ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈವೇಲಿಯಲ್ಲಿ ಕನ್ನಡ ಸಂಘ ಹುಟ್ಟಿತು!

By Staff
|
Google Oneindia Kannada News

ರಣರಣ ಬಿಸಿಲಿನ ನೈವೇಲಿಯಲ್ಲಿ ಕನ್ನಡಿಗರಿಗೆ ತಂಪನ್ನೀಯುವ ಕನ್ನಡ ಸಂಘ ಸ್ಥಾಪಿಸುವ ಮತ್ತು ಅದನ್ನು ಮುನ್ನಡೆಸಿಕೊಂಡು ಹೋಗುವ ಕಾರ್ಯ ಅಷ್ಟು ಸುಲಭದ್ದಾಗಿರಲಿಲ್ಲ. ಎಲ್ಲೆಲ್ಲಿಯೂ ಇರುವಂತೆ ಅಲ್ಲಿಯೂ ಕಾಲೆಳೆಯುವ ಜನ ಇದ್ದೇ ಇದ್ದರು. ಇವೆಲ್ಲ ಅಡೆತಡೆಗಳ ಮಧ್ಯೆ ನೈವೇಲಿ ಕನ್ನಡ ಸಂಘ ಇಂದಿಗೂ ಅಸ್ತಿತ್ವ ಉಳಿಸಿಕೊಂಡು ಬಂದಿರುವುದಕ್ಕೆ ಅದಕ್ಕೆ ಸಿಕ್ಕ ಗಟ್ಟಿ ತಳಪಾಯವೇ ಕಾರಣವೆಂದರೂ ತಪ್ಪಾಗಲಾರದು.

* ಶಿಕಾರಿಪುರ ಹರಿಹರೇಶ್ವರ, ಮೈಸೂರು

1959 : ಆಗ ನೈವೇಲಿ ಎಂಬುದು ಒಂದು ಚಿಕ್ಕ ಹಳ್ಳಿಯಾಗಿತ್ತು. ಅಲ್ಲಿ ಬೆರಳೆಣಿಯಷ್ಟು ಆಫೀಸರ್‌ಗಳ ವಸತಿಗೃಹಗಳು ಮಂದಾರಕುಪ್ಪಂ ಮತ್ತು ಗಂಗಯ್ಯಕೊಂಡನ್ ಕಾಲೋನಿ- ಎಂಬ ಎರಡು ದೂರ ದೂರದ ಬಡಾವಣೆಗಳಲ್ಲಿ ಇದ್ದವು; ಈ ವಸತಿಗಳು ಕಲ್ಲುನಾರಿನ ಛಾವಣಿಯ ತಾತ್ಕಾಲಿಕ ಬಿಡದಿಗಳು. ಇವೆರಡರ ನಡುವೆ ಆ ಕಲ್ಲಿದ್ದಲ ಮುಕ್ತ ಅಗೆತದ ಗಣಿ ಪ್ರದೇಶವಿತ್ತು. ಅಲ್ಲಿನ ಹವಾಮಾನದ ಬಗ್ಗೆ ಜನರು ಆಡಿಕೊಳ್ಳುತ್ತಿದ್ದ ಒಂದು ಮಾತು ಧ್ವನಿಪೂರ್ಣವಾಗಿತ್ತು: ನೈವೇಲಿಯಲ್ಲಿ ಮೂರೇ ಋತುಗಳು; ಬೇಸಗೆ, ಅತಿ ಬೇಸಗೆ, ಮಹಾ ಬೇಸಗೆ. ಆಗ ನೆಟ್ಟ ಗಿಡ ಮರಗಳು ನವನಿರ್ಮಿತ ನಗರವನ್ನ ತಂಪಾಗಿಡಲು ಹಲವು ವರ್ಷಗಳೇ ಬೇಕಾದವು. ಸಿನಿಮಾ ಥಿಯೇಟರ್ ಆಗಿ ಪರಿವರ್ತಿತಗೊಂಡಿದ್ದ ಅಲ್ಲೇ ಹೊರವಲಯದಲ್ಲಿದ್ದ ಗುಡಿಸಲೊಂದು ಅಲ್ಲಿನ ಜನರ ಮನರಂಜನೆಯ ಏಕೈಕ ಸಾಧನೆಯಾಗಿತ್ತು. ಇಲ್ಲಿನ ರೈಲ್ವೇ ನಿಲ್ದಾಣ ಹೆಸರಿಗೆ ಮಾತ್ರ ಇದ್ದ ಸಾಮಾನ್ಯ ನಿಲ್ದಾಣ. ಒಂದು ಸಣ್ಣ ಉಪಾಹಾರ ಗೃಹವೂ ಜನರ ಬೇಡಿಕೆಗಳನ್ನ ಪೂರೈಸುವ ಸಲುವಾಗಿ ಅಲ್ಲಿತ್ತು. ಇ೦ತಹ ಬಂಜರುಭೂಮಿಯನ್ನ ಹಸನಾಗಿಸಿ ಊರುಕಟ್ಟುವ ಸಲುವಾಗಿ, ಕನ್ನಡನಾಡಿನಿಂದ ಹಚ್ಚ ಹರೆಯದ ಯುವಕ ಇಂಜನಿಯರುಗಳು ಬಂದಿದ್ದರು; ಅವರಲ್ಲಿ ಬಹಳ ಜನ ಅಲ್ಲಿನ ಜನರ ಆಡುನುಡಿ ತಮಿಳಿನ ಒ೦ದಕ್ಷರವನ್ನೂ ಅರಿಯದವರೂ ಇದ್ದರು. ಕಟ್ಟುತ್ತಿರುವ ಹೊಸ ನಗರ ಮತ್ತು ಹಳೆಯ ಹಳ್ಳಿಗಳ ನಡುವೆ, ಹೇಳಿಕೊಳ್ಳುವಂತಹ ವಾಹನ ಸೌಕರ್ಯವೇನೂ ಇರಲಿಲ್ಲ- ಈ ಗಣಿಯದೇ ಆದ ಲಾರಿಗಳು, ಒಂದೆರಡು ಜೀಪುಗಳು ಮತ್ತು ಕಾರ್ಮಿಕರ ಓಡಾಟಕ್ಕೆಂದೇ ಮೀಸಲಾಗಿಟ್ಟ ನಿಯಮಿತ ಕಾಲಾವದಿಯ ಕೆಲವು ಬಸ್‌ಗಳು. ಎರಡೂ ಬಡಾವಣೆಯಲ್ಲಿ ವಾಸಿಸುತ್ತಿದ್ದ ಇಂಜನಿಯರ್‌ಗಳು ಕೆಲಸಕ್ಕೆಂದು ಮತ್ತು ಊಟದ ವೇಳೆ ಈ ಬಸ್‌ಗಳಲ್ಲಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗಿ ಬರುತ್ತಿದ್ದರು. ಈ ಪ್ರತಿಕೂಲ ವಾತಾವರಣದಲ್ಲಿ, ಈಗ ತಾನೇ ಹೊಸಿಲು ದಾಟಿ ಹೊರಬಂದ ಹಸಿ ಬಿಸಿ ರಕ್ತದ ತರುಣರನ್ನು ಬಂಧಿಸಿಡುವ ಸುಲಭ ಸೂತ್ರವಾಗಿತ್ತು- ನಾವಾಡುತ್ತಿದ್ದ ಕನ್ನಡ, ಸವಿಗನ್ನಡ!

ಸುಮಾರು ಮೇ ಇಪ್ಪತ್ತೈದು-ಇಪ್ಪತ್ತಾರನೇ ದಿನ ಎಂದು ನನ್ನ ನೆನಪು. ಒಂದು ಪ್ರಕಟಣೆಯನ್ನು ಬರೆದು ನಾನು ತಯಾರು ಮಾಡಿದೆ. ಬಸ್‌ನಲ್ಲಿ ಇಲ್ಲಿಂದಲ್ಲಿಗೆ ಹೋಗಿಬರುವಾಗ, ಕನ್ನಡ ಮಾತನಾಡುವ ಇಂಜನಿಯರ್‌ಗಳು ತಾವೂ ನೋಡಿ, ಕೈಯಿಂದ ಕೈಗೆ ವರ್ಗಾವಣೆ ಮಾಡಿ ಓದುವಂತೆ ಒಂದು ವಿಜ್ಞಾಪನಾ ಪತ್ರವನ್ನು ಸುತ್ತೋಲೆಯಾಗಿ ಹರಿಬಿಟ್ಟೆ. ಅದು ಕನ್ನಡ ಸಂಘದ ಕಡತಗಳಲ್ಲಿ ಇನ್ನೂ ಕ್ಷೇಮವಾಗಿ ಸುರಕ್ಷಿತವಾಗಿ ಹೀಗಿದೆ:

ಸಿರಿಗನ್ನಡಂ ಗೆಲ್ಗೆ!
ಸಹೃದಯರಲ್ಲಿ ಸವಿನಯ ವಿನಂತಿ:
ನೈವೇಲಿಯಲ್ಲಿನ ಕನ್ನಡಿಗರೆಲ್ಲರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶವೊದಗಿಸುವ ಕನ್ನಡ ಸಂಘ'ದ ಅವಶ್ಯಕತೆ ನಮ್ಮೆಲ್ಲರ ಬಹುದಿನದ ಅಪೇಕ್ಷೆಯಾಗಿತ್ತಲ್ಲವೆ? ಆ ಕನಸು ನನಸಾಗುವ ಕಾಲ ಬಂದೊದಗಿದೆ.
ಕನ್ನಡ ಸಂಘ'ದ ಸ್ಥಾಪನೆಗೆ ಪೂರ್ವಭಾವಿಯಾಗಿ ನೈವೇಲಿಯಲ್ಲಿನ ಕನ್ನಡಿಗರೆಲ್ಲರ ಸಭೆಯೊಂದನ್ನು ದಿನಾಂಕ 31 ಮೇ 1959ನೇ ಭಾನುವಾರ ಬೆಳಗ್ಗೆ 10.30ಕ್ಕೆ ಕರೆಯಲಾಗಿದೆ. ಕನ್ನಡಿಗರೆಲ್ಲರೂ ತಪ್ಪದೆ ಆ ಸಭೆಯಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ಕೋರಿಕೆ. ಕನ್ನಡ ಸಂಘ'ದ ನಿರ್ಮಾಣ, ನಿಲುವು, ನಿಯಮಾವಳಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಆ ಸಭೆಯಲ್ಲಿ ನಿಮ್ಮೆಲ್ಲರ ಸಲಹೆಯನ್ನು ನಿರೀಕ್ಷಿಸಲಾಗಿದೆ.
ಕನ್ನಡ ಬಾಂಧವರೇ, ದಯೆಯಿಟ್ಟು ಸಹಕರಿಸಿ. -ಕನ್ನಡ ಸಂಘ'ದ ಹಿತೈಷಿಗಳು.
ಸ್ಥಳ: ಜೆ 77/1, ಗಂಗಯ್ಯ ಕೊಂಡನ್ ಕಾಲೋನಿ, ನೈವೇಲಿ.

ನಾನು ಕರೆದ ಆ ಸಭೆಗೆ ಐವತ್ತು ಅರವತ್ತು ಮಂದಿ ಕನ್ನಡಿಗರು ಬಂದಿದ್ದರು. ಅಲ್ಲಿ ಸೇರಿದ್ದವರೆಲ್ಲರೂ ನಮಗೊಂದು ಈ ಮಾದರಿಯ ವೇದಿಕೆ ಬೇಕು- ಎಂದು ಸರ್ವಾನುಮತದಿಂದ ಅಭಿಪ್ರಾಯವನ್ನು ಸೂಚಿಸಿದರು. ನೈವೇಲಿ ಕನ್ನಡ ಸಂಘ ಅಸ್ತಿತ್ವಕ್ಕೆ ಬಂತು, ಮುಂದಿನ ಕಾರ್ಯಗಳಾದ ಸಂಘದ ರೂಪುರೇಷೆ, ಘಟನೆ, ನಿಯಮಾವಳಿಗಳು- ಇತ್ಯಾದಿಗಳನ್ನು ವ್ಯವಸ್ಥಿತವಾಗಿ ರಚಿಸಲು ತಾತ್ಕಾಲಿಕ ಸಮಿತಿಯೊಂದನ್ನು ಸಭೆ ರಚಿಸಿತು. ಸಂಘದ ಕಾರ್ಯದರ್ಶಿಯಾಗಿ ನಾನು (ಹರಿಹರೇಶ್ವರ) ಮತ್ತು ಅಧ್ಯಕ್ಷರಾಗಿ ಎಲ್. ಎನ್. ರಾಜಾರಾವ್ ಅವರು ನೇಮಕಗೊಂಡೆವು. ತಾತ್ಕಾಲಿಕ ಕಾರ್ಯಕಾರಿಣಿ ತನ್ನ ಕೆಲಸಗಳನ್ನ ಶರವೇಗದಲ್ಲಿ ನಿರ್ವಹಿಸ ತೊಡಗಿತು. ತೌರಿನ ಬಗ್ಗೆ ಸುದ್ದಿ ತಿಳಿಯುವ ಜನರ ದಾಹಕ್ಕೆ ನೀರುಣಿಸುವ ಸಲುವಾಗಿ ತೆರೆದು-ಮುಚ್ಚುವ ವಾಚನಾಲಯವೊಂದನ್ನು ತಾತ್ಕಾಲಿಕವಾಗಿ ಆರಂಭಿಸುವ ಯೋಜನೆ ಹಾಕಿಕೊಂಡೆ. ಸ್ನೇಹಿತರು ಸಹಕರಿಸಿದರು. ಸಂಘಕ್ಕೆ 'ಪ್ರಜಾವಾಣಿ' ತರಿಸಲಾಗುತ್ತಿತ್ತು. ಎನ್ ಎಸ್ ನಾಗರಾಜ್, ಎಸ್ ರಾಮಕೃಷ್ಣ ಮತ್ತು ವಿ ವಿಶ್ವನಾಥ್‌ರವರು ಸಂಘದ ವಾಚನಾಲಯಕ್ಕಾಗಿ ಅನುಕ್ರಮವಾಗಿ ಕಸ್ತೂರಿ', ಕೊರವಂಜಿ' ಮತ್ತು ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ತರಿಸಲು ಪ್ರಾರಂಭಿಸಿದರು.

ಉಪಹಾರ ಮತ್ತು ಊಟಕ್ಕಾಗಿ ಒಂದು ಹೋಟಲಿನಲ್ಲಿ ನಾವೆಲ್ಲ ಸೇರುತ್ತಿದ್ದೆವೆಂದು ಹಿಂದೆ ಹೇಳಿದೆನಲ್ಲ. ಸುಮಾರು ಹನ್ನೆರಡು ಗಂಟೆಯ ವೇಳೆಗೆ ಊಟಕ್ಕೆ ಅಲ್ಲಿ ನಾವು ಸೇರುತ್ತಿದ್ದೆವು. ಒಂದುದಿನ, ಇದೇ ಹೋಟೆಲ್‌ನಲ್ಲಿಯೇ ಊಟಕ್ಕಾಗಿ ಕಾದು ಕುಳಿತ ಸಮಯದಲ್ಲಿ, ಮಾಣಿ ಊಟದ ತಟ್ಟೆ ತರುವುದು ಸ್ವಲ್ಪ ತಡವಾದಾಗ ಪಕ್ಕದವರೊಡನೆ ಅದೂ ಇದೂ ಹರಟುತ್ತಿದ್ದೆ. ಆಗ ಯಾವುದೋ ವಿಷಗಳಿಗೆಯಲ್ಲಿ, ಹುಡುಗುಬುದ್ಧಿಯಿಂದ ಟೇಬಲ್ ಮೇಲೆ ಕನ್ನಡಮ್ಮನ ದನಿ ಕೇಳ್ವದಿಲ್ಲವೇ?' ಅ೦ತಾನೋ ಏನೋ, ಅದೇ ಅರ್ಥ ಬರುವ ಹಾಗೆ ಪೆನ್ನಿನಲ್ಲಿ ಕನ್ನಡದಲ್ಲಿ ಗೀಚಿದ್ದೆ; ಅದನ್ನು ಓದಿ, ನಮ್ಮ ಕೆಲವು ಆತ್ಮೀಯ ಗೆಳೆಯರು ಹೀಗೆಲ್ಲಾ ಬರೆದು, ಇಲ್ಲಿನ ಭಾರೀ ಭಾಷಾಪ್ರೇಮೀ ತಮಿಳರ ಕೋಪಕ್ಕೆ ವಿನಾ ಕಾರಣ ನಾವೆಲ್ಲಾ ಏಕೆ ಗುರಿಯಾಗಬೇಕು?'- ಅಂತ ನನ್ನ ಹಿಂದೆ ಮುಂದೆ ಆಡಿಕೊಂಡಿದ್ದೂ ಉಂಟು! ಇದೇ ನನ್ನ ಬಗ್ಗೆ ಕೆಲವರಿಗೆ ಅಸಮಧಾನವಾಗಲೂ ಕಾರಣವಾಯ್ತು.

ಸರ್ವಸದಸ್ಯ ಸಭೆ ಜೂನ್ 28ರಂದು ನಮ್ಮ ಮನೆಯಲ್ಲೇ ನಡೆಯಿತು. ಆ ವೇಳೆಗೆ, ಇದ್ದ ಮೂರೂ ಮತ್ತೊಂದು ಜನರಲ್ಲೇ, ಮಂದಾರಕುಪ್ಪಮ್‌ನ ಕನ್ನಡಿಗರು ಮತ್ತು ಗಂಗೈಕೊಂಡನ್ ಕಾಲನಿಯ ಕನ್ನಡಿಗರು-ಎಂದು ಎರಡು ವಿಭಿನ್ನ ಮನೋಭಾವದ ಪಂಗಡಗಳು ತಮಗೆ ಗೊತ್ತಿಲ್ಲದಂತೆಯೇ ರೂಪುಗೊಂಡಿದ್ದವು. ನಾನೇ ಕಾರ್ಯದರ್ಶಿಯಾಗಿ ಮುಂದುವರಿಯಬೇಕೆಂದು ಹಲವರು ಅಭಿಪ್ರಾಯ ಪಟ್ಟಿದ್ದರು. ಸಂಘ ಕಟ್ಟಿದ್ದವನು ನಾನು, ಎತ್ತರಕ್ಕೆ ಬಾವುಟ ಹಾರಿಸಲು ಏನೇನೋ ಕನಸು ಕಾಣುತ್ತಿರುವವನು ನಾನು, ಅದೇ ಸರ್ವಸ್ವವೆಂದುಕೊಂಡು ಅಹರ್ನಿಶಿ ದುಡಿಯುತ್ತಿರುವವನು ನಾನು- ಎಂಬೆಲ್ಲ ಹೆಮ್ಮೆಯ, ಆದರೆ ಭ್ರಮೆಯ ಬಲೂನಿಗೆ ಯಾರೋ ಸೂಜಿ ಚುಚ್ಚಿದರು. 1959-60ರ ಅವಧಿಗೆ ಸಂಘದ ಚುನಾವಣೆ ನಡೆಯಿತು. ನಾನು ಕೆಳಗಿಳಿದೆ. ಬಿ. ವಿ. ಸುಬ್ಬರಾವ್ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದರು. ಎನ್. ಜಯರಾಮ್ ಅವರು ಕಾರ್ಯದರ್ಶಿಗಳಾಗಿ ಚುನಾಯಿತರಾದರು.

ಪದವಿಯಲ್ಲಿ ಇರಲಿ, ಇಲ್ಲದಿರಲಿ, ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡುಹೋಗುವುದರಲ್ಲಿ ನನಗೆ ಸಂತೋಷವಿತ್ತು, ಸೌಕರ್ಯವಿತ್ತು. ನನ್ನದೇ ಮಗು, ಅಣ್ಣ ತಮ್ಮನ ಮನೆಯಲ್ಲಿ ಬೆಳೆದರೇನಂತೆ- ಎನ್ನುವುದಿಲ್ಲವೇ, ಹಾಗೆ. ಇದ್ದಲ್ಲಿಂದಲೇ ಅದಕ್ಕೆ ಪೋಷಣೆ. ಆಮೇಲೆ ಮಗು ನಮ್ಮ ಮನೆಗೇ ಬಂತು. 1960-61ರ ಅವಧಿಗೆ ನಾನು ಕನ್ನಡ ಸಂಘದ ಕಾರ್ಯದರ್ಶಿಯಾಗಿ ಚುನಾಯಿತನಾದೆ. ಆಗ ಎಸ್ ಎನ್ ಭೀಮರಾಯರು ಅಧ್ಯಕ್ಷರು, ಸಿ. ಎಸ್ ಸತ್ಯನಾರಾಯಣ ರಾವ್ ಅವರು ಉಪಾಧ್ಯಕ್ಷರಾಗಿಯೂ ಚುನಾಯಿತರಾದವರು. ಆ ವರ್ಷ ನಾವು ಮೊಟ್ಟ ಮೊದಲ ನಾಟಕವನ್ನ ಕನ್ನಡ ಸಂಘದ ವೇದಿಕೆಯ ಮೇಲೆ ಆಡಿದೆವು.

ನೈವೇಲಿ ಕನ್ನಡ ಸಂಘವೆಂದರೆ ಆ ಪ್ರದೇಶದಲ್ಲಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೊದಲಿಂದಲೂ ಹೆಸರು ಮಾಡಿದ ಸಂಸ್ಥೆ. ಅದರಲ್ಲೂ ಕನ್ನಡ ನಾಟಕಗಳನ್ನು ಅಚ್ಚುಕಟ್ಟಾಗಿ, ಸೊಗಸಾಗಿ ಪ್ರದರ್ಶಿಸುವುದರಲ್ಲಿ ಎತ್ತಿದ ಕೈ. 1998ರವೇಳೆಗೆ ಸುಮಾರು ನೂರಾ ಐವತ್ತಕ್ಕೂ ಮಿಗಿಲಾಗಿ ಕನ್ನಡ ನಾಟಕಗಳನ್ನು ಈ ಕನ್ನಡ ಸಂಘ ತನ್ನ ವೇದಿಕೆಯ ಮೇಲೆ ಪ್ರದರ್ಶಿಸಿತು ಎಂದರೆ ಅಸಾಮಾನ್ಯ ಸಂಗತಿ ಅಲ್ಲವೇ? (ಈ ನಾಟಕಗಳ ಬಗ್ಗೆಯೇ ಬರೆಯಲು ಇನ್ನೊಂದೆರಡು ಅವಕಾಶಗಳನ್ನ ಮುಂದೆ ಇಟ್ಟುಕೊಂಡಿದ್ದೇನೆ.)

ಈ ಕನ್ನಡ ಸಂಘದ ಒಂದು ರೀತಿಯಲ್ಲಿ ಆಧಾರಸ್ತಂಭವಾದ, ಮೊದಲು ಅಸಿಸ್ಟೆಂಟ್ ಇಂಜನಿಯರ್ ಆಗಿ ಬಂದು, ಕೊನೆಗೆ ಅಲ್ಲಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿ ಮೈಸೂರಿನಲ್ಲಿರುವ, ನನ್ನ ಆತ್ಮೀಯ ಗೆಳೆಯರು ಎಂ. ಕೆ. ಅಚ್ಯುತರಾಯರು. ಅವರಿದ್ದ ಅಲ್ಲಿನ ಮನೆಯೇ ಆಮೇಲೆ ಕನ್ನಡ ಸಂಘದ ಅಧಿಕೃತ ಕಚೇರಿ ಆಗಿಹೋಯಿತು. ಈಗಲೂ ಅಲ್ಲೇ ಕನ್ನಡಸಂಘದ ಕಟ್ಟಡ ಇದೆ. ವಿಳಾಸ: ಇ-43, ಡಾ| ಜಾಕೀರ್ ಹುಸೇನ್ ರಸ್ತೆ, ಬ್ಲಾಕ್-16, ನೈವೇಲಿ- 607 801, ತಮಿಳು ನಾಡು. ಈ ನೂರೈವತ್ತು ನಾಟಕಗಳಲ್ಲಿ ಕಡೆಯ ಪಕ್ಷ ನೂರು ನಾಟಕಗಳಲ್ಲಾದರೂ ಒಂದಲ್ಲ ಒಂದು ರೀತಿ ಪಾಲ್ಗೊಂಡಿರುವ ಹೆಮ್ಮೆ ನನ್ನದಾಗಿದೆ''- ಎನ್ನುವ, ಅಚ್ಯುತರಾಯರ ಈ ಮಾತುಗಳನ್ನ (ನೈವೇಲಿ ಕನ್ನಡಸಂಘದ ನೂರೈವತ್ತನೇ ನಾಟಕೋತ್ಸವದ, ಜನವರಿ 1998ರ ಸ್ಮರಣ ಸಂಚಿಕೆಯಲ್ಲಿ) ಕೇಳಿ:

ನಾನು (ಅಚ್ಯುತರಾಯರು) ನೈವೇಲಿಗೆ ಬಂದದ್ದು ಫೆಬ್ರವರಿ 1960ರಲ್ಲಿ. ಆವೇಳೆಗೆ ಕನ್ನಡ ಸಂಘ ಸ್ಥಾಪನೆಯಾಗಿ ಒಂಬತ್ತು ತಿಂಗಳುಗಳಾಗಿದ್ದವು. ಮಾರ್ಚ್ ಏಪ್ರಿಲ್ ವೇಳೆಗೆ ಪ್ರಥಮ ವಾರ್ಷಿಕೋತ್ಸವ ಆಚರಿಸುವ ಸಂಭ್ರಮ. ಮೈಸೂರಿನಲ್ಲಿ ಕಾಲೇಜಿನಲ್ಲಿ ನೋಡಿದ್ದ ಹಲವಾರು ನಾಟಕದ ಘಟಾನುಘಟಿಗಳು ನೈವೇಲಿಯಲ್ಲಿದ್ದುದು ತಿಳಿದು ಬಂತು. ಕಾಲೇಜಿನಿಂದ ಆಗತಾನೆ ಹೊರ ಊರಿಗೆ ಬಂದಿದ್ದ ಬಿಸಿ ರಕ್ತದ ಯುವಕರು. ಅವರ ಉತ್ಸಾಹಕ್ಕೆ ಉತ್ತೇಜನದ ನಂದಾದೀಪ ಹೊತ್ತಿಸಿ ನಾಟಕವಿಲ್ಲದೆ ವಾರ್ಷಿಕೋತ್ಸವ ಹೇಗೆ ನಡೆದೀತು? ಮಾಡೇ ಮಾಡೋಣ' ಎಂದು ಕುಮ್ಮಕ್ಕು ಕೊಟ್ಟೆ; ಮೊದಲ ನಾಟಕ ಹೋಮ್ ರೂಲ್‌ಉ'; ಮಂದಾರಕುಪ್ಪಂನಲ್ಲಿ ರಿಹರ್ಸಲ್ ಪ್ರಾರಂಭಿಸಿಬಿಟ್ಟೆವು. ಒಳ್ಳೆಯ ನಟ ನಿರ್ದೇಶಕ ಎ ಎಸ್ ಭೋಜರಾಜ್ ಅವರ ನಿರ್ದೇಶನದಲ್ಲಿ. ಬಹಳ ಕಷ್ಟದ ತಾಲೀಮು ಮಾಡಿಸುವ ವ್ಯಕ್ತಿ ಅವರು. ಮೇ 15, 1960ರಂದು ಮೊದಲ ವಾರ್ಷಿಕೋತ್ಸವದಂದು ಆ ನಾಟಕ.

ಪ್ರಥಮ ಚುಂಬನಂ ದ೦ತ ಭಗ್ನಮ್- ಎಂಬ೦ತೆ ಆಯ್ತು. ಅದು ಬೆಳಗ್ಗೆ ನಡೆದ ಔಟ್ ಡೋರ್ ಗೇಮ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗೆಳೆಯ ಕೆ. ಎಸ್. ದಾಶರಥಿ ರನ್ನಿಂಗ್‌ರೇಸ್‌ನಲ್ಲಿ ಓಡಿ, ಮೈ ಸರಿಯಿಲ್ಲದೆ ಮಲಗಿ ಬಿಟ್ಟಿದ್ದರು. ಅವರು ಮಾಡಬೇಕಾಗಿದ್ದ ಅಯಂಗಾರೀ ಪಾತ್ರವನ್ನು ಎರಡೇ ಗಂಟೆಗಳ ರಿಹರ್ಸಲ್ ನಂತರ ರಂಗದ ಮೇಲೆ ಯಶಸ್ವಿಯಾಗಿ ಅಭಿನಯಿಸಿದವರು ಸಂಘದ ಸ್ಥಾಪಕ [ಕಾರ್ಯದರ್ಶಿ] ಎಸ್ ಕೆ ಹರಿಹರೇಶ್ವರ. ಮು೦ದೆ ಎರಡು ವರ್ಷಗಳಲ್ಲೇ ಬಾರ್‍ಡರ್ ರೋಡ್ಸ್ ಆರ್ಗನೈಸೇಷನ್ ಗೆ ಹೋದ ಅವರು ಸ೦ಘದ ನಾಟಕಗಳು ಚೆನ್ನಾಗಿ ನಡೆಯಲು ಹಲವಾರು ರೀತಿ [ಉತ್ತಮ ಅಭಿನಯಕ್ಕಾಗಿ ಬಹುಮಾನಗಳು ಇತ್ಯಾದಿ ಕೊಟ್ಟು] ಉತ್ತೇಜನ ನೀಡಿದರು. .. ..'' ಹೀಗೆ ಹೇಳಲು, ಸಲೀಸಾಗಿ ಪಾತ್ರ ನಿರ್ವಹಿಸಲು ಒಳಗುಟ್ಟು ಇಷ್ಟೇ: ದಾವಣಗೆರೆಯಲ್ಲಿ ಓದುತ್ತಿದ್ದಾಗ, ನಾನು ಸೇರಿದ್ದ ಹವ್ಯಾಸೀ ನಾಟಕತಂಡ ಆರ್ಟಿಸ್ಟ್‌ಸ್ ಕಂಬೈನ್‌ನ ವತಿಯಿಂದ, ಆ ಹೋಮ್ ರೂಲ್‌ಉ ನಾಟಕವನ್ನು ಹತ್ತಾರು ಬಾರಿ ಆಡಿ, ಬಹುತೇಕ ಎಲ್ಲಾ ಪಾತ್ರಗಳ ಮಾತೂ ಬಾಯಿಪಾಠವಾಗಿತ್ತು; ಈಗ ಉಪಯೋಗಕ್ಕೆ ಮತ್ತೆ ಬಂದಿತು.

ಮೊದಲ ಭಾಗ : ನೈವೇಲಿಗೆ ಬಂದು ಕನ್ನಡ ಸಂಘ ಕಟ್ಟಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X