• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂತ್ರಪುಷ್ಪದ ಕೊನೆಯ ದಳ

By * ಶಿಕಾರಿಪುರ ಹರಿಹರೇಶ್ವರ
|

ಕಾಶ್ಮೀರಿ ಶೈವ ಸಿದ್ಧಾಂತದ ಅನುಯಾಯಿ ಸೇಡ್‌ ಬೋಯ್‌ ( ಅಥವಾ ಸಿದ್ಧ ಶ್ರೀಕಾಂತ) ಎಂಬುವನು ಲಲ್ಲಾಳನ್ನು ಶಿಷ್ಯನಾಗಿ ಪರಿಗ್ರಹಿಸಿದ. ತಿಳುವಳಿಕೆಗೆ ಇನ್ನಷ್ಟು ಪೋಷಣೆ ಸಿಕ್ಕಿತು. ಸಾಧು ಸಂತರ ಸಂಗದಲ್ಲಿ ಕೆಲ ಕಾಲ ಇದ್ದು ಮತ್ತು ಕಾಡು ಮೇಡು ಹಳ್ಳಿ ಊರುಗಳನ್ನು ಸುತ್ತತೊಡಗಿದಳು, ಅನ್ವೇಷಕಿಯಾಗಿ. ವೇದಾಂತದ ಬುದ್ಧಿವಂತಿಕೆಯ ಮಾತುಗಳನ್ನಾಡುತ್ತಿರಬಹುದು, ಅವಳ ಈ ಅರೆನಗ್ನಾವಸ್ಥೆಯೇಕೆ ಎಂದು ಜನ ಹೀಗಳೆದಾಗ ನೊಂದು, ‘ಅಂತರಂಗ ಶುದ್ಧವಾದ ಬಳಿಕ ಕಾಯವೇನಾದೊಡೆ ಏನಯ್ಯಾ ?’ - ಎಂದಿರಬೇಕು, ಲಲ್ಲಾ.

ಆಗ ಅವಳು ಹೇಳುತ್ತಿದ್ದಳಂತೆ : ‘ಯಾರು ದೇವರೊಬ್ಬರಿಗೆ ಮಾತ್ರ ಹೆದರುತ್ತಾರೋ, ಅವರೇ ನಿಜವಾದ ಗಂಡಸರು; ಅಂತವರು ಅತಿ ವಿರಳ ! ’ ಹೀಗೆ ಹೇಳಿಕೊಳ್ಳುತ್ತಾ ಮಕ್ಕಳು, ಹೆಂಗಸರು, ಗಂಡಸರ ಮುಂದೆ ನಿರ್ಭಯವಾಗಿ ತಿರುಗಾಡುತ್ತ ಲಲ್ಲಾ ಇದ್ದಳಂತೆ. ಒಂದು ದಿನ, ದೂರದಲ್ಲಿ ಬರುತ್ತಿದ್ದ ಒಬ್ಬ ಮುಸ್ಲಿಮ ಸಾಧುವನ್ನು ಕಂಡು ಚೀರಿಟ್ಟಳಂತೆ: ‘ನಾನೊಬ್ಬ ಗಂಡನ್ನು ಇದೀಗ ನೋಡಿದೆ, ನೋಡಿದೆ!’ ಅಲ್ಲಿ ಬರುತ್ತಿದ್ದವನು ಸಯ್ಯೀದ್‌ ಆಲಿ ಹಂದಾನಿ ಎಂಬ ಪ್ರಖ್ಯಾತ ಮುಸ್ಲಿಂ ಸಂತ. (ಕ್ರಿ.ಶ. 1377- 93ರ ಅವಧಿಯಲ್ಲಿ, ಕುತುಬ್‌ದೀನ್‌ ಸುಲ್ತಾನ ರಾಜ್ಯವಾಳುತ್ತಿದ್ದಾಗ, ಈ ಆಲಿ ಹಮದಾನಿ ಕಾಶ್ಮೀರಕ್ಕೆ ಬಂದದ್ದು 1380ರಲ್ಲಿ. ಸುಮಾರು ಆರು ವರ್ಷಕಾಶ್ಮೀರದಲ್ಲಿ ಇದ್ದ ಇಸ್ಲಾಂ ಪ್ರಚಾರಕ ಈತ. ಇವನ ಹೆಸರಲ್ಲಿ ‘ಶಾಹ್‌ ಹಮ್‌ದಾನ್‌’ ಎಂಬ ಹೆಸರಾಂತ ಮಸೀದಿ ಶ್ರೀನಗರದಲ್ಲಿ ಇದೆ.)

‘ನೋಡಿದೆ, ಒಬ್ಬ ಗಂಡಸನ್ನು ಇದೀಗ ನೋಡಿದೆ !’- ಎಂದು ಕೂಗಿಕೊಳ್ಳುತ್ತಾ, ಓಡಿದ ಲಲ್ಲಾ ಒಬ್ಬ ಬನಿಯಾ ಶೆಟ್ಟಿಯ ಅಂಗಡಿಗೆ ನುಗ್ಗಿದಳಂತೆ. ಈ ಹುಚ್ಚಿಯನ್ನು ಕಂಡು ಹೆದರಿದ ಅಂಗಡಿಯ ಮಾಲೀಕ ಅಲ್ಲಿಂದ ಅವಳನ್ನು ಹೊರದಬ್ಬಿದನಂತೆ. ಓಡೋಡುತ್ತಾ, ‘ನೋಡಿದೆ ! ’, ‘ನೋಡಿದೆ’- ಎನ್ನುತ್ತಾ (‘ಯುರೇಕಾ’, ‘ಯುರೇಕಾ’, ಎಂದು ನೀರಿನ ತೊಟ್ಟಿಯಿಂದ ಹೊರಬಿದ್ದು ರಸ್ತೆಯಲ್ಲೆಲ್ಲ ಕುಣಿದಾಡಿದ ಆರ್ಕಿಮಿಡೀಸನಂತೆ), ಈ ಲಲ್ಲಾ ಹತ್ತಿರದ ಬ್ರೆಡ್‌ ಮಾರುವ ಅಂಗಡಿಗೆ ನುಗ್ಗಿದಳಂತೆ. ಒಳಗಡೆ ದೊಡ್ಡದೊಂದು ಅಗಲಗಲ ಉದ್ದುದ್ದ ಬ್ರೆಡ್‌ ಮಾರುವ ಅಗ್ನಿಕುಂಡದಲ್ಲಿ ಬೆಂಕಿ ಧಗಧಗ ಉರಿಯುತ್ತಿತ್ತು . ಅವಳನ್ನು ಹಿಂಬಾಲಿಸಿ ಹುಡುಕುತ್ತ ಬಂದ ಆಲಿ ಹಮದಾನಿ ಮತ್ತು ಅಂಗಡಿಯ ಮಾಲೀಕ ನೋಡುತ್ತಿದ್ದಂತೆಯೇ, ಲಲ್ಲಾ ಆ ಅಗ್ನಿಕುಂಡದಲ್ಲಿ ಧುಮುಕಿಬಿಟ್ಟಳು. ಅಂಗಡಿಯಲ್ಲಿದ್ದ ಎಲ್ಲ ಜನ ‘ಹೋ!’ ಎಂದು ಚೀರಾಡಿದರು. ಮಾಲೀಕ ಮೂರ್ಛೆ ಹೋದ! ಆದರೆ, ಕೆಲವೇ ಕ್ಷಣಗಳಲ್ಲಿ ಆ ಅಗ್ನಿಕುಂಡದಿಂದ ಲಲ್ಲಾ ಎದ್ದು ಬರುತ್ತಾಳೆ, ಚಿನ್ನದ ಬಟ್ಟೆಗಳನ್ನು ತೊಟ್ಟು . ಹೆದರೆ ಈಗ ಓಡುವ ಸರದಿ ಆಲಿ ಹಮದಾನಿಯದು ಆಯ್ತು ! ತೊಟ್ಟ ಬಟ್ಟೆಯನ್ನೆಲ್ಲ ಕಳಚಿ, ಅವನನ್ನು ಬೆನ್ನಟ್ಟಿ ಓಡುತ್ತಾಳೆ ನಮ್ಮ ಲಲ್ಲಾ , ‘ಓ ನಿಲ್ಲು !, ಓ ನಿಲ್ಲು !’- ಎನ್ನುತ್ತಾ .

‘ಆಯೇ ವೋನಿಸ್‌ ; ಗಯೇ ಕಾದ್ರಿಸ್‌’ ಎನ್ನುವ (ಬಂದಿದ್ದು ಶೆಟ್ಟಿಯ ಅಂಗಡಿಗೆ ನಿಜ ; ಅವಳು ಹೋದದ್ದು , ಎದ್ದು ಬಂದದ್ದು ರೊಟ್ಟಿಯ ಅಂಗಡಿಯಲ್ಲಿ !’- ಎಂಬ ಕಾಶ್ಮೀರೀ ಗಾದೆ (ಹಿಂದೆ ಹೇಳಿದ, ಹಿಂಟನ್‌ ನೋವೆಲ್‌ನ ಇಂಗ್ಲೀಷಿನಲ್ಲಿ ‘ಕಾಶ್ಮೀರಿ ಗಾದೆಗಳ ಕೋಶ’, ಗಾದೆ 20). ಹಿಂದೂಗಳ ಪ್ರಕಾರ ಆಲಿ ಹಮದಾನಿಯು ಲಲ್ಲಾಳ ಶಿಷ್ಯನಾಗುತ್ತಾನೆ ; ಮುಸ್ಲಿಮರ ಪ್ರಕಾರ ಲಲ್ಲಾದೇವಿ ಆಲಿ ಅಹಮದಾನಿಯಿಂದ ಇಸ್ಲಾಮಿನ ಸಾರವನ್ನು ತಿಳಿಯುತ್ತಾಳೆ ! ಲಲ್ಲಾಳ ಪ್ರಕಾರ, ‘ತನ್ನ ಸೌಜನ್ಯ ಮತ್ತು ದಯಾಪೂರ್ಣ ವರ್ತನೆಯಿಂದ ಮಾನವರೆಲ್ಲರ ಸೇವೆ ಸಲ್ಲಿಸುವಾತನೇ ನಿಜವಾದ ಸಂತ!’ (ನೋಡಿ : ಸರ್‌ ರಿಚರ್ಡ್‌ ಕರ್ನಾಕ್‌ ಟೆಂಪಲ್‌, ‘ದ ವರ್ಡ್‌ ಆಫ್‌ ಲಲ್ಲಾ , ದ ಪ್ರಾಫೆಟೆಸ್‌’, ಪುಟ 165).

ಹೀಗೆ ಅವಳ ಒಂದೊಂದು ‘ವಾಕ್‌’ಗೂ ಒಂದೊಂದು ಕತೆ ಹೇಳುವವರಿದ್ದಾರೆ. ಕರ್ನಾಟಕದ ಅಕ್ಕ ಮಹಾದೇವಿ, ತಮಿಳುನಾಡಿನ ಆಂಡಾಳ್‌, ಮಹಾರಾಷ್ಟ್ರದ ಮುಕ್ತಾಬಾಯಿ, ಜನಾಬಯಿ ಮತ್ತು ರಾಜಾಸ್ಥಾನದ ಮೀರಾಬಾಯಿಯರಂತೆ ಕಾಶ್ಮೀರದ ಲಲ್ಲಾ ಭಕ್ತಿಪಂಥದ ಶ್ರೇಷ್ಠ ಚಿಂತಕರ ಸಾಲಿನಲ್ಲಿ ಮೆರೆದ ಮಹಿಳೆ.

***

ಹಳೆಯ ಕಾಶ್ಮೀರೀ ಭಾಷೆಯಲ್ಲಿನ, ಜಾನಪದ ಸ್ವರೂಪದ ಅವಳ ‘ವಾಕ್‌’ಗಳನ್ನು ಪಂಡಿತರು ಸಂಸ್ಕೃತಕ್ಕೂ ಅನುವಾದಿಸತೊಡಗಿದರು. ಅವಳ ‘ವಾಕ್‌’ಗಳನ್ನು ಕಾಶ್ಮೀರಕ್ಕೆ ವಿಶಿಷ್ಠವಾದ ಶೈವ ಸಿದ್ಧಾಂತದ ಹಿನ್ನೆಲೆಯಲ್ಲೂ , ಸೂಫೀ ಮತದ ನೇಪಥ್ಯದಲ್ಲೂ ಇರಿಸಿಕೊಂಡು ಅರ್ಥ ಮಾಡಿಕೊಳ್ಳಲು ವ್ಯಾಖ್ಯಾನಕಾರರು ಪ್ರಯತ್ನಿಸಿದರು. (ಈ ಲೇಖನಕ್ಕಾಗಿ ನಾನು ಆರಿಸಿಕೊಂಡ ಗ್ರಂಥಗಳಲ್ಲಿ ಒಂದು ಬಹಳ ಹಳೆಯ ಪುಸ್ತಕ : ಸರ್‌ ಜಾರ್ಜ್‌ ಗ್ರಿಯರ್ಸನ್‌ ಮತ್ತು ಲಿಯಾನೆಲ್‌ ಡಿ.ಬಾರ್ನೆಟ್‌, ‘ಲಲ್ಲಾ ವಾಕ್ಯಾನಿ (ಲಲ್ಲಾ ಡೇಡ್‌ ಅವಳ ಸುಭಾಷಿತಗಳು)’, ರಾಯಲ್‌ ಏಷಿಯಾಟಿಕ್‌ ಸೊಸೈಟಿ, ಲಂಡನ್‌. 1920 ; (ನಾನು ಲೇಖನದಲ್ಲಿ ಉಲ್ಲೇಖಿಸಿರುವ ವಚನಗಳ ಸಂಖ್ಯೆಗಳೂ ಈ ಗ್ರಂಥದಲ್ಲಿ ಕೊಟ್ಟಂತೆಯೇ ಇವೆ) ; ಇತ್ತೀಚಿನ ಪುಸ್ತಕ : ಸ್ವಾಮಿ ಮಾಧವಾನಂದ ಮತ್ತು ಆರ್‌ ಸಿ ಮಜುಂದಾರ, ಸಂ. ‘ಗ್ರೇಟ್‌ ವಿಮೆನ್‌ ಆಫ್‌ ಇಂಡಿಯಾ’ ಅದ್ವೆ ೖತ ಆಶ್ರಮ, ಕಲ್ಕತ್ತ , 1997. ಪುಟ 326-328 ; ಮತ್ತು ಹಲವು ಲೇಖನಗಳು).

ಜಾನಪದ ಸಾಹಿತ್ಯ ಸಂಕಲನ ಕನ್ನಡ ನಾಡಿನಲ್ಲಿ ಬಹಳ ದಿನಗಳ ಹಿಂದೆ ನಡೆದಂತೆ, ಕಾಶ್ಮೀರದಲ್ಲೂ ನಡೆಯಿತು. ಲಲ್ಲಾ ಅವಳ ವಾಕ್‌ಗಳನ್ನು ಆಡುವವರಿಂದ, ಹಾಡುವವರಿಂದ ಕೇಳಿ ಸಂಗ್ರಹಿಸುವ ಕಾರ್ಯ ಕೆಲವು ಆಸಕ್ತ ಸಂಶೋಧಕರು ನಡೆಸಿ ಮಹದುಪಕಾರ ಮಾಡಿದರು. ಪ್ರೊಫೆಸರ್‌ ಬುಹ್ಲರ್‌ ಅವರು ತಮ್ಮ ‘ಡೀಟೈಲ್ಡ್‌ ರಿಪೋರ್ಟ್‌ ಆಫ್‌ ಎ ಟೂರ್‌ ಇನ್‌ ಸರ್ಚ್‌ ಆಫ್‌ ಸ್ಯಾನ್ಸ್‌ಕ್ರಿಟ್‌ ಮ್ಯಾನುಸ್ಕಿೃಪ್ಟ್ಸ್‌ ಮೇಡ್‌ ಇನ್‌ ಕಾಶ್ಮೀರ್‌’ (ಬಾಂಬೆ 1877) ನಲ್ಲಿ ಇಂಥ ಎರಡು ಲಲ್ಲಾ ವಚನ ಸಂಪುಟಗಳನ್ನು ಉಲ್ಲೇಖಿಸಿದ್ದಾರೆ. 1896 ರಲ್ಲಿ ಸರ್‌ ಔರೆಲ್‌ ಸ್ಟೈನ್‌ ಅವರು (ರಾಜತರಂಗಿಣಿಯ ಸಂಪಾದಕರು) ಲಲ್ಲಾಳ ವಚನಗಳನ್ನು ಹಳ್ಳಿಗರಿಂದ, ಪಂಡಿತರಿಂದ ಕೇಳಿ, ಬರೆದುಕೊಂಡು, ಸಂಗ್ರಹಿಸಿ ಸರ್‌ ಜಾರ್ಜ್‌ಗೆ ಕೊಟ್ಟರು. ಅವರ ಸ್ನೇಹಿತ ಮಹಾಮಹೋಪಾಧ್ಯಾಯ ಪಂಡಿತ ಮುಕುಂದರಾಮ ಶಾಸ್ತ್ರಿಗಳ ಸಾಹಸ ಶ್ರಮದ ಫಲವಾಗಿ ಈ ಅಪೂರ್ವ ವಚನ ಭಂಡಾರ ಇಲ್ಲಿಯವರೆಗೆ ಉಳಿದು ಬಂತು. ಇದೆಲ್ಲದರ ವಿವರ ಮೇಲೆ ಹೇಳಿದ ‘ಲಲ್ಲಾ ವಾಕ್ಯಾನಿ’ ಗ್ರಂಥದ ಉಪೋದ್ಘಾತದಲ್ಲಿ ವಿವರವಾಗಿ ಇದೆ (ಪುಟ 3-7).

ಒಂದು ಕಡೆ ಲಲ್ಲಾ ಹೇಳುತ್ತಾಳೆ:

ನನ್ನ ಗುರು ನನಗಿತ್ತುದೊಂದೆ ಒಂದುಪದೇಶ-

ಏನಿಲ್ಲದುದರಿಂದ ಎಲ್ಲವಿರುವೆಡೆ ಒಳಗೆ, ಹೋಗು ಒಳಗೇ ;

ನನಗಾಯ್ತು ಅದೆ ನಿಯಮ, ಅದೆ ಆಜ್ಞೆ, ಅದೆ ಧ್ಯೇಯ-

ಲಲ್ಲ ಕುಣಿದಳು ಬಯಲಲಿ ಓಡಿ ಬತ್ತಲಾಗೇ! ।।94।।

ಗುರು ಹೇಳಿಕೊಟ್ಟದ್ದು , ‘ಬ್ರಹ್ಮ ಸತ್ಯ, ಜಗನ್‌ ಮಿಥ್ಯಾ’ ಎಂಬ ಮಾತು ; ತನ್ನತನವನ್ನು ಅರಿತವರಿಗೆ, ಪರಮಾತ್ಮನನ್ನು ಅನುಭವಿಸುವವರಿಗೆ ಸುತ್ತಮುತ್ತಣ ಪ್ರಾಪಂಚಿಕ ವಸ್ತುಗಳೆಲ್ಲ ಬರಿ ಮಾಯೆ, ಬೇಡದ ಹೊರೆ ಎನ್ನಿಸೀತು. ಇದವಳ ಮಾತಿನ ಇಂಗಿತ ; ಇಲ್ಲಿ ಅವಳು ನಗ್ನಾವಸ್ಥೆಯಲ್ಲಿ ತಿರುಗಾಡುತ್ತ ಇದ್ದುದರ ಸಮರ್ಥನೆ ಇಲ್ಲಿ ಸೂಚಿತ, ಎನ್ನುತ್ತಾರೆ.

‘ಲಲಿತಾಸಹಸ್ರನಾಮ’ವನ್ನು ತೆಗೆದುಕೊಳ್ಳಿ : ಓದುವುದಕ್ಕೆ ಅತ್ಯಂತ ರಮಣೀಯವಾಗಿ ಕಂಡರೂ, ಅರ್ಥ ತಿಳಿಯುವ ಮುನ್ನ , ಭಾಷ್ಯ ಓದುವ ಮುನ್ನ, ಶಾಕ್ತೋಪಾಸನೆಯ ತಂತ್ರಶಾಸ್ತ್ರದ ಸಾಮಾನ್ಯ ಪರಿಜ್ಞಾನ ಪೂರ್ವಪಠ್ಯವಾಗಿಯೂ ಅವಶ್ಯಕವಾಗಿಯೂ ಬಿಡುತ್ತೆ . ‘ಸೌಂದರ್ಯ ಲಹರಿ’ಯೂ ಹಾಗೇನೇ. ಅದರಂತೆ ಲಲ್ಲಳ ವಚನಗಳ ಆಳವನ್ನು ಅರಿಯಬೇಕಾದರೆ, ಕಾಶ್ಮೀರದ ಶೈವ ಸಿದ್ಧಾಂತದ ಸ್ವಲ್ಪವಾದರೂ ಪರಿಚಯ ಅವಶ್ಯಕ. ‘ಪತಿ, ಪಶು, ಪಾಶ’ಗಳ ಸಂಬಂಧ ; ಪ್ರಕೃತಿ-ಪುರುಷಗಳ ಬಗ್ಗೆ ಯೋಗಸೂತ್ರಗಳ ವ್ಯಾಖ್ಯಾನ ; ಚಿತ್ತದ ಐದು ವೃತ್ತಿಗಳು; ಯಮ, ನಿಯಮಾದಿ ಅಷ್ಟಾಂಗಗಳು; ಸುಷುಮ್ನಾ, ಇಳಾ, ಪಿಂಗಳಾ ನಾಡಿಗಳ ಅರಿವು ; ಮೂಲಾಧಾರ ಮುಂತಾದ ಚಕ್ರಗಳು ; ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ ಎಂಬೀ ಪಂಚ ಪ್ರಾಣಗಳ ಸಂಚಾರ ; ಕುಂಡಲಿನೀ ಉದ್ದೀಪನ- ಹೀಗೆ ಯೋಗಶಾಸ್ತ್ರಕ್ಕೆ ಸಂಬಂಧಿಸಿದ ಪಾರಿಭಾಷಿಕ ತತ್ತ್ವಗಳ ಸಾಮಾನ್ಯ ಪರಿಚಯ ಸ್ವಲ್ಪವೂ ಇಲ್ಲದಿದ್ದಲ್ಲಿ ಲಲ್ಲಾಳ ವಚನಗಳು ಬರಿಯ ಮಾತಿನ ಆಡಂಬರವಾಗಿ ತೋರುವ ತೊಂದರೆಯಿದೆ. (ವಿದ್ವಾಂಸರಿಗೇ ಇನ್ನೂ ಅರ್ಥವಾಗದ ‘ಕೂಟ ಶ್ಲೋಕ’ಗಳ ‘ಮುಂಡಿಗೆ’ಯ ಮಾದರಿಯ ‘ವಾಕ್‌ಗಳೂ ಕೆಲವಿವೆ. ನೋಡಿ : ವಚನ 84, 85, 86 ದ ಕೆಲವು ಸಾಲುಗಳು. ಆ ಮಾತು ಬೇರೆ!) ಅರ್ಥ ಮಾಡಿಕೊಳ್ಳಲು, ಅನಾಮಕ ಕವಿಯ ‘ಶಿವ ಸಂಹಿತಾ’, ಪೂರ್ಣಾನಂದರ ‘ಷಟ್‌-ಚಕ್ರ-ನಿರೂಪಣ’, ಸ್ವಾತ್ಮಾರಾಮರ ‘ಹಠಯೋಗ-ಪ್ರದೀಪಕಾ’- ಕ್ಷೇಮರಾಜನ ‘ಶಿವ ಸೂತ್ರ ವಿಮರ್ಶಿನಿ’ (ಅನುವಾದ: ಪಿ.ಟಿ.ಶ್ರೀನಿವಾಸ ಅಯ್ಯಂಗಾರ್‌)- ಇವೆಲ್ಲ ಸಹಾಯಕ ಗ್ರಂಥಗಳು.

ಎಲ್ಲವೂ ಕ್ಲಿಷ್ಟವೆಂದೇನಲ್ಲ ; ಕೆಲವು ಸುಲಭವಾಗಿಯೂ ಇವೆ. ಉದಾಹರಣೆಗೆ ,

ನಿಮ್ಮ ನಾಡಿಗಳನ್ನು ಹಿಡಿತವಿಡಿಸುತ ಮನವ

ದುಗುಡಗಳ ತುಂಡರಿಸಿ, ಕಟ್ಟಿ ಕುಟ್ಟಿ , ಆಗಿಸಿ ಶಮನ ;

ಲಲ್ಲ ಮೆಲ್ಲುವ ಅಮೃತ ಪಡೆವ ಕಡೆ ಅಡಿಗಳನಿಡಿರಿ-

ಬರಿದೆ ಸಿಗನೋ ಶಿವನು, ಭಜಿಸುತಿರಿ ಅವನ! ।।80।।

(ಜಾನಿಹಾ ನಾಡಿದಲಾ ಮನ್‌ ; ರಟ್ಟೀತ್‌,

ಚಟ್ಟೀತ್‌, ವಟ್ಟೀತ್‌, ಕುಟ್ಟೀತ್‌।

ಜಾನಿಹಾ ಅಸ್ತರಸಾಯುನ್‌ ಘಟ್ಟೀತ್‌,

ಶಿವ ಛ್ಯೋಯಿ ಕಷ್ಟೋ ತ ಚಿನ್‌, ಉಪದೇಶ।।)

ಸಂಸಾರದ ಕ್ಷಣ ಭಂಗುರತೆಯ ಬಗ್ಗೆ ಈ ಗೊಂದಲದ ಭ್ರಮೆಯ ಚಿತ್ರಣವನ್ನು ನೋಡಿ :

ಒಂದು ಕ್ಷಣ, ನಾ ಕಂಡೆ, ಹರಿಯುತಿದೆ ಭೋರ್ಗರೆವ ನದಿ;

ಮರುಕ್ಷಣವೆ ಎಲ್ಲೆ ಸೇತುವೆ: ನದಿ ಎಲ್ಲಿ, ಹೋಯ್ತದೆಲ್ಲಿ ?

ಒಂದು ಕ್ಷಣ, ನಾ ಕಂಡೆ, ಹೂವು ಜಗ್ಗಿ ತುಂಬಿದ ಪೊದೆಯ;

ಮರುಕ್ಷಣವೆ ಎಲ್ಲೆ ಗಿಡ ? ಎಲ್ಲಿ ಹೂ ? ಆ ಮುಳ್ಳುಗಳು ಎಲ್ಲಿ ।

ಒಂದು ಕ್ಷಣ, ನಾ ಕಂಡೆ , ಉರಿವ ಒಲೆ, ಧಗ ಧಗ ಬೆಂಕಿ;

ಮರುಕ್ಷಣವೆ ಎಲ್ಲೆ ಒಲೆ ? ಎಲ್ಲಿ ಉರಿ ? ಎಲ್ಲಿ ಹೊಗೆ ? ಹೋಯಿತೆಲ್ಲಿ ?

ಒಂದು ಕ್ಷಣ, ನಾ ಕಂಡೆ, ಪಾಂಡವರ ತಾಯಿಯನು, ರಾಣಿಯನು;

ಮರುಕ್ಷಣವೆ ಎಲ್ಲಾಕೆ ? ಕುಂಬಾರನ ಮಡದಿಯ ಅತ್ತೆ ! ।। 96, 97।।

ಈ ಹಿತವಚನವನ್ನೂ ಕೇಳಿ:

ಎಲ್ಲ ತಿಳಿದು ತಿಳಿದೂ ಗೊತ್ತಿಲ್ಲದವನಂತೆ ನಟಿಸು;

ಎಲ್ಲ ಕೇಳಿಯೂನೂ ಕಿವುಡ ನೀನಾಗಿ ಕುಳಿತು ;

ಕಂಡು ಎಲ್ಲವನೂ ಕೊಂಚ ಕುರುಡನೇ ಆಗು ಆಗಾಗ ನೀನು-

ತತ್ತ್ವವಿದರೆನ್ನುವರು ಕಲಿಯಲಿಕೆ ಲಲ್ಲಳೀ ಮಾರ್ಗ ಒಳಿತು ! ।।20।।

ಅದರ ಕಾಶ್ಮೀರಿ ಭಾಷೆಯ ಮೂಲ ಹೀಗಿದೆ :

ಮೂಢ್‌, ಜಾನೀತ್‌ ಪಶೀತ್‌ ಕರ ಕಲ್ಲೋ ;

ಶ್ರುತವನೋ ಜಡರೂಪೀ ಆಸ್‌ ;

ಯೋಸೋ ಯೀ ಡಪೀ ತಸ್‌ ತೀ ಭಲ್ಲೋ-

ಏಹುಯ್‌ ತತ್ತ್ವವಿದ್‌ ಧೋಯೀ ಅಭ್ಯಾಸ್‌ !

ಡಾ. ಏ. ಸ್ಟೈನ್‌ ಅವರು ಸಂಗ್ರಹಿಸಿದ, ಈ ವಚನದ, ಶ್ರೀ ರಾಜಾನಕ ಭಾಸ್ಕರನ ಸಂಸ್ಕೃತ ರೂಪ ಹೀಗಿದೆ :

ಜ್ಞಾತ್ವಾ ಸರ್ವಂ, ಮೂಢವತ್‌ ತಿಷ್ಠ ಸ್ವಸ್ಥ:;

ಶ್ರುತ್ವಾ ಸರ್ವಂ, ಶ್ರೋತ್ರಹೀನೇನ ಭಾವ್ಯಂ ।

ದೃಷ್ಟ್ವಾ ಸರ್ವಂ ತೂರ್ಣಂ ಅನ್ಧತ್ವಂ ಏಹಿ-

ತತ್ತ್ವಾಭ್ಯಾಸಸ್‌ ಕೀರ್ತಿತೋ’ಯಂ ಬುಧೇನ್ದೆ ೖ್ರ :।।

ಇದನ್ನು ಓದಿದಾಗ ನಮಗೆ ಕಬೀರನ ಈ ದೋಹೆ ಜ್ಞಾಪಕಕ್ಕೆ ಬರುತ್ತೆ :

‘ಎಲ್ಲರೊಂದಿಗೆ ಕೂಡು, ಎಲ್ಲರೊಂದಿಗೂ ಸೇರು ;

ಎಲ್ಲರೆಲ್ಲರ ಹೆಸರು ಹೇಳುತ್ತ ಕೂರು!

‘ಸ್ವಾಮಿ’, ‘ಅಯ್ಯಾ’, ‘ಬುದ್ದೀ’ ಆಡುತಿರು ಜನರೆದುರು-

ನಿನ್ನ ಊರಲ್ಲೇನೇ ನೀ ಭದ್ರ ತಳ ಊರು ! ’

(ಸಬ್‌ ಸೇ ಹಿಲಿಯೇ , ಸಬ್‌ಸೇ ಮಿಲಿಯೇ;

ಸಬ ಕಾ ಲೀಜಿಯೇ ನಾಮ್‌ :

‘ಹ್ಞಾ ಜೀ’‘ಹ್ಞಾ ಜೀ’- ಸಬ್‌ ಸೇ ಕಹಿಯೇ-

ಬಸಿಯೇ ಅಪನಾ ಗಾಂವ್‌ ! )

ಇಂಥಹ ಬಹಳ ವಚನಗಳು ಕಾಶ್ಮೀರದ ಗಾಳಿಯಲ್ಲಿ ತೇಲಾಡುತ್ತಿದ್ದರೂ, ಸುಮಾರು ಇನ್ನೂರು ವಾಕ್‌ಗಳನ್ನು ಅಧಿಕೃತವಾಗಿ ಲಲ್ಲಾಳದೆಂದು ಸಂಶೋಧಕರು ಗುರುತಿಸುತ್ತಾರೆ. ಸಾಂಪ್ರದಾಯಿಕವಾಗಿ ಕಾಶ್ಮೀರದ ‘ಬಿಜ್‌ಬೆಹರಾ’ ಎಂಬಲ್ಲಿ ಲಲ್ಲಾ ಅಸು ನೀಗಿದಳೆಂದು ಜನ ನಂಬುತ್ತಾರೆ. ತಮ್ಮ ನಿತ್ಯ ಜೀವನದಲ್ಲಿ ಅವಳ ಮಾತುಗಳನ್ನೇ ಒಂದಲ್ಲ ಒಂದು ಬಗೆ ಉಲ್ಲೇಖಿಸುತ್ತಿದ್ದಾಗ, ಕಣ್ಮರೆಯಾದರೂ ಕಾಶ್ಮೀರದ ಜನರ ಪಾಲಿಗೆ, ಲಲ್ಲೇಶ್ವರಿ ಚಿರಂಜೀವಿನಿ !

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes on Celestial view of Kashmir : divine Poetess Lalleshwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more