ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್‌.ಭಾನುಮತಿ- ಅವರೊಂದಿಗೆ ಸಂದರ್ಶನ

By * ಎಸ್‌.ಕೆ.ಹರಿಹರೇಶ್ವರ, ಮೈಸೂರು
|
Google Oneindia Kannada News

(ಹಿಂದಿನ ಪುಟದಿಂದ)

ಹರಿ : ಈ ಮಧ್ಯೆ ಕನ್ನಡದ ಕೆಲಸ ಶುರು ಮಾಡಿದ್ದು ಯಾವಾಗಿನಿಂದ?
ಭಾನುಮತಿ: ಈ ಹಂತ ಸೇರಿದ ಮೇಲೆ ಜೀವದಾಳದಲ್ಲಿದ್ದ ಕನ್ನಡದ ಮೇಲಿನ ಪ್ರೇಮ, ಕನ್ನಡಿಗರ ಮೇಲಿನ ವಿಶ್ವಾಸ, ಭಾರತೀಯತೆಯ ಮೇಲಿನ ಹೆಮ್ಮೆ ಮತ್ತು ಮೆಡಿಕಲ್‌ ಪಾಲಿಟಿಕ್ಸ್‌ ಮೇಲಿರುವ ಉತ್ಸಾಹ ಎಲ್ಲವೂ ಒಂದೊಂದಾಗಿ ಹೊರಬಂದಿದ್ದು . ಇನ್ನೊಂದು ವಿಚಾರ ನಾನು ಈಗಲೇ ಹೇಳಬೇಕು: ನನ್ನ ಈ ಅಭಿಲಾಷೆಗಳೆಲ್ಲಾ ಈಡೇರಲು ನನ್ನ ಯಜಮಾನರು ನೀಡುತ್ತಿದ್ದ ಸತತ ಬೆಂಬಲವೇ ಕಾರಣ.

ಹರಿ : ಎಷ್ಟಾದರೂ ನಿಮ್ಮದು ಪ್ರೇಮ-ವಿವಾಹ.. ...
ಭಾನುಮತಿ: ಹಾಗಲ್ಲ . ಅಪ್ಪಾಜಿ ಅವರು ನಿಜವಾಗಲೂ ಒಬ್ಬ ದೊಡ್ಡ ಸಂಭಾವಿತ ವ್ಯಕ್ತಿ . ಎಲ್ಲರಿಗೂ ಪ್ರೀತಿಪಾತ್ರರು; ಹೃದಯವಂತರು ; ಹತ್ತಿರ ಬಂದವರೆಲ್ಲರಿಗೂ ಸ್ನೇಹ, ದಯೆ, ವಿಶ್ವಾಸ ತೋರುವ ಶುದ್ಧ ಅಂತಃಕರಣದ ವ್ಯಕ್ತಿ . ಬರೀ ಉತ್ಪ್ರೇಕ್ಷೆಯ ಮಾತಲ್ಲ , ಅವರು ಉದಾರ ದಾನಶೀಲರೂ ಸಹ! ಇದು ಗೊತ್ತೇ ? ನನ್ನ ಬಹಳ ಜನ ಸ್ನೇಹಿತರು ಅವರನ್ನ 'ಗುಣದಲ್ಲಿ , ಆಚರಣೆಯಲ್ಲಿ ನಿಜವಾದ 'ಬ್ರಾಹ್ಮಣ’ ಎಂದರೆ ಇವರೇನೆ!’- ಎನ್ನುವುದೂ ಉಂಟು.

ಹರಿ : ನಿಮಗೆ ಎಷ್ಟು ಜನ ಮಕ್ಕಳು ?
ಭಾನುಮತಿ: ನಮಗೆ ಇಬ್ಬರು ಮಕ್ಕಳು. ಮುದ್ದಿನ, ಪ್ರೀತಿಯ, ಎರಡು ಗಂಡುಮಕ್ಕಳು ನಯನ್‌ ಮತ್ತು ಕಿರಣ್‌ ಅಂತ. ನನ್ನ ಒಬ್ಬ ಮಗ ನಯನ್‌, ಅವನಿಗೆ ಈಗ ಮೂವತ್ತೊಂದು ವರ್ಷ ವಯಸ್ಸು , ಆಸ್ಟ್ರೇಲಿಯಾದಲ್ಲಿ ಇದ್ದಾನೆ; ಓದುತ್ತಿದ್ದಾನೆ, ವ್ಯವಸಾಯ ವಿಜ್ಞಾನ, ಅಗ್ರಿಕಲ್ಚರ್‌ ಸೈನ್ಸ್‌ನಲ್ಲಿ . ಏನು ವಿಷಯ ಗೊತ್ತೆ , ಅವನು ಆರಿಸಿಕೊಂಡಿರುವುದು? ಚೆನ್ನಾಗಿ 'ದ್ರಾಕ್ಷಾರಸ’ ಮಾಡುವುದು ಹೇಗೆ ಅಂತ! ಇನ್ನೊಬ್ಬ ಮಗ, ಕಿರಣ್‌, 26 ವರ್ಷ ಅವನಿಗೆ. ಈಗಿನ್ನೂ ಎಂ.ಬಿ.ಏ. ಮುಗಿಸಿದ, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ . ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ ಮತ್ತು ಕೋಚಿಂಗ್‌ನಲ್ಲಿ ತನ್ನ ಜೀವನ ರೂಪಿಸಿಕೊಳ್ಳಬೇಕು ಅಂತ ಅವನ ಅಭಿಲಾಷೆ. ಈಗ ಅವನು ಅಲ್ಲೇ ಸ್ಯಾನ್‌ ಫ್ರಾನ್ಸಿಸ್ಕೋದಲ್ಲೇ ಒಂದು ಫುಟ್‌ಬಾಲ್‌ (ಸಾಕರ್‌) ಟೀಂಗೆ ಮ್ಯಾನೇಜರ್‌ ಮತ್ತು ಕೋಚ್‌ ಆಗಿ ಕೆಲಸ ಮಾಡ್ತಾ ಇದ್ದಾನೆ.

ಹರಿ: ಕನ್ನಡದ ಕೆಲಸದ ಬಗ್ಗೆ ಮಾತನಾಡುತ್ತಿದ್ದೆವು....
ಭಾನುಮತಿ: ಹೌದು, 1983ನೇ ಇಸವಿಯಲ್ಲಿ ಯು.ಕೆ. ಕನ್ನಡ ಬಳಗ ಜನನವಾಯಿತು. ಡಾ. ಸ್ನೇಹಾ ಕುಲಕರ್ಣಿ ಅವರು ಪ್ರಥಮ ಅಧ್ಯಕ್ಷಿಣಿ. ನಮ್ಮ ಕನ್ನಡ ಬಳಗ ಒಂದು ದೊಡ್ಡ ಕುಟುಂಬ ಇದ್ದಂತೆ. ಅದರ ಅಭಿವೃದ್ಧಿಗಾಗಿ ಆಗಿನಿಂದ ಈಗಿನವರೆಗೂ ಹಲವಾರು ರೀತಿಯ ಅಳಿಲು ಸೇವೆ ಕೆಲಸ ಮಾಡುತ್ತಿದ್ದೇನೆ.

ಹರಿ: ವಿದೇಶದಲ್ಲಿ ನಡೆದ ದೊಡ್ಡ ಕನ್ನಡ ಸಮ್ಮೇಳನ, ಯು.ಕೆ.ನಲ್ಲಿ ನಡೆಸಿದ್ದು ನೀವೇ ಅಲ್ಲವೇ ?
ಭಾನುಮತಿ: ಅದರ ಬಗ್ಗೆ ನನಗೆ ಹೇಳಿಕೊಳ್ಳಲು ಹೆಮ್ಮೆ ! 1988ರಲ್ಲಿ ಮೊಟ್ಟ ಮೊದಲ ಬಾರಿಗೆ, ಪ್ರಪಂಚದ ಎಲ್ಲೆಡೆಯ ಕನ್ನಡಿಗರನ್ನೂ ವಿದೇಶದಲ್ಲಿ ಒಂದು ಕಡೆ ಸೇರಿಸಬೇಕೆಂಬ ಆಸೆಯಿಂದ 'ವಿಶ್ವ ಕನ್ನಡಿಗರ ಸಮ್ಮೇಳನ’ವನ್ನು ಅಧ್ಯಕ್ಷ ಸ್ಥಾನದಲ್ಲಿ ನಿಂತು, ಮ್ಯಾಂಚೆಸ್ಟೆರ್ನಲ್ಲಿ ನಾನು ನಡೆಸಿದೆ. ಆಗಸ್ಟ್‌ 27ನ್ನ 'ಶ್ರೀ ಡಿ ವಿ ಗುಂಡಪ್ಪ ದಿನ’ ಅಂತ ಕರೆದೆವು; ಮರುದಿನ 28ನೇ ದಿನವನ್ನ 'ಹೊಯ್ಸಳ ದಿನ’ ಅಂತ ಕರೆದೆವು. ಈ ಸಮ್ಮೇಳನ ಯಶಸ್ವಿಯಾಗಲು ನನಗೆ ತುಂಬಾ ಜನ ಕನ್ನಡ ಬಳಗದ ಸ್ನೇಹಿತರು ಸಹಾಯ ಮಾಡಿದರು. ಅವರೆಲ್ಲ ದಿನ-ರಾತ್ರಿ ಬಿಡುವಿಲ್ಲದೆ ದುಡಿದರು. ಇದಕ್ಕೆ ಕರ್ಣಾಟಕ ಸರಕಾರವೂ ಬಹಳ ಸಹಾಯ ನೀಡಿತು. ಅವರೆಲ್ಲರಿಗೂ ನಾನು ಕೃತಜ್ಞಳು. ಅಮೇರಿಕಾ, ಯೂರೋಪ್‌, ಇಂಡಿಯಾ ಎಲ್ಲೆಡೆಯಿಂದಲೂ ಬಹಳವೇ ಕನ್ನಡಿಗರು ಸೇರಿ ಭಾಗವಹಿಸಿದರು. ಬಹಳ ವಿಜೃಂಭಣೆಯಿಂದ ಇದು ಜರುಗಿತು. ಅದರ ಸ್ಮರಣ ಸಂಚಿಕೆಯ ಲೇಖನಗಳನ್ನ ನೀವೇ ಆಗ ಕಂಪ್ಯೂಟರೀಕರಣ ಮಾಡಿಕೊಟ್ಟಿರಿ. ನಿಮಗೆ ಜ್ಞಾಪಕ ಇದೆ ತಾನೇ ?

ಹರಿ: ಹೌದು ನೆನಪಿದೆ. ನಾನಾಗ ಪೆನ್ಸಿಲ್ವೇನಿಯಾದ ಪಾಟ್ಸ್‌ಟೌನ್‌ ಊರಿನಲ್ಲಿ ಇದ್ದೆ ; ಅಮೇರಿಕನ್ನಡ ಪತ್ರಿಕೆ ನಡೆಸುತ್ತಿದ್ದೆ. ಪ್ರೊಫೆಸರ್‌ ಕಸ್ತೂರಿ ರಂಗಾಚಾರ್‌ ಅವರು ತಯಾರಿಸಿದ್ದ 'ಕಸ್ತೂರಿ’ ಕನ್ನಡ ತಂತ್ರಾಂಶವನ್ನು ಬಳಸಿದ್ದೆ. ನನ್ನನ್ನ ನೀವು ಸಮ್ಮೇಳನದ ಸಾಹಿತ್ಯಗೋಷ್ಠಿಗೂ ಭಾಗವಹಿಸಲು ಕರೆದಿದ್ದಿರಿ; 'ವಿದೇಶದಲ್ಲಿ ಕನ್ನಡದ ಪ್ರಸಾರ ಮತ್ತು ಉತ್ತೇಜನೆ’ ವಿಷಯವಾಗಿ ಅತಿಥಿ ಭಾಷಣಕಾರನಾಗಿಯೂ ಆಹ್ವಾನಿಸಿದ್ದಿರಿ, ಬರಲಾಗಲಿಲ್ಲ ಕ್ಷಮಿಸಿ; ಆದರೆ ಚೆನ್ನಾಗಿ ನಡೆಯಿತು ಅಂತ ಕೇಳಿದೆ.
ಭಾನುಮತಿ: ತುಂಬಾ ಚೆನ್ನಾಗಿ ನಡೆಯಿತು. ಆಗ ಕರ್ನಾಟಕದ ಮುಖ್ಯಮಂತ್ರಿಗಳು ರಾಮಕೃಷ್ಣ ಹೆಗ್ಡೆ ಬಂದಿದ್ದರು, ಉದ್ಘಾಟಿಸಿದರು. ಕಲಾವಿದರ ಒಂದು ದೊಡ್ಡ ತಂಡವೇ ಬಂದಿತ್ತು.

ಹರಿ: ಈಗ್ಗೆ ಎರಡು ವರ್ಷಗಳ ಹಿಂದೆ, ಮತ್ತೊಂದು ವಿಶ್ವಮಟ್ಟದ ಸಮ್ಮೇಳನವನ್ನೂ ಸಹ ನೀವೇ ಯು.ಕೆ. ಕನ್ನಡ ಬಳಗದ ಆಶ್ರಯದಲ್ಲಿ ನಡೆಸಿದಿರಲ್ಲವೇ ?
ಭಾನುಮತಿ: ಈ ಮಿಲೇನಿಯಂ ಸ್ಮರಣಾರ್ಥವಾಗಿ ಮತ್ತೊಂದು ಕಾರ್ಯಕ್ರಮವನ್ನು ಪುನಃ ವಿಜೃಂಭಣೆಯಿಂದ ಮಾಡಬೇಕೆಂಬ ಮಹದಾಶೆ ನಮ್ಮ ಯು.ಕೆ. ಕನ್ನಡ ಬಳಗಕ್ಕೆ ಬಂತು. ಅದಕ್ಕೂ ಒಂದು ಸಮ್ಮೇಳನ ಸಮಿತಿ ರಚಿತವಾಯಿತು; ನನ್ನನ್ನೇ ಮುಖ್ಯಸ್ಥಳಾಗಿರಲು ಒತ್ತಾಯಿಸಿದರು. ಮತ್ತೊಮ್ಮೆ ಅಧ್ಯಕ್ಷ ಸ್ಥಾನದಲ್ಲಿ ನಿಂತು 'ಸಹಸ್ರಾಬ್ಧಿ ಸಮ್ಮೇಳನವನ್ನು’ ಜರುಗಿಸುವ ಹೊಣೆಯೂ ನನ್ನದಾಯಿತು. ಈ ಸಮಯದಲ್ಲೂ ಕರ್ನಾಟಕದ ಬೆಂಬಲವಿಲ್ಲದಿದ್ದಲ್ಲಿ ಅದಕ್ಕೆ ಅಷ್ಟು ಕಳೆ ಬರುತ್ತಿರಲಿಲ್ಲ; ಅಷ್ಟು ದೊಡ್ಡ ಪ್ರಮಾಣದಲ್ಲಿ ಅಷ್ಟು ಯಶಸ್ವಿಯಾಗಿ ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ !

Bananduru Kempayya attended Millennium kannada conferenceB.K.S. Varma-Artist

ಹರಿ: ನೀವು ನಡೆಸಿದ ಈ 'ಸಹಸ್ರಾಬ್ಧಿ ಸಮ್ಮೇಳನ’ದ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಸ್ವಲ್ಪ ಹೇಳುತ್ತೀರಾ ?
ಭಾನುಮತಿ: ಆಗಲಿ, ಆಗಸ್ಟ್‌ 25, 26 ಮತ್ತು 27, 2000ರಲ್ಲಿ ಇಂಗ್ಲೆಂಡಿನಲ್ಲಿ ಅದನ್ನು ನಡೆಸಿದೆವು. ಕೆ. ಸಿ. ರಾಮಮೂರ್ತಿಗಳ ನೇತೃತ್ವದಲ್ಲಿ, ಸಾಹಿತಿ ಪ್ರೊಫೆಸರ್‌ ಜಿ. ಎಚ್‌. ನಾಯಕ್‌, ಕವಿ, ಡಾ. ಸರಜೂ ಕಾಟ್ಕರ್‌, ಶತಾವಧಾನಿ ಆರ್‌. ಗಣೇಶ್‌, ಚಿತ್ರಕಾರ ಬಿ. ಕೆ. ಎಸ್‌. ವರ್ಮಾ, ಯಕ್ಷಗಾನದ ಕೆ. ಮೋಹನ್‌, ಪಂಡಿತ ಆರ್‌. ಶೇಷಾದ್ರಿ ಗವಾಯಿ, ಸುಗಮ ಸಂಗೀತ ಕಲಾವಿದೆ ರತ್ನಮಾಲಾ ಪ್ರಕಾಶ್‌, ಜಾನಪದ ಸಂಗೀತಗಾರ ಬಾನಂದೂರು ಕೆಂಪಯ್ಯ, ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ, ಸುಗಮ ಸಂಗೀತದ ಶಬ್ಬೀರ್‌ ಅಹಮದ್‌ ಅರಬ್‌, ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ, ಡೊಳ್ಳು ಕುಣಿತದ ಕಾಗೋಡು ಅಣ್ಣಪ್ಪ ಮತ್ತು ಸಂಗಡಿಗರು- ಇವರೆಲ್ಲರೂ ಜೊತೆಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಅವರೂ ಆಹ್ವಾನಿತರಾಗಿದ್ದರು.

Chindodi Leela participated in the Millennium kannada conferenceDollukunitha Annappa added color to Millennium kannada conference rally

ಹರಿ: ನಿಮಗೆ ಗೊತ್ತಾ ? ಈ ಕಲಾವಿದರೆಲ್ಲರ ಬಗ್ಗೆ ಅವರ ಪರಿಚಯ ಮತ್ತು ಸಾಧನೆಗಳನ್ನ ವಿಶ್ವ ಕನ್ನಡ ಸಹಸಂಪಾದಕರಾದ ನಮ್ಮ ಆರ್‌. ಜಿ. ಹಳ್ಳಿ ನಾಗರಾಜ ಅವರು ಆವಾಗ ಅಂತರ್‌ಜಾಲದಲ್ಲಿ http:www.vishvakannada.com/archives/html/vol4no3/sahityasammelana.htm ದಲ್ಲಿ ಪ್ರಕಟಿಸಿದ್ದಾರಲ್ಲ.
ಭಾನುಮತಿ: ನಿಜ, ಅವರಿಗೆ ಬಹಳ ಥ್ಯಾಂಕ್ಸು ! ನಮ್ಮ 'ಸಹಸ್ರಾಬ್ಧಿ ಸಮ್ಮೇಳನ’ದ ಮುಖ್ಯ ಧ್ಯೇಯ ಹೀಗಿತ್ತು : 'ಎರಡು ತಲೆಮಾರು ಮತ್ತು ಎರಡು ಸಂಸ್ಕೃತಿಗಳ ಸಮನ್ವಯ’- ಅಂತ. ಅದನ್ನು ನಾವು ಅಕ್ಷರಶಃ ಸಾಧಿಸಿದೆವು. ಅದು ಹೇಗೆ ಅಂದರೆ ಇದೇ ಸಮಯದಲ್ಲಿ ಮಿಲೆನಿಯಂ ಸಮೇಳನದ ಸ್ಮರಣಾರ್ಥವಾಗಿ 'ಅಕ್ಷರ’, 'ಆರೋಗ್ಯ’ ಮತ್ತು 'ಆಚರಣೆ’- ಅಂತ 'ಥೀಂ’ನಲ್ಲಿ - ಮುಖ್ಯ ಉದ್ದೇಶ್ಯ ಇಟ್ಟುಕೊಂಡು - ಕೆಲಸ ಮಾಡಲು ತೊಡಗಿದೆವು. 'ಅಕ್ಷರ’ದ ಸಲುವಾಗಿ ಕರ್ಣಾಟಕದ ಪಾಠಶಾಲೆಯಾಂದಕ್ಕೆ ಹಣ ಸಂಗ್ರಹಿಸಿ ಕೊಡಲಾಯಿತು. ಆಮೇಲೆ, 'ಆರೋಗ್ಯ’ದ ಪರವಾಗಿ ಕ್ಷಯ ಮತ್ತು ಕುಷ್ಠ ರೋಗಿಗಳಿಗೆ ಸಹಾಯವಾಗಲೆಂದು 'ರಾಮಕೃಷ್ಣ ಮಿಷನ್‌’ ಮೂಲಕ ಶ್ರೀ ಜಪಾನಂದ ಸ್ವಾಮಿಯವರಿಗೆ ಹತ್ತು ಸಾವಿರ(10.000/-) ಪೌಂಡಿಗೂ ಜಾಸ್ತಿ ಹಣ ಕೊಟ್ಟೆವು. 'ಆಚರಣೆ’ಯ ಪರವಾಗಿ ವಿಜೃಂಭಣೆಯಿಂದ 'ಸಹಸ್ರಾಬ್ಧಿ ಸಮ್ಮೇಳನ’ವನ್ನು ನಾವು ಯು.ಕೆ. ಕನ್ನಡ ಬಳಗದ ಉತ್ಸಾಹೀ ಕಾರ್ಯಕರ್ತರು ಆಚರಿಸಿದೆವು ! ಈ ಕೆಲಸಗಳೆಲ್ಲ ಸಾಧ್ಯವಾದದ್ದು ನಮ್ಮಲ್ಲಿರುವ ಹಲವು ಕನ್ನಡಿಗರ ನಿರಂತರ ನಿಸ್ಪೃಹ ದುಡಿಮೆಯಿಂದ. ಅವರೆಲ್ಲರಿಗೂ ನಾನು ಅಭಾರಿ.

ಹರಿ: ನೀವು ಬಹಳ ದೊಡ್ಡ ಆತಿಥ್ಯಶೀಲರು- ಎಂಬುದನ್ನು ಕರ್ಣಾಕರ್ಣಿಯಾಗಿ ಕೇಳಿದ್ದೇನೆ !...
ಭಾನುಮತಿ: ಯಾರೇ ಬರಲಿ, ಯಾವಾಗಲೇ ಬರಲಿ, ಇಂಗ್ಲೆಂಡ್‌ ದೇಶಕ್ಕೆ ಹಾಗೆ ಬರುವ ಯಾವುದೇ ಕಲಾವಿದರಾಗಲಿ, ಸಾಹಿತಿಗಳಾಗಲಿ, ಗಣ್ಯವ್ಯಕ್ತಿಗಳಾಗಲಿ ನಮ್ಮಲ್ಲಿ ಉಳಿಸಿಕೊಂಡು, ಆದಷ್ಟು ಆದರಾತಿಥ್ಯವನ್ನ ಕೊಡದೇ ಕಳುಹಿಸುವುದಿಲ್ಲ. ಬಂದಾಗ ಅಂಥವರನ್ನು ಸತ್ಕರಿಸುವುದು ನಮ್ಮ ಭಾಗ್ಯ ಎಂದು ತಿಳಿದಿರುವವಳು ನಾನು.

ಹರಿ: ನೀವು ಡಾ. ಅಪ್ಪಾಜಿಯವರೂ ಹಲವಾರು ಸಂಘ-ಸಂಸ್ಥೆಗಳ ನೇತೃತ್ವ ವಹಿಸಿದ್ದೀರೆಂದು ಕೇಳಿರುವೆ.
ಭಾನುಮತಿ: ವೈದ್ಯಕೀಯ ವೃತ್ತಿಯಲ್ಲಿ ಬಿಡುವಿಲ್ಲದಷ್ಟು ತೊಡಗಿದ್ದರೂ ಸಮಾಜಸೇವೆಯನ್ನ ನಮ್ಮ ಕರ್ತವ್ಯ ಅಂತ ಭಾವಿಸಿ, ಉಳಿದ ಸಮಯವನ್ನೆಲ್ಲ ಇಂಥ ಕೆಲಸಗಳಿಗೆ ವಿನಿಯೋಗಿಸುತ್ತೇವೆ, ನಾವಿಬ್ಬರೂ. ಯು.ಕೆ. ಕನ್ನಡ ಬಳಗದೊಂದಿಗೆ ಮೊದಲಿನಿಂದಲೂ ನಂಟು ಇದ್ದೇ ಇದೆ; ಇದಲ್ಲದೆ ಮ್ಯಾಂಚೆಸ್ಟೆರ್ನಲ್ಲಿರುವ ಭಾರತೀಯ ವಿದ್ಯಾಭವನದ ಮ್ಯಾನೇಜ್ಮೆಂಟ್‌ ಕಮಿಟಿಯ ಸದಸ್ಯಳಾಗಿದ್ದು ಕಳೆದ ಒಂಬತ್ತು ವರುಷದಿಂದ ಸೇವೆ ಸಲ್ಲಿಸುತ್ತಿದ್ದೇನೆ.

ಹರಿ: ವೈದ್ಯಕೀಯ ಕ್ಷೇತ್ರದಲ್ಲಿನ ಸಂಘ-ಸಂಸ್ಥೆಗಳಲ್ಲಿ ?
ಭಾನುಮತಿ: ಇನ್ನು ಮೆಡಿಕಲ್‌ ಕಾರ್ಯಕ್ಷೇತ್ರದಲ್ಲಿ ನನ್ನ ಪಾತ್ರ ಏನು ಅಂತ ಕೇಳುತ್ತಿದ್ದೀರಾ ? ವೈದ್ಯಕೀಯ ವೃತ್ತಿಯಲ್ಲಿದ್ದು, ಅದರಲ್ಲಿನ ಆಡಳಿತ ಕ್ಷೇತ್ರದಲ್ಲಿ ಭಾಗವಹಿಸಿದೇ ಇರುವುದು ನನ್ನಿಂದ ಸಾಧ್ಯವಾಗಲಿಲ್ಲ. ಧುಮುಕಲೇ ಬೇಕಾಯಿತು. ಲೋಕಲ್‌ ಮೆಡಿಕಲ್‌ ಕಮಿಟಿ, ಬ್ರಿಟಿಷ್‌ ಮೆಡಿಕಲ್‌ ಅಸೋಸಿಯೇಶನ್‌, ಓವರ್ಸೀಸ್‌ ಮೆಡಿಕಲ್‌ ಅಸೋಸಿಯೇಶನ್‌, ಪ್ರೆೃಮರಿ ಕೇರ್‌ ಗ್ರೂಪ್‌- ಮುಂತಾದ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಕಮಿಟಿಗಳಲ್ಲಿ ಚೇರ್‌ಪರ್ಸನ್‌ ಆಗಿ ಸತತವಾಗಿ ಸೇವೆ ಸಲ್ಲಿಸುತ್ತಿದ್ದೇನೆ. 1999ನೇ ಇಸವಿಯಲ್ಲಿ ನಡೆದ 'ದಿ ಜನರಲ್‌ ಮೆಡಿಕಲ್‌ ಕೌನ್‌ಸಿಲ್‌’ ಚುನಾವಣೆಯಲ್ಲಿ ಯು.ಕೆ.ಯ ದೇಶಾದ್ಯಂತ ಇದ್ದ ನಲವತ್ತೆರಡು (42) ಸೀಟುಗಳಿಗೆ ನಾನೂರ ನಲವತ್ತು (440) ಜನ ಸ್ಪರ್ಧಿಸಿದ್ದರು; ಆಗ ಅದರಲ್ಲಿ ನಾನೂ ಒಬ್ಬಳು ಚುನಾಯಿತಳಾದವಳು- ಎಂದು ಹೇಳಿಕೊಳ್ಳಲು, ಭಾರತೀಯಳಾದ ನನಗೆ ಹೆಮ್ಮೆ.

ಹರಿ: ನೀವು ಎಷ್ಟೊಂದು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಎಷ್ಟೊಂದು ಕೂಟ ಒಕ್ಕೂಟಗಳೂ ನಿಮ್ಮನ್ನು ಪ್ರಶಸ್ತಿಗಳನ್ನಿತ್ತು ಗೌರವಿಸಿವೆ. ಪ್ರಶಸ್ತಿಯ ಬೆನ್ನ ಹಿಂದೆ ಓಡಿದವರು ನೀವಲ್ಲ; ಆದರೂ ನಿಮಗೆ ಕೊಟ್ಟ ಯಾವುದಾದರೊಂದು ಪುರಸ್ಕಾರವನ್ನು ಹೆಸರಿಸಲು ನಿಮ್ಮನ್ನು ಕೇಳಿಕೊಂಡರೆ, ನೀವು ಯಾವುದನ್ನು ಹೇಳಬಯಸುತ್ತೀರಿ ?
ಭಾನುಮತಿ: ನನಗಿಂತ ಹೆಚ್ಚು ಸಾಧಿಸಿದವರು ಎಲೆಮರೆಯ ಕಾಯಿಯಂತೆ ಎಷ್ಟೋ ಜನ ಇದ್ದಾರೆ. ಆದರೆ ನಾನೇ ಭಾಗ್ಯವಂತೆ, ನನ್ನ ಅಲ್ಪಸೇವೆಯನ್ನೇ ಅಗಾಧವಾಗಿ ಕಂಡು ಹೊಗಳಿದ್ದಾರೆ. ಅದವರ ಸೌಜನ್ಯ. ಆದರೂ ನನಗೆ ಸಂತೋಷ ತಂದ ಒಂದು ವಿಚಾರ : ನನ್ನ ಈ ಸೇವೆ-ಸಾಧನೆಗಳನ್ನೆಲ್ಲಾ ಗುರುತಿಸಿ ಕರ್ಣಾಟಕ ಸರಕಾರವು 1999ನೇ ಇಸವಿಯಲ್ಲಿ 'ಹೊರನಾಡ ಕನ್ನಡಿಗ’ ಎಂದು 'ರಾಜ್ಯೋತ್ಸವ’ ಪ್ರಶಸ್ತಿಯನ್ನು ಕೊಟ್ಟದ್ದು ಸ್ಮರಣೀಯ - ಅಂತ ಹೇಳಬಹುದು !

ಹರಿ: ಡಾ. ಭಾನುಮತಿ ಅವರೇ, ಮುಂದೆ ಇನ್ನೂ ಏನೇನು ಮಾಡುವ ಆಕಾಂಕ್ಷೆಗಳಿವೆ ?
ಭಾನುಮತಿ: ನೋಡಿ ಹರಿಹರೇಶ್ವರ್‌ ಅವರೇ, ನಾನೋ, ಪೂರ್ಣಾವಧಿಯ ಕಾರ್ಯನಿರತ ವೃತ್ತಿಪರ ವೈದ್ಯೆ. 'ಫುಲ್‌ ಟೈಮ್‌ ಪ್ರೊಫೆಷನಲ್‌ ಡಾಕ್ಟರ್‌’! ಈ ಮಧ್ಯೆ ಸ್ವಲ್ಪ ಯೋಗ ಮತ್ತು ಗಾಲ್ಫ್‌ಗೆ ಕೂಡ ಸ್ವಲ್ಪ ಸಮಯ ಮಾಡಿಕೊಂಡು ಕಾಲ ಕಳೆಯುತ್ತಿರುವವಳು ನಾನು. ಈ ಎಲ್ಲಾ ನಾನಾ ವಿಧದ ಚಟುವಟಿಕೆಗಳಲ್ಲಿ ತನು-ಮನಗಳನ್ನ ಸಂಪೂರ್ಣವಾಗಿ ಕೊಟ್ಟು ದುಡಿಯಲು ಬೆಂಬಲ ಕೊಟ್ಟಿರುವರಲ್ಲ, ನನ್ನ ಯಜಮಾನರು, ಡಾ. ಅಪ್ಪಾಜಿ ಅವರು, ಅವರಿಗೆ ಮತ್ತು ನನ್ನ ಪ್ರೀತಿಯ ಮಕ್ಕಳಿಗೂ ನಾನು ಚಿರಋಣಿ.

ಇನ್ನು ಮುಂದಿನ ಅಭಿಲಾಶೆ ? ಜೀವವಿರುವವರೆಗೂ ಕೈಲಾದಷ್ಟು ಜನಸಹಾಯ, ದೇಶ-ಸೇವೆಯನ್ನ ಮಾಡಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕನ್ನಡದ ಬಾವುಟವನ್ನು ಮೇಲೇರಿಸಿ ಜಯಭೇರಿ ಹೊಡೆಯುವ ಒಂದು ಆಸೆ ನನ್ನದು ! ಆದರೆ, ಒಂದಂತೂ ನಿಜ: ಇಲ್ಲೀವರೆಗೆ ಏನೆಲ್ಲಾ ಮಾಡಲು ಸಾಧ್ಯವಾಯಿತೋ ಅದು ಆದದ್ದು ನಮ್ಮ ತಂದೆತಾಯಿಯವರು ಅಂದು ಮಾಡಿದ ದೇವರ ಸೇವೆ ಮತ್ತು ದೇವರ ಪ್ರಾರ್ಥನೆಗಳ ಫಲಿತಾಂಶ- ಎಂದರೆ ಹೆಚ್ಚೇ ?

ಹರಿ: ನಮಸ್ಕಾರ !
ಭಾನುಮತಿ: ನಮಸ್ಕಾರ !

ಹಿಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X