ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟೆ ಇಲ್ಲದ ಕೆರೇಲಿ, ಬೆಳ್ಳಿ ತಟ್ಟೆ ತೇಲ್ಕೊಂಡು ಹೋಗ್ತಿದೆ

By Staff
|
Google Oneindia Kannada News

ಒಗಟು : ಈಗ ಈ ‘ನೀರಿ’ನಿಂದ ತೊಯ್ದ ಕೆಲವೇ ಕೆಲವು ಒಗಟುಗಳನ್ನು ಬಿಡಿಸಿ, ನೋಡೋಣ:

  1. ಹತ್ತು ತಲೆ ಕೆಂಪುಂಟು ರಾವಣನು ನಾನಲ್ಲ; ಆರುತಲೆ ಕಪ್ಪುಂಟು, ಷಣ್ಮುಖನು ಅಲ್ಲ; ನೀರಿಗೂ ನನಗೂ ನಂಟು ? ಉಹುಂ, ಇಲ್ಲವೆ ಇಲ್ಲ. ಇದು ಏನು ಹೇಳದಿರೆ, ನೀವು ಜಾಣರಲ್ಲ !
  2. ನಿಲ್ಲು ನಿಲ್ಲೆಲೋ ಕೋಣ, ನೀರ ತಾವ; ನುಗ್ಗು ನುಗ್ಗೆಲೋ ಜಾಣ, ಮುಳ್ಳಿದ್ದರೂವ. ಹೊರಗೆ ಕುಳಿತಿರು , ಬಂದೆ, ಕೈಮುಗಿದು ಬರುವೆ ದೇವರಿಗೆ- ನಿಮಗೆ ಹೊಳೆಯಿತೆ ಯಾರು ಈ ಕಾಲ ಗೆಳೆಯ ? !
  3. ಕಪ್ಪು ಬಣ್ಣದ ಸೀರೆ ಉಟ್ಟಿಹಳು ಬಾನಲು ನೀರೆ । ಒಪ್ಪಿದಾ ಸೀರೆ ಬಳಿಯಾಗೆ ಅವಳನ್ನ । ಅಪ್ಪುವವರಿಲ್ಲ - ಸರ್ವಜ್ಞ ।।
  4. ಅಂಗೈ ಅಗಲದ ಗದ್ದೆ, ಗದ್ದೆಗೊಂದಿಷ್ಟು ನೀರು; ನೀರಿಗೊಂದು ಬೇರು; ಬೇರ ತುದಿಯಿಂದತ್ತ ಕತ್ತಲನು ತೂರು.
  5. ನೀಲೀ ಬಣ್ಣದ ಕೆರೇಲಿ ಪಿಳಿ ಪಿಳಿ ಬಿಳಿ ಬಿಳಿ ಮೀನೋ ಮೀನು !
  6. ಕಟ್ಟೆ ಇಲ್ಲದ ಕೆರೇಲಿ, ಬೆಳ್ಳಿ ತಟ್ಟೆ ತೇಲ್ಕೊಂಡು ಹೋಗ್ತಿದೆ !
  7. ಎತ್ತರದಿ ಮೇಲಿದೆ ನೀರು, ಮೋಡವಲ್ಲ ; ನಾರುಮಡಿ ಸುತ್ತಿಹೆನು, ಸಂನ್ಯಾಸಿಯಲ್ಲ. ನೆತ್ತಿಯಲಿ ಕಣ್ಣುಂಟು, ಮುಕ್ಕಣ್ಣನಲ್ಲ. ಯಾರು ಹೇಳಿರಿ ಬೇಗ ಜಾಣರೆಲ್ಲ !
(ಉತ್ತರಗಳು : 1. ಬೆಂಕಿ, 2.ಚಪ್ಪಲಿ, 3.ಮೋಡ, 4. ಹಣತೆ ದೀಪ, 5. ಆಕಾಶದಲ್ಲಿ ನಕ್ಷತ್ರ, 6. ಆಕಾಶದಲಿ ಚಂದ್ರ, 7. ತೆಂಗಿನ ಕಾಯಿ )

ಗಾದೆಗಳು : ಈಗ ಗಾದೆಗಳ ಕಡೆ ನೋಡೋಣ. ಈ ನಾಣ್ಣುಡಿಗಳೆಲ್ಲ ಅನುಭವ ಜನ್ಯವಾದ ಲೋಕೋಕ್ತಿಗಳು ಎಂಬುದನ್ನು ಮರೆಯಬಾರದು. ಎಲ್ಲಾ ಜನಾಂಗಗಳಲ್ಲೂ, ಆಯಾಯ ದೇಶ ಕಾಲ ತತ್ಕಾಲೀನ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಈ ಮಾತುಗಳು ಯಾರೋ ಒಬ್ಬ ಕವಿ ಮನೋಭಾವದವನ / ಳ ಉದ್ಗಾರವಾಗಿರುತ್ತವೆ. ಕೆಲವು ಗಾದೆಗಳನ್ನು ಅರ್ಥ ಮಾಡಿಕೊಳ್ಳಲು ಅದು ಹುಟ್ಟಿದ ಹಿನ್ನೆಲೆ ಬೇಕಾದೀತು; ಹೆಚ್ಚಿನ ಹಲವು ಸಾರ್ವಕಾಲಿಕ ಸತ್ಯ ಸಾರುವುದರಿಂದ ಅವು ಎಲ್ಲೆಲ್ಲೊ ಚಲಾಯಿಸಬಹುದಾದ ನಾಣ್ಯಗಳು.

‘ಗಾದೆ’ ಎಂಬುದು ಸಂಸ್ಕೃತದ ‘ಗಾಥಾ’ ಎಂಬ ‘ಹಾಡಲು ಬರುವ ಪದ್ಯ’ ಎಂದು ಸ್ಥೂಲವಾಗಿ ಅರ್ಥೈಸಬಲ್ಲ ಪದದಿಂದ ಬಂದಿದೆ. ಹಿಂದಿಯಲ್ಲಿ ‘ಕಹಾವತ್‌’ (ಹೇಳಿಕೆ), ರಷ್ಯನ್‌ ಭಾಷೆಯಲ್ಲಿ ‘ಪೊಸ್ಲೋವಿಟ್ಸ ’ (ವಿಶೇಷ ಪದಗಳು), ತಮಿಳಿನಲ್ಲಿ ‘ಪಯಲ್‌ ಮೊಳಿ’ (ಹಳೆಯ ಮಾತು), ಪರ್ಶಿಯನ್‌ನಲ್ಲಿ ನೆನಪಿನ ಮಾತು - ಎಂದು ಹೇಳಿದಾಗ, ‘ಗಾದೆ’ ಬಹಳ ಹಿಂದಿನ ಕಾಲದಿಂದ ಜನ ಬಳಸುತ್ತ ಇರುವುದರ ಸೂಚನೆಯಿದೆ. ಲ್ಯಾಟೀನ್‌ನಲ್ಲಿ ‘ಪ್ರಾವರ್ಬಿಯಂ’ (ಜನರ ಎದುರು ಆಡಿದ ಮಾತು) ಮತ್ತು ಗ್ರೀಕ್‌ನಲ್ಲಿ ‘ಪರೋಮಿಯಾ ’ (ದಾರಿಯಲ್ಲಿ ಆಡಿದ ಮಾತು) - ಎಂದಾಗ, ‘ಗಾದೆ’ಯು ಸಾಮಾನ್ಯ ಜನರು ಪದೇ ಪದೇ ಉಪಯೋಗಿಸುತ್ತಿರುವ ಮೆಚ್ಚುಗೆ ಪಡೆದುದರ ಕುರುಹು ಇದೆ. ಹಿಬ್ರೂವಿನಲ್ಲಿ ‘ಮಶಾಯ್‌’ (ಹೋಲಿಕೆ, ಉಪಮೆ) ಮತ್ತು ಅರಾಬಿಕ್‌ನಲ್ಲಿ ‘ಮಥಾಯ್‌’ (ದೃಷ್ಟಾಂತ, ಹೀಗೆ ಆಗಿತ್ತು ನೋಡಿ)- ಎಂದಾಗ ಗಾದೆಗೊಂದು ಹಿನ್ನೆಲೆ, ಅನುಭವದ ಬುನಾದಿ , ಅದರಿಂದ ಕಲಿತ ಕಲಿಯಬಲ್ಲ ಪಾಠ, ಎಂಬೆಲ್ಲ ಲಕ್ಷಣಗಳು ಹಿಗ್ಗುತ್ತವೆ. ಜರ್ಮನ್‌ ಭಾಷೆಯಲ್ಲಿ ‘ಸ್ಪ್ರಿಕ್‌ವೋರ್ಟ್‌, ರೆಡೆನ್‌ಸಾರ್ಟ್‌’ (ಅಲಂಕರಿಸಿದ, ಬಣ್ಣ ಹಚ್ಚಿದ ಮಾತು)- ಎಂದಾಗ ಈ ನಮ್ಮ ಗಾದೆ ಆ ಅನುಭವದ ರಸಗಟ್ಟಿಯನ್ನೇ ಸ್ವಾರಸ್ಯಕರವಾಗಿ ಹೇಳುವ ಮಾತು- ಎಂಬ ಧ್ವನಿ ಇದೆ. ಕಾವ್ಯಮಯವಾಗಿ (ಕನ್ನಡದಲ್ಲಂತೂ ಹೆಚ್ಚೂ ಕಡಿಮೆ ಪ್ರಾಸಬದ್ಧವಾಗಿ) ಆದರೆ ಆದಷ್ಟು ಸಂಕ್ಷಿಪ್ತ, ತೂಕವಾದ ಪದಗಳಿಂದ ಕೂಡಿ, ಬಹುಕಾಲ ನೆನಪಿನಲ್ಲಿ ಉಳಿಯುವ ಮಾತು ಈ ‘ಗಾದೆ’!

‘ಹಾಡಿನಂತೆ ಗಾದೆ ಮಾತು’ ಎಂದಾಗ ಗದ್ಯಕ್ಕಿಂತ ಪದ್ಯರೂಪದಲ್ಲಿದ್ದುದೇ ಬಹುಕಾಲ ನೆನಪಿನಲ್ಲಿ ಉಳಿಯುವ ಸಂಭವವೆಂಬುದು ಸಾಬೀತಾಗುತ್ತದೆ. ನಾವು ಎಷ್ಟೊಂದು ಸುಭಾಷಿತಗಳು, ಉಕ್ತಿಗಳು, ಸೂಕ್ತಿಗಳು, ವಚನಗಳನ್ನ ಇಡಿಯಾಗಿ ನಾಣ್ಣುಡಿಯಾಗಿಯೂ ಬಿಡಿಬಿಡಿ ಸಾಲುಗಳನ್ನೇ ಗಾದೆಗಳಾಗಿಯೂ ಬಳಸುತ್ತೇವೆ.

ಗಾದೆಗಳನ್ನ ಹುಡುಕಿ ಹೊರಟಾಗ ಸೋಮೇಶ್ವರ ಶತಕ, ಸರ್ವಜ್ಞನ ತ್ರಿಪದಿಗಳು , ನೀತಿಶತಕಗಳು, ಕಗ್ಗಗಳು ಥಟ್ಟನೆ ನೆನಪಿಗೆ ಬರುತ್ತವೆ. ಕೆಲವನ್ನು ಮಾತ್ರಾ ಪ್ರಾತಿನಿಧಿಕವಾಗಿ ಆರಿಸಿಕೊಂಡಿದ್ದೇನೆ. ತುಂಬಾ ಬಿಟ್ಟಿದ್ದೇನೆ ಎಂಬ ಕೊರಗೂ ನನಗಿದೆ.

ಒಂದೇ ಗಾದೆ ಬೇರೆ ಬೇರೆ ಕಡೆ ಹೇಗೆ ಇವೆ ಎಂಬುದಕ್ಕೆ ಇಲ್ಲಿ ಕೆಲವು ಇವೆ ನೋಡಿ: ಸಂಸ್ಕೃತದ ‘ಕೂಪ ಮಂಡೂಕ’ (ಬಾವಿಯಾಳಗಣ ಕಪ್ಪೆ) ಗೆ, ಅಫ್‌ಘಾನಿಸ್ತಾನದ ಗಾದೆ ‘ಇರುವೆ ‘ಸಮುದ್ರ’ ಎಂದಾಗ ಅದು ಹೇಳೋದು ನೀರಿನ ‘ಹಳ್ಳಾ’ನ ! ಅದೇ ಆಫ್ರಿಕನ್‌ ಗಾದೆಯಲ್ಲಿ ಏನೂ ಗೊತ್ತಿಲ್ಲದವನಿಗೆ ‘ಸಣ್ಣ ತೋಟವೇ ಅರಣ್ಯ!’ ‘ ಅರ್ಧೋ ಘಟೋ ಘೋಷಂ ಉಪೈತಿ ನೂನಮ್‌’ ಎಂಬುದು ‘ಖಾಲಿ ಮಡಿಕೆ; ಶಬ್ದ ಜಾಸ್ತಿ’ಯಾಗಿದೆ. ಅದೇ ತರಹೆಯ ‘ಸಂಪೂರ್ಣ ಕುಂಭೋ ನ ಕರೋತಿ ಶಬ್ದಮ್‌’ ಎಂಬುದು ‘ತುಂಬಿದ ಕೊಡ ತುಳುಕಲ್ಲ ’ಆಗಿದೆ. ಐರಿಷ್‌ನಲ್ಲಿರುವ ‘ಗಾದೇನ ಎಲ್ಲಾದರೂ ಅಲ್ಲಗಳೆಯಲಾದೀತೆ ?’ ಎಂಬುದಕ್ಕಿಂತ ‘ವೇದ ಸುಳ್ಳಾದರೂ ಗಾದೆ ಸುಳ್ಳಾದೀತೆ’ಯೇ ನಮಗೆ ಹೆಚ್ಚು ಅರ್ಥಪೂರ್ಣ.

‘ಸತ್ತ ಹೆಣನಿಗೆ ನೀರ ಹೊತ್ತು ತಂದೆರದಂತೆ । ಚಿತ್ತವಿಲ್ಲದವಳ ಒಡನಾಟ ಕತ್ತೆ ಮುಂ।ದತ್ತು ಕರೆದಂತೆ ಸರ್ವಜ್ಞ ।। ಇವೆಲ್ಲಾ ‘ನೀರಿನಲ್ಲಿ ಹೋಮ ಮಾಡಿದಂತೆ’ . ವೃಥಾ ವೃಷ್ಠಿ ಃ ಸಮುದ್ರೇಷು (ಮುನ್ನೀರ್‌ ಅಂದರೆ, ಸಮುದ್ರದ ಮೇಲೆ ಮಳೆಗರೆದಂತೆ )ಏನೂ ಪ್ರಯೋಜನ ವಿಲ್ಲ - ಎನ್ನುತ್ತಾನೆ ಎಲ್ಲಾ ಬಲ್ಲವನು. ಹೀಗೆ ಒಂದೇ ನೀರು ಬೇರೆ ಬೇರೆ ಸೀಶೆಗಳಲ್ಲಿ !

ಒಂದು ಭಾಷೆಯಲ್ಲಿ ಗಾದೆಯಿದ್ದರೆ ಅದೇ ತರಹೆಯದು ಎಲ್ಲಾ ನುಡಿಗಳಲ್ಲೂ ಇದ್ದೇ ಇರುತ್ತದೆಯೆಂದು ಹೇಳಲಾಗದು. ನೈಷಧ ಚರಿತದ ‘ ಘನಾಂಬುನಾ ರಾಜಪಥೇ ಹಿ ಪಿಚ್ಛಲೇ, ಕ್ವಚಿದ್‌ ಬುಧೈರ್‌ ಅಪಿ ಅಪಥೇನ ಗಮ್ಯತೇ’ಯನ್ನ ‘ಹೆದ್ದಾರಿ ಕೊಚ್ಚೆ ಬಿದ್ದು ಹೊಲಸೆದ್ದಾಗ, ಬಲ್ಲವರಿಗೆ ಒಳದಾರಿಯೇ ಪಥ್ಯ ’ ಅಂತ ಅನುವಾದಿಸಿ ಹೊಸದನ್ನ ಹೊಸೆಯಬಹುದು. ಹಾಗೆಯೇ, ಪಂಚತಂತ್ರದ ‘ವಸ್ತ್ರಾಣಾಂ ಆತಪೋ ಜರಾ’ವನ್ನು ‘ಬಟ್ಟೆಗೆ ಮುಪ್ಪೇ ಕಿಡಿ’ಯಾಗಿಸಬಹುದು. ‘ಪಯೋಗತೇ ಕಿಂ ಖಲು ಸೇತುಬಂಧ :’ ಎಂಬುದಕ್ಕೆ, ‘ನೀರೆಲ್ಲ ಆರಿಹೋದ ಮೇಲೆ ಸೇತುವೆ ಕಟ್ಟಿದರೇನು ಬಿಟ್ಟರೇನು?’ ಎಂದು ಅನುವಾದಿಸುವುದಕ್ಕಿಂತ, ‘ಊರು ಸೂರೆ ಹೋದ ಮೇಲೆ ದಿಡ್ಡೀ ಬಾಗಿಲು ಹಾಕಿಕೊಂಡಂತೆ’ಯೇ ಚೆನ್ನು.

‘ಸರ್ವೇಗುಣಾ: ಕಾಂಚನಂ ಆಶ್ರಯನ್ತಿ’ ಎಂಬ ನಾಣ್ಣುಡಿ, ‘ಯಸ್ಯಾಸ್ತಿ ವಿತ್ತಂ ಸ ನರ: ಕುಲೀನ: । ಸ ಪಂಡಿತ: ಸ ಶ್ರುತವಾನ್‌ ಗುಣಜ್ಞ: । ಸ ಏವ ವಕ್ತಾ ಚ ಸ ಚ ದರ್ಶನೀಯೋ।’ ಎಂಬ ಭರ್ತೃಹರಿಯ ನೀತಿಶತಕದ ಶ್ಲೋಕಾಂತ್ಯ ಪಾದ. ಇದನ್ನೇ ಶಬ್ದಮಣಿದರ್ಪಣಕಾರ ‘ಪೊನ್ನುಳ್ಳುವನೇ ಕುಲೀನಂ। ಚೆನ್ನಂ, ಕಲಿ, ಸತ್ಯವಾದಿಯೆನಿಸುಗುಂ, ಅದರಿಂ-। ದಿನ್ನುಂ ಪೊನ್ನನೆ ಪಡೆವುದು। ಪೊನ್ನಂ ಸಮನಿಸುಗುಂ ಅಲ್ತೆ ಪೆಣ್ಣುಂ ಮಣ್ಣುಮ್‌।।’ ಎಂದು ಭಾವಾನುವಾದಿಸಿದ್ದರೂ, ಕೊನೆಯ ಸಾಲು ಗಾದೆಯಾಗಿ ಕನ್ನಡದಲ್ಲಿ ಉಳಿಯಿತೇನು?

ಹಾಗೆಯೇ, ‘ಔದುಂಬರಾಣಿ ಪುಷ್ಪಾಣಿ, ಶ್ವೇತ ವರ್ಣಂ ಚ ವಾಯಸಮ್‌। ಮತ್ಸ್ಯಪಾದಂ ಜಲೇ ಪಶ್ಯನ್‌, ನ ನಾರೀ ಹೃದಯಸ್ಥಿತಮ್‌।।’ ಎಂಬುದರ ನನ್ನ ಕನ್ನಡ ರೂಪ, ‘ಅತ್ತಿ ಹೂವನು ಕಂಡೆ, ಬಿಳಿಯ ಬಣ್ಣದ ಕಾಗೆಯನೂ ನಾ ಕಂಡೆ। ಕಂಡೆ ನೀರಲಾಡುವ ಮೀನ ಹೆಜ್ಜೆಗಳನೂ। ಕಂಡಿರಾ ನೀವೆಂದೂ, ಕೇಳಿಹಿರಾ, ಬಲ್ಲಿರಾ। ಲಲನೆಯಾಬ್ಬಳ ಮನದಾಳದೊಳಗೇಳಿವ ಅಲೆಯ ಪರಿಯ?।।’ ಮೂಲವನ್ನು ಅರ್ಥೈಸೀತೆ ಹೊರತು ಗಾದೆಯಾಗಿ ಉಳಿಯದು.

ಇದರಂತೆ, ‘ದೂರದ ನೀರು ಹತ್ತಿರದ ಬೆಂಕಿಯನ್ನ ಆರಿಸಬಲ್ಲದೆ’ ಎಂಬ ಚೈನೀ ಗಾದೆ, ‘ಬತ್ತಿ ಹೋಗೋ ತನಕ ಬಾವೀಲಿ ನೀರಿತ್ತೇ ಅನ್ನೋದು ಕೆಲವರಿಗೆ ಗೊತ್ತಾಗಲ್ಲ’ ಎಂಬ ಐರಿಷ್‌ ಗಾದೆ, ‘ಸುಮ್ಮನೇ ಇರೋ ನಾಯಿ ಬೇಗ ನಂಬಬೇಡ, ನಿಂತ ನೀರಲ್ಲಿ ದಿಢೀರನೇ ಧುಮಕಬೇಡ’ ಎನ್ನುವ ರಷ್ಯನ್‌ ಗಾದೆ- ಇವೆಲ್ಲ ಆಯಾಯ ಪರಿಸರದ ವೈಶಿಷ್ಟ್ಯಗಳು.

‘ಅಳೆಯಿಲ್ಲದೂಟ, ಹೆಂಮಳೆಯಿಲ್ಲದಾರಂಬ। ಬಳೆಯಿಲ್ಲದವಳ ನಳಿದೋಳು ದೊಂಬರ। ಗೆಳೆಯೆಂದವಕ್ಕು- ಸರ್ವಜ್ಞ।।’ ಗಮನಿಸಿ. (ಇಲ್ಲಿ , ಅಳೆ= ಮಜ್ಜಿಗೆ, ಆರಂಬ = ಒಕ್ಕಲುತನ, ಹೆಂಮಳೆ= ಭಾರೀ ಮಳೆ.) ‘ನೀರಾದರೂ ಮಜ್ಜಿಗೆ, ಮರುಳಾದರೂ ತಾಯಿ’ ಎನ್ನುವಲ್ಲಿ , ವಯಸ್ಸಾದಮೇಲೆ ಅರಳುಮರಳು ಹುಚ್ಚಿಯೇ ಆಗಿರಲಿ, ಮಕ್ಕಳಿಗೆ ತಾಯಿ ಎಂದೆಂದೂ ತಾಯಿಯೇ ಎನ್ನುವ ಮಾತಿದೆ. ‘ಅಜ್ಜಿ ಇಲ್ಲದ ಮನೆಯು, ಮಜ್ಜಿಗಿಲ್ಲದ ಊಟ’ ಎಂಬುದೂ ಇದೆ ; ‘ತಕ್ರಾನ್ತಂ ಖಲು ಭೋಜನಮ್‌’ ಇದನ್ನೇ ಸಮರ್ಥಿಸುತ್ತದೆ. (ಈ ಮಜ್ಜಿಗೆಗೆ ‘ಕಳಲೆಂದು ಮಜ್ಜಿಗೆಯುಂ, ಅಂದುಗೆಯುಂ ಅಕ್ಕು’ ಎಂದು ಶಬ್ದಮಣಿದರ್ಪಣಕಾರ ಹೆಚ್ಚುಗಾರಿಕೆಗೆ ಏರಿಸಿದ್ದಾನೆ!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X