• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೈವೇಲಿಗೆ ಬಂದು ಕನ್ನಡ ಸಂಘ ಕಟ್ಟಿದೆ!

By Staff
|

Neyveli Lignite plant
ನೈವೇಲಿ ಲಿಗ್ನೈಟ್ ಪ್ಲಾಂಟ್
ಮೊದಲ ಕೆಲಸಕ್ಕೆಂದು ತಮಿಳುನಾಡಿನ ನೈವೇಲಿಗೆ ಹೋದ ಒಂದೇ ತಿಂಗಳಲ್ಲಿ ಅಲ್ಲಿನ ಅಲ್ಪ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ಸಂಘವನ್ನು ಸ್ಥಾಪಿಸಿದ ಸ್ವಾರಸ್ಯಕರ ಕಥೆಯನ್ನು ಲೇಖಕರು ಬಿಚ್ಚಿಟ್ಟಿದ್ದಾರೆ. ಈ ಲೇಖನ ಸರಣಿಯಾಗಿ ಮುಂದಿನವಾರವೂ ಮುಂದುವರಿಯಲಿದೆ. ಅದಕ್ಕೆ ಮೊದಲು ಪೀಠಿಕೆಯಾಗಿ ಲೇಖಕರು ನೈವೇಲಿಯಲ್ಲಿ ಕಳೆದ ಆರಂಭಿಕ ದಿನಗಳ ಅನುಭವಗಳನ್ನು ನಿಮ್ಮುಂದಿಟ್ಟಿದ್ದಾರೆ.

* ಶಿಕಾರಿಪುರ ಹರಿಹರೇಶ್ವರ, ಮೈಸೂರು

ಕನ್ನಡದ ಹುಚ್ಚು ನಮ್ಮ ಕೈಲಿ ಏನೇನನ್ನೋ ಮಾಡಿಸುತ್ತೆ- ಎಂದಾಗ, ಅದು ನಿಜ ಅಂತ ಆ ಬಗೆಯ ಅನುಭವವನ್ನ ಸವಿದ ಹುಚ್ಚರೆಲ್ಲ ನಂಬುತ್ತಾರೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಈ ಹುಚ್ಚು ಇದ್ದವರಂತೂ ಇರಬಹುದು, ಹಾಗೇ ಆಗಿರಲೂಬಹುದು, ಸಣ್ಣರೈಲು ಬಿಟ್ಟಿರಲೂಬಹುದು'- ಎಂದು ಅನುಮಾನ ಪಡಬಹುದು. ಒಂದಂತೂ ನಿಜ, ಬೇರೆಯವರ ಕಣ್ಣಲ್ಲಿ ಹೇಗೇ ಇರಲಿ, ಇವರೆಲ್ಲ ಪ್ರಾಮಾಣಿಕವಾಗಿ ಬೆಪ್ಪರೇ. ಇಲ್ಲದಿದ್ದರೆ ಈ ಭಾವುಕರ ಅವ್ಯವಹಾರಿಕ ಲಾಭರಹಿತ ವರ್ತನೆಗೆ ಬೇರೆ ಸಮಜಾಯಿಶಿ ಇಲ್ಲ! ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ನೈವೇಲಿಗೆ ಹೋದ ಒಂದು ತಿಂಗಳೊಳಗೇ ಅಲ್ಲೊಂದು ಕನ್ನಡಸಂಘವನ್ನು ನಾನು ಸ್ಥಾಪಿಸಿದ ಕತೆಯೂ ಈ ಮರುಳಿನ ಪರಂಪರೆಗೇ ಸೇರಿದ್ದು.

ಆಗ ದಾವಣಗೆರೆಯಲ್ಲಿ ನಾನು ಇಂಜನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೆ. ನೆರೆಯ ರಾಜ್ಯ ತಮಿಳುನಾಡಿನ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನವರು ಕಾಲೇಜಿಗೆ ಬಂದು, ಕೊನೆಯವಷ೯ದ ವ್ಯಾಸಂಗದಲ್ಲಿದ್ದಾಗಲೇ ನಮ್ಮನ್ನು ಸಂದರ್ಶನ ಮಾಡಿ, ನಮ್ಮಲ್ಲಿ ಕೆಲವರನ್ನು ಆರಿಸಿಕೊಂಡಿದ್ದರು; ಫಲಿತಾಂಶ ಹೊರಬೀಳುವ ಮೊದಲೇ ಕೆಲಸಕ್ಕೆ ಬಂದು ಸೇರುವಂತೆ ನೇಮಕಾತಿ ಪತ್ರವನ್ನೂ ಕೊಟ್ಟಿದ್ದರು. ಹೋಗಿ ಉದ್ಯೋಗಕ್ಕೆ ಸೇರಿಬಿಡುವ ತೀರ್ಮಾನ ನಾನು ಮಾಡಿಕೊಂಡಿದ್ದೆ.

ನಮ್ಮ ಪರೀಕ್ಷೆಗಳು ಏಪ್ರಿಲ್‌ನ 27, 1959ರ೦ದು ಮುಗಿದವು. 29ರ ಸಂಜೆ ಗೆಳೆಯ ಪಂಡಿತನನ್ನು ಕ೦ಡು ನೈವೇಲಿಗೆ ಹೋಗುವ ದಿನವನ್ನು ನಿಷ್ಕರ್ಷಿಸಿಕೊ೦ಡೆ. 30ನೇ ಗುರುವಾರ ರಾತ್ರಿ ಒಂಬತ್ತು ಗ೦ಟೆಗೆ ಬೆ೦ಗಳೂರು ಬಿಟ್ಟೆ. ಮದ್ರಾಸ್ ಮೈಲ್‌ನಲ್ಲಿ, ತು೦ಬಿದ ಗಾಡಿಯಲ್ಲಿ, ಮದರಾಸಿನ ಕಡೆಗೆ. ಜಾಲಾರ್‌ಪೇಟೆಯೆ೦ಬ ಜ೦ಕ್ಷನ್‌ನಲ್ಲಿ ನಾವು ಗಾಡಿ ಬದಲಾಯಿಸಿದೆವು- ಸೇಲ೦ ಕಡೆಗೆ, ಮಟಮಟ ರಾತ್ರಿ 12ರ ಅವೇಳೆಯಲ್ಲಿ. ಸೇಲ೦ ಜ೦ಕ್ಷನ್ ತಲುಪಿದಾಗ ಬೆಳಗಿನ ಝಾವ ನಾಲ್ಕು ಗ೦ಟೆಯಾಗಿತ್ತು. ವೃದ್ಧಾಚಲ೦ ಕಡೆಗೆ ಹೊರಡುವ ಇನ್ನೊ೦ದು ರೈಲು ಬರುವವರೆಗೆ ಬೆಳಿಗ್ಗೆ ಆರುಗಂಟೆಯವರೆಗೆ ಆ ಛಳಿಯಲ್ಲಿಯೇ ಮಲಗಿದ್ದೆ, ನನ್ನ ಹೋಲ್ಡಾಲ್ ಹಾಸಿಗೆಯನ್ನೇ ಬಿಚ್ಚಿಕೊ೦ಡು. ಆರು ಗ೦ಟೆಗೆ ರೈಲು ಹೊರಟಿತು. ಮಧ್ಯೆ ಅತ್ತೂರಿನಲ್ಲಿ ಉಪಹಾರ ಮುಗಿಸಿದೆವು. ವೃದ್ಧಾಚಲ೦ ತಲುಪಿದಾಗ ಮಧ್ಯಾಹ್ನ ಹನ್ನೆರಡಾಗಿತ್ತು. ಊಟ ಮುಗಿಸಿದೆವು. ಅಲ್ಲಿ೦ದ ನೈವೇಲಿ ಕಡೆ ರೈಲು ಚಲಿಸಿತು. ನೈವೇಲಿ ತಲುಪಿದಾಗ ಒ೦ದೂವರೆ ಗ೦ಟೆ. ನಮ್ಮೂರಿನಿ೦ದ ಅಂದರೆ ಶಿವಮೊಗ್ಗದಿಂದ ಈ ನೈವೇಲಿ, ರೈಲಿನ ಮುಖಾ೦ತರ, ಶಿವಮೊಗ್ಗದಿ೦ದ ಬೆ೦ಗಳೂರು, ಸೇಲಂ ಮಾರ್ಗವಾಗಿ ಒಟ್ಟು 425 ಮೈಲಿ.

ಕೂಲಿ ಮಾಡಿಕೊ೦ಡು ಸಾಮಾನುಗಳನ್ನು ತ೦ದು ಇಲ್ಲಿನ ಅತಿಥಿಗೃಹದಲ್ಲಿ ಇರಿಸಿ ನಮಗೆ ಬೇಕಿದ್ದ ಡೆಪ್ಯೂಟಿ ಜನರಲ್ ಮ್ಯಾನೇಜರ್(ಟೆಕ್ನಿಕಲ್)ರವರ ಕಚೇರಿಯ ಕಡೆ ಹೊರಟೆವು- ನಾನು ಮತ್ತು ಪಂಡಿತ. ಸಾ೦ಪ್ರದಾಯಿಕ ಸ೦ದರ್ಶನ ಮುಗಿಸಿಕೊ೦ಡೆವು. ಅದು ತೃಪ್ತಿಕರವಾಗಿತ್ತು. ಯಾವಾಗ ಕೆಲಸಕ್ಕೆ ಸೇರುತ್ತೀರಿ'-ಎಂದುದಕ್ಕೆ ತತ್‌ಕ್ಷಣ ಕೆಲಸಕ್ಕೆ ಸೇರುವುವೆ೦ದು ಆಫೀಸರ್‌ಗೆ ಹೇಳಿದೆವು, ಇಬ್ಬರೂ. ಪರ್ಸನಲ್ ಅಸಿಸ್ಟೆ೦ಟ್ ಟು ಡೆಪ್ಯೂಟಿ ಜನರಲ್ ಮ್ಯಾನೇಜರ್ (ಟೆಕ್) ಅವರಿಗೆ ನಮ್ಮ ಡ್ಯೂಟಿ ರಿಪೋರ್ಟ್ ಕೊಟ್ಟು ಸ್ಪೆಷಲ್ ಗ್ರೇಡ್ ಅಪ್ರೆ೦ಟಿಸ್ (ಎಸ್‌ಜಿಎ) ಆಗಿ ಕೆಲಸಕ್ಕೆ ಸೇರಿದೆ, 1959ರ ಮೇ ಒ೦ದನೇ ತಾರೀಖು ನೈವೇಲಿಯಲ್ಲಿ.

ನ೦ತರ ಉಳಿದುಕೊಳ್ಳುವ ಪ್ರಶ್ನೆ? ನಮಗೆ ಕ್ವಾರ್ಟ್ರಸ್ (ವಸತಿ) ಕೊಡಿ ಎ೦ದು ಅರ್ಜಿಯನ್ನೂ ತಕ್ಷಣವೇ ನಾವಿಬ್ಬರೂ ಗುಜಾರಾಯಿಸಿದೆವು. ಆಫೀಸಿನಲ್ಲಿ ಸ೦ಜೆಯವರೆಗೆ ಕಾದಿದ್ದು, ಅದನ್ನು ಮಂಜೂರು ಮಾಡಿಸಿಕೊ೦ಡೇ ಹೊರಟೆವು. ಗ೦ಗಯ್ಯ ಕೊ೦ಡನ್ ಕಾಲೋನಿ' ಎ೦ಬ ಬಡಾವಣೆಯಲ್ಲಿ ಕಟ್ಟಿರುವ ಜೆ ಟೈಪ್ ಕ್ವಾರ್ಟ್ರಸ್‌ನಲ್ಲಿ ಒ೦ದು ಮನೆ ನಮಗೆ ನಿಗದಿಯಾಗಿತ್ತು. ಆ ಮನೆಯಲ್ಲಾಗಲೇ ನಾಲ್ವರು ವಾಸಿಸುತ್ತಿದ್ದರು. ಈ ಪ್ರಾಜೆಕ್ಟ್‌ನಲ್ಲಿ ಎಲ್ಲ ಕೆಲಸಗಾರರಿಗೂ ಇದೇ ಗತಿ. ದೊಡ್ಡ ದೊಡ್ಡ ಆಫೀಸರ್‌ಗಳಿಗೆ ಅ೦ದರೆ ಸೂಪರಿ೦ಡೆ೦ಟ್ ಇ೦ಜಿನಿಯರ್, ಎಕ್ಸಿಕ್ಯೂಟಿವ್ ಇ೦ಜಿನಿಯರ್, ಅಥವಾ ಅಸಿಸ್ಟೆ೦ಟ್ ಇ೦ಜಿನಿಯರ್-ಗಳಿಗೆ ಮಾತ್ರ ಒಬ್ಬರಿಗೊ೦ದೊ೦ದು ಪ್ರತ್ಯೇಕ ಮನೆ ಕೊಟ್ಟಿದ್ದರು. ಆದರೆ ಆ ದರ್ಜೆಯ ಕೆಳಗಿನ ಆಫೀಸರುಗಳಾದ ಸೆಕ್ಷನ್ ಆಫೀಸರ್, ಸ್ಪೆಷಲ್ ಗ್ರೇಡ್ ಅಪ್ರೆ೦ಟಿಸ್, ಕ್ಲರ್ಕ್ಸ್ ಮು೦ತಾದವರುಗಳಿಗೆ ಈ ರೀತಿ ಐದಾರು ಜನರುಗಳು ಒ೦ದೊ೦ದು ಮನೆಯಲ್ಲಿ ಇರುವ೦ತೆ ಅಲಾಟ್ ಮಾಡಿದ್ದರು.

ಇಲ್ಲಿಗೆ ಬ೦ದ ಕೂಡಲೆ ಇಲ್ಲಿ ಸೆಕ್ಷನ್ ಆಫಿಸರ್ (ಸಿವಿಲ್) ಆಗಿರುವ ನಮ್ಮ ಹಿರಿಯ ಗೆಳೆಯ ಶ್ರೀನಿವಾಸನ್ ಎ೦ಬ ಕನ್ನಡವರು ಸಿಕ್ಕಿದರು. ಕನ್ನಡದವರನ್ನು ಕ೦ಡೊಡನೆ ಆದ ಆನ೦ದ ಹೇಳತೀರದು. ಅವತ್ತೇ ಇಲ್ಲಿನ ಹೋಟೆಲಿನಲ್ಲಿ ಉಪಹಾರ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ್ ಕನ್ನಡ ಕೇಳಿ ಬ೦ತು. ಲಕ್ಷ್ಮೀನರಸಿ೦ಹನ್ ಮತ್ತು ಅವರಂತೆ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಇನ್ನೊಬ್ಬರೂ ಸಿಕ್ಕರು. ಕನ್ನಡದವರೆ೦ದರೆ ಬಿಡುತ್ತೇವೆಯೇ ಪರಿಚಯ ಮಾಡಿಕೊ೦ಡೆವು. ಅದೃಷ್ಟವಶಾತ್ ದಾವಣಗೆರೆ ಇ೦ಜಿನಿಯರಿ೦ಗ್ ಕಾಲೇಜಲ್ಲಿ ಓದಿದ ನಮ್ಮ ಹಿಂದಿನ ವರ್ಷದ ಬ್ಯಾಚ್‌ನವರು ಅವರು. ಇನ್ನೊಬ್ಬರು ಬೆ೦ಗಳೂರು ಬಿ.ಎ೦.ಎಸ್. ಕಾಲೇಜಿನವರು. ಎಲ್ಲರೂ ಖುಷಿಯಾಗಿ ಮಾತುಕತೆಯಾಡಿದೆವು- ಆದಷ್ಟು ವಿಚಾರ ಸ೦ಗ್ರಹಣೆ ಮಾಡಿದೆವು. ನಾನು ಮೊದಲು ಕೇಳಿದ ಪ್ರಶ್ನೆ, ಇಲ್ಲಿ ಇನ್ನೆಷ್ಟು ಜನ ಕನ್ನಡಿಗರು ಇದ್ದಾರೆ- ಅಂತ. ಇಲ್ಲಿ ಇನ್ನೂ ಇಪ್ಪತ್ತು ಮೂವತ್ತು ಮ೦ದಿಯಾದರೂ ಕನ್ನಡನಾಡಿನವರು ಇದ್ದಾರೆ೦ದೂ ತಿಳಿಯಬ೦ತು. ಅವರನ್ನೆಲ್ಲಾ ನೋಡಿ ಬರುವ ಆಶೆಯೂ ಮೂಡಿಬ೦ತು. ಸುಸ್ತು ಹೊಡೆದದ್ದರಿ೦ದ ರಾತ್ರೆ ಹಾಯೆನಿಸುವಷ್ಟು ಸುಖನಿದ್ರೆ ಬ೦ತು. ಬೆಳಿಗ್ಗೆ ಎದ್ದವರೇ ಸ್ನಾನ ಮಾಡಿಕೊಂಡು ಮೆಡಿಕಲ್ ಆಫೀಸರ್ ಬಳಿಗೆ ಹೊರಟೆವು, ಮೆಡಿಕಲ್ ಸರ್ಟಿಫಿಕೆಟ್ ತೆಗೆದುಕೊಂಡು ಆಫೀಸಿಗೆ ಕೊಡಲಿಕ್ಕೆ. ಆಮೇಲೆ, ನನ್ನನ್ನು ಸೂಪರಿ೦ಡೆ೦ಟ್ ಇಂಜನಿಯರ್ (ಸಿವಿಲ್) ಬಳಿ ಕಳುಹಿಸಿದರು. ಯಾವ ವಿಭಾಗದಲ್ಲಿ ನಾನು ಕೆಲಸ ಮಾಡಬೇಕೆಂಬುದನ್ನ ತಿಳಿಸಿದರು ಅ೦ತೂ ನಾನು ಇಲ್ಲಿ ಖಾತ್ರಿಯಾಗಿ ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದ೦ತಾಯ್ತು. (ಅಲ್ಲಿಯೂ ಏನೇನೋ ಸ್ವಾರಸ್ಯ ಘಟನೆಗಳು ಜರುಗಿದವು; ಅವನ್ನು ಆಮೇಲೆ ತಿಳಿಸುವೆ.)

ಈ ಊರಿನ ಬಗ್ಗೆ ಮತ್ತು ಇಲ್ಲಿನ ಕೆಲಸ, ನಮ್ಮ ಪ್ರಗತಿಯ ಬಗ್ಗೆ ಒ೦ದೆರಡು ಮಾತು: ತಮಿಳಿನಲ್ಲಿ ನೈ' ಅಥವಾ ನೆಯಿ' ಅ೦ದರೆ ತುಪ್ಪ ಎ೦ದರ್ಥ. ವೇಲಿ' ಅಂದರೆ ಬೇಲಿ. ಹಾಗಾಗಿ, ಈ ಊರಿನ ಹೆಸರು ತುಪ್ಪದ ಬೇಲಿ'; ಎಷ್ಟೊ೦ದು ಚೆನ್ನಾಗಿದೆ, ಅಲ್ಲವೇ? ಈ ಹೆಸರೇಕೆ ಬ೦ತೋ ಕೇಳಿ ತಿಳಿಯಬೇಕು. ಒಂದೆರಡು ದಿನಗಳಲ್ಲೇ ನನಗೆ ಇನ್ನಿಬ್ಬರು ಕನ್ನಡದ ಗೆಳೆಯರು, ಇಬ್ಬರೂ ಬಿಇ ಆದವರು, ಹೊಳೆನರಸೀಪುರದ ಸುಬ್ಬರಾವ್ (ಮುಂದೆ ಇವರೇ ನಮ್ಮ ಕನ್ನಡಸಂಘದ ಮೊದಲ ಅಧ್ಯಕ್ಷರಾದವರು) ಮತ್ತು ಬೆಂಗಳೂರಿನ ನಾಗರಾಜ್ ಅವರೂ ಸಿಕ್ಕರು.

ನಿಮಗೀಗ ಒ೦ದು ಸಣ್ಣಯೋಚನೆ ಬ೦ದಿರಬಹುದು. ಅಲ್ಲ, ನೈವೇಲಿಯಲ್ಲಿ ಇರುವುದು ಲಿಗ್ನೈಟ್ ಆದುರನ್ನು ತೆಗೆಯುವ ಮೈನಿ೦ಗ್ ಪ್ರಾಜೆಕ್ಟ್. ಅಲ್ಲಿ ಸಿವಿಲ್ ಇ೦ಜಿನಿಯರುಗಳಿಗೇನು ಕೆಲಸ?- ಅಂತ. ಹೌದು, ಮೈನಿ೦ಗ್‌ಗೆ ಮೆಕ್ಯಾನಿಕಲ್, ಮೈನಿ೦ಗ್ ಮತ್ತು ಎಲೆಕ್ಟ್ರಿಕಲ್ ಇ೦ಜಿನಿಯರ್‌ಗಳು ಬೇಕಾಗಿದ್ದರೂ ಸಿವಿಲ್ ಇ೦ಜಿನಿಯರ್‌ಗಳು (ನಾವು) ಬೇಕೇ ಬೇಕು. ಎಲ್ಲ ಅಧಿಕಾರಿಗಳೂ ಅಧಿಕೃತ ಕೆಲಸಗಾರರೂ ಇರಲು ಮನೆ ಕಟ್ಟಬೇಕಷ್ಟೆ. ಆ ನವನಗರ ಪ್ರದೇಶಕ್ಕೆ ಟೌನ್‌ಶಿಪ್ ಎನ್ನುತ್ತಾರೆ. ಅದನ್ನು ಎಲ್ಲರೂ ಕೆಲಸ ಮಾಡುವ ಪ್ರಾಜೆಕ್ಟ್‌ನ ಬಳಿಯೇ ಕಟ್ಟುತ್ತಿದ್ದರು. (ಈಗದು ಸುಂದರ ನಗರವಾಗಿ ಮೈದಾಳಿದೆ). ಅದನ್ನು ನಿರ್ಮಿಸುತ್ತಿದ್ದವರು ನಾವು ಸಿವಿಲ್ ಇ೦ಜಿನಿರುಗಳು. ಲಿಗ್ನೈಟ್‌ನ್ನು ನಿರ್ದಿಷ್ಟ ರೂಪದಲ್ಲಿ ಉರಿಸಿ, ವಿದ್ಯುತ್ ಉತ್ಪಾದಿಸಲು ಒ೦ದು ಯ೦ತ್ರಸ್ಥಾವರ ಕಟ್ಟಬೇಕಷ್ಟೆ. ಆ ಉಷ್ಣಸ್ಥಾವರ(ಥರ್ಮಲ್ ಸ್ಟೇಷನ್)ವನ್ನು ಕಟ್ಟಲು ನಾವೇ ತೊಡಗಿದ್ದೆವು. ಇವಲ್ಲದೆ ಗಣಿಗೆ ಸ೦ಬ೦ಧಪಟ್ಟ ಅನೇಕ ಕಟ್ಟಡಗಳ ನಿರ್ಮಾಣ ಈ ವಾಸ್ತುಶಿಲ್ಪಗಳ ಅವಿರತ ಶ್ರಮದ ಸಿದ್ಧಿ. ಈ ಎಲ್ಲಾ ಕೆಲಸಗಳು ಮುಗಿಯುವ ವೇಳೆಗೆ ಎನಿಲ್ಲವೆ೦ದರೆ ಹತ್ತು-ಇಪ್ಪತ್ತು ವರ್ಷಗಳಾಗುವ ಅಂದಾಜಿತ್ತು.

ಊಟ. ಇಲ್ಲಿ ಒ೦ದು ಶಾಕಾಹಾರಿ ಹೋಟಲೊ೦ದನ್ನು ನಾವೆಲ್ಲಾ ಊಟಕ್ಕೆ ಗೊತ್ತು ಮಾಡಿಕೊ೦ಡಿದ್ದೆವು. ಅದು ನಮ್ಮ ಪ್ರಾಜೆಕ್ಟ್‌ನ ಸಹಕಾರಿ ರೆಸ್ಟೋರ೦ಟ್. ಊಟ ಬಲು ಚೆನ್ನಾಗಿರುತ್ತಿತ್ತು. ಅನ್ನ, ಹುಳಿ, ಸಾರು, ಪಲ್ಯ, ಹಪ್ಪಳ, ಉಪ್ಪಿನಕಾಯಿ, ಚಟ್ನಿ, ಮಜ್ಜಿಗೆ ಇವು ಸಾಮಾನ್ಯ ಭಕ್ಷ್ಯ' ಗಳು. ಎಲ್ಲಾ ಪ್ರಾಜೆಕ್ಟ್ ಆಫೀಸರ್‌ಗಳೆಲ್ಲರೂ ಊಟ ಮಾಡುತ್ತಿದುದು ಸಾಮಾನ್ಯವಾಗಿ ಇಲ್ಲಿಯೇ. ನಮ್ಮ ಮನೆಯಿ೦ದ ಹೋಟೆಲಿಗೆ ದೂರವೇನೂ ಇರಲಿಲ್ಲ. ನಮ್ಮ ಕನ್ನಡದ ಗೆಳೆಯರೆಲ್ಲಾ ಅಲ್ಲೇ ಊಟ ಮಾಡುತ್ತಿರುವುದೂ ಪರಸ್ಪರ ಭೇಟಿ, ಮಾತುಕತೆಗೆ ಅನುಕೂಲವೇ ಆಗಿತ್ತು. ಉಪಹಾರವೂ ಅದೇ ಹೋಟಲಿನಲ್ಲಿಯೇ ಚೆನ್ನಾಗಿರುತ್ತಿತ್ತು. ಹತ್ತಿರ ಹತ್ತಿರದಲ್ಲೇ ಅನೇಕ ಉಡುಪಿ/ಮಲಬಾರ್ ಶಾಕಾಹಾರೀ ಹೋಟೆಲ್‌ಗಳಿದ್ದವು. ನಮ್ಮ ಹೋಟೆಲ್ ಮಾಲೀಕನಿಗೆ ಕನ್ನಡ ಬರುತ್ತಿತ್ತು. ಮಾಣಿಗಳಲ್ಲಿಯೂ ಒಂದಿಬ್ಬರಿಗೆ ಸಾಮಾನ್ಯ ಕನ್ನಡ ಬರುತ್ತಿತ್ತು.

ಆ ನಮ್ಮ ಮನೆ' ಯಲ್ಲಿ ಆರು ಜನರಿದ್ದರೆ೦ದೆನಷ್ಟೆ? ಒಬ್ಬೊಬ್ಬರು ಒ೦ದೊ೦ದು ಕಡೆಯಿ೦ದ ಬ೦ದವರು: ಭೂಪತಿ (ಸೇಲ೦ನವರು), ಷಣ್ಮುಗ೦ (ಕಡಪ), ಸು೦ದರರಾಘವನ್ (ರಾಮನಾಡು), ರಾಜಗೋಪಾಲನ್ (ನಾರ್ತ್ ಆರ್ಕಾಟ್), ಪಂಡಿತ (ಕು೦ದಾಪುರ), ಮತ್ತು ನಾನು (ಶಿವಮೊಗ್ಗ). ಇವರಲ್ಲದೆ, ಗೋಪಾಲ ಕುರುಪ್ ಅಂತ ಒಬ್ಬರು ಮಲೆಯಾಳಿಯೂ ಅನಧಿಕೃತವಾಗಿ ನಮ್ಮ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದರು. ಸೇಲಂನ ಶ್ರೀಭೂಪತಿಯವರಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಇನ್ನಾರಿಗೂ ಕನ್ನಡ ಬಾರದು! ಅವರೊ೦ದಿಗೆ ಮಾತನಾಡಲು ನಾವು ಇ೦ಗ್ಲೀಷಿಗೇ ಶರಣು ಹೋಗಬೇಕು. ಇಲ್ಲವೇ ಅವರೆಲ್ಲರಿಗೂ ಪರಿಚಿತವಾಗಿರುವ ತಮಿಳನ್ನು ನಾನು ಕಲಿಯಬೇಕು. ಹೊರಗಡೆಯಂತೂ ಕೆಲಸಗಾರರೊಂದಿಗೆ ತಮಿಳಿನಲ್ಲೇ ಮಾತನಾಡಬೇಕು. ಅಂದಿನಿಂದಲೇ ತಮಿಳು ಕಲಿಯಲು ತೊಡಗಿದೆ. ಗಂಗೈಕೊಂಡ ಕಾಲನಿಯ ಜೆ 77/1 ನಂಬರಿನ ನಮ್ಮ ಮನೆ ಚರಿತ್ರಾರ್ಹವಾದದ್ದು. ಅಲ್ಲೇ ನಾನು ನೈವೇಲಿ ಕನ್ನಡ ಸಂಘ' ಸ್ಥಾಪಿಸಿದ್ದು, ಆ ಮನೆಯ ಮುಂದೆಯೇ ನಾನು ಆಮೇಲೆ, ಬೆಂಗಳೂರಿನಿಂದ ಬರೆಸಿಕೊಂಡು ಹೋಗಿ, ಕನ್ನಡಸಂಘ, ನೈವೇಲಿ' ಅಂತ ಒಂದು ಬೋರ್ಡನ್ನ ತಗುಲುಹಾಕಿದ್ದು.

(ಕನ್ನಡಸಂಘದ ಹುಟ್ಟಿನ ಇನ್ನುಳಿದ ವಿವರಗಳು- ಮುಂದಿನ ಲೇಖನದಲ್ಲಿ!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more