ಪೂರ್ವಸೂರಿಗಳು ಕಂಡ ಕಾಶ್ಮೀರ

ಪೂರ್ವಸೂರಿಗಳು ಕಂಡ ಕಾಶ್ಮೀರ
Kashmir in India Mapಭಾರತೀಯರ ಅತಿದೊಡ್ಡ ರಮ್ಯ ಕನಸು‘ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್‌ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಹೇಗಿತ್ತು ಗೊತ್ತಾ ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.

ನಮ್ಮ ಕಾಶ್ಮೀರ :ಲೇಖನ-9 (ಭಾಗ-1)

ಕಾಶ್ಮೀರಿಗಳ ಮದುವೆ

  • ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
Kashmiri style marriageಯಾವುದೇ ಒಂದು ಪ್ರದೇಶದ ಸಂಸ್ಕೃತಿಯ ವೈಶಿಷ್ಟ್ಯವನ್ನು ಬಹುಬೇಗ ಗುರ್ತಿಸಲು ಸುಲಭ ಸಾಧನವೊಂದು ನಿಮಗೆ ಬೇಕೇ? ತೆಗೆದುಕೊಳ್ಳಿ, ಅದು- ಅಲ್ಲಿ ನಡೆಯುವ ‘ಮದುವೆ’! ಯಾವ ಜನಾಂಗವನ್ನೇ ತೆಗೆದುಕೊಳ್ಳಿ, ಯಾವ ದೇಶವನ್ನೇ ತೆಗೆದುಕೊಳ್ಳಿ, ಯಾವ ಕಾಲವನ್ನೇ ತೆಗೆದುಕೊಳ್ಳಿ, ‘ಮದುವೆ’ ಎಂಬುದು ನಾಗರಿಕ ಜೀವನದ ಒಂದು ಅತಿ ಮುಖ್ಯ ಘಟ್ಟ ಮತ್ತು ಮುಖ್ಯ ‘ಸಂಸ್ಕಾರ’. ಕ್ಷೇತ್ರಗಣಿತದ ಪರಿಭಾಷೆಯಲ್ಲಿ ಹೇಳುವುದಾದರೆ : ಜನಾಂಗ, ದೇಶ ಮತ್ತು ಕಾಲ- ಈ ಮೂರು ಅಂಗಗಳು ನಾಗರೀಕತೆಯ ಮೂರು ಆಯಾಮಗಳು (ಡೈಮೆನ್‌ಶನ್ಸ್‌). ಸಾಂಸ್ಕೃತಿಕ ಜೀವನದ ಕ್ಷೇತ್ರದಲ್ಲಿ ಒಂದು ನಿರ್ದಿಷ್ಟ ಬಿಂದುವನ್ನು ಗುರುತಿಸಲು ಈ ಮೂರೂ ಅವಶ್ಯಕ ಸಮನ್ವಯಾಂಶಗಳು (ಕೋ-ಆರ್ಡಿನೇಟ್ಸ್‌). ಈ ಕಾರಣಕ್ಕೇನೇ ‘ಮದುವೆ’ ಎಂಬ ಆ ‘ಬಿಂದು’ವನ್ನು ಹಿಗ್ಗಲಿಸಿದಾಗ(‘ಝೂಂ’ ಮಾಡಿದಾಗ) ನಮಗೆ ಗೋಚರಿಸುವುದೇನು? ಆ ಜನಾಂಗ-ದೇಶ-ಕಾಲದ ರೀತಿ-ನೀತಿಗಳನ್ನ, ಒಳಗೊಂಡ ಜನರೆಲ್ಲರ ಸ್ಥಾನ-ಮಾನ ಹಾಗೂ ಪರಸ್ಪರ ಸಂಬಂಧವೆಲ್ಲವನ್ನ ನಮ್ಮ ಮುಂದೆ ಚಿತ್ರೀಕರಿಸುವ ಒಂದು ಬಣ್ಣ ಬಣ್ಣದ ಪಟ.

ಭಾರತದಲ್ಲಿ ಹಿಂದೂ ಧರ್ಮಾವಲಂಬೀ ಜನರಲ್ಲಿ , ಬೇರೆ ಜನಾಂಗಗಳಲ್ಲಿದ್ದಂತೆ, ಕೆಲವು ಕಾರಣಗಳಿಗಾಗಿ ಬೇರೆ ಜನಾಂಗಗಳ ದೃಷ್ಟಿಗೂ ಮೀರಿ, ‘ಮದುವೆ’ ಎಂಬುದು ಒಂದು ಮುಖ್ಯ ಜೀವನ- ಘಟ್ಟ. ಹುಟ್ಟಿನಿಂದ ಸಾವಿನವರೆಗೆ ಹಲವಾರು (ಪ್ರಧಾನವಾಗಿ ಹದಿನಾರು) ‘ಸಂಸ್ಕಾರ’ಗಳನ್ನು ಅನೂಚಾನವಾಗಿ ಹಿಂದೂಗಳು ಆಚರಿಸುತ್ತಾ ಬಂದಿದ್ದರೂ, ಕಾಲ-ಪ್ರದೇಶಗಳನ್ನು ಅನುಸರಿಸಿ, ಕೆಲವು ಮುಖ್ಯ, ಇನ್ನಿತರವು ಅಮುಖ್ಯವಾಗಿ ಗೊಂದಲವಾಗಿರುವುದುಂಟು. ಅಲ್ಲಲ್ಲಿನ ಪದ್ಧತಿಗಳು ‘ಸಂಸ್ಕಾರ’ದ ವಿಧಿ-ನಿಷೇಧಗಳೊಂದಿಗೆ ಒಳಹೊಕ್ಕು , ಒಟ್ಟಾರೆ ನೋಡುವ ಕಣ್ಣಿಗೆ ಇನ್ನಷ್ಟು ಗೊಂದಲದ ಹೋಮಧೂಮವನ್ನು ಕವಿಯುವಂತೆ ಮಾಡಿರುವುದೂ ಉಂಟು.

ಬಹಳ ದಿನಗಳ ಹಿಂದೆ, ವೇದಗಳ ಕಾಲ ಎಂದು ಯಾವ ಪ್ರಾಚೀನಕಾಲವನ್ನು ಪರಿಗಣಿಸಬಹುದೋ ಆಗ ಈ ವಿವಾಹ ಸಂಸ್ಕಾರ ಕೆಲವೇ ಕೆಲವು ಅಂಗಗಳನ್ನು ಒಳಗೊಂಡಿತ್ತು ಎಂದು ಸಂಶೋಧಕರ ಮತ. ಆಮೇಲೆ ನೋಡಿ ಈ ಮೂಲನದಿಗೆ ವಿವಿಧ ಪದ್ಧತಿಗಳ ಉಪನದಿಗಳು ಬಂದು ಸೇರುತ್ತಾ ಹೋಗಿ ಹರಿವ ನದಿ ಕಾಲಕ್ರಮೇಣ ಎಷ್ಟು ಅಗಲ ಆಳವಾಗಿ ಹೋಗಿದೆಯೆಂದರೆ ನಂಬಲಸಾಧ್ಯವಾಗಿಬಿಟ್ಟಿದೆ. ಡಾ.ಬೈದ್ಯನಾಥ ಸರಸ್ವತಿ ಎಂಬುವರು ‘ಬ್ರಾಹ್ಮಿನಿಕ್‌ ರಿಚುಯಲ್‌ ಟ್ರಡಿಷನ್ಸ್‌ ಇನ್‌ ದ ಕ್ರುಸಿಬಲ್‌ ಆಫ್‌ ಟೈಂ’ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್‌ಸ್ಡ್‌ ಸ್ಟಡೀಸ್‌, ಸಿಮ್ಲಾ ಪ್ರಕಾಶನ, 1977) ರಲ್ಲಿ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ , ವಿವಿಧ ಪದ್ಧತಿಗಳಿಗೆ ಅನುಗುಣವಾಗಿ, ಹಿಂದೂ ವಿವಾಹದ ನೂರಾ ಇಪ್ಪತ್ತೊಂದು (121) ಬೇರೆ ಬೇರೆ ಅಂಗಗಳನ್ನೂ, ಅದಕ್ಕೆ ಸಂಬಂಧಿಸಿದ ಶಾಸ್ತ್ರಾಧಾರದ ನೂರಾ ಹದಿನೈದು (115) ಆಕರಗಳನ್ನೂ (ಪರಿಶಿಷ್ಟ, ಪುಟಗಳು 230-289 ರಲ್ಲಿ ) ವಿವರಿಸಿದ್ದಾರೆ. ಈ ಶಾಸ್ತ್ರಾಧಾರಗಳಲ್ಲಿ ನಾಲ್ಕು ವೇದಗಳು, ಅವುಗಳ ಆರಣ್ಯಕಗಳು, ಬ್ರಾಹ್ಮಣಗಳು (ತೈತ್ತಿರೀಯ, ಶತಪಥ ಇತ್ಯಾದಿ), ಗೃಹ್ಯಸೂತ್ರಗಳು (ಆಶ್ವಾಲಾಯನ, ಬೌಧಾಯನ್‌, ಆಪಸ್ತಂಬ, ಹಿರಣ್ಯಕೇಶೀ, ಪಾರಸ್ಕರ. ಗೋಭಿಲ ಇತ್ಯಾದಿ) , ಕಾತ್ಯಾಯನ ಶ್ರೌತ ಸೂತ್ರ, ಆಪಸ್ತಂಬೀಯ ಮಂತ್ರಪಾಠ ಮುಂತಾದವು ಸೇರಿವೆ. ಈ ಲೇಖಕರು ತಮ್ಮ ಸಂಪ್ರಬಂಧಕ್ಕೆ ಆರಿಸಿಕೊಂಡಿರುವ ಸೀಮಿತ ಪ್ರದೇಶಗಳು ಕೆಲವು; ಉಳಿದ ಇನ್ನಿತರ ಪ್ರದೇಶಗಳ, ಒಳನಾಡಿನ ಪದ್ಧತಿಗಳನ್ನು ಗಮನಕ್ಕೆ ತೆಗೆದುಕೊಂಡರೆ, ಈ ಪಟ್ಟಿ ಇನ್ನೂ ದೊಡ್ಡ ಗಂಗಾನದಿಯಾಗಿ ಹರಿಯುತ್ತದೆ. ಈಗ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇರುವ ಶಶಿಕಲಾ ಚಂದ್ರಶೇಖರ ಅವರು ತಮ್ಮ ಕನ್ನಡ ಎಂ.ಎ. ವ್ಯಾಸಂಗದ ಅಂಗವಾಗಿ ಸಂಶೋಧಿಸಿದ ‘ಒಕ್ಕಲಿಗರಲ್ಲಿ ಮದುವೆ’ ಸಂಪ್ರಬಂಧವು ಕನ್ನಡ ನಾಡಿನ ಹಳೆಯ ಮೈಸೂರಿನ ಜನರ ರೀತಿ-ರಿವಾಜುಗಳ ಮೇಲೆ ಕ್ಷ-ಕಿರಣಗಳನ್ನು ಚೆಲ್ಲುತ್ತದೆ.

***

Bride and groom exchanging garlandsಗೃಹ್ಯಸೂತ್ರಗಳಲ್ಲೂ ಸ್ಮೃತಿಗಳಲ್ಲೂ ಹೇಳುವ ರೀತಿ ನಮ್ಮಲ್ಲಿ ಮದುವೆಗಳು ಎಂಟು ಬಗೆ :

ಬ್ರಾಹ್ಮೋ ದೈವಸ್‌ ತಥೈವ ಆರ್ಷ :, ಪ್ರಾಜಾಪತ್ಯಸ್‌ ತಥಾ ಅಸುರ:।
ಗಾನ್ಧರ್ವೋ ರಾಕ್ಷಸಶ್‌ ಚೈವ ಪೈಶಾಚಸ್‌ ಚ ಅಷ್ಟಮೋ ಅಧಮ:।। ಮನು 3:21

‘1. ಬ್ರಾಹ್ಮ ವಿವಾಹ : ಕುಲಶೀಲ ಸಂಪನ್ನನಾದ ಯುವಕನಿಗೆ ಚಿನ್ನಾಭರಣ ಅಲಂಕೃತೆಯಾದ ಸುಯೋಗ್ಯ ಕನ್ಯೆಯನ್ನು ನೀಡಿ, ಹೋಮ-ಪ್ರಾರ್ಥನೆಗಳೊಡನೆ ವಿವಾಹ ಮಾಡುವುದು.

2. ದೈವ ವಿವಾಹ : ಯಜ್ಞ ಮಾಡುತ್ತಾ ಋತ್ವಿಕನಿಗೆ ಸಾಲಂಕೃತಳಾದ ಕನ್ಯೆಯನ್ನು ನೀಡುವುದು.

3. ಆರ್ಷ ವಿವಾಹ : ವಧುವಿನ ತಂದೆಯು ವರನಿಂದ ಒಂದು ಅಥವಾ ಎರಡು ಗೋವುಗಳನ್ನು ಪಡೆದು, ಅನಂತರದಲ್ಲಿ ವರನಿಗೆ ಕನ್ಯೆಯನ್ನು ಕೊಡುವುದು.

4. ಪ್ರಾಜಾಪತ್ಯ ವಿವಾಹ : ‘ಇವಳೊಡನೆ ಕೂಡಿ ಧರ್ಮವನ್ನು ಆಚರಿಸು’- ಎಂದು ಹೇಳಿ, ಪ್ರಜಾಧರ್ಮಪಾಲನೆಯನ್ನು ಬಯಸಿ, ಕನ್ಯೆಯನ್ನು ವರನಿಗೆ ವಿಧಿಯುಕ್ತವಾಗಿ ನೀಡುವುದು.

5. ಅಸುರ ವಿವಾಹ : ಹಣವನ್ನು ಪಡೆದುಕೊಂಡು, ಕನ್ಯೆಯನ್ನು ಕೊಡುವುದು.

6. ಗಾಂಧರ್ವ ವಿವಾಹ : ವಧೂವರರು ಪರಸ್ಪರ ಪ್ರೀತಿಯಿಂದ ಪ್ರಣಯಿಗಳಾಗಿ ವಿವಾಹಿತರಾಗುವುದು.

7. ರಾಕ್ಷಸ ವಿವಾಹ : ಯುದ್ಧದಿಂದ ಇಲ್ಲವೇ ಬಲಾತ್ಕಾರದಿಂದ ಕನ್ಯೆಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗುವುದು.

8. ಪೈಶಾಚಿಕ ವಿವಾಹ : ಕನ್ಯೆಯು ನಿದ್ದೆ ಮಾಡುತ್ತಿದ್ದಾಗ, ಅಥವಾ ಕಪಟ ಉಪಾಯಗಳಿಂದ ಅವಳನ್ನು ವಶ ಮಾಡಿಕೊಂಡು ಅವಳೊಡನೆ ಶರೀರ ಸಂಬಂಧ ಬೆಳೆಸುವುದು.’

- ಎದುರ್ಕಳ ಕೆ ಶಂಕರನಾರಾಯಣ ಭಟ್‌, ‘ಹಿಂದೂ ಧರ್ಮದ ಪರಿಚಯ’, ಶ್ರೀರಾಮಕೃಷ್ಣ ಪ್ರಕಾಶನ, ಭಾಗಮಂಡಲ, 1955.

***

Traditionally dressed up bride and groom‘ಮದುವೆ’ ಎಂದೊಡನೆ ಕನ್ನಡ ಕಾವ್ಯಾಭ್ಯಾಸಿಗಳಿಗೆ ಥಟ್ಟನೆ ಹೊಳೆಯುವ ಸಂದರ್ಭಗಳ ಒಂದು ವಿಹಂಗಮ ನೋಟವನ್ನು ಜಿ.ಪಿ. ರಾಜರತ್ನಂ ಅವರು ತಮ್ಮ ‘ಸಪ್ತಪದಿ ಎಂಬ ವಿವಾಹ ಮಂಗಲ’(ಸತ್ಯ ಶೋಧನ ಪ್ರಕಟನ ಮಂದಿರ, 1951)ರಲ್ಲಿ ಕೊಟ್ಟಿದ್ದಾರೆ. ಈ ಸಂದರ್ಭಗಳು ಯಾವುವೆಂದರೆ : ವಧುವನ್ನು ಬೇಡಿ ಬರುವಂತೆ ಆಪ್ತರನ್ನು ಕಳಿಸುವ ಉದಾಹರಣೆಗಾಗಿ, ಹನ್ನೆರಡನೆಯ ಶತಮಾನದ ಕವಿ ಹರಿಹರನ ‘ಗಿರಿಜಾ ಕಲ್ಯಾಣ’ದಲ್ಲಿ ಬರುವ ಶ್ರೀ ಪಾರ್ವತಿ- ಪರಮೇಶ್ವರರ ವಿವಾಹ; ಗಂಡಿನ ತಂದೆ ಹೆಣ್ಣಿನ ತಂದೆಯಲ್ಲಿ ಮದುವೆಯ ಪ್ರಸ್ತಾಪ ಮಾಡುವ ಸಲುವಾಗಿ, ಹತ್ತನೆಯ ಶತಮಾನದ ಪಂಪನು ತನ್ನ ಮಹಾಕಾವ್ಯ‘ಆದಿಪುರಾಣ’ದಲ್ಲಿ ಚಿತ್ರಿಸಿರುವ ಶ್ರೀಮತಿ ವಜ್ರ ಜಂಘ್ಹರ ವಿವಾಹ ; ವಿವಾಹ ಮಂಟಪದ ವರ್ಣನೆಗೆ ಹನ್ನೆರಡನೆಯ ಶತಮಾನದ ರುದ್ರಭಟ್ಟನ ‘ಜಗನ್ನಾಥ ವಿಜಯ’ದಲ್ಲಿ ಬರುವ ಶ್ರೀ ರುಕ್ಮಿಣೀ-ಕೃಷ್ಣ ವಿವಾಹ ; ವರನ ಮಂಗಳಾಚಾರಕ್ಕೆ ಅದೇ ‘ಜಗನ್ನಾಥ ವಿಜಯ’ ಮತ್ತು ಆ ‘ಆದಿಪುರಾಣ’ ; ವಧುವಿನ ಮಂಗಳಾಲಂಕಾರಕ್ಕೆ, ಸುಮಾರು ಹನ್ನೊಂದನೆಯ ಶತಮಾನದ ನಾಗಚಂದ್ರನ ‘ರಾಮಚರಿತ ಪುರಾಣ’ದಲ್ಲಿನ ಶ್ರೀ ಸೀತಾರಾಮರ ವಿವಾಹ; ಹತ್ತನೆಯ ಶತಮಾನದ ಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ವರ್ಣಿತವಾದ ಸುಭದ್ರಾ- ಅರ್ಜುನರ ವಿವಾಹ ; ಬಾಗಿಲು ತಡೆದ ವಿವರಗಳಿಗೆ, ಹದಿನಾರನೆಯ ಶತಮಾನದ ಕವಿ ರತ್ನಾಕರವರ್ಣಿಯ ‘ಭರತೇಶ ವೈಭವ’ದಲ್ಲಿ ಕಾಣುವ ಸುಭದ್ರಾದೇವಿ- ಭರತರ ವಿವಾಹ ; ಹದಿಮೂರನೆಯ ಶತಮಾನದ ಆಂಡಯ್ಯನ ‘ಕಬ್ಬಿಗರ ಕಾವ’ದ ರತಿ- ಮನ್ಮಥರ ಮನೆವಾರ್ತೆ; ಹೆತ್ತವರ ಹಿತವಚನಕ್ಕೆ ಹನ್ನೆರಡನೆಯ ಶತಮಾನದ ಅಗ್ಗಲ ಕವಿಯ ‘ಚಂದ್ರ ಪ್ರಭ ಪುರಾಣ’ - ಹೀಗೆ ಅಲ್ಲಿ ಆಣಿ ಮುತ್ತುಗಳು ಇವೆ. ಕನ್ನಡ ನಾಡಿನಲ್ಲಿ ಮದುವೆಯ ಪದ್ಧತಿಗಳ ಮೇಲೆ ಬಳಕು ಚೆಲ್ಲುವ ಈ ವರ್ಣನೆಗಳನ್ನು ಓದಿ, ಭಾರತದ ಬೇರೆ ಬೇರೆ ಪ್ರದೇಶಗಳ ಪದ್ಧತಿಗಳಿಗೆ ಅವನ್ನು ಹೋಲಿಸಬಹುದು. ಕಾಶ್ಮೀರದ ಪದ್ಧತಿಗಳಿಗೆ ಕೂಡ.

***

ಕಾಶ್ಮೀರದ ಜನರ ಮದುವೆಯಲ್ಲಿ, ಭಾರತದ ಬೇರೆ ಪ್ರದೇಶಗಳ ಹಿಂದೂಗಳಲ್ಲಿದ್ದಂತೆ ಪಾಣಿ ಗ್ರಹಣಕ್ಕೂ, ಸಪ್ತಪದಿಗೂ ಮಹತ್ವವಿದೆ. ಇವೆರಡು ಮದುವೆಯ ಮುಖ್ಯ ಘಟ್ಟಗಳೆಂದು ಹಲವು ಜನರ ಮತ. (ಉಳಿದವನ್ನು ಈ ಲೇಖನದ ಎರಡನೆಯ ಭಾಗದಲ್ಲಿ ವಿವರಿಸುವೆ) ಪಾಣಿಗ್ರಹಣದ ವೇಳೆಯಲ್ಲಿ ವಧೂವರರ ಸಂಭಾಷಣೆ ತುಂಬಾ ಕಾವ್ಯಮಯವಾದದ್ದು. ಆ ಮಂತ್ರಗಳ ಭಾವಾನುವಾದವನ್ನು ಪರಾಂಬರಿಸಿ:

ವಧುವಿಗೆ ವರನ ಬೆಣ್ಣೆಯ ಮಾತು :

ವಧು, ನೀನು ಬೆಳೆವಾಗ ಶುಚಿಗೆ ಆದ್ಯತೆಯಿತ್ತೆ-
ಹುಡುಗಿ, ನಿನ್ನನು ‘ಸೋಮ’ ವರಿಸಿದನು ಆಗ ;
ದಿನ ಕಳೆದು, ದನಿಯಾಡೆದು, ಕೊಟ್ಟೆ ಶೃಂಗಾರಕೆ ಮನವ-
ತರುಣಿ, ನಿನ್ನನಾವರಿಸಿದನು ‘ಗಂಧರ್ವ’ ಆಗ ;
ಪುಟಿದು ಚೈತನ್ಯದ ಬೆಂಕಿ, ಪ್ರೀತಿ ಪ್ರೇಮದ ಸೆಳೆತ-
ಯುವತಿ, ನಿನ್ನ ಮೈಯುಂಡಾಯ್ತು, ‘ಅಗ್ನಿ’ ಆಗ ;
ಇದೋ ‘ನರ’ನು ಬಂದಿರುವ,
ನಿನ್ನೆದುರು ನಿಂದಿರುವ,
ಸರದಿಯಲಿ ನಾಲ್ಕರವ-
ನೀ ಆ ಮೂವರ ಒಡವೆ ಎನುವರೇನು ?
ನನಗಾಗಿ ರೂಪಿಸಿದ, ಮುಡುಪಾಗಿ ಕಾದಿರುವ,
ಪುಟವಿಟ್ಟ ಚಿನ್ನದ ಕೊಡುಗೆ ನೀ-
ಎನುವೆ ನಾನು !

(ಸೋಮ : ಪ್ರಥಮೋ ವಿವಿದೇ, ಗನ್ಧರ್ವೋ ವಿವಿದ ಉತ್ತರ: ।
ತೃತೀಯೋ ಅಗ್ನಿಷ್ಟೇ ಪತಿಸ್‌ ತುರೀಯಸ್‌ ತೇ ಮನುಷ್ಯಜ:।।
ಸೋಮೋ ದದದ್‌ ಗನ್ಧರ್ವಾಯ, ಗನ್ಧರ್ವೋ ದದದ್‌ ಅಗ್ನಯೇ।
ರಯಿಂ ಚ ಪುತ್ರಾಶ್‌ ಚ ಅದಾದ್‌ ಅಗ್ನಿರ್‌ ಮಹ್ಯಂ ಅಥೋ ಇಮಾಂ ।।
- ಋಗ್ವೇದ 10: 85 : 40-41)

***

‘ಎಲ್ಲಿ ಎಲ್ಲಿರುವನ್‌’ ಎಂದು ಸುತ್ತಲೂ ಅರಸುತ್ತಿದ್ದೆಯಲ್ಲವೆ ನೀನು ?-
ಅವನು ನಾನು ನಾನೆ !
‘ಎಲ್ಲಿ ಎಲ್ಲಿರುವಳ್‌’ ಎಂದು ಎತ್ತೆತ್ತಲೋ ಹುಡುಕುತ್ತಿದ್ದೆನಲ್ಲವೆ ನಾನು ?-
ಆ ಅವಳು ನೀನು ನೀನೆ !

ನಾ ಸ್ವರ್ಗ, ನೀ ಭೂಮಿ; ಋಕ್‌ ನೀನು, ನಾ ಸಾಮ;
ಗೀತ ನೀನಾದರೆ, ನಾ ಮಧುರ ಸಂಗೀತ ;
ನಾ ಮನಸು, ಮಾತು ನೀ ; ನಾ ದೀಪ, ನೀ ಬೆಳಕು ;
ಹೂವು ನಾನಾದರೆ, ಅದರಂದ ನೀ ಮಕರಂದ-
ಬಾ ಕೂಡಿ ಸಾಗೋಣ, ನಲಿದೊಲಿದು ಬೆಳೆಯೋಣ,
ಸಂತತಿಯ ಬೆಳೆಸೋಣ, ಸ್ವರ್ಗ ಸುಖ ಮನದಣಿಯೆ
ಸವಿದು ಬಾಳೋಣ !

(ಅಮೋ ’ಹಂ ಅಸ್ಮಿ, ಸಾ ತ್ವಂ ;
ದ್ಯೌರ್‌ ಅಹಂ, ಪೃಥಿವೀ ತ್ವಂ ;
ಸಾಮಾಹಂ, ಋಕ್‌ ತ್ವಂ-
ತಾವೇಹಿ, ವಿವಾಹಾವಹೈ, ಸಹರೇತೋ ದಧಾವಹೈ
ಪ್ರಜಾಂ ಪ್ರಜನಯಾವಹೈ, ಪುತ್ರಾನ್‌ ವಿಂದಾವಹೈ...।।)
- ಹಿರಣ್ಯಕೇಶೀ ಗೃಹ್ಯ ಸೂತ್ರ, ಪಾರಸ್ಕರ ಗೃಹ್ಯ ಸೂತ್ರ)

***

ಪೂರ್ವಸೂರಿಗಳು ಕಂಡ ಕಾಶ್ಮೀರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+