ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು!

By ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು
|
Google Oneindia Kannada News

ದಾವಣಗೆರೆ ಇಂಜನಿಯರಿಂಗ್ ಕಾಲೇಜಿನಲ್ಲಿ ನಾನು ಮೊದಲನೆಯ ವರುಷದಲ್ಲಿ ಓದುತ್ತಿದ್ದಾಗ, ಯಾರೋ ಒಬ್ಬರು ಮೇಷ್ಟರಿಗೆ ವರ್ಗವಾಗಿ ಕಾಲೇಜು ಬಿಟ್ಟು ಹೋಗುವ ಸಂದರ್ಭದಲ್ಲಿ ಒಂದು ಬೀಳ್ಕೊಡುಗೆ ಕಾರ್ಯಕ್ರಮವನ್ನ ವಿದ್ಯಾರ್ಥಿಗಳೂ ಸಹೋದ್ಯೋಗಿಗಳೂ ಏರ್ಪಡಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಮೇಷ್ಟರ ವಿಚಾರವಾಗಿ, ಯಾರು ಬೇಕಾದರೂ ಮಾತನಾಡಬಹುದು- ಎಂದಾಗ, ನಾನೂ ಮಾತನಾಡಬಹುದೇ'- ಎಂದು ವ್ಯವಸ್ಥಾಪಕರನ್ನು ಕೇಳಿಕೊಂಡೆ. ಚೋಟುದ್ದ ಹುಡುಗನಂತಿದ್ದ, ಕ್ಲಾಸಿನಲ್ಲಿ ತಾನಾಯಿತು ತನ್ನ ಪಾಡಾಂತು- ಎಂದುಕೊಂಡು ಇರುತ್ತಿದ್ದ, ಸಹಪಾಠಿಗಳ ಕಣ್ಣಿಗೆ ಬೀಳುವಷ್ಟು ಗಲಾಟೆಮಾಡುತ್ತ ಹೆಸರು ಮಾಡಿರದ- ಈ ಮೆದು ಹುಡುಗ ಏನು ಮಾತನಾಡಿಯಾನು?- ಎಂದು ತಾತ್ಸರಿಸುತ್ತ, ಬೇಕಾದರೆ ಒಂದೆರಡು ಮೂರು ನಿಮಿಷ ಸಮಯ ಉಳಿದರೆ ಕೊಟ್ಟೇವು''- ಎನ್ನುವ ಧೋರಣೆಯಲ್ಲಿ ನನಗೆ ಅವಕಾಶ ಕೊಟ್ಟರು.

ಆದರೆ, ನಾನು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊ೦ಡಿದ್ದೆ. ಯಾರು ಯಾರೋ ಹೇಳಿದ ಕವಿಸೂಕ್ತಿಗಳನ್ನ, ಸ್ವ-ರಚಿತ ಅಣಕುಪದ್ಯಗಳನ್ನ ಪೋಣಿಸಿಕೊಂಡು, ಛೋಟಾ ಭಾಷಣ ತಯಾರಿಸಿಕೊಂಡಿದ್ದೆ. ಹಾಸ್ಟಲಿನಿಂದ ಕಾಲೇಜಿಗೆ, ಕಾಲೇಜಿನಿಂದ ಹಾಸ್ಟಲಿಗೆ ಹೋಗಿ ಬರುವಾಗ (ಅದು ಸುಮಾರು ಎರಡು-ಮೂರು ಮೈಲಿಯಷ್ಟು ದೂರವಿತ್ತು) ನನಗೆ ನಾನೇ ಹೇಳಿಕೊಳ್ಳುತ್ತ ಅಭ್ಯಾಸ ಮಾಡಿಕೊಂಡಿದ್ದೆ. ಪ್ರೌಢಶಾಲೆಯಲ್ಲಿ ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ; ಇಂಟರ್ಮೀಡಿಯಟ್ ಕಾಲೇಜಿನಲ್ಲಿದ್ದಾಗ ನೀರಿ'ನ ಬಗ್ಗೆ ಉಪನ್ಯಾಸ ಕೊಟ್ಟು ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದೆ. ನೀರೇ ನೀರು, ಎಲ್ಲೆಡೆ ನೀರು, ಕುಡಿಯಲು ಮಾತ್ರ ಹನಿಯಿಲ್ಲ!''- ಎಂದು ಪ್ರಾರಂಭಿಸಿದ ನನ್ನ ನೀರಿನ ಭಾಷಣವನ್ನ ನಿರರ್ಗಳವಾಗಿ, ಅಲ್ಲ, ಹರಿಸಿದ್ದೆ, ನಿಜ. ನಾಟಕ ಆಡಿ ಆಡಿಸಿದ್ದರಿಂದ ನನಗೆ ಸಭಾಕ೦ಪನವೇನೂ ಅಷ್ಟಾಗಿ ಇರಲಿಲ್ಲ. ಆದರೂ, ಈಗ ಎದುರಾಗಿರುವುದು ಬೇರೆ ವಾತಾವರಣ; ದೊಡ್ದದೊಂದು ಸಭೆಯಲ್ಲಿನ ಭಾಷಣ. ಬೆಬ್ಬೆಬ್ಬೆ' ಎಂದುಬಿಟ್ಟರೆ, ಮುಂದೆ ತಲೆ ತಗ್ಗಿಸಿಕೊಂಡೇ ಮೂರುವರುಷ ಸಹಪಾಠಿಗಳೊಂದಿಗೆ ಕಾಲ ಕಳೆಯಬೇಕಾದ ಪರಿಸ್ಥಿತಿ- ಎಂಬ ಹುಚ್ಚು ಕಪೋಲಕಲ್ಪನೆ ಭಯವನ್ನೂ ಹುಟ್ಟಿಸುತ್ತಿತ್ತು.

ಸ್ನೇಹಿತರೇ, ನಾವೆಲ್ಲ ಈಗಿರುವುದು ದಾವಣಗೆರೆಯಲ್ಲಲ್ಲ; ದೇವನಗರಿಯಲ್ಲಿ!''- ಎಂದು ಭಾಷಣ ಪ್ರಾರಂಭಮಾಡಿದ ನೆನಪು. ಬಿತ್ತು ನೋಡಿ, ಹಲವಾರು ಚಪ್ಪಾಳೆಗಳು. ಅಲ್ಲಿ೦ದ ನನ್ನ ಕೆಲಸ ಸಲೀಸಾಯ್ತು. ಮಂಕುತಿಮ್ಮನ ಕಗ್ಗ, ಸರ್ವಜ್ಞಪದಗಳು, ನ ಹಿ ಜ್ಞಾನೇನ ಸದೃಶ೦' ಮಾದರಿಯ ಸಂಸ್ಕೃತೋಕ್ತಿಗಳು, ಉವಾಚ, ಒಕ್ಕಣೆ, ನಾಣ್ಣುಡಿ, ಜಾಣನುಡಿ, ಜೇನುನುಡಿ-ಗಳನ್ನ ಪುಂಖಾನುಪುಂಖವಾಗಿ ಉಲ್ಲೇಖಿಸುತ್ತ ಮಾತನ್ನ ಮುಂದುವರಿಸಿದೆ. ಹೆಸರಿಗೆ ಮಾತ್ರ ನಮ್ಮದು ದೇವನಗರಿ; ಆದರೆ, ಮೇಘರಾಜ ಇಂದ್ರನ ಸುಳಿವಿಲ್ಲ. ವರುಣನ ಸೊಲ್ಲೇ ಇಲ್ಲ. ಮಳೆ' ಎಂದರೆ ಏನು- ಅಂತ ಇಲ್ಲಿನ ಮಕ್ಕಳು ಕೇಳುತ್ತವೆಯಂತೆ! ಬೇರೆಯವರಿಗೆ ಪಂಚಭೂತಗಳು ಇರಬಹುದು; ನಮಗಂತೂ ನಾಲ್ಕೇ- ಕೆಮ್ಮಣ್ಣು ಪೃಥ್ವೀ, ಬಿಸಿಗಾಳಿ ವಾಯು, ಸುಡುಬಿಸಿಲು ತೇಜಸ್ ಮತ್ತು ಸಸಿಕುಡಿಬಳ್ಳಿ ಗಿಡಮರ ಏನೂ ಇಲ್ಲದ ಬಟ್ಟಂಬಯಲು, ಇಲ್ಲಿ ಸದಾ ಆಕಾಶದರ್ಶನ೦!''- ಅಂತ ಮುಂದುವರಿಸಿದೆ. ಬಿತ್ತು ನೋಡಿ ಇನ್ನೂ ನಾಲ್ಕಾರು ಕರತಾಡನಗಳು! ಅಲ್ಲಿಯವರೆಗೆ ಒಬ್ಬ ಸಾಮಾನ್ಯ ಹಿಂದಿನ ಬೆಂಚಿನ ವಿದ್ಯಾರ್ಥಿ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಎಲ್ಲರಿಗೂ ಪರಿಚಿತ ಬೇಕಾದವ'ನಾಗಿಬಿಟ್ಟಿದ್ದ. ಆದರೆ, ಹೂವಿನ ಹಾದಿಯಲ್ಲಿ ಸಲೀಸಾಗಿ ನಡೆದು ಬಂದ ಹುಡುಗ ನಾನಾಗಿದ್ದೆ ಎಂದು ನಿಮಗೆ ತಪ್ಪು ಅಭಿಪ್ರಾಯ ಮೂಡಿಸಿದ್ದರೆ, ಕ್ಷಮಿಸಿ. ಸ್ವಲ್ಪ ನನ್ನ ಒದ್ದಾಟದ ಪೂರ್ವ ಕತೆಯನ್ನೂ ಹೇಳುತ್ತೇನೆ, ಕೇಳಿ:

1955ರ ಕಾಲ. ಇಂಜಿನಿಯರಿಂಗ್ ಕಾಲೇಜುಗಳಿಗೆ ಮೆಡಿಕಲ್ ಡೆಂಟಲ್ ಕಾಲೇಜುಗಳಿಗೆ ಈಗಿರುವಂತೆ ಸಿಇಟಿ ಪರೀಕ್ಷೆ ಮುಂತಾದವುಗಳು ಇರಲಿಲ್ಲ. ಎರಡು ವರ್ಷಾವಧಿಯ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಓದುತ್ತಿದ್ದಾಗ, ಅಲ್ಲಿ ಭೌತಶಾಸ್ತ್ರ, ರಾಸಾಯನಿಕಶಾಸ್ತ್ರ, ಗಣಿತ ತೆಗೆದುಕೊಂಡ ಬುದ್ಧಿವಂತರು ಇಂಜಿನಿಯರಿಂಗ್ ಅಥವಾ ಮೆಡಿಕಲ್‌ಗೆ ಹೋಗಬಹುದಿತ್ತು. ರಾಸಾಯನಿಕಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ತೆಗೆದುಕೊಂಡ ಪ್ರತಿಭಾವಂತರು ಮೆಡಿಕಲ್‌ಗೆ ಸಲೀಸಾಗಿ ಹೋಗಬಹುದಿತ್ತು. ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ, ನನಗೆ ಮೊದಲಿಂದಲೂ ಸಂಸ್ಕೃತದಲ್ಲಿ ತುಂಬಾ ಆಸಕ್ತಿ. ಇಂಟರ್ ಮೀಡಿಯಟ್‌ನಲ್ಲಿ ಒಳ್ಳೆಯ ಅಂಕಗಳನ್ನ ಗಳಿಸಿ ಉತ್ತೀರ್ಣನಾಗಿದ್ದೆ. ಐಚ್ಛಿಕ ವಿಷಯಗಳಲ್ಲೂ ಶೇಕಡಾ ಎಂಬತ್ತರಷ್ಟು ಇರಬೇಕು. ಹೀಗೆ ಹೆಚ್ಚು ಅಂಕಗಳನ್ನ ಪಡೆದವರು ಇಂಜಿನಿಯರಿಂಗ್‌ಗೋ, ಮೆಡಿಕಲ್‌ಗೋ ಹೋಗುವುದು ಸಾಮಾನ್ಯವಾಗಿತ್ತು. ಆದರೆ ನನ್ನನ್ನು ಯಾರಾದರೂ ಕೇಳಿದಾಗ, ನಾನು ಮೈಸೂರಿಗೆ ಹೋಗಿ ಸಂಸ್ಕೃತದಲ್ಲಿ ಬಿಎ ಆನರ್ಸ್ ಮಾಡುತ್ತೀನಿ. ಅದರಲ್ಲೇ ಎಂಎ ಮಾಡಬೇಕು. ನಾನು ಸಂಸ್ಕೃತದ ಮೇಷ್ಟ್ರಾಗಬೇಕು ಎನ್ನುತ್ತಿದ್ದೆ.'' ಎಲ್ಲರೂ ಇಂಜಿನಿಯರಿಂಗ್ ಮೆಡಿಕಲ್ ಕಡೆ ಓಡಿದರೆ, ನಾನು ಮಾತ್ರ ಮೈಸೂರಿನ ಮಹಾರಾಜಾ ಕಾಲೇಜಿಗೆ ಬಿಎ ಸಂಸ್ಕೃತ ಆನರ್ಸ್‌ಗಾಗಿ ಅರ್ಜಿ ಗುಜರಾಯಿಸಿದ್ದೆ; ಉತ್ತರಕ್ಕಾಗಿ ಕಾದು ಕುಳಿತಿದ್ದೆ. ಕೆಲವರು ಹಿತೈಷಿಗಳ ಸಮಾಧಾನಕ್ಕಾಗಿ ನೆಪಮಾತ್ರಕ್ಕೆ ಇಂಜಿನಿಯರಿಂಗ್‌ಗೂ ಅರ್ಜಿ ಗುಜರಾಯಿಸಿ, ಸುಮ್ಮನೆ ಕುಳಿತಿದ್ದೆ.

ನಾನೊಂದು ಬಗೆದರೆ ದೈವವೊಂದು ಬಗೆಯಿತು. ನಾನು ತುಂಬಿಸಿ ಕಳುಹಿಸಿದ ಅರ್ಜಿಯೇನೋ ಮೈಸೂರಿನ ಕಾಲೇಜಿಗೆ ತಲುಪಿತಂತೆ ಆದರೆ ಅರ್ಜಿಯೊಂದಿಗೆ ಕಳುಹಿಸಿದ ಪ್ರವೇಶಶುಲ್ಕದ ಎರಡೂವರೆ ರೂಪಾಯಿಯ ಮನಿ ಆರ್ಡರ್ ತಡವಾಗಿ ತಲುಪಿತು- ಎಂಬ ಅಮೋಘ ಕಾರಣಕ್ಕೆ ಮೈಸೂರಿನ ಕಾಲೇಜಿನಲ್ಲಿ ನನಗೆ ಪ್ರವೇಶ ಸಿಗಲಿಲ್ಲ. ಬಿಕ್ಕಿಬಿಕ್ಕಿ ಅಳುತ್ತಿದ್ದ ನನ್ನನ್ನ ಮನೆಯವರು ಸಮಾಧಾನ ಪಡಿಸಿ, ಹೇಗೂ ನೀನು ಇಂಜಿನಿಯರಿಂಗ್‌ಗೂ ಅಪ್ಲೈ ಮಾಡಿದ್ದೀಯಲಾ, ಅದಕ್ಕೇ ಪ್ರಯತ್ನಿಸು. ನಿನ್ನ ಹಣೆಯಲ್ಲಿ ಏನು ಬರೆದಿದೆಯೋ ಹಾಗೇ ಆಗುತ್ತೆ''- ಎಂದು ಸಮಾಧಾನ ಮಾಡಿದರು. ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೂ ಬೆಂಗಳೂರಲ್ಲೇ ಸಂದರ್ಶನ ಏರ್ಪಡಿಸಿದ್ದರೂ ತಮಗೆ ಬೇಕಾದ ಯಾವುದಾದರೂ ಇಂಜಿನಿಯರಿಂಗ್ ಕಾಲೇಜನ್ನ ತಾವೇ ಆರಿಸಿಕೊಳ್ಳುವಂತಿರದ ದಿನಗಳು ಅವು. ಆಯಾಯ ಪ್ರದೇಶದಲ್ಲಿರುವ ಇಂಜಿನಿಯರಿಂಗ್ ಕಾಲೇಜಿಗಳಿಗೆ ಅದಕ್ಕೆ ಸಮೀಪದಲ್ಲಿ ವಾಸಿಸುವ, ಆಯ್ಕೆಯಾದ, ವಿದ್ಯಾರ್ಥಿಗಳು ಹೋಗಿ ಸೇರಿಕೊಳ್ಳಬೇಕೆಂಬ ಒಂದು ನಿಯಮವನ್ನ ಸರ್ಕಾರ ಆ ಬಾರಿ ತಂದಿತ್ತು. ಹಾಗಾಗಿ, ಶಿವಮೊಗ್ಗದವನಾದ ನಾನು ದಾವಣಗೆರೆಯಲ್ಲಿದ್ದ ಇಂಜಿನಿಯರಿಂಗ್ ಕಾಲೇಜ್‌ಗೆ ಹೋಗಿ ಸೇರಬೇಕಿತ್ತು.

ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪ (ಬಿಡಿಟಿ) ಎಂಬ ಕೊಡುಗೈ ದಾನಿಗಳ ಹೆಸರಿನಲ್ಲಿ ಕಟ್ಟಿಸಿಕೊಟ್ಟ ಕಟ್ಟಡದಲ್ಲಿ ಈ ಹೊಸ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಡೆಯುತ್ತಿತ್ತು. ಸ್ಥಳೀಯ ಜನಪ್ರತಿನಿಧಿಗಳೂ ಇರುವ ಒಂದು ಆಯ್ಕೆ ಸಮಿತಿ ಯಾರ್‍ಯಾರಿಗೆ ಸೀಟು ಕೊಡಬೇಕು ಎಂಬುದನ್ನ ನಿರ್ಧರಿಸುತ್ತಿತ್ತು. ನಮ್ಮ ಊರಿನ ಪ್ರಖ್ಯಾತ ವಕೀಲರೊಬ್ಬರು ಆ ಆಯ್ಕೆ ಸಮಿತಿಯಲ್ಲಿದ್ದರು. ಎಸ್.ಜಿ. ಹಾಲಪ್ಪ ಅವರ ಹೆಸರನ್ನ ಹೇಳುತ್ತಲೇ ಪ್ರತಿದಿನ ನಾನು ದೀಪ ಹಚ್ಚಬೇಕು. ಕಡುಬಡತನದಲ್ಲಿದ್ದ ನಮ್ಮ ಮನೆಯವರನ್ನೆಲ್ಲ ಚೆನ್ನಾಗಿ ಬಲ್ಲ ಆ ಗೌಡರ ಹಾಲಪ್ಪನವರು ನನಗೆ ಅಲ್ಲಿ ಪ್ರವೇಶ ದೊರಕಿಸಿಕೊಡಲು ಎಷ್ಟೆಲ್ಲಾ ಹೊಡೆದಾಡಿದರು ಎಂಬುದನ್ನ ನಾನು ಕರ್ಣಾಕರ್ಣಿಯಾಗಿ ಕೇಳಿ ಬಲ್ಲೆ. ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಶಿವಮೊಗ್ಗಕ್ಕೆ ಹನ್ನೊಂದನೆಯವನೋ, ಹದಿನೈದನೆಯವನೋ ಆಗಿ ಉತ್ತೀರ್ಣನಾದ ಮಾತ್ರಕ್ಕೆ ಅಲ್ಲಿ ಪ್ರವೇಶಕ್ಕೆ ಅರ್ಹತೆ ಬರುತ್ತಿರಲಿಲ್ಲ. ಪ್ರವೇಶ ಗಿಟ್ಟಿಸಿಕೊಳ್ಳಲು ಏನೇನೋ ಸೂತ್ರಗಳೂ ಸಾಮಾನ್ಯರಿಗೆ ಅರ್ಥವಾಗದ ಏನೇನೋ ಕ್ಲಿಷ್ಟ ನಿಯಮವಾಳಿಗಳು ಸಮಸ್ಯೆಗಳು. ಆಯ್ಕೆ ಸಮಿತಿಯ ಸಮಾಲೋಚನ ಸಭೆಯಲ್ಲಿ ಎಷ್ಟೋ ಬಾರಿ ಬೆಳಕಿಗಿಂತ ಬೆಂಕಿಕಿಡಿಗಳೇ ಹಾರಾಡುತ್ತಿದ್ದವು- ಅಂತ ಒಳವಲಯದ ಕೆಲವರು ಆಮೇಲೆ ಹೇಳಿದ್ದುಂಟು. ಒಮ್ಮೆಯಂತೂ ಕಡುಬಡವರ ಮನೆಯ ಈ ಅರ್ಹ ವಿದ್ಯಾರ್ಥಿಗೆ ನೀವು ಸೀಟುಕೊಡುವುದಿಲ್ಲಾ ಅನ್ನುವುದಾದರೆ ನಾನು ಈ ಮೀಟಿಂಗ್‌ನಲ್ಲೇ ಇರುವುದಿಲ್ಲ'- ಎಂದು ಹೇಳಿ ಕೋಪದಿಂದ ಹಾಲಪ್ಪನವರು ಸಭಾತ್ಯಾಗ ಮಾಡಿ ಹೊರಬಂದಿದ್ದರಂತೆ. ಪ್ರಿನ್ಸಿಪಾಲ್ ಪ್ರೊ| ಶೇಷಪ್ಪನವರು ಅವರನ್ನ ಹಿಂದಕ್ಕೆ ಕರೆತರುವುದರಲ್ಲಿ ಕುರಿಕೋಣ ಬಿದ್ದು ಹೋಯ್ತಂತೆ. ಇಷ್ಟಕ್ಕೆಲ್ಲ ಕಾರಣ ಅರ್ಹತಾಪಟ್ಟಿಯಲ್ಲಿ ನನ್ನ ಹೆಸರು ಅಂಚಿನಲ್ಲಿ ತುಟ್ಟತುದಿಗೆ ಕೊನೆಯಲ್ಲಿ ಇದ್ದು, ನನಗಿಂತ ಕಡಿಮೆ ಅಂಕ ಬಂದ ಇನ್ಯಾರೋ ಒಬ್ಬಿಬ್ಬರು ಪ್ರಭಾವಿ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸಿಕೊಡಲು, ಸಮಿತಿಯ ಬೇರೆ ಯಾರೋ ಪಟ್ಟಬದ್ಧ ಹಿತಾಸಕ್ತ ಸದಸ್ಯರು ಹರಸಾಹಸ ಮಾಡುತ್ತಿದ್ದರಂತೆ. ಹೇಗೋ ಸಮಸ್ಯೆ ಪರಿಹಾರವಾಯಿತು ಅನ್ನಿ- ನನಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ, ದಾವಣಗೆರೆಯ ಸರ್ಕಾರಿ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 1955ರ ಸೆಪ್ಟೆಂಬರ್ ವೇಳೆಗೆ ಸೀಟು ಸಿಕ್ಕಿತು.

ಕಾಲೇಜು ಪ್ರಾರಂಭವಾಗಿ ಕೆಲವು ತಿಂಗಳುಗಳು ಕಳೆದಿವೆ. ಸರ್ಕಾರ ಕೊಡುವ ಯಾವುದೋ ಒಂದು ವಿದ್ಯಾರ್ಥಿವೇತನವನ್ನ ಯಾರಿಗೆ ಕೊಡಬೇಕು'- ಎನ್ನುವ ಚರ್ಚೆ ನಡೆಯುತ್ತಿದೆ. ಅದಕ್ಕೂ ಸಹ ಒಂದು ಸಮಿತಿ. ಅಲ್ಲಿ ಈ ಆಯ್ಕೆ ಸಮಿತಿಯವರಲ್ಲಿ ಕೆಲವರು ಸದಸ್ಯರಾಗಿದ್ದರು. ನನಗಿಂತ ಒಂದೋ ಎರಡೋ ಹೆಚ್ಚು ಅಂಕ ಪಡೆದಿರುವ ಒಬ್ಬ ಶ್ರೀಮಂತ ವಿದ್ಯಾರ್ಥಿಗೆ ಆ ವಿದ್ಯಾರ್ಥಿ ವೇತನ ಕೊಡುವುದೆಂದು ನಿಯಮ ಪ್ರಕಾರ ನಿರ್ಧಾರವಾಯಿತಂತೆ. ಹಾಲಪ್ಪನವರೆ, ಏನೂ ಮಾಡುವುದಕ್ಕೆ ಆಗುವುದಿಲ್ಲ. ನಿಯಮ ಮೀರುವುದಕ್ಕಂತೂ ಆಗುವುದಿಲ್ಲ. ವಿದ್ಯಾರ್ಥಿವೇತನವನ್ನ ಹೆಚ್ಚು ಅಂಕ ಬಂದವರಿಗೇ ಕೊಡಬೇಕು. ಇದು ಮೆರಿಟ್ ಸ್ಕಾಲರ್‌ಶಿಪ್; ಆರ್ಥಿಕ ಸಹಾಯ ಅಲ್ಲ- ಎಂದು ಸಮಿತಿಯ ಅಧ್ಯಕ್ಷರು ಹಾಲಪ್ಪನವರಿಗೆ ಮನವರಿಕೆ ಮಾಡಿಕೊಟ್ಟರಂತೆ. ಆಗ ಹಾಲಪ್ಪನವರು ಎದ್ದುನಿಂತು ಒಪ್ಪಿದೆ. ಇದು ಮೆರಿಟ್ ಸ್ಕಾಲರ್‌ಶಿಪ್; ಹೆಚ್ಚು ಮೆರಿಟ್ ಇದ್ದವರಿಗೇ ಇದನ್ನ ಕೊಡಬೇಕು. ಆ ಹುಡುಗನ ಚಿಕ್ಕಪ್ಪನೋ ದೊಡ್ಡಪ್ಪನೋ ಈ ಸಮಿತಿಯಲ್ಲಿ ಒಬ್ಬರು ಇದ್ದೀರಿ- ಅನ್ನೊದು ಸಹ ನನಗೆ ಗೊತ್ತು. ಆ ಮಹನೀಯರು ತುಂಬಾ ಉದಾರಿಗಳು, ಜನಾನುರಾಗೀ ಡಾಕ್ಟರ್ ಅಂತಲೂ ನನಗೆ ಗೊತ್ತು. ಮೆರಿಟ್ ಜಾಸ್ತಿ ಇರೋದರಿಂದ ಈ ವಿದ್ಯಾರ್ಥಿವೇತನದ ಗೌರವ ಆ ಹುಡುಗನಿಗೆ ಸಲ್ಲಬೇಕಾದ್ದು ನ್ಯಾಯವೇ. ಆದರೆ, ಸಾಕಷ್ಟು ಶ್ರೀಮಂತರಾಗಿರೋ ಕಾರಣ ಅವರ ಹುಡುಗನಿಗೆ ಈ ವಿದ್ಯಾರ್ಥಿ ವೇತನದ ಹಣ ಅಷ್ಟು ಅವಶ್ಯಕವೇನಲ್ಲ. ನೀವೆಲ್ಲ ಒಪ್ಪುತ್ತೀರಿ ತಾನೇ? ಆದ್ದರಿಂದ ನನ್ನ ಸಲಹೆ ಏನು- ಅಂದರೆ ವಿದ್ಯಾರ್ಥಿವೇತನವನ್ನ ಆ ಹುಡುಗನ ಹೆಸರಿಗೇ ಕೊಡೋಣ; ಆದರೆ, ವಿದ್ಯಾರ್ಥಿವೇತನದ ಹಣವನ್ನ ಒಂದೋ ಎರಡೋ ಮಾರ್ಕು ಕಡಿಮೆ ಬಂದಿರುವ ಈ ಬಡ ಹುಡುಗನಿಗೆ ಸೇರೋ ಹಾಗೆ ಅನ್‌ಅಫಿಶಿಯಲ್ ಆಗಿ ರಿಕ್ವೆಸ್ಟ್ ಮಾಡಿಕೊಳ್ಳೋಣ. ಏನಂತೀರಿ, ಎಲ್ಲರಿಗೂ ಒಪ್ಪಿಗೆ ತಾನೆ? ಏನಂತೀರಿ ಡಾಕ್ಟರ್‌ರೇ?''- ಎಂದರಂತೆ.ಫಲಿತಾಂಶ: ಪ್ರತಿಭಾ ವಿದ್ಯಾರ್ಥಿವೇತನ ಡಾಕ್ಟರ್‌ರ ಮನೆಯ ಹುಡುಗನಿಗೆ ಹೋಯಿತು; ಹಣ ನನ್ನ ಕೈಗೆ ಬಂತು!

ಅಲ್ಲಿ ಹೋಗಿ ಎಲ್ಲಿ ಉಳಿದುಕೊಳ್ತಿಯೋ?'' ಅಂತ ಒಂದು ದಿನ ಹಾಲಪ್ಪನವರು ಶಿವಮೊಗ್ಗದಲ್ಲಿ ನನ್ನನ್ನ ಕೇಳಿದ್ದರು. ಗೊತ್ತಿಲ್ಲಾ'' ಅಂದೆ. ಅಲ್ಲಿ ದಾವಣಗೆರೆಯಲ್ಲಿ ಯಾರಾದರೂ ಪರಿಚಿತರು, ನೆಂಟರಿಷ್ಟರು ಇದ್ದಾರಾ?'' ಅಂತ ಕೇಳಿದರು. ಇರಬಹುದೋ ಏನೋ, ಆದರೆ ಈಗ ನಾವಿರುವ ಸ್ಥಿತಿಯಲ್ಲಿ ನಮ್ಮನ್ನು ತಮ್ಮ ನೆಂಟರು ಹೇಳಿಕೊಳ್ಳೋ ಬಂಧುಗಳು ಯಾರಾದರೂ ಇರ್ತಾರಾ?'' ಅಂತ ಹೇಳಿದೆ. ನೋಡು, ಅಲ್ಲಿ ನನಗೆ ಗೊತ್ತಿರೊ ಲಾಯರ್ ಜಡೆಕೃಷ್ಣರಾವ್ ಅಂತ ಒಬ್ಬರಿದ್ದಾರೆ. ಅವರು ತಾವಿರುವ ಮನೆಯ ಇನ್ನರ್ಧ ಭಾಗದಲ್ಲೇ ಒಂದು ಬ್ರಾಹ್ಮಣರ ಹಾಸ್ಟಲನ್ನ ನಡೆಸುತ್ತಿದ್ದಾರೆ ಅದೇನು ದೊಡ್ಡ ಹಾಸ್ಟಲೇನಲ್ಲ. ಒಂದೊಂದು ರೂಮ್‌ನಲ್ಲಿ ಇಬ್ಬರೋ, ಮೂರು ಜನ ಉಳಿದುಕೊಳ್ಳೋ ವ್ಯವಸ್ಥೆ ಅಲ್ಲಿದೆಯಂತೆ. ಊಟ ತಿಂಡಿಗೆ ವಿದ್ಯಾರ್ಥಿಗಳೇ ತಮ್ಮ ತಮ್ಮ ವ್ಯವಸ್ಥೆ ತಾವೇ ಮಾಡಿಕೊಳ್ಳಬೇಕು. ಅವರಿಗೆ ಬೇಕಾದರೆ ನಾನೊಂದು ಕಾಗದ ಕೊಡ್ತೀನಿ. ಸ್ಥಳ ಖಾಲಿ ಇದ್ದರೆ ನಿನ್ನ ಅದೃಷ್ಟ. ನಾಳೇನೇ ಹೋಗು, ಸೇರಿಕೊ''- ಅಂದರು ಹಾಲಪ್ಪನವರು. ಆಗಲಿ''- ಅಂತ ಹೇಳಿ, ಅವರ ಹತ್ತಿರ ಒಂದು ಕಾಗದ ತೆಗೆದುಕೊಂಡು ಅವರ ಮನೆಯಿಂದ ಹೊರ ಹೊರಟೆ. ಅಷ್ಟರಲ್ಲೇ, ಬಾರೋ ಇಲ್ಲಿ''- ಅಂತ, ನನ್ನನ್ನ ಹಿಂದಕ್ಕೆ ಕರೆದರು. ಅಲ್ವೋ ಪೆದ್ದಮುಂಡೇದೆ, ಊಟಕ್ಕೇನೋ ವ್ಯವಸ್ಥೆ ಮಾಡಿಕೊಳ್ತೀಯೋ''- ಪ್ರಶ್ನಿಸಿದರು. ಗೊತ್ತಿಲ್ಲ, ದೇವರಿದ್ದಾನೆ''- ನಾನಂದೆ.'' ದೇವರಿದ್ದಾನಂತೆ ದೇವರು! ಬುದ್ಧಿ ಇದೆಯೇನೋ ನಿನಗೆ. ಬಾ ಇಲ್ಲಿ. ನನಗೆ ಗೊತ್ತಿರೋ ಇನ್ನೂ ಒಬ್ಬಿಬ್ಬರಿಗೆ ಕಾಗದ ಬರೆದುಕೊಡ್ತೀನಿ. ಅವರನ್ನೂ ಒಂದೆರಡು ಹೊಟೆಲ್‌ಗಳ ಮಾಲೀಕರು ನನಗೆ ಪರಿಚಯ ಇದಾರೆ. ಅವರನ್ನೂ ಹೋಗಿ ನೋಡು; ನಿನಗೆ ಸಹಾಯ ಮಾಡಿಯಾರು'' -ಅಂತ ಹಾಲಪ್ಪನವರು ಹೇಳಿದರು.

ದಾವಣಗೆರೆಗೆ ಹೋಗಿ ಕಾಲೇಜಿಗೆ ಸೇರಿ ಆ ಹಾಸ್ಟಲ್‌ನಲ್ಲೇ ಉಳಿದುಕೊಂಡು ಮನೆಯಿಂದ ತಂದಿದ್ದ ಪುಡಿಗಾಸುಗಳೆಲ್ಲ ಖರ್ಚಾಗುವುದರೊಳಗಾಗಿ ಮೆಲ್ಲಮೆಲ್ಲನೆ ನಾಲ್ಕೈದು ಜನರ ಮನೆಯಲ್ಲಿ ವಾರಾನ್ನದ ಊಟ ಮಾಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆ. ಆ ಅನ್ನದಾತರೆಲ್ಲ ನಿಜವಾಗಲೂ ನನ್ನನ್ನ ತುಂಬಾ ಗೌರವದಿಂದ ನೋಡಿಕೊಳ್ಳುತ್ತಿದ್ದರೇ ವಿನಾ, ತಾವು ಯಾರೋ ಕಾಣದ ಕೇಳದ ಒಬ್ಬ ವಿದ್ಯಾರ್ಥಿಗೆ ಊಟ ಹಾಕುತ್ತಿದ್ದೇವೆ- ಎಂಬ ತಾತ್ಸಾರ, ಔದಾಸೀನ್ಯ, ಬೇಜಾರು ಏನೂ ತೋರುತ್ತಿರಲಿಲ್ಲ, ಅಸಡ್ಡೆ ಮಾಡುತ್ತಿರಲಿಲ್ಲ. ತಮ್ಮ ಮನೆಯವರಲ್ಲಿನ ಒಬ್ಬನೆಂದೇ ನನ್ನನ್ನು ಪರಿಗಣಿಸುತ್ತಿದ್ದರು. ಕೆಲವರ ಮನೆಯಲ್ಲಂತೂ ಅವರಿಗೇ ತುಂಬಾ ಕಷ್ಟ ಇರುವುದು ಗೋಚರಿಸುತ್ತಿತ್ತು. ಆದರೂ, ತಮಗೆ ಇರುತ್ತಿತ್ತೋ ಬಿಡುತ್ತಿತ್ತೋ ಗೊತ್ತಿಲ್ಲ; ನಾನು ಅವರ ಮನೆಗೆ ಹೋಗುವ ದಿನ ಮಾತ್ರ ಒಳ್ಳೆಯ ಅಡಿಗೆಯನ್ನ ಮಾಡಿ ನನಗೆ ಬಡಿಸುತ್ತಿದ್ದರು- ಎಂಬ ಗುಮಾನಿ ನನಗೆ ಬರುತ್ತಿತ್ತು. ನಾನ೦ತೂ ಬಗ್ಗಿಸಿದ ತಲೆಯನ್ನು ಎತ್ತದೇ, ಬಡಿಸುತ್ತಿರುವವರ ಮುಖವನ್ನು ನೋಡದೇ, ಮಾತಿನ ಧ್ವನಿಯಿಂದ ಮತ್ತು ಧರಿಸಿದ ಕೈಬಳೆಗಳಿಂದ ತಾಯಿ-ಮಗಳುಗಳ ಗುರುತು ಹಿಡಿಯುವಷ್ಟರ ಮಟ್ಟಿಗೆ ಸಾಮರ್ಥ್ಯವಿದ್ದು, ಹೂ೦-ಬೇಕು-ಸಾಕು-ಥ್ಯಾಂಕ್ಯೂಗಳಿಂದಲೇ ಪ್ರತಿಕ್ರಿಯಿಸುತ್ತ, ನನ್ನ ಪಾಡಿಗೆ ನಾನು ಎಲೆಯ ಮೇಲೆ ಬಡಿಸಿದ ಆ ರುಚಿರುಚಿಯಾದ ಅಡುಗೆಗಳನ್ನೆಲ್ಲಾ ಏನೂ ಉಳಿಸದೇ ತಿಂದು, ಎಲೆಯನ್ನು ಎತ್ತಿ ಹೊರಗೆಸೆದು ಕೈತೊಳೆದು, ಒಳಬಂದು ನೆಲಕ್ಕೆ ಗೋಮಯ ಮಾಡಿ, ಹೊರ ಬಂದು ಕೈತೊಳೆದು- ವಸತಿಗೃಹದ ನನ್ನ ಕೋಣೆಗೆ ಹಿಂತಿರುಗಿ, ಉಟ್ಟ ಪಂಚೆಯನ್ನ ಕಳಚಿ, ಬೇರೆ ಬಟ್ಟೆಗಳನ್ನು ಧರಿಸಿ ಕಾಲೇಜಿಗೆ ಓಡುತ್ತಿದ್ದೆ.

ಒಂದೊಂದು ದಿನ ಏನೋ ಕಾರಣಕ್ಕೆ ಊಟವಿಲ್ಲದೇ ಹೋಗುತ್ತಿತ್ತು. ಬರೀ ನೀರು ಕುಡಿದು, ಹೀಗೆ ಒಂದು ದಿನ ರಾತ್ರಿ ಕೋಣೆಯಲ್ಲಿ ಮಲಗಿದ್ದಾಗ ಬಾಗಿಲು ತೆಗೆದುಕೊಂಡು ಒಬ್ಬ ಗೆಳೆಯ ಒಳಬಂದ. ಮಾತಿಗೆ ಮಾತು ಬಂದು, ಎರಡು ದಿನದಿಂದ ಊಟ ಮಾಡಿಲ್ಲ- ಅಂತ ಗೊತ್ತಾದಾಗ, ಅವನು ಮಾಡಿದ ಮೊದಲ ಕೆಲಸ ಎನೆಂದರೆ, ನನ್ನನ್ನು ಎಬ್ಬಿಸಿ, ದರದರನೆ ಎಳೆದುಕೊಂಡು ಹತ್ತಿರದ ಹೊಟೆಲ್‌ಗೆ ಕರೆದುಕೊಂಡು ಹೋದದ್ದು. ಅವಾಗ ಊಟದ ಸಮಯ ಇನ್ನೇನು ಮುಗಿಯುವುದರಲ್ಲಿತ್ತು. ನಮ್ಮ ಕಾಲೇಜಿನಲ್ಲೇ ಸೀನಿಯರ್ ತರಗತಿಯಲ್ಲಿ ಓದುತ್ತಿದ್ದ ಶಿವಮೊಗ್ಗದ ಆ ಗೆಳೆಯ ರಾಮಸ್ವಾಮಿ ಆ ಹೊಟೆಲ್‌ನಲ್ಲೇ ದಿನವೂ ಊಟ ಮಾಡುತ್ತಿದ್ದುದರಿಂದ, ಮಾಲೀಕರು ಪರಿಚಾರಕರು ಎಲ್ಲರೂ ಅವನಿಗೆ ಗೊತ್ತಿದ್ದವರಾಗಿದ್ದರು. ದಯವಿಟ್ಟು ಒಂದು ಊಟ ತೆಗೆದುಕೊಂಡು ಬನ್ನಿ; ಏನಿದೆಯೋ ಇಲ್ಲವೋ ಚಿಂತೆ ಬೇಡ; ಇರುವುದನ್ನೇ ಹಾಕಿ. ಬೇಕಾದರೆ, ಹತ್ತು-ಹದಿನೈದು ನಿಮಿಷ ಕಾಯುತ್ತೇವೆ. ಅನ್ನ ಮುಗಿದಿದ್ದರೆ, ಮಾಡಿ ಹಾಕಿ, ಪರವಾಗಿಲ್ಲ''- ಎಂದು ಅವರನ್ನು ಕೇಳಿಕೊಂಡ. ಬರೀ ಅನ್ನ-ಸಾರು-ಮಜ್ಜಿಗೆ-ಉಪ್ಪಿನಕಾಯಿ ಆಗಿದ್ದಿರಬಹುದು, ಆ ದಿನ ಮಾಡಿದ ಅಮೃತ ಸಮಾನವಾದ ಊಟದ ರುಚಿಯನ್ನು ಇಂದಿಗೂ ನಾನು ಮರೆತಿಲ್ಲ. ಹೋಟೆಲ್ ಬಿಡುವ ಮುನ್ನ ರಾಮು ಮಾಡಿದ ಇನ್ನೊಂದು ಕೆಲಸವೆಂದರೆ, ಆ ಹೋಟೆಲಿನಲ್ಲಿ ಊಟಮಾಡಲು ತಾನು ಮೊದಲೇ ಕೊಂಡು ಇರಿಸಿಕೊಂಡಿದ್ದ ಕೂಪನ್‌ಗಳ ಒಂದು ಕಟ್ಟನ್ನು ತನ್ನ ಜೇಬಿನಿಂದ ಹೊರತೆಗೆದು, ನನ್ನ ಕೈಯಲ್ಲಿ ಇಟ್ಟು, ಇನ್ನುಮುಂದೆ ಯಾವತ್ತೂ ಊಟ ಇಲ್ಲದೆ ಉಪವಾಸ ಬೀಳಬೇಡ. ನನ್ನ ಈ ಕೂಪನ್‌ಗಳನ್ನು ಉಪಯೋಗಿಸಿಕೋ. ಮುಗಿದು ಹೋದಮೇಲೆ ನನಗೆ ಹೇಳು. ಬೇರೆ ವ್ಯವಸ್ಥೆ ಮಾಡುತ್ತೇನೆ''- ಎಂದ. ಪೆಚ್ಚಾಗಿದ್ದ ನಾನು ಹೇಳ ಹೊರಟ ಥ್ಯಾಂಕ್ಸ್ ಕಣೋ' ಧನ್ಯವಾದಗಳಿಗೂ ಕಾಯದೆ, ಬರ್ತೀನಿ, ನನಗೆ ಸ್ವಲ್ಪ ಕೆಲಸವಿದೆ''-ಎನ್ನುತ್ತ ಕತ್ತಲಲ್ಲಿ ಕರಗಿ ಹೋದ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X