• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವಸೂರಿಗಳು ಕಂಡ ಕಾಶ್ಮೀರ

By * ಶಿಕಾರಿಪುರ ಹರಿಹರೇಶ್ವರ
|

ಭಾರತೀಯರ ಅತಿದೊಡ್ಡ ರಮ್ಯ ಕನಸು‘ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್‌ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು . ಆದರೆ ಹೇಗಿತ್ತು ಗೊತ್ತಾ ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.

ನಮ್ಮ ಕಾಶ್ಮೀರ :ಲೇಖನ-8

ಕಾಶ್ಮೀರದ ಅನುಭಾವಿ ಮಹಾದೇವಿ, ಲಲ್ಲೇಶ್ವರಿ

ಹಗಲಿರುಳು ಹುಡುಕುತ್ತ ಎತ್ತಲೆತ್ತಲೋ ಸುತ್ತಿ,

ಅವನ ನಾ ನೆನೆ ನೆನೆದೇನೆ ಬಳಲಿ ಬಸವಳಿದೆ ;

ಕೊನೆಗೊಮ್ಮೆ, ಅಚ್ಚರಿಯೇ!, ಲಲ್ಲಳಿಗೆ ಇಲ್ಲೇ ಸಿಕ್ಕ -

‘ಎಲ್ಲ ಬಲ್ಲವ’ ಮನೆಯಲ್ಲೇ, ಮನೆಯಲ್ಲೇ, ಶುಭಸಮಯ ಕೂಡಿ ಬರಲು !

(-ಲಲ್ಲಾ ಡೇಡ್‌, ಕ್ರಿ.ಶ. 1355, ವಚನ 3)

ಮೊನ್ನೆ ಕ್ಯಾಲಿಫೋರ್ನಿಯಾದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದರ ಅಂಗವಾಗಿ ಇಲ್ಲಿನ ಹಾಡುಗಾರ ದಂಪತಿಗಳೆಂದು ಹೆಸರಾದ ಸಂಗೀತ ನಿರ್ದೇಶಕ ರವಿ ರವೀಂದ್ರನಾಥ್‌ ಹಾಗೂ ಅವರ ಪತ್ನಿ, ಕವಯಿತ್ರಿ ಸಂಧ್ಯಾ ರವೀಂದ್ರನಾಥ್‌ ಅವರು ಒಂದು ಹಾಡನ್ನು ಹಾಡಿದರು.

ಆ ‘ಪರಾ ಪೂಜೆ’ ಎಂಬ ನನ್ನ ಕವನವನ್ನು ರಾಗಮಾಲಿಕೆಯಲ್ಲಿ ಬಾಗೇಶ್ರೀ, ಮಾಲಕೌಂಸ್‌(ಹಿಂದೋಳ), ಮಿಯಾ ಕಾ ತೋಡಿ, ಕೇದಾರ್‌, ರಾಗೇಶ್ರೀ, ಹಮೀರ್‌, ಯಮನ್‌(ಕಲ್ಯಾಣಿ), ಸೋಹಿನಿ (ಹಂಸಾನಂದಿ), ಪೂರ್ಯಧನಾಶ್ರೀ, ಭೂಪ್‌ (ಮೋಹನ), ಹಂಸಧ್ವನಿ, ಜೈಜೈವಂತಿ(ದ್ವಿಜಾವಂತಿ) ಮತ್ತು ಬಾಗೇಶ್ರೀ- ಈ ಹನ್ನೆರಡು ರಾಗಗಳಿಗೆ, ಹಾಡಿನ ಚರಣಗಳನ್ನು ಅನುಕ್ರಮವಾಗಿ ಅಳವಡಿಸಿ, ಹಾಡಿದುದು ತುಂಬಾ ಇಂಪಾಗಿತ್ತು. ‘ಷೋಡಶೋಪಚಾರದಲಿ ಏಕೆ ನಡೆವುದು ಪೂಜೆ’ ಎನ್ನುವ ಸಮಾಧಾನ ಸಾಂಪ್ರದಾಯಿಕ ಪೂಜೆ ಮಾಡುವವರಿಗೆ ಸಿಗುತ್ತೆ ಎನ್ನುವುದು, ಸಂಸ್ಕೃತದಿಂದ ಸ್ವಲ್ಪ ದಿನಗಳ ಹಿಂದೆ ಭಾವಾನುವಾದಿಸಿದ ಈ ಕವನದ ತಿರುಳು. ಈ ಲೇಖನಕ್ಕೆ ಪೂರಕವಾದುದೆಂಬ ಆಶಯದಿಂದ ಅದರ ಪೂರ್ಣ ಪಾಠವನ್ನೂ (ಸಂಸ್ಕೃತ ಮೂಲವನ್ನೂ ) ಕೊಡುತ್ತಿದ್ದೇನೆ:

ಷೋಡಶೋಪಚಾರದಲಿ ಹೇಗೆ ನಡೆವುದು ಪೂಜೆ ?।।ಪಲ್ಲವಿ।।

ಎಲ್ಲೆಲ್ಲೂ ತುಂಬಿಹನ ಆರಾಧಿಸುವ ಪರಿ ಹೇಗೆ ?

ಎಲ್ಲಕ್ಕೂ ಆಧಾರ ಅವ, ಯಾವುದಾಸನ ಅವಗೆ ?

ತಾನೆ ಅತಿ ಸ್ವಚ್ಛನಿರೆ, ಪಾದ್ಯ ಅರ್ಘ್ಯಗಳೇಕೆ ?

ಪರಿಶುದ್ಧ ಅವನಿರಲು, ಆಚಮನೀಯವು ಬೇಕೆ ? ।।1।।

ಕೊಳೆಯೆ ತಾಗದಂಥವಗೆ ಸ್ನಾನ ಮಾಡಿಸಲೇಕೆ ?

ಜಗವೆ ಒಡಲಾದವಗೆ ಉಡಲೀ ವಸ್ತ್ರವು ಸಾಕೆ ?

ಯಾರನೂ ಅವಲಂಬಿಸದ ಇವಗೇಕೆ ಜನಿವಾರ ?

ವಾಸನೆಗೆ ಹೊರತಿರಲು ಬೇಕೆ ಹೂವಿನ ಹಾರ ?।।2।।

ಮುಟ್ಟಲಾಗದ ಅವಗೆ, ಗಂಧ ಹಚ್ಚುವುದೆಂತು ?

ಸೊಬಗೆ ತಾನಾದವಗೆ, ಒಡವೆ ತೊಡಿಸುವುದೆಂತು ?

ನಿತ್ಯ ತೃಪ್ತನಿಗೇಕೇ ನೈವೇದ್ಯದಾರೋಗಣೆ ?

ಸಂತೃಪ್ತನವನಿರಲು ಎಲೆ ಅಡಿಕೆಯ ಅರ್ಪಣೆ?।।3।।

ಆದಿ- ಅಂತ್ಯವಿಲ್ಲದನಂತ, ಪ್ರದಕ್ಷಿಣೆಯು ಹೇಗೆ ?

ನಾನೆ ಅವನಾಗಿರಲು ಆರಿಗಾರರ ನಮನ ?

ವೇದ- ಮಂತ್ರಗಳೇನೇ ಬಣ್ಣಿಸಲಾಗದ ಅವನ-

ಬೇರೇ ಸ್ತುತಿಗಳನೇನು ಬಳಸಿ ಭಜಿಸುವುದು? ।।4।।

ತಾನೆ ಜ್ಯೋತಿ ಸ್ವರೂಪ, ದಿವ್ಯ ಜ್ಞಾನದ ಬೆಳಕು !

ಬೆಳಗುವುದೆ ಅಂಥವಗೆ ಈ ಆರತಿಯ ಸೊಡರ ?

ಒಳಹೊರಗೂ ವ್ಯಾಪಿಸಿಹ, ಪೂರ್ಣ ರೂಪಿಯ ಹೇಗೆ

‘ಹೋಗಿ ಬಾ’, ‘ಹೋಗಿ ಬಾ’ ಎನುತ ಬೀಳ್ಕೊಡುವುದು ?।।5।।

ಭಗವಂತನರ್ಚನೆಗೆ ‘ಪರಾಪೂಜೆ’ ಇದೇನೇ,

ಎಲ್ಲ ಕಾಲಕೂ ಎಲ್ಲ ನೆಲೆ-ನಿಲುವಿನಲ್ಲೂ ;

ಈ ಬಗೆಯ ಹಿನ್ನೆಲೆಯ ಚಿತ್ತದಲ್ಲಿರಿಸುತ್ತ

ತಿಳಿದವರು ಆರಾಧಿಸುವರು ಒಮ್ಮನಿಸಿನಿಂದ ! ।।6।।

ಷೋಡಶೋಪಚಾರದಲಿ ಹೀಗೆ ನಡೆವುದು ಪೂಜೆ ! ।। ಮುಕ್ತಾಯ।।

***

(ಪರಾ ಪೂಜಾ :: ಮೂಲ ಸಂಸ್ಕೃತ, ಕವಿ : ಅನಾಮಕ)

ಪೂರ್ಣಸ್ಯ ಆವಾಹನಂ ಕುತ್ರ? ಸರ್ವಾಧಾರಸ್ಯ ಚ ಆಸನಮ್‌ ?

ಸ್ವಚ್ಛಸ್ಯ ಪಾದ್ಯಂ ಅರ್ಘ್ಯಂ ? ಶುದ್ಧಸ್ಯ ಆಚಮನಂ ಕುತ : ? ।।1।।

ನಿರ್ಮಲಸ್ಯ ಕುತ: ಸ್ನಾನಂ ? ವಸ್ತ್ರಂ ವಿಶ್ವೋದರಸ್ಯ ಚ ?

ನಿರಾಲಂಬಸ್ಯ ಉಪವೀತಂ ? ಪುಷ್ಪಂ ನಿರ್ವಾಸನಸ್ಯ ಚ ?।।2।।

ನಿರ್ಲೇಪಸ್ಯ ಕುತೋ ಗಂಧೋ ? ರಮ್ಯಸ್ಯ ಆಭರಣಂ ಕುತ : ?

ನಿತ್ಯತೃಪ್ತಸ್ಯ ನೈವೇದ್ಯಸ್‌ ? ತಾಂಬೂಲಂ ಚ ಕುತೋ ವಿಭೋ: ?।।3।।

ಪ್ರದಕ್ಷಿಣಂ ಹಿ ಅನನ್ತಸ್ಯ ? ಹಿ ಅದ್ವಯಸ್ಯ ಕುತೋ ನತಿ: ?

ವೇದವಾಕ್ಯೇರ್‌ ಅವೇದ್ಯಸ್ಯ ಕುತ: ಸ್ತೋತ್ರಂ ವಿಧೀಯತೇ ? ।।4।।

ಸ್ವಯಂ ಪ್ರಕಾಶಮಾನಸ್ಯ ಕುತೋ ನೀರಾಜನಂ ವಿಭೋ: ?

ಅನ್ತರ್‌ ಬಹಿಶ್‌ ಚ ಪೂರ್ಣಸ್ಯ ಕಥಂ ಉದ್ವಾಸನಂ ಭವೇತ್‌ ?।।5।।

ಏವಂ ಏವ ಪರಾಪೂಜ ಸರ್ವ ಅವಸ್ಥಾಸು ಸರ್ವದಾ ।

ಏಕಬುದ್ಧ್ಯಾತು ದೇವೇಶ ವಿಧೇಯಾ ಬ್ರಹ್ಮವಿತ್ತಮೈಃ ! ।।6।।

***

ಈ ಬಗೆಯ ‘ಮಾತು’ಗಳನ್ನೇ ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದ, ಕಾಶ್ಮೀರದ ಅನುಭಾವಿ ಕವಯಿತ್ರಿ ಲಲ್ಲಾ ಹೇಳುತ್ತಾ ತಿರುಗಾಡಿದ್ದುದು. ಈ ಯೋಗಿನಿಯನ್ನು ಕಂಡರೆ ಕಾಶ್ಮೀರಿಗಳಿಗೆ ಅಪಾರ ಗೌರವ. ಹಿಂದೂಗಳು ಮುಸ್ಲಿಮರೂ ಸಮಾನವಾಗಿ ಆದರಿಸುತ್ತ, ‘ಲಲ್ಲಾ ತಾಯಿ’, ‘ಲಲ್ಲಾ ಅಜ್ಜಿ’, ‘ಲಲ್ಲಾ ಡೇಡ್‌’, ‘ಲಲ್ಲಾ ಯೋಗೇಶ್ವರೀ’, ‘ಲಲ್ಲೀಶ್ವರೀ’- ಎಂದೆಲ್ಲ ಇವಳನ್ನು ಕರೆಯುತ್ತಾರೆ. ‘ಮಾತು’ ಎಂದೆನೇ ? ಹೌದು, ಇವಳು ಆಡಿದ ವಚನಗಳನ್ನು ‘ಲಲ್ಲಾ ವಾಕ್‌’ ಎಂದೇ ಕಾಶ್ಮೀರಿಗಳು ಗುರುತಿಸುತ್ತಾರೆ, ತಮ್ಮ ನುಡಿಗಟ್ಟುಗಳಲ್ಲಿ , ಗಾದೆಗಳಲ್ಲಿ, ನಾಣ್ಣುಡಿಗಳಲ್ಲಿ ಬಳಸುತ್ತಾರೆ, ನೆನೆಯುತ್ತಾರೆ. ಅವಳು ಹೇಳುತ್ತಾಳೆ :

ಯಾರವನು, ಯಾರವಳು ಹೂಗುಚ್ಛ ತರುವವರಾರು ?

ಅವನಡಿಗೆ ಅರ್ಪಿಸಲು ಏನೇನ ಹೂವ ತರಬಲ್ಲಿರಯ್ಯಾ ನೀವು ?

ಸಿಂಪಡಿಸಲೇನ ತರಬಲ್ಲಿರಿ ನೀರ ಅವನ ಸಿರಿಮುಡಿಗೆ ?

ಏನ ಜಪಿಸುವಿರಯ್ಯ, ಹೇಳಿ ಲಲ್ಲಗೆ, ಶಿವನು ಮೈದೋರುವನೆ ನಿಮಗೆ ?।। 39।।

ಸು-ಮನವೇ ಹೂವುಗಳು, ಇಚ್ಛೆಗಳ ಕಂಪು ನೆರೆದು ಸೂಡಿ ;

ಅದ ತಂದು ದೃಢಭಾವದಿಂದಲಿಡುವಿರಾ ನೋಡಿ,

ಚಂದಿರನ ಅಮೃತಧಾರೆಯ ಅಭಿಷೇಕ ನೀವು ಮಾಡಿ-

ಕಾಣುವಿರಯ್ಯಲಲ್ಲಳ ಶಿವನ, ನಿಮ್ಮೊಳೇ ಮೌನದಲಿ ಹಾಡಿ! ।।40।।

ಈ ‘ವಾಕ್‌’ಕ್ಕುಗಳನ್ನು ಲಲ್ಲಾ ಹಾಡಿದ್ದು ಹಳೆಯ ಕಾಶ್ಮೀರಿ ಭಾಷೆಯಲ್ಲಿ. ಬಾಯಿಂದ ಬಾಯಿಗೆ ಬಂದ ಜಾನಪದ ವಚನಗಳಾಗಿ ಮೆರೆದ ಮಾತುಗಳು ಇವು. ನಮ್ಮ ಕಾಶ್ಮೀರ ಹಲವಾರು ಸಾಧು ಸಂತರನ್ನ, ಕವಿಗಳನ್ನ, ತತ್ತ್ವವೇತ್ತರನ್ನ, ದಾರ್ಶನಿಕರನ್ನು ಜಗತ್ತಿಗೆ ಕೊಟ್ಟ ಪುಣ್ಯಭೂಮಿ . ಕೆಲವರ ಪ್ರಕಾರ, ನಮ್ಮ ಲಲ್ಲಾ ಅವರಲ್ಲೆಲ್ಲ ಪ್ರಮುಖಳು. ಕೆಲವರು ಕವಯಿತ್ರಿಯೆಂದು, ಕೆಲವರು ಯೋಗಿನಿಯೆಂದು, ಕೆಲವರು ಶಿವಶರಣಳೆಂದು, ಕೆಲವರು ಸೂಫಿಯೆಂದು, ಕೆಲವರಂತೂ ದೈವಾಂಶ ತೋರಿದ ಅವತಾರಿಣಿಯೆಂದು ಎಲ್ಲ ಕಾಶ್ಮೀರಿಗಳು ಅವಳ ಐತಿಹ್ಯಗಳನ್ನು ಬಣ್ಣಿಸಿ ಹೇಳುವುದುಂಟು. ಅವಳಾಡಿದ ಮಾತುಗಳು ಬಹುತೇಕ ಕಾಶ್ಮೀರಿಗಳೆಲ್ಲರ ನಾಲಗೆಯ ಮೇಲೆ ನಲಿದಾಡುವ ಕಾರಣ, ಕಾಶ್ಮೀರೀ ಭಾಷೆ ಅವುಗಳಿಂದ ಸಮೃದ್ಧವಾದ ಕಾರಣ - ಈ ‘ಜಾಣೆ’ ಲಲ್ಲಾ ತುಂಬಾ ಜನಪ್ರಿಯಳಾಗಿರುವ, ಪಂಡಿತ ಪಾಮರ ಪೂಜಿತ ಜನರೆಲ್ಲರ ಕವಯಿತ್ರಿಯೂ ಹೌದು. (ನೋಡಿ : ಜೆ. ಹಿಂಟನ್‌ ನೋವೆಲ್ಸ್‌, ‘ ಡಿಕ್ಷನರಿ ಆಫ್‌ ಕಾಶ್ಮೀರಿ ಪ್ರಾವರ್ಬ್‌ಸ್‌ ಆ್ಯಂಡ್‌ ಸೇಯಿಂಗ್ಸ್‌’, ಬಾಂಬೆ ಮತ್ತು ಲಂಡನ್‌ 1885). ಯಾರು ಆಡಿದ ಮಾತುಗಳು ಜನಜೀವನದಲ್ಲಿ ಹಾಸುಹೊಕ್ಕು, ನಾಣ್ಣುಡಿಗಳಾಗಿ ಮಾರ್ಪಟ್ಟು, ಅತಿ ಸರಳ ಹಾಗೂ ಅತಿ ಗಹನ ವಿಚಾರಗಳನ್ನು ತಿಳಿಸಲು ಅವು ಬಳಕೆಯಾಗತೊಡಗುತ್ತವೆಯೋ, ಅಂಥವರೇ ಶ್ರೇಷ್ಠ ಚಿಂತಕರು. ಕಾಶ್ಮೀರದ ‘ ಅಕ್ಕ ಮಹಾದೇವಿ’ಯಾದ ನಮ್ಮ ಲಲ್ಲಾ ಅಂಥವಳು !

ಕ್ರಿ.ಶ. 1555ರಲ್ಲಿ ಕಾಶ್ಮೀರದ ಪಂಡ್ರೆಥಾನ್‌ ಎಂಬಲ್ಲಿ, ಪಂಡಿತ ಕುಟುಂಬದಲ್ಲಿ ಲಲ್ಲಾ ಹುಟ್ಟಿದಳಂತೆ. ಚಿಕ್ಕವಳಿದ್ದಾಗಲೇ ಬುದ್ಧಿವಂತೆ ಎನಿಸಿಕೊಂಡ ಇವಳಿಗೆ, ಆ ಕಾಲದ ಪದ್ಧತಿಯಂತೆ ಹನ್ನೆರಡನೆಯ ವಯಸ್ಸಿಗೇ ಮದುವೆಯಾಯಿತು. ಗಂಡ, ಅತ್ತೆ ಮಾವಂದಿರೊಂದಿಗೆ ಪಾಂಪುರ್‌ನಲ್ಲಿ ಇದ್ದಾಗ ಗಂಡನ ಮನೆಯವರು ‘ಪದ್ಮಾವತಿ’ ಎಂದು ಕರೆಯುತ್ತಿದ್ದರು. ಅತ್ತೆಗೂ ಸೊಸೆಗೂ ಏಕೋ ಏನೋ ಸರಿ ಬರುತ್ತಿರಲಿಲ್ಲ. ಅತ್ತೆ ತುಂಬಾ ಕಿರುಕುಳ ಕೊಡುತ್ತಿದ್ದಳಂತೆ; ಅನ್ನಕ್ಕೆ ಕಲ್ಲು ಹಾಕಿ ಬಡಿಸುತ್ತಿದ್ದಳೆಂಬ ಸೂಚನೆ ಈ ಒಂದು ಕಾಶ್ಮೀರಿ ನಾಣ್ಣುಡಿಯಲ್ಲಿ ಬರುತ್ತದೆ. ‘ ಹೊಂಡು ಮರಾನ್‌ ಕಿನ ಕಥ ; ಲಾಲಿ ನಲ್ವುತು ಛಲಿನ ಝಾಃ ’ಅಂದರೆ, ‘ದೊಡ್ಡ ಕುರಿಯನ್ನ ಕೊಂದರೋ, ಚಿಕ್ಕ ಕುರಿಯನ್ನೋ- ಎಲ್ಲಾ ಒಂದೇ; ಲಲ್ಲಳ ಊಟಕ್ಕಂತೂ ಕಲ್ಲು ಮಾತ್ರ ತಪ್ಪಿದ್ದಲ್ಲ !’. ಅವಳ ಅತ್ತೆ, ಎಲ್ಲರೆದುರು ಊಟಕ್ಕೆ ಕುಳಿತಿದ್ದಾಗ, ಲಲ್ಲಾಲ ತಟ್ಟೆಯಲ್ಲಿ ಒಂದು ದೊಡ್ಡ ಕಲ್ಲನ್ನಿಟ್ಟು, ಅದರ ಮೇಲೆ ಸ್ವಲ್ಪ ಅನ್ನ ಗುಡ್ಡೆ ಮಾಡಿ ಇರಿಸಿ, ನೋಡುವವರಿಗೆ ತುಂಬಾ ಅನ್ನ ಬಡಿಸುವಂತೆ ಮಾಡಿ, ಸೊಸೆ ಹಸಿದೇ ಇರುವಂತೆ ಕಾಟ ಕೊಡುತ್ತಿದ್ದಳಂತೆ ! ಮಾವ ಮತ್ತು ಗಂಡ ಒಳ್ಳೆಯವರೇ ಆಗಿದ್ದರಿಂದ ಸೊಸೆ ಸಹಿಸಿಕೊಂಡೇ ಇದ್ದಳಂತೆ. ಕೇಳಿಲ್ಲವೇ?: ‘ಲೋಕದೊಳಗೆ ಹುಟ್ಟಿರ್ದ ಬಳಿಕ, ಸ್ತುತಿ ನಿಂದೆಗಳು ಬಂದಡೆ, ಮನದೊಳಗೆ ಕೋಪವ ತಾಳದೆ ಸಮಾಧಾನಿಯಾಗಿ ಇರಬೇಕು ! ’

‘ಹಿಂಡನಗಲಿ ಹಿಡಿವಡೆದ ಕುಂಜರ, ತನ್ನ ವಿಂಧ್ಯವ ನೆನೆವಂತೆ, ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ’ ಲಲ್ಲಾ ಸಹ ಒಡ್ಡಾಡುತ್ತಿದ್ದಳೋ ಏನೋ ; ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಲಲ್ಲಾ ಮನೆ ಬಿಟ್ಟು ಹೊರ ಬಿದ್ದಳೆಂದು ಹೇಳುತ್ತಾರೆ. ಬಯಲೇ ಬಯಲಾದ ‘ಗಿರಿಯಲ್ಲದೆ ಹುಲ್ಲು ಮೊರಡಿಯಲ್ಲಿ ಆಡುವುದೆ ನವಿಲು ?’ ; ವಿಶಾಲವಾದ ‘ಕೊಳವನಲ್ಲದೆ ಕಿರಿವಳ್ಳಕ್ಕೆ ಎಳಸುವುದೆ ಹಂಸೆ ?’ ಚಿಂದಿ ಬಟ್ಟೆಯುಟ್ಟು, ಅರೆ ನಗ್ನ ಅವಸ್ಥೆಯಲ್ಲಿ ಕುಣಿದು ಕುಪ್ಪಳಿಸುತ್ತಾ , ಇದ್ದಕ್ಕಿದ್ದಂತೆಯೇ ಇನ್ನೊಬ್ಬ ಶಿವಶರಣೆ ‘ಚೆನ್ನಮಲ್ಲಿಕಾರ್ಜುನ’ನನ್ನು ಕಾಣ ಹೊರಟವಳಂತೆ ಹೊಸಿಲ ದಾಟಿದಳು.

‘ಅವನ’ನ್ನು ಕಂಡವಳಂತೆ ಹಾಡುತ್ತಿದ್ದ ಈ ಹೆಂಗಸು ಜನರ ಕಣ್ಣಿಗೂ, ಕ್ರಮೇಣ ಬಾಯಿಗೂ ಬಿದ್ದಳು. ‘ದೇವರ ಬೆಳಗನ್ನುಟ್ಟು ಲಜ್ಜೆಗೆಟ್ಟವಳಿಗೆ ಉಡುಗೆ ತೊಡಿಗೆಯ ಹಂಗೇ ?’ ಮೊದ ಮೊದಲು ಅವಳಾಡುತ್ತಿದ್ದ, ಸಾಮಾನ್ಯರಿಗೆ ತಲೆ- ಬುಡ ಅರ್ಥವಾಗದೆ ಹೋಗುತ್ತಿದ್ದ ‘ಮಾತುಗಳು’ ಅವಳನ್ನು ಜನರ ಕಣ್ಣಿಗೆ ಹುಚ್ಚಿಯ ಅಸಂಬದ್ಧ ಪ್ರಲಾಪವಾಗಿ ತೋರಿರಬೇಕು. ಜರಿದವರಿಗೆ, ‘ಮುಡಿ ಬಿಟ್ಟು ಮೊಗ ಬಾಡಿ ತನುಕರಗಿದವಳ ಎನ್ನನೇಕೆ ನುಡಿಸುವಿರಿ ಅಣ್ಣಗಳಿರಾ ? ಎನ್ನನೇಕೆ ಕಾಡುವಿರಿ, ಎಲೆ ತಂದೆಗಳಿರಾ’ ಎಂದು ಇವಳೂ ಗೋಗರೆದಿರಬೇಕು. ಎಲ್ಲೆಲ್ಲಿಯೂ ಹೀಗೇನೇ. ಎಲ್ಲ ದೇಶದಲ್ಲೂ, ಎಲ್ಲಾ ಚಿಂತಕರದೂ, ತಮ್ಮ ಕಾಲಕ್ಕೆ ಮೀರಿದ ಮಾತುಗಳನ್ನು ಆಡಿದಾಗ, ನಡೆದಾಗ ಇದೇ ಪಾಡಲ್ಲವೇ ? ‘ಕೋಡಗನ ಕೋಳಿ ನುಂಗಿತ್ತ ! ’- ಎಂದ ಶಿಶುನಾಳ ಶರೀಪರನ್ನ ಜನ ಮೊದಮೊದಲು ಏನೋ ಬಡಬಡಿಸುತ್ತಾನೆಂದು ಪರಿಹಾಸ ಮಾಡಲಿಲ್ಲವೇ - ಹಾಗೆ. ಆಮೇಲಾಮೇಲೆ ಅವಳ ಒಂದೊಂದು ಮಾತಿಗೂ ಐತಿಹ್ಯಗಳು ಹುಟ್ಟಿಕೊಂಡವು, ಬಾಯಿಯಿಂದ ಬಾಯಿಗೆ ಹರಡಿ, ಅದೇ ಮಾತುಗಳಿಗೆ, ಕತೆಗಳಿಗೆ ರೆಕ್ಕೆ ಪುಕ್ಕ ಕಾಣಿಸಿಕೊಂಡವು, ದಂತಕತೆಗಳು ಗರಿಗೆದರಿದವು !

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shikaripura Harihareshwara writes on Celestial view of Kashmir : divine Poetess Lalleshwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more