• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೀರು’ ತುಂಬಿದ ಗಾದೆ, ಒಗಟು ನುಡಿಗಟ್ಟು...

By Staff
|

‘ನೀರು’ ತುಂಬಿದ ಕನ್ನಡ ನುಡಿಗಟ್ಟುಗಳ ಕೆರೆ, ಒಗಟುಗಳ ತೊರೆ, ಗಾದೆಗಳ ಝರಿಗಳು !

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

Waterಯಾವುದೇ ಭಾಷೆಯಾಗಲೀ, ಅದು ಬೆಳೆದಂತೆಲ್ಲಾ ಅದರಲ್ಲಿ ಆಡುವ ಮಾತಿನ ಸೊಗಸು ಹೆಚ್ಚುವ ಹಾದಿಯಲ್ಲಿ ವಿಶಿಷ್ಟ ಪದಪುಂಜಗಳೂ, ಅರ್ಥಗರ್ಭಿತ ವಾಕ್ಯ ಸಮುಚ್ಛಯಗಳೂ ಪ್ರಧಾನ ಪಾತ್ರ ವಹಿಸುತ್ತವೆ. ‘ನುಡಿಗಟ್ಟು’ಎಂದರೆ, ಪದಶಃ ತಿಳಿಸುವ ಸಾಮಾನ್ಯ ಅರ್ಥಕ್ಕೆ ಹೊರತಾಗಿ, ಮಿಗಿಲಾಗಿ ವಿಶೇಷ ಅರ್ಥವನ್ನು ಸ್ಫುರಿಸುವ ವಾಗ್ಧಾರೆ(ಇಂಗ್ಲಿಷ್‌ನಲ್ಲಿ ‘ಈಡಿಯಮ್‌’ ). ‘ಅವಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ’ ಎಂದಾಗ, ಈ ನುಡಿಗಟ್ಟು ‘ತುಂಬಾ ದುಃಖವನ್ನು ಅನುಭವಿಸುತ್ತಿದ್ದಾಳೆ’ ಎಂದು ಸೂಚ್ಯವಾಗಿ ಹೊಸದೇನೋ ಬೆಳಕನ್ನ ಹೊರಚೆಲ್ಲಿತು. ಹೋಲಿಕೆ, ಅರ್ಥ ವಿಸ್ತಾರ, ಸ್ವಲ್ಪ ಮಟ್ಟಿಗೆ ಉತ್ಪ್ರೇಕ್ಷೆಗಳು ನುಡಿಗಟ್ಟಿನ ಗುಣಗಳು.

ಅನುಭವಸಿದ್ಧವಾದ ಮಾತನ್ನ ಅಲಂಕಾರಯುತವಾಗಿ, ಸಾಧ್ಯವಾದಷ್ಟು ಪ್ರಾಸಬದ್ಧವಾಗಿ, ಆದರೆ ಸಂಕ್ಷಿಪ್ತವಾಗಿ ಹೇಳುವ ಲೋಕೋಕ್ತಿಯೇ ನಾಣ್ಣುಡಿ. ಸ್ವಲ್ಪ ವ್ಯತ್ಯಾಸವಿದ್ದರೂ, ಇದೇ ‘ಗಾದೆ’ಯೆಂದರೆ ತಗಾದೆಯೇನೂ ಇಲ್ಲ. ‘ವೇದ ಸುಳ್ಳಾದರೂ ಗಾದೆ ಸುಳ್ಳಾದೀತೇ’ ಎಂಬ ಗಾದೆಯೇ ಇದಕ್ಕೆ ಒಳ್ಳೆಯ ಉದಾಹರಣೆ !

ಕಿಟೆಲ್‌ ಕೋಶ, ಕನ್ನಡ ರತ್ನಕೋಶ, ವಿವಿಧ ಕೋಶಗಳು, ವಿಶ್ವಕೋಶಗಳು, ‘ಶಬ್ದಮಣಿದರ್ಪಣ’ದಂಥ ವ್ಯಾಕರಣ ಗ್ರಂಥಗಳು, ಕನ್ನಡ ಕೆಲವು ಕಾವ್ಯ ಗ್ರಂಥಗಳು, ಗಾದೆ-ಒಗಟುಗಳ ಬಗ್ಗೆ ಬಂದ ಪುಸ್ತಕಗಳ ಸಮುದ್ರದಲ್ಲಿ ಅವಗಾಹನ (= ಮುಳುಗೇಳುವುದು) ಮಾಡಿದಾಗ, ಸಿಕ್ಕ ಕೆಲವು ಮುತ್ತುಗಳನ್ನು ಆರಿಸಿಕೊಂಡು ಈ ಲೇಖನಕ್ಕೊಂದು ರೂಪ ಕೊಡುತ್ತಿದ್ದೇನೆ. ನೀರಿನ ಬಗ್ಗೆ ಮಾತ್ರಾ ನನ್ನ ಈ ಚೇಲಂಕನ ಈಜಾಟ, ಹುಡುಕಾಟ !

ನುಡಿಗಟ್ಟು : ಈ ಪುಸ್ತಕಗಳನ್ನು ಬರೆದವರು ‘ನುಡಿಗಟ್ಟು’ಗಳ ವಿಷಯವನ್ನು ಬಲ್ಲವರು, ‘ಅರೆದು ಕುಡಿ’ದವರು, ಚೆನ್ನಾಗಿ ತಿಳುವಳಿಕೆಯುಳ್ಳವರು. ಬಹಳ ಅನುಭವಶಾಲಿಗಳಾದ್ದರಿಂದ ‘ಏಳು ಕೆರೆಯ ನೀರು ಕುಡಿದ’ವರೆಂದರೆ ತಪ್ಪಲ್ಲ. ‘ತುಂಬಿದ ಕೊಡ’ದಂತೆ ನಿಜವಾದ ಯೋಗ್ಯತೆಯಿದ್ದೂ ಜಂಬ ಪಡದ ಜನ. ಪರಾಮರ್ಶೆಗಾಗಿ ಇಂಥ ಪುಸ್ತಕಗಳನ್ನು ಓದಲು ‘ಅಳೆದು ಸುರಿದೂ’ ಹಿಂದು ಮುಂದೆ ಯೋಚಿಸುತ್ತಾ ಕುಳಿತುಕೊಳ್ಳಬೇಕಾಗಿಲ್ಲ; ವಿನಿಯೋಗಿಸಿದ ನಿಮ್ಮ ಕಾಲ ‘ನೀರಿನಲ್ಲಿ ಹೋಮ ಮಾಡಿ’ದಂತೆ ವ್ಯರ್ಥವಾಗದು. ನಿಮಗೆ ಇಲ್ಲಿ ಅಸಂದಿಗ್ಧವಾಗಿ ಏನೂ ತೊಂದರೆಯಾಗದೆ, ‘ಕುಡಿದ ನೀರು ಅಲ್ಲಾಡದ ಹಾಗೆ’ ಮಾಹಿತಿ ಸಿಗುವದಾದ್ದರಿಂದ, ಮಾರ್ಗ ಮಧ್ಯದಲ್ಲೇ ಸಹಾಯಕ್ಕೆ ಸಂಚಕಾರ ತರುವ ‘ನಡು ನೀರಿನಲ್ಲಿ ಕೈ ಬಿಡುವ’ ಪ್ರಮೇಯ ಒದಗದು. ಲೋಕಾನುಭವ ಏನೂ ಇಲ್ಲದ, ಸಂಕುಚಿತ ಮನದ ‘ಕೂಪ ಮಂಡೂಕ’ಗಳೂ ಸಹ ‘ಹಾಲಿಗಾದರೂ ಹಾಕು ನೀರಿಗಾದರೂ ಹಾಕು’ ಎನ್ನುತ್ತಾ ಉದ್ಧಾರವನ್ನಾದರೂ ಮಾಡು ಹಾಳಾದರೂ ಮಾಡು, ಎಂದು ಕೈಲಿದ್ದ ಹಣ ಖರ್ಚಾಗಿ, ‘ಗಂಟು ಕರಗು’ವ ಮುನ್ನವೇ ಈ ಬಗೆಯ ಪುಸ್ತಕಗಳನ್ನು ಆಶ್ರಯಿಸಬಹುದು; ನೀರಡಿಕೆ ತೀರಿಸಿಕೊಂಡು, ಮಾಡಬೇಕಾದ ಕೆಲಸ ಮಾಡಿ ಮುಗಿಸಿ, ‘ಕೈತೊಳೆ’ದುಕೊಳ್ಳಬಹುದು; ಎಳ್ಳಷ್ಟೇ ಆಗಿರಲಿ, ಕವಿದಿದ್ದರೆ ಆ ಬುದ್ಧಿಯ ಕತ್ತಲಿಗೆ ‘ಎಳ್ಳು ನೀರು ಬಿಟ್ಟು ’ ಶಾಶ್ವತವಾಗಿ ಕತ್ತಲ ಸಂಬಂಧ ಕಡಿದುಕೊಳ್ಳಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more