ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್‌.ಭಾನುಮತಿ- ಅವರೊಂದಿಗೆ ಸಂದರ್ಶನ

By ಶಿಕಾರಿಪುರ ಹರಿಹರೇಶ್ವರ
|
Google Oneindia Kannada News

ಹರಿಹರೇಶ್ವರ : ಭಾನುಮತಿ ಅವರೇ, ನೀವು ಹುಟ್ಟಿದ್ದು ಯಾವ ಊರಲ್ಲಿ? ನಿಮ್ಮ ಬಾಲ್ಯ ಹೇಗೆ ಕಳೆಯಿತು? ಸ್ನೇಹಿತರು ಹೇಳುತ್ತಾ ಇರುತ್ತಾರೆ, ನೀವು ಒಂದೆರಡು ಕಡೆ ಹೇಳಿದಿರಂತೆ : 'ಕಷ್ಟ ಅನ್ನೋದನ್ನ ಕೆಲವರ ಹಾಗೆ ನಾನು ಊಹಿಸಿಕೊಳ್ಳಬೇಕಾಗಿಲ್ಲ; ಅದರ ಅನುಭವ ನನಗೇ ಚೆನ್ನಾಗಿ ಆಗಿದೆ!’ ಏನು ಈ ಮಾತಿನ ಹಿನ್ನೆಲೆ?
ಡಾ. ಭಾನುಮತಿ : ನಾನು ಹುಟ್ಟಿದ್ದು ಬೆಂಗಳೂರು. ನಮ್ಮ ಅಮ್ಮ ಅಪ್ಪನ ಏಳು ಮಕ್ಕಳಲ್ಲಿ ಕೊನೆಯ ಕೂಸು, ನಾನು ! ನನಗೆ ಆಗಿನ್ನೂ ವಯಸ್ಸು ಒಂಬತ್ತು; ತಾಯಿ ತಂದೆಗಳು ಪರಾಧೀನರಾದರು! ಅಕ್ಕಂದಿರು ಮತ್ತು ಅಣ್ಣಂದಿರು ಅಕ್ಕರೆಯಿಂದ ನನ್ನನ್ನ ಬೆಳೆಸಿದ್ದು.

ಹರಿ : ನಿಮ್ಮ ತಂದೆಯವರ ಉದ್ಯೋಗ?
ಭಾನುಮತಿ : ನಮ್ಮ ತಂದೆಯವರು ವೃತ್ತಿಯಲ್ಲಿ ಉಪಾಧ್ಯಾಯರು. ಚೆನ್ನಾಗಿ ಗೊತ್ತಿದ್ದವರ ಮನೆಗಳಲ್ಲಿ ಸ್ವಲ್ಪ ಪೌರೋಹಿತ್ಯದ ಕೆಲಸಾನೂ ಮಾಡುತ್ತಿದ್ದರು; ಮನೆಯಲ್ಲಂತೂ ಕಟ್ಟು ನಿಟ್ಟಾದ ನಿಯಮದಿಂದ ಮಕ್ಕಳನ್ನು ಸಾಕುತ್ತಿದ್ದರು; ಓದಿಸುತ್ತಿದ್ದರು.

ಹರಿ : ನಿಮ್ಮ ತಾಯಿಯವರು?
ಭಾನುಮತಿ : ನಮ್ಮ ತಾಯಿ ಬಹಳ ಬುದ್ಧಿಶಾಲಿ ಮತ್ತು ಚತುರೆ. ಹಾಡು, ನಾಟಕ, ನೃತ್ಯ, ಕಸೂತಿ ಕೆಲಸ ಎಲ್ಲಾದರಲ್ಲೂ ನಿಸ್ಸೀಮರು, ಮತ್ತು ಬಹಳ ಜನರನ್ನು ತಯಾರೂ ಮಾಡಿದವರು, ಅವರು. ನಿಮಗೆ ಗೊತ್ತೆ? ಅರವತ್ತು ವರುಷದ ಹಿಂದೇನೇ ಸ್ಯಾರಿ ಪ್ರಿಂಟಿಂಗ್‌ ಮತ್ತು ಸ್ಯಾರಿ ಡೈಯಿಂಗ್‌ ಕಲೇನ ಕರ್ನಾಟಕದಲ್ಲಿ ಪ್ರಾರಂಭಮಾಡಿದ ಮೊದಲನೆಯ ಮಹಿಳೆ, ಅವರು.

ಹರಿ : ನಿಮ್ಮಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರಂತೆ ಹೌದಾ?
ಭಾನುಮತಿ : ಹೌದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದಾಕೆ ನಮ್ಮಮ್ಮ. ಜೈಲಿಗೂ ಹೋದರು. ಅಷ್ಟೇ ಅಲ್ಲ, ಜೈಲಿನಲ್ಲಿರುವಾಗಲೂ ತಮಗೆ ಗೊತ್ತಿರುವ ಕಲೆಗಳನ್ನು ಬೇರೆಯವರಿಗೆ ಕಲಿಸಿ ಖುಷಿ ಪಡುತ್ತಿದ್ದ ಮಹಾ ಹೆಂಗಸು, ನಮ್ಮಮ್ಮ.

ಹರಿ : ಅವರು ತಾವೇ ದೇಶಭಕ್ತಿಗೀತೆಗಳನ್ನು ಕಟ್ಟಿ, ಹಾಡಿ ಮಹಿಳೆಯರನ್ನ ಹುರಿದುಂಬಿಸುತ್ತಿದ್ದರಂತೆ ನಿಜವೇ?
ಭಾನುಮತಿ : ನನಗೆ ನೆನಪಿದೆ: ಅವತ್ತು ಸ್ವಾತಂತ್ರ್ಯ ಬಂದ ದಿನ. ಜನ ಕಿಕ್ಕಿರಿದು ನೆರೆದಿದ್ದಾರೆ; ಮೈದಾನವೆಲ್ಲಾ ಗಣ್ಯ ವ್ಯಕ್ತಿಗಳಿಂದ ತುಂಬಿದೆ; ಅಲ್ಲಿ ನಮ್ಮ ತಾಯಿಯವರು 'ದೇಶ ಪ್ರೇಮವೇ ರಾಗ, ದೇಶ ಭಕ್ತಿಯೇ ತಾಳ’ ಅನ್ನೋ, ತಾವೇ ಬರೆದ ಹಾಡನ್ನ, ತಮ್ಮ ಮೆಚ್ಚಿನ ಮಗಳ ಕೈಲಿ ಹಾಡಿಸಿದರು! ಈ ಹಾಡಿಗೇನೆ, ನಮ್ಮ ಅಮ್ಮನಿಗೆ, ಎಷ್ಟೋ ವರುಷಗಳಾದಮೇಲೆ, ಮೊನ್ನೆ 2002 ಇಸವಿಯಲ್ಲಿ, ಅವರಿಗೆ 'ಮರಣೋತ್ತರ ಪ್ರಶಸ್ತಿ’ ('ಪ್ರಾಸ್ತಮಸ್‌’ ಅವಾರ್ಡ್‌) ಕೊಟ್ಟು ಗೌರವಿಸಿದರು!

ಹರಿ : ನಿಮ್ಮ ತಾಯಿ ಮತ್ತು ತಂದೆಯವರ ಬಗ್ಗೆ, ಅವರ ವಿಚಾರಾನ ವಿವರವಾಗಿ ಹೇಳಿ ಪರವಾಗಿಲ್ಲ; ಆಮೇಲೆ ನಿಮ್ಮ ವಿಚಾರ ಕೇಳ್ತೀನಿ.

ನಮ್ಮ ಅಮ್ಮ (ಅವರನ್ನ 'ಅಕ್ಕ’ ಎಂದೇ ಮಕ್ಕಳೆಲ್ಲ ಕರೆಯುತ್ತಿದ್ದುದು) ಏನೇನೋ ಕಸೂತಿ, ಎಂಬ್ರಾಯಿಡರಿ ಮುಂತಾದ ಕುಶಲಕಲೆಗಳಲ್ಲಿ ಪ್ರವೀಣರು. 1947ರಿಂದ 1949ರವರೆಗೆ ಮೂರು ವರ್ಷಾನೂ ದಸರಾ ವಸ್ತುಪ್ರದರ್ಶನದಲ್ಲಿ , ಬಟ್ಟೆ ಮೇಲೆ ಕೈಮುದ್ರಣಕ್ಕೆ ('ಹ್ಯಾಂಡ್‌ ಪ್ರಿಂಟಿಂಗ್‌ ಆನ್‌ ಫ್ಯಾಬ್ರಿಕ್‌’ಗೆ) ಮೈಸೂರು ಮಹಾರಾಜ ಮತ್ತು ಮಹಾರಾಣಿಯವರ ಕೈಯಲ್ಲೇ ಪದಕ ಗಳಿಸಿದವರಂತೆ! ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರಿದ್ದಕ್ಕೆ ಸೆರೆಮನೆ ವಾಸಾನೂ ಆಗಿತ್ತು. ಕೆ.ಸಿ.ರೆಡ್ಡಿ, ಟಿ.ಮರಿಯಪ್ಪ ಇವರೆಲ್ಲ ನಮ್ಮ ತಾಯಿಯವರಿಗೆ ಚೆನ್ನಾಗಿ ಪರಿಚಿತರು. 'ಅಯ್ಯೋ ಅವರು ಬದುಕಿದ್ದರೆ, ಅವರನ್ನ ಎಷ್ಟೊಂದು ಜನ ಹಾಡಿ ಹೊಗಳ್ತಾ ಇದ್ದರು; ಎಷ್ಟೊಂದು ಸನ್ಮಾನ ಮಾಡ್ತಾ ಇದ್ದರು; ಎಲ್ಲದಕ್ಕೂ ಲಭ್ಯಬೇಕಲ್ಲ!’ ಅಂತ ನಮ್ಮ ಕೆಲವರು ಹಿತೈಷಿಗಳು, ನೆಂಟರು ಹೇಳೋದು ಉಂಟು. ಆದರೆ, ಅದೊಂದಕ್ಕೂ ಆಸೆ ಪಟ್ಟ ಜೀವ ಅಲ್ಲ, ನಮ್ಮ ತಾಯಿ, ಭಾಗೀರಥಮ್ಮ. ನಾವಂತೂ ತುಂಬಾ ಕಷ್ಟಪಟ್ಟೆವು, ಇವರು ಜೈಲಿನಲ್ಲಿದ್ದಾಗ. ದುಡಿದು ನಮ್ಮನ್ನು ಸಾಕುತ್ತಿದ್ದುದು ಅವರೇ ತಾನೇ, ಅದಕ್ಕೆ. ನಮ್ಮಮ್ಮ ಎಷ್ಟೊಂದು ಜನ ಬಡವರು ಹೆಂಗಸರಿಗೆ ತಮ್ಮ ಪ್ರಿಂಟಿಂಗ್‌ ಫ್ಯಾಕ್ಟರೀಲಿ ಕೆಲಸ ಕೊಟ್ಟು ಅವರನ್ನೆಲ್ಲಾ ಸಾಕುತ್ತಿದ್ದರು. ಆಮೇಲೆ ಸ್ವಾತಂತ್ರ್ಯ ಬಂದ ಮೇಲೆ, ಒಂದು ಪುಟಾಣಿ ಅಂಗಡಿ ತೆರೆದು, ರೇಷನ್‌ ಡಿಪೋ ನಡಸ್ತಿದ್ದರಂತೆ, ಘನಸರ್ಕಾರದವರು ಸ್ವಾತಂತ್ರ್ಯ ಹೋರಾಟಗಾರಳಿಗೆ ಪರವಾನಿಗೆ ಕೊಟ್ಟಮೇಲೆ. ಅವರು ಒಳ್ಳೆ ಸಂಗೀತಗಾರರೂ ಆಗಿದ್ದರಂತೆ. ಹಾಡು ಕಟ್ಟಿ, ಆ ದೇಶಭಕ್ತಿಗೀತೆಗಳನ್ನ ಹಾಡ್ತಾ ಇದ್ದರು, ಹಾಡಿಸ್ತಾ ಇದ್ದರು. ಸ್ವಾತಂತ್ರ್ಯ ಬಂದ ದಿನ ಒಂದು ಸಮಾರಂಭದಲ್ಲಿ ತಾವು ಬರೆದ ಹಾಡನ್ನ ಹನ್ನೆರಡು ವರುಷದ ಮಗಳು ನೇತ್ರಾ ಅವಳ ಕೈಯಲ್ಲೇ ಹಾಡ್ಸಿದರಂತೆ.

ಮೊನ್ನೆ ಒಂದು ಕಾರ್ಯಕ್ರಮ ನಡೆಯಿತು. ಅಂತರರಾಷ್ಟ್ರೀಯ ಮಹಿಳಾ ದಿನ ಅದು. 'ಮೌನಿ ಮಹಿಳೆಯ ಮಹೋತ್ಸವ’ (ಸೆಲೆಬ್ರೇಟಿಂಗ್‌ ದ ಸೈಲೆಂಟ್‌ ವುಮೆನ್‌) ಅಂತ ಶೀರ್ಷಿಕೆ ಆ ಕಾರ್ಯಕ್ರಮಕ್ಕೆ. ಎಷ್ಟು ಒಳ್ಳೆ ಹೆಸರಲ್ವಾ? ಶಕುಂತಲಾ ನರಸಿಂಹನ್‌ ಅವರು ವ್ಯವಸ್ಥೆ ಮಾಡಿದ್ದು. ಕಳೆದ ಶತಮಾನದಲ್ಲಿ ಹುಟ್ಟಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನ ತಮ್ಮ ಕುಶಲಕಲೆ ಸಂಗೀತ ಇತ್ಯಾದಿಗಳಿಂದ ಇನ್ನೂ ಶ್ರೀಮಂತಗೊಳಿಸಿದ ಮಹಿಳೆಯರಿಗೆ ಗೌರವ ಸಮರ್ಪಣೆ- ಆ ಕಾರ್ಯಕ್ರಮದ ಉದ್ದೇಶ ಆಗಿತ್ತು. ಹಿಂದೆ, ಅವತ್ತು ಹನ್ನೆರಡು ವರ್ಷದವಳು ಆಗಿದ್ದಾಗ ತಮ್ಮ ಅಮ್ಮ ಹೇಳಿಕೊಟ್ಟ ಹಾಡನ್ನ ಹಾಡಿ ಚಪ್ಪಾಳೆ ತಟ್ಟಿಸಿಕೊಂಡ ಹುಡುಗಿ, ಈಗ ನೇತ್ರಾವತಿ ವೆಂಕಟರಾವ್‌ ಆಗಿ, ಅದೇ ಹಾಡನ್ನ ಮಾರ್ಚ್‌ 8, 2002 ನೇ ದಿನ 'ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್‌ಡ್‌ ಕಲ್ಚರ್‌’ ಸಭಾಂಗಣದಲ್ಲಿ ಇನ್ನೊಮ್ಮೆ ಹಾಡಿ, ತಮ್ಮ ಅಮ್ಮನ ಚಿತ್ರ, ಕಲೆಗಾರಿಕೆ ಎಲ್ಲವನ್ನೂ ಪ್ರದರ್ಶಿಸಿ- ಶ್ರದ್ಧಾಂಜಲಿ ಅರ್ಪಿಸಿದಳು. ಇದು ನಮ್ಮ ಅಮ್ಮನ ಕತೆ !

ಹರಿ : ಚೆನ್ನಾಗಿದೆ ! ಇರಲಿ, ನಿಮಗೆ, ಚಿಕ್ಕಂದಿನಲ್ಲೇ, ಈಗ ನಡೆಸ್ತಿದೀರಲ್ಲ ಹಾಗೆ ದೊಡ್ಡ ದೊಡ್ಡ ಕೆಲಸಗಳನ್ನ ಮಾಡಬೇಕೂಂತ ಆಕಾಂಕ್ಷೆಗಳು ಇತ್ತಾ ?
ಭಾನುಮತಿ: ನಿಜ ಹೇಳಬೇಕು ಅಂದರೆ, ಮೊದಲು ಹದಿನೆಂಟು ವರ್ಷ ವಯಸ್ಸಿನವರೆಗೂ ನನಗೆ ಜೀವನದಲ್ಲಿ ನಿರ್ದಿಷ್ಟವಾದ ಗುರಿಯೇ ಇರಲಿಲ್ಲ . ಆದರೂ ದೇವರ ದಯದಿಂದ ಓದು, ಸಾಹಿತ್ಯ, ನಾಟಕ ಮುಂತಾದವುಗಳಲ್ಲಿ ಬಹಳ ಆಸಕ್ತಿಯೇನೋ ಸಧ್ಯ ಇತ್ತು ; ಮತ್ತು ಅವುಗಳಲ್ಲಿ ಸಾಧನೇನೂ ಶ್ರದ್ಧೆಯಿಂದಲೇ ಮಾಡುತ್ತಾ ಇದ್ದೆ . ಅಕ್ಕ-ಅಣ್ಣಂದಿರು ನನಗೇ ಗೊತ್ತಿಲ್ಲದ ನನ್ನ 'ಪೊಟೆಂಶಿಯಲ್‌’ ಗುರುತಿಸಿ, 'ನೀನು ಯಾಕೆ ಮೆಡಿಸನ್‌ ಓದಬಾರದು’- ಅಂತ ಒತ್ತಾಯಿಸಿ, ನನ್ನನ್ನ ಮೆಡಿಕಲ್‌ ಕಾಲೇಜಿಗೆ ಸೇರಿಸಿದರು. ಮನೆಯಲ್ಲಿ ಕಷ್ಟ ಇದ್ದರೂ ನನಗೆ ನನ್ನ ವಿದ್ಯಾಭ್ಯಾಸಕ್ಕೆ ಏನೂ ತೊಂದರೆ ಆಗದ ಹಾಗೆ ಅವರುಗಳು ನೋಡಿಕೊಂಡರು. ನಾನೂನು ಯಾರಿಗೂ ನಿರಾಶೆ ಆಗದ ಹಾಗೆ ವ್ಯಾಸಂಗ ಮುಂದುವರಿಸಿದೆ !

ಹರಿ : ನಿಮ್ಮದು ಪ್ರೇಮ ವಿವಾಹವಂತೆ! ಕಾಲೇಜಿನಲ್ಲಿದ್ದಾಗಲೇ ನೀವು ಪ್ರೇಮಿಸಿದಿರಾ? ಆ ಕಾಲ ಈಗಿನ ಹಾಗಲ್ಲ ಅನ್ನೋದು ಎಲ್ಲರಿಗೂ ಗೊತ್ತು ; ನಿಮ್ಮ ಮನೆಯವರಿಂದ ಅದಕ್ಕೆ ವಿರೋಧ ಬರಲಿಲ್ಲವೇ?
ಭಾನುಮತಿ: ನಾನು ಫೈನಲ್‌ ಇಯರ್‌ ಎಂಬಿಬಿಎಸ್‌ನಲ್ಲಿ ಇರುವಾಗ ಜೊತೆಯಲ್ಲೇ ಓದಿದ ಅಪ್ಪಾಜಿ ಗೌಡರ ಸ್ನೇಹ ಆಯಿತು ; ನಾನು ಅವರನ್ನ, ನನ್ನನ್ನ ಅವರು ಪರಸ್ಪರ ತುಂಬ ಮೆಚ್ಚಿಕೊಂಡೆವು. ಆವಾಗಲೇ, ಅಪ್ಪಾಜಿಯವರು ನನ್ನ ಜೀವನ ಸಂಗಾತಿಯಾಗಿ ನನಗೆ ದೊರೆತಿದ್ದು !

ನೋಡಿ, ಹರಿ ಅವರೇ, ಬಡವರಾದರೂ ನಮ್ಮದು ಸಂಪ್ರದಾಯಸ್ಥ ಮನೆತನ. 'ಬ್ರಾಹ್ಮಣ ಕುಲದಲ್ಲಿದ್ದು ಗೌಡರನ್ನು ಮದುವೆ ಮಾಡಿಕೊಳ್ಳುವುದು ಸರಿಯೇ?’ ಎಂಬ ಅಭಿಪ್ರಾಯದಿಂದ ಸಂಬಂಧಿಕರೆಲ್ಲಾ ಈ ಸಂಬಂಧವನ್ನ ನಿರಾಕರಿಸಿದರು. ನನಗೂ ಮೊದಮೊದಲು ಸ್ವಲ್ಪ ಕಷ್ಟಾನೇ ಆಯ್ತು ಅನ್ನಿ . ಕಾರಣ, ಮಗಳಿಗಿಂತ ಹೆಚ್ಚಾಗಿ ನೋಡಿಕೊಂಡು ಸಾಕಿದ ಅಕ್ಕ ಅಣ್ಣಂದಿರು; ಅವರ ಮನಸ್ಸನ್ನ ನೋಯ್ಸ್ತಾ ಇದೀನಾ ಅಂತ, ಒಂದು ಕಡೆ. ಇನ್ನೊಂದು ಕಡೆ ಆ ವಯಸ್ಸಿಗೆ ಅನುಗುಣವಾದ ಪ್ರೇಮದ ಸೆಳೆತ. ಇಂಥ ಹೊಯ್ದಾಟ ಸಹಜವೇ ಅಲ್ಲವೇ?

ಹರಿ : ಮತ್ತೆ , ಮದುವೆ ಹೇಗೆ ನಡೀತು? ಯಾವಾಗ ಆಯ್ತು ?
ಭಾನುಮತಿ: ಮನೆಯವರ ವಿರೋಧಾ ಏನೋ ಇತ್ತು ; ಆದರೆ ಸ್ನೇಹಿತರ ಬೆಂಬಲ ಜಾಸ್ತಿ ಇತ್ತಲ್ಲ ನಮಗಿಬ್ಬರಿಗೂ. ಅವರದೇ ಸಹಾಯದಿಂದ ಮದುವೆ ಆಯಿತು; ಮದುವೆ ಸಾಧಾರಣವಾಗಿತ್ತು , ಆದರೂ ಮನಶ್ಯಾಂತಿಯಿಂದ ಅದು ನಡೆಯಿತು ! ನಾನು ಎಂ.ಬಿ.ಬಿ.ಎಸ್‌ ಪದವೀಧರಳಾದದ್ದು 1966 ರಲ್ಲಿ ; ಡಾ.ಅಪ್ಪಾಜಿ ಅವರೊಂದಿಗೆ. ನನ್ನ ಮದುವೆ ಆದದ್ದು ಮುಂದಿನ ವರ್ಷ 1967 ರಲ್ಲಿ .

ಹರಿ : ಆಮೇಲೆ ನೀವು ಇಂಗ್ಲೆಂಡಿಗೆ ಹೋದಿರಾ?
ಭಾನುಮತಿ: ಹೌದು, ಅಲ್ಲದೇ ಸ್ನೇಹಿತರೇ 1968 ನೇ ಇಸವಿಯಲ್ಲಿ ಇಂಗ್ಲೆಂಡಿಗೆ ಹೋಗಲು ಹಣ ಸಹಾಯಾನೂ ಮಾಡಿದರು. ಜೇಬಿನಲ್ಲಿ ಕೇವಲ ಮೂರು (3) ಪೌಂಡ್‌ ಹಣ ಇಟ್ಟುಕೊಂಡು ಇಂಗ್ಲೆಂಡಿಗೆ ಬಂದಿದ್ದು ನಾವು- ಅಂತ ಹೇಳಿದ್ರೆ, ನೀವು ನಂಬ್ತೀರಾ?

ಹರಿ : ಆವಾಗಿನ ಪರಿಸ್ಥಿತಿಗೂ, ಈಗಿನ ಸ್ಥಿತಿಗತಿಗಳಿಗೂ ಬಹಳ ವ್ಯತ್ಯಾಸ ಇರೋದು ಗೊತ್ತಿದ್ದೇ ಈ ಪ್ರಶ್ನೆ ಕೇಳುತ್ತಿದ್ದೇನೆ, ವಿದೇಶೀ ವೈದ್ಯರ ವೃತ್ತಿ -ಜೀವನ ತುಂಬಾ ಸ್ಪರ್ಧಾತ್ಮಕವಾಗಿ ಇದ್ದಿರಬೇಕಲ್ಲವೇ?
ಭಾನುಮತಿ: ಆಗಲೂ ಅಷ್ಟೇ, ಈಗಲೂ ಅಷ್ಟೇ- ಎಲ್ಲಾ ವಿದೇಶೀ ಭಾರತೀಯರ ಜೀವನವೂ ಯಾವಾಗಲೂ ಸ್ಪರ್ಧಾತ್ಮಕವೇ! ಪ್ರಾರಂಭದಲ್ಲಿ ನಾವೂ ಎಲ್ಲರಂತೆ ಬಹಳ ಕಷ್ಟಪಟ್ಟೆವು. ಆಮೇಲೆ 'ಸರ್ವೈವಲ್‌ ಆಫ್‌ ದ ಫಿಟ್ಟೆಸ್ತ್‌’- 'ಸಾಮರ್ಥ್ಯ ಇದ್ದವರು ಮಾತ್ರ ಉಳಿಯಬಲ್ಲರು’- ಎಂಬುದು ಗೊತ್ತಾಗತೊಡಗಿತು.

ಹರಿ : ಅಂದರೆ ?
ಭಾನುಮತಿ: ನಾವು ಬ್ರಿಟನ್‌ಗೆ ಬಂದದ್ದು 1968 ರಲ್ಲಿ . ಪ್ರಾರಂಭದಲ್ಲಿ 1975 ರವರೆಗೆ ಅನಸ್ತೆಟಿಕ್ಸ್‌ ವಿಭಾಗದಲ್ಲಿ ಕೆಲಸ ಮಾಡಿದೆ. ಆಮೇಲೆ ಡಾ.ಅಪ್ಪಾಜಿ ಅವರ ಜೊತೆಗೆ ಸಹೋದ್ಯೋಗಿಯಾಗಿ, ಅವರೊಂದಿಗೆ ಜನರಲ್‌ ಪ್ರಾಕ್ಟೀಸ್‌ ಕ್ಷೇತ್ರದಲ್ಲಿ ಕೆಲಸ ಮಾಡತೊಡಗಿದೆ ; ಈ ಆಯ್ಕೆ ನಮ್ಮ ಗೃಹಕೃತ್ಯದ ಕೆಲಸಗಳಿಗೂ ಅನುಕೂಲಕರವಾಗಿಯೇ ತೋರಿತು ! ಬಹಳವೇ ಶ್ರಮಪಟ್ಟು ನಾವಿಬ್ಬರೂ ದುಡಿದೆವು, ದೇವರ ದಯದಿಂದ ವೈದ್ಯವೃತ್ತಿಯಲ್ಲಿ ಇಬ್ಬರೂ ಹೆಸರು ಗಳಿಸಿದೆವು.

ಮೊದಲು 10-15 ವರುಷ ಹೊಟ್ಟೆ ಬಟ್ಟೆ ಕಡೆ ಪಾಡು. ಈ ಹೊಸ ಗಾದೆ ಕೇಳೀದೀರಲ್ಲ : 'ಹೊಟ್ಟೆ ತುಂಬಿದ ಮೇಲೆ ಜುಟ್ಟಿಗೆ ಮಲ್ಲಿಗೆ ಹೂವು’ ! - ಎನ್ನುವಂತೆ ಕೇವಲ ವೃತ್ತಿಯಲ್ಲಿ ಮುಂದುವರೆಯಲು ಮಾತ್ರ ಪ್ರಯತ್ನ. ದೇವರ ಹರಕೆ ಮತ್ತು ಹಿರಿಯರ ಆಶಿರ್ವಾದದಿಂದ ಆಮೇಲೆ ಆರ್ಥಿಕ ಪರಿಸ್ಥಿತೀನೂ ಉತ್ತಮಗೊಂಡಿತು; ವೃತ್ತಿಯಲ್ಲಿ ಉನ್ನತಿ, ವೃದ್ಧಾಶ್ರಮ, ಮನೆ, ಮನೆಯ ಕಡೆ ಅನುಕೂಲ, ಆಸ್ತಿ-ಪಾಸ್ತಿ , ಎಲ್ಲವನ್ನೂ ಗಳಿಸಲು ಸಾಧ್ಯವಾಯಿತು.

ಮುಂದೆ ಓದಿ

English summary
Shikaripura Harihareshwara interviewed Dr.K.S.Banumathi, an England Kannadathi who was honoured with Rajyotsava award. The detailed interview...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X