• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವಿಯವರ ‘ನಾ ಕಂಡ ಅಮೆರಿಕಾ’ ಸೂಪರ್ಬ್‌

By Super
|

ಬಿ. ಪುಟ್ಟಯ್ಯ ಅವರ ‘ಅಭಿವೃದ್ಧಿ ಸಂದೇಶ’ ಎಂಬುದು ಕನ್ನಡದಲ್ಲಿ ಬಂದ, ಪಶ್ಚಿಮದೇಶದಲ್ಲಿ ಮಾಡಿಬಂದ ಪ್ರವಾಸದ ಬಗ್ಗೆ ಬರೆದ ಪ್ರಥಮ ಗ್ರಂಥ’ - ಎಂದು ‘ಕನ್ನಡ ವಿಶ್ವಕೋಶ’ದ ಮೂರನೆಯ ಸಂಪುಟದಲ್ಲಿ (ಪುಟ 743) ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣಸಂಸ್ತೆಯ ಆಗ ಸಹಾಯಕ ನಿರ್ದೇಶಕರಾಗಿದ್ದ, ಜೆ.ಎಸ್‌. ಪರಮಶಿವ ಮೂರ್ತಿಗಳು ಅಭಿಪ್ರಾಯಪಡುತ್ತಾರೆ. ಕನ್ನಡ ವಿಶ್ವಕೋಶದಲ್ಲಿ ಇರುವ ಅವರ ಸಂಶೋಧನಾತ್ಮಕ ಲೇಖನವು (ಪುಟ 741-744) ಪ್ರವಾಸ ಕಥನಗಳ ಬಗ್ಗೆ ಈ ಮೇಲಿನ ಎಲ್ಲ ವಿವರಗಳಿಗೂ ನನಗೆ ಆಕರವಾಗಿದೆ.

ಡಾ. ಎಸ್‌. ಎಲ್‌. ಭೈರಪ್ಪನವರೂ ತಮ್ಮ ಆತ್ಮಕಥನದ ‘ಭಿತ್ತಿ’ ಕಾದಂಬರಿಯಲ್ಲಿ’ ವಿದೇಶ ಪ್ರವಾಸದ ಅನುಭವಗಳನ್ನು ಕೆಲವು ಅಧ್ಯಾಯಗಳಲ್ಲಿ ಚಿತ್ರಿಸಿದ್ದಾರೆ! ಉದಾಹರಣೆಗೆ, ಅಧ್ಯಾಯ 15, ಪುಟ 551- 595. ಇನ್ನೂ ಕೆಲವು ಖ್ಯಾತ ಸಾಹಿತಿಗಳು ತಮ್ಮ ಆತ್ಮಕಥನ ರೂಪದ ಗ್ರಂಥಗಳಲ್ಲಿ ತಮ್ಮ ವಿದೇಶಪ್ರವಾಸದ ಪ್ರಸಂಗಗಳನ್ನು ಬಣ್ಣಿಸಿದ್ದಾರೆ. (ಕ್ಷಮಿಸಬೇಕು, ನನಗೆ ಗೊತ್ತು, ನಾನು ನೆನಸಿಕೊಳ್ಳುತ್ತಿರುವ ಪುಸ್ತಕಗಳ ಈ ಪಟ್ಟಿ ಅಪೂರ್ಣ!)

***

ನನ್ನ ಬಳಿ ಇರುವ ಪ್ರವಾಸ ಕಥನ ಗ್ರಂಥಗಳನ್ನು ಓದಿದಾಗ ನನಗೆ ಅನ್ನಿಸಿದುದು ಹೀಗೆ: ಒಂದೇ ವಿಷಯವನ್ನು, ಒಂದೇ ವಸ್ತುವನ್ನು ಬೇರೆ ಬೇರೆಯವರು ಹೇಗೆ ಬೇರೆ ಬೇರೆ ದೃಷ್ಟಿಕೋಣಗಳಿಂದ ನೋಡಿ, ತಮ್ಮ ಅನುಭವವನ್ನು ಹೃದಯಂಗಮವಾಗಿ ತಮ್ಮದೇ ಆದ ಶೈಲಿಯಲ್ಲಿ ಬಣ್ಣಿಸ ಬಲ್ಲರು- ಎಂದು! ಇನ್ನೊಂದು, ಇಲ್ಲಿಯೇ ಇರುವ ನಮ್ಮಂಥವರ ಕಣ್ಣಿಗೆ ತೋರದ, ಮನಸ್ಸಿಗೆ ತೋಚದ, ಬುದ್ಧಿಗೆ ಹೊಳೆಯದಿರುವ ಎಷ್ಟೊ ವಿಷಯಗಳನ್ನು ಅನೇಕ ಸಮರ್ಥ ಬರಹಗಾರರು ಸೂಕ್ಷ್ಮಗ್ರಾಹಿಗಳಾಗಿ ಒಳಹೊಕ್ಕು ತಿಳಿದು, ಖಚಿತ ಮಾಹಿತಿಯನ್ನ ಸಂಗ್ರಹಿಸಿ ಬರಹಕ್ಕಿಳಿಸಿರುತ್ತಾರೆ; ಬಣ್ಣಿಸಿರುತ್ತಾರೆ. ವರದಿಯ ನೀರಸ ಪರಿಮಿತಿಗಳನ್ನು ಮೀರಿ, ಪ್ರವಾಸಿಗರೊಡನೆ ಕಾಮನಬಿಲ್ಲನ್ನೇರಿ, ಬೆಟ್ಟದ ಆ ಬದಿಯ ಹಸಿರನ್ನು ತೋರುವುದೇ ಈ ಬಗೆಯ ಗದ್ಯ ಕಾವ್ಯದ ರೋಚಕತೆಯ ಲಕ್ಷಣ!

ಜೀವಿಯವರ ‘ನಾ ಕಂಡ ಅಮೆರಿಕಾ’ ಸೂಪರ್ಬ್‌

ನಾವು ಪ್ರೊಫೆಸರ್‌ ಜಿ. ವಿ. ಕುಲಕರ್ಣಿ ಅವರ ಈ ‘ನಾ ಕಂಡ ಅಮೆರಿಕಾ’ದಲ್ಲಿ ನೋಡುವುದು ಇಂಥ ಸಮರ್ಥ ಕವಿಹೃದಯದ ಮಾತುಗಾರರೊಬ್ಬರ ವೀಕ್ಷಣಾವರದಿಯನ್ನ. ಕ್ಷಣ ಕ್ಷಣದ ಆಗುಹೋಗುಗಳ ಸುಂದರ ನಿರೂಪಣೆಯನ್ನ. ಒಂದು ಒಳ್ಳೆಯ ಸ್ಪರ್ಧಾತ್ಮಕ ಕ್ರೀಡೆ ನಡೆಯುತ್ತಿರುವಾಗ, ಮನೆಯಲ್ಲಿಯೇ ಕುಳಿತು ಅದನ್ನು ರೇಡಿಯೋದಲ್ಲೋ ಟಿ.ವಿ.ಯಲ್ಲೋ ನೋಡುತ್ತಿರುತ್ತೀರಿ- ಎಂದುಕೊಳ್ಳಿ. ಬಾನುಲಿಯ ಅಥವಾ ದೂರದರ್ಶನದ ವರದಿಗಾರರೊಬ್ಬರು ಆಟದ ಮೈದಾನದಲ್ಲಿದ್ದು, ನಿಮ್ಮೊಂದಿಗೇ ಆಟವನ್ನು ನೋಡುತ್ತಾ, ತಮ್ಮ ಕ್ಯಾಮೆರಾವನ್ನು ಆಟದ ಓಟದ ಅತ್ಯಗತ್ಯ ಕಡೆಗಳತ್ತ ಎಡೆಬಿಡದೆ ತಿರುತಿರುಗಿಸುತ್ತಾ, ಪ್ರತಿ ಚಲನವಲನಗಳನ್ನೂ ಆಯಾಯ ಕ್ಷಣದಲ್ಲೇ ಮನ ನಾಟುವಂತೆ ವಿವರಿಸಿ, ನಮ್ಮನ್ನು ಅಯಸ್ಕಾಂತದಂತೆ ಹಿಡಿದು ಕುಳ್ಳರಿಸಿರುತ್ತಾರಲ್ಲ- ಆ ಚಾತುರ್ಯ ನಮ್ಮ ಜೀ ವಿ ಅವರಿಗಿದೆ.

ಪ್ರೊಫೆಸರ್‌ ಜೀ ವಿ ಅವರ ಈ ‘ಪ್ರವಾಸ ಪೂರ್ವಕ ರೋಚಕ ಅನುಭವಗಳು’ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಜೀವನ ಮತ್ತು ಸಾಹಿತ್ಯ’ದ ಪ್ರತಿ ಸೋಮವಾರ ಬರುತ್ತಿದ್ದ ‘ಅಂಕಣ’ ಬರಹಗಳಾಗಿ ಮೊದಲು ಬೆಳಕು ಕಂಡವು; ಇದೀಗ ಒಂದು ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಪ್ರತಿವಾರವೂ ಓದುಗರ ದಾಹವನ್ನು ತಣಿಸುತ್ತಿದ್ದ ಈ ಲೇಖನಮಾಲೆ ಹೀಗೆ ಒಂದುಗೂಡಿ, ಘಮಘಮಿಸುತ್ತಿರುವುದನ್ನ ಆಸಕ್ತ ಕನ್ನಡಿಗರು ಕೊಂಡಾಡುತ್ತರೆ. ಏಕೆಂದರೆ, ಇನ್ನೊಬ್ಬ ಮೇಷ್ಟರು ನಾಗತಿಹಳ್ಳಿ ಚಂದ್ರಶೇಖರ ಅವರ ‘ಅಮೆರಿಕಾ, ಅಮೇರಿಕಾ’ ಚಲನ ಚಿತ್ರ ನೋಡಿದಾಗ ಅಗುವಂತೆ, ಕುಳಿತಲ್ಲೇ ಸುಲಭವಾಗಿಯೇ ಅಮೆರಿಕಾ ಪ್ರವಾಸ ಮಾಡಿ, ಕೆಲವಾದರೂ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಆನಂದಿಸಿ, ಬರಬಹುದು. ಮತ್ತೆ ಮತ್ತೆ ಹೋಗಿ ಬರಲೂ ಬಹುದು!

‘ಜೀ ವಿ ಕಂಡ ಈ ಅಮೆರಿಕಾ’ ಹೊತ್ತಗೆಯನ್ನು ಓದುತ್ತಾ ಹೋದಗ, ಜೀ ವಿ ಅವರು ಹೋಗಿ ನೋಡಿಬಂದ ಅಮೆರಿಕಾವನ್ನು ಅವರ ಕಣ್ಣುಗಳಲ್ಲೇ ನೀವೂ ಅನುಭವಿಸಿ ತಣಿಯಬಲ್ಲಿರಿ ಎನ್ನುವ ಮಾತಿನ ಸಲುವಾಗಿ, ನಾನಿಲ್ಲಿ ಈ ಪ್ರವಾಸ ಕಥನದ ಹೆಜ್ಜೆ ಗುರುತುಗಳನ್ನು ಸಂಗ್ರಹಿಸ ಪ್ರಯತ್ನಿಸುತ್ತೇನೆ:

ವಿದೇಶ ಪ್ರಯಾಣಕ್ಕೆ ಪರವಾನಿಗೆ (ವೀಸಾ) ಪಡೆಯಲು ಮಾಡಿಕೊಳ್ಳ ಬೇಕಾದ ಪೂರ್ವಸಿದ್ಧತೆ, ಆತಂಕ, ಬವಣೆಯಿಂದ ಪ್ರಾರಂಭವಾದ ಅವರ ಪಯಣ, ಅಪರಿಚಿತ ನೆಲದಮೇಲೆ ಇ ಟ್ಟ ಮೊದಲ ಹೆಜ್ಜೆಯ ಸಂಭ್ರಮ (ಸಂಸ್ಕೃತ ಮತ್ತು ಕನ್ನಡದ ಅರ್ಥದಲ್ಲಿ); ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಪ್ರಥಮ ಮಹಾ ಸಮ್ಮೇಳನದ ನಾಂದಿ, ಸಮ್ಮೇಳನ ಸ್ಮರಣಸಂಚಿಕೆಗಳ ಬಗ್ಗೆ ನಾಲ್ಕು ಮಾತು, ಉದ್ಘಾಟನೆ; ಎರಡನೆಯ ದಿನ ನಡೆದ ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಗಳ ಅಮೋಘ ಭಾಷಣ; ಸಮ್ಮೇಳನದಲ್ಲಿ ನಡೆದ ವಿಚಾರ ಸಂಕಿರಣಗಳು, ಮನರಂಜನಾ ಕಾರ್ಯಕ್ರಮಗಳು, ಸಮ್ಮೇಳನದ ಮೂರನೆಯ ದಿನ ವಿಶೇಷ: ದಸರಾ ಮೆರವಣಿಗೆ; ಕನ್ನಡ ಸಮ್ಮೇಳನದಲ್ಲಿ ಸಭಿಕರ ಕ್ಷಮೆ ಕೇಳಿ, ಇಂಗ್ಲೀಷಿನಲ್ಲಿ ಮಾಡಿದ, ಜ್ಞಾನಪೀಠ ಪುರಸ್ಕೃತ ಗಿರೀಶ ಕಾರ್ನಾಡರ ಇನ್ನೊಂದು ಆಕರ್ಷಕ ಭಾಷಣ; ಚಿತ್ರಬಂಧ ಕವಿತ್ವದ ಒಂದು ಉತ್ತಮ ಉದಾಹರಣೆಯಾಗಿ, ಜೀವಿ ಅವರು ಅಲ್ಲಿ ಕವಿಗೋಷ್ಠಿಯಲ್ಲಿ ಓದಿದ ‘ಪ್ರಣಯದ ಕಾಗುಣಿತ’ ಕವನ; ಅಮೆರಿಕೆಯಲ್ಲಿ ಬರೆದ ಮೊದಲ ಕವಿತೆ ‘ಅಮೆರಿಕೆಯಲ್ಲಿ ಕನ್ನಡಿಗ’; ಸಮ್ಮೇಳನದ ಮೂರನೆಯ ದಿನದ ಮನರಂಜನೆ ಮತ್ತು ಗೋಷ್ಠಿಗಳು; ಮುಕ್ತಾಯದ ಭೂರಿ ಭೋಜನ; ‘ರಾಗ’ ತಂಡದವರು ಜನರನ್ನು ಹುಚ್ಚೆಬ್ಬಿಸಿ ಕುಣಿಸಿದ್ದು; ಸ್ಮರಣ ಸಂಚಿಕೆಯ ಕವನಗಳ ಒಂದು ಸಿಂಹಾವಲೋಕನ; ಹೆಸರಿಸಬಹುದಾದ ಪದ್ಯಲೇಖನಗಳ ಒಂದು ಮಿಂಚುನೋಟ; ಸ್ಮರಣಸಂಚಿಕೆಯ ಗದ್ಯಲೇಖನಗಳು; ಸಹಸ್ರಮಾನ ವಿಶ್ವಕನ್ನಡ ಸಮ್ಮೇಳನದ ‘ದರ್ಶನ’ ಉದ್ಗ್ರಂಥದ ಒಂದು ವಿಹಂಗಮ ನೋಟ.

ಎರಡನೆಯ ಘಟ್ಟದಲ್ಲಿ...

ಇಲ್ಲಿಗೆ ಮೊದಲ ಘಟ್ಟ ಮುಗಿಯುತ್ತದೆ. ಅನಂತರ, ಸೂರ್ಯನಮಸ್ಕಾರ, ವಿಷ್ಣುಸಹಸ್ರನಾಮ ಪಾರಾಯಣದ ವಿಚಾರ, ಡಾ. ಪದ್ಮಾಕರರ ಯಶೋಗಾಥೆ; ಸಂಗೀತಾ ಕಟ್ಟಿ ಅವರ ‘ರಾಗರತಿ’ ಮತ್ತು ‘ಗಮಗಮ ಆಡಿಸಿದ ಮಲ್ಲಿಗಿ’ಯ ಕಂಪು; ಮಾಧವ ಗುಡಿಯವರ ಟ್ಯೂನಿಗೆ ಹಾಡು ಕಟ್ಟಿದ ಪ್ರಸಂಗ, ಡಲ್ಲಾಸ್‌ ಹಿಂದೂ ಮಂದಿರ ದರ್ಶನ; ಪಿಟ್ಸ್‌ಬರ್ಗ್‌ನ ವೆಂಕಟೇಶ್ವರನ ದರ್ಶನ; ‘ಯೋಗ ಶಿಬಿರ’ವಾಚನ, ಇಂಟರ್‌ನೆಟ್‌ನಲ್ಲಿ ಲೇಖಕರ ನೃಸಿಂಹ ಸ್ತುತಿ, ವಾಯುಸ್ತುತಿ, ನಯಾಗರ ವೀಕ್ಷಣೆ; ವಸಂತ ಪ್ರಭುಗಳ ವಿದ್ಯಾರ್ಥಿಜೀವನದ ರಸನಿಮಿಷಗಳು; ಅಮೆರಿಕಾದಲ್ಲಿನ ಶವಸಂಸ್ಕಾರದ ನೇರ ಪರಿಚಯ; ಯೋಗ ವರ್ಕ್‌ಷಾಪ್‌ ನ ಬಗ್ಗೆ ಬೀಜಾಂಕುರ; ನೃತ್ಯ ವಿಶಾರದೆ ರೇವತಿ ಸತ್ಯು ಅವರೊಂದಿಗೆ ಮಾತುಕತೆ; ಸುಂದರ ಟೆರಿಗ್ರಾಮ ವಿಹಾರ; ಗ್ರೀಷ್ಮದಿಂದ ಶಿಶಿರದತ್ತ ಕಾಲಚಕ್ರ ಭ್ರಮಣ, ಸರ್ವೋಚ್ಚ ಸರೋವರ ವಿಹಾರ; ಷಿಕಾಗೋದತ್ತ ಪಯಣ; ಅತಿ ಉನ್ನತ ಗಗನ ಚುಂಬಿ ಕಟ್ಟಡದ ನಿರ್ಮಾಣ ವಿವರ; ವಿದ್ಯಾರಣ್ಯ ಕನ್ನಡ ಕೂಟದಲ್ಲಿ ಕಾವ್ಯವಾಚನ; ಮಡಕೆಯಲ್ಲಿ ಕೈ ಸಿಕ್ಕುಹಾಕಿಕೊಂಡ ಮಂಗನ ಉಪಮೆ; ಪ್ರಾಗೈತಿಹಾಸಿಕ ಪ್ರಾಣಿಯ ಅಸ್ತಿಪಂಜರದ ನೋಟ; ಸ್ವಾಮಿ ವಿವೇಕಾನಂದರು ಮಾಡಿದ ವಿಶ್ವವಿಖ್ಯಾತ ಚರಿತ್ರಾರ್ಹ ಭಾಷಣದ ಜಾಗ ನೋಡಿಬಂದದ್ದು. ಇಲ್ಲಿಗೆ ಈ ಘಟ್ಟ ಮುಟ್ಟಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತೇವೆ.

ಅನಂತರ ಮೂರನೆಯ ಮಜಲು: ರಾಜಧಾನಿಯತ್ತ ಪಯಣ; ಯೋಗ ಶಿಬಿರ; ಪ್ರವಚನ; ಫಿಲಡೆಲ್ಫಿಯಾ ಪ್ರದೇಶದ ‘ಪ್ರಸ್ತಾಪ’ದಲ್ಲಿ ವಿಮಲಾ ಗಾಯನದ ಸವಿನೆನಪುಗಳು; ಗುರುನಮನ ವಾಚನ; ‘ರಾತ್ರಿರ್‌ ಏವ (ಏವಂ) ವ್ಯರಂಸೀತ್‌’ ಪ್ರಸಂಗ; ವಾಷಿಂಗಟನ್‌ ಹೊರವಲಯದಲ್ಲಿ ಓಡಾಟ; ವಿಶ್ವದ ಅತಿ ದೊಡ್ಡ ಸರಸ್ವತೀ ಭಂಡಾರಕ್ಕೆ ಕಾಲಿಟ್ಟಿದ್ದು; ಹುಟ್ಟಿದ ಹಬ್ಬ ಆಚರಿಸಿದ್ದು; ಮತ್ತೆ ಮಿನಿಯಾಪೋಲಿಸ್‌ ಅತ್ತ ಪಯಣ; ಅಜ್ಜನಾಗಿ ಕತೆ ಹೇಳಿದ್ದು; ಮತ್ತೆ ಕೂಡಿ ಬಂದ ಕೆನಡಾ ಮರು ಪ್ರಯಾಣ; ಹರ್ರಿ, ವರ್ರಿ, ಕರ್ರಿ ಮತ್ತು ಕೋಪದ ದಳ್ಳುರಿ- ಬಿಡಲು ಆಗ್ರಹ; ಧಾರವಾಡದ ವಾಮನ ಅಮೆರಿಕೆಯಲ್ಲಿ ತ್ರಿವಿಕ್ರಮನಾದ ಕತೆ; ಇಂದಿನ ದಿನವೇ ರವಿವಾರ; ಸಿಕ್ಕುವ ದಿನವೇ ಶುಭದಿನವು! ಕ್ಯಾಲಿಫೋರ್ನಿಯಾದಲ್ಲಿ ಕಳೆದ ದಿನಗಳು; ಹೈಟೆಕ್‌ ಪುರೊಹಿತರ ‘ಸತ್ಯಪೂಜೆ’; ಯೋಗ ಶಿಬಿರದಲ್ಲಿ ಇಂಗ್ಲೀಷಿನಲ್ಲಿ ಪ್ರವಚನ;

ಅನಂತ ವಿನಂತಿ: ಆದಿತ್ಯಹೃದಯ ಪ್ರವೇಶ; ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದಲ್ಲಿ ಕಿರು ಭಾಷಣ; ‘ಆದಿತ್ಯ ಹೃದಯ’ದ ಸುಂದರ ಕನ್ನಡ ಅನುವಾದ; ಧನ್ಯವಾದಾರ್ಪಣೆಯ ದಿನಾಚರಣೆ; ಮನೆ ಮನೆಯಲ್ಲಿ ಯೋಗದ ಹೊಸ ಪರಿಕಲ್ಪನೆ; ಅಪೂರ್ವ ಆತಿಥ್ಯದ ಹಿನ್ನೆಲೆಯಲ್ಲಿ ತರುಣರಿಗೆ ಯೋಗ ಕಮ್ಮಟ; ಕ್ಯಾಲಿಫೋರ್ನಿಯಾದಲ್ಲಿನ ಮಹತ್ವದ ಕಾರ್ಯಕ್ರಮಕ್ಕೆ ಮುನ್ಸೂಚನೆಗಳು; ಬೇಂದ್ರೆ ಪ್ರೇಮವನ್ನು ಪ್ರತಿಬಿಂಬಿಸಿದ ಕನ್ನಡ ಸಾಹಿತ್ಯಾಭ್ಯಾಸಿಗಳು ಜೀವಿ ಅವರಿಗೆ ನೀಡಿದ ಗೌರವ ಸಮರ್ಪಣೆ; ಇಲ್ಲಿಗೆ ಈ ಹಂತ ಮುಗಿಯುತ್ತದೆ.

ಕೊನೆಯ ಮೈಲಿಗಲ್ಲು: ‘ಹೋಗಿ ಬರಲು’ ಸಿದ್ಧತೆ; ಮರಳಬೇಕೆ ಎನ್ನಿಸುವ ಕೊರಗು; ‘ಕ್ಶೇತ್ರ, ಕ್ಷೇತ್ರಜ್ಞ’ನ ಜನನ; ಮತ್ತೆ ಹ್ಯೂಸ್ಟನ್ನಿನಲ್ಲಿ ಬಿಡುವಿರದ ಚಟುವಟಿಕೆಗಳು; ಅಮೆರಿಕದಲ್ಲಿ ಕೊನೆಯ ದಿನಗಳು; ‘ಇಲ್ಲಿದೆ ನಮ್ಮನೆ; ಹೌದು, ಅದರೆ, ಅಲ್ಲಿ ಹೋಗಿ ಬಂದದ್ದು ಸುಮ್ಮನೆ’ಯೂ ಆಗಲಿಲ್ಲ!

***

ಪ್ರವಾಸ ಕಥನವೊಂದು ನೆಪ, ತಮ್ಮ ಅನಿಸಿಕೆಗಳನ್ನು ವಾಚಕರೊಂದಿಗೆ ಹಂಚಿಕೊಳ್ಳಲು ಸಿಕ್ಕಾಗ ಬಿಡದ ಅವಕಾಶಗಳ ಸಾರ್ಥಕ ಸದುಪಯೋಗ -ಎಂದೂ ಗ್ರಂಥವನ್ನು ಪರಿಗಣಿಸಬಹುದು. ಇಲ್ಲಿ ಏನಿಲ್ಲ? ಅಮೆರಿಕಾದ ಉದಯೋನ್ಮುಖ ಕವಿಗಳ ಬರಹಗಾರರ ಪ್ರಯತ್ನಗಳ ಮೇಲೆ ಕ್ಷ-ಕಿರಣಗಳಿಲ್ಲವೇ? ಯಾಂತ್ರಿಕಜೀವನಕ್ಕೆ ಒಗ್ಗಿಯೂ, ಬಿಡುವಿನ ವೇಳೆಯನ್ನು ಬಗ್ಗಿಸಿಕೊಂಡು, ತಮ್ಮ ಹವ್ಯಾಸೀ ಕಲೆಗಳಲ್ಲಿ ತೊಡಗಿಸಿಕೊಂಡು, ಮನಸ್ಸನ್ನೆಲ್ಲ ತುಂಬಿಕೊಂಡ ಶ್ರದ್ಧೆಯ ಮೇಲೆ ಕಿರುನೋಟಗಳಿಲ್ಲವೆ? ಅಮೆರಿಕದ ನೆಲದಲ್ಲಿದ್ದಾಗಲೇ ಕವಿಹೃದಯದಿ0ದ ಹೊಮ್ಮಿದ ಪ್ರೊಫೆಸರ್‌ ಅವರ ಹೊಸ ಹೊಸ ಕವಿತೆಯ ಕಾರಂಜಿಗಳಿಲ್ಲವೇ? ‘ಅದಿತ್ಯಹೃದಯ’ದ ಸುಂದರ ಕನ್ನಡ ಪದ್ಯಾನುವಾದವಿಲ್ಲವೇ? ವೈವಿಧ್ಯತೆಯ ರಸಮಂಜರಿಯ ಏಲಕ್ಕಿ ಬಾದಾಮಿ ದ್ರಾಕ್ಷಿ ಗೋಡಂಬಿ ಕೇಸರಿಗಳು ಎಷ್ಟಿಲ್ಲ?

ಎಲ್ಲಿದ್ದರೂ ಮನಸ್ಸು ಕನ್ನಡವೇ- ಎಂಬುದನ್ನ ಕಡಲಾಚೆ ಹೋದ ಕನ್ನಡಿಗರು ತಾವು ಕಟ್ಟಿಕೊಂಡ ಸಂಘಸಂಸ್ಥೆಗಳ ಚಟುವಟಿಕೆಗಳ ಮೂಲಕ ತೋರುತ್ತಿದ್ದಾರೆ. ಇದನ್ನ ಪ್ರೊ. ಜೀ ವಿ ಅವರು ತಮ್ಮ ಪ್ರವಾಸ ಕಥನದಲ್ಲಿ ಪ್ರತಿಬಿಂಬಿಸಿದ್ದಾರೆ. ‘ಅತಿಥಿ ದೇವೋ ಭವ’ ಎಂಬ ತೈತ್ತಿರೀಯೋಪನಿಷತ್ತಿನ ಆದೇಶವನ್ನು ಅಮೆರಿಕಾದ ಕನ್ನಡಿಗರು ಹೃತ್ಪೂರ್ವಕ ಪರಿಪಾಲಿಸುತ್ತಿರುವುದನ್ನ ಪ್ರೊ. ಜೀ ವಿ ಅವರು ಇಲ್ಲಿ ಮನಗಾಣಿಸಿದ್ದಾರೆ. ಊರಿಂದ ಬಂದ ಕಲಾವಿದರನ್ನ, ಸಾಹಿತಿಗಳನ್ನ, ಗಣ್ಯರನ್ನ ತುಂಬು ಹೃದಯದಿಂದ ಬರಮಾಡಿಕೊಂಡು ಅಮೆರಿಕನ್ನಡಿಗರು ಸತ್ಕರಿಸಿರುವುದು ಎಲ್ಲ ಆಗಂತುಕರು ನೆನೆ ನೆನೆದು ಹೇಳುವ ಮಾತು. ಬಿಚ್ಚು ಮನಸ್ಸಿನಿಂದ, ಕೊಡುಗೈ ದಾನಿಗಳು ವಿದ್ವನ್ಮಣಿಗಳಿಗೆ, ಹೆಸರಾಂತ ಕಲಾವಿದರಿಗೆ ಆರ್ಥಿಕವಾಗಿ ಗೌರವ ಸಮರ್ಪಣೆ ಮಾಡಿರುವುದೂ ಬಂದವರು ಕೊಂಡಾಡುವ ಮಾತುಗಳೇ. ಎಲ್ಲಕ್ಕೂ ಮಿಗಿಲಾಗಿ, ಕನ್ನಡ ಇಲ್ಲಿ ಉಳಿಯಲು, ಬೆಳೆಯಲು ಪೋಷಕವಾದ ಹಲವು ಪರಿಕರಗಳನ್ನು ಕೈಗೂಡಿಸಿಕೊಳ್ಳುವಲ್ಲಿ ಅಮೆರಿಕನ್ನಡಿಗರು ತಾಯ್ನಾಡಿನಿಂದ ಬಂದ ಪ್ರತಿಭಾನ್ವಿತರನ್ನು ತಮ್ಮಲ್ಲಿಗೆ ಬರಮಾಡಿಕೊಂಡು, ‘ಅಲ್ಲಿ’ ನಡೆಯುತ್ತಿರುವದೆಲ್ಲವನ್ನೂ ‘ಇಲ್ಲಿ’ಯೇ ಕೇಳಿ, ನೋಡಿ, ತಿಳಿದು ಅನುಭವಿಸಲು ಮನಸಾರೆ ಪ್ರಯತ್ನಿಸುತ್ತಾರೆ.

ಕನ್ನಡ ಸಮ್ಮೇಳನದ ಕಾರ್ಯಕರ್ತರೂ ಜೀ ವಿಯವರಿಗೆ ಆಭಾರಿ

ಈ ಕಾರಣಕ್ಕೇನೇ ಟೆಕ್ಸಾಸ್‌ ರಾಜ್ಯದ ಹ್ಯೂಸ್ಟನ್‌ ನಗರದಲ್ಲಿ ಇತ್ತೀಚೆಗೆ ನಡೆದ ಸಹಸ್ರಮಾನ ವಿಶ್ವಕನ್ನಡ ಸಮ್ಮೇಳನ ಬೃಹತ್ತಿನಲ್ಲೂ, ಮಹತ್ತಿನಲ್ಲೂ ಚಿರಸ್ಮರಣೀಯವಾಗಿ ಇರುವಷ್ಟು ಯಶಸ್ವಿಯಾದದ್ದು. ಆದರೆ, ಸಮ್ಮೇಳನಕ್ಕೆ ಬಂದ ಅತಿಥಿಗಳು ಯಾರೂ ಪ್ರೊಫೆಸರ್‌ ಜೀ ವಿ ಕುಲಕರ್ಣಿಗಳಷ್ಟು ವಿವರವಾಗಿ ಸಮ್ಮೇಳನದ ಕಾರ್ಯಕ್ರಮಗಳ ಮಾಹಿತಿಯನ್ನ ತಮ್ಮ ಭಾಷಣಸರಣಿಗಳಲ್ಲಿ, ಲೇಖನಮಾಲೆಯಲ್ಲಿ, ಪುಸ್ತಕದಲ್ಲಿ ಬಣ್ಣಿಸಿರುವುದನ್ನು ನಾನು ಅರಿಯೆ. ಸಮ್ಮೇಳನದ ನಡವಳಿಕೆಗಳನ್ನು (ಪ್ರೊಸೀಡಿಂಗ್ಸ್‌) ಇಷ್ಟು ಅದ್ಭುತವಾಗಿ ಕಣ್ಣಿಗೆ ಕಟ್ಟುವಂತೆ ಅತ್ಯುತ್ತಮವಾಗಿ ನಿರೂಪಿಸಿರುವುದಕ್ಕೆ, ಈ ಪ್ರವಾಸ ಕಥನದ ಮೂಲಕ ದಾಖಲಿಸಿರುವುದಕ್ಕೆ, ಆ ಸಹಸ್ರಮಾನ ವಿಶ್ವಕನ್ನಡ ಸಮ್ಮೇಳನಕ್ಕಾಗಿ ದಿನ ನಿಶಿ ಶ್ರಮಿಸಿದ ಎಲ್ಲ ಕಾರ್ಯಕರ್ತರೂ ನಿಜಕ್ಕೂ ಆಭಾರಿಯಗಿದ್ದಾರೆ- ಎಂದರೆ ಉತ್ಪ್ರೇಕ್ಷೆಯ ಮಾತಲ್ಲ!

(ಇತ್ತೀಚೆಗೆ ಡೆಟ್ರಾಯಿಟ್‌, ಮಿಷಿಗನ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾದ, ಪ್ರೊ. ಜಿ. ವಿ. ಕುಲಕರ್ಣಿ ಅವರ ’’ಜೀ ವಿ ಕಂಡ ಅಮೆರಿಕಾ’’ ಕ್ಕೆ ನಾನು ಬರೆದ ಮುನ್ನುಡಿಯ ವಿಸ್ತೃತರೂಪ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes about Travelogues in Kannada by GV Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more