• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮಿ ಎಲ್ಲಿದ್ದಾಳು ?

By Staff
|

Kalidasa and another Character in AshAd ka Ek dinಮಹಾತ್ಮರು ಇದ್ದ ಸ್ಥಳವೇ ಪವಿತ್ರಸ್ಥಾನ, ಒಂದು ತೀರ್ಥಕ್ಷೇತ್ರ (‘ಯದ್‌ ಅಧ್ಯಾಸಿತಂ ಮಹದ್ಭಿ: ತದ್‌ ಹಿ ತೀರ್ಥಂ ಪ್ರಚಕ್ಷತೇ’- ಕುಮಾರಸಂಭವ)- ಎನ್ನುವ ಮನೋಭಾವ ಕಾಳಿದಾಸನದು. ಕಾಳಿದಾಸನ ವಸಿಷ್ಠಾಶ್ರಮ ಕಾಶ್ಮೀರದ ಜ್ಯೇಷ್ಠೇಶ್ವರದ ಬಳಿ ಇದೆ. ಕಲ್ಹಣನ ರಾಜತರಂಗಿಣಿ (1: 107) ಮತ್ತು ನಿಲಮತ ಪುರಾಣ(ಶ್ಲೋಕ 1323)ಗಳಲ್ಲಿ ಇದರ ಪ್ರಸ್ತಾಪವಿದೆ. ಅರ್ಬುದ ಪರ್ವತದ ಮೇಲೆ ಇದೆಯೆಂದು ಮಹಾಭಾರತ (ವನಪರ್ವ 102:3) ಹೇಳಿದರೂ, ಜಾಗ ಅನಿರ್ಧಾರಿತವೆಂದು ಮಹಾ ಮಹೋಪಾಧ್ಯಾಯ ಪಿ.ವಿ.ಕಾಣೆಯವರ (ಧರ್ಮಶಾಸ್ತ್ರದ ಇತಿಹಾಸ, ಸಂ.4, ಪುಟ 819) ಹೇಳಿದರೂ, ಡಾ.ಎಂ.ಎ.ಸ್ಪೈನ್‌ ಅವರು ಹೀಗೆ ಹೇಳುತ್ತಾರೆ: ಖುದ್ದಾಗಿ ಸರ್ವೇಕ್ಷಣೆ ಮಾಡಿಬಂದೆವು; ಈಗಿನ ಬುತಿಸರ್‌ನಲ್ಲಿ ಕಾಂಕನೈ ಕಣಿವೆಯಲ್ಲಿ ಈ ಭೂತೇಶ್ವರ ಮತ್ತು ಜ್ಯೇಷ್ಠರುದ್ರ ದೇವಸ್ಥಾನಗಳ ಅವಶೇಷಗಳು ಇವೆ. ಹರಮುಕ್ತ ಮಹಾಹಿಮರಾಶಿ (ಗ್ಲೇಶಿಯರ್‌) ಯ ಕೆಳಗಣ ಪ್ರದೇಶದಲ್ಲಿರುವ ನಂದಿಕ್ಷೇತ್ರದ ತೀರ್ಥಗಳೊಂದಿಗೆ ನಿಕಟ ಸಂಬಂಧ ಇವಕ್ಕಿವೆ. ಈ ಕಣಿವೆಯಲ್ಲೇ ಅತಿ ಹೆಚ್ಚು ಜನರು ಶಾಶ್ವತವಾಗಿ ವಾಸಿಸುತ್ತಿರುವ ವಾನ್ಗಾತ್‌ ಎಂಬ ಹಳ್ಳಿ ಬುತಿಸರ್‌ನಿಂದ ಕೆಳಗೆ ಎರಡು ಮೈಲಿ ದೂರದಲ್ಲಿದೆ. ಮಹಾತ್ಮ್ಯಗಳಲ್ಲಿ ವಿವರಿಸುವ, ವಸಿಷ್ಟ ಋಷಿ ವಾಸಿಸಿದ್ದನೆಂದು ಜನ ನಂಬಿರುವ ಸ್ಥಳ ಇದೇ ವಸಿಷ್ಟಾಶ್ರಮ. (ರಾಜತರಂಗಿಣಿ, 2: ಪುಟ 489).

ಭೂತೇಶ್ವರತೀರ್ಥ ಎನ್ನುವುದು ಕಾಶ್ಮೀರದಲ್ಲಿ ಈಗಿನ ‘ಬುತಿಸೆರ್‌’. ಶ್ರೀನಗರದಿಂದ ಸುಮಾರು ಮೂವತ್ತೆರಡು ಮೈಲಿ ದೂರದಲ್ಲಿ ಇದೆ. (ಡಾ.ಎಂ.ಎ.ಸ್ಪೈನ್‌, ರಾಜತರಂಗಿಣಿ, 1: 129 ಅಡಿಟಿಪ್ಪಣಿ). ರಾಜತರಂಗಿಣಿಯಲ್ಲಿ (1: 107, 2: 148, 5: 48, 7: 106, 8: 2756), ನೀಲಮತಪುರಾಣ (1309, 1324, 1327)ದಲ್ಲಿ, ಮತ್ತು ಜಯದ್ರಥನ ಹರಿಚರಿತಚಿಂತಾಮಣಿ (4: 85) ಯಲ್ಲೂ ಇದರ ಪ್ರಸ್ತಾಪವಿದೆ. ನಂದೀಕ್ಷೇತ್ರದಲ್ಲಿ ಸೇರಿದ ಇದು, ಹರಮುಖಪರ್ವತಶ್ರೇಣಿಯಿಂದ ನೈಋತ್ಯ ದಿಕ್ಕಿನಲ್ಲಿ ಹರಡಿರುವ ಕೋಡಿನ ಮೇಲೆ ಇದೆ; ಭೂತೇಶ ಶಿವನ ಆವಾಸಸ್ಥಾನ ಎಂದು ಹೇಳಿಕೆ. ಅಬುಲ್‌ ಫಜಲ್‌ ಬರೆದ ಐನ್‌-ಇ-ಅಕ್ಬರಿಯಲ್ಲಿ ಇದರ ಉಲ್ಲೇಖವಿದೆ. (ನೋಡಿ: ಪಿ.ವಿ.ಕಾಣೆಯವರ ಧರ್ಮಶಾಸ್ತ್ರದ ಇತಿಹಾಸ, ಸಂ. 4, ಪುಟ 740; ಅನುವಾದ ಬ್ಲಾಕ್ಮನ್‌ ಮತ್ತು ಜಾರೆಟ್‌, 1873- 94, 2: ಪುಟ 364; ಆದರೆ ಕೂರ್ಮಪುರಾಣ 1:35:10, ಪದ್ಮಪುರಾಣ 1: 37: 13, ವರಾಹ ಪುರಾಣ 159: 19- ಇವುಗಳಲ್ಲೂ ಭೂತೇಶ್ವರ ತೀರ್ಥಗಳಿವೆ; ಕಾಳಿದಾಸನು ಹೇಳುವುದು ಇದಲ್ಲ !) (ಕಾಶ್ಮೀರದ ಪ್ರೇಕ್ಷಣೀಯ ಹಾಗೂ ಐತಿಹ್ಯಮಯ ತೀರ್ಥಕ್ಷೇತ್ರಗಳು ಇನ್ನೊಂದು ಲೇಖನಕ್ಕೆ ಆಹಾರ!)

***

ಕುಂಕುಮಕೇಸರಿ: ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕುಂಕುಮ ಕೇಸರಿಯ ಗಿಡಗಳನ್ನು ಕಾಳಿದಾಸ ವರ್ಣಿಸಿದ್ದಾನೆ; ಕುಂಕುಮ ಕೇಸರಿಯ ಬೆಳೆಯ ವಿಷಯವಾಗಿ ತನಗೆ ನಿಷ್ಕೃಷ್ಟವಾಗಿ ತಿಳಿದುದನ್ನು ಅವನು ತನ್ನ ಕಾವ್ಯದಲ್ಲಿ ತೋರಿಸಿಕೊಂಡಿದ್ದಾನೆ. ‘‘ನೀಪಂ ದೃಷ್ಟ್ವಾ ಹರಿತಕಪಿಶಂ ಕೇಸರೈರ್‌ ಅರ್ಧರೂಢೈ;...’’(ಮೇಘದೂತ 1: 21); ‘‘ವಿನೀತ ಅಧ್ವ ಶ್ರಮಾಸ್‌.... ದುಧುವುರ್‌ ವಾಜಿನ: ಸ್ಕಂಧಾಲ್‌ ಲಗ್ನ ಕುಂಕುಮ ಕೇಸರಾನ್‌।। (ರಘುವಂಶ 4: 67)’’; ಶಾಕುಂತಲಾದಲ್ಲೂ, ಮಾಳವಿಕಾಗ್ನಿಮಿತ್ರದಲ್ಲೂ ಕೇಸರಿಯ ಪ್ರಸ್ತಾಪ ಬರುತ್ತದೆ. ಪ್ರೊ. ಬಿ.ಜಿ.ಎಲ್‌ ಸ್ವಾಮಿ ಅವರ ‘ಫಲಶ್ರುತಿ’(ಐ.ಬಿ.ಎಚ್‌ ಪ್ರಕಾಶನ, 1984) ಮತ್ತು ಪಿ.ಎನ್‌.ನಂದಾಜ್ಯೋತಿ ಅವರ ‘ಸಂಭಾರ ಸೌರಭ’ (ಶಿಕಾರಿಪುರದ ಜೈಸು ಪ್ರಕಾಶನ, 1988) ಪುಸ್ತಕಗಳು ‘ಕೇಸರಿ’ಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಕಾಶ್ಮೀರದಲ್ಲಿ ಅನೇಕ ಶತಮಾನಗಳಿಂದಲೂ ಕೃಷಿ ಮಾಡುವ ಈ ಕೇಸರಿ ಸಿರಿಯಾ, ಅರ್ಮೀನಿಯಾ, ಪರ್ಶಿಯಾ ದೇಶಗಳಲ್ಲಿ ಇದು ಸ್ವಾಭಾವಿಕ ಬೆಳೆ. ಪ್ರೊ.ಸ್ವಾಮಿ ಹೇಳುತ್ತಾರೆ : ‘ಬೇಸಗೆಯ ಮೊದಲನೇ ಮಳೆಹನಿ ಭೂಮಿಯಾಳಕ್ಕೆ ಇಂಗಿದ ದಿನಗಳೊಳಗಾಗಿ, ನೆಲದೊಳಗಿನ ಗಡ್ಡೆಯಿಂದ ಮೇಲೇಳುವುದು ಕೇಸರಿ ಹೂವು. ಗಿಡ ಬೆಳೆಯುವ ಪ್ರದೇಶ ಊದಾಬಣ್ಣದ ಕೇಸರಿ ಹೂವಿನ ಸೀರೆಯನ್ನು ಉಡುತ್ತದೆ. ಇದು ನಯನ ಮನೋಹರ ದೃಶ್ಯ. ... ಕೇಸರಿಯ ಹೂವಿನ ಅಂಡಾಶಯದ ಪರಾಗಸ್ಪರ್ಶ ಶಲಾಕ(ಸ್ಟೈಲ್‌)ವೇ ಕೇಸರಿ. ಒಂದು ಹೂವಿನಲ್ಲಿ ಸಿಗುವುದು ಒಂದೇ ಶಲಾಕ. ಒಂದು ಔನ್ಸ್‌ ಕೇಸರಿಯನ್ನ ಶೇಖರಿಸಬೇಕಾದರೆ, ಸುಮಾರು ನಾಲ್ಕುಸಾವಿರದ ಐದುನೂರು ಹೂಗಳನ್ನು ‘ಕೊಲೆ’ ಮಾಡಬೇಕಾಗುತ್ತೆ. ಹೀಗಾಗಿ, ಕೇಸರಿಯ ಬೆಲೆ ಯಾವಾಗಲೂ ಆಕಾಶದಲ್ಲೇ ಇರುತ್ತದೆ!’

ನಂದಾಜ್ಯೋತಿಯವರು ಕೇಸರಿಯ ಕೃಷಿಯ ಏಕಸ್ವಾಮ್ಯವನ್ನು ಕಾಶ್ಮೀರರಾಜ್ಯವು ಬಹಳಕಾಲದಿಂದಲೂ ಹೊಂದಿರುವುದನ್ನು ಪ್ರಸ್ತಾಪಿಸುತ್ತಾ , ಕಾಶ್ಮೀರದ ಜನ ಹೇಳುವ ಒಂದು ಸ್ವಾರಸ್ಯವಾದ ಕತೆಯನ್ನು ತಿಳಿಸುತ್ತಾರೆ (ಪುಟ 73) ; ಡಾ.ಬ್ರಜ್‌ ಬಿ ಕಚ್ರು ಅವರ ಪುಸ್ತಕದಲ್ಲೂ ಸ್ವಲ್ಪ ವಿವರಗಳಿವೆ : ಕೇಸರಿ ಬೆಳೆ ಕಾಶ್ಮೀರವನ್ನು ಪ್ರವೇಶಿಸಿದ್ದುದು ಒಂದು ಆಶ್ಚರ್ಯಕರವಾದ ರೀತಿಯಲ್ಲಿ . ಕಾಶ್ಮೀರದಲ್ಲಿ ಶ್ರೀನಗರಕ್ಕೆ ಸುಮಾರು ಒಂಬತ್ತು ಮೈಲಿ ದೂರದಲ್ಲಿ ಪಾಂಪುರ್‌ ಎಂಬ ಪ್ರದೇಶ ಇದೆ. ಹತ್ತಿರದಲ್ಲಿ ವಿತಸ್ತಾ (ಝೇಲಂ) ನದಿ ಹರಿಯುತ್ತಿದೆ. ವಾಗ್ಭಟ ಎಂಬ ಪ್ರಖ್ಯಾತ ವೈದ್ಯ ಅಲ್ಲಿ ಇದ್ದ. ತಕ್ಷಕ ರಾಜನಿಗೆ ಒಮ್ಮೆ ಕಣ್ಣು ಬೇನೆ ಬಂತು. ಚಿಕಿತ್ಸೆ ಮಾಡಿಸಿಕೊಳ್ಳಲು ಅವನು ಮಾರುವೇಷದಿಂದ ವೈದ್ಯ ವಾಗ್ಭಟನ ಬಳಿಗೆ ಹೋಗುತ್ತಾನೆ. ಸಾಧಾರಣ ರೀತಿಯಲ್ಲಿ ಚಿಕಿತ್ಸೆ ಮಾಡಿದಾಗ ಕಣ್ಣಿನ ಬೇನೆ ಗುಣವಾಗದೇ ಹೋಗುತ್ತದೆ. ರೋಗಿಯು ತನ್ನ ನಿಜರೂಪವನ್ನು ಬಹಿರಂಗಪಡಿಸಿ, ತನ್ನ ಪೂರ್ವಜರು ಸರ್ಪ ವಂಶದವರು, ನೀಡಿದ ಮದ್ದು ಕೆಲಸ ಮಾಡದೆ, ರೋಗ ಉಲ್ಬಣವಾಗಲು ತೊಡಗಿದೆ- ಎಂದು ತಿಳಿಸುತ್ತಾನೆ. ವಾಗ್ಭಟನು ಕಾರಣ ಊಹಿಸಿ, ಬೇರೆ ರೀತಿ ಚಿಕಿತ್ಸೆ ಮಾಡಿ, ಮುಲಾಮು ಹಚ್ಚಿದ ಕೂಡಲೇ, ಕಣ್ಣಿಗೆ ಬಟ್ಟೆಯನ್ನು ಕಟ್ಟಿ, ಬಾಯಿಂದ ಹೊರ ಹೊಮ್ಮುತ್ತಿದ್ದ ವಿಷಪೂರಿತ ಹಬೆ ಕಣ್ಣಿಗೆ ಹೋಗದಂತೆ ತಡೆಗಟ್ಟುತ್ತಾನೆ. ಕೆಲವು ದಿನಗಳ ಅನಂತರ ತಕ್ಷಕನ ಕಣ್ಣುಗಳು ಪೂರ್ಣವಾಗಿ ಗುಣಹೊಂದುತ್ತವೆ. ಸಂತೋಷದಿಂದ, ತಕ್ಷಕ ರಾಜನು ಅಮೂಲ್ಯವಾದ ಕೇಸರಿಗಡ್ಡೆಯನ್ನು ವಾಗ್ಭಟನಿಗೆ ಉಡುಗೊರೆಯಾಗಿ ಕೊಡುತ್ತಾನೆ. ಇದರ ಸುಗಂಧದಿಂದ, ಇದರ ವೈದ್ಯಕೀಯ ಗುಣವಿಶೇಷಗಳನ್ನು ವಾಗ್ಭಟನಿಂದ ತಿಳಿದು, ಕಾಶ್ಮೀರದ ಆ ಪಾಂಪುರ್‌ ಪ್ರದೇಶದಲ್ಲಿ ಅಂದಿನಿಂದ ಕೇಸರಿ ಬೆಳೆಯಲು ಜನ ತೊಡಗುತ್ತಾರೆ.

One more still from AshAd ka Ek dinಕಾಶ್ಮೀರದ ಕಣಿವೆಗಳ ಇಕ್ಕೆಲಗಳಲ್ಲೂ , ಕ್ಯರೆವಾಸ್‌, ವಿಹ್‌ (ಪಾಂಪುರ್‌) ಮತ್ತು ದಕ್ಷಿಣಪೂರ್ವದ ಶ್ರೀನಗರದಲ್ಲೂ , ಜಮ್ಮುವಿನ ‘ಕಿಸ್ತಾವರ್‌’ ಪ್ರದೇಶದಲ್ಲೂ ಈಗ ಕೇಸರಿಯನ್ನು ಬೆಳೆಯುತ್ತಾರೆ. ಕೇಸರಿಯ ಹೊಲಗಳನ್ನು ‘ಚಿನ್ನದ ಬುಟ್ಟಿಗಳು’ ಎಂದು ಕರೆಯುವುದರಲ್ಲಿ ‘ಅರ್ಥ’ವಿದೆ! ಈ ಅಪೂರ್ವ ಕೇಸರಿಯನ್ನೇ ನಮ್ಮ ಕಾಳಿದಾಸ ಅಲ್ಲಲ್ಲಿ ಹೆಸರಿಸುವುದು !

***

ಕಾಶ್ಮೀರಿಗಳ ವಿವಾಹ ಪದ್ಧತಿ ಮತ್ತು ಇತರ ಸಾಮಾಜಿಕ ಪದ್ಧತಿಗಳು : ವಧುವು ವರನಿಗೆ ತಾನೇ ಪುಷ್ಪಮಾಲಿಕೆಯನ್ನು ಹಾಕದೆ, ಸೋದರತ್ತೆಯಿಂದ ಅಥವಾ ಸಖಿಯಿಂದ ಅದನ್ನು ಅವನ ಕೊರಳಿಗೆ ಹಾಕಿಸುವ ‘ಮಂಗಲಮಾಲಾ’ ಎಂಬ ವಿಧಿ ಕಾಶ್ಮೀರದಲ್ಲಿ ಇದೆಯಂತೆ. ವಿವಾಹಹೋಮ ಕಾಲದಲ್ಲಿ ವಧುವು ಲಾಜಾಂಜಲಿಯನ್ನು ಅಗ್ನಿಗೆ ಸಮರ್ಪಿಸಿ, ಅದರ ಧೂಮವನ್ನು ಆಘ್ರಾಣಿಸುವ ವಿಧಿಯೂ ಕಾಶ್ಮೀರಕ್ಕೆ ವಿಶಿಷ್ಟವಾದುದಂತೆ. ಇವನ್ನು ಕಾಲಿದಾಸ ಹೇಳುತ್ತಾನೆ ಎನ್ನುತ್ತಾರೆ, ಸಿ.ಕೆ.ವೆಂಕಟರಾಮಯ್ಯನವರು. ರಘುವಂಶದ ಏಳನೆಯ ಸರ್ಗ ಮದುವೆಯ ಎಲ್ಲ ವಿಧಿಗಳನ್ನು ವಿವರಿಸುತ್ತೆ (ಲಾಜಾ ಹೋಮಕ್ಕೆ, ಆಶ್ವಲಾಯನ ಗೃಹಸೂತ್ರ 1.7.7-13; ರಘುವಂಶ 7:25-26 ನ್ನು ನೋಡಿ; ಶಮೀ ಮತ್ತು ಅರಳು ಎರಡನ್ನೂ ಈ ಹೋಮದಲ್ಲಿ ಬಳಸುತ್ತಾರೆ). ತೀರಿ ಹೋದ ಗಂಡನ ಎಲ್ಲ ಆಸ್ತಿಗೆ ಮಕ್ಕಳಿಲ್ಲದ ವಿಧವೆ ಹಕ್ಕುದಾರಳಲ್ಲ ಎಂಬ ಕಾಶ್ಮೀರದಲ್ಲಿ ಪ್ರಚಲಿತ ಪದ್ಧತಿಯನ್ನು ಕಾಳಿದಾಸ ಶಾಕುಂತಲದಲ್ಲಿ ಸೂಚಿಸುತ್ತಾನೆ (ಶಾಕುಂತಲ ಅಂಕ; ಪಿ.ವಿ. ಕಾಣೆ ಉಲ್ಲೇಖ 3: 702); ಪಟ್ಟಾಭಿಷೇಕದ ದಿನ ಕಾಶ್ಮೀರದ ರಾಜರು ಸಾಮಾನ್ಯವಾಗಿ ಸೆರೆಮನೆಯಲ್ಲಿನ ಕೈದಿಗಳನ್ನು ಬಿಡುಗಡೆ ಮಾಡ್ತುತಿದ್ದರಂತೆ. ಇದೇ ರಘುವಂಶದಲ್ಲಿ (17: 19) ಇದೆ (ನೋಡಿ : ಪಿ.ವಿ. ಕಾಣೆ ಉಲ್ಲೇಖ, 3: 407).

ನೀರಾಜನ ವಿಧಿ : ರಾಜನು ವಿಜಯಯಾತ್ರೆಯಿಂದ ತನ್ನ ರಾಜಧಾನಿಗೆ ಮರಳಿ ಬಂದಾಗ, ಭಾರತದ ಎಲ್ಲ ಪ್ರದೇಶಗಳಲ್ಲೂ ವೈಭವದಿಂದ ಅವನನ್ನು ನಾಗರಿಕರು ಬರಮಾಡಿಕೊಳ್ಳುವುದು ರೂಢಿಯಲ್ಲಿ ಬಂದಿದ್ದ ಪದ್ಧತಿ. ಆದರೆ, ಕಾಲೀದಾಸ ನೀರಾಜನ ವಿಧಿಯಾಂದನ್ನು ತನ್ನ ರಘುವಂಶದಲ್ಲಿ (4:24-25) ವರ್ಣಿಸುತ್ತಾನೆ. ಇದರ ಬಗ್ಗೆ ಬಹಳ ಚರ್ಚೆ ನಡೆದಿದೆ (ನೋಡಿ: ಪಿ.ವಿ. ಕಾಣೆ ಉಲ್ಲೇಖ, 3: 230;5:193). ಇದು ಮೂಲದಲ್ಲಿ ಕಾಶ್ಮೀರದ ಪದ್ಧತಿ ಇರಬಹುದೇ ಎಂಬ ಅನುಮಾನವಿದೆ.

ಹೀಗೆ, ಆ ಪ್ರದೇಶಕ್ಕೇ ವಿಶಿಷ್ಟವಾದ ಕೆಲವು ಸಾಮಾಜಿಕ ಪದ್ಧತಿಗಳನ್ನು ಕಾಳಿದಾಸ ತನ್ನ ಕೃತಿಗಳಲ್ಲಿ ಅಲ್ಲಲ್ಲಿ ಅಳವಡಿಸಿರುವುದರಿಂದ ಅವನ ಜನ್ಮಭೂಮಿ ಕಾಶ್ಮೀರವೇ ಆಗಿರಬಹುದೆಂಬ ಅಭಿಪ್ರಾಯವನ್ನು ಕೆಲವರು ತಳೆದಿದ್ದಾರೆ. ವಿದ್ವಾಂಸರಲ್ಲೊಬ್ಬರಾದ ಲಕ್ಷ್ಮೀಧರ್‌ ಎಂಬುವರು ಈ ಬಗ್ಗೆ ಒಂದು ಗ್ರಂಥವನ್ನೇ(?) ಬರೆದಿದ್ದಾರೆ ಎನ್ನುತ್ತಾರೆ, ಸಿ.ಕೆ.ವೆಂ. ಅವರು. ‘ಕಾಶ್ಮೀರದಲ್ಲೋ ಬಂಗಾಳದಲ್ಲೋ ಅವನು ಹುಟ್ಟಿರಬಹುದು; ಕೊನೆಗೆ ಉಜ್ಜಯಿನಿಯಲ್ಲಿ ಬಂದು ತಂಗಿರಬಹುದು’- ಎಂದು ಪ್ರೊಫೆಸರ್‌ ಆರ್‌ ಡಿ ಕರಮರ್‌ಕರ್‌ ಅವರು ಅಭಿಪ್ರಾಯಪಡುತ್ತಾರೆ.

***

ಆಷಾಡ್‌ ಕಾ ಏಕ್‌ ದಿನ್‌ : ಕಾಳಿದಾಸ ಕಾಶ್ಮೀರದಲ್ಲಿಯೇ ಹುಟ್ಟಿರಬೇಕೆಂಬ ದೃಢ ಅಭಿಪ್ರಾಯ ಈ ಬಗ್ಗೆ ಸಂಶೋಧನೆ ನಡೆಸಿರುವ ಡಾ.ಭಗವತ್‌ ಶರಣ ಉಪಾಧ್ಯಾಯರದು. ಹೆಸರಾಂತ ಹಿಂದೀ ನಾಟಕಕಾರ ಜಯಶಂಕರಪ್ರಸಾದ ಅವರಿಂದ ಸ್ಫೂರ್ತಿ ಪಡೆದು ಮೋಹನ್‌ ರಾಕೇಶ್‌ ಎನ್ನುವ ಇನ್ನೊಬ್ಬ ಜನಪ್ರಿಯ ನಾಟಕಕಾರರು ‘ಆಷಾಡ್‌ ಕಾ ಏಕ್‌ ದಿನ್‌’ ಎಂಬ ನಾಟಕ ಬರೆದರು. ರಾಕೇಶ್‌ ಅವರ ಕಲ್ಪನೆಯ ಪ್ರಕಾರ, ಕಾಳಿದಾಸ ಹುಟ್ಟಿದ್ದು ಕಾಶ್ಮೀರದಲ್ಲಿ. ಬೆಳೆದಿದ್ದು, ಅಲ್ಲಿಯೇ. ‘ಮಲ್ಲಿಕಾ’ ಎಂಬ ಗೆಳತಿಯಾಡನೆ ತಾರುಣ್ಯದಲ್ಲಿ ಸಖ್ಯ ಬೆಳೆಸಿದ್ದುದು ಅಲ್ಲಿಯೇ, ಕಾಶ್ಮೀರದಲ್ಲಿಯೇ. ಆಗ ವಿಕ್ರಮಾದಿತ್ಯ ಚಕ್ರವರ್ತಿ ಉಜ್ಜಯಿನಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ಕಾಲ. ಕಾಳಿದಾಸನ ಪ್ರತಿಭೆಗೆ ತಕ್ಕ ಅಂಗೀಕಾರ, ಅವಕಾಶ, ಪುರಸ್ಕಾರಗಳು ಸಿಗಬೇಕಾದರೆ, ಆಗ ಬಗೆ ಬಗೆಯ ಕಲೆಗಳಿಗೆ ಕೇಂದ್ರವಾಗಿದ್ದ ಉಜ್ಜಯಿನಿಯತ್ತ ಮುಖ್ಯ ಕಾವ್ಯಗಳಿಗೂ ಸ್ಫೂರ್ತಿದಾತಳೂ, ಈ ಕಾಶ್ಮೀರದ ಬಾಲ್ಯದ ಗೆಳತಿಯೇ ; ಕೊನೆಗಾಲದಲ್ಲಿ ಕವಿ ಮರಳುವುದು ಈ ಪ್ರೇಯಸಿಯ ಮಡಿಲಿಗೇನೇ- ಎಂಬುದು ನಾಟಕಕಾರರ ಒಂದು ಸುಂದರ ಕಲ್ಪನಾವಿಲಾಸದ ಹೊಂಗನಸು!

‘ಆಷಾಡದ ಒಂದು ದಿನ’ ತುಂಬಾ ಹೆಸರು ಮಾಡಿದ ನಾಟಕ. ವಿವಿಧ ಭಾಷೆಗಳಲ್ಲಿ ಅನುವಾದಗೊಂಡು, ಪ್ರಪಂಚಾದ್ಯಂತ ಅನೇಕ ರಂಗಕರ್ಮಿಗಳು ತಮ್ಮ ತಮ್ಮದೇ ಆದ ನಿರ್ದೇಶನದ ಹೊಸ ಹೊಸ ಆಯಾಮಗಳಲ್ಲಿ ಕಾಳಿದಾಸನ ಈ ಕಾಶ್ಮೀರ ಪ್ರಣಯ ಪ್ರಸಂಗಕ್ಕೆ ಬಣ್ಣ , ಬೆಳಕು ಚೆಲ್ಲಿದರು. ಆಮೇಲೆ ನಾಟಕ ಚಲನಚಿತ್ರವೂ ಆಯಿತು.

ನಮಗೆಲ್ಲ ಸಂತೋಷ ತರುವ ಸಂಗತಿಯೆಂದರೆ, ಅಮೆರಿಕಾದ ಹೆಸರಾಂತ ರಂಗ ನಿರ್ದೇಶಕ ಮನೋಹರ ಕುಲಕರ್ಣಿಯವರು, ಮೇರೀಲ್ಯಾಂಡ್‌ನ ತಮ್ಮ ‘ಭೂಮಿಕಾ’ ಆಶ್ರಯದಲ್ಲಿ , ಹಿಂದಿಯಲ್ಲಿ ‘ಆಷಾಡ್‌ ಕಾ ಏಕ್‌ ದಿನ್‌’ವನ್ನು ನಿರ್ದೇಶಿಸಿ, ಯಶಸ್ವಿಯಾಗಿ 1998 ರಲ್ಲಿ ಮೂರುಬಾರಿ ಪ್ರದರ್ಶಿಸಿದರು. ಮಂಜುಳಾಕುಮಾರ್‌ (ಅಂಬಿಕಾ), ಮೀರಾ ನರಸಿಂಹನ್‌ (ಮಲ್ಲಿಕಾ), ವಂದನಾ ಗ್ಯಾನ್ಧಾರ್‌ (ಪ್ರಿಯಂಗು ಮಂಜರಿ), ಮನೋಜ್‌ ತ್ರಿಪಾಠಿ (ವಿಲೋಮ್‌) ಮತ್ತು ಶುಭಂಕರ ಬ್ಯಾನರ್ಜಿ (ಕಾಳಿದಾಸ)- ಅವರುಗಳು ನಾಟಕದಲ್ಲಿ ಪಾಲುಗೊಂಡಿದ್ದರು. ನಾಟಕದಲ್ಲಿ ಸನ್ನಿವೇಶಗಳಿಗೆ ಸಮಯೋಚಿತವಾಗಿ ಶ್ಯಾಮಲಾದಂಡಕ, ಮೇಘದೂತ ಮತ್ತು ಶಾಕುಂತಲಾಗಳಿಂದ ಆಯ್ದ ಶ್ಲೋಕಗಳನ್ನು ರಾಗ ಸಂಯೋಜನೆ ಮಾಡಿ ಅಳವಡಿಸಿದವರು ‘ಭೂಮಿಕಾ’ದ ಡಾ.ವಿಜಯಾ ಮನೋಹರ್‌ ಅವರು; ನಾಟಕ ಜಯಭೇರಿ ಹೊಡೆಯಿತು.

***

ಕಾಶ್ಮೀರದ ಕವಿ ಕಲ್ಹಣ ಬರೆದ ಚಾರಿತ್ರಿಕ ಕಾವ್ಯ ‘ರಾಜತರಂಗಿಣಿ’ಯಲ್ಲಿ ಪ್ರವರಸೇನನ, ಹಿರಣ್ಯ ತೋರಮಾನನ ಆಖ್ಯಾನದ ನಂತರ ‘ಮಾತೃಗುಪ್ತ’ ಎಂಬ ರಾಜನ ಕತೆ ಬರುತ್ತದೆ(3:125-323). ಆಗ ಉಜ್ಜಯಿನಿಯಲ್ಲಿ ಹರ್ಷ ಎಂಬ ಇನ್ನೊಂದು ಹೆಸರಿದ್ದ ‘ವಿಕ್ರಮಾದಿತ್ಯ’ ಎಂಬ ಸಾರ್ವಭೌಮ ಇದ್ದ- ಎಂದು ಪ್ರಾರಂಭವಾಗುವ ಈ ಕಥಾನಕದಲ್ಲಿ , ವಿಕ್ರಮಾದಿತ್ಯನ ಆಣತಿಯ ಮೇರೆಗೆ ಅವನ ಆಸ್ಥಾನ ಕವಿಯಾಗಿದ್ದ ಮಾತೃಗುಪ್ತನು ಕಾಶ್ಮೀರಕ್ಕೆ ಬರುತ್ತಾನೆ. ಅಲ್ಲಿ ಅವನನ್ನು ಸ್ವಾಗತಿಸಿದ, ಕಾಶ್ಮೀರ ರಾಜ್ಯದ ಮಂತ್ರಿಗಳು ವಿಕ್ರಮಾದಿತ್ಯ ಕಳಿಸಿದ ಕಾಗದವನ್ನು ಓದಿ, ಒಡನೆಯೇ ಆ ರಾಜ್ಯದ ರಾಜನನ್ನಾಗಿ ಮಾತೃಗುಪ್ತನಿಗೆ ಪಟ್ಟಾಭಿಷೇಕ ಮಾಡುತ್ತಾರೆ(3:239). ದೊರೆಯಾಗಿ ಮಾತೃಗುಪ್ತ ಸ್ವಲ್ಪಕಾಲ ಚೆನ್ನಾಗಿಯೇ ರಾಜ್ಯವಾಳುತ್ತಾನೆ. ಇಮ್ಮಡಿ ಪ್ರವರಸೇನ ಬಂದಮೇಲೆ ಮಾತೃಗುಪ್ತ ರಾಜ್ಯತ್ಯಾಗ ಮಾಡಿ, ಸನ್ಯಾಸಿಯಾಗಿ ವಾರಣಾಸಿಗೆ ಹೋಗಿಬಿಡುತ್ತಾನೆ.

ಸಂಶೋಧಕ ಡಾ.ಭಾವು ದಾಜಿ ಅವರು, ಹ್ಯುಎನ್ತ್‌ ಸಾಂಗ್‌ ತನ್ನ ಪ್ರವಾಸಕಥನದಲ್ಲಿ ಹೇಳುವ, ಶಿಲಾದಿತ್ಯನ ಮೊದಲು ರಾಜ್ಯವಾಳಿದ ಆರನೆಯ ಶತಮಾನದ ‘ವಿಕ್ರಮಾದಿತ್ಯ’ ಈ ವಿಕ್ರಮಾದಿತ್ಯನೇ ಎಂದು ಹೇಳುತ್ತಾರೆ. ಜೊತೆಗೆ, ಈ ಮಾತೃಗುಪ್ತನೇ ನಮ್ಮ ಕಾಳಿದಾಸ ಎನ್ನುವ ವಾದವನ್ನು ಮುಂದಿಡುತ್ತಾರೆ. ಇದನ್ನು ಫರ್ಗುಸನ್‌ ಅವರೂ ಪ್ರೊಫೆಸರ್‌ ಎಂ ಮ್ಯುಲ್ಲರ್‌ ಅವರೂ ಸಮರ್ಥಿಸಿ, ವಿಕ್ರಮಾದಿತ್ಯನ ಆಸ್ಥಾನದ ಆ ನವಮಣಿಗಳಲ್ಲಿ ಈ ಕಾಳಿದಾಸ ಇದ್ದಿರಬೇಕು- ಎನ್ನುತ್ತಾರೆ. ‘ಮಾತೃ’ ಎನ್ನುವುದು ‘ಕಾಳಿ’ ಎನ್ನುವುದಕ್ಕೂ, ‘ಗುಪ್ತ’ ಎನ್ನುವುದು ‘ದಾಸ’ ಎನ್ನುವುದಕ್ಕೂ ಸಮಾನಾರ್ಥಕಗಳು ಎನ್ನುವುದೂ ಸಹ ಅವರ ಅಭಿಪ್ರಾಯ. ಈ ಮಾತೃಗುಪ್ತನಿಗೇ ಅಂಕಿತ ಮಾಡಿರುವ ಪದ್ಯಗಳು ಕಾಶ್ಮೀರದ ಇನ್ನೊಬ್ಬ ಕವಿ ಕ್ಷೇಮೇಂದ್ರನ ‘ಔಚಿತ್ಯ-ವಿಚಾರ-ಚರ್ಚಾ’ದಲ್ಲೂ , ವಲ್ಲಭದೇವ ಕವಿಯ ‘ಸುಭಾಷಿತಾವಳಿ’ಯಲ್ಲೂ ಸಿಗುತ್ತವೆ. ಈ ಮಾತೃಗುಪ್ತ ‘ಅಲಂಕಾರ’ದ ಮತ್ತು ‘ನಾಟ್ಯಶಾಸ್ತ್ರ’ದ ಬಗ್ಗೆ ಪುಸ್ತಕ ಬರೆದಿದ್ದನೆಂಬ ಮಾತು ಅಲ್ಲಲ್ಲಿ ಕೇಳಿಬರುತ್ತದೆ.

ಮೂರುಜನ ಕಾಳಿದಾಸರು ಏಕೆ ಇದ್ದಿರಬಾರದು?- ಎಂಬ ಒಂದು ಶಂಕೆಯ ಒಡಕು ಧ್ವನಿಯನ್ನು ಆಗಲೇ ಕೇಳಿದೆವಲ್ಲ ; ಆ ಅಪಸ್ವರದ ಹಿನ್ನೆಲೆಯಲ್ಲಿ ಇದನ್ನು ಗಮನಿಸಿ : ಮೂರು ನಾಟಕಗಳನ್ನು ಬರೆದವನು ಆ ಮೂವರಲ್ಲಿ ಒಬ್ಬ; ಅವನ ನಿಜನಾಮ ಮಾತೃಗುಪ್ತ, ಕಾವ್ಯನಾಮ ಕಾಳಿದಾಸ- ಅಂತೆ!

***

ಇಷ್ಟೆಲ್ಲಾ ವಿಷಯಗಳನ್ನು ಮಥನ ಮಾಡಿದ ಮೇಲೂ ನಾವು ಮೊದಲಿದ್ದ ಜಾಗಕ್ಕೇ ಮರಳಿದಂತೆ ಆಯ್ತು ಎಂದಾದರೆ ಸೋಜಿಗಪಡಬೇಕಾಗಿಲ್ಲ . ಭಾರತದ ಬಹುತೇಕ ಹಿಂದಿನ ಎಲ್ಲ ಮಹಾಕವಿಗಳ ಬಗ್ಗೆಯೂ ಇದೇ ದೊಡ್ಡ ಸಮಸ್ಯೆ: ಸಾಮಾನ್ಯವಾಗಿ, ಅವರು ತಾವು ಎಲ್ಲಿನವರು, ಯಾವಾಗಿನವರು, ಏನೇನು ಬರೆದರು- ಎಂದು ತಾವೇ ಹೇಳರು ; ಇದಂ ಇತ್ಥಂ ಎಂದು ನಿರ್ಧರಿಸಲು ನಮಗೂ ಆಗದು !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more