• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಥವರೂ ಇದ್ದರು, ಇದ್ದಾರೆ! ಇರುತ್ತಾರಾ?

By Staff
|

ಹಿಂದಿನ ಕಾಲದಲ್ಲಿ ಡಾ.ವೆಂಕಟೇಶನ್ ಅಂಥವರು ಖಂಡಿತ ಇದ್ದರು. ಸಹೋದ್ಯೋಗಿಗಳ ಕಷ್ಟ-ಸುಖಕ್ಕೆ ಹೆಗಲು ನೀಡುತ್ತಿದ್ದರು. ಈ ಕಾರಣಕ್ಕಾಗಿಯೇ ಇಂದಿಗೂ ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ, ಈಗ ಕಾಲ ಬದಲಾಗಿದೆ. ಅಂಥವರೂ ಇದ್ರಾ ಎಂದು ಆಶ್ಚರ್ಯಪಡುವಷ್ಟು ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ವ್ಯಾಪಾರಿ ಬುದ್ಧಿ ಚಿಗುರೊಡೆದಿದೆ. ಆದರೂ, ವೆಂಕಟೇಶನ್ ಅಂಥವರು ಎಲ್ಲೋ ಇದ್ದೇ ಇರುತ್ತಾರೆ. ಇದ್ದರೆ ಖಂಡಿತ ನಮಗೆ ತಿಳಿಸಿ.

ಅಂಕಣಕಾರ : ಶಿಕಾರಿಪುರ ಹರಿಹರೇಶ್ವರ, ಮೈಸೂರು

ನಿಮಗೆ ಒಂದು ಮಾತು ಹೇಳಬೇಕು ಅನ್ನಿಸುತ್ತೆ ನನಗೆ''- ನಾನು ಕೆಲಸ ಮಾಡುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕರು ಒಂದು ದಿನ ನನ್ನನ್ನು ಕರೆದು ಕುಳ್ಳಿರಿಸಿಕೊಂಡು, ಹಿತವಚನ ಹೇಳಲು ಪ್ರಾರಂಭಿಸಿದ್ದರು. ನೀವು ಮೇಷ್ಟರಾಗೇ ಇರಬೇಕು ಅಂದುಕೊಂಡಿದ್ದರೆ, ಹರಿಹರೇಶ್ವರ್, ಈಗಿರುವಂತೆ ಬರೀ ನೀವು ಬಿ.ಇ. ಆಗಿದ್ದರೆ ಏನೂ ಪ್ರಯೋಜನವಿಲ್ಲ. ನಿಮಗೆ ಇಂಜಿನಿಯರಿಂಗ್ ಕೆಲಸದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಲ್ಕೈದು ವರ್ಷಗಳ ಅನುಭವ ಪರಿಶ್ರಮ ಇದ್ದಿರಬಹುದು. ಆದರೆ ಬಿ.ಇ. ಅಷ್ಟನ್ನೇ ಓದಿ, ಅದೇ ಬಿ.ಇ. ಓದುತ್ತಿರುವ ಹುಡುಗರಿಗೆ ಪಾಠ ಹೇಳಿ ಜಯಿಸುತ್ತೇನೆ- ಅಂತ ನೀವು ಅಂದುಕೊಂಡಿದ್ದರೆ ಅದು ಏನೇನೂ ಸಾಲದು, ಅದು ಆಗದ ಮಾತು''- ಅಂತ ನನಗೇ ಕ್ಲಾಸ್ ತೆಗೆದುಕೊಂಡಿದ್ದರು.

ನಾನು ಆಗತಾನೇ ಭಾರತ-ಚೀನಾ ಗಡಿ ಪ್ರದೇಶದಲ್ಲಿ ರಸ್ತೆ-ಸೇತುವೆ ಇಂಜನಿಯರ್ ಆಗಿ ಕೆಲಸ ಮಾಡಿ ಹಿಂತಿರುಗಿ ಬಂದಿದ್ದೆ. ಅದಕ್ಕೆ ಮೊದಲು ನೈವೇಲಿಯಲ್ಲಿ ನಗರ ನಿರ್ಮಾಣದ ಇಂಜನಿಯರ್ ಆಗಿ ದುಡಿದಿದ್ದೆ. ಈಗ ಎಲ್ಲೆಲ್ಲೋ ಕೆಲಸ ಹುಡುಕಾಡುತ್ತಾ ಕೊನೆಗೆ ನನಗೆ ಪ್ರಿಯವಾದ ಮೇಷ್ಟರ ಕೆಲಸಕ್ಕೇ ಬಂದು ಸೇರಿದ್ದೆ. ಅದೂ ಸುಲಭವಾಗಿ ನನಗೆ ಸಿಕ್ಕಿತು ಎಂದೇನೂ ಅಲ್ಲ. ಅದಕ್ಕಾಗಿಯೂ ನಾನು ಹರಸಾಹಸ ಮಾಡಬೇಕಾಗಿ ಬಂದಿತ್ತು. ಸರಕಾರೀ ಕೆಲಸಕ್ಕೆ ಸೇರಿಕೊಳ್ಳುವ ವಯಸ್ಸು ಮೀರಿಹೋದುದ್ದೂ ಒಂದು ಕಾರಣವಾಗಿ, ಕೈಗೆ ಬಂದ ತುತ್ತುಗಳು ಬಾಯಿಗೆ ಬಾರದೇ ಒದ್ದಾಡಿದ ಆ ದಿನಗಳ ಕತೆಯನ್ನ ಆಮೇಲೆ ಹೇಳುತ್ತೇನೆ. ಈಗಂತೂ ಬೆಂಗಳೂರಿನಲ್ಲಿ ಒಂದು ಖಾಸಗಿ ಇಂಜಿನಿರಿಂಗ್ ಕಾಲೇಜಿನಲ್ಲಿ ಮೇಷ್ಟರಾಗಿದ್ದೆ. ಸಂಬಳ ಹೆಚ್ಚಿಲ್ಲದಿದ್ದರೂ, ಸಾಮಾನ್ಯ ಜೀವನ ನಿರ್ವಹಣೆಗೆ ಸಾಕೆನಿಸುವಷ್ಟು ಬರುತ್ತಿತ್ತು.

ಉಪನ್ಯಾಸಕನಾಗಿ ಸೇರಿದ ಕೆಲವು ದಿನಗಳಲ್ಲೇ ಜನಪ್ರಿಯತೆಯನ್ನೂ ಗಳಿಸಿದ್ದೆ. ನಾನೇನು ಅಷ್ಟು ಮಹಾ ಮೇಧಾವಿ ಇಂಜಿನಿಯರ್ ಆಗಿರಲಿಲ್ಲ. ಓದುವಾಗ ವ್ಯಾಸಂಗ ಮಾಡಿದ್ದೇ ಸ್ವಲ್ಪ, ಅದೂ ಪರೀಕ್ಷೆಗಾಗಿ. ಎಸ್‌ಎಸ್‌ಎಲ್‌ಸಿಯಲ್ಲಿ ಬಿಡಿ ಭಾರೀ ಫಸ್ಟ್ ಕ್ಲಾಸು, ಎಲ್ಲ ತೊಂಬತ್ತರ ಹಿಂದಿನ ಮುಂದಿನ ಅ೦ಕಗಳು, ಐಚ್ಛಿಕ ಗಣಿತದಲ್ಲಿ ನೂರಕ್ಕೆ ನೂರು, ಇನ್ನಾವುದರಲ್ಲೋ ನೂರು ಬಾರದೇ ಒಂದಂಕೆ ಕಡಿಮೆಯಾಯಿತೆಂದು ಅತ್ತಿದ್ದೇನು, ಕರೆದಿದ್ದೇನು; ಆಮೇಲೆ ಇಂಟರ್ಮೀಡಿಯಟ್‌ನಲ್ಲಿ ತೇರ್ಗಡೆಯಾದವರಲ್ಲಿ ಶಿವಮೊಗ್ಗಕ್ಕೆ ಹನ್ನೊ೦ದನೆಯವನೋ ಹದಿನೈದನವನೋ- ಇವೆಲ್ಲ ಗತಕಾಲದ ವೈಭವಗಳು. ಅಮ್ಮನ ಅಂಕೆಯಿಲ್ಲ; ಅಪ್ಪನ ತಕರಾರಿಲ್ಲ; ಅಕ್ಕನ ಮೇಲ್ವಿಚಾರಣೆಯಿಲ್ಲವಾಗಿ- ನಾನು ಇಂಜಿನಿಯರಿಂಗ್ ಓದತೊಡಗಿದಾಗ ಓದನ್ನು ಕಡೆಗಣಿಸಿದ್ದೇನು, ನಾಟಕ, ಸಾಹಿತ್ಯ, ಪಠ್ಯೇತರ ಚಟುವಟಿಕೆಗಳ ಬೆನ್ನಹಿಂದೆ ಬಿದ್ದಿದ್ದೇನು, ಕೊನೆಯ ಇಂಜನಿಯರಿಂಗ್ ಪರೀಕ್ಷೆಯಲ್ಲಿ ಪಾಸಾದದ್ದು ಎರಡನೇ ದರ್ಜೆಯಲ್ಲಿ ತಾನೆ! ಇನ್ನು ಕೆಲಸ ಮಾಡಿ ಪಡೆದ ಅನುಭವವೋ, ಇಲ್ಲಿ ಪಾಠ ಹೇಳಲು ಅಷ್ಟಾಗಿ ಏನೂ ಉಪಯೋಗಕ್ಕೆ ಬಾರದ ಸಂಗತಿಗಳೇ. ವ್ಯಾಸಂಗ ಮಾಡುತ್ತಿದ್ದಾಗ ಕಲಿತದಕ್ಕಿಂತ ಈಗ ಪ್ರವಚನಕ್ಕಾಗಿ ನಡೆಸುತ್ತಿದ್ದ ಸ್ವಾಧ್ಯಯನದಿಂದ ಬ೦ದ ತಿಳಿವಳಿಕೆಯೇ ಹೆಚ್ಚು ಆಳದ್ದಾಗಿತ್ತು.

ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ಪಠ್ಯಕ್ರಮಕ್ಕೆ ಅನುಗುಣವಾಗಿ ಪಾಠ ಮಾಡುವುದೇ ಅಂದಿನ ಮೇಷ್ಟರುಗಳ ಪರಿಪಾಠವಾಗಿತ್ತು. ಆದರೆ, ನಾನಂತೂ ಶ್ರದ್ಧೆಯಿಂದ ಚೆನ್ನಾಗಿ ತಯಾರಿ ಮಾಡಿಕೊಂಡೇ ತರಗತಿಗೆ ಹೋಗಿ ಪಾಠ ಮಾಡುತ್ತಾ ಇದ್ದೆ. ನನ್ನ ದಡ್ಡತನ, ಜಾಣ್ಮೆಯ ಪರಿಮಿತಿ ನನಗೆ ಗೊತ್ತಿದ್ದರಿಂದ ಬೇರೆಯವರಿಗಿಂತ ಹೆಚ್ಚು ಕಷ್ಟಪಟ್ಟು ಸಿದ್ದಮಾಡಿಕೊಳ್ಳುತ್ತಿದ್ದರಿಂದ ನನಗೆ ಪಾಠಹೇಳುವಾಗ ತುಂಬಾ ಅನುಕೂಲವಿತ್ತು. ಅಷ್ಟು ಜಾಣರಲ್ಲದ ಉಪಾಧ್ಯಾಯರಿಗೆ ದಡ್ಡವಿದ್ಯಾರ್ಥಿಗಳ ಕಷ್ಟ ಚೆನ್ನಾಗಿ ಗೊತ್ತಿರುತ್ತದೆ. ಅವರೇನು ಪ್ರಶ್ನೆಗಳನ್ನ ಕೇಳಬಹುದೆಂಬ ಸುಳಿವೂ ಹೊಳೆಯುತ್ತಿರುತ್ತದೆ. ಜಾಣ ವಿದ್ಯಾರ್ಥಿಗಳೋ ಮೇಷ್ಟರಿಗೆ ವಿಷಯ ಗೊತ್ತಿದೆ ಎಂದು ಮನವರಿಕೆಯಾದ ಮೇಲೆ ಮಷ್ಕಿರಿ ಮಾಡುವುದು ಕಡಿಮೆ. ಹಿಂದಿನ ಬೆಂಚಿನಲ್ಲಿ ಎಲ್ಲೋ ಕುಳಿತು ಚುಕ್ಕಿ ಆಟವನ್ನೋ, ಸಂದೇಶ ವಿನಿಮಯಗಳನ್ನೋ ಅವರು ಮಾಡಿಕೊಳ್ಳುತ್ತಿರುತ್ತಾರೆ, ಅನ್ನಿ. ಅವರ ಈ ಚಿಕ್ಕ ಪುಟ್ಟ ತು೦ಟಾಟಗಳನ್ನ ಕಡೆಗಣಿಸಿದರಾಯಿತು. ಅವರು ಕೇಳುವ ಮಾರ್ಮಿಕ ಪ್ರಶ್ನೆಗಳಿಗೆ ತಮಾಷೆಯಾಗಿ ಉತ್ತರಿಸಿದರಾಯಿತು. ತುಂಟಾಟಕ್ಕೂ ಚಾಣಾಕ್ಷತನಬೇಕು. ತುಂಟರು ಬೇರೆ, ಪುಂಡರು ಬೇರೆ. ಅಂಥವರು, ಸಿದ್ಧವಾಗಿರದ ನನ್ನ ದುರ್ಬಲ ಸನ್ನಿವೇಶದಲ್ಲಿ ಪ್ರಶ್ನೆಗಳ ಕವಣೆಕಲ್ಲು ಬೀಸೆಸೆಯುತ್ತಿದ್ದುದೂ ಉಂಟು; ಆವಾಗ, ನನಗೆ ಗೊತ್ತಿಲ್ಲದುದನ್ನ ಸುಮ್ಮನೆ ಉಡಾಫೆ ಮಾತಾಡಿ ಕೊಡವಿಕೊ೦ಡು ಬಿಡದೆ, ನಿಮ್ಮ ಈ ಪ್ರಶ್ನೆಗೆ ಉತ್ತರಿಸಲು ಇನ್ನೂ ಬೇರೆ ವಿಷಯಗಳನ್ನು ಅದಕ್ಕೆ ಮೊದಲು ಹೇಳಬೇಕಾಗುತ್ತದೆ; ಅದನ್ನೆಲ್ಲ ವಿವರಿಸಿ ಹೇಳಲು ಈಗ ಸಮಯವೂ ಇಲ್ಲ, ಹೆಚ್ಚಿಗೆ ತಿಳಿದುಕೊಂಡು ಬಂದು ಮುಂದಿನ ಪಾಠದಲ್ಲಿ ಹೇಳುತ್ತೇನೆ; ಅಥವಾ ನನ್ನ ಸ್ಟಾಫ್ ರೂಂಗೆ ಬಂದರೆ, ಈಗಲೇ ವಿವರಿಸುತ್ತೇನೆ''- ಎಂದು ಜಾರಿಕೊಳ್ಳುತ್ತಿದ್ದೆ; ಒಟ್ಟಿನಮೇಲೆ, ಜಾಣ ತುಂಟರಂಥವರನ್ನ ಎದುರಿಸುವ ತಾಕತ್ತೂ ಇದ್ದುದೇ ನನ್ನ ಹಿಡಿತಕ್ಕೆ ತಡೆತಕ್ಕೆ ಕಾರಣವಾಗಿತ್ತು. ಜೊತೆಗೆ ಇನ್ನೊಂದು ಶಕ್ತ್ಯಾಯುಧ ನನ್ನ ಬತ್ತಳಿಕೆಯಲ್ಲಿತ್ತು. ನಾನು ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ವಹಿಸಿ, ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಿರ್ವಹಿಸುತ್ತಿದ್ದೆ. ವಿದ್ಯಾರ್ಥಿಗಳನ್ನ ಅಧ್ಯಾಪಕರುಗಳನ್ನ ಸೇರಿಸಿಕೊಂಡು ನಾಟಕ ಆಡಿಸುವುದು, ಆಡುವುದು, ಹಾಡು-ಹಸೆ, ಕುಣಿತ, ಇವುಗಳಲ್ಲೆಲ್ಲ ಆಸಕ್ತಿ ಇರುವವರಿಗೆ ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಿಕೊಡುವುದು- ಇತ್ಯಾದಿಗಳಿಂದಲೂ ವಿದ್ಯಾರ್ಥಿಗಳಿಗೆ ಮೆಚ್ಚಿನವನಾಗಿದ್ದೆ. ಹೆಗ್ಗಳಿಕೆ ಹಬ್ಬಿದೆಯಲ್ಲ ಇನ್ನೇನು ಬೇಕು- ಎಂಬ ಭ್ರಮೆಯಲ್ಲಿ ಅಲ್ಪತೃಪ್ತನಾಗಿದ್ದೆ. ಆ ಸಮಯದಲ್ಲಿ ನಮ್ಮ ಪ್ರೊ| ವೆಂಕಟೇಶನ್ (ಹೆಸರು ಬದಲಾಯಿಸಿದ್ದೇನೆ) ಕರೆದು ಆ ಬುದ್ಧಿವಾದ ಹೇಳಿದ್ದರು.

ನಿಮಗೆ ಗೊತ್ತಿಲ್ಲ, ಹರಿಹರೇಶ್ವರ್. ನಿಮಗೆ ಈ ಹುಡುಗರು ಚಳ್ಳೆಹಣ್ಣು ತಿನಿಸಿಬಿಡುತ್ತಾರೆ. ನಿಮ್ಮ ಒಳ್ಳೆಯದಕ್ಕೇ ಹೇಳುತ್ತೇನೆ- ನೀವು ಅಧ್ಯಾಪಕರಾಗಿಯೇ ಮು೦ದುವರೆಯಬೇಕು ಅಂತ ನಿರ್ಧಾರ ಮಾಡಿದ್ದರೆ, ನೀವು ಇನ್ನೂ ಹೆಚ್ಚು ಹೆಚ್ಚು ಓದಬೇಕು. ಮೊದಲು ಎಂ.ಇ. ಓದಲು ಹೋಗಿ; ಅದನ್ನು ಮುಗಿಸಿ, ಇನ್ನೂ ತಲೆ ಖಾಲಿ ಇರುವಾಗಲೇ ಓದನ್ನು ಮು೦ದುವರೆಸಿ, ಪಿಎಚ್‌ಡಿ ಮಾಡಿ. ನೋಡಿ, ಹೆಚ್ಚು ಓದದವರಿಗೆ, ಹೆಚ್ಚು ತಿಳಿದುಕೊಳ್ಳದೇ ಇರುವವರಿಗೆ, ಹೆಚ್ಚು ಸಂಶೋಧನೆ ಮಾಡದವರಿಗೆ, ಹೊಸ ವಿಷಯಗಳನ್ನ ಕಲಿತು ಬೋಧಿಸದವರಿಗೆ, ಹೆಚ್ಚು ಹೆಚ್ಚು ಬರೆಯದವರಿಗೆ- ಇಂಥವರಿಗೆಲ್ಲ ಈ ಅಧ್ಯಾಪಕ ವೃತ್ತಿಯಲ್ಲಿ ಉಳಿಗಾಲವಿಲ್ಲ. ನಿಂತ ನೀರಾಗಿ ಉಳಿದುಬಿಟ್ಟ, ಅಯ್ಯೋ ವಯಸ್ಸಾಯಿತೆಂದು ಕೈಕೈ ಹಿಸುಕಿಕೊಳ್ಳುವ, ಈಗ ನಿಮ್ಮ ಮುಂದೆ ಇರುವ ಎಷ್ಟೊಂದು ಜನ ಬುದ್ಧಿವಂತರನ್ನ ನೀವು ನೋಡಿಲ್ಲ? ನಿಮಗೂ ಹಾಗೆ ಆಗಬಾರದು. ಹೋಗಿ, ಬೇಗ ಎಲ್ಲಾದರೂ ಒಳ್ಳೆಯ ಕಾಲೇಜಿಗೆ ಸೇರಿಕೊ೦ಡು, ಎಂ.ಇ. ಮುಗಿಸಿ ಬನ್ನಿ''- ಎಂದು ಆಗಾಗ್ಗೆ ಒತ್ತಾಯಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್‌ಕಲ್‌ನಲ್ಲಿದ್ದ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್ (ಶ್ರೀನಿವಾಸನಗರದ ಸ್ವಾಯತ್ತತೆ ಪಡೆದಿರುವ ಆ ಪ್ರಖ್ಯಾತ ಇಂಜನಿಯರಿಂಗ್ ಶಿಕ್ಷಣ ಸಂಸ್ಥೆಗೆ ಈಗ ಬೇರೊಂದು ಹೆಸರು)ನಲ್ಲಿ ಆಗ ತಾನೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇಂಡಸ್ಟ್ರಿಯಲ್ ಸ್ಟ್ರಕ್ಚರ್‌ಸ್ ಮತ್ತು ಮೆರೈನ್ ಸ್ಟ್ರಕ್ಚರ್‍ಸ್ ವಿಭಾಗದಲ್ಲಿ ಎಂ.ಟೆಕ್. ಕೋರ್ಸ್‌ಗಳನ್ನು ಪ್ರಾರಂಭಿಸುವುದಾಗಿ ಪತ್ರಿಕೆಗಳಲ್ಲಿ ಒಂದು ದಿನ ಸುದ್ದಿ ಬಂತು. ಅರ್ಹರಾದ ಬಿ.ಇ. ಓದಿದ ವಿದ್ಯಾರ್ಥಿಗಳ ಜೊತೆಜೊತೆಗೆ, ಈಗಾಗಲೇ ಇಂಜನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಮೇಷ್ಟರುಗಳಿಗೂ ಆದ್ಯತೆ ಕೊಡುವುದಾಗಿ ಪ್ರಕಟಣೆ ತಿಳಿಸಿತ್ತು. ಅದನ್ನು ನಾನೂ ಓದಿದ್ದೆ. ಒಂದು ದಿನ ಪ್ರೊ| ವೆಂಕಟೇಶನ್‌ರವರು ತಮ್ಮ ಪ್ರಾಧ್ಯಾಪಕರ ಕೊಠಡಿಗೆ ನನ್ನನ್ನು ಕರೆದು, ಹರಿಹರೇಶ್ವರ್, ಈ ಪ್ರಕಟಣೆಯನ್ನ ನೋಡಿದಿರಾ? ನಿಮಗಾಗಿಯೇ ಹೇಳಿ ಮಾಡಿಸಿದ ಹಾಗೆ ಇದು ಇದೆ. ನೀವು ಹೋಗಿ ಸೇರಿಕೊಳ್ಳಿ. ಎರಡು ವರ್ಷ ಕಾಲ ನಿಮಗೆ ರಜಾ ಸಿಗುವ ಹಾಗೆ ನಾನು ಶಿಫಾರಸ್ಸು ಮಾಡುತ್ತೇನೆ. ಕಾಲೇಜಿನವರು ಸಂಬಳ ರಹಿತ ರಜಾ ಕೊಡಬಹುದು ಅಷ್ಟೆ. ಈ ಕಾಲೇಜಿನ ಆಡಳಿತವರ್ಗದವರಿಂದ ನಿಮಗೆ ಇನ್ನೇನಾದರೂ ಸಹಾಯ ಸಿಕ್ಕೀತು- ಅಂತ ನಿರೀಕ್ಷೆ ಇಟ್ಕೋಬೇಡಿ; ಆದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಲೂ ಬೇಡಿ. ಇವತ್ತೇ ಅರ್ಜಿ ಗುಜರಾಯಿಸಿರಿ. ನೀವು ಸೆಲೆಕ್ಟ್ ಆಗೇ ಆಗುತ್ತೀರಿ. ಎಂಟೆಕ್ ಓದಿ ಬನ್ನಿ''- ಅಂತ ಪ್ರೊ| ವೆಂಕಟೇಶನ್ ಪುಸಲಾಯಿಸಿದರು.

ನೀವು ಹೇಳೋದೇನೋ ನನ್ನ ಒಳ್ಳೆಯದಕ್ಕೇ ಸಾರ್. ಆದರೆ, ನಾನು ತುಂಬಾ ಕಷ್ಟದಲ್ಲಿದ್ದೀನಿ. ಮನೆಯಲ್ಲಿ ಹಣಕಾಸಿನ ತಾಪತ್ರಯ ಇದೆ. ಅಪ್ಲಿಕೇಷನ್ ಫೀ ಕಟ್ಟೋವಷ್ಟು ಹಣಾ ಸಹ ಈಗ ನನ್ನ ಹತ್ರ ಇಲ್ಲ. ಮುಂದಿನ ಶುಕ್ರವಾರ ಮೂವತ್ತನೇ ತಾರೀಖೇ ಅರ್ಜಿ ಗುಜರಾಯಿಸೋಕ್ಕೆ ಕೊನೇ ದಿನ. ಈ ಬಾರಿ ಆಗೋದಿಲ್ಲ. ನೋಡೋಣ, ಮುಂದಿನ ವರ್ಷ ಹೀಗೆ ಎಲ್ಲಾದರೂ ನನ್ನಂಥ ಬಿಇನಲ್ಲಿ ಸೆಕೆಂಡ್ ಕ್ಲಾಸ್ ಪಾಸಾದವರಿಗೆ ಅವಕಾಶ ಸಿಗೋ ಕಡೆ ಹೋಗಿ ಸೇರಿಕೊಳ್ತೀನಿ.'' ನನ್ನ ಮಾತು ಕೇಳಿ ಪ್ರೊ| ವೆಂಕಟೇಶನ್ ಕೆಲವು ನಿಮಿಷಗಳ ಕಾಲ ಸುಮ್ಮನಿದ್ದು ನನ್ನ ಮುಖವನ್ನೇ ನೋಡ್ತಾ ಇದ್ದರು. ಆಮೇಲೆ, ಅವರು ಕುರ್ಚಿಯ ಮೇಲೆ ಇಟ್ಟುಕೊಂಡಿದ್ದ ತಮ್ಮ ಕೈಗಳನ್ನು ಎತ್ತಿ ಮೇಜಿನ ಮೇಲಿಟ್ಟರು. ತಮ್ಮ ಎಡಗೈಯ ಬೆರಳಲ್ಲಿದ್ದ ಉಂಗರವನ್ನ ಮೆಲ್ಲನೆ ಬಲಗೈಯಿಂದ ತೆಗೆದು ಟೇಬಲಿನ ಮೇಲೆ ಇಟ್ಟರು. ಹೇಳಿದರು: ಹರಿ, ನಿಮ್ಮ ಹಾಗೆ ನನಗೂ ದುಡ್ಡಿನ ತಾಪತ್ರಯ ಇದ್ದೇ ಇದೆ. ಈಗ ನಿಮಗೆ ಕೊಡಲು ನನ್ನ ಹತ್ತಿರವೂ ಸಹ ಹಣ ಇಲ್ಲ. ತಗೊಳ್ಳಿ, ಈ ನನ್ನ ಉಂಗುರಾನ. ಇದನ್ನ ನೀವು ಮಾರಿ, ಬರೋ ಹಣದಲ್ಲಿ ನಿಮ್ಮ ಅಪ್ಲಿಕೇಷನ್ ಫೀಗೆ ಉಪಯೋಗಿಸಿಕೊಳ್ಳಿ. ಉಳಿದ ಹಣಾನ, ನೀವು ಅಲ್ಲಿಗೆ ಹೋದ ಕೂಡಲೇ ಖರ್ಚುವೆಚ್ಚಕ್ಕೆ ಸ್ವಲ್ಪ ಹಣ ಬೇಕಾಗುತ್ತಲ್ಲ, ಆದಕ್ಕಾಗಿ ಉಪಯೋಗಿಸಿಕೊಳ್ಳಿ. ನನಗೆ ಗೊತ್ತು, ನೀವು ಬೇಡ, ಬೇಡ' ಅಂತೀರಿ- ಅಂತ. ಇದೇನು ದೊಡ್ಡ ಸಹಾಯ ಅಲ್ಲ, ಹೀಗೆ ನನ್ನ ಹತ್ತಿರ ಹಣ ತೆಗೆದುಕೊಳ್ಳೋದಕ್ಕೆ ನಿಮಗೆ ಮುಜುಗರ ಆಗುತ್ತೆ ಅನ್ನೋದಾದರೆ, ಒ೦ದು ಕೆಲಸ ಮಾಡಿ: ನೀವು ಹೋಗಿ ಎಂ.ಟೆಕ್ ಮುಗಿಸಿಕೊಂಡು, ಕೆಲಸಕ್ಕೆ ಸೇರಿ ಮೊದಲ ಸಂಬಳ ಬರುತ್ತಲ್ಲ, ಆವಾಗ ಬೇಕಾದರೆ ನನಗೆ ಹಿಂತಿರುಗಿಸಿರಿ. ಅದೂ ಬೇಡ, ಆ ಸಮಯದಲ್ಲಿ ಈಗ ನಿಮಗಿರುವ ಹಾಗೆ ಇನ್ಯಾರಿಗಾದರೂ ಅವಶ್ಯಕತೆ ತುಂಬಾ ಬಿದ್ದಿದೆ- ಅಂತ ಅನ್ನಿಸುತ್ತಲ್ಲ, ಅಂಥವರಿಗೆ ನೀವೂ ನಿಮ್ಮ ಕೈಲಾದಷ್ಟು ನೆರವು ನೀಡಿ. ಈ ಉಂಗುರ ಏನು ನಾನು ಹಾಕ್ಕೋಂಡ್ರ್ರೂ ನಡೆಯುತ್ತೆ, ಹಾಕ್ಕೊಳ್ಳದಿದ್ರೂ ನಡೆಯುತ್ತೆ. ಈ ಮದುವೆ ಉಂಗುರದಿಂದ, ಇಷ್ಟು ಸ್ವಲ್ಪವಾದರೂ ಯಾರೋ ಒಬ್ಬರ ಓದಿಗೆ ಸಹಾಯವಾಯಿತು- ಅನ್ನೋ ಸಮಾಧಾನವಾದರೂ ನನಗಿರುತ್ತೆ. ಇನ್ನೊಂದು ಮಾತು: ಮದುವೆ ಉಂಗರ ಅಂದ ತಕ್ಷಣ, ನನ್ನ ಹೆಂಡತೀಗೆ ಹೀಗೆ ಕೊಟ್ಟದುದರಿಂದ ಬೇಜಾರಾಗುತ್ತೆ ಅಂದುಕೊಳ್ಳ ಬೇಡಿ, ಅವಳಿಗೆ ಇದರಿಂದ ಬೇಜಾರೇನೂ ಆಗೋಲ್ಲ, ಬದಲು ನನಗಿಂತ ಅವಳಿಗೇ ಹೆಚ್ಚು ಖುಷಿ ಆಗುತ್ತೆ ಅಂತ ನನ್ನ ಭಾವನೆ!''

ನನ್ನ ಕಣ್ಣಲ್ಲಿ ನೀರು ಬಂತು, ಬಾಯಲ್ಲಿ ಮಾತೇ ಹೊರಡದ ಹಾಗೆ ಆಯಿತು. ಪ್ರೊ| ವೆಂಕಟೇಶನ್ ಅವರ ಉಂಗುರವನ್ನ ನಾನು ತೆಗೆದುಕೊಳ್ಳಲಿಲ್ಲ. ಬೇರೆ ಹೇಗೋ ಹಣ ಹೊಂದಿಸಿಕೊಂಡೆ. ಅರ್ಜಿ ಗುಜರಾಯಿಸಿದೆ. ಸೀಟ್ ಸಿಕ್ಕಿತು. ಎಂ.ಟೆಕ್‌ಗೆ ಹೋಗಿ ಸೇರಿಕೊಂಡೆ. ಕಷ್ಟಪಟ್ಟು ಓದಿದೆ, ಒಳ್ಳೆಯ ರ್‍ಯಾ೦ಕ್ ಗಿಟ್ಟಿಸಿಕೊಂಡೇ ಹಿಂತಿರುಗಿದೆ. ಆ ವೇಳೆಗೆ ನಮ್ಮ ಕಾಲೇಜಿನಲ್ಲಿ ಅಲ್ಲೋಲ-ಕಲ್ಲೋಲವಾಗಿತ್ತು. ಆಡಳಿತ-ಅಧ್ಯಾಪಕವರ್ಗದ ಸೆಣೆಸಾಟ ತಾರಕಕ್ಕೇರಿತ್ತು. ಎಲ್ಲ ವಿಭಾಗಗಳೂ ಬುಡಮೇಲಾಗಿದ್ದವು. ರಜೆಯ ಮೇಲೆ ಹೋಗಿದ್ದೆನಾದರೂ, ಮನೆಗೆ ಮರಳಿದ ಮಗನಿಗೆ ಸ್ವಾಗತದ ಕಹಳೆ ಹರೆ ಕೊಂಬುಗಳು ಮೊಳಗಲಿಲ್ಲ; ನಾಡ ಕುಳಗಳು ಕೂಡಿ ಮನೆಯೊಳಗೆ ಕರೆದೊಯ್ಯಲಿಲ್ಲ; ಬರಮಾಡಿಕೊಳ್ಳಲು ಹಾಸಿರುತ್ತಾರೆಂಬ ಕನಸಿನ ರತ್ನಗಂಬಳಿ ಹರಿದು ಚಿಂದಿಚಿಂದಿಯಾಗಿತ್ತು; ಹತ್ತಿ ಕೂರುತ್ತೇನೆಂದುಕೊಂಡ ಮಣೆ ಮುರಿದು ಚೂರುಚೂರಾಗಿತ್ತು. ನನ್ನ ಪಾಲಿಗೆ ಕಾಲೇಜಿನ ಬಾಗಿಲು ಮುಚ್ಚಿತ್ತು!

ಆದರೆ ಆಕಾಶವೇನೂ ಕಳಚಿ ಬೀಳಲಿಲ್ಲ. ಇನ್ನೊ೦ದು ಕಾಲೇಜು ಕೈಬೀಸಿ ಕರೆಯಿತು; ಅತ್ತ ಹೋದೆ. ಆದರೆ, ಅಲ್ಲಿ ಇನ್ನೊಂದು ನಿರಾಶೆ ನನಗಾಗಿ ಕಾದಿತ್ತು. ಅಧ್ಯಾಪಕವರ್ಗದಲ್ಲಿ ಅಲ್ಲಿ ಖಾಲಿ ಇದ್ದದ್ದು ಒಂದೇ ಉಪನ್ಯಾಸಕರ ಸ್ಥಾನ. ಅದಕ್ಕಾಗಿ ಈಗಾಗಲೇ ಒಬ್ಬರು ಸಂದರ್ಶಕ ಪ್ರಾಧ್ಯಾಪಕರನ್ನ ನೇಮಿಸಿಕೊಂಡು ಬಿಟ್ಟಿದ್ದೇವೆ'- ಎಂದು ತಮ್ಮ ನಿಸ್ಸಹಾಯಕತೆ'ಯನ್ನು ಕಾಲೇಜಿನ ಪ್ರಾಚಾರ್ಯರು ತೋಡಿಕೊಂಡರು. ಪ್ರಿನ್ಸಿಪಾಲರ ಛೇಂಬರ್ಸ್‌ನಿಂದ ನನ್ನ ಮಾರ್ಕ್ಸ್‌ಕಾರ್ಡ್‌ಗಳು, ಶಿಫಾರಸ್ಸು ಪ್ರಶಂಸೆ ಪ್ರಶಸ್ತಿಪತ್ರಗಳ ಕಂತೆಯ ಕಟ್ಟನ್ನು ಕಟ್ಟಿಕೊಳ್ಳುತ್ತ ಇನ್ನೇನು ಹೊರಡುವದರಲ್ಲಿದ್ದೆ, ತಮ್ಮ ಏನೋ ಸ್ವಂತ ಕೆಲಸಕ್ಕಾಗಿ ದಿಢೀರನೆ ಕೊಠಡಿಯೊಳಕ್ಕೆ ಪ್ರವೇಶಿಸಿದವರು ಯಾರು ಗೊತ್ತೇ?- ಅವರೇ, ಪ್ರೊ| ವೆಂಕಟೇಶನ್! ಸಂತೋಷ ಆಶ್ಚರ್ಯಗಳಿಂದ, ಅವರನ್ನು ಹೆಸರು ಹಿಡಿದು ಕರೆದು, ನಮಸ್ಕರಿಸಿದೆ. ಹಾಗಾದರೆ ಪ್ರೊ| ವೆಂಕಟೆಶನ್ ನಿಮಗೆ ಗೊತ್ತೆ? ಆಫ್ ಕೋರ್ಸ್ ನಿಮಗೆ ಗೊತ್ತಿರಲೇಬೇಕು. ಹಿಂದೆ ನೀವು ಕೆಲಸಮಾಡುತ್ತಿದ್ದ ಕಾಲೇಜಿನಲ್ಲಿ ಹೆಡ್ ಆಫ್ ದ ಡಿಪಾರ್ಟ್‌ಮೆಂಟ್ ಆಗಿದ್ದವರು ಇವರೇ ಅಲ್ಲವೇ?''- ಎಂದು ಪ್ರಿನ್ಸಿಪಾಲರು ತಡಬಡಾಯಿಸಿದರು.

ಪರಸ್ಪರ ಯೋಗಕ್ಷೇಮ ವಿಚಾರಿಸಿದ ಮೇಲೆ, ನಾನು ಈ ಕಾಲೇಜಿನಲ್ಲಿ ಕೆಲಸ ಕೇಳಲು ಬಂದು ನಿರಾಶನಾಗಿ ಹಿಂತಿರುಗುತ್ತಿರುವ ಸಮಾಚಾರ ಹೊರಬಿತ್ತು. ಎಲ್ಲಾ ಕೇಳಿದ ಮೇಲೆ, ಪ್ರೊ| ವೆಂಕಟೇಶನ್‌ರವರು ತಮ್ಮ ಸ್ನೇಹಿತರಾಗಿದ್ದ ಪ್ರಿನ್ಸಿಪಾಲರಿಗೆ ಏನು ಹೇಳಿದರು ಅಂದರೆ: ಇಲ್ಲಿ ಒಬ್ಬರು ಹೊಸಬರಿಗೆ ಮಾತ್ರ ಕೆಲಸ ಖಾಲಿ ಇದೆ ಎಂದಾದರೆ, ಅದನ್ನ ಹರಿಹರೇಶ್ವರರಿಗೇ ಕೊಟ್ಟು ಬಿಡಿ. ನನಗಿಂತ ಇನ್ನೇನು ಮದುವೆಯಾಗಲಿರುವ ಇವರಿಗೇ ಆ ಕೆಲಸ ಬಹಳ ಅವಶ್ಯಕವಾಗಿದೆ ಅಂತ ನನಗನ್ನಿಸುತ್ತೆ. ನಾನು ಬೇರೆ ಎಲ್ಲಾದರೂ ಕೆಲಸ ಹುಡುಕಿಕೊಳ್ಳುತ್ತೇನೆ. ಸಿಗದಿದ್ದರೂ ನನಗೇನೂ ಯೋಚನೆಯಿಲ್ಲ. ಹರಿಗೆ ಈ ಕೆಲಸ ಕೊಡಿ. ನಿಮ್ಮ ಕಾಲೇಜಿಗೆ ಒಳ್ಳೇ ಹೆಸರು ತರುವ ಮೇಷ್ಟರು ಇವರು!'' ಅಲ್ಲಿದ್ದವರನ್ನೆಲ್ಲಾ ಪ್ರೊ| ವೆ೦ಕಟೇಶನ್ ಅವರ, ಈ ನಂಬಲಾಗದ ವರ್ತನೆ ದಂಗು ಬಡಿಸಿಬಿಟ್ಟಿತು. ಪ್ರಿನ್ಸಿಪಾಲರು ನಮ್ಮಿಬ್ಬರನ್ನೂ ದುರುಗುಟ್ಟಿಕೊಂಡು ನೋಡುತ್ತ ಕೆಲಕಾಲ ಸುಮ್ಮನೆ ಕುಳಿತುಬಿಟ್ಟರು.

ಸ್ವಲ್ಪ ದಿನಗಳಾದ ಮೇಲೆ ನನಗೆ ಆ ಕಾಲೇಜಿನಲ್ಲಿ ಲೆಕ್ಚರರ್ ಕೆಲಸಕ್ಕೆ ಆರ್ಡರ್ ಬಂತು. ಪ್ರೊ|ವೆಂಕಟೇಶನ್ ಅವರನ್ನೂ ಅಲ್ಲಿಯೇ ಸಂದರ್ಶಕ ಪ್ರಾಧ್ಯಾಪಕರಾಗಿ ಉಳಿಸಿಕೊಂಡರು. ಮತ್ತೆ ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಕೆಲಸ ಮಾಡುವಂತಾಯಿತು. ಟೆಹರಾನ್ ಇರಾನ್‌ಗೆ ಹೋಗುವವರೆಗೂ ಆರು ವರ್ಷ ನಾನು ಆ ಕಾಲೇಜಿನಲ್ಲಿ ಮೇಷ್ಟರಾಗಿದ್ದೆ. ಪ್ರೊ| ವೆಂಕಟೇಶನ್ ಅಂಥವರೂ ಇದ್ದರು, ಇದ್ದಾರೆ- ಎಂದರೆ ನೀವು ನಂಬುತ್ತೀರಾ? ಅವರ-ನನ್ನ ಒಡನಾಟದ ಕತೆ ಇಲ್ಲಿಗೇ ಮುಗಿಯಿತೆಂದಲ್ಲ; ಇನ್ನೂ ಇದೆ. ಇರಲಿ, ಹೀಗೆಯೇ ನಿಮ್ಮ ಜೀವನದಲ್ಲೂ ಯಾರೋ ಒಬ್ಬ ಗೆಳೆಯ, ದಾರಿತೋರುಗ, ಸಂತನನ್ನು ನೀವೂ ಭೇಟಿಯಾಗಿರಲೇ ಬೇಕಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X