• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ‘ಪ್ರವಾಸ ಕಥನಗಳು’

By Super
|

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

Shikaripura Harihareshwara, Te Authorಹಿಂದೆ ನಾವು ಚಿಕ್ಕವರಿದ್ದಾಗ, ‘ವಿದೇಶ’ ಎನ್ನುವಾಗ, ‘ವಿಲಾಯಿತಿ’ ಎಂದು ಹೇಳುವಾಗ, ‘ಕಡಲಾಚೆ’ ಎಂದು ಸೂಚಿಸ ಬೇಕಾದಾಗಲೆಲ್ಲಾ ನಾವು ಹೆಸರಿಸುತ್ತಿದ್ದುದು ‘ರೋಂ-ಲಂಡನ್‌-ಪ್ಯಾರಿಸ್‌’ ಎಂದೇ. ಅಂದರೆ, ಯೂರೋಪ್‌ ದೇಶವೇ ನಮಗೆ ‘ಪರಂಗಿ’, ‘ಫಾರಿನ್‌’ ಆಗಿತ್ತು. ಉನ್ನತ ವ್ಯಾಸಂಗಕ್ಕೋಸ್ಕರ, ಆಗರ್ಭ ಶ್ರೀಮಂತರಲ್ಲಿ ಕೆಲವರ ಹುಸಿ ವಂಶಾಭಿಮಾನದ ನೆಪದಲ್ಲಿ ಓದಿಗೆ, ವಾಣಿಜ್ಯವ್ಯವಹಾರಕ್ಕೆ, ರಾಜಕೀಯ ಚಟುವಟಿಕೆಗಳ ನಿಮಿತ್ತ, ಪ್ರವಾಸದ ಸಲುವಾಗಿ, ಇಲ್ಲವೇ ಸುಮ್ಮನೇ ನೋಡಿ ಬರಲೆಂದೋ- ಹೀಗೆ ಅನ್ಯಾನ್ಯ ಕಾರಣಗಳಿಗೆ ‘ಸೀಮೋಲ್ಲಂಘನ’ ಮಾಡಿ ಹಿಂತಿರುಗಿ ಬಂದವರೆಂದರೆ, ಅವರು ಇಂಗ್ಲೆಂಡಿಗೋ, ಜರ್ಮನಿಗೋ, ಫ್ರಾನ್ಸ್‌ಗೋ, ಇಟಲಿಗೋ ಹೋಗಿ ಬಂದವರು, ಎಂದೇ ಅಂದುಕೊಳ್ಳುವ ಕಾಲ ಅದಾಗಿತ್ತು. ಆಮೇಲೆ, ಸುಮಾರು ಎಪ್ಪತ್ತರ ದಶಕದ ತರುವಾಯ, ‘ಅಮೆರಿಕಾ’ ಈ ‘ವಿದೇಶ’ದ ಪಟ್ಟವನ್ನು ಅಲಂಕರಿಸ ತೊಡಗಿತು!

ಕಾಲಚಕ್ರ ಉರುಳಿತು! ಇಡೀ ವಿಶ್ವವೇ ಕುಗ್ಗ ತೊಡಗಿತು. ಸಂಪರ್ಕ ಮಾಧ್ಯಮದ ಸುಗ್ಗಿ ಒದಗಿ ಬಂತು. ಏನೇನೋ ಕಾರಣಗಳಿಗಾಗಿ ಪ್ರಪಂಚ ಸುತ್ತಿ ಬರುವ ಜನರ ಸಂಖ್ಯೆ ಹಿಗ್ಗಲಾರಂಭಿಸಿತು. ಅವಕಾಶಗಳ ಅಮರಾವತಿಯೆಂದು ಬಗೆದು, ಆರ್ಥಿಕೋತ್ಸವದಲ್ಲಿ ಪಾಲುಗೊಳ್ಳಲು ಅಮೆರಿಕಾಕ್ಕೆ ಬರಲು ಬಯಸಿದವರು ಕೆಲವರಾದರೆ, ಬಗೆ ಬಗೆಯ ಸೇವೆ ಸಾಧನೆ, ಸಿದ್ಧಿಗಿದು ಅಕ್ಷಯ ಪಾತ್ರೆಯೆಂದು ಬಗೆದು ಬಂದವರು ಇನ್ನು ಕೆಲವರು. ಇಲ್ಲಿ ಸಲ್ಲದ, ಅಲ್ಲಿ ಅಂಗರಾಜ್ಯಾಭಿಷೇಕಕ್ಕೆ ಸಲ್ಲ ಬಯಸುವ ಸಮರ್ಥ ‘ಸೂತಪುತ್ರರು’, ಬಂದು ನೋಡಿ ಗೆಲ್ಲುವುದೇ ಬಾಳ ಹೆಗ್ಗುರಿಯಗಿರಿಸಿಕೊಂಡ ಕೆಲವರು ತಮ್ಮ ಜೈತ್ರಯಾತ್ರೆಗೆ ಹವಣಿಸಿದರು.

ಪ್ರವಾಸಿಗಳ ಬರಹ ಕಸೂತಿ ಜಾಣ್ಮೆ

ಅಮೆರಿಕಾ ಆಗಮಿಕರ ನಾಡಾಯಿತು. ಇದರೊಂದಿಗೆ, ಒಮ್ಮೆಯಾದರೂ ಹೋಗಿ, ನೋಡಿ ಬರುವ ಅಭೀಪ್ಸೆಯ, ಸುತ್ತಿ ಬರುವ ಹಂಬಲದವರಿಗೆ ಅಮೆರಿಕಾ ನೋಟದ ಹಸಿ ಬಿಸಿ ರಸ ದೂಟವೂ ಆಯ್ತು! ಈಗಂತೂ ‘ಮುಂಚೆಯೇ ಸಿದ್ಧತೆ ಮಾಡಿಕೊಂಡವರು ಯಾರು ಬೇಕಾದರೂ ಹೋಗಿ ಬರಬಹುದೇನೋ’ ಎನ್ನುವಷ್ಟರ ಮಟ್ಟಿಗೆ ಅಗಿಹೋಗಿದೆ; ಕರಗಿಸುವ ಕಡಾಯಿ, ಸಲಡ್‌ ಬೌಲ್‌, ಕೋಸಂಬರಿಯ ಬೋಗುಣಿ, ಬಣ್ಣ ಬಣ್ಣದ ಬಟ್ಟೆ ತುಂಡುಗಳ ರಜಾಯಿ (ಕ್ವಿಲ್ಟ್‌) -ಹೀಗೆ ಏನೇನೆಂದೋ ಕರೆಯಿಸಿಕೊಳ್ಳುತ್ತಿರುವ ಈ ಅಮೆರಿಕಕ್ಕೆ ಬೇರೆ ದೇಶಗಳವರು ಹೋಗಿ ಬರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ!

ಅಮೆರಿಕಾ ಪ್ರವಾಸ ಮಾಡಿ ಬಂದವರು, ತಾವು ನೋಡಿ ಬಂದ ಈ ಹೊಸ ತಾಣವನ್ನು ನೆನೆಯುವುದು ಬಗೆ ಬಗೆಯಲ್ಲಿ. ಅವರವರ ಉದ್ದೇಶ, ದೊರಕಿದ ಕಾಲಾವಕಾಶ, ವ್ಯವಸ್ಥೆಯನ್ನ ಯೋಜಿಸಿದವರ ಮುಂದಾಲೋಚನೆ, ಜೊತೆಗೆ ಪ್ರವಾಸಿಯಾಂದಿಗೆ ಇದ್ದು ಓಡಾಡಿದವರ ಸಮಯಾನುಕೂಲ, ಪ್ರವಾಸಿಗಳು ತಾವು ಸಂಗ್ರಹಿಸಿದ ದಿನಚರಿಯಲ್ಲಿ ಬರೆದಿಟ್ಟುಕೊಂಡ ಮಾಹಿತಿ ಅಂಕಿ ಅಂಶಗಳು, ಕುಳಿತು ಬರೆಯ ತೊಡಗಿದಾಗ ಎಳೆಗಳನ್ನು ಎಳೆದು ಕಟ್ಟಿ, ಸೇರಿಸಿ, ಕತ್ತರಿಸಿ, ಕಸೂತಿಯನ್ನು ಹೆಣೆಯುವುದರಲ್ಲಿ ತೋರುವ ಜಾಣ್ಮೆ- ಇದು ಆಯಾಯ ಬರಹಗಾರರ ಸಾಮರ್ಥ್ಯವನ್ನು ಅವಲಂಬಿಸಿರುತ್ತೆ.

ಬಿ. ಜಿ. ಎಲ್‌. ಸ್ವಾಮಿಯವರ ‘ಅಮೆರಿಕದಲ್ಲಿ ನಾನು’ (1962), ವಿ.ಕೃ.ಗೋಕಾಕರ ‘ಇಂದಿಲ್ಲ ನಾಳೆ’ (ಓರಿಯಂಟ್‌ ಲಾಂಗಮನ್ಸ್‌, 1965), ಕೃಷ್ಣಾನಂದ ಕಾಮತ ಅವರ ‘ನಾನೂ ಅಮೇರಿಕೆಗೆ ಹೋಗಿದ್ದೆ’ (ಮನೋಹರ ಗ್ರಂಥ ಮಾಲೆ, 1969), ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ಅಮೆರಿಕೆಯಲ್ಲಿ ಗೋರೂರು’, (ಐ.ಬಿ.ಎಚ್‌. ಪ್ರಕಾಶನ,1979) ಎ. ಎನ್‌. ಮೂರ್ತಿರಾಯರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’(ಶ್ರೀನಿಧಿ ಎಂಟರ್‌ಪ್ರೈಸಿಸ್‌, 1979)-ಮುಂತಾದವುಗಳು ಬಹಳ ಹಿಂದೆಯೇ ಬಂದ ಪ್ರವಾಸಕಥನಗಳು. ಅನಂತರ ಬಂದವು ರಂಜನ ಭಟ್ಟರ ‘ಕುಬೇರ ರಾಜ್ಯದ ಚಿತ್ರ-ವಿಚಿತ್ರ’ (ಗೀತಾ ಬುಕ್‌ ಹೌಸ್‌, 1983), ವೈ. ಎನ್‌. ಕೆ. ಅವರ ‘ಹೈಡ್‌ ಪಾರ್ಕ್‌’(ಬ್ರಿಟನ್‌ 1967, ಸೋವಿಯಟ್‌ ರಷ್ಯಾ ಮತ್ತು ಪೂರ್ವ ಯೂರೋಪ್‌ 1979, ಪಶ್ಚಿಮ ಜರ್ಮನಿ 1982 ಪ್ರವಾಸ ಕಥನ) (ಅಕ್ಷರ ಪ್ರಕಾಶನ, 1984), ವ್ಯಾಸರಾಯ ಬಲ್ಲಾಳರ ‘ನಾನೊಬ್ಬ ಭಾರತೀಯ ಪ್ರವಾಸಿ’(ಗೀತಾ ಬುಕ್‌ ಹೌಸ್‌, 1987), ಕೆ. ಎನ್‌. ಕೃಷ್ಣಮೂರ್ತಿರಾಯರ ‘ಅಮೆರಿಕಾ ಪ್ರವಾಸದ ಅನುಭವಗಳು’(ಸುವಿದ್ಯಾ ಪ್ರಕಾಶನ, 1988), ಜಿ.ಎಸ್‌. ಶಿವರುದ್ರಪ್ಪನವರ ‘ಅಮೆರಿಕಾದಲ್ಲಿ ಕನ್ನಡಿಗ’(ಶಾರದಾ ಪ್ರಕಾಶನ, 1988), ರಾ. ಯ. ಧಾರವಾಡಕರ್‌ ಅವರ ‘ನಾನು ಕಂಡ ಅಮೆರಿಕೆ’ (ಪವನ ಪ್ರಕಾಶನ, 1988), ರಾಜಾಮಣಿ ಸಿ.ಕೆ. ನಾಗರಾಜ ರಾವ್‌ ಅವರ ‘ಸುವರ್ಣ ಮಧುಚಂದ್ರ (ಯುರೋಪ್‌-ಕೆನಡಾ-ಅಮೆರಿಕಾ ಪ್ರವಾಸ ಕಥನ) (ಶ್ರೀಕಂಠ ಪ್ರಕಾಶನ, 1988), ಪೂರ್ಣಚಂದ್ರ ತೇಜಸ್ವಿ ಅವರ ‘ಅಲೆಮಾರಿಯ ಅಂಡಮಾನ್‌ ಹಾಗೂ ಮಹಾನದಿ ನೈಲ್‌’(ಪರಿಸರ ಸಾಹಿತ್ಯ ಪ್ರಕಾಶನ, 1990), ನಾಗತಿಹಳ್ಳಿ ಚಂದ್ರಶೇಖರರ ‘ಅಯನ-ಫ್ರಾನ್ಸ್‌ ಪ್ರವಾಸ ಕಥನ’ (ಅಭಿವ್ಯಕ್ತಿ ಪ್ರಕಾಶನ, 1991), ಪದ್ಮಾ ಗುರುರಾಜ್‌ ಅವರ ‘ಕಾಂಗರೂಗಳ ನಾಡಿನಲ್ಲಿ’(ಪ್ರಿಯಾ ಪ್ರಕಾಶನ, 1995), ಲತಾ ಗುತ್ತಿ ಅವರ ‘ನಾ ಕಂಡಂತೆ ಅರೇಬಿಯಾ’ (ನಿಸರ್ಗ ಪ್ರಕಾಶನ, 1995, 1997), ನಾಗತಿಹಳ್ಳಿ ಚಂದ್ರಶೇಖರ ಅವರ ‘ಅಮೆರಿಕಾ ಅಮೆರಿಕಾ’ (ಅಭಿವ್ಯಕ್ತಿ ಪ್ರಕಾಶನ, 1997), ಕುಲಶೇಖರಿ ಅವರ ‘ಬೊಗಸೆ ಬುತ್ತಿ’(ಚಿನ್ಮಯಿ ಪ್ರಕಾಶನ, 1997), ವನಜಾ ರಾಜನ್‌ ಅವರ ಕಣ್ಣಂಚಿನಲ್ಲಿ ಪೂರ್ವ ಪಶ್ಚಿಮ’ (ದಿವ್ಯಚಂದ್ರ ಪ್ರಕಾಶನ, 1998), ನೇಮಿಚಂದ್ರ ಅವರ ‘ಒಂದು ಕನಸಿನ ಪಯಣ’ (ಮಹಿಳಾ ಸಾಹಿತ್ಯಿಕಾ ಪ್ರಕಾಶನ, 1999), ವಿಜಯಾ ಸುಬ್ಬರಾಜ್‌ ಅವರ ‘ಸ್ವರ್ಗದ್ವೀಪದ ಕನಸಿನ ಬೆನ್ನೇರಿ’(ರಮಣ ಪ್ರಕಾಶನ, 2000), ಕೆ. ರಾಜೇಶ್ವರಿ ಗೌಡ ಅವರ ‘ಅದ್ಭುತ ಅಮೆರಿಕಾ ಮತ್ತು ಅನ್ಯ ರಾಷ್ಟ್ರಗಳಲ್ಲಿ’ (ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಕಾಶನ, 2000) - ಮುಂತಾದ ವಿದೇಶ ಪ್ರವಾಸಕಥನ ಗ್ರಂಥಗಳು ಹೊರಬಂದಿವೆ. ಇವಲ್ಲದೆ, ವಿದೇಶ ಪ್ರವಾಸ ಮಾಡಿ ಹೋದ ನಂತರ, ಆದೇಶದ ಬಗ್ಗೆಯೇ ಚರಿತ್ರೆಯನ್ನು ವಿವರವಾಗಿ ಬರೆದ ಪುಸ್ತಕಗಳೂ ಇವೆ; ಉದಾಹರಣೆಗೆ, ಅಮೆರಿಕಾ ಸಂಯುಕ್ತ ರಾಷ್ಟ್ರದ ಸಂಕ್ಷಿಪ್ತ ಇತಿಹಾಸವೆನ್ನಿಸುವ, ಅಜ್ಜಂಪುರ ಕೃಷ್ಣಸ್ವಾಮಿ ಅವರ ‘ಆಗಮಿಕರ ನಾಡು’ (ಸ್ವರ್ಣಾಂಬಾ ಪ್ರಕಾಶನ, 1995) ಮಾಹಿತಿಯ ಉತ್ತಮ ಆಕರ ಗ್ರಂಥ. ಮೇಲೆ ಹೇಳಿದ ಎಲ್ಲಾ ಗ್ರಂಥಗಳೂ ನನ್ನ ಬಳಿ ಇವೆ; ಅವುಗಳನ್ನು ಓದಿ ಸಂತೋಷಿಸಿದ್ದೇನೆ.

***

ಇವಲ್ಲದೆ ಇನ್ನೂ ಕೆಲವು ಗಮನಾರ್ಹ ಕೃತಿಗಳಿವೆ: ಎಚ್‌.ಎಲ್‌.ನಾಗೇಗೌಡ ಅವರಾ ‘ನಾ ಕಂಡ ಪ್ರಪಂಚ’ (ಸಾಹಿತ್ಯಸದನ ಪ್ರಕಾಶನ,1986), ನಾಗೇಶ ಹೆಗಡೆಯವರ ‘ಗಗನ ಸಖಿಯರ ಸೆರಗ ಹಿಡಿದು...’ (ಇಳಾ ಪ್ರಕಾಶನ, 1996), ಎಂ. ಗೋಪಾಲ ಕೃಷ್ಣ ಶ್ಯಾನುಭಾಗ ಅವರ ‘ಅಮೇರಿಕಾ ಅನುಭವಗಳು’ (ಕನ್ನಡ ಪ್ರಪಂಚ ಪ್ರಕಾಶನ, 1999).

ಲತಾ ಗುತ್ತಿ ಅವರ ’’ ‘‘ನಾ ಕಂಡಂತೆ ಅರೇಬಿಯಾ’’ ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ತರಗತಿ ಪಠ್ಯ ಪುಸ್ತಕವಾಗಿ 1997 ರಲ್ಲಿ ಆಯ್ಕೆ ಮಾಡಿಕೊಂಡಿದ್ದರು. ಅವರೇ ಬರೆದ ‘‘ಯೂರೋ ನಾಡಿನಲ್ಲಿ’’ (ಪ್ರವಾಸ ಕಥನ, ನಿಸರ್ಗ ಪ್ರಕಾಶನ?, 1993; ಪ್ರಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಇದನ್ನು ಮೆಚ್ಚಿಕೊಂಡು ‘ಪ್ರಜಾವಾಣಿ’ಯಲ್ಲಿ ಅಕ್ಟೋಬರ 6, 1996ರಲ್ಲಿ ಲೇಖನವೊಂದನ್ನು ಬರೆದಿದ್ದಾರೆ.)

***

ಪ್ರವಾಸ ಕಥನಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ, ನೋಡಿ:

ಪ್ರೊಫೆಸರ್‌ ವಿ. ಕೃ. ಗೋಕಾಕರ ‘ಸಮುದ್ರದಾಚೆಯಿಂದ’ (1936-37): ಗೋಕಾಕರು ಇಂಗ್ಲೆಂಡಿಗೆ ಹೋದಾಗ ತಮ್ಮ ಪತ್ನಿ ಮತ್ತು ಸ್ನೇಹಿತರಿಗೆ ಬರೆದ ಪತ್ರಗಳ ಸಂಕಲನ - ಇದೂ ಪ್ರವಾಸ ಕಥನವೇ. ಹಾಗೆಯೇ, ಗೋಕಾಕರ ಇನ್ನೊಂದು ‘ಇಂದಲ್ಲ ನಾಳೆ’ ಎಂಬುದೂ ಅಮೆರಿಕೆಯ ಗಡಿಬಿಡಿಯ ಬದುಕನ್ನು ಕಾವ್ಯಮಯವಾಗಿ ಚಿತ್ರಿಸಿರುವ ಪ್ರವಾಸ ಕಥನವೇ. ಗೋಕಾಕರ ‘ಸಮುದ್ರದೀಚೆಯಿಂದ’ (1957) ಪುಸ್ತಕ ಅವರು ಪಿ. ಇ. ಎನ್‌ ಸಮ್ಮೇಳನಕ್ಕಾಗಿ ಜಪಾನಿಗೆ ಹೋದಾಗ ಅವರ ಅನುಭವಗಳ ಕಥನ.

ಚತುಷ್ಪದಿಗಳ ಚುಟುಕಗಳಿಂದ ಖ್ಯಾತರಾದ ದಿನಕರ ದೇಸಾಯಿ ಅವರ ‘ನಾ ಕಂಡ ಪಡುವಣ’ (ಮನೋಹರಗ್ರಂಥಮಾಲೆ, ಮೂರನೆಯ ಸಂಪುಟ ವರ್ಷ?) ಅವರು ಅಂತರ ರಾಷ್ಟ್ರೀಯ ಶ್ರಮಿಕರ ಪರಿಷತ್ತಿನಲ್ಲಿ ಭಾಗವಹಿಸಲು ಭಾರತದ ಪ್ರತಿನಿಧಿಯಾಗಿ ಹೋಗಿ ಬಂದಾಗ ಬರೆದ ಪ್ರವಾಸ ಕಥನ.

ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ಬಂದಿದ್ದ ಡಾ. ಕೃಷಾನಂದ ಕಾಮತರ ‘ನಾನೂ ಅಮೆರಿಕೆಗೆ ಹೋಗಿದ್ದೆ’ ಮನೋಹರ ಗ್ರಂಥಮಾಲೆಯ ಪುಟಬಂಗಾರದ ನಾಲ್ಕನೆಯ ಸಂಪುಟದಲ್ಲಿ (1987, ಪುಟ 307-408) ಪುನ: ಪ್ರಕಟವಾಗಿದೆ.

ಯೂರೋಪಿನ ತಮ್ಮ ಪ್ರವಾಸ ಕುರಿತು ಜನಪ್ರಿಯ ನಾಟಕಕಾರ ಶ್ರೀರಂಗರು ಬರೆದ ‘ಶ್ರೀರಂಗ ಯಾತ್ರೆ’ (ವರ್ಷ?) ಸೊಗಸಾಗಿದೆಯೆಂದು ಕೇಳಿದ್ದೇನೆ.

ಬೇರೆ ಬೇರೆ ರೂಪದಲ್ಲಿ ಪ್ರವಾಸ ಕಥೆಗಳು

ಬರೆದ ಓಲೆಗಳೇ ಪ್ರವಾಸಕಥನದ ಹೊತ್ತಗೆಯಾಗಬಹುದು: ನವರತ್ನರಾಂ ಅವರು, ಕಾದಂಬರಿಕಾರ್ತಿಗೇ ಇರಬೇಕು, ಬರೆದ ‘ಪ್ಯಾರಿಸ್ಸಿನಿಂದ ಪ್ರೇಯಸಿಗೆ’ (ವರ್ಷ?), ಫ್ರಾನ್ಸ್‌ ದೇಶದ ಸ್ವಚ್ಛಂದ ಪ್ರೇಮದ ಇಣುಕುನೋಟದ ಪ್ರವಾಸ ಕಥನವಿದೆ; ಚಿಂತಕರಾದ ಕೆ. ಅರ್‌ ಕಾರಂತರು ಬರೆದ ‘ಪ್ರವಾಸಿಯ ಪತ್ರಗಳು’ (1951) ಅವರ ಯುರೋಪಿನ ರಾಜಕೀಯ ಮತ್ತು ಪ್ರಜಾಪ್ರಭುತ್ವ ಬಗ್ಗೆ ಚಿಂತನೆ ಇದೆ. ಖ್ಯಾತ ಪತ್ರಿಕೋದ್ಯಮಿ ಪ್ರೊ. ನಾಡಿಗ ಕೃಷ್ಣಮೂರ್ತಿ ಅವರ ‘ಸಾಗರದಾಚೆ’ ಮತ್ತು ‘ನಮ್ಮ ಕಾಗದಗಳು’ (ವರ್ಷ?) ತಮ್ಮ ಅಮೆರಿಕಾ ಪ್ರವಾಸದಲ್ಲಿ ಪತ್ರಿಕೋದ್ಯಮವನ್ನು ವಿಷಯವಾಗಿಟ್ಟುಕೊಂಡು ಬರೆದ ಗ್ರಂಥಗಳು. ಎಂ. ವೀರಪ್ಪನವರು ‘ಸಯಾನರಾ ಜಪಾನ್‌’ (ವರ್ಷ?) ಪತ್ರರೂಪದಲ್ಲಿ ಅವರ ಜಪಾನೀ ಪ್ರವಾಸದ ಪತ್ರಾಕಾರದ ಬಣ್ಣನೆ. ಲೂಯಿಸ್‌ ಅವರ ‘ಕೊಲಂಬಿಯಾ ಯತ್ರೆ’ (ವರ್ಷ?) ತಮ್ಮ ಸ್ನೇಹಿತನಿಗೆ ಅಮೆರಿಕಾದಿಂದ ಬರೆದ ಹತ್ತೊಂಬತ್ತು ಕಾಗದಗಳ ಕಟ್ಟು. ಪ್ರೊ. ದೇ ಜವರೇ ಗೌಡರು ತಮ್ಮ ಪ್ರವಾಸಕಾಲದಲ್ಲೇ (1970 ಅಕ್ಟೋಬರ್‌-ನವಂಬರ್‌) ಬರೆದ ಆಸ್ಟ್ರಿಯಾ, ಜರ್ಮನಿ, ರಷ್ಯಾ ಪ್ರವಾಸ ಕಥನ ‘ವಿದೇಶಗಳಲ್ಲಿ ನಾಲ್ಕು ವಾರ’.

ಮುಂದಿನ ಪುಟಕ್ಕೆ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes about Travelogues in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more