• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವಸೂರಿಗಳು ಕಂಡ ಕಾಶ್ಮೀರ

By ಶಿಕಾರಿಪುರ ಹರಿಹರೇಶ್ವರ
|

ಭಾರತೀಯರ ಅತಿದೊಡ್ಡ ರಮ್ಯ ಕನಸು‘ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್‌ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು . ಆದರೆ ಹೇಗಿತ್ತು ಗೊತ್ತಾ ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.

ನಮ್ಮ ಕಾಶ್ಮೀರ :ಲೇಖನ-6

ಮುಸ್ಲಿಂ ಋಷಿ ಅಲ್‌-ಬಿರೂನಿ ಕಂಡ ಕಾಶ್ಮೀರ

(ಹಿಂದೂ-ಮುಸ್ಲಿಂ ಸೌಹಾರ್ದ ಸೇತುವಿನ ಒಂದು ಮಿಂಚು ನೋಟ)

Al-Biruni ಮ್ಲೇಚ್ಛಾ ಹಿ ಯವನಾಸ್‌ ತೇಷು ಸಮ್ಯಕ್‌ ಶಾಸ್ತ್ರಂ ಇದಂ ಸ್ಥಿತಮ್‌।ಋಷಿವತ್‌ ತೇ’ ಪಿ ಪೂಜ್ಯನ್ತೇ, ಕಿಂ ಪುನರ್‌ ದೈವವಿದ್‌ ದ್ವಿಜ:।।’

(ಮ್ಲೇಚ್ಛ, ಯವನರು ಅವರು ಹೊರಗಿನವರೇ ಇರಬಹುದಯ್ಯ, ತಳ ಊರಿ ನಿಂತಿದೆ, ನೋಡ !, ಶಾಸ್ತ್ರ ಈ ವಿಜ್ಞಾನಗಳೆಲ್ಲ ಭದ್ರವಾಗವರಲ್ಲಿ, ಅಲ್ಲಿ ;ಯಾರಾದರೇನಂತೆ ಋಷಿಸಮಾನರು ಅವರು, ಪೂಜಾರ್ಹ ಮೇಧಾವಿಗಳಯ್ಯ, ಹೀಗಿರಲುನಮ್ಮವರೇ ಆದಂಥ ಬ್ರಹ್ಮಜ್ಞಾನಿಗಳಿಗೆಷ್ಟು ಮನ್ನಣೆಯೋ ಹೇಳು ಇನ್ನೇನು !)

(ವರಾಹ ಮಿಹಿರ, ಕ್ರಿ.ಶ. 504, ‘ಬೃಹತ್‌ ಸಂಹಿತೆ’ 2:32)

ಪ್ರಾಚೀನ ಭಾರತದ ಚರಿತ್ರೆಗೆ ಒಂದು ಮಹತ್ವದ ಕಾಣಿಕೆ ಎನ್ನಿಸಿಕೊಳ್ಳುವ ಒಂದು ಪುಸ್ತಕವಿದೆ, ‘ನನ್ನ ಈ ಪುಸ್ತಕವು ನಿಜವಾದ ಮಾಹಿತಿಗಳ ಒಂದು ಚಾರಿತ್ರಿಕ ಕಡತ... ಓದುಗರ ಮುಂದೆ ಹಿಂದೂಗಳ ಸಿದ್ಧಾಂತಗಳನ್ನು ಅವು ಹೇಗೆ ಇವೆಯೋ ಹಾಗೆಯೇ ಇಡುತ್ತಿದ್ದೇನೆ; ಪರಸ್ಪರ ಸಂಬಂಧವನ್ನು ತೋರಿಸುವ ಉದ್ದೇಶದಿಂದ, ಅವುಗಳ ಜೊತೆ ಜೊತೆಗೆ ಅವನ್ನು ಹೋಲುವ ಗ್ರೀಕರ ತತ್ವಗಳನ್ನೂ ಇಲ್ಲಿ ಪ್ರಸ್ತುತಪಡಿಸುವೆ... ಪ್ರಾರಂಭದಲ್ಲೇ ಇದನ್ನು ಹೇಳಿಬಿಡಬೇಕು: ಭಾರತೀಯ ವಿಚಾರಧಾರೆಯ ಮುಖ್ಯ ಲಕ್ಷಣಗಳನ್ನು ಒಳ ಹೊಕ್ಕು ನೋಡುವ ವಿಷಯದಲ್ಲಿ ಎಷ್ಟು ಕಷ್ಟ ಅನುಭವಿಸಬೇಕು ಎಂಬುದರ ಬಗ್ಗೆ ಸಾಕಷ್ಟು ಅರಿವಿರಬೇಕು. ಈ ಕಷ್ಟದ ಬಗ್ಗೆ ಇರುವ ತಿಳುವಳಿಕೆ ನಮ್ಮ ಕೆಲಸವನ್ನು ಸುಗಮಗೊಳಿಸುವುದಲ್ಲದೆ, ನಾವೇನಾದರೂ ತಪ್ಪಿದ್ದರೆ ಕ್ಷಮೆ ಯಾಚಿಸಲೂ ಅನುಕೂಲ ಮಾಡಿಕೊಡುತ್ತೆ... ಮೊದಲಿಗೆ, ಭಾರತೀಯರದು ಬೇರೆಲ್ಲ ರಾಷ್ಟ್ರಗಳದಕ್ಕಿಂತ ಭಿನ್ನವಾದದ್ದು. ಅವರ ಗ್ರಂಥಗಳ ಭಾಷೆ ಸಂಸ್ಕೃತ ಬಹಳ ಸಂಕೀರ್ಣ. ...ಎರಡನೆಯದು: ಅವರ ಧರ್ಮ ನಮ್ಮದಕ್ಕಿಂತ ಸಂಪೂರ್ಣ ವಿಭಿನ್ನ ! ... ಮೂರನೆಯದು: ನಡವಳಿಕೆ, ರೀತಿ ನೀತಿಗಳಲ್ಲಿ ಅವರು ನಮ್ಮ ಹಾಗೆ ಇಲ್ಲ. ಅವರದು ಬೇರೆ ರೀತಿಯ ಉಡುಗೆ ತೊಡುಗೆ, ಆಚಾರ ವಿಚಾರ ವ್ಯವಹಾರಗಳು... ಅವರ ರಾಷ್ಟ್ರೀಯ ಗುಣಲಕ್ಷಣಗಳ ವೈಶಿಷ್ಟ್ಯ, ಹೀಗೆ ಇನ್ನೂ ಅನೇಕ ಕಾರಣಗಳೂ ಇವೆ....’, ಈ ರೀತಿ ಪ್ರಾರಂಭ ಮಾಡಿ ಕೊನೆಯಲ್ಲಿ, ‘ಇದುವರೆಗೆ ಈ ಪುಸ್ತಕದಲ್ಲಿ ನಾವು ಹೇಳಿರುವುದು ಏನಿದೆ, ಅದು ಹಿಂದೂಗಳ ಜೊತೆ, ಅವರ ಧರ್ಮ, ವಿಜ್ಞಾನ, ಅವರ ಸಾಹಿತ್ಯ, ಅವರ ನಾಗರೀಕತೆ- ಇವೆಲ್ಲದರ ಬಗ್ಗೆ ಚರ್ಚಿಸಲು ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ... ನಾವು ಹೇಳಿದುದರಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತೇವೆ...’ - ಎಂದು ವಿನಮ್ರವಾಗಿ ಮುಗಿಸುವ ಗ್ರಂಥ ನೆನ್ನೆ ಮೊನ್ನೆ ಬರೆದ ವಿದೇಶೀಯನೊಬ್ಬನ ಪ್ರವಾಸ ಕಥನವಲ್ಲ. ಇದು ತನ್ನ ಭಾರತ ಸಂಚಾರದ ದೀರ್ಘಾವಧಿಯಲ್ಲಿ ಕಾಶ್ಮೀರಕ್ಕೆ ಬಂದು, ಇದ್ದು ಹೋದ, ಹತ್ತನೆಯ ಶತಮಾನದ(ಕ್ರಿ.ಶ. 1030) ಪ್ರಖ್ಯಾತ ಮುಸ್ಲಿಂ ಚರಿತ್ರಕಾರ ‘ಅಲ್‌-ಬಿರೂನಿ’ಯ ‘ಕಿತಾಬುಲ್‌ ಹಿಂದ್‌’ ಗ್ರಂಥದ ಮಾತುಗಳು !

ಇರಾನಿನ ಮೂಲದ ಮುಸ್ಲಿಮನಾದ ಬಹುಭಾಷಾ ತಜ್ಞ ಅಲ್‌-ಬಿರೂನಿ (ಅವನನ್ನು ಆಲ್‌-ಬರೂನಿ, ಅಲ್‌-ಬಿರೂನಿ, ಅಲ್‌ ಬೆರುನಿ ಎಂದೂ ಕರೆಯುವುದೂ ಉಂಟು)ಯ ಹೆಸರು ಅದಲ್ಲ. ‘ಅಬು ರೈಹನ್‌ ಮುಹಮ್ಮದ್‌ ಇಬ್ನ್‌ ಅಹ್‌ಮದ್‌’ ಎಂದು. (ಇರಾನ್‌ ಸೊಸೈಟಿಯವರು ಒಮ್ಮತಕ್ಕೆ ಬಂದ ರೂಪ ‘ಅಲ್‌- ಬಿರೂನಿ’ಯನ್ನೇ ನಾನು ಈ ಲೇಖನದಲ್ಲಿ ಬಳಸುತ್ತಿದ್ದೇನೆ ! ನೋಡಿ: ‘ಅಲ್‌ ಬಿರೂನಿ ಸಂಸ್ಮರಣ ಸಂಪುಟ, 1951). ಪರ್ಶಿಯನ್‌ ಭಾಷೆಯಲ್ಲಿ ‘ಬಿರೂನಿ’ ಎಂದರೆ, ‘ಹೊರಗಡೆಯವನು’ ಎಂದು(ಒಂದು ಥರ ‘ಬೇರೆ ಕಡೆಯಿಂದ ಇಲ್ಲಿಗೆ ಬಂದದ್ದು’ ಎಂಬ)ಅರ್ಥ. ಇವನು ಹುಟ್ಟಿದ್ದು ಖ್ವಾರಿಝ್ಮ್‌ ಎಂಬ ಪ್ರದೇಶದಲ್ಲಿ, ಅದೇ ಹೆಸರಿನ ನಗರದ ಹೊರಗಡೆಯ ಒಂದು ಊರಲ್ಲಿ (ಕ್ರಿ.ಶ.973)(ಸಿಂಧ್‌ ಪ್ರಾಂತ್ಯದ ಬಿರೂನ್‌ನಲ್ಲಿ ಹುಟ್ಟಿದ ಎಂಬ ತಪ್ಪು ಅಭಿಪ್ರಾಯವೂ ಇದೆ ! ). ಆ ಪ್ರದೇಶ ಆವಾಗ ಪರ್ಶಿಯಾದ ಸಮಾನಿದ್‌ ವಂಶದ ಸುಲ್ತಾನರ ಆಳ್ವಿಕೆಗೆ ಒಳಗಾಗಿತ್ತು. ಸ್ವಲ್ಪ ಕಾಲ ಕ್ಯಾಸ್ಪಿಯನ್‌ ಸಮುದ್ರದ ಬಳಿ ಶಂಷುಲ್‌ ವಂಶಗಿರ್‌ ಸುಲ್ತಾನನ ಆಸ್ಥಾನದಲ್ಲಿ ಇದ್ದ ; ಆಮೇಲೆ ಹುಟ್ಟೂರು ಖ್ವಾರಿಝ್ಮ್‌ಗೆ ಹಿಂತಿರುಗಿದ ; ಘರಿkು್ನಯ ಸುಲ್ತಾನ ಮಹಮುದನು ಆ ದೇಶದ ಮೇಲೆ ಧಾಳಿ ಮಾಡಿ ಗೆದ್ದ ಮೇಲೆ (ಕ್ರಿ.ಶ. 1999-1030), ಅವನೊಡನೆ ಘರಿkು್ನಗೆ ಬಂದ. ಒಂದು ಹೇಳಿಕೆಯ ಪ್ರಕಾರ, ಗೆದ್ದ ಮೇಲೆ, ಖ್ವಾರಿಝ್ಮ್‌ ನಿಂದ ಸೆರೆ ಹಿಡಿಯಲ್ಪಟ್ಟು ಕರೆತಂದ ಮೇಧಾವಿಗಳಲ್ಲಿ ಇವನು ಪ್ರಮುಖ. ಕೊನೆಯುಸಿರೆಳೆದ ತನ್ನ 75ನೆಯ ವಯಸ್ಸಿನವರೆಗೂ (ಹಿಜರಿ 440ರವರೆಗೆ, ಕ್ರಿ.ಶ. 1048-1049) ಸುಲ್ತಾನನ ರಾಜಧಾನಿ ಘರಿkು್ನಯಲ್ಲೇ ಇದ್ದ. ಹಲವಾರು ಸಂಸ್ಕೃತ ಗ್ರಂಥಗಳನ್ನು ಅರಬ್ಬೀ ಭಾಷೆಗಳಿಗೆ ಅನುವಾದಿಸಿದ ವಿಶಾಲ ಮನೋಭಾವದ, ಉದ್ದ ಹೆಸರಿನ ಈ ಉದ್ದಾಮ ಪಂಡಿತನಿಗೆ ‘ಹೊರಗಿನವನು’ಎಂಬ ಅಡ್ಡ ಹೆಸರೇ ಉಳಿದು ಹೋಯಿತು ! ಅಲ್‌-ಬಿರೂನಿಗೆ ಮುಪ್ಪಿನ ವಯಸ್ಸಿನಲ್ಲೂ ಜ್ಞಾನದಾಹ ಇಂಗಿರಲಿಲ್ಲ. ಹೇಳುತ್ತಾರೆ : ಸಾಯುವ ದಿನ ಅವನ ಬಳಿ ಅವನ ಆರೋಗ್ಯ ವಿಚಾರಿಸಲು, ಅವನ ಆಪ್ತ ಸ್ನೇಹಿತನೊಬ್ಬ ಬಂದನಂತೆ. ಹಿಂದೊಮ್ಮೆ ಯಾವುದೋ ಗಣಿತಶಾಸ್ತ್ರದ ಕಠಿಣ ಸಮಸ್ಯೆಯಾಂದನ್ನು ಆ ಸ್ನೇಹಿತ ಅಲ್‌-ಬಿರೂನಿಯಾಂದಿಗೆ ಚರ್ಚಿಸಿದ್ದುದನ್ನು ನೆನಪಿಸಿಕೊಂಡು, ಆ ಸಮಸ್ಯೆಗೆ ಪರಿಹಾರ ಏನಾದರೂ ಸಿಕ್ಕಿತೇ ?- ಎಂದು, ಸ್ನೇಹಿತನಿಗೆ ಅಲ್‌-ಬಿರೂನಿ ಕೇಳಿದನಂತೆ. ‘ಇದೇನಯ್ಯಾ ಈಗಲೋ ಆಗಲೋ ಎಂದು, ಕೊನೆಯುಸಿರು ಎಳೆಯೋ ಕಾಲದಲ್ಲೂ, ದೇವರ ಧ್ಯಾನ ಮಾಡುವುದನ್ನು ಬಿಟ್ಟು ಯಾವುದೋ ಗಣಿತದ ಪ್ರಶ್ನೆ ಕೇಳುತ್ತಿದ್ದೀಯಲ್ಲಾ?’- ಎಂದು ಆ ಸ್ನೇಹಿತ ಕೇಳಿದನಂತೆ. ಅದಕ್ಕೆ, ಅಲ್‌-ಬಿರೂನಿ ಹೇಳಿದನಂತೆ : ‘ಸರಿ, ಈ ಗಣಿತದ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನೋ ಸುಳ್ಳು ಭಾವನೆಯಿಂದ ನಾನು ಸಾಯಬೇಕೂ ಅಂತ ನಿನ್ನ ಅಪೇಕ್ಷೆಯೇನು ?’ ಸಮಸ್ಯೆಯನ್ನ ಬಿಡಿಸಿ, ತನಗೆ ಗೊತ್ತಿದ್ದ ಪರಿಹಾರವನ್ನು ಸ್ನೇಹಿತ ವಿವರಿಸಿದ ಮೇಲೆ ಅಲ್‌-ಬಿರೂನಿಗೆ ಬಹಳ ಖುಷಿ ಆಯಿತಂತೆ. ಸ್ನೇಹಿತ ಮನೆಯಿಂದ ಹೊರಬಂದನಂತೆ; ಒಳಗಿನಿಂದ ‘ಅಯ್ಯೋ ದೇವರೇ!’- ಅಂತ ಮನೆಯವರ ಅಳುವಿನ ಕೂಗು ಕೇಳಿ ಬಂತಂತೆ !

ಈ ವೇಳೆಗಾಗಲೇ ಅರಬ್ಬೀ ಭಾಷೆಗೆ ಹಲವಾರು ಸಂಸ್ಕೃತಗ್ರಂಥಗಳು ಅನುವಾದಿತವಾಗಿದ್ದವು. ಗಣಿತ ಶಾಸ್ತ್ರ, ಖಗೋಳಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರದ ಉದ್ಗ್ರಂಥಗಳು ಸಂಸ್ಕೃತದಿಂದ ಅರಬ್ಬೀ ಭಾಷೆಗೆ, ‘ಅಬ್ಬಾಸಿದ’ರ ಕಾಲ ಎನ್ನುವ ಕ್ರಿಸ್ತಶಕ ಸುಮಾರು 750ಕ್ಕೆ ಮುನ್ನವೇ ಅನುವಾದಿತವಾಗಿದ್ದವು. ಉದಾಹರಣೆಗೆ, ಅರೇಬಿಯಾದ ಗಣಿತಜ್ಞ ಅಲ್‌-ಖ್ವಾರಿರಿkು್ಮೕ ಮಹಮದ್‌ ಇಬ್ನ ಮೂಸಾ(ಕ್ರಿ. ಶ. 780-850) ಎಂಬ ಗಣಿತಜ್ಞನು ರಚಿಸಿದ ‘ಅಲ್‌-ಜಬರ್‌ ವಾಲ್‌ ಮುಕಾಬಲ್‌ (ಸ್ಥಾನ ಪಲ್ಲಟ ಮತ್ತು ನಿರ್ಮೂಲ ಶಾಸ್ತ್ರ)’ ಎಂಬ ಗಣಿತ ಗ್ರಂಥ, ಲ್ಯಾಟಿನ್‌ ಭಾಷೆಗೆ ಹೋದಾಗ, ‘ಆಲ್‌- ಜೀಬ್ರ’ ಆಗಿ ಪರಿವರ್ತಿತವಾಯಿತು. ಅಲ್‌-ಖ್ವಾರಿರಿkು್ಮೕಯು ಭರತ ಖಂಡದ ಮೂಲಗಳಿಂದಲೂ, ಗ್ರೀಕ್‌ ಮೂಲಗಳಿಂದಲೂ ವಿಫುಲವಾಗಿ ಹೊಸ ಹೊಸ ಗಣಿತ ಭಾವನೆಗಳನ್ನು ಸ್ವೀಕರಿಸಿದ, ಸಂಗ್ರಹಿಸಿದ, ವಿಶ್ಲೇಷಿಸಿದ - ಎನ್ನುವುದು ಸಂಶೋಧಕರ ಮತ. ಅವರು ಹೇಳುತ್ತಾರೆ (ಕನ್ನಡ ವಿಶ್ವಕೋಶ, 2.41): ಸೊನ್ನೆಯೂ ಸೇರಿದಂತೆ, ಭಾರತೀಯ ದಾಶಮಿಕ ಅಂಕೆಯ ಪದ್ಧತಿಯನ್ನು ಸ್ವೀಕರಿಸಿ, ತನ್ನ ಬರಹಗಳಲ್ಲಿ ಬಳಸಿಕೊಂಡ. ಮುಂದೆ ಈತನ ಕೃತಿಗಳನ್ನು ಲ್ಯಾಟಿನ್‌ಗೆ ಅನುವಾದಿಸಿದಾಗ, ಇವನ್ನು ‘ಅರಾಬಿಕ್‌ ಅಂಕೆ’ ಗಳೆಂದು ತಪ್ಪಾಗಿ ಭ್ರಮಿಸಿದರು. ಹೀಗೆ ಭಾರತೀಯ ‘ಹಿಂದೂ’ ಅರಬಿಕ್‌ ಅಂಕೆಗಳು ‘ಇಂಡೋ ಅರಾಬಿಕ್‌’ ಅಂಕೆಗಳಾದವು ! ‘ಅಂಕೆಗಳಿಗೆ ‘ನಾವು’ ಈಗ ಉಪಯೋಗಿಸುವ ಸಂಜ್ಞೆ, ಸಂಕೇತಗಳು ಈಗ ಏನಿವೆ ಅವು, ತುಂಬಾ ಸೊಗಸಾದ ರೂಪದ ಹಿಂದೂ ಸಂಕೇತಗಳಿಂದ ಸಾಧಿಸಲ್ಪಟ್ಟಂಥವು! ’ - ಎಂದು ಆಲ್‌-ಬಿರೂನಿ ತನ್ನ ‘ಕಿತಾಬುಲ್‌ ಹಿಂದ್‌’ನಲ್ಲಿ (ಪುಟ 174) ಸ್ಪಷ್ಟವಾಗಿ ಹೇಳುತ್ತಾನೆ !

ಆಲ್‌-ಬಿರೂನಿ ಘಝನಿಯ ಸುಲ್ತಾನ ಮಹಮೂದನ ಆಸ್ಥಾನದಲ್ಲಿ ಇದ್ದಾಗ ತನ್ನ ಪುಸ್ತಕಗಳನ್ನು ಬರೆದರೂ, ಆ ಸುಲ್ತಾನನ ಹೆಸರನ್ನು ‘ಕಿತಾಬುಲ್‌ ಹಿಂದ್‌’ನಲ್ಲಿ ಒಂದೆರೆಡು ಕಡೆ ಮಾತ್ರ ಪ್ರಸ್ತಾಪಿಸುತ್ತಾನೆ, ಹೊಗಳುವುದಿಲ್ಲ. ಆದರೆ ಅವನ ಮಗ ಸುಲ್ತಾನ ಮಸೂದನಿಗೆ ತನ್ನ ಇನ್ನೊಂದು ಗ್ರಂಥವನ್ನು ಅರ್ಪಣೆ ಮಾಡಿದ್ದಾನೆ, ಹೊಗಳಿಯೂ ಇದ್ದಾನೆ. ಈ ಮಗನ ರಾಜ್ಯಭಾರದಲ್ಲಿ ದೇಶ ಸಮೃದ್ಧಿಯಿಂದ ಇತ್ತು, ಶಾಂತಿ ಇತ್ತು ಎನ್ನುತ್ತಾರೆ. ಇದರಿಂದ ಚರಿತ್ರಕಾರ ಸಂಶೋಧಕರು ಊಹಿಸುವುದು ಹೀಗೆ : ಮಹಮದನ ಅಪ್ಪನ ಎಲ್ಲಾ ದೌರ್ಜನ್ಯಕ್ಕೆ ಇವನ ಒಪ್ಪಿಗೆ ಸುತರಾಂ ಇರಲಿಲ್ಲ ; ಬಲವಂತಕ್ಕೆ ಅವನ ಆಸ್ಥಾನದಲ್ಲಿ ಇರಬೇಕಾಗಿ ಬಂತು; ತನ್ನ ವಿದ್ವತ್ತು ಪ್ರತಿಭೆಯಿಂದ ದುಷ್ಟನೂ ತನ್ನನ್ನು ಗೌರವಿಸುವಂತೆ ಮಾಡಿಕೊಂಡಿದ್ದ, ತನಗೆ ಬೇಕಾದ ಸವಲತ್ತುಗಳನ್ನು ಪಡೆದುಕೊಂಡಿದ್ದ- ಅಂತ !

ಅಲ್‌-ಬಿರೂನಿಯ ‘ಕಿತಾಬುಲ್‌ ಹಿಂದ್‌’ ಪ್ರಪಂಚದಾದ್ಯಂತ ಜನರ ಕೈಗೆ ಸಿಗುವಂತೆ ಮಾಡಿದ ಕೀರ್ತಿ ಪ್ರೊಫೆಸರ್‌ ಎಡ್‌ವರ್ಡ್‌ ಸಿ. ಸಾಚೌ ಎಂಬ ಬಹುಭಾಷಜ್ಞನ ಜರ್ಮನ್‌ ಮತ್ತು ಇಂಗ್ಲಿಷ್‌ ಅನುವಾದದಿಂದ. ಸಾಚೌ ಅವರು ಸಂಪಾದಿಸಿ, ಸುದೀರ್ಘ ಪ್ರಸ್ತಾವನೆ, ಸಮೃದ್ಧ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ ಇಂಗ್ಲೀಷ್‌ ಅನುವಾದ ಹೊರ ಬಿದ್ದ ಮೇಲೆ (ಲಂಡನ್‌, 1879) ಈ ಸ್ತುತ್ಯರ್ಹ ವಿದ್ವತ್ಪೂರ್ಣ ಕೆಲಸಕ್ಕೆ ಜಗತ್ತೇ ಕೊಂಡಾಡಿತು; ಎರಡು ಸಂಪುಟಗಳ ಈ ಗ್ರಂಥ ಹಲವು ಮುದ್ರಣಗಳನ್ನು ಕಂಡಿದೆ. (ಲೋ ಪ್ರೆೃಸ್‌ಡ್‌ ಪಬ್ಲಿಕೇಷನ್ಸ್‌, ದೆಹಲಿ, 1989 ಆವೃತ್ತಿಯನ್ನು ನಾನು ಲೇಖನದ ಪರಾಮರ್ಶೆಗಾಗಿ ಉಪಯೋಗಿಸುತ್ತಿದ್ದೇನೆ ; ಪುಟ ಸಂಖ್ಯೆಗಳೂ ಅದರ ಮೊದಲ ಸಂಪುಟದ್ದೇ. ) ಭಾರತದ ಬೇರೆ ಬೇರೆ ಭಾಷೆಗಳಿಗೆ ಇದು ಅನುವಾದಿತವಾಗಿದೆ. ಸಂಕ್ಷಿಪ್ತ ಆವೃತ್ತಿಗಳೂ ಹಲವಾರು ಬಂದಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. (ಉಳಿದ ಆಕರ ಸಾಮಗ್ರಿಗಳ ಜೊತೆಗೆ, ಶ್ರೀ ಕ್ವೇಯಮುದ್ದೀನ್‌ ಅಹಮದ್‌ ಅವರ ‘ಇಂಡಿಯಾ ಬೈ ಅಲ್‌-ಬಿರೂನಿ’, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಪ್ರಕಾಶನ, 1992 ವನ್ನೂ ನಾನು ಇಲ್ಲಿ ಉಪಯೋಗಿಸುತ್ತಿದ್ದೇನೆ. )

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes on Celestial view of Kashmir : What Albirooni documented on Kashmir in his literature..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more