• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿ, ನೀನಿಲ್ಲದೆ ನಾ ಹೇಗಿರಲಿ ?

By Super
|

S.K.Harihareshwara, The Authorಅಲ್‌-ಬಿರೂನಿಯು ತಾನು ಕಂಡ ಕಾಶ್ಮೀರವನ್ನು ತನ್ನ ಗ್ರಂಥದುದ್ದಕ್ಕೂ ಹಲವೆಡೆ ಪ್ರಸ್ತಾಪಿಸುತ್ತಾನೆ. ಆ ಪ್ರದೇಶವನ್ನು ಅವನು ವರ್ಣಿಸುವುದು ಹೀಗೆ : ದುರ್ಗಮ ಪರ್ವತಗಳ ನಡುವೆ ಸಮತಲದ ಪ್ರಸ್ತಭೂಮಿಯ ಮೇಲೆ ಕಾಶ್ಮೀರ ಇದೆ. ದಕ್ಷಿಣ ಮತ್ತು ಪೂರ್ವ ಭಾಗ ಹಿಂದೂಗಳಿಗೆ ಸೇರಿದೆ ; ಪಶ್ಚಿಮ ಭಾಗವು ಬೋಲಾರ್‌ ಷಾಹ್‌ ಮತ್ತು ಷುಗನನ್‌ ಷಾಹ್‌ ಅವರ ಆಳ್ವಿಕೆಯಲ್ಲಿದೆ; ದೂರದ ಗಡಿನಾಡಿನ ಬಳಿಯ ಪ್ರದೇಶಗಳು ಭಾದಖಾಣ್‌ ಕಡೆಯವರೆಗೆ ವಾಕನ್ಷಾಹ್‌ಗೆ ಅಧೀನವಾಗಿದೆ; ಉತ್ತರಕ್ಕೆ, ಪೂರ್ವದ ಕೆಲವು ಭಾಗಗಳು ಟರ್ಕಿಯ ಖೋಟೆನ್ಗೂ ಟಿಬೆಟ್‌ಗೂ ಸೇರಿದೆ....ಕಾಶ್ಮೀರದವರು ಸಾಮಾನ್ಯವಾಗಿ ಕಾಲ್ನಡುಗೆಯಲ್ಲೇ ಸಂಚರಿಸುವ ಜನ ; ಅವರ ಬಳಿ ಹತ್ತಿ ಕುಳಿತು ಓಡಾಡಲು ಪ್ರಾಣಿಗಳಾಗಲೀ, ಆನೆಗಳಾಗಲೀ ಇಲ್ಲ ; ಆದರೆ ಅವರಲ್ಲಿ ಕೆಲವರು ಶ್ರೀಮಂತರು ಪಲ್ಲಕ್ಕಿಗಳಲ್ಲಿ ಕುಳಿತು ಸಂಚರಿಸುತ್ತಾರೆ ; ರಟ್ಟ್‌ ಎಂದು ಕರೆಯುವ ಈ ಪಲ್ಲಕ್ಕಿಗಳನ್ನು ಸೇವಕರು ತಮ್ಮ ಹೆಗಲ ಮೇಲೆ ಹೊತ್ತು ನಡೆಯುತ್ತಾರೆ. ಇಲ್ಲಿನವರಿಗೆ ತಮ್ಮ ದೇಶದ ಸ್ವಾಭಾವಿಕ ಭೌಗೋಳಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಕಾಳಜಿ ತುಂಬಾ. ಈ ಕಾರಣ, ಈ ದೇಶಕ್ಕೆ ಬಂದು ಹೋಗುವ ಮುಖ್ಯಮಾರ್ಗಗಳನ್ನು ಸುರಕ್ಷಿತವಾಗಿ ಇರಿಸಿಕೊಂಡಿದ್ದಾರೆ. ಆದ್ದರಿಂದ, ಇಲ್ಲಿನವರೊಂದಿಗೆ ಬೇರೆ ದೇಶದವರು ವಾಣಿಜ್ಯ ವ್ಯವಹಾರ ಮಾಡುವುದು ಅಷ್ಟು ಸುಲಭವಲ್ಲ. ಹಿಂದೆ ಒಬ್ಬಿಬ್ಬರು ವಿದೇಶೀ ಯಹೂದಿಗಳನ್ನು ಬರಲು ಬಿಟ್ಟಿದ್ದರಂತೆ. ಬೇರೆಯವರ ಮಾತು ಹಾಗಿರಲಿ, ಈಗಂತೂ ತಮಗೆ ಪರಿಚಿತರಲ್ಲದ ಬೇರೆ ಯಾವ ಹಿಂದೂವನ್ನೂ ಸಹ ಇಲ್ಲಿ ಬರಲು ಬಿಡುವುದಿಲ್ಲ ! (ಸ್ವಯಮಧಿಕಾರದ ಇನಿದನಿ ಆಗಲೇ ಜನಮನದಲ್ಲಿ ಅಲ್ಲಿ ಹಬ್ಬಿತ್ತೇ ?)ಮುಂದೆ, ಕಾಶ್ಮೀರದ ನದಿ, ನಗ, ನಗರ, ಜನಜೀವನ, ವೈಶಿಷ್ಟ್ಯಗಳನ್ನು ಹೀಗೆಯೇ ಅಲ್ಲಲ್ಲಿ ಸೂಚಿಸುತ್ತ ಹೋಗುತ್ತಾನೆ. (ಪುಟ 206-8ನ್ನೂ ನೋಡಿ.) ವಿಷ್ಣು ಪುರಾಣ (2:192 ಇತ್ಯಾದಿ), ಮತ್ಸ್ಯ ಪುರಾಣ ಮತ್ತು ವಾಯು ಪುರಾಣ(45: 94-107; 47: 38- 58)ಗಳನ್ನು ಉಲ್ಲೇಖಿಸುತ್ತಾ ಭಾರತ ವರ್ಷದ ರಾಜ್ಯಗಳು, ಪರ್ವತಗಳನ್ನು (ಪುಟ 247, 259), ನದಿಗಳು (ಪುಟ 259)ಇತ್ಯಾದಿಗಳನ್ನು ವಿವರಿಸುವಾಗ, ಕಾಶ್ಮೀರದ ಹಿಮವತ್‌ಪರ್ವತ, ನದಿಗಳನ್ನು ಅಲ್‌-ಬಿರೂನಿ ಗುರುತಿಸುತ್ತಾನೆ. ಬೇರೆ ಬೇರೆ ನಗರಗಳ ಅಕ್ಷಾಂಶಗಳನ್ನು ಕರಾರುವಾಕ್ಕಾಗಿ ಪಟ್ಟಿ ಮಾಡುವ ವೇಳೆಯಲ್ಲಿ (ಪುಟ 317), ಲೌಹುರ್‌ 34 ಡಿಗ್ರಿ 10 ನಿಮಿಷ ಎನ್ನುತ್ತಾ, ಅಲ್ಲಿಂದ ಕಾಶ್ಮೀರದ ರಾಜಧಾನಿಗೆ ಐವತ್ತಾರು ಮೈಲಿ ದೂರ ಎನ್ನುತ್ತಾನೆ.ಷಟ್‌ ಪಂಚಾಷಿಕಾ, ಹೋರಾ-ಪಂಚ-ಹೋತ್ರಿಯಾ(?), ಯೋಗಯಾತ್ರಾ, ಟಿಕನಿಯಾತ್ರಾ(?), ಬೃಹತ್‌- ಜಾತಕ, ವಿವಾಹ ಪಟಲ- ಮುಂತಾದುವುಗಳ ಕರ್ತೃ (ಕ್ರಿಸ್ತ ಶಕ ಸುಮಾರು ಆರನೆಯ ಶತಮಾನದ ) ಪ್ರಚಂಡ ಖಗೋಳ ಶಾಸ್ತ್ರಜ್ಞ, ವರಾಹಮಿಹಿರ ನಮ್ಮ ಅಲ್‌-ಬಿರೂನಿಗೆ ಬಹಳ ಮೆಚ್ಚುಗೆಯ ಗ್ರಂಥಕರ್ತೃ. (ನೋಡಿ : ಎಸ್‌ ಆರ್‌ ಎನ್‌ ಮೂರ್ತಿ, ‘ವರಾಹ ಮಿಹಿರ’ (ಕನ್ನಡ), ಭಾರತ ಭಾರತೀ ಪುಸ್ತಕ ಸಂಪದ, 1980; ಎಂ. ರಾಮಕೃಷ್ಣ ಭಟ್‌, ವರಾಹ ಮಿಹಿರನ ‘ಬೃಹತ್‌ ಸಂಹಿತಾ’ , ಎರಡು ಸಂಪುಟಗಳು, ಮೋತಿಲಾಲ್‌ ಬನಾರಸೀದಾಸ್‌, 1986). ವರಾಹಮಿಹಿರನ ‘ಬೃಹತ್‌ ಸಂಹಿತೆ’ಯನ್ನು (ಆಲ್‌-ಬರೂನಿ ಇದನ್ನು ‘ಸಂಹಿತೆ’ ಎಂದೇ ಕರೆದು, ಗೌರವಿಸುತ್ತಾನೆ !) ತನ್ನ ಗ್ರಂಥದುದ್ದಕ್ಕೂ ಹಲವೆಡೆ ಉಲ್ಲೇಖಿಸುತ್ತಾನೆ. ವಹಾರ ಮಿಹಿರನ ‘ಸಂಹಿತೆ’ಯಲ್ಲಿನ ರಾಜ್ಯಗಳ ಪಟ್ಟಿಯಲ್ಲಿ ಕಾಶ್ಮೀರವೂ ಸೇರಿದೆ (ಪುಟ 303, ಬೃಹತ್‌ ಸಂಹಿತೆ 14 : 29). ಬಹುಷಃ ಅಲ್‌-ಬಿರೂನಿಗೆ ವರಾಹ ಮಿಹಿರನ ಈ ಕೆಳಗಣ ಶ್ಲೋಕ ಬಹಳ ಅರ್ಥವತ್ತಾಗಿ ಕಂಡಿರಬೇಕು; ಅದರಿಂದ ಬಹಳ ಮೆಚ್ಚುಗೆಯಿಂದ ಉಲ್ಲೇಖಿಸುತ್ತಾನೆ :

‘ಮ್ಲೇಚ್ಛಾ ಹಿ ಯವನಾಸ್‌ ತೇಷು ಸಂಯಕ್‌ ಶಾಸ್ತ್ರಂ ಇದಂ ಸ್ಥಿತಮ್‌।

ಋಷಿವತ್‌ ತೇ’ ಪಿ ಪೂಜ್ಯನ್ತೇ, ಕಿಂ ಪುನರ್‌ ದೈವವಿದ್‌ ದ್ವಿಜ:।।’(‘ಸಂಹಿತೆ 2 : 32)

(ಮ್ಲೇಚ್ಛ, ಯವನರು ಅವರು ಹೊರಗಿನವರೇ ಇರಬಹುದಯ್ಯ,ತಳ ಊರಿ ನಿಂತಿದೆ, ನೋಡ !, ಶಾಸ್ತ್ರ ಈ ವಿಜ್ಞಾನಗಳೆಲ್ಲ ಭದ್ರವಾಗವರಲ್ಲಿ, ಅಲ್ಲಿ;ಯಾರಾದರೇನಂತೆ ಋಷಿಸಮಾನರು ಅವರು, ಪೂಜಾರ್ಹ ಮೇಧಾವಿಗಳಯ್ಯ, ಹೀಗಿರಲುನಮ್ಮವರೇ ಆದಂಥ ಬ್ರಹ್ಮಜ್ಞಾನಿಗಳಿಗೆಷ್ಟು ಮನ್ನಣೆಯೋ, ಹೇಳು, ಇನ್ನೇನು !)

‘ಅವನೊಬ್ಬ ಪ್ರಾಮಾಣಿಕ ವಿಜ್ಞಾನಿ’ ಎಂದು ವರಾಹಮಿಹಿರನನ್ನು ಹೊಗಳಿ (ಪುಟ 396), ಕೆಲವು ಖಗೋಳಕ್ಕೆ ಸಂಬಂಧಿಸಿದ ಬೃಹತ್ಸಂಹಿತೆಯ ವಿಚಾರಗಳನ್ನು ತನಗೆ ತಿಳಿದಿರುವ ಇನ್ನಿತರ ಸಿದ್ಧಾಂತಗಳೊಂದಿಗೆ ಸಮೀಕ್ಷಿಸುತ್ತಾ, ತನಗಿಂತ 526 ವರ್ಷ ಮುಂಚೆ ಇದ್ದ ಮಹನೀಯ ಈತ ಎನ್ನುತ್ತಾನೆ. (ಪುಟ 2 : 86). ಈ ವರಾಹ ಮಿಹಿರನ ಬೃಹತ್‌ ಸಂಹಿತೆಯನ್ನೂ, ಲಘುಜಾತಕವನ್ನೂ ಅಲ್‌-ಬಿರೂನಿ ಅರಬ್ಬೀ ಭಾಷೆಗೆ ಅನುವಾದಿಸಿದ್ದಾನೆ.

ಕಾಶ್ಮೀರದಲ್ಲಿ (ಹತ್ತನೆಯ ಶತಮಾನದ ಮಧ್ಯಭಾಗದಲ್ಲಿದ್ದ) ಉತ್ಪಲ ಎಂಬುವನು ವರಾಹಮಿಹಿರನ ‘ಬೃಹತ್‌ ಸಂಹಿತೆ’ಗೆ ಭಾಷ್ಯ ಬರೆದಿದ್ದಾನೆ. ಅದನ್ನು ಉಲ್ಲೇಖಿಸುತ್ತ, ನಮ್ಮ ಅಲ್‌-ಬರೂನಿ ಏನು ಹೇಳುತ್ತಾನೆ ಕೇಳಿ (ಪುಟ 298): ‘ದೇಶದ, ನಗರದ , ಹೆಸರುಗಳು ಯುಗ ಯುಗಕ್ಕೂ, ಕಾಲ ಕ್ರಮೇಣ ಬದಲಾಯಿಸುತ್ತಾ ಹೋಗುತ್ತವೆ. ನಿದರ್ಶನಕ್ಕೆ: ‘ ಮುಲ್ತಾನ್‌’ನ್ನೇ ತೆಗೆದುಕೊಳ್ಳಿ; ಅದು ಮೊದಲು ‘ಕಾಶ್ಯಪಪುರ’ ಎಂದಿತ್ತು ; ಆಮೇಲೆ, ಅದು ‘ಹಂಸಪುರ’ವಾಯಿತು ; ನಂತರ, ‘ಬಗಪುರ’ವೂ, ಸಾಂಭಪುರ’ವೂ ಆಯಿತು. ಕೊನೆಗೆ ‘ ಮೂಲಸ್ಥಾನ ’ ಎನಿಸಿಕೊಂಡಿತು. ‘ಮೂಲ’ ಅಂದರೆ ಎಲ್ಲದರ ಬೇರು, ಹುಟ್ಟುವ ಜಾಗ ಎಂದು. ಅದೀಗ ‘ಮುಲ್ತಾನ್‌’ ಆಗಿದೆ !’ - ಈ ಮಾತುಗಳನ್ನು ಇಷ್ಟು ವಿವರವಾಗಿ ಏಕೆ ಉಲ್ಲೇಖಿಸಿರಬಹುದು , ಹೇಳಿ ?

ಮುಲ್ತಾನಿನ ಜನ ಕಾಶ್ಮೀರದವರ ಪದ್ಧತಿಯಂತೆ (ಭಾದ್ರಪದದಿಂದ?) ವರ್ಷ ಗಣನೆ ಮಾಡುತ್ತಾರೆ. (ಪುಟ 2 : 9); ಮುಲ್ತಾನಿನ ಸುತ್ತ ಮುತ್ತಲಿನ ಜನ ಅಲ್ಲಿನ ಹಿಂದೂ ದೇವಾಲಯ ಧ್ವಂಸ ಆಗುವವರೆಗೂ ಆ ಸೂರ್ಯ ದೇವಾಲಯಕ್ಕೇ ಹೋಗುತ್ತಿದ್ದರು ; ಆಮೇಲೆ ಕಾಶ್ಮೀರಕ್ಕೆ ಹೋಗಲಾರಂಭಿಸಿದರು! (ಪುಟ 2 : 148); ಮುಲ್ತಾನಿನ ಹಿಂದೂಗಳು ‘ಸಾಂಬಪುರ ಯಾತ್ರಾ’ ಎಂಬ ಹಬ್ಬವನ್ನು ಆಚರಿಸುತ್ತಾರೆ. ವರ್ಷದಲ್ಲಿ ಅದು ಯಾವ ದಿನ ಬೀಳುತ್ತದೆ ಎಂಬುದನ್ನು ನಿರ್ಧರಿಸುವ ಒ ಂದು ಸಂಕೀರ್ಣ ಕ್ರಮವನ್ನೂ ಅವನೇ ವಿವರಿಸುತ್ತಾನೆ(2 : 184). ಮುಲ್ತಾನಿನ ಜನ ನನಗೆ ಹೀಗೆ ಹೇಳುತ್ತಿದ್ದರು. (ಪುಟ 1: 211); ಮುಲ್ತಾನಿನ ಜನ ಬೇಸಗೆ ಕಾಲದಲ್ಲಿ ಆಕಾಶದಲ್ಲಿ ಒಂದು ಕೆಂಪು ನಕ್ಷತ್ರವನ್ನು ಕಾಣುತ್ತಿದ್ದರು. (ಪುಟ 240) ; ಐಶ್ವರ್ಯ ಸಂಪನ್ನವಾದ ಆದಿತ್ಯ ದೇವಾಲಯದಲ್ಲಿ, ಸೂರ್ಯನ ವಿಗ್ರಹದ ಎರಡು ಕಣ್ಣುಗಳಲ್ಲಿ ಅಪೂರ್ವವಾದ ಎರಡು ಕೆಂಪು ರತ್ನಗಳು ಇದ್ದವು ; (1006ರಲ್ಲಿ) ಮುಹಮ್ಮದ್‌ ಇಬ್ನ್‌ ಅಲ್ಕಾಸಿಮ್‌ ಅಲ್‌-ಮುನಾಬ್ಬಿಹ್‌ ದೊರೆಯು ಈ ದೇವಾಲಯವನ್ನು ಧ್ವಂಸ ಮಾಡಿದ ವಿವರ (ಪುಟ153) - ಹೀಗೆಲ್ಲ ಇನ್ನೂ ಹತ್ತಾರು ಕಡೆ ಯಾವ ಕಾರಣಕ್ಕೆ ಮುಲ್ತಾನನ್ನು ವಿವರಿಸಿರಬಹುದು ?

ಅಲ್‌-ಬಿರೂನಿಗೆ ಬಹುಷಃ ಮುಲ್ತಾನ್‌ ಬಹಳ ಪ್ರಿಯವಾದ, ಅವನ ಬರವಣಿಗೆಗೆ ಅನುಕೂಲಕರವಾದ ಕಾರ್ಯಕ್ಷೇತ್ರವೂ ಆಗಿದ್ದಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಸಾಚೌ ಹೇಳುತ್ತಾರೆ (ಟಿಪ್ಪಣಿ, ಪುಟ 325) : ಘಜನಿ ಮಹಮ್ಮದ ತನ್ನ ದಂಡಯಾತ್ರೆ ಮಾಡಿ ಗೆದ್ದ ರಾಜ್ಯಗಳ ಬುದ್ಧಿವಂತ ವಿದ್ವಾಂಸರುಗಳನ್ನು ಮುಲ್ತಾನ್‌ ನಗರಕ್ಕೆ ಕೊಂಡೊಯ್ದು ಅಲ್ಲಿ ಒಂದು ಥರಹಾ ಸೆರೆಮನೆ ವಾತಾವರಣದಲ್ಲಿ ಕಟ್ಟುಪಾಡಿನೊಳಗೆ ಇಟ್ಟು , ತಮ್ಮ ತಮ್ಮ ಬರವಣಿಗೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದನೇನೋ- ಅಂತ!

ಕಾಶ್ಮೀರದ ನೆರೆಹೊರೆಯವರೆಗೂ ಹಬ್ಬಿದ ‘ಪಂಚಿರ್‌’ ಪ್ರದೇಶವನ್ನು ಅಲ್‌-ಬಿರೂನಿ ಒಂದು ಕಡೆ ಉಲ್ಲೇಖಿಸುತ್ತಾನೆ. ಅಲ್ಲಿ ಬಹುಪತಿತ್ವ ಪದ್ಧತಿ ಇದೆ ಎಂದು ಹೇಳುವಾಗ (ಪುಟ 108), ಮಹಾಭಾರತ ಕಾಲದ ‘ನಿಯೋಗ’ ಪದ್ಧತಿಯನ್ನೂ ಪ್ರಸ್ತಾವಿಕವಾಗಿ ಹೇಳಿ, ಅರಬ್ಬರಲ್ಲಿ ಬಹು ಹಿಂದೆ ಇದ್ದ ಈ ಬಹುಪತಿತ್ವ ಪದ್ಧತಿಯನ್ನು ಸೂಚಿಸಿ, ಇವೆಲ್ಲ ಈಗ ಬಳಕೆಯಲ್ಲಿಲ್ಲದ ಕಲಿವರ್ಜ್ಯಗಳೆನ್ನುವುದನ್ನು ಸೂಚಿಸುತ್ತಾನೆ.

ಭಾಷೆಯ ವಿಷಯ ಹೇಳುವಾಗ, ಸಿದ್ಧಮಾತೃಕೆಯ ವರ್ಣಮಾಲೆ ಕಾಶ್ಮೀರದಲ್ಲಿಯೇ ಹುಟ್ಟಿದ್ದು , ಅಲ್ಲಿಯ ಮತ್ತು ವಾರಣಾಸಿಯಲ್ಲಿ ಅದನ್ನು ಬಳಸುತ್ತಿದ್ದಾರೆ, ಎನ್ನುತ್ತಾನೆ ಅಲ್‌-ಬಿರೂನಿ (ಪುಟ 173) ; ಕಾಶ್ಮೀರದಲ್ಲಿ ಪುಸ್ತಕಗಳ ಪುಟಗಳ ಗುರುತಿಗೆ ಚಿತ್ರಗಳನ್ನು ಉಪಯೋಗಿಸುವುದನ್ನು ಇವನು ಗಮನಿಸಿದ್ದಾನೆ (ಪುಟ 174). ಶ್ರುತಿ ರೂಪವಾದ ವೇದಗಳು ನಶಿಸಿ ಹೋದೀತೆಂಬ ಶಂಕೆಯಿಂದ ಅವುಗಳನ್ನು ಬರಹಕ್ಕಿಳಿಸಿ, ಭಾಷ್ಯ ಬರೆದ ಮೊದಲಿಗ- ಒಬ್ಬ ಕಾಶ್ಮೀರೀ ಬ್ರಾಹ್ಮಣ ‘ವಸುಕ್ರ’ ಎಂಬುವನು, ಎನ್ನುತ್ತಾನೆ, ಅಲ್‌-ಬಿರೂನಿ (ಪುಟ 126). ಯಾರೀ ಹತ್ತನೆಯ ಶತಮಾನದ ವಸು(ಶು)ಕ್ರ? ಈಗಂತೂ ಅವನ ಕೃತಿ ಅಲಭ್ಯ! ‘ಇಂದ್ರ ವಸುಕ್ರ’ ಎಂಬ ವೈದಿಕ ಋಷಿಯಾಬ್ಬ ಇದ್ದಾನೆ ; ಅವನೂ ಅವನ ಹೆಂಡತಿ ‘ಇಂದ್ರ-ಸ್ನುಷಾ ವಸುಕ್ರಪತ್ನೀ ಋಷಿಕಳೂ ಋಗ್ವೇದದ ಮೂರು ಸೂಕ್ತಗಳ ದೃಷ್ಟಾರರು. (ಋ. ವೇ. 10 : 27-29). ಐತ್ತರೇಯ ಆರಣ್ಯಕ 1 : 2: 2: ಮತ್ತು ಶಾಂಖ್ಯಾಯನ 1:3 ರಲ್ಲಿಯೂ ವಸುಕ್ರ ದಂಪತಿಗಳ ಪ್ರಸ್ತಾಪ ಬರುತ್ತದೆ. (ಎ.ಬಿ, ಕೀಥ್‌, ‘ವೇದಿಕ್‌ ಇಂಡೆಕ್ಸ್‌ ಆಫ್‌ ನೇಮ್ಸ್‌’. ಮೋತಿಲಾಲ್‌ ಬನಾರಸೀದಾಸ್‌, 1982, 2:277). ಇಂದ್ರನನ್ನು ಸ್ತುತಿಸುವ ಈ ಮಂತ್ರದ್ರಷ್ಟಾರರರ ವಂಶದವರು ಕಾಶ್ಮೀರ ಮೂಲದವರೇ? ಮುಂದೆ ಸಂಶೋಧನೆ ಮಾಡಲು ಒಳ್ಳೆಯ ವಿಷಯ ಇದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes on Celestial view of Kashmir : What Albirooni documented on Kashmir in his literature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more