ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬೆಳಕು ಮಸುಕಾಗುತ್ತದೆ. ಮತ್ತೆ ಪ್ರಯತ್ನ ಸಾಗುತ್ತದೆ’

By Super
|
Google Oneindia Kannada News

ಗಾಂಧೀ ವಿಚಾರದ ಪ್ರಸ್ತುತತೆ ಕುರಿತ ಈ ಪ್ರಶ್ನೆಯನ್ನು ಅಡಿಗಡಿಗೆ ಕೇಳುತ್ತೇನೆ. ಅನೇಕ ಹಿರಿಯರು ಉತ್ತರವಿತ್ತಿದ್ದಾರೆ. ಎಲ್ಲರದೂ ಒಂದೇ ದನಿ; ಈ ವಿಚಾರ ಇಂದಿಗೂ, ಎಂದಿಗೂ ಬೇಕು. '3-4 ದಿನಗಳ ಹಿಂದೆ ರೇಡಿಯಾದಲ್ಲಿ ಒಂದು ಚರ್ಚೆ ಕೇಳಿದೆ. ಇಸ್ರೇಲ್‌- ಪ್ಯಾಲೆಸೆ ್ತೈನ್‌ ಘರ್ಷಣೆ ಬಗ್ಗೆ ಚರ್ಚೆ. ಚರ್ಚೆಯ ನಡುವೆ ಒಬ್ಬರು ಗಾಂಧಿ ಮಾರ್ಗವನ್ನು ಏಕೆ ಪ್ರಯತ್ನಿಸಬಾರದು ಎಂದು ಕೇಳಿದರು'. ದಿನವೂ ಹಿಂಸೆ, ಸಾವು, ರಕ್ತಪಾತ ಅಲ್ಲಿ ನಡೆದೇ ಇದೆ. ಜನ ಮಾತ್ರ ಶಾಂತಿಗಾಗಿ ನೆಮ್ಮದಿಗಾಗಿ ಹಂಬಲಿಸುತ್ತಲೇ ಇದ್ದಾರೆ. ಎಲ್ಲರೂ ಶಾಂತಿ ಬಯಸುತ್ತಾರೆ. ದಿನವೂ ಹಿಂಸೆ ನಡೆದಿದೆ ಎಂದಾಕ್ಷಣ ಹಿಂಸೆ ಸರಿ, ಶಾಂತಿ ಅನಗತ್ಯ ಎನ್ನಬಹುದೇನು ? ಇವತ್ತು ಶಾಂತಿ ಸಾಧ್ಯವಾಗಿಲ್ಲದಿರಬಹುದು. ಹಾಗೆಂದು ಶಾಂತಿಯೇ ಬೇಡ ಎನ್ನುವುದೆ ? ಅದೇ ರೀತಿ ಸತ್ಯ ಹಾಗೂ ಪ್ರೀತಿ (ಅಥವಾ ಅಹಿಂಸೆ). ಎಲ್ಲಿಯವರೆಗೆ ಮಾನವ ಜೀವನಕ್ಕೆ ಸತ್ಯ, ಶಾಂತಿ, ಪ್ರೀತಿ, ಸೌಹಾರ್ದತೆ, ಶಿಸ್ತು, ಸಂಯಮ, ಇವುಗಳ ಅಗತ್ಯ ಇರುವುದೋ, ಎಲ್ಲಿಯವರೆಗೆ ಮಾನವ ದಾನವ ಕೃತ್ಯವನ್ನು ಬಿಟ್ಟು ಮಾನವೀಯತೆಯತ್ತ ನಡೆಯವ ಹಂಬಲ ಇಟ್ಟುಕೊಂಡಿರುವನೋ, ಅದಕ್ಕಾಗಿ ಪ್ರಯತ್ನಿಸುವನೋ- ಅಲ್ಲಿಯವರೆ ಈ ತತ್ವಗಳ ಮೌಲ್ಯಗಳು ಪ್ರಸ್ತುತವೇ. ಅವುಗಳ ಕಾಲ ಮೀರುವುದಿಲ್ಲ. ಈ ತತ್ತ್ವಗಳ ಮೊತ್ತವೇ ಗಾಂಧಿ. ಈ ತತ್ವಗಳು ಬೇಡ ಎಂದರೆ ಮಾನವನಿಗೆ ಮಾನವೀಯತೆ ಬೇಡ ಎಂದರ್ಥ. ಆಗ ಗಾಂಧಿಯೂ ಬೇಡ, ಯಾವ ಮೌಲ್ಯಗಳೂ ಬೇಡ ಎಂದಾಗುತ್ತದೆ. ಅಮೆರಿಕಾದ ನೀಗ್ರೋ ಜನ we shall overcome, somebody ಎಂದು ಹಾಡುತ್ತ ಸತ್ಯಾಗ್ರಹ ಮಾಡಿದರು. ಅದರ ಹೆಸರು Negro Spiritual, ಮಾರ್ಟಿನ್‌ ಲೂಥರ್‌ ಕೆಂಪ್‌ ಅಹಿಂಸೆಯನ್ನು ಹಿಡಿದು ನಡೆದ. ವರ್ಣ ದ್ವೇಷದ ಕಳಂಕ ಹೋಗಲಾರಂಭಿಸಿತು. ಇಂದಲ್ಲ ನಾಳೆ ಬೆಳಕು ಕಾಣಬಹುದು. ಈ ಭರವಸೆ ತಾನೇ ಬದುಕಿನ ಚುಕ್ಕಾಣಿ ! ಗೋಪಾಲ ಕೃಷ್ಣ ಅಡಿಗರ ಪದ್ಯ 'ಮಹಾತ್ಮ' ಹೀಗೆ ಕೊನೆಗೊಳ್ಳುತ್ತದೆ- 'ಅವನ ದಾರಿಯಾಂದೆ ದಾರಿ, ಉಳಿದುದೆಲ್ಲ ವಿಫಲ ಚಪಲವು'. ಗಾಂಧೀಜಿ ಕೆಲವು ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿದರು. ಆ ಮೌಲ್ಯಗಳು ಎಲ್ಲಿಯವರೆಗೆ ಬೇಕೋ ಅಲ್ಲಿಯವರೆಗೂ ಗಾಂಧೀ ಪ್ರಸ್ತುತ. ಎಲ್ಲ ಸಾಧು ಸಂತರೂ ಪ್ರಸ್ತುತ. 'ಇನ್ನೊಬ್ಬ ಮಹಾತ್ಮ ಹುಟ್ಟಿ ಬಂದರೂ ಭಾರತದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಾಮಾಜಿಕ ಕೆಡುಕುಗಳನ್ನು ತೊಡೆದು ಹಾಕುವುದು ಸಾಧ್ಯವಿಲ್ಲ' ಎಂದು ಕೆಲವು ಸಮಾಜ ಶಾಸ್ತ್ರಜ್ಞರು ಹೇಳುತ್ತಾರೆ. ನಮ್ಮ ಆತಂಕವೂ ಇದೇ. ನಿಮಗೆ ಏನನ್ನಿಸುತ್ತದೆ? - ನಿಜ, ನಮ್ಮ ಸುತ್ತಲ ಪರಿಸ್ಥಿಯನ್ನು ನೋಡಿದರೆ, ಇಂಥ ನಿರಾಸೆಯ ಮಾತು ಆಡುವುದು, ಕೇಳುವುದು ಸಹಜವೇ. ಆದರೆ ಸಾಮಾನ್ಯ ಜನ ಹೀಗೆ ಹೇಳಿದರೆ ಅರ್ಥವಾಗುತ್ತದೆ. ಶಾಸ್ತ್ರಜ್ಞರು ಹೇಳಿದಾಗ ಇದೇನಪ್ಪಾ ಎನಿಸುತ್ತದೆ. 'ಗೆಲುವು ಕಾಂಬರ ಸೊಲ್ಲು, ಸೋಲು ಹುಂಬರ ಗುಲ್ಲು' ಎನ್ನುತ್ತಾರೆ ಬೇಂದ್ರೆ. ದಿನದಿನದ ಕ್ಲೇಶ, ಹುಂಬತನ, ನೀಚತನ ಏನೇ ಇದ್ದರೂ ಇವೆಲ್ಲ 'ಬೀಸುವ ಬಯಲ್‌ಗಾಳಿ, ಪರಿದಡಂಗುವ ನೆಳಲ್‌' ಎಂದು ಭಾವಿಸಿ ದೂರದ ದಡದತ್ತ ನೋಡಿ ಆಸೆಯ ಕುಡಿಯನ್ನು ಮೀಟಿ ಜನತೆಗೆ ಒಂದು ಭರವಸೆಯ ಬೆಂಬಲವೀಯುವುದು ಅಗತ್ಯ. ಭಾರತದಲ್ಲಿ ಅನೇಕ ದುಷ್ಟಪದ್ಧತಿ ಇದೆ, ನಿಜ. ಉದಾಹರಣೆಗೆ ಅಸ್ಪೃಶ್ಯತೆ. ಈಗ ಅದು ಬೆಳೆಯುತ್ತಿಲ್ಲ. ಸಾವಿರಾರು ವರ್ಷಗಳಿಂದ ಬೇರುಬಿಟ್ಟ ಕೆಡುಕು 40- 50 ವರ್ಷಗಳಲ್ಲೇ ಮಾಯವಾಗಬೇಕು ಎಂದರೆ ಅದು ಅಸಂಭವ. ಜಾತಿ ದ್ವೇಷ , ಅನೈತಿಕತೆ, ಭ್ರಷ್ಟಾಚಾರ, ಹಿಂಸಾ ಪ್ರವೃತ್ತಿ , ದುರಾಸೆ, ಕಾಮಕ್ರೋಧ ಎಲ್ಲವೂ ಇವೆ, ನಿಜ. ಆದರೆ ಎಷ್ಟೋ ಕೆಡಕುಗಳು ಕಡಿಮೆ ಆಗಿರುವುದೂ ನಿಜ. ಉದಾಹರಣೆಗೆ- ಬಾಲ್ಯವಿವಾಹ, ಸಹಗಮನ ಇತ್ಯಾದಿ. ಯಾರೊ ಒಬ್ಬ ಮಹಾತ್ಮ ಹುಟ್ಟಿ ಎಲ್ಲವನ್ನೂ ಸರಿ ಮಾಡುತ್ತಾನೆ ಎಂದು ಹೇಳುವಂತಿಲ್ಲ. ಮಹಾತ್ಮರು ಬರುತ್ತಾರೆ. ದೀಪ ಉಜ್ವಲಗೊಳಿಸುತ್ತಾರೆ. ಮತ್ತೆ ಬೆಳಕು ಮಸುಕಾಗುತ್ತದೆ. ಮತ್ತೆ ಪ್ರಯತ್ನ. ಸಿಸಿಫಸ್‌ನ ಬಂಡೆ ಕತೆ ಕೇಳಿಲ್ಲವೇ! ಅಸಾಧ್ಯವಾದುದನ್ನು ಸಾಧ್ಯವಾಗಿಸುವವರೇ ಮಹಾತ್ಮರಲ್ಲವೇ ? ನಿಮ್ಮ ಅಭಿಪ್ರಾಯದಲ್ಲಿ ಬೇರೆ ರೀತಿಯವರು ಎನಿಸಬಹುದಾದ ಆಧುನಿಕ ಸಾಮಾಜಿಕ ಗುರುಗಳು ಯಾರು ? - ಇವೊತ್ತು ಹಾಗೆ ಬೇರೆ ರೀತಿಯವರು ಎಂದು ಹೇಳಬಹುದಾದ ಗುರು ಯಾರೂ ಕಾಣುತ್ತಿಲ್ಲ. 19ನೇ ಶತಮಾನದಲ್ಲಿ ಗಾಂಧಿ ಕಾಣಿಸಿಕೊಂಡಿದ್ದರು. ಅವರ ಪಥವನ್ನು ವಿನೋಬಾ ಮುಂದುವರೆಸಿದರು. ಅವರಿಗೂ ಸ್ವಲ್ಪ ಹಿಂದೆ ಸ್ವಾಮಿ ವಿವೇಕಾನಂದರು ಬಂದರು. ಅಂಥ ವಿಶಿಷ್ಟ ರೀತಿಯ ಗುರು ಮತ್ತೆ ಯಾರೂ ಕಾಣಿಸುತ್ತಿಲ್ಲ. ವಿವೇಕಾನಂದ, ಗಾಂಧಿ, ವಿನೋಬಾ ರೀತಿಯಲ್ಲಿ ಯಾರಾದರೂ ಗುರು ಮೂಡಿ ಬಂದರೆ ಸಮಸ್ಯೆಗಳು ಬಗೆಹರಿಯಬಹುದೇನೋ ಎನಿಸುತ್ತದೆ. ಸದ್ಯದಲ್ಲಿ ಇದ್ದುದರಲ್ಲಿ ರಾಮಕೃಷ್ಣ ಮಿಶನ್‌ ಸ್ವಲ್ಪ ಮಟ್ಟಿಗೆ ಗುರುಸ್ಥಾನದಲ್ಲಿದೆ ಎನ್ನಬಹುದು. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ, ಚಕ್ಷುರುನ್ಮೀಲಿತಂ ಏನ ತಸ್ಮೈ ಶ್ರೀ ಗುರವೇ ನಮಃ. ಜ್ಞಾನದ ಅಂಜನ ಹಚ್ಚಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವಂಥ ಗುರು ಈಗ ಎಲ್ಲಿದ್ದಾರೆ? ಪಶ್ಚಿಮದಿಂದ ನಾವು ಕಲಿತು ಅಳವಡಿಸಿಕೊಳ್ಳಬಹುದಾದುದು ಯಾವುದು ? - ಕಾಲ ಕ್ಲುಪ್ತತೆ, ಸಾಮಾಜಿಕ ಶಿಸ್ತು, ಸಾಮಾಜಿಕ ಪ್ರಾಮಾಣಿಕತೆ, ಕರ್ಮ ನಿಷ್ಠೆ ಶ್ರಮ ಗೌರವ ಇವು ಕಲಿಯಬಹುದಾದವು ಮಾತ್ರವಲ್ಲ , ಕಲಿಯಬೇಕಾದವು. ನೀವು 'ಗುರು ಎನಿಸಿದ' ಶ್ರೀ ಸಿದ್ಧವನ ಹಳ್ಳಿ ಕೃಷ್ಣ ಶರ್ಮರ ಜೀವನಚರಿತ್ರೆ ಬರೆದಿದ್ದೀರಿ. ಆ 'ವ್ಯಕ್ತಿ ಶಕ್ತಿ' ನಿಮಗೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದುಕೊಟ್ಟರು. ಗಾಂಧಿ ಚಳವಳಿಯಲ್ಲಿ ನಿಮಗೆ ಅವರ ಸಂಪರ್ಕ ಉಂಟಾದದ್ದು ಹೇಗೆ ? ನಿಮ್ಮ ಮೇಲೆ ತುಂಬ ಪ್ರಭಾವ ಬೀರಿದ ಘಟನೆ ಯಾವುದು ನೆನಪಿಗೆ ಬರುತ್ತದೆ? - ನನಗೆ ಶರ್ಮಾಜಿಯವರ ಸಂಪರ್ಕ ವ್ಯಕ್ತಿಶಃ ದೊರಕಿದ್ದು ಗಾಂಧಿ ಸಾಹಿತ್ಯ ಸಂಘದ ಮೂಲಕವೇ. 1947- 48ರಲ್ಲಿ ದೇಶಪ್ರೇಮದ ಬಿರುಗಾಳಿ ಇತ್ತು. ಹುಡುಗರಾಗಿದ್ದ ನಮ್ಮನ್ನು ಆ ಗಾಳಿ ಎಳೆದುಕೊಂಡು ಹೋಯಿತು. 1948ರ ಗಾಂಧಿ ನಿರ್ಯಾಣ ನಮ್ಮನ್ನು ಸಂಘದ ಬಳಿಗೆ ಒಯ್ದಿತು. ಅಲ್ಲಿನ ವಾರ ವಾರದ ಪ್ರಾರ್ಥನಾ ಸಭೆಗಳು, ಸೂತ್ರಯಜ್ಞ, ಉಪನ್ಯಾಸಗಳು, ಪುಸ್ತಕ ಭಂಡಾರ- ಅನೇಕ ಯುವಕರ ಹಾಗೆಯೆ ನಾನೂ ಅವುಗಳಲ್ಲಿ ತೊಡಗಿದೆ. ಪುಣ್ಯವಶಾತ್‌ ಅಲ್ಲೇ ಉಳಿದುಕೊಂಡೆ. ಎಷ್ಟೋ ಗೆಳೆಯರು ಕಾಲ ಕಾಲಕ್ಕೆ ಬೇರೆ ಬೇರೆ ದಾರಿ ಹಿಡಿದರು. ಶರ್ಮಾಜೀ ವ್ಯಕ್ತಿತ್ವ ನನ್ನನ್ನು ಹಿಡಿದು ನಿಲ್ಲಿಸಿತು. 1948ರಲ್ಲಿ ನಮ್ಮ ಪ್ರೌಢಶಾಲೆಯಲ್ಲಿ ಗಾಂಧೀಜಿ ಭಾವಚಿತ್ರ ಅನಾವರಣ ನಡೆಯಿತು. ಆಗ ಒಂದು ಪ್ರಬಂಧ ಸ್ಪರ್ಧೆ . ಅದರಲ್ಲಿ ಬಹುಮಾನವಾಗಿ ನನಗೆ 'ಪರ್ಣಕುಟಿ' ಬಂತು. ಮೊದಲೇ ರಾಷ್ಟ್ರೀಯ ಭಾವನೆಯಿಂದ ನೆನೆದಿದ್ದ ನನ್ನ ಮನಸ್ಸಿನಲ್ಲಿ ಪರ್ಣಕುಟಿ ಗಾಂಧಿ ವಿಚಾರವನ್ನು ಬಿತ್ತಿತು. ಆ ಪುಸ್ತಕದ ಕರ್ತೃ ಶರ್ಮಾಜಿ ನಮಗೆ ಸಮೀಪದವರಾಗಿ ದೊರೆತದ್ದು, ಆ ವಿಚಾರಕ್ಕೆ ಪೋಷಣೆಯಿತ್ತಿತು. ಶರ್ಮಾಜಿಯವರಲ್ಲಿ ನಾವು ಗಾಂಧೀಜಿಯ ಒಂದು ಸಂಕ್ಷಿಪ್ತ ದರ್ಶನವನ್ನೇ ಕಂಡೆವು. ನನ್ನ ಮೇಲೆ ಪ್ರಭಾವ ಬೀರಿದ ಘಟನೆ - ಈ ನಿಟ್ಟಿನಲ್ಲಿ ಯಾವುದನ್ನೂ ಬೊಟ್ಟು ಮಾಡಿ ಹೇಳಲಾರೆ. ದಿನದಿನದ ಸಂಪರ್ಕ, ವ್ಯಕ್ತಿ ಸಂಪರ್ಕ- ವಿಚಾರ ಸಂಪರ್ಕ, ಕೆಲಸ, ಅನುಭವ ಎಲ್ಲದರ cumulative ಪ್ರಭಾವ ಆಯಿತು. ಈ ಬೆಳವಣಿಗೆ ಇಂದಿಗೂ ನಡೆದೇ ಇದೆ. ನೀವು ಬರೆದಿರುವ ಪುಸ್ತಕಗಳಲ್ಲಿ ನಿಮಗೆ ಹೆಚ್ಚು ಪ್ರಿಯವಾದುದು ಯಾವುದು ? - ಬಹುಪಾಲು ಎಲ್ಲವೂ. ವಿಶೇಷವಾಗಿ 'ವ್ಯಕ್ತಿ ಶಕ್ತಿ'. ಕಾರಣ ಅದು ನಮ್ಮ ಗುರು ಕೃಷ್ಣ ಶರ್ಮಾಜಿ ಬಗ್ಗೆ ಬರೆದಿದ್ದು. ಅದರ ಹಿಂದೆ ಸಾಕಷ್ಟು ಅನುಭವ, ಶ್ರಮ, ಚಿಂತನೆ, ಭಾವನೆ ಇವೆ. ಶ್ರದ್ಧೆಯೇ ಅದರ ಬಂಡವಾಳ. ಮಹಾತ್ಮ ಗಾಂಧಿಯವರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದೀರಿ. ಆ ಕೃತಿಗಳು ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಆ ಕೆಲಸ ಮಾಡುವಾಗ ಕರ್ನಾಟಕದ ಜನರಿಗೆಲ್ಲ ಮಹಾತ್ಮರ ಚೈತನ್ಯದ ಸ್ಪರ್ಶವನ್ನು ದೊರಕಿಸಿಕೊಟ್ಟಿರಿ ಎಂಬುದು ಗೊತ್ತಿದೆಯೇ ? ಈ ಬಗ್ಗೆ ವಿಚಾರವೇನು ? - ಮೊದಲನೆಯದಾಗಿ, ಗಾಂಧೀ ಸಾಹಿತ್ಯ ಅನುವಾದ ಮಾಡಿರುವುದು ನಾನೊಬ್ಬನೇ ಅಲ್ಲ. ಈಗ 70-80 ವರ್ಷಗಳಿಂದಲೂ ಅನೇಕ ಹಿರಿಯರು ಆ ಕೆಲಸ ಮಾಡಿದ್ದಾರೆ. ಶ್ರೇಷ್ಠ ಉದಾಹರಣೆ ನಮ್ಮ ಕೃಷ್ಣ ಶರ್ಮರು. ಆ ಅನುವಾದಕರ ಸಾಲಿನಲ್ಲಿ ನಾನು ಈಗ ಕೊನೆಯಲ್ಲಿ ಸೇರಿದ್ದೇನೆ ಅಷ್ಟೆ. ಕರ್ನಾಟಕದ ಜನತೆಗೆ ಗಾಂಧಿ ಸ್ಪರ್ಶ ಮಾಡಿದ ಆದ್ಯರು ಹರ್ಡೀಕರ್‌ ಮಂಜಪ್ಪ, ದಿವಾಕರ್‌, ದ.ಕೃ. ಭಾರಧ್ವಾಜ, ಕೃಷ್ಣ ಶರ್ಮಾಜಿ, ತಿ. ತಾ. ಶರ್ಮಾ, ಕೆ. ಎಸ್‌. ನಾರಾಯಣ ಸ್ವಾಮಿ, ಕೆ. ವಿ. ಶಂಕರಗೌಡ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ನ. ಭದ್ರಯ್ಯ- ಇನ್ನೂ ಹಲವಾರು ಹಿರಿಯರು. ಈಗ ಬೆಂಗಳೂರು ಭಾರತೀಯ ವಿದ್ಯಾಭವನ, ಗಾಂಧೀಜಿಯವರ ಸಮಗ್ರ ಸಾಹಿತ್ಯದ 100 ಬೃಹತ್‌ ಸಂಪುಟಗಳ ಅನುವಾದ ಕಾರ್ಯ ಕೈಗೊಂಡಿದೆ. ಅದರಲ್ಲಿ ನನ್ನದೂ ಕೈಂಕರ್ಯ ನಡೆದಿದೆ ಅಷ್ಟೆ. ಪೋಣಿಸಿದ ಮಣಿಗಣದಲ್ಲಿ ನಾನೊಂದು ಸಣ್ಣ ಹರಳು ಅಷ್ಟೆ. ನೀವು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದಾಗ ನಿಮ್ಮ ಕುಟುಂಬದವರು ಬಹು ಕ್ಲೇಶ ಅನುಭವಿಸಿರಬಹುದು. ಅದರ ಬಗ್ಗೆ ಏನಾದರೂ ಹೇಳಬಯಸುವಿರಾ ? - ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದು ತುಂಬಾ ಕಡಿಮೆ. ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಮುಷ್ಕರ, ಮೆರವಣಿಗೆ ಮಾಡುವ ವಿದ್ಯಾರ್ಥಿಗಳ ಗುಂಪಿಗೆ ಸೇರಿದ್ದೆ. 1947ರಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ ಮೈಸೂರಿನ ಪ್ರಜಾಪ್ರಭುತ್ವದ ಹೋರಾಟದ ಸಂದರ್ಭದಲ್ಲಿ ಮುಷ್ಕರ, ಮೆರವಣಿಗೆಗಳಲ್ಲಿ ಭಾಗವಹಿಸಿದ್ದೆ, ಅಷ್ಟೆ. ಆಗ ನನಗೆ ಮದುವೆ, ಸಂಸಾರ ಏನೂ ಇರಲಿಲ್ಲ. ಮನೆಯಲ್ಲಿ ತಂದೆ ತಾಯಿ ಇದ್ದರು. ಉಂಡು ಓಡಾಡಿಕೊಂಡು ಇದ್ದೆ. ನಾನೇನೂ ಜೈಲಿಗೆ ಹೋಗಲಿಲ್ಲ. ಹಾಗಾಗಿ ಸಾಂಸಾರಿಕ ಕ್ಲೇಶ ಏನೂ ಆಗಲಿಲ್ಲ. ಈ ಹುಡುಗ ಗಾಂಧಿ ಭಕ್ತನಾಗಿ ಹೋದ, ಇಂಜಿನಿಯರ್‌, ಆಫೀಸರ್‌ ಆಗಲಿಲ್ಲ ಎಂಬ ಕೊರಗು ತಂದೆ ತಾಯಿಗೆ ಇತ್ತೇನೊ. ಜೊತೆಗೇ ಈತ ದಾರಿ ತಪ್ಪಲಿಲ್ಲ ಎಂಬ ಸಮಾಧಾನವೂ ಇದ್ದಿರಬಹುದು. ನನಗೆ ಮದುವೆ ಆಗುವ ವೇಳೆಗೆ ನನ್ನ ಲೌಕಿಕ ಸ್ಥಿತಿಗತಿ ಎಲ್ಲ ಸ್ಪಷ್ಟಗೊಂಡಿದ್ದರಿಂದ ನನಗೆ ಹೆಣ್ಣು ಕೊಟ್ಟವರಿಗೆ, ನನ್ನ ಕೈ ಹಿಡಿದಾಕೆಗೆ ನನ್ನ 'ಬೆಲೆ' ಚೆನ್ನಾಗೇ ಗೊತ್ತಿತ್ತು ಅನಿಸುತ್ತೆ. ಬದುಕು ನಿಮಗೆ ತೃಪ್ತಿ ಕೊಟ್ಟಿದೆಯೇ ? - ಖಂಡಿತ. ವೈಯಕ್ತಿಕವಾಗಿ ನನಗೆ ಏನೂ ಕೊರತೆ ಇಲ್ಲ . ತಂದೆಯವರ ಶಿಸ್ತು ಸಂಯಮ, ತಾಯಿಯ ಧಾರಾಳತನ, ಸಹಿಷ್ಣುತೆ, ಅಮ್ಮ ಅಕ್ಕ ತಂಗಿಯರ ವಿಶ್ವಾಸ, ಬಂಧು ಬಾಂಧವರ ಆದರ, ಸಹೃದಯರ ಗೆಳೆತನ, ಪ್ರಾಮಾಣಿಕವಾಗಿ ಹೊಟ್ಟೆ ಪಾಡು ನಡೆಸಲು ಒಂದು ಉದ್ಯೋಗ, ಸಹಧರ್ಮಿಣಿಯ ಸಹಕಾರ, ಬುದ್ಧಿವಂತ ಮಕ್ಕಳು, ಕೃಷ್ಣ ಶರ್ಮ, ರಾಜರತ್ನಂ, ಪುತಿನ ಮುಂತಾದ ಹಿರಿಯರ ಸಂಪರ್ಕ , ಸಾಹಿತ್ಯ ಗಮಕಗಳ ಸವಿ, ಗಾಂಧೀ ವಿಚಾರ ಧಾರೆ, ಸರಳತೆ, ತೃಪ್ತತೆ - ಎಲ್ಲ ಒದಗಿ ಬಂದು ಬದುಕನ್ನು ಸಹ್ಯವಾಗಿಸಿವೆ. ಇನ್ನೇನು ಬೇಕು ? ಸುತ್ತಲ ವಾತಾವರಣ, ದೇಶದ ಸ್ಥಿತಿ, ಮೌಲ್ಯಗಳ ಪತನ, ಇದನ್ನು ನೋಡಬೇಕಾದಾಗ ನಿಸ್ಸಹಾಯಕತೆ ಖೇದವುಂಟು ಮಾಡುತ್ತವೆ, ವಿಧಿಯಿಲ್ಲ. ನಮ್ಮ ಪಾಲಿನ ಕೆಲಸ ಮಾಡುವುದು ಅಷ್ಟೆ. ಈವರೆಗೇನೋ ವಿನಾ ದೈನ್ಯೇನ ಜೀವನವು ಆಗಿದೆ. ಆಶಿಸಬೇಕಾದುದು ಅನಾಯಾಸ ಮರಣ ತಾನೇ ?!

English summary
Gandhian, freedom fighter Neeratthalli kasturi speaks about his experiences with truth. Shikaripura Harihareshwara, California interviewed him exclusively for thatskannada.com on the occassion of independence day, Aug 15th, 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X