ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ, ಬಂದ ವಸಂತ...
ಸಂಸ್ಕೃತ ಭಾಷೆಯ ಬಗ್ಗೆ ಹೇಳಹೊರಟಾಗ ಅಲ್-ಬಿರೂನಿ ಎದೆ ತುಂಬಿ ಹಾಡುತ್ತಾನೆ! ಸಂಸ್ಕೃತದ ವ್ಯಾಕರಣ ಮತ್ತು ಛಂದಸ್ ಶಾಸ್ತ್ರದ ತಿಳುವಳಿಕೆ ಬೇರೆಲ್ಲ ವಿಜ್ಞಾನ ಶಾಸ್ತ್ರಾಧ್ಯಯನಕ್ಕೆ ಅವಶ್ಯಕ ಪೂರ್ವಪಠ್ಯ (‘ಪ್ರಿ-ರೆಕ್ವಿಜಿಟ್!’) ಎಂಬ ಅಭಿಪ್ರಾಯ ಅವನದು. ಈ ಸಂದರ್ಭದಲ್ಲಿ (ಹದಿಮೂರನೇ ಅಧ್ಯಾಯದಲ್ಲಿ) ಕಾಶ್ಮೀರದಲ್ಲಿ ಆ ಕಾಲದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು, ರಾಜಾಶ್ರಯದ ವಶೀಲಿಯ ಸಾರ್ವಕಾಲಿಕ ಸತ್ಯದ ವಿಚಾರವನ್ನು ಹೇಳುತ್ತಾನೆ:
ಸಂಸ್ಕೃತದ ವ್ಯಾಕರಣ-ಛಂದಸ್ ಶಾಸ್ತ್ರಗಳಲ್ಲಿ , ನಾಲ್ಕನೆಯ ಶತಮಾನದ ಪಾಣಿನಿಯ ‘ಅಷ್ಯಾಧ್ಯಾಯಿ’ ಸೇರಿದಂತೆ, ಮುಖ್ಯವಾದ ಎಂಟು ಗ್ರಂಥಗಳ ಪಟ್ಟಿ ಇಲ್ಲಿದೆ (ಪುಟ 135). ಅದರಲ್ಲಿ ಕೊನೆಯದು ಉಗ್ರಭೂತಿ ಎಂಬವನ ‘ಶಿಷ್ಯ-ಹಿತ-ವೃತ್ತಿ’ ಎಂಬುದೂ ಒಂದು. ಜಯಪಾಲ ರಾಜನ ಮಗ ಷಾಹ್ ಆನಂದಪಾಲ್ ಎಂಬ ಅರಸ ಆಗ ಕಾಶ್ಮೀರವನ್ನು ಆಳುತ್ತಿದ್ದ . ಈ ಆನಂದಪಾಲನು ನಮ್ಮ ಉಗ್ರಭೂತಿಯ ಶಿಷ್ಯನಾಗಿ ಚಿಕ್ಕಂದಿನಲ್ಲಿ ಗುರುಕುಲ ವಾಸ ಮಾಡಿದ್ದ . ಉಗ್ರಭೂತಿ ತನ್ನ ಈ ಹೊಸ ‘ಶಿಷ್ಯಹಿತವೃತ್ತಿ’ ಯನ್ನ ಕಾಶ್ಮೀರಕ್ಕೆ ಕಳಿಸಿದನಂತೆ. ಅಲ್ಲಿನ ಜನ ಈಗಾಗಲೇ ಜನಪ್ರಿಯವಾಗಿದ್ದ ‘ಪಾಣಿನಿ’ ಮುಂತಾದವರ ವ್ಯಾಕರಣ ಗ್ರಂಥಗಳನ್ನೇ ಅಧ್ಯಯನ ಮಾಡುತ್ತಿದ್ದವರು, ಈ ಹೊಸ ಪುಸ್ತಕಕ್ಕೆ ಲೇಖಕ ನಿರೀಕ್ಷಿಸಿದಷ್ಟು ಮನ್ನಣೆ ಕೊಡಲಿಲ್ಲವಂತೆ. ನಿರಾಶನಾದ ಗುರು ಶಿಷ್ಯೋತ್ತಮನಿಗೆ ದೂರು ಹೇಳಿದನಂತೆ. ತತ್‌ಕ್ಷಣ ರಾಜಾಜ್ಞೆ ಹೊರಬಿತ್ತಂತೆ : ‘ರಾಜ ಗುರು ಶ್ರೀ ಉಗ್ರಭೂತಿ ಪಂಡಿತರಿಂದ ರಚಿತವಾದ ‘ಶಿಷ್ಯಹಿತವೃತ್ತಿ’ಯನ್ನು ಸಂಸ್ಕೃತಾಭ್ಯಾಸಿಗಳೆಲ್ಲ ಅಧ್ಯಯನ ಮಾಡತಕ್ಕದ್ದು ; ಮತ್ತು ಹಾಗೆ ಅದನ್ನು ಅಧ್ಯಯನ ಮಾಡುವವರಿಗೆ ಸರ್ಕಾರದ ವತಿಯಿಂದ ಒಟ್ಟು ಇಪ್ಪತ್ತು ಸಾವಿರ ಬಂಗಾರದ ನಾಣ್ಯ (‘ದಿರ್ಹ್ಯಂ’)ಗಳನ್ನೂ, ಇನ್ನೂ ಅನೇಕ ಉಡುಗೊರೆಗಳನ್ನೂ ಕೊಡಲಾಗುವುದು!’- ಎಂದು. ಆಮೇಲೆ ನೋಡಿ, ಎಲ್ಲಿ ಹೋದರೂ, ಎತ್ತೆತ್ತ ನೋಡಿದರೂ, ಯಾರನ್ನು ಕೇಳಿದರೂ ಅದೇ ಸುದ್ದಿ ; ಬೆಳಗಾಗುವುದರೊಳಗೇ ಉಗ್ರಭೂತಿಯ ‘ಶಿಷ್ಯಹಿತವೃತ್ತಿ’ ಕಾಶ್ಮೀರದಲ್ಲೆಲ್ಲ ಮನೆಮಾತಾಗಿಬಿಟ್ಟಿತಂತೆ!
ಕಾಶ್ಮೀರೀ ಪಂಚಾಂಗದ ಬಗ್ಗೆ (ಶಕವರ್ಷ 951?) ಬರೆಯುತ್ತಾ ಆಲ್-ಬಿರೂನಿಯು, ಸಪ್ತರ್ಷಿಮಂಡಲ ವೃಶ್ಚಿಕರಾಶಿಯಲ್ಲಿ ಅನುರಾಧಾ ನಕ್ಷತ್ರದಲ್ಲಿ ಎಪ್ಪತ್ತೇಳು ವರ್ಷಗಳ ಕಾಲ ಇರುವ ಬಗ್ಗೆ ವ್ಯಾಖ್ಯಾನ ಮಾಡುತ್ತಾ (ಪುಟ 391), ಭಾರತೀಯರೊಂದಿಗೇ ವಾಸಿಸುತ್ತಿಲ್ಲವಾದರೆ, ಹಿಂದೂಗಳ ಇಷ್ಟೆಲ್ಲ ವಿವಿಧ ಖಗೋಳ-ಜ್ಯೋತಿಷ್ಯ ಶಾಸ್ತ್ರದ ಸಿದ್ಧಾಂತಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಯಾರಿಗೆ ತಾನೆ ಸಾಧ್ಯ?- ಎಂದು ಪ್ರಶಂಸೆಯ ಮಾತನಾಡುತ್ತಾನೆ!
ಕಪಿಲನ ಸಾಂಖ್ಯವನ್ನು ಚರ್ಚಿಸಿದರೂ, ಪತಂಜಲಿಯ ಯೋಗಸಿದ್ಧಾಂತವನ್ನು ಸುದೀರ್ಘವಾಗಿ ಪ್ರಸ್ತಾಪಿಸಿದರೂ ಆಲ್-ಬಿರೂನಿ ಉಪಯೋಗಿಸುವ ಗ್ರಂಥಗಳು ಈಗ ನಮಗೆ ಲಭ್ಯವಿಲ್ಲ . ಹೀಗೆ ಅನೇಕ ಸಂಸ್ಕೃತ ಗ್ರಂಥಗಳನ್ನು ಆಲ್-ಬಿರೂನಿ ಕೊಂಡುಕೊಂಡು, ಅಭ್ಯಾಸ ಮಾಡಿ, ಅವುಗಳ ವಿವರ ಬರೆದ; ಕೆಲವನ್ನು ಅರಬ್ಬೀ ಭಾಷೆಗೆ ಅನುವಾದವನ್ನೂ ಮಾಡಿದ. ಈಗ ಅಲಭ್ಯವಾದ ಮೂಲಗ್ರಂಥಗಳನ್ನು ನಾವೀಗ ಅವುಗಳ ಅನುವಾದದಿಂದ ಪುನರ್-ನಿರ್ಮಾಣ ಮಾಡಬೇಕಾದ ಪರಿಸ್ಥಿತಿ ಬಂದಿದೆ!
***
ಈಗೊಂದೆರಡು ಸೋಜಿಗದ ಸುದ್ದಿಗಳನ್ನು ಹೇಳಬಯಸುವೆ; ಒಂದು ಅಭಿಪ್ರಾಯದ ಪ್ರಕಾರ ಕ್ರಿ.ಶ. ಎಂಟನೆಯ ಶತಮಾನದವರು ಎಂದು ಹೇಳಲಾಗುವ ಶ್ರೀ ಗೌಡಪಾದ ಅವರ ಪ್ರಸ್ತಾಪ ಆಲ್-ಬಿರೂನಿಯ ಗ್ರಂಥದಲ್ಲಿ ಬರುತ್ತದೆ ; ಆದರೆ ಗೌಡಪಾದರ ಶಿಷ್ಯರಾದ ಆಚಾರ್ಯ ಶ್ರೀ ಶಂಕರರ ಪ್ರಸ್ತಾಪ ಏಕೋ ಅವನಲ್ಲಿಲ್ಲ !
ಈಗ ಭಗವದ್-ಗೀತೆಯ ವಿಚಾರ: ಆಲ್-ಬಿರೂನಿ ಉಲ್ಲೇಖಿಸುವ ‘ವಾಸುದೇವ-ಅರ್ಜುನ’ರ ಸಂವಾದವು ವ್ಯಾಸರ ‘ಭಾರತ’ದಲ್ಲಿ ಬರುತ್ತದೆ ಎನ್ನುತ್ತಾನಷ್ಟೆ (ಪುಟ 29 ರಿಂದ ಹಲವಾರು ಕಡೆ). ಆಲ್-ಬಿರೂನಿ ಕೊಡುವ ಹಲವು ಉಲ್ಲೇಖಗಳಿಗೆ ಸಂವಾದಿಯಾಗಿ ಈಗ ನಮ್ಮಗಳ ಮನೆ ಮನೆಯಲ್ಲಿರುವ ಭಗವದ್-ಗೀತೆಯ ಶ್ಲೋಕಗಳನ್ನು ಯಥಾವತ್ ಆಗಿಯೂ, ಸ್ವಲ್ಪ ಸಮೀಪಸ್ಥವಾಗಿಯೂ ಆಕರ ಎಂದು ಗುರುತಿಸಬಹುದು. (ಉದಾಹರಣೆಗೆ, ಪುಟ 90= ಗೀತೆ 17:3-4; 14: 6-8; 16: 3-4; ಪುಟ 104 = 9 : 32-33; ಪುಟ 13=18 : 41-45 ಇತ್ಯಾದಿ) ಆದರೆ, ಕೆಲವು ‘ಗೀತೆ’ಯದೆಂದು ಆಲ್-ಬಿರೂನಿ ಹೇಳುವ ಉಲ್ಲೇಖಗಳು ಮಾತ್ರಾ ಈಗಿರುವ ನಮ್ಮ ಭಗವದ್ಗೀತೆಯಲ್ಲಿ ಇಲ್ಲ ! (ನಿದರ್ಶನಕ್ಕೆ, ಪುಟ 75, 76, 79-80; 122 ಇತ್ಯಾದಿ). ಅಂದರೆ ಏನು? ಆಲ್-ಬಿರೂನಿ ಕೈಗೆ ಸಿಕ್ಕಿದ್ದ ಆ ‘ಗೀತೆ’ಯ ಔತ್ತರೇಯ ‘ಪಾಠ’ ಬೇರೆಯೇ ಆಗಿತ್ತೇ?
‘ಮಹಾಭಾರತ’ದಂತೆ ಅದರೊಳಗಣ ‘ಗೀತೆ’ಯೂ ‘ಬೆಳೆದು’ ಬಂದ ಹಾದಿಯಲ್ಲಿ ಆಲ್- ಬಿರೂನಿಗೆ ಸಿಕ್ಕ ‘ಗೀತೆ’ ಒಂದು ಸ್ವಲ್ಪ ಹಳೆಯ ಘಟ್ಟದ್ದೇ? (ಇದು ಇನ್ನೊಂದು ದೊಡ್ಡ ಲೇಖನಕ್ಕೆ ಆಹಾರವಾಗುವ ವಿಷಯ; ಮರಾಠಿಯಲ್ಲಿ, ಇಂಗ್ಲೀಷಿನಲ್ಲಿ ಈ ಬಗ್ಗೆ ಪುಸ್ತಕ, ಲೇಖನಗಳು ಬಂದಿವೆ, ಚರ್ಚೆ ನಡೆದಿದೆ; ವಿವರಗಳನ್ನು ಸಂಗ್ರಹಿಸುತ್ತಿದ್ದೇನೆ!)
ಆಲ್-ಬಿರೂನಿಯ ‘ಕಿತಾಬುಲ್ ಹಿಂದ್’ನಲ್ಲಿ ಕರ್ನಾಟಕದ ಪ್ರಸ್ತಾಪವೂ ಇದೆ! ಘಜ್ನಿ ಮುಹಮ್ಮದನ ಆಡಳಿತದಲ್ಲಿ ನಾಗರಿಕ ಹಾಗೂ ಲಷ್ಕರೀ ಇಲಾಖೆಗಳಲ್ಲಿ ಹಿಂದೂ ಅಧಿಕಾರಿಗಳೂ, ಹಿಂದೂ ಕೆಲಸಗಾರರೂ ಸಾಕಷ್ಟು ಜನ ಇದ್ದರು ಎಂದು ಚರಿತ್ರಕಾರರು ಹೇಳುತ್ತಾರೆ. (ನೋಡಿ: ಈಲಿಯಟ್, ‘ಹಿಸ್ಟರಿ ಆಫ್ ಇಂಡಿಯಾ’, 2: 109). ಜಯಸೇನ ಎಂಬುವನ ಮಗ ತಿಲಕ್ ಎನ್ನುವವನು ಕಾಶ್ಮೀರದಲ್ಲಿ ಮೊದಲು ವಿದ್ಯಾಭ್ಯಾಸ ಮಾಡಿ ಮೊದಲು ಘಜ್ನಿ ಮುಹಮ್ಮದನಿಗೂ ನಂತರ ಅವನ ಮಗ ಮಸೂದನಿಗೂ ದುಬಾಷಿಯಾಗಿ ಕೆಲಸ ಮಾಡುತ್ತಿದ್ದನಂತೆ. (ಅದೇ ಪುಸ್ತಕ 2: 117, 123). ಕೆಲವರು ತಮ್ಮ ಈ ಮುಸ್ಲಿಮ ನಾಯಕನ ಪರವಾಗಿ ಕರ್ಮಾನ್, ಖ್ವಾರಿಜ್ಮ್ ಮುಂತಾದ ಕಡೆ ಯುದ್ಧ ಮಾಡಿದರಂತೆ. (ಅದೇ ಪುಸ್ತಕ, 2: 130-131); ಆ ಸೈನ್ಯದಲ್ಲಿ ನಮ್ಮ ಕರ್ನಾಟಕ ದೇಶದ ಜನರೂ ಇದ್ದರು- ಎನ್ನುತ್ತಾರೆ ಆ ಚರಿತ್ರಕಾರರು! ಇದನ್ನು ಸಾಚೌ ತನ್ನ ಟಿಪ್ಪಣಿಯಲ್ಲಿ (ಪುಟ 256- 257) ವಿವರಿಸುತ್ತಾರೆ. ಆಲ್-ಬಿರೂನಿಯು ಹಿಂದೂಗಳ ವಿವಿಧ ಭಾಷೆಗಳ ವರ್ಣಮಾಲೆಯನ್ನು ವಿವರಿಸುವಾಗ, ‘‘ಬೇರೆ ಭಾಷೆಗಳ ಅಕ್ಷರಮಾಲೆಯೆಂದರೆ,... ಕರ್ನಾಟದೇಶದಲ್ಲಿ ‘ಕರ್ನಾಟ’ ಭಾಷೆಯ ವರ್ಣಮಾಲೆ ಇದೆ; ಈ ಕರ್ನಾಟಕ ದೇಶದಿಂದ ಬಂದ ಜನರ ಸೈನ್ಯದ ತುಕುಡಿಗೆ ‘ಕನ್ನರ’ ಎನ್ನುತ್ತಾರೆ..’’- ಎಂದು ಹೇಳುತ್ತಾನೆ (ಪುಟ 173). ಕನ್ನಡ ‘ಕನ್ನರ’ವಾಗಿದೆ!
***
ಬರಿಯ ಹೊಗಳಿಕೆಯಾಂದೇ ಅಲ್ಲ, ತಪ್ಪು ಕಂಡಲ್ಲಿ ಖಂಡಿಸುವುದಕ್ಕೂ ಹಿಂಜರಿಯುವುದಿಲ್ಲ, ಆಲ್-ಬಿರೂನಿ; ‘ದೇವರು’, ‘ಧಾರ್ಮಿಕ ತತ್ತ್ವ ವಿಚಾರಗಳು’ ಮತ್ತು ‘ಆಚರಣೆ’- ಇವುಗಳ ಬಗ್ಗೆ ಹಿಂದೂಗಳಲ್ಲಿ ಓದಿ ಬರೆದ ಶಿಕ್ಷಿತ ವರ್ಗದವರ ತಿಳಿವಳಿಕೆಯೇ ಬೇರೆ; ಸಾಮಾನ್ಯಜನರ ನಂಬಿಕೆ, ನಡವಳಿಕೆಗಳೇ ಬೇರೆ; ‘‘ಎಲ್ಲಾ ದೇಶಗಳಲ್ಲೂ ಹೀಗೇನೆ; ತುಂಬಾ ಅಧ್ಯಯನ ಮಾಡಿದ ಸುಶಿಕ್ಷಿತರು ಗಹನವಾದ ಅಮೂರ್ತ ಭಾವನೆಗಳಿಂದ ಆಧ್ಯಾತ್ಮಿಕ ವಿಚಾರಗಳನ್ನು ಮನಗಂಡರೆ, ಸಾಮಾನ್ಯಜನರು ಇಂದ್ರಿಯ ಗೋಚರವಾದ ವಸ್ತು ವಿಚಾರಗಳ ಎಲ್ಲೆಯನ್ನು ಮೀರಿ ಹೋಗಲಾಗದೆ, ಗೂಢ ಆಧ್ಯಾತ್ಮಿಕ ತತ್ತ್ವಗಳಿಂದ ಜನ್ಯವಾದ ಸರಳ ವಿಧಿ ವಿಧಾನಗಳನ್ನೇ ಅವಲಂಬಿಸಿ ನಂಬಿ ಇರುತ್ತಾರೆ,’’- ಎಂಬ ಸಾರ್ವಕಾಲಿಕ ಸತ್ಯವನ್ನು ಸೊಗಸಾಗಿ ಹೇಳುತ್ತಾನೆ ! (ಪುಟ 27). ಹಿಂದೂಗಳ ನಂಬಿಕೆ ಆಚರಣೆಗಳಲ್ಲಿ ಗೊಂದಲ ಉಂಟುಮಾಡುವ ಸಮಸ್ಯೆ ಎದುರಾದಾಗ, ಇದ್ದುದನ್ನ ಇದ್ದ ಹಾಗೆ ಹೇಳಿ ಮುಂದುವರೆಯುತ್ತಾನೆ. ಬೇರೆಯವರು ಸಾಧಿಸದಿದ್ದನ್ನ ಹಿಂದೂಗಳಲ್ಲಿ ಕಂಡಾಗ ಖುಷಿಯಿಂದ ಷಹಭಾಸ್ ಎನ್ನುತ್ತಾನೆ; ಪ್ರಯೋಗ ಸಿದ್ಧವಾದ ವಿಜ್ಞಾನದ ತಥ್ಯಕ್ಕೂ ಪುರಾಣಗಳ ಕೆಲವು ಸಾಂಪ್ರದಾಯಿಕ ಕಾಲ್ಪನಿಕ ಮಿಥ್ಯಕ್ಕೂ ಹೊಂದಾಣಿಕೆ ಮಾಡಿಕೊಳ್ಳ ಬಯಸುವ, ಹಿಂದೂ ಖಗೋಳಶಾಸ್ತ್ರಜ್ಞರ ಒದ್ದಾಟವನ್ನು ಸಹಾನುಭೂತಿಯೀಂದ ಗಮನಿಸಿ, ವಿವರಿಸುತ್ತಾನೆ; ಅಲ್ಲಲ್ಲಿ ತಪ್ಪಿದ್ದಲ್ಲಿ ಮುಲಾಜಿಲ್ಲದೆ ಜರಿಯುತ್ತಾನೆ !
***
ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಆಲ್-ಬಿರೂನಿಯ ಈ ಗ್ರಂಥದ ಒಂದು ಸಂಕ್ಷಿಪ್ತ ಅಧ್ಯಯನದ ಫಲಶೃತಿಯಾಗಿ ಪ್ರೊಫೆಸರ್ ಎಡ್ವರ್ಡ್ ಸಾಚೌ ತಮ್ಮ ಟಿಪ್ಪಣಿಯಲ್ಲಿ ಮೊದಲಪುಟದಲ್ಲೇ ಬರೆದ ಮಾತುಗಳನ್ನ ಭಾವಾನುವಾದ ಮಾಡಲು ಇಚ್ಛಿಸುತ್ತೇನೆ:
‘‘ಒಬ್ಬ ಮುಸ್ಲಿಂ ಲೇಖಕನು ವಿಗ್ರಹಾರಾಧಕ ಪರಧರ್ಮೀಯರ ವಿಚಾರಧಾರೆಗಳೇನು ಎಂಬುದನ್ನ ಪತ್ತೆ ಹಚ್ಚಲು ಹೊರಟ- ಎಂಬುದು; ಅವರ ಏನೇನು ಅಭಿಪ್ರಾಯಗಳನ್ನು ಮುಸ್ಲಿಮರು ಒಪ್ಪಿಕೊಳ್ಳಬಹುದು, ಏನೇನನ್ನ ನಿರಾಕರಿಸಬಹುದು, ಇನ್ನು ಏನೇನನ್ನ ತಿರಸ್ಕರಿಸಿ ತಳ್ಳಿ ಹಾಕಬಹುದು ಎಂಬುದೆಲ್ಲವನ್ನ ಅಧ್ಯಯನ ಮಾಡಲು ಹೊರಟ ಎಂಬುದೂ; ಆ ಮುಸ್ಲಿಮ್ ಬರಹಗಾರ ಪರಧರ್ಮೀಯರಾದ ಹಿಂದೂಗಳ ಆ ಸಾಮಾಜಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ವಿಚಾರಧಾರೆಗಳನ್ನ (ತಮಗೆ ಅತ್ಯಂತ ಪವಿತ್ರವೆನಿಸಿದ) ಖುರಾನ್ ಮತ್ತು ಬೈಬಲ್‌ಗಳ ಗ್ರೀಕರ ಸಿದ್ಧಾಂತಗಳ ಉಲ್ಲೇಖಗಳ ಅಕ್ಕ ಪಕ್ಕದಲ್ಲಿ ಇರಿಸಿ, ವಿಶ್ಲೇಷಣೆ ಮಾಡುತ್ತಿದ್ದಾನೆ ಎಂದರೆ- ಅದು ಆ ಗ್ರಂಥಕರ್ತೃವಿನ ದೃಷ್ಟಿ- ವೈಶಾಲ್ಯ ಮತ್ತು ಮುಕ್ತ ಮನ: ಪ್ರವೃತ್ತಿಗೆ ಸಾಕ್ಷಿ ಎನಿಸುತ್ತದೆ. ಹಾಗೆ ನೋಡಿದರೆ, ಆಮೇಲಿನ ದಿನಗಳಿಗೆ ಹೋಲಿಸಿದರೆ, ಆಲ್-ಘಜಾಲಿ (ನಿಧನ 1111) ಯು ಪ್ರವರ್ತಿಸಿದ ಇಸ್ಲಾಮೀ ಸಾಂಪ್ರದಾಯಿಕತೆಯು ತಳಊರುವುದಕ್ಕೆ ಶತಮಾನಗಳ ಮುನ್ನ ಈ ರೀತಿಯ ಮನೋಭಾವ ಬಹುತೇಕ ಸಾಮಾನ್ಯವೇ ಆಗಿತ್ತು ಎನ್ನಬಹುದೇನೋ.
ಆಮೇಲೆ, ಎಲ್ಲ ಮುಸ್ಲಿಮ್ ರಾಷ್ಟ್ರಗಳ ಪ್ರಭಾವ ರಸಘಟ್ಟಿಗೊಂಡು, ಕೇಂದ್ರೀಕರಿಸಿದಂತಾಗಿ, ಒಂದು ನಿಶ್ಚಿತ ಮುಸ್ಲಿಮ್ ಮನೋಭಾವದ ರೂಪ ತಾಳುವುದಕ್ಕೆ ಮುನ್ನ, ಹೀಗೆ ಪ್ರತ್ಯೇಕ ಪ್ರತ್ಯೇಕ ವೈಯಕ್ತಿಕ ಅಭಿಪ್ರಾಯ, ಸಂಶೋಧನೆ, ಆವಿಷ್ಕಾರಗಳ ಅಭಿವ್ಯಕ್ತಿಗೆ ಅವಕಾಶವಿತ್ತು. ಅನಂತರ, ಈ ವೈಯಕ್ತಿಕತೆಯನ್ನು ಗುರುತಿಸುವುದಕ್ಕಾಗಲೀ, ಅಂಗೀಕರಿಸುವುದಕ್ಕಾಗಲೀ ಸಾಧ್ಯವಾಗದೇ ಹೋಗುವಷ್ಟು ಎಲ್ಲವೂ ಮಿಳಿತವಾಗಿ ಹೋಗಿಬಿಟ್ಟಿತು.
ಈ ಹಿನ್ನೆಲೆಯಲ್ಲಿ, ನಮ್ಮ ಆಲ್-ಬಿರೂನಿಯ ಕೊಡುಗೆ ಮುಸ್ಲಿಂ ಸಾಹಿತ್ಯ ಸಾಗರದಲ್ಲೇ ವಿಶಿಷ್ಟವಾದದ್ದು ! ಪರಧರ್ಮೀಯರ ವಿಚಾರ ವಿಶ್ವವನ್ನು ಒಳಹೊಕ್ಕು ಅಧ್ಯಯನ ಮಾಡುವ ಇವನ ಶ್ರದ್ಧಾಪೂರ್ಣ ಪ್ರಯತ್ನ ಶ್ಲಾಘನೀಯ! ಅಷ್ಟೇ ಅಲ್ಲ, (ನಡೆ ನುಡಿ ಆಚಾರ ವ್ಯವಹಾರಗಳಲ್ಲಿ ಹೆಜ್ಜೆ ಹೆಜ್ಜೆಗೂ ನೂರೆಂಭತ್ತು ಡಿಗ್ರಿ ವಿಮುಖರಾಗಿರುವ) ಸಹಜವಾಗಿಯೇ ವಿರುದ್ಧವಾಗಿರುವ ವಿಗ್ರಹಾರಾಧಕರ ಅಧ್ಯಯನ ಇವನ ಗುರಿ. ಮಾರ್ಗವೋ, ಆ ಪರಧರ್ಮೀಯರನ್ನು ಪೂರ್ವಗ್ರಹಪೀಡಿತನಾಗಿ ಎದುರಿಸಿ, ಹೊಡೆದಾಡಿ, ಅವಹೇಳನಕರವಾಗಿ ಚರ್ಚಿಸುವ ಕ್ರಮ ಇವನದಲ್ಲ. ಸಮಚಿತ್ತನಾಗಿದ್ದುಕೊಂಡು, ಉದ್ದಕ್ಕೂ ಒಂದೇ ಪ್ರಮಾಣದಲ್ಲಿ ಪಕ್ಷಪಾತರಹಿತನಾಗಿ, ತನಗದು ಒಪ್ಪಿಗೆಯಾಗಲೀ ಬಿಡಲಿ, ಎದುರಾಳಿಯ ತನಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಾಮಾಣಿಕ ನಡೆ, ಆಲ್- ಬಿರೂನಿಯದು.
ಮೇಲುನೋಟಕ್ಕೇ ಇಷ್ಟಂತೂ ಸ್ಪಷ್ಟ : (ಒಂದೆರಡು ಅಪವಾದಗಳನ್ನು ಬಿಟ್ಟರೆ,) ಬೇರೆ ಇನ್ನಾವುದೋ ಪರಿಸರದಲ್ಲಿ ಆಗಿದ್ದರೆ, ಮುಸ್ಲಿಮ್ ಚರಿತ್ರೆಯ ಬೇರೆ ಇನ್ನಾವುದೋ ಕಾಲದಲ್ಲಿ ಆಗಿದ್ದರೆ, ಇಸ್ಲಾಮೀ ಸುಲ್ತಾನರ ಯಾರದೋ ದೇಶದಲ್ಲಿ ಆಗಿದ್ದರೆ, ಇಂಥ ಗ್ರಂಥ ಬರೆದವನ ಜೀವಕ್ಕೇ ಅಪಾಯ ಆಗಿಬಿಡುತ್ತಿತ್ತು !’’- ಎನ್ನುತ್ತಾರೆ, ಪ್ರೊಫೆಸರ್ ಸಾಚೌ ಅವರು.
***
ಭರತವಾಕ್ಯ: ಈ ಎಲ್ಲದನ್ನು ಕಂಡು ನಮಗಾಗುವ ದೊಡ್ಡ ಆಶ್ಚರ್ಯವಿನ್ನೊಂದಿದೆ: ಅಂದಿನ ಹಿಂದೂ ದೇಶದ ಒಬ್ಬ ದೊಡ್ಡ ಶತ್ರುವೆನಿಸಿಕೊಂಡವನು, ಹಿಂದೂ ಧರ್ಮವನ್ನು ತುಳಿಯಲು ಸತತ ತೊಡಗಿದವನು, ಹಿಂದೂ ದೇವಾಲಯಗಳ ಭಾರೀ ವಿಧ್ವಂಸಕನೆನಿಸಿಕೊಂಡವನು, ಪರಮತ ಸಹಿಷ್ಣುತೆ ಲವಲೇಶವೂ ಇಲ್ಲದಂಥ ಚರಿತ್ರಾರ್ಹ ಕುಖ್ಯಾತ ಕ್ರೂರಪ್ರವೃತ್ತಿಯ ಈ ಘಜನಿ ಮುಹಮ್ಮದನ ಆಸ್ಥಾನದಲ್ಲಿ, ಆಶ್ರಯದಲ್ಲಿ ಇದ್ದುಕೊಂಡೇ, ಹಿಂದೂ ಮತದ ಬಗ್ಗೆ, ಅರಬ್ಬಿಯಲ್ಲಿ ‘ಹಕೀಕಾ’(ವಾಸ್ತವಿಕತೆ) ಯನ್ನು ತಮ್ಮವರಿಗೆ ಆಮೂಲಾಗ್ರವಾಗಿ ಸ್ಪಷ್ಟವಾಗಿ ತಿಳಿಸುವ ಸಾಹಸದ ಈ ಅಮೂಲ್ಯ ಗ್ರಂಥ ‘ಕಿತಾಬುಲ್ ಹಿಂದ್’ನ್ನು ಈ ಮುಸ್ಲಿಮ್ ಋಷಿ, ಆಲ್-ಬಿರೂನಿ ಬರೆದು ಉಳಿದುಕೊಂಡ; ನಮಗದನ್ನು ಉಳಿಸಿ ಮಹದುಪಕಾರ ಮಾಡಿಹೋದ- ಎಂದರೆ, ಈ ವಿಚಾರ ಜಗತ್ತಿನ ಎಂಟನೆಯ ಸೋಜಿಗವಲ್ಲದೆ ಮತ್ತಿನ್ನೇನು?












Click it and Unblock the Notifications