• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿಯೇ ಉಳಿದ ಕಾಶ್ಮೀರದ ಶಿವಶರಣರು

By ಶಿಕಾರಿಪುರ ಹರಿಹರೇಶ್ವರ
|

ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವೊಂದಿದೆ. ಅಲ್ಲಿ ಶಿವೋತ್ಸವ ನಾಗಲಿಂಗ ಶಿಲಾಮಂಟಪದ ಗಗ್ಗರಿಗಲ್ಲಿನಲ್ಲಿ ಹನ್ನೆರಡನೆಯ ಶತಮಾನದ ಕೆಲವು ಶಿವ-ಶರಣರ ವಿಗ್ರಹಗಳನ್ನು ಕೆತ್ತಿದ್ದಾರೆ. ಬಹಳ ಹಿಂದಿನ ಕಾಲದ ಸ್ವಾದಿ ವಂಶದ ವೀರಶೈವ ಅರಸು ಮನೆತನದವರು ಈ ಶಿಲಾಮಂಟಪವನ್ನು ಕಲ್ಲುಮಂಚವನ್ನೂ ಮಧುಕೇಶ್ವರ ದೇವರ ಸೇವೆಗೆಂದು ಕೊಟ್ಟಿದ್ದರೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಆ ದಿನಗಳಲ್ಲಿ ವೀರಶೈವ ಚಳುವಳಿಯ ಮುಂಚೂಣಿಯಲ್ಲಿದ್ದ ಕೆಲವರನ್ನು- ಉದಾಹರಣೆಗೆ ನುಲಿಯ ಚೆಂದಯ್ಯ, ಆಯ್ದಕ್ಕಿ ಮಾರಯ್ಯ, ಇಕ್ಕದ ಮಾರಯ್ಯ, ಹಡಪದ ಅಪ್ಪಣ್ಣ , ಹಾಳಿನ ಹಂಪಣ್ಣ , ಅಗ್ಗವಣಿ ಹೊನ್ನಯ್ಯ , ಗುಂಡ ಬ್ರಹ್ಮಯ್ಯ ಮುಂತಾದವರುಗಳನ್ನು ಆ ವಿಗ್ರಹಗಳ ಸಾಲಿನಲ್ಲಿ ಬಲ್ಲವರು ಗುರುತಿಸುತ್ತಾರೆ. ಅವರುಗಳ ಜೊತೆ ಇರುವ ವಿಗ್ರಹವನ್ನು ಇದು ‘ಮೋಳಿಗೆ ಮಾರಯ್ಯ’- ಎನ್ನುತ್ತಾರೆ. ಯಾರು ಈ ಮೋಳಿಗೆ ಮಾರಯ್ಯ?ಕಾಶ್ಮೀರಕ್ಕೂ ಇವನಿಗೂ ಏನು ಸಂಬಂಧ?

ಕಲ್ಯಾಣದಿಂದ ಹುಮನಾಬಾದಿಗೆ ಹೋಗುವ ಹಾದಿಯಲ್ಲಿ , ಸುಮಾರು ಹನ್ನೆರಡು ಮೈಲಿ ದೂರದಲ್ಲಿ ‘ಮೋಳಕೇರಿ’ ಎಂಬ ಗ್ರಾಮವೊಂದಿದೆ. ಮೋಳಿಗೆಯವರ ಕೇರಿ, ‘ಮೊಳಕೇರಿ’ ಆಯಿತು ಎಂದೂ, ಅಲ್ಲಿರುವ ಗವಿಗೆ ‘ಇದು ಮೋಳಿಗೆ ಮಾರಯ್ಯನ ಗವಿ’- ಎಂದು ಸ್ಥಳೀಕರು ಹೇಳುತ್ತಾರೆ. ಆ ಗವಿಯಲ್ಲಿ ಒಂದು ಲಿಂಗವೂ ಇದೆ ; ‘ಅವರು ಲಿಂಗೈಕ್ಯರಾದುದು ಇಲ್ಲೇ ಎನ್ನುವವರೂ ಇದ್ದಾರೆ. ಆ ಗವಿಯ ಸನಿಹದಲ್ಲೇ ಒಂದು ಮರ ಇದೆ; ಅದನ್ನು ‘ಹೆಸರಿಲ್ಲದ ಮರ’- ಎಂದು ಕರೆಯುತ್ತಾರೆ ; ಮತ್ತೂ ಹೇಳುತ್ತಾರೆ : ‘ಈ ಮರದಲ್ಲೇ ಒಂದು ದೊಡ್ಡ ಪವಾಡ ಮಾಡಿದರು, ಮಾರಯ್ಯನವರು!’ ಯಾರು ಈ ಮಾರಯ್ಯನವರು? ಏನದು ಜನ ನಂಬಿ ಹೊಗಳುವ ಪವಾಡ?

ಪವಾಡಕ್ಕಿಂತ ಮಿಗಿಲಾಗಿ ಜನಮನ ಸೂರೆಗೊಂಡ ಏನಾದರೂ ಹೆಚ್ಚುಗಾರಿಕೆಯ ಕೆಲಸ, ವಿಶೇಷ ಸಾಧನೆ ಮಾಡಿ, ಬೋಧನೆ ಮಾಡಿದರಾ ಇವರು? ಬೇರೆ ಬೇರೆಯವರು ಬೇರೆ ಬೇರೆ ಕಾಲಗಳಲ್ಲಿ (ಕ್ರಿ.ಶ.1400-1600) ಒಂದುಗೂಡಿಸಿದ ನಾಲ್ಕು ‘ಶೂನ್ಯ ಸಂಪಾದನೆ’ ಸಂಪುಟಗಳಲ್ಲೂ , ಒಂದು ಗಣನೀಯ ಭಾಗವನ್ನೇ ಪಡೆದುಕೊಳ್ಳುವ ಅಸಾಧಾರಣ ಮಟ್ಟಕ್ಕೆ ಮುಟ್ಟಿದವರೆಂದರೆ ಇವರು ಸಾಮಾನ್ಯರಿರಲಿಕ್ಕಿಲ್ಲ, ಅಲ್ಲವೆ? ಹೊನ್ನವಳ್ಳಿಯ ಗೌರಾಂಕರ (ಕ್ರಿ.ಶ.1525) ಒಂದು ಸುದೀರ್ಘ ‘ಪುರಾಣ’ಕ್ಕೇ ವಸ್ತುವಾಗುವಷ್ಟರ ಮಟ್ಟಿಗೆ ‘ಅನುಭವಮಂಟಪ’ದ ಇನ್ನಿತರ ಶಿವಾನುಭಾವಿಗಳ ಉನ್ನತ ಶ್ರೇಣಿಯಲ್ಲಿ ನಿಂತವರೆಂದರೆ ಇವರ ಪೂರ್ವೋತ್ತರಗಳೇನು?

ಹಲವು ಪ್ರಸಿದ್ಧ ವೀರಶೈವ ಪುರಾಣಗಳಲ್ಲಿ , ಚಾರಿತ್ರ್ಯಗಳಲ್ಲಿ ಮತ್ತು ಕಾವ್ಯಗಳಲ್ಲಿ , ತೆಲುಗಿನಲ್ಲಿಯೂ ಸಹ, ತಾನಿದ್ದ ಕಾಲದಿಂದ ಆರುನೂರು ವರುಷಗಳವರೆಗೂ (1160 ರಿಂದ 1763) ಜೀವಂತ ಪಾತ್ರವಾಗಿದ್ದವರೆಂದರೆ ಈ ಮಾರಯ್ಯನವರದು ಏನೋ ಅಗ್ಗಳಿಕೆಯಿದ್ದೇ ಇರಬೇಕು !

ಸಮಾಜ ಸುಧಾರಣೆಯ ಬಿರುಗಾಳಿಯೆದ್ದ ಆ ದಿನಗಳಲ್ಲಿ ಅದನ್ನೆಬ್ಬಿಸಿದ ಬಸವಣ್ಣನವರು ಚೆನ್ನಬಸವಣ್ಣನವರು ಮುಂತಾದ ಪ್ರಮಥರಿಂದ ‘ಮೋಳಿಗೆಯ ಮಾರಿ-ತಂದೆ’ ಎಂದು ಕರೆಯಿಸಿಕೊಂಡ, ಸಿದ್ಧರಾಮಣ್ಣನವರಿಂದ ‘ಮೋಳಿಗೆಯ ಮಾರವಿಭು’ ಎಂದು ಮನ್ನಣೆಗಳಿಸಿದ ಈ ಮಾರಯ್ಯನವರಾರು?

ವೀರಶೈವ ವಚನ ವಾಙ್ಮಯದಲ್ಲಿ ‘ಮಾರಯ್ಯ’ ಎಂಬವರು ಹಲವರು ಬಂದು ಇದ್ದು ಹೋಗುತ್ತಾರೆ. ‘ಶೃಂಗಾರೇ ಲಲಿತೋದ್ಗಾರೇ ಕಾಳಿದಾಸ ಕಿಮು ತ್ರಯೀ’ (ಅಷ್ಟು ಸೊಗಸಾಗಿ ಶೃಂಗಾರ ರಸ, ಲಲಿತ ಶೈಲಿಯಲ್ಲಿ ಬಗೆಬಗೆಯಲ್ಲಿ ಕಾವ್ಯ ರಚನೆ ಮಾಡುವುದನ್ನ ನೋಡಿದರೆ, ಛೆ! ಒಬ್ಬ ಕಾಳಿದಾಸನೇ ಈ ಎಲ್ಲ ಕಾವ್ಯಗಳನ್ನೂ ಬರೆದಿರಲಾರ, ಕನಿಷ್ಠ ಮೂವರಾದರೂ ಇದ್ದಿರಲೇಬೇಕು!- ಎಂಬುದು ಭಾವಾರ್ಥ!)- ಎಂಬುದನ್ನು ಕೇಳಿದ್ದೀರಲ್ಲ ? ಹಾಗೆಯೇ, ‘ಮಾರಯ್ಯ’ ನಾಮಾಂಕಿತ ಶಿವಶರಣರು ಹಲವರಿದ್ದಾರೆ! (ಅಡಿ ಟಿಪ್ಪಣಿ : ಕಾಳಿದಾಸನ ಮಾತು ಬಂತು ; ‘ಕಾಳಿದಾಸ ಕಾಶ್ಮೀರದವನೇನು?’ ಅದು ಮುಂಬರುವ ಇನ್ನೊಂದು ಲೇಖನಕ್ಕೆ ವಸ್ತು!) ‘ಮೋಳಿಗೆ ಮಾರಯ್ಯ’ನವರ ಹೆಸರಿನ ಪ್ರಭಾವದಿಂದಲೇ ಹಲವಾರು ‘ಮಾರಯ್ಯ’ನವರೂ ‘ಮಾರಿತಂದೆ’ಗಳೂ (‘ಇವರಲ್ಲ , ನಾವು ಅರಸುತ್ತಿರುವುದು ಆ ಮಾರಯ್ಯನವರನ್ನ !’) ನಮ್ಮನ್ನು ಅನುಭವಮಂಟಪದ ಸುತ್ತ ಮುತ್ತ ಭೇಟಿ ಮಾಡುತ್ತಿದ್ದರೇನೋ ಎಂದು ಸಂಶೋಧಕರು ಶಂಕೆ ಪಟ್ಟಿದ್ದಾರೆ! ಅನುಕರಣೆಯೂ ಒಂದು ಬಗೆಯ ಹೊಗಳಿಕೆಯ ಲಕ್ಷಣವೇ! ಇರಲಿ, ಇಷ್ಟು ಪ್ರಭಾವ ಬೀರಿದ್ದವರೇ ಅವರಾಗಿದ್ದರೆ ಯಾರವರು?

ಬೋಧನೆಯ ವಿಚಾರವೆತ್ತಿದೆನೇ? ಅವರ ಸೂಳ್ನುಡಿ ಅಷ್ಟು ಸೊಗಸಾಗಿ ಜನಮನವನ್ನಾಕರ್ಷಿಸಿತೇ? ಅವರ ವಚನಗಳಲ್ಲಿ ಕನ್ನಡದ ಸೊಗಡು, ನಿರೂಪಣೆಯ ಶೈಲಿ ಅಷ್ಟು ರೋಚಕವಾಗಿದ್ದು , ಆಳವನ್ನೂ ಆಗಲವನ್ನೂ ಸಮೀಕರಿಸಿತ್ತೇ ?

ಮತ್ತೆ , ಅದೇ ಪ್ರಶ್ನೆ ? ಕಾಶ್ಮೀರಕ್ಕೂ ಈ ಕನ್ನಡದವರಿಗೂ ಏನು ಸಂಬಂಧ? ಕಾಶ್ಮೀರದವರೆಗೂ ಕನ್ನಡದ ಕಂಪು ಹರಡಿತ್ತೇ? ಕಾಶ್ಮೀರದಲ್ಲೂ ಆ ಕಾಲದಲ್ಲಿ ಕನ್ನಡ ಮಾತನಾಡುತ್ತಿದ್ದರೇನು? ಅಥವಾ.. ಅಥವಾ...

ತಡೆಯಿರಿ. ನಿಮ್ಮ ಪ್ರಶ್ನೆಗಳಿಗೆ ಒಂದೊಂದಾಗಿ ಕತೆ ಹೇಳಿ ಉತ್ತರಿಸುವೆ ; ಬಸವೇಶ್ವರರ ಸಮಕಾಲೀನರ ಬಗ್ಗೆ ವಿಫುಲವಾಗಿ ಸಂಶೋಧನೆ ಮಾಡಿ ಉದ್‌ಗ್ರಂಥಗಳನ್ನು ಪ್ರಕಟಿಸಿರುವ ಸರ್ವಶ್ರೀ ಉತ್ತಂಗಿ ಚ್ನನಪ್ಪ , ಡಾ.ಗದಗಿ ಮಠ, ಚನ್ನಪ್ಪ ಎರೇಸೀಮೆ, ಡಾ.ಚಿದಾನಂದ ಮೂರ್ತಿ, ಜಯಾ ರಾಜಶೇಖರ್‌, ಜೋಳನರಾಶಿ ದೊಡ್ಡನ ಗೌಡ, ಎಂ.ಜಿ.ನಂಜುಂಡಾರಾಧ್ಯ, ಎಸ್‌.ಎಸ್‌. ಭೂಸನೂರುಮಠ, ಡಾ.ಸಾ.ಶಿ.ಮರುಳಯ್ಯ, ಎಸ್‌.ಎಸ್‌.ಮಾಳವಾಡ, ಡಾ.ಹಳಕಟ್ಟಿ , ಡಾ.ಆರ್‌.ಸಿ.ಹಿರೇಮಠ- ಮುಂತಾದವರ ಸಂಶೋಧನಾತ್ಮಕ ಬರಹಗಳನ್ನು ಆಧರಿಸಿ ; ಮತ್ತು , ಬೆಂಗಳೂರಿನ ಬಸವ ಸಮಿತಿಯವರು ಪ್ರಕಟಿಸಿರುವ ‘ಬಸವೇಶ್ವರರ ಸಮಕಾಲೀನರು’ (1976) ರಲ್ಲಿ ‘ಮೋಳಿಗೆ ಮಾರಯ್ಯ’ನವರ ಬಗ್ಗೆ ಶ್ರೀ ಚನ್ನಪ್ಪ ಎರೇಸೀಮೆ ಅವರ ಉತ್ತಮ ಲೇಖನಕ್ಕೆ ಆಭಾರಿಯಾಗಿ :

ಹಿಮಾಲಯದ ದಕ್ಷಿಣದಿಕ್ಕಿನಲ್ಲಿರುವ ಬೆಟ್ಟಗಳ ಸಾಲಿನಲ್ಲಿ ಇತ್ತು ‘ಸವಾಲಾಖ್‌’ಎಂಬ ಅಡ್ಡಹೆಸರಿನ ಒಂದು ಪ್ರದೇಶ. ಅದು, ಒಂದೂ ಕಾಲು ಲಕ್ಷ ಎಂದು ಅರ್ಥವಾಗುವ, ಕಾಶ್ಮೀರದ ಒಂದು ಮಂಡಲವೆನಿಸಿಕೊಂಡ ರಾಜ್ಯ. ಹಿಂದೆ, ನಮ್ಮ ಕನ್ನಡ ನಾಡಿನ ಶಿಲಾ ಶಾಸನಗಳಲ್ಲಿ ಗಂಗೇವಾಡಿ 96000, ಬನವಾಸಿ 12000- ಎಂದು ಕರೆಯುತ್ತಿದ್ದರಂತೆ, ‘ಚೌಬೀಸ್‌ ಫರ್‌ಗಣ’ ಎಂದು ಈಗಲೂ ಬಂಗಾಲದಲ್ಲಿ ಇರುವಂತೆ ಈ ಸಪಾದಲಕ್ಷ ಅಥವಾ ಸವಾಲಕ್ಷ ದೇಶಕ್ಕೆ ಮಾಂಡವ್ಯಪುರವೆಂದೂ ಇನ್ನೊಂದು ಹೆಸರಿತ್ತಂತೆ. (ಶಂಕರಾಚಾರ್ಯರು ವಾದದಲ್ಲಿ ಗೆದ್ದ ಮಂಡನಮಿಶ್ರರ ನೆನಪಿನಲ್ಲಿ , ಅಥವಾ ಮಾಂಡವ್ಯ ಋಷಿಯ ಸ್ಮರಣಾರ್ಥ ಕಟ್ಟಿ ಬೆಳೆಸಿದ ಊರು ಎಂದು ಕತೆ ಕಟ್ಟಿದರೂ ಸರಿಯೇ!) ಇರಲಿ, ಈ ‘ಸವಾಲಕ್ಷ’ದ ಅಧಿಪತಿ ಮಹಾದೇವ ಭೂಪಾಲನೆಂಬ ರಾಜ ಇದ್ದ . ಅವನ ಹೆಂಡತಿ ‘ಗಂಗಾದೇವಿ’. ಅವನ ತಂಗಿಯ ಹೆಸರು ‘ನಿಜದೇವಿ’. ತಂದೆಯ ಹೆಸರು ‘ಭಾಳಲೋಚನ’ ; ಮಗ ‘ಲಿಂಗರತಿ’. ಏನಿದು ರಾಜನ ಮನೆಯವರಿಗೆಲ್ಲ ಈ ಶಿವ-ಪರವಾದ ಹೆಸರುಗಳು-ಎಂದು ಸೋಜಿಗಪಡುವಿರಾ? ಕೇಳಿ.

ಕಾಶ್ಮೀರದಲ್ಲಿ ಆ ಹನ್ನೆರಡನೆಯ ಶತಮಾನಕ್ಕೂ ಮೊದಲೇ ಶೈವಮತ ಬಿರುಸಿನಲ್ಲಿ ಪ್ರಚಾರದಲ್ಲಿ ಇತ್ತು . ಕಾಶ್ಮೀರ-ಶೈವಮತ ‘ಪ್ರತ್ಯಭಿಜ್ಞಾ’ ಎಂಬ ಸಿದ್ಧಾಂತಕ್ಕೆ ಸೇರಿದ್ದು. (ಈ ಕಾಶ್ಮೀರ-ಶೈವಮತದ ಬಗ್ಗೆ ಮುಂದೆ ಇನ್ನೊಂದು ಲೇಖನದಲ್ಲಿ ವಿವರಿಸುವೆ.) ಕರ್ನಾಟಕದಿಂದ ಪ್ರಸಿದ್ಧ ವಿದ್ವಾಂಸರು ಶೈವಮತ ಪ್ರಚಾರಕ್ಕಾಗಿ ದೇಶಸಂಚಾರ ಮಾಡುತ್ತಿದ್ದಾಗ ಕಾಶ್ಮೀರಕ್ಕೂ ಹೋಗಿಬಂದ ದಾಖಲೆಗಳಿವೆ. ಅಲ್ಲಮಪ್ರಭುಗಳು ಹಿಮಾಲಯ, ಕಾಶ್ಮೀರ, ಗುಜರಾತ ಪ್ರಾಂತಗಳಲ್ಲಿ ಸಂಚರಿಸಿ, ಕಾಶ್ಮೀರದ ‘ಸವಾಲಕ್ಷ’ ಪ್ರದೇಶದಲ್ಲಿ ಇರುವ ‘ಗುಹೆ’ಗಳಲ್ಲಿ ತಪಸ್ಸು ಮಾಡಿಬಂದ ವಿಚಾರಕ್ಕೆ ಆಧಾರವಿದೆ. (ಚೆನ್ನಬಸವಪುರಾಣ, 62 :7,8; ಶೂನ್ಯ ಸಂಪಾದನೆ, ಪ್ರಭುದೇವರು ದೇಶಾಂತರಕ್ಕೆ ಹೋದ ಭಾಗ, ವಚನ 14 ರ ಕೆಳಗಣ ಗದ್ಯ). ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಹುಟ್ಟಿದ ಪ್ರಭುದೇವರ ವಚನ ಮುದ್ರಿಕೆ ‘ಗೊಹೇಶ್ವರ’!

ಶಾಸನಗಳ ಆಧಾರದ ಮೇಲೆ ಹೇಳುವ ಮಾತು : ಬಹಳ ಹಿಂದಿನ ಕಾಲದಿಂದಲೂ ಕರ್ನಾಟಕಕ್ಕೂ ಕಾಶ್ಮೀರಕ್ಕೂ ವಾಣಿಜ್ಯ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರ ವಿನಿಮಯದ ಸಂಬಂಧವಿತ್ತು . ಕಲ್ಹಣನ ರಾಜತರಂಗಿಣಿಯಲ್ಲಿಯೂ ಕರ್ನಾಟಕದ ಪ್ರಸ್ತಾಪ, ಹೊಗಳಿಕೆಯ ಮಾತುಗಳು ಬರಲು ಈ ಸಂಪರ್ಕವೇ ಕಾರಣ. ಬಳ್ಳಿಗಾವೆ, ಐಹೊಳೆ ಪಟ್ಟದಕಲ್ಲುಗಳ ಮತ್ತು ಕಲ್ಯಾಣದ ವೀರ ಬಣಂಜುಗಳು ಕಾಶ್ಮೀರ ನೇಪಾಳ ಮೊದಲಾದ ದೂರದ ದೇಶಗಳಿಗೂ ವ್ಯಾಪಾರಕ್ಕಾಗಿ ಹೋಗಿಬರುತ್ತಿದ್ದರು. (ನೋಡಿ : ಶಿಕಾರಿಪುರ ಶಾಸನ 10; ಅರಸೀಕೆರೆ ಶಾಸನ 210; ಬಾಗೆವಾಡಿ ತಾಲ್ಲೂಕಿನ ಮುತ್ತಿಗೆ ಶಾಸನ, ರೈಸ್‌ ಅವರ ಮೈಸೂರು ಶಾಸನಗಳು). ಕಾಶ್ಮೀರದ ಶೈವ ಸಿದ್ಧಾಂತ, ಕಾಳಾಮುಖ, ಲಾಕುಳ, ಕೌಲ, ಪಾಶುಪತ, ಮಾಹೇಶ್ವರ ಪಂಥಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಅದು. ಹಾಗಾಗಿ ನಮ್ಮ ಮಹಾದೇವ ಭೂಪಾಲ ಪರಮ ಶಿವ ಭಕ್ತ. ಮನೆಯವರ ಹೆಸರುಗಳೇ ಅದಕ್ಕೆ ಸಾಕ್ಷಿ.

ದೂರ ದೂರ ದೇಶಗಳಿಗೆ ಹೋಗಿ ತತ್ತ್ವ ಪ್ರಚಾರ ಮಾಡುತ್ತಿದ್ದ ಪುರಾತನರ ಗದ್ಯ ಪದ್ಯ ವಚನಗಳನ್ನು ಕೇಳಿ, ಈ ವಿಶಿಷ್ಟ ಆಂದೋಳನದ ಕಂಪನ ಕೇಂದ್ರ (ಎಪಿಸೆಂಟರ್‌) ಎಲ್ಲಿದೆಯೆಂದು ಅರಸುತ್ತ , ನಾವೀಗ ಹಲವರು ಕಾಶಿಗೆ, ಕೆಲವರು ಕಾಶ್ಮೀರದ ‘ಅಮರನಾಥ’ ದರ್ಶನಕ್ಕೆ ಯಾತ್ರೆ ಹೋದಂತೆ, ಕಲ್ಯಾಣಕ್ಕೆ ಬಂದ ದೂರದೇಶದ ಪ್ರವಾಸಿಗರೆಷ್ಟೋ ಮಂದಿ. ತಾವಿದ್ದ ಕಡೆ ಯುದ್ಧ ಆಕ್ರಮಣ ಅಶಾಂತಿ ಅವಕಾಶಗಳ ಕೊರತೆ ತಲೆದೋರಿದಾಗ ಈಗಿನಂತೆ ಆಗಲೂ ಸಾಹಸಿಗಳು ಹೊಸ ಕ್ಷಿತಿಜಗಳನ್ನು ಹುಡುಕಿಕೊಂಡು ಹೊರಡುತ್ತಿದ್ದರು. ಏನೇನೋ ಬಣ್ಣ ಬಣ್ಣದ ಕತೆ ಕೇಳಿ, ಸುಭಿಕ್ಷದ ಸ್ವರ್ಗವನ್ನು, ಶಾಂತಿಯ ನೆಲವೀಡನ್ನು , ಸಾಂಸ್ಕೃತಿಕ ಅಮರಾವತಿಯನ್ನ ಒಮ್ಮೆ ನೋಡಿ ಬರುವ ಅಭೀಪ್ಸೆಯಿಂದ ಬಂದು, ಈಗ ಅಮೆರಿಕಾಕ್ಕೆ ಬರುವ ಉನ್ನತ ವ್ಯಾಸಂಗಾರ್ಥಿಗಳು ಹಲವರು ಇಲ್ಲಿಯೇ ನೆಲಸಿ ಬಿಟ್ಟಂತೆ, ದೂರದೇಶಗಳಿಂದ ಇತ್ತ ವಲಸೆ ಬಂದವರೂ ಇದ್ದರು.

ಹತ್ತನೆಯ ಶತಮಾನಕ್ಕೆ ಮುನ್ನವೇ ಹೀಗೆ ವಲಸೆ ಬರುತ್ತಿದ್ದರೆಂಬುದಕ್ಕೆ ಶಾಸನಗಳ ಆಧಾರಗಳಿವೆ. ಅಲ್ಲಿ ಬರುವ ‘ಅಹಿಚ್ಛತ್ರ’ ಎಂಬ ಪದ ‘ಕಾಶ್ಮೀರ’ ಸೂಚಿಸುತ್ತದೆ ಎಂದು ಸಂಶೋಧಕರ ಅಭಿಪ್ರಾಯ. ಕದಂಬ ರಾಜವಂಶದ ಮುಕ್ಕಣ್ಣನು ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆಸಿ, ಸ್ಥಾನಕುಂದೂರು (ಈಗ ‘ತಾಳಗುಂದ’) ಗ್ರಾಮದಲ್ಲಿ ಅವರಿಗೆ ಅಗ್ರಹಾರಗಳನ್ನು ಕೊಟ್ಟ ವಿಷಯ ಸಾಬೀತಾಗಿದೆ. (ಎಪಿಗ್ರಾಫಿಯಾ ಕರ್ನಾಟಿಕಾ 2 :7:186) ; ಬೇಲೂರು ಶಾಸನದಲ್ಲಿ (ಕ್ರಿ.ಶ.1139), ‘ಕಾಶ್ಮೀರ ಶಾರದದೇವಿ ಲಬ್ದವರಪ್ರಸಾದರುಂ ಸಹವಾಸ ಸಂತೋಷ ಅಹಿಚ್ಛತ್ರ ವಿನಿರ್ಗಕರುಮ್‌’ (ನೋಡಿ : ಹಾಸನ ತಾಲ್ಲೂಕು ಶಾಸನ 61; ಬೇಲೂರು ಶಾಸನ 117)- ಎಂದಿದೆ.

ಈಗಿನ ಗುಜರಾತಿನ ಪ್ರದೇಶದಿಂದ ಬಂದವರಲ್ಲಿ ಆದಯ್ಯ, ಉದ್ಭಟ, ಓಹಿಲ, ನಾವದಿಗೆಯ ಗುಡ್ಡವ್ವೆ, ಸೊಡ್ಡಳ ಬಾಚರಸ ಮುಂತಾದವರ ಹೆಸರನ್ನು ‘ಶಿವಶರಣಚರಿತ’ಗಳಲ್ಲಿ (ಭಾಗ 3, ಪುಟ 222) ನೋಡುತ್ತೇವೆ. ಸೌರಾಷ್ಟ್ರದಿಂದ ಬಂದು ಕಲ್ಯಾಣದಲ್ಲಿ ನೆಲಸಿದ ಶಿವಶರಣರು ಬಹುಮಂದಿ. ವಚನಕಾರರ ಅಂಕಿತದಿಂದ ಊಹಿಸಿದಾಗ, ತಮ್ಮ ಮೆಚ್ಚುಗೆಯ ಸೌರಾಷ್ಟ್ರದ ಸೋಮನಾಥಲಿಂಗವನ್ನು ಒಂದಲ್ಲ ಒಂದು ಅಭಿಧಾನದಲ್ಲಿ ನೆನೆಯುವ ಶಿವ ಶರಣರ ಪಟ್ಟಿಯನ್ನು ನೋಡಿ (ಅವರವರ ವಚನಮುದ್ರಿಕೆ ಕಂಸದಲ್ಲಿ ) : ಅಮುಗಿ ದೇವಯ್ಯ (ಸಿದ್ಧ ಸೋಮೇಶ್ವರ ಲಿಂಗ) ;ಆದಯ್ಯ (ಸೌರಾಷ್ಟ್ರ ಸೋಮೇಶ್ವರ ಲಿಂಗ); ಪುಷ್ಪದ ಸೋಮಯ್ಯ (ಸೋಮೇಶ್ವರ ಲಿಂಗ); ಶಂಕರ ಸೋಮಯ್ಯ (ಸಾಂಬ ಸೋಮೇಶ್ವರ ಲಿಂಗ) ಮುಂತಾದವರು.

English summary
Celestial view of Kashmir, Shikaripura harihareshwara attempts an appreciation of poetry of Bilhana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more