• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಕಾಶ್ಮೀರ-1

By Staff
|

ಕಾಶ್ಮೀರದಂತಹ ದೂರದೇಶಗಳಿಂದ ಇತ್ತ ವಲಸೆ ಬಂದವರೂ ಇದ್ದರು. ಇದ್ದ ಬದ್ದದ್ದನ್ನೆಲ್ಲಾ ಬಿಟ್ಟು ಬಂದ ಗೌತಮ ಬುದ್ಧರಿಗೂ ಕೊರತೆಯೇನಿರಲಿಲ್ಲ . ನಮ್ಮ ಮಹದೇವ ಮಹಾರಾಜ ಅಂತವರಲ್ಲೊಬ್ಬ.

ಒಂದು ಐತಿಹ್ಯದ ಪ್ರಕಾರ (ಶಂಕರ ಕವಿ, ಚೋರಬಸವ ಪುರಾಣ, ಕ್ರಿ.ಶ.1763) ಕಾಶ್ಮೀರದಲ್ಲಿದ್ದಾಗಲೇ ಆರು ಸಾವಿರ ಜಂಗಮರನ್ನು ತಮ್ಮಲ್ಲಿ ಇಟ್ಟುಕೊಂಡಿದ್ದು , ಅವರನ್ನು ಸೇವೆ ಮಾಡುತ್ತಿದ್ದನಂತೆ. ವ್ಯಾಪಾರಕ್ಕಾಗಿ ಹೋಗಿಬರುತ್ತಿದ್ದ ಕನ್ನಡಿಗರೊಡನೆ ಬಸವಣ್ಣನವರೂ ಕಾಶ್ಮೀರಕ್ಕೆ ಹೋಗಿ ಹಿಂತಿರುಗಿದಾಗ, ಅವರೆಲ್ಲಾ ಬಸವಣ್ಣನವರನ್ನು ಹಿಂಬಾಲಿಸಿ ಬಂದರೆಂಬ ಸೂಚನೆ ವೀರಶೈವ ಪುರಾಣಗಳಲ್ಲಿ ಇದೆ. ಅವರ ಜೊತೆಗೇ ಬಂದಿರಬೇಕು ಈ ಮಹಾದೇವ ಭೂಪಾಲ, ಎಲ್ಲವನ್ನೂ ತ್ಯಾಗ ಮಾಡಿ. (ಇನ್ನು ಮುಂದೆ ಈ ಲೇಖನದಲ್ಲಿ ಬರುವ 'ವಚನ" ಎಂದರೆ 'ಮೋಳಿಗೆ ಮಾರಯ್ಯನವರ ವಚನ" ; 'ಮೋಳಿಗೆ ಮಾರಯ್ಯನವರ ವಚನಗಳು ಮತ್ತು ರಾಣಿ ಮಹಾದೇವಿಯಮ್ಮನ ವಚನಗಳು", ಸಂಪಾದಕರು: ಶಿ.ಭೂಸನೂರುಮಠ ಮತ್ತು ಉತ್ತಂಗಿ) :

'ಸವ್ವಾಲಕ್ಷದಲ್ಲಿ ಹುಟ್ಟಿ , ಸಕಲಕ್ರಮಂಗಳಲ್ಲಿದ್ದು ಭೋಗಿಸಿ, ...

ಅಂದು ಬಂದ ಕಥನ, ಬಸವೇಶ್ವರನಿಂದ ಬಂದ ಮಥನ ...

ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ ನಾನಾ ವ್ಯಾಪಾರಕ್ಕೆ ನೀನೊಡೆಯನಾಗಿ;

ಮರ್ತ್ಯದ ಸುಖದುಃಖ ನಿನಗೆ ನಿಶ್ಚಿಂತವಾಗಿರ್ಪುದು;

ಹಿಂದೆ ನಿನ್ನಂತೆ ನಾನು ಬಂದು,

ನೊಂದುದಿಲ್ಲ. ಬಂದೆ ನಾ ಬಸವಣ್ಣನ ಕಥನದಿಂದೆ.. .. ... "

(ವಚನ, 61, 249)

''ಧರಣಿಪನು ಆ ಅವಸರದೊಳಗೆ ಏಳುತ ಈಶ್ವರ ಪೂಜೆ ಮಾಡಿ, 'ಕಾಶ್ಮೀರ

ಧರೆಯ ಸುಸ್ಥಿರದಿ ಪಾಲಿಪುದು"- ಎಂದು ತನ್ನ ಕುವರ ಲಿಂಗರತಿ ಎಂಬುವನಿಗೆ...

ಪಟ್ಟವ ಕಟ್ಟಿ, ಕೆಲವು ದೇಶ ಕೋಶವ ಕೊಟ್ಟು ಭಕ್ತರಿಗೆ ಸಂತಸದಿ...""

(ಹೊನ್ನವಳ್ಳಿ ಗೌರಾಂಕ, ಕ್ರಿ.ಶ. 1525,ಮೋಳಿಗೆಯ್ಯನ ಪುರಾಣ, 3: 242- 243)

ಕೆಲವರು ಹೇಳುತ್ತಾರೆ: ಬಸವಣ್ಣನವರು ಕಾಶ್ಮೀರಕ್ಕೆ ಬಂದು ತತ್ತ್ವ ಪ್ರಚಾರಮಾಡಿ, ಹಿಂತಿರುಗಿದಾಗ ಸಾವಿರಾರು ಜನ ಜಂಗಮರು ಅವರನ್ನು ಹಿಂಬಾಲಿಸಿ ಹೋದರಲ್ಲ, ಅದನ್ನು ಕಂಡು, ಆ ಜಂಗಮರನ್ನೆಲ್ಲ ಹಿಂದಕ್ಕೆ ಕರೆತರಲು ತನ್ನ ನೆಚ್ಚಿನ ಭಂಟನೊಬ್ಬನನ್ನು ಮಹಾದೇವ ಭೂಪಾಲ ಕಳಿಸಿಕೊಟ್ಟ. ಆ ಭಂಟ ಕುಟಿಲೋಪಾಯದಿಂದ ಕಾರ್ಯ ಸಾಧಿಸಬೇಕೆಂದು ಬಂದವನು, ಶಿವ ಶರಣನ ಮಾರುವೇಷದಲ್ಲಿ ಬಸವಣ್ಣನವರ ಶಿಷ್ಯ ಸಮೂಹದಲ್ಲಿ ಬೆರೆತು ಇರತೊಡಗಿದ. ಶಾಂತಿ, ಸಹನೆ, ಅಹಿಂಸೆ, ಧರ್ಮದ ಮೂಲವಾದ ದಯೆಯ ವಿದ್ಯುತ್‌- ಪ್ಲಾವಿತ ವಾತಾವರಣದಲ್ಲಿ ಇರ ತೊಡಗಿ, ಬುದ್ಧನ ಬಗ್ಗೆ ಹೇಳುತ್ತಾರಲ್ಲ ಹಾಗೆ, ಅಲ್ಲಿ ಕೊಲ್ಲ ಬಂದ ಕಳ್ಳನೂ ಶರಣಾಗತನಾದನಲ್ಲ ಹಾಗೆ, ಈ ಕಾಶ್ಮೀರಿಯೂ ಶಿಷ್ಯವೃಂದದಲ್ಲೇ ಉಳಿದು ಬಿಟ್ಟ. ಮೊದಲ ಹೆಸರೇನಿತ್ತೋ ತಿಳಿಯದು; ಈಗ 'ನಿಜಲಿಂಗ ಚಿಕ್ಕಯ್ಯ"ನಾಗಿ ಹೊಸತು ಜನ್ಮ ಪಡೆದ, ಹೊಸತನುವ ತಳೆದ, 'ಉಳಿಯುಮೇಶ್ವರ"ನ ಹೊಸ ಹೆಸರಲ್ಲಿ ವಚನಕಾರನೂ ಆದ! ಎಷ್ಟು ವರ್ಷಗಳಾದರೂ ತಾನು ಕಳಿಸಿದ ನೆಚ್ಚಿನ ಭಂಟ ಬಾರದಿರುವುದನ್ನು ಕಂಡು, ಸೋಜಿಗ ಪಟ್ಟು, ಏನು ಕಾರಣ ಖುದ್ದಾಗಿ ನೋಡಿ ಬರಲು ಮಹಾದೇವ ಭೂಪಾಲನೇ ಇತ್ತ ಬಂದ. ಇರಲಿ, ಇದೋ ಅದೋ ಕಾರಣ ಆಮೇಲೆ ಹುಡುಕೋಣ, ರಾಜನೇ ಸಕುಟುಂಬ ಸಪರಿವಾರ ಕಲ್ಯಾಣದತ್ತ ಬಿಜಯಂಗೈದನು.

ದೂರದೇಶದ ಅರಸರೇ ಬಂದುದು ದೊಡ್ಡ ಸುದ್ದಿಯಾಗಿರಬೇಕು. ಅದಕ್ಕಿಂತ ಹೆಚ್ಚಾಗಿ ಈ ಮಹಾದೇವ ರಾಜರ ಪರಿವಾರಕ್ಕೆ ಬಸವಣ್ಣನವರಲ್ಲಿ ಇದ್ದ ಗೌರವಾತಿಶಯ ಜನರನ್ನು ಇನ್ನೂ ಬೆರಗು ಗೊಳಿಸಿರಬೇಕು; ಅರಸನಿಗೆ ಬಸವೇಶ್ವರರೇ ಶಿವನ ಸಮಾನ. ಹೇಳುತ್ತಿದ್ದಾರೆ:

''ಎನ್ನ ಚಿತ್ತಕ್ಕೆ 'ನ"ಕಾರವಾಗಿ ಬಂದೆಯಯ್ಯ ಬಸವಣ್ಣ !

ಎನ್ನ ಬುದ್ಧಿಗೆ 'ಮ"ಕಾರವಾಗಿ ಬಂದೆಯಲ್ಲ ಬಸವಣ ್ಣ!

ಎನ್ನ ಅಹಂಕಾರಕ್ಕೆ 'ಶಿ"ಕಾರವಾಗಿ ಬಂದೆಯಲ್ಲ ಬಸವಣ್ಣ !.. ..""

(ವಚನ 80)

ಹೀಗೆ 'ನಮಶ್ಶಿವಾಯ"ದ ಪಂಚಾಕ್ಷರಿಯನ್ನ ಬಸವಣ್ಣನವರಿಗೆ ಸಮೀಕರಿಸುತ್ತ, ಚಿತ್ತ ಬುದ್ಧಿ ಅಹಂಕಾರಾದಿಗಳನ್ನು ರಾಜ ನೆನೆಯುವುದಕ್ಕೆ ಕಾರಣವುಂಟು. ವೀರಶೈವ ಮತದಲ್ಲಿದ್ದಂತೆ, ಕಾಶ್ಮೀರ- ಶೈವ ಸಿದ್ಧಾಂತವೂ ಮೂವತ್ತಾರು ತತ್ವಗಳನ್ನು ಒಪ್ಪಿಕೊಳ್ಳುತ್ತದೆ. ಅದರ ಸೂಚನೆ ಇಲ್ಲಿದೆ. ಬಂದ ಕೆಲದಿನಗಳಲ್ಲೇ ಅರಸನ ಪಟ್ಟದಿಂದಿಳಿದು ಸಾಮಾನ್ಯ ಶರಣನಂತೆ ಇರಬಯಸಿದರೂ, ಜನರ ಕಣ್ಣಿಗೆ ಇವರು ಮಹಾರಾಜರೇ. ದಿನ ಕಳೆದಂತೆ, ಮಹಾರಾಜ ಹೋಗಿ 'ಮಹಾರಾಯ"ವಾಯಿತು. ಶ್ರೀಸಾಮಾನ್ಯರ ಬಾಯಲ್ಲಿ ಮಹಾರಾಯ ಹೋಗಿ 'ಮಾರಾಯ"ವಾಯಿತು. ಸುತ್ತ ಮುತ್ತ ಇದ್ದ ನುಲಿಯ ಚೆಂದಯ್ಯ, ಅಯ್ದಕ್ಕಿ ಮಾರಯ್ಯ, ಇಕ್ಕದ ಮಾರಯ್ಯ, ಅಗ್ಗವಣಿ ಹೊನ್ನಯ್ಯ, ಗುಂಡ ಬ್ರಹ್ಮಯ್ಯ, ಮಡಿವಾಳ ಮಾಚಯ್ಯ, ಏಕಾಂತದ ರಾಮಯ್ಯ, ಕಿನ್ನರಿ ಬ್ರಹ್ಮಯ್ಯ, ಘಟ್ಟವಾಳಯ್ಯ, ಶರಣ ಆದಯ್ಯ, ಅಮುಗಿ ದೇವಯ್ಯ, ಬಹುರೂಪಿ ಚೌಡಯ್ಯ, ಅಂಬಿಗರ ಚೌಡಯ್ಯ, ಶಿವ ನಾಗಮಯ್ಯ, ಹಾವಿನ ಹಾಳ ಕಲ್ಲಯ್ಯ, ಮೇದರ ಕೇತಯ್ಯ- ಹೀಗೆ ಶಿವಶರಣರನೇಕರನ್ನ 'ಅಯ್ಯ" ಎಂದು ಗೌರವ ಪೂರ್ವಕವಾಗಿ ಜನ ಕರೆಯುತ್ತಿದ್ದುದು ವಾಡಿಕೆಯಾಗಿತ್ತು. ('ಅಯ್ಯಾ ಎಂದಡೆ ಸ್ವರ್ಗ!") ಹೀಗೆ ಮಹಾದೇವ ಮಹಾರಾಜರು 'ಮಾರಯ್ಯ"ನವರಾದರು! ಕಲ್ಯಾಣದಲ್ಲಿ ಊರ ಹೊರಗೆ ಚಿಕ್ಕ ಗುಡಿಸಲೊಂದನ್ನು ಕಟ್ಟಿಕೊಂಡು, ಕಾಡಿನಿಂದ ಸೌದೆಯನ್ನು ಕಡಿದು ತಂದು, ಊರಲ್ಲಿ ಮಾರಿ, ಮೋಳಿಗೆ (=ಸೌದೆ, ಕಡಿದ ಮರದ ತುಂಡುಗಳ ಕಟ್ಟು, ಕಟ್ಟಿಗೆಯ ಹೊರೆ) ಯ ಕಾಯಕ ನಡೆಸಿಕೊಂಡು 'ಮೋಳಿಗೆ ಮಾರಯ್ಯ" ಜೀವಿಸ ತೊಡಗಿದರು !

ಕರ್ನಾಟಕದ ಇನ್ನೊಂದು ಮೂಲೆಯಲ್ಲಿ ಇದೇ ರೀತಿ (ಕ್ರಿ.ಶ. 1480ರಲ್ಲಿ ಹುಟ್ಟಿ), ಇನ್ನೊಬ್ಬ ನವಕೋಟಿ ನಾರಾಯಣರೆನಿಸಿದ ಆಗರ್ಭ ಶ್ರೀಮಂತರೊಬ್ಬರು, ಒಂದು ದಿನ ತಮ್ಮಲ್ಲಿದ್ದುದನ್ನೆಲ್ಲ ದಾನಮಾಡಿ, ''ಆದದ್ದೆಲ್ಲ ಒಳಿತೇ ಆಯಿತು; ನಮ್ಮ ಶ್ರೀಧರನ ಸೇವೆಗೆ ಸಂಪತ್ತು ಸಾಧನವಾಯಿತು!""- ಎಂದು ಹಾಡಿಕೊಳ್ಳುತ್ತ, ದಂಡಿಗೆ ಬೆತ್ತ ಕೈಯಲಿ ಹಿಡಿದು, ಮಧುಕರಿವೃತ್ತಿಯನ್ನವಲಂಬಿಸಿ, ಭಗವನ್ನಾಮ ಸಂಕೀರ್ತನೆಯಲ್ಲಿ ಇರ ತೊಡಗಿದ್ದುದು ನೆನಪಾಗುತ್ತದೆಯೇ? ''ತೇನ ತ್ಯಕ್ತೇನ ಭುಂಜೀಥಾ""- ಎಂದು ಈಶಾವಾಸ್ಯ ಉಪನಿಷತ್ತು ಮೊದಲ ಶ್ಲೋಕದಲ್ಲೇ ಹೇಳುವುದು, ಇಂಥವರನ್ನು ಉದಾಹರಣೆಯಾಗಿ ಇಟ್ಟುಕೊಂಡೇನೇ!

ಇಲ್ಲಿ ಮಾರಯ್ಯನವರು ಬೇಗ, ಬೇಗ ಕನ್ನಡ ಕಲಿತರು; ಕ್ರಿಯಾ- ಜ್ಞಾನಸಮಾಯುಕ್ತವಾದ ಈ ವೀರಶೈವ ಮತದ ಪಾರಿಭಾಷಿಕ ಪದಗಳನ್ನು (ಪಂಚಾಚಾರ, ಅಷ್ಟಾವರಣ, ಷಟ್‌ಸ್ಥಲಯೋಗ ಇತ್ಯಾದಿ) ಕರತಲಾಮಲಕ ಮಾಡಿಕೊಂಡರು. ಈ ಶಿವಾದ್ವೆ ೖತದ ಪ್ರಾಚೀನ ಆಚಾರ್ಯರನ್ನೆಲ್ಲ ಅಭ್ಯಸಿಸಿದರು. ಈ ಮೊದಲು ತಾವು ಕಾಶ್ಮೀರದಲ್ಲಿದ್ದಾಗಲೇ ವ್ಯಾಸಂಗಮಾಡಿದ್ದ ಶಿವಸೂತ್ರ, ಸ್ಪಂದಕಾರಿಕೆ ಇತ್ಯಾದಿ ಶಿವಾನುಭವ ಶಾಸ್ತ್ರಗ್ರಂಥಗಳ, ಅಲ್ಲಿಯೂ ಇಲ್ಲಿಯೂ ಕೇಳಿ ತಿಳಿದ ಮಾಹೇಶ್ವರ ಶಿವಾಚಾರ ಮತದ ತತ್ವೋಪದೇಶಗಳನ್ನು, ತಮ್ಮ ಚಿಂತನ- ಮಂಥನದಿಂದ ಹೊಮ್ಮಿದ ಈ ಎಲ್ಲ ವಿಚಾರ ಲಹರಿಗಳನ್ನೂ ಕಾವ್ಯವಾಗಿ ಹೇಳತೊಡಗಿದರು.

***

ಮಲ್ಹಣನ ಉಪಕಥೆ : ದೂರ ದೇಶಗಳಿಂದ ಜನ ಬಂದು ಹೋಗುತ್ತಿದ್ದಾಗ, ಇಲ್ಲಿನ ಸುದ್ದಿ ಅಲ್ಲಿಗೂ ಅಲ್ಲಿನ ಸುದ್ದಿ ಇಲ್ಲಿಗೂ ಹರಡುತ್ತಿತ್ತಲ್ಲ, ಆವಾಗಿನ ಮಾತು: ಶಿವಶರಣರ ಕಥೆಯೆಂದಮೇಲೆ, ಅದು ಎಲ್ಲಿ ಎಲ್ಲಿನದಾಗಲೀ, ಉದ್‌ಬೋಧಕವಾಗಿದ್ದಲ್ಲಿ ಜನರಿಗೆ ಅದನ್ನು ತಿಳಿ ಹೇಳುವುದರಲ್ಲಿ ಒಂದು ಪ್ರಯೋಜನವಿದೆ, ಎಂದು ಪ್ರವಚನಕಾರರು ಮನಗಂಡಿದ್ದರು. ಕಾಶ್ಮೀರದ ಶಿವಶರಣ 'ಮಲ್ಹಣ"ನ ಕತೆಯನ್ನ ಕಲ್ಯಾಣದ ಶ್ರೋತೃಗಳಿಗೆ ಇನ್ನು ಯಾರುತಾನೇ ಹೇಳಿರಬಹುದು? ನನ್ನ ಊಹೆಯ ಪ್ರಕಾರ, ಅದೇ ದೇಶದಿಂದ ಬಂದ ಈ ನಮ್ಮ 'ಮೋಳಿಗೆ ಮಾರಯ್ಯ"ನವರೇ ಹೇಳಿರಬೇಕು. ಹಂಪೆಯ ಕವಿ ಹರಿಹರ ಆಮೇಲೆ (ಕ್ರಿ.ಶ.1165) ತನ್ನ 'ಮಲುಹಣನ ರಗಳೆ"ಯಲ್ಲಿ ಇದನ್ನು ಸುಂದರವಾಗಿ ಬಣ್ಣಿಸುತ್ತಾನೆ; ಸಾರಾಂಶ ಇಷ್ಟು:

ಕಾಶ್ಮೀರದಲ್ಲಿ ಪ್ರವರಸೇನ ರಾಜನಿಗೆ ಮಂತ್ರಿಯಾಗಿ ಸುವರ್ಣಭಟ್ಟನೆಂಬ ಬ್ರಾಹ್ಮಣ ಇದ್ದ. ಇವನ ಮಗ ಮಲ್ಹಣ. ಮುದ್ದಿಗೆ ಕರೆಯುತ್ತಿದ್ದುದು 'ಮಲುಹಣ"- ಎಂದು. ಸುಖಲೋಲುಪನಾಗಿ ಬೆಳೆದ ಈ ಬುದ್ಧಿವಂತ ಮಗನಿಗೆ ತಾರುಣ್ಯದಲ್ಲೇ ಗಂಟುಬಿದ್ದಳು ಒಬ್ಬ ಪ್ರೇಯಸಿ. ಪದ್ಮಾವತಿಯೆಂಬ ವೇಶ್ಯೆಯ ಮಗಳಾದ ಇವಳ ಮೊದಲ ನಿಜವಾದ ಹೆಸರೇನೋ ತಿಳಿಯದು, ಮಲುಹಣ ಇವಳನ್ನು ಕೊಂಚ ಕಾಲವೂ ಬಿಡದೇ ಜೊತೆಗಿದ್ದು, ಇದ್ದು, ಈ ಅಪ್ರತಿಮ ಸುಂದರಿ 'ಮಲುಹಣಿ"ಯೆಂದೇ ಎಲ್ಲರ ಬಾಯಲ್ಲೂ, ರಸಿಕ ಯುವಕರ ಮನಸಿನಲ್ಲೂ ಕನಸಿನಲ್ಲೂ ಸುಳಿದಾಡುತ್ತಿದ್ದ ಪ್ರಸಿದ್ಧಳು.

ದಿನ ಕಳೆದಂತೆ, ಇದ್ದ ಹಣವೆಲ್ಲ ಕರಗಿದರೂ, ನಲ್ಲೆ 'ಒಲ್ಲೆ" ಎಂದು ನಿರಾಕರಿಸುತ್ತಿದ್ದರೂ ಅವಳ ಮೇಲಣ ವ್ಯಾಮೋಹ ಇವನಿಗೆ ಕಿಂಚಿತ್ತೂ ಇಳಿಯಲಿಲ್ಲ. ಕೇಳಿದ್ದನ್ನ ತರದೆ ಬರಿಗೈಲಿ ಮನೆಗೆ ಬಂದಾಗ ಬಾಗಿಲು ತೆರೆಯದೆ ತಿರಸ್ಕರಿಸಿದರೂ ಹಿಂತಿರುಗದೆ, ಬಾಗಿಲಲ್ಲೇ ಅಂಗಲಾಚುತ್ತ ರಾತ್ರೆಯೆಲ್ಲ ನಿಂತು, ಹಾಡಿ, ಹೊಗಳಿ, ಕಾಡಿ, ಬೇಡಿ ಬಾಗಿಲು ತೆರೆಯುವವರೆಗೂ ಅಥವಾ ಬೆಳಗಾಗುವವರೆಗೂ ಅಲ್ಲೇ ಹೊರಗೇ ಇರುತ್ತಿದ್ದ ರಾತ್ರೆಗಳೆಷ್ಟೋ.

ಒಮ್ಮೆ ಹೀಗೇ ಆಯಿತು. ಚಳಿಗಾಲದ ಒಂದು ರಾತ್ರಿ. ಅದು ಕಾಶ್ಮೀರ ತಾನೆ. ಭಾರೀ ಹಿಮಪಾತ. ಬಾಗಿಲು ಎಷ್ಟು ತಟ್ಟಿದರೂ ಒಳಗಿದ್ದ ಅವಳು ಬಾಗಿಲು ತೆರೆಯಲು ತಾಯಿ ಬಿಡಲಿಲ್ಲ. ಹೊರಗೇ ನಿಂತ ಮಲುಹಣ ಮೈ ಕೊರೆವ ಚಳಿಗೆ ನಡು ನಡುಗಿ ಕುಸಿದು ಬಿದ್ದ; ಮೇಲೆ ಧಾರಾಕಾರವಾಗಿ ಮಂಜು ಬಿದ್ದು ಮೂರ್ಛೆ ಹೋದ, ಮಂಜಿನಲ್ಲಿ ಮುಚ್ಚಿಯೂ ಹೋದ. ಬೆಳಗ್ಗೆ ಎದ್ದು ಬಾಗಿಲು ತೆಗೆದಾಗ, ಮುಂದೆ ಬಿದ್ದಿದ್ದ ಹಿಮದ ಬೆಟ್ಟದೊಳಗಿಂದ ಏನೋ ಅಲ್ಲಾಡಿದದನ್ನ ಕಂಡು, ಹಿಮ ಬಗೆದು ತೆಗೆದರೆ, ಇನ್ನೂ ಜೀವಂತ ಇದ್ದ, ಹಿಮದಿಂದ ಜರ್ಝರಿತ ದೇಹದ ಮಲುಹಣ ಕಣ್ಣಿಗೆ ಬಿದ್ದ. ಒಳತಂದು ಶುಶ್ರೂಷೆ ಮಾಡಿದರು. ಕಣ್‌ತೆರೆದು ಮೈತಿಳಿದಾಗ ಹರಿಹರನ ವೈಯಾರಿ ಮಲುಹಣಿ ಹೇಳುತ್ತಾಳೆ: ''ಎನ್ನ ಮೇಲಿಕ್ಕಿದ ಚಿತ್ತವನು ಪನ್ನಗಾಭರಣ ಶಿವನ ಮೇಲಿಕ್ಕಿದರೆ ನಿನ್ನಾಸೆ ಈಡೇರಿತು!""(ಸಂತ ತುಳಸೀದಾಸರ ಜೀವನದಲ್ಲೂ ಇಂಥದೇ ಘಟನೆ ನಡೆಯುತ್ತದೆ; ಆದರೆ ಅಲ್ಲಿ ಬುದ್ಧಿ ಹೇಳಿ, ರಸಿಕಶಿಖಾಮಣಿಯ ದಿಕ್ಕನ್ನು ಬದಲಿಸಿಬಿಡುವವಳು ಅವನ ಹೆಂಡತಿಯೇ!)

ಇಲ್ಲಿ, ಅವಳ ಈ ಮಾತೇ ಮಲುಹಣನ ಕಿವಿಯಲ್ಲಿ ಅನುರಣನಗೊಳ್ಳುತ್ತಿರುತ್ತದೆ. ಚೇತರಿಸಿಕೊಂಡಮೇಲೆ, ಹತ್ತಿರದಲ್ಲಿದ್ದ 'ವಿಜಯೇಶ್ವರ" ದೇವಾಲಯಕ್ಕೆ ನೇರ ಹೋಗಿ, ಅಲ್ಲಿ ಶಿವನ ಪೂಜೆಗೆ ತೊಡಗುತ್ತಾನೆ. ಅನನ್ಯ ಭಕ್ತಿಯಿಂದ, ತುಂಬು ಶ್ರದ್ಧೆಯಿಂದ ಹಲಕಾಲ ಪೂಜಿಸಿ, ಶಿವನನ್ನು ಒಲಿಸಿಕೊಳ್ಳುತ್ತಾನೆ. ಶಿವ ಪ್ರತ್ಯಕ್ಷನಾಗಿ 'ಏನು ಬೇಡುವೆ, ಮಗನೆ? ಕೇಳಿದ್ದ ನಾ ಕೊಡುವೆ" ಎಂದು ಒಲಿದುಲಿದಾಗ, 'ತಾನು ಮಲುಹಣಿಯಾಡನೆ ಚಿರಕಾಲ ಇರುವ" ವರ ಕೇಳಿಕೊಳ್ಳುತ್ತಾನೆ. ಶಿವ ನಸು ನಕ್ಕು, ಅದನ್ನೇ ಕರುಣಿಸುತ್ತಾನೆ ! ಇದು ಹರಿಹರ ಹೇಳುವ ಕಾಶ್ಮೀರದ ಶರಣ 'ಮಲುಹಣನ ರಗಳೆ"ಯ ಕತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X