ದ. ಅವನನ್ನು ನೋಡಿಬಂದಮೇಲೆ ಬೆಂಗಳೂರಲ್ಲಿ ವಿಳಾಸ ಹಿಡಕೊಂಡು ಮನೆ ಹುಡುಕಿದಂತೆ ಅಂತ ಗಾದೆ ಕಟ್ಟಿದೆ!

ಈ ವಿಳಾಸಗಳನ್ನು ನಿರ್ಧರಿಸುವವರು, ಅದನ್ನು ನಿಮಗೆ ವಿತರಣೆ ಮಾಡುವವರು ಯಾರೋ ನನಗೆ ಸರಿಯಾಗಿ ತಿಳಿಯದು. ಬಿಡಿಎ, ಬೆಂಗಳೂರು ಮಹಾನಗರ ಪಾಲಿಕೆ, ಅಂಚೆ ಇಲಾಖೆ ಎಲ್ಲರದೂ ಒಂದು ಕರಾಮತ್ತು ಇದ್ದೀತು ಎಂದುಕೊಂಡಿದ್ದೇನೆ. ಆದರೆ ಮುಖ್ಯವಾಗಿ ಈ ವಿಳಾಸವನ್ನು ನಿರ್ಧರಿಸುವ ಅಧಿಕಾರಿಯನ್ನು ಮನಸಿನಲ್ಲೆ ಚಿತ್ರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ... ಅವನ ಮೇಜಿನ ಮೇಲೆ Roget"s Thesaurus, Dictionary of Synonyms and Antonyms ನ ದಪ್ಪ ದಪ್ಪ ಪುಸ್ತಕಗಳು ಇರುತ್ತವೆ. ಈ ಬ್ಲಾಕು, ಸ್ಟೇಜು, ಫೇಜು ಇವುಗಳಿಗೆಲ್ಲ ಬೆಂಗಳೂರು ಬೆಳೆದಂತೆ ರಾಶಿರಾಶಿ ಹೊಸಹೊಸ ಪರ್ಯಾಯ ಪದಗಳನ್ನು ಹುಡುಕಬೇಕಲ್ಲವೆ? ಆ ಅಧಿಕಾರಿ ಯಾರೇ ಆದರೂ ಅವರಿಗೆ ಒಂದು ಬಗೆಯಲ್ಲಿ ಬ್ರಹ್ಮಪಟ್ಟ ಇದೆ. ಅವರು ಕೊಟ್ಟ ವಿಳಾಸ ನಿಮ್ಮ ಮನೆಯ ತಲೆಬರಹ. ಅದನ್ನು ನೀವು ಬದಲಾಯಿಸಲಾರಿರಿ. ಅದನ್ನು ಇತರರಿಗೆ ವರ್ಗಾಯಿಸಬಲ್ಲಿರಿ ಅಷ್ಟೆ.

ಈ ಪದಗಳ ಮಾತು ಬಂದರೆ ನನಗೆ ಇನ್ನೂ ಒಂದು ಯೋಚನೆ ಬರುತ್ತದೆ. ಮುಂದೆ ಎಂದಾದರೊಂದು ದಿನ, ಒಬ್ಬ ಪಕ್ಕ ಕನ್ನಡ ಧುರೀಣ ಬೆಂಗಳೂರಿಗೆ ಬರುವ ಕಾಗದಗಳು, ಅವುಗಳ ವಿಳಾಸಗಳು ಎಲ್ಲ ಕನ್ನಡದಲ್ಲೆ ಇರಬೇಕು, ಇಲ್ಲದಿದ್ದರೆ ಅಂಚೆ ಇಲಾಖೆಯನ್ನೆ ಸುಟ್ಟುಹಾಕಿಬಿಡುತ್ತೇವೆ ಎಂದು ಚಳವಳಿ ಹೂಡಿದರೆ ಆಗ ಈ ವಿಳಾಸಬ್ರಹ್ಮ ಏನು ಮಾಡುತ್ತಾನೆ? ಬ್ಲಾಕು, ಸ್ಟೇಜು, ಇವಕ್ಕೆಲ್ಲ ಬೇರೆಬೇರೆ ಸಮಾನ ಕನ್ನಡ ಪದಗಳು ಗೊತ್ತೆ ಈ ಬ್ರಹ್ಮನಿಗೆ? ಸ್ಟೇಜು ಅನ್ನುವುದಕ್ಕೆ ಹಂತ ಎಂದು ಕೆಲವು ಸಾಹಿತಿಗಳು ತಮ್ಮ ವಿಳಾಸಗಳಲ್ಲಿ ನಮೂದಿಸುತ್ತಾರೆ. ಅದರೆ ಉಳಿದವಕ್ಕೆ ಏನು ಹೇಳುವುದು? ವಿಳಾಸಬ್ರಹ್ಮ ಹೇಳಬಹುದು: ಅದೇನು ಮಹಾ ಕಷ್ಟ? ಯಾವ ಇಂಗ್ಲಿಷ್ ಪದಕ್ಕಾದರೂ ಉ ಸೇರಿಸಿಬಿಟ್ಟರೆ ಕನ್ನಡ ಪದ ಆಗೋದಿಲ್ಲವೆ? ಆದರೆ ಆ ವಾಟಾಳಿ ಒಪ್ಪಬೇಕಲ್ಲ? ಉ-ಸೇರಿಸಿದ ಇಂಗ್ಲಿಷ್ ಮಾತುಗಳನ್ನು ಕನ್ನಡ ಎಂದು ನಾವು ಇನ್ನುಮೇಲೆ ಒಪ್ಪಿಕೊಳ್ಳುವುದಿಲ್ಲ ಎಂದು ಹಠ ಹಿಡಿದರೆ?

ನನಗೆ ಇನ್ನೊಂದು ಯೋಚನೆ ತಲೆತಿನ್ನುತ್ತಿದೆ, ಭ್ರಮೆ ಎಂದು ಬೇಕಾದರೂ ಅನ್ನಿ. ನಮ್ಮ ಬೆಂಗಳೂರಿಗೆ ಈಗ ಅತ್ಯಂತ ತುರ್ತಾಗಿ ಬೇಕಾಗಿರುವುದು ವಿಳಾಸ ಪರಿಷ್ಕರಣ. ನಮ್ಮ ಮುಖ್ಯಮಂತ್ರಿಗಳು ಬೆಂಗಳೂರು ವಿಳಾಸ ಸುಧಾರಣಾ ಆಯೋಗ ಎಂಬ ಒಂದು ಉನ್ನತಮಟ್ಟದ ಕಾರ್ಯಮಂಡಲಿಯನ್ನು ರಚಿಸಿ ಬೆಂಗಳೂರು ಮಹಾನಗರದ ವಿಳಾಸದ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಈ ಮೂಲಕ ಅಹವಾಲು ಸಲ್ಲಿಸುತ್ತೇನೆ. ಬೆಂಗಳೂರಿನ ವಿಳಾಸಗಳಲ್ಲಿ ಅನಗತ್ಯವಾದ ಮಾಹಿತಿಗಳು ತುಂಬಿವೆ. ವಿಳಾಸ ಉದ್ದ ಇದ್ದಷ್ಟೂ ಅದರಲ್ಲಿ ತಪ್ಪುಗಳಾಗುವ ಸಂಭವ ಹೆಚ್ಚು. ಈ ಬ್ಲಾಕು, ಸ್ಟೇಜು ಇತ್ಯಾದಿಯೆಲ್ಲ ಆ ಬಡಾವಣೆ ನಿರ್ಮಾಣವಾಗುತ್ತಿರುವಾಗ ಅಧಿಕಾರವರ್ಗಕ್ಕೆ ಬೇಕಾಗಬಹುದೇ ಹೊರತು ಎಲ್ಲ ಆದಮೇಲೆ ಮನೆ ಒಡೆಯರಿಗೆ, ಇತರರಿಗೆ ಅದರಿಂದ ಎನು ಪ್ರಯೋಜನ?

ಮುಖ್ಯಮಂತ್ರಿಗಳೇನದರೂ ಇಂಥ ಒಂದು ಯೋಜನೆ ಜನರ ಮುಂದಿಟ್ಟರೆ ಅದಕ್ಕೆ ಏನು ಪ್ರತಿಕ್ರಿಯೆ ಬರಬಹುದು? ಕೂಡಲೆ ಕೆಲವು ಹಿತಾಸಕ್ತ ಗುಂಪುಗಳಿಂದ ವಿರೋಧ ಬರುವುದೆಂದು ನಿರೀಕ್ಷಿಸಬಹುದು. ಮೊದಲಾಗಿ ನಮ್ಮ IT ಜನ ಅದನ್ನು ಎದುರಿಸುತ್ತಾರೆ - ವಿಳಾಸ ಬರೆಯುವುದು ಸುಲಭವಾದ್ದರಿಂದ ಮತ್ತೆ ಎಲ್ಲಿ ಜನಸಾಮಾನ್ಯರು ಕಾಗದ ಬರೆದು ಅಂಚೆಗೆ ಹಾಕಲು ಮೊದಲುಮಾಡುತ್ತಾರೋ, ಅದರಿಂದಾಗಿ ಈ-ಮೈಲ್ ಬಳಕೆ ಕಡಿಮೆಯಾದೀತೋ ಎಂಬ ಭಯದಿಂದ. ನಮ್ಮ ಆಟೋರಿಕ್ಷಾ ಚಾಲಕರ ಸಂಘ ಅದನ್ನು ಖಂಡಿತ ಎದುರಿಸುತ್ತದೆ . ವಿಳಾಸಗಳು ಸರಳವಾಗಿ ಜನಕ್ಕೆ ಎಲ್ಲಿ, ಹೇಗೆ ಹೋಗಬೇಕೆಂಬುದು ತಿಳಿದುಬಿಟ್ಟರೆ ತಮ್ಮ ಸಂಪಾದನೆ ಕಡಿಮೆಯಾಗುತ್ತದೆ ಎಂದು ಅವರ ಭಯ. ಮುಖ್ಯವಾಗಿ, ಇದರಿಂದ ಏನೂ ದುಡ್ಡು ಹುಟ್ಟುವುದಿಲ್ಲ, ಇದನ್ನು ಏಕೆ ಮಾಡಬೇಕು ಎಂದು ಮಂತ್ರಿಮಂಡಲವೇ ಎದುರಿಸಬಹುದು. ಆದ್ದರಿಂದ ಅದನ್ನು ಹಣಗಳಿಸುವ ಯೋಜನೆಯಾಗಿ ಮಾಡಬೇಕು. ಆಗ ಅದರಲ್ಲಿ ಆಡಳಿತವರ್ಗಕ್ಕೆ ಸ್ವಲ್ಪ ಆಸಕ್ತಿ ಬರುತ್ತದೆ.

ವರ್ಷಕ್ಕೆ ಹತ್ತು ಸಾವಿರ ರೂಪಾಯಿ ಶುಲ್ಕ ಕಟ್ಟಿದರೆ, ಬೆಂಗಳೂರಲ್ಲಿ ಎಲ್ಲೇ ಇದ್ದರೂ ನಿಮಗೆ ಕೇವಲ ಎರಡೇ ಸಾಲಿನ fashionable address ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿದರೆ, ನೂರಾರು ಜನ ಅದನ್ನು ಕೊಳ್ಳಬಹುದು. ಅಮೆರಿಕದಲ್ಲಿ ನಿಮ್ಮ ಕಾರಿಗೆ Vanity License Plate (ನಿಮಗೆ ಇಷ್ಟವಾದ ನಂಬರನ್ನೋ ಪ್ರಿಯಳ ಹೆಸರನ್ನೋ ಸಂದೇಶವನ್ನೋ ಹಾಕಿಕೊಳ್ಳಬಹುದು) ಮಾರುತ್ತಾರಲ್ಲ, ಹಾಗೆ. ಬೆಂಗಳೂರಿನ ವಿಳಾಸಬ್ರ್ರಹ್ಮ ತನ್ನ ಕಣ್ಣನ್ನು ಎಂದು ಈ ಕಡೆ ತಿರುಗಿಸುತ್ತಾನೋ ನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X