• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಠೋಪನಿಷತ್ತಿನ ಋಷಿ ಚಪ್ಪರಿಸುವ ಉಪ್ಪಿನಕಾಯಿ

By Staff
|

*ಎಸ್‌. ಕೆ. ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ

SK Harihareshwaraಕಠೋಪನಿಷತ್ತಿನ ಬಗ್ಗೆ ನಾವೆಲ್ಲ ಅಲ್ಪ- ಸ್ವಲ್ಪವಾದರೂ ಕೇಳಿ ಬಲ್ಲೆವು. ಭಾರತದ ಮತ್ತು ವಿದೇಶದ ಅನೇಕ ಜಿಜ್ಞಾಸುಗಳಿಗೆ ಬಹಳ ಪ್ರಿಯವಾದ ಉಪನಿಷತ್ತು ಇದು. ನಚಿಕೇತನೆಂಬ ಬಾಲಕನೊಬ್ಬನು ‘ಮೃತ್ಯು’ ದೇವತೆಯಾದ ಯಮನನ್ನೇ ಭೇಟಿಯಾಗಿ, ಸಾವು-ಹುಟ್ಟು-ಆತ್ಮ ಮುಂತಾದುವುಗಳ ಬಗ್ಗೆ ನೇರವಾಗಿ ಪ್ರಶ್ನಿಸುವ, ಚರ್ಚಿಸುವ ಕುತೂಹಲಕಾರೀ ಪ್ರಸಂಗ ಇದರ ಮೂಲ ವಸ್ತು. ಜಗತ್‌-ಪ್ರಸಿದ್ಧವಾದ ಭಗವದ್‌-ಗೀತೆಗೂ ಕಠೋಪನಿಷತ್ತಿಗೂ ಹಲವು ಸಾಮ್ಯಗಳುಂಟು. ಎರಡರ ಪ್ರಾರಂಭವೂ ನಾಟಕೀಯವಾಗಿಯೇ ಇದ್ದು, ಓದುಗರ ಮನಸೆಳೆಯುತ್ತದೆ: ಅಲ್ಲಿ , ಯುದ್ಧ ಇನ್ನೇನು ಆರಂಭವಾಯಿತು ಎನ್ನುವ ಸಮಯದಲ್ಲಿ ಬಿಲ್ಲು ಬತ್ತಳಿಕೆಗಳನ್ನು ನೆಲಕ್ಕಿಳಿಸಿ, ತಾನು ಮಾಡುತ್ತಿರುವುದು ಸರಿಯೇ ಎಂದು ಯೋಚಿಸುತ್ತ ಕುಳಿತ ಅರ್ಜುನ, ಸಾರಥಿಯಾಗಿದ್ದ ಕೃಷ್ಣನೊಡನೆ ಸಂವಾದ ಮಾಡುತ್ತಾನೆ. ಅವನ ಪ್ರಶ್ನೆಗಳಿಗೆ ಉತ್ತರಿಸುವ ಕೃಷ್ಣನ ಮಾತುಗಳನ್ನು ಕವಿ ವ್ಯಾಸರು ವಿಸ್ತರಿಸಿ ನಮಗೆ ತಿಳಿಹೇಳುತ್ತಾರೆ. ಅದು ಗೀತೆ.ಇಲ್ಲಿ , ವಾಜಶ್ರವಸ್‌ ಎಂಬ ಒಬ್ಬ ಋಷಿ ದೊಡ್ಡ ಯಜ್ಞ ಮಾಡುತ್ತಿದ್ದಾನೆ. ‘ವಿಶ್ವಜಿತ್‌’ ಎಂಬ ಹೆಸರಿನ ಈ ಯಾಗ ಮಾಡುವಾಗ ತನ್ನಲ್ಲಿರುವ ಎಲ್ಲವನ್ನೂ ದಾನ ಮಾಡುವುದು ಪದ್ಧತಿ. ಯಜ್ಞಕ್ಕೆ ಸಂಬಂಧಿಸಿದಂತೆ ತನ್ನ ಬಳಿಯ ಹಸುಗಳನ್ನು ದಾನ ಮಾಡುತ್ತಿದ್ದಾನೆ. ಅವುಗಳಲ್ಲಿ ಹಲವು ಬಡಕಲು ಗೋವುಗಳೂ ಇವೆ. ಕೊಟ್ಟರೆ ಒಳ್ಳೆಯದನ್ನೇ ಕೊಡಬೇಕು; ಕೊಡಬೇಕು ಎಂಬ ಒಂದೇ ಕಾರಣಕ್ಕೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಏಕೆ ದಾನಮಾಡಬೇಕು ? ಇದು ವಾಜಶ್ರಸ್‌ ಮುನಿಯ ಮಗ ನಚಿಕೇತನ ಅಭಿಪ್ರಾಯ. ‘ ಇದ್ದ ಬದ್ದದ್ದನ್ನೆಲ್ಲಾ ದಾನವಾಗಿ ಕೊಟ್ಟು ಬಿಡುತ್ತಿದ್ದೀಯಲ್ಲಾ ; ಹಾಗಾದರೆ ಅಪ್ಪಾ, ನನ್ನನ್ನು ಯಾರಿಗೆ ದಾನವಾಗಿ ಕೊಡುತ್ತೀಯಾ, ಹ್ಞಾ ?’ - ಎಂದು ತಂದೆಯನ್ನು ಹಂಗಿಸಿ ಕೇಳುತ್ತಾನೆ. (ಸ ಹೋವಾಚ, ಪಿತರಮ್‌-‘ತಾತ, ಕಸ್ಮೈ ಮಾಂ ದಾಸ್ಯಸಿ ?’- ಇತಿ।) ಬೇರೆಲ್ಲ ಮುಖ್ಯ ಕೆಲಸಗಳಲ್ಲಿ ತೊಡಗಿದ ತಂದೆ, ಮತ್ತೆ ಮತ್ತೆ ಕೇಳುತ್ತಿರುವ, ಹುಡುಗನ ಉದ್ಧಟತನದ ಪ್ರಶ್ನೆಗೆ ಬೇಸತ್ತು, ಕೋಪದಿಂದ, ‘ನಿನ್ನನ್ನು ಯಮನಿಗೇ ಕೊಟ್ಟು ಬಿಡುತ್ತೇನೆ’(‘ಮೃತ್ಯವೇ ತ್ವಾಂ ದದಾಮಿ।।’)- ಎಂದು ಹೇಳಿಬಿಡುತ್ತಾನೆ.ತಂದೆಯ ಮಾತನ್ನು ಅಕ್ಷರಶಃ ನಂಬಿ, ನಚಿಕೇತ ಯಮನ ಮನೆಗೆ ಬರುತ್ತಾನೆ. ಅಲ್ಲಿ ಯಮನಿಗಾಗಿ ಮೂರು ದಿನ ಅನ್ನಾಹಾರಗಳಿಲ್ಲದೆ ಕಾದು ಕುಳಿತಿರುತ್ತಾನೆ. ಆಮೇಲೆ ಬಂದ ಯಮ, ಬಾಲಕ ನಚಿಕೇತನನ್ನು ಸತ್ಕರಿಸಿ, ಬಂದ ಕಾರಣ ಕೇಳಿ ತಿಳಿದು ಅವನ ಮನವೊಲಿಸಿ ಮನೆಗೆ ಹಿಂತಿರುಗುವಂತೆ ಪ್ರಚೋದಿಸಲು ‘ವರ’ ಕೊಟ್ಟು, ಪ್ರಯತ್ನಿಸುತ್ತಾನೆ. ಬಡಪೆಟ್ಟಿಗೆ ಒಪ್ಪದ ಜಾಣ ನಚಿಕೇತ, (ಜೊತೆಗೆ, ಕಠೋಪನಿಷತ್ತಿನ ದೃಷ್ಟಾರ ಋಷಿಯೂ ಸಹ) ಯೋಚಿಸುತ್ತಾನೆ: ಹುಟ್ಟು- ಸಾವು- ಆತ್ಮ ಈ ಕ್ಷೇತ್ರದಲ್ಲಿ ಚೆನ್ನಾಗಿ ತಿಳಿದ, ಅಧಿಕೃತವಾಗಿ ತಿಳಿ ಹೇಳಬಲ್ಲ ವ್ಯಕ್ತಿಯೆಂದರೆ ಯಮನಲ್ಲದೆ ಬೇರೆ ಇನ್ನಾರು ? ಪ್ರಶ್ನೋತ್ತರಗಳು ನಡೆಯುತ್ತವೆ. ಅದರ ಸಾರಸರ್ವಸ್ವವೇ ಸೂತ್ರರೂಪವಾಗಿ, ಶ್ಲೋಕರೂಪದಲ್ಲಿ ಇರುವ ಈ ಕಠೋಪನಿಷತ್ತು ! ಇದೇ ಅತಿ ಗಹನವಾದ ವಿಚಾರಗಳ ಬಗ್ಗೆ, ಭದ್ರವಾಗಿ ಮುಚ್ಚಿದ ಪೆಟ್ಟಿಗೆಯ ಮುಚ್ಚಳವನ್ನು ಒಡೆದು ತೆಗೆದು, ಒಳಗೇನಿದೆಯೆಂದು ಇಣುಕಿ ನೋಡುವ ಒಂದು ಪ್ರಯತ್ನ !

***

ಇಂಥ ಗಂಭೀರ ಚಿಂತನೆಯ ನಡುವಿನಲ್ಲಿ, ಎಲ್ಲರಿಗೂ ಬೇಗ ಅರ್ಥ ಹೊಳೆಯುವ ಒಂದು ಲೌಕಿಕ ಉಪಮೆಯನ್ನು ಕವಿ ಬಳಸುತ್ತಾನೆ. (ದೊಡ್ಡದಾಗಿ ಮರ ಕಾಣುತ್ತಿದೆಯಲ್ಲವೇ ? ಅಲ್ಲೇ ಆ ಕೊಂಬೆಗಳ ನಡುವೆ ಚಿಕ್ಕದಾಗಿ ಮೂಡಿದ್ದಾನೆ ಬಿದಿಗೆಯ ಚಂದ್ರ ಎನ್ನುವ ‘ಶಾಖಾ-ಚಂದ್ರ ನ್ಯಾಯ’ದಂತೆ ಎನ್ನೋಣವೇ ?) ಒಂದು ಲಘು ನಗೆ ಮಿಂಚು ಚರ್ಚೆಯಲ್ಲಿ ಆಳವನ್ನು ಅಳೆಯಲು ಸಹಾಯಕವಾದರೆ ನಮ್ಮ ಋಷಿಗೆ ಖುಷಿಯೋ ಖುಷಿ ! ಇದನ್ನೇ ಈ ಲೇಖನದಲ್ಲಿ ನಾನು ಪ್ರಸ್ತಾಪಿಸುವುದು !

ಕಠೋಪನಿಷತ್ತಿನ 1.2.25 ನೇ ಶ್ಲೋಕದ ಬಗ್ಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಪೂರ್ವಸೂರಿಗಳಿಗೆ, ಅಭ್ಯಸಿಸುವ ನನ್ನಂಥ ಹಲವರಿಗೆ ಅದು ಸ್ವಾರಸ್ಯಕರವಾಗಿ ಬಹಳ ದಿನಗಳ ಹಿಂದೆಯೇ ಕಂಡಿರಬೇಕು ! ಅದರ ಬಗ್ಗೆ ಬರೆಯಲು ನನಗೊಂದು ಅವಕಾಶವಾಯಿತು. ಅದೇ ಸಂತೋಷ !

‘ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನ:।

ಮೃತ್ಯುರ್‌ ಯಸ್ಯ ಉಪಸೇಚನಂ ಕ ಇತ್ಥಾ ವೇದ ಯತ್ರ ಸಃ।।

-ಕಾಠಕ ಶ್ರುತಿ ಉಪ.1.2.25’

Nachiketaಬ್ರಾಹ್ಮಣನಾಗಲಿ, ಕ್ಷತ್ರಿಯನಾಗಲಿ,

ಯಾರಿಗೆ ಎಲ್ಲರು, ಜೀವಿಗಳೆಲ್ಲರೂ

ತಿನ್ನುವ ಅನ್ನದ ಪರಿಯಲಿ ಇರುವರೋ,

ಅವನೇ ಮೃತ್ಯು, ಸಮವರ್ತಿ ಕಣಾ !

ಊಟಕೆ ಉಪ್ಪಿನಕಾಯಿಯ ಹಾಗೆ

ಯಾರಿಗೆ ಮೃತ್ಯುವು ಆಗಿದೆಯೋ,

ಅಂತಹ ಅಂತಕನೆಲ್ಲಿಹ ಎಂಬುದ

ಅರಿತವರಾರು, ಓ ಜಾಣ !

- ಎಂದು ಭಾವಾನುವಾದ ಮಾಡಬಹುದು, ಈ ಕೃಷ್ಣ -ಯಜುರ್ವೇದದ ತೈತ್ತೀರಿಯ ಶಾಖೆಗೆ ಸೇರಿದ ಉಪನಿಷದ್‌ ಶ್ಲೋಕವನ್ನ.

ಮೃತ್ಯು ಹುಟ್ಟಿದವರನ್ನೆಲ್ಲಾ ಕಬಳಿಸುತ್ತಾನೆ ; ‘ಎಲ್ಲರನ್ನೂ’ ಎಂದು ಹೇಳಿಲ್ಲ- ಎಂಬ ಅಡ್ಡ ಮಾತು ಬೇಡ. ಋಗ್ವೇದ ಹೋತೃವಿನ ಕೈಪಿಡಿಯಾಗಿದ್ದಂತೆ, ಸಾಮವೇದ ಉದ್ಗಾತೃವಿನ ಹೊತ್ತಿಗೆಯಾಗಿದ್ದಂತೆ, ಯಜುರ್ವೇದವೂ ಯಜ್ಞಯಾಗಾದಿಕರ್ಮಗಳ ಸಂಚಾಲಕ ಪುರೋಹಿತನಾದ ಅಧ್ವರ್ಯುವಿನ ಉಪಯೋಗಕ್ಕೆ ಮೀಸಲಾದ ಮೂಲ ಮಾತೃಕೆಯಾಗಿತ್ತು. ಈ ಯಜ್ಞಯಾಗಾದಿಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದವರೆಂದರೆ, ಆ ಕಾಲದಲ್ಲಿ ಬ್ರಾಹ್ಮಣ ಕ್ಷತ್ರಿಯರೇ. ಆದ್ದರಿಂದ ಈ ಎರಡು ವರ್ಣಗಳನ್ನು ಹೆಸರಿಸಿದ್ದರೂ, ‘ಎಲ್ಲರೂ’ ಎಂಬ ಭಾವವೇ ಋಷಿಯ ಉದ್ದೇಶ.

ಅಂದರೆ, ಹುಟ್ಟಿನಿಂದ, ಗುಣದಿಂದ, ಜೀವನೋಪಾಯಕ್ಕೆ ಮಾಡುವ ಉದ್ಯೋಗದಿಂದ, ಅದಕ್ಕೆ ಸೇರಿಕೊಂಡೋ ಹೊರತಾಗಿಯೋ ತೊಡಗಿದ ಕೆಲಸದಿಂದ, ಮನೋಭಾವದಿಂದ - ಏನೆಲ್ಲ ಜಾತಿಮತಗಳು ಇವೆಯೋ (ನೋಡಿ: ‘ಚಾತುರ್‌-ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶ:’-ಗೀತಾ 4.13) ಅವೆಲ್ಲಾ ಆ ‘ಕಾಲ’ನಲ್ಲಿ ಕರಗಿ ಹೋಗುತ್ತವೆ.

ಒಬ್ಬ ವ್ಯಕ್ತಿಗೂ ಹಾಗೆಯೇನೇ: ಇನ್ನೂ ಬೆಳವಣಿಗೆಯ ಮೊದಮೊದಲ ಹಂತದಲ್ಲಿ ಇರುವಾಗ, ಸಮಾಜದ ಕಟ್ಟಳೆಗೆ ಒಳಪಟ್ಟು, ಅವನು ಒಂದು ವರ್ಣಕ್ಕೋ, ವರ್ಗಕ್ಕೋ ಸೇರಿ ಇದ್ದುಕೊಂಡಿರಬಹುದು. ಆ ಕಟ್ಟು ಪಾಡು ಆ ವ್ಯಕ್ತಿಗೆ ಆ ಬೆಳವಣಿಗೆಯ ಕಾಲಕ್ಕೆ ಅನುಕೂಲವನ್ನೋ ಅನಾನುಕೂಲವನ್ನೋ ಒದಗಿಸಿರಬಹುದು; ಈ ಕೊನೆಗಾಲದಲ್ಲಿ ಅದೆಲ್ಲವನ್ನೂ ಮುಗಿಸಿ, ಮೀರಿ, ಈ ‘ಅಂತಕ’ನನ್ನು ಮುಟ್ಟುತ್ತಾನೆ.

ಊಟ ಮುಗಿಸಿದ ಮೇಲೆ, ಅದು ಕೇವಲ ಭೋಜನವಾಗಿರಲಿ, ಮೃಷ್ಟಾನ್ನ ಭೂರಿ ಭೋಜನವಾಗಿರಲಿ, ಕೊನೆಯಲ್ಲಿ ಚಪ್ಪರಿಸುವ ‘ಉಪಸೇಚನ’ವಿರಲೇ ಬೇಕು ! ಇದೇ ಒಂದು ತರಹಾ ಷಡ್ರಸೋಪೇತವಾದ ಉಪ್ಪಿನಕಾಯಿ ! ‘ಮೃತ್ಯು’ವೂ ಸಹ ಹೀಗೆ ಊಟದ ಕೊನೆಯಲ್ಲಿ ಚಪ್ಪರಿಸುವ ಉಪ್ಪಿನಕಾಯಿ - ಎನ್ನುತ್ತಾನೆ ಭೋಜನಪ್ರಿಯ ಕಠೋಪನಿಷತ್ತಿನ ಋಷಿ !

ಯಾವ ಊಟ ? ಯಾರಿಗೆ ಊಟ ? ಕಾಲ ಕೂಡಿ ಬಂದೀತೆನಲು, ತನ್ನ ನಾಲಗಿ ಚಾಚಿ ಎಲ್ಲವನ್ನೂ ನುಂಗಿ ಕಬಳಿಸುವುದೇ ಮೃತ್ಯುದೇವತೆಯ ಪರಿಪಾಠ. ಕೇಳಿಲ್ಲವೇ :

‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ...

ಕೊಡಲಿ ಕುಡುಗೋಲು ಕೈ ತಂದ ;

ಕೊಡಲಿ ಕುಡುಗೋಲುಗಳ ಕೈ ತಂದ, ಜವರಾಯ-

ಫಲಬಿಟ್ಟ ಮರಗಳ ಕಡಿ ಬಂದ !’

Nachiketaಇದು ಮೃತ್ಯುವಿನ ಅನುದಿನದ ಊಟ. ಹುಟ್ಟಿದವರೆಲ್ಲ ಅವನಿಗೆ ಕಟ್ಟಿಟ್ಟ ಬುತ್ತಿ.

ಹಾಗೆಯೇ ಹುಟ್ಟಿದ ಎಲ್ಲಾ ಜಂತುಗಳಿಗೂ ಮೃತ್ಯುವು ಈ ಜೀವನವೆಂಬ ಊಟದ ಕೊನೆಯ ಉಪ್ಪಿನಕಾಯಿಯ ಹಾಗೆ- ಎಂದು ಯಾರು ತಿಳಿಯಬಲ್ಲರೋ, (‘ಜಾತಸ್ಯ ಹಿ ಧ್ರುವೋ ಮೃತ್ಯು:- ಗೀತಾ 2.27’) ಆ ಜ್ಞಾನಿಯು ಮೃತ್ಯುವನ್ನು ‘ಅತಿಕ್ರಮಿಸ’ಬಲ್ಲ . ಅಂದರೆ, ಅಂಥವನಿಗೆ ‘ಮೃತ್ಯು’ ಭಾವ ಏನೂ ಪ್ರಭಾವ ಬೀರದು.

ಈ ‘ಮೃತ್ಯು’ ನಿಶ್ಚಿತವಾಗಿ ಒಂದಲ್ಲ ಒಂದು ದಿನ ‘ಕೊನೆಗೆ(?)’ ಬಂದೆರಗುತ್ತದೆ- ಎಂದಮೇಲೆ, ಅದು ಈಗ ಎಲ್ಲಡಗಿದೆ? ‘ಎಲ್ಲಿ ?’ ‘ಎಲ್ಲಿ ?’- ಇದು ಎಲ್ಲರನ್ನೂ, ಎಲ್ಲ ಕಾಲದಲ್ಲೂ ಕಾಡುತ್ತಿರುವ, ಬಗೆಹರಿಯದ, ಉತ್ತರ ಸಿಗದ ಪ್ರಶ್ನೆ ! ಇದಕ್ಕೆ ಏನಾದರೂ ಸಮರ್ಪಕ ಉತ್ತರವುಂಟೆ, ನಿಮ್ಮಲ್ಲಿ ?- ಎಂದು ಕಠೋಪನಿಷತ್ತಿನ ಋಷಿ ಓದುಗರನ್ನು ಪ್ರಶ್ನಿಸುತ್ತಿದ್ದಾನೆ.

** ** **

ಮೇಲೆ ಹೇಳಿದುದಷ್ಟೂ ‘ಮೃತ್ಯು’ ಪರವಾಗಿ ಮಾಡಿದ ವ್ಯಾಖ್ಯಾನವಾಯಿತು. ಅಂದರೆ, ಅದು ಪ್ರತ್ಯೇಕವಾಗಿ ಇದೊಂದೇ ಪದ್ಯವನ್ನು ನೋಡಿದಾಗ ಸ್ಫುರಿಸುವ ಆಲೋಚನೆಗಳು.

ಆದರೆ, ಈ ಶ್ಲೋಕಕ್ಕೆ ಮೊದಲು ಬರುವ ಕಠೋಪನಿಷತ್ತಿನ ಈ ಭಾಗದ ಉಳಿದೆಲ್ಲ ಶ್ಲೋಕಗಳನ್ನು ಗಮನಕ್ಕೆ ತೆಗೆದುಕೊಂಡರೆ, ಇನ್ನೊಂದು ಅರ್ಥವ್ಯಾಪ್ತಿಗೂ ಈ ಪ್ರಕೃತ ಶ್ಲೋಕ ಒಳಗೊಳ್ಳುತ್ತದೆ: ಆಗ,

ಬ್ರಾಹ್ಮಣನಾಗಲಿ, ಕ್ಷತ್ರಿಯನಾಗಲಿ,

ಯಾರಿಗೆ ಎಲ್ಲರು, ಜೀವಿಗಳೆಲ್ಲರೂ

ತಿನ್ನುವ ಅನ್ನದ ಪರಿಯಲಿ ಇರುವರೋ,

ಅವನೇ ಆತ್ಮನು, ಸಮವ್ಯಾಪಿ ಕಣಾ!

ಊಟಕೆ ಉಪ್ಪಿನಕಾಯಿಯ ಹಾಗೆ

ಯಾರಿಗೆ ಮೃತ್ಯುವು ಆಗಿದೆಯೋ,

ಅಂತಹ ಆತ್ಮನು ಎಲ್ಲಿಹ ಎಂಬುದ

ಅರಿತವರಾರು, ಓ ಜಾಣ !

- ಎಂದು ‘ಆತ್ಮ’ದ ಪರವಾಗಿ ಈ ಶ್ಲೋಕವನ್ನು ಅವಗಾಹಿಸಬೇಕಾಗುತ್ತದೆ.

‘ನ ಆಯಂ ‘ಆತ್ಮಾ’ ಪ್ರವಚನೇನ ಲಭ್ಯೋ,

ನ ಮೇಧಯಾ, ನ ಬಹುನಾ ಶ್ರುತೇನ।

ಯಂ ಏವ ವೃಣುತೇ, ತೇನ ಲಭ್ಯಸ್‌, ತಸ್ಯ

ಏಷಾ ಆತ್ಮಾ ವಿವೃಣುತೇ ತನೂಂ ಸ್ವಾಮ್‌।।’’

ಈ ‘ಆತ್ಮ’ ಎಂಬುದೇನಿಹುದು,

ಬರಿ ಮಾತು-ಕತೆಯಿಂದ ಸಿಗುವ ವಸ್ತುವಲ್ಲ !

ಓದಿ ತಿಳಿಯಲಳವಲ್ಲ, ಉಹ್ಞು!

ಬಲು ಜಾಣತನದಿಂದಲೇ ? ಇಲ್ಲ,

ಬುದ್ಧಿವಂತಿಕೆಯಿಂದಲೂ ಸಾಧ್ಯ ಇಲ್ಲವೇ ಇಲ್ಲ !

ಯಾರು, ಆದರೆ, ಎಡೆಬಿಡದೆ ಬೇಡುವರೋ ಒಮ್ಮನದಿ,

ಅವರಿಗೇ ಅದು ಲಭ್ಯ-

ಆತ್ಮನೇ ತನ್ನೊಡಲ ತೋರಿಬಿಡುವ!

- ಕಠ ಉಪ. 1.2.23

ಈ ಆತ್ಮ- ಜ್ಞಾನ ಕಠ 1.2.24 ರಲ್ಲಿ ಹೇಳುವಂತೆ, ‘‘ಕೆಟ್ಟ ಆಚರಣೆಯಿಂದ ದೂರಹೋಗದಿರುವವನಿಗೆ, ಶಾಂತನಲ್ಲದವನಿಗೆ, ಚದುರಿಹೋಗುವ ಮನಸ್ಸನ್ನೆಲ್ಲಾ ಒಂದೆಡೆ ಕೂಡಿಹಾಕಿಕೊಳ್ಳಲಾಗದವನಿಗೆ, ಮನಃಶಾಂತಿಯಿಲ್ಲದವನಿಗೆ- ಬರೀ ತಿಳುವಳಿಕೆ ಒಂದರಿಂದಲೇ ಲಭ್ಯವಿಲ್ಲ !’’ ಅವನು ಯಾವುದೇ ವರ್ಣದವನಾಗಿರಲಿ, ಯಾವುದೇ ವರ್ಗದವನಾಗಿರಲಿ, ಈ ‘ಆತ್ಮ’ ಸಾಕ್ಷಾತ್ಕಾರ ಆಯಿತೆಂದರೆ ಅವೆಲ್ಲಾ ‘ನಾಮ- ರೂಪ’ಗಳೂ, ಮಾನವ ನಿರ್ಮಿತ ವಿಂಗಡಣೆಗಳೂ ಹೇಳ ಹೆಸರಿಲ್ಲದಂತೆ, ಸಾಗರದಲ್ಲಿ ನದಿಗಳಂತೆ, ಈ ಆತ್ಮನಲ್ಲಿ ಕರಗಿ ಹೋಗುವುವು. ಆತ್ಮನಿಗೆ ಎಲ್ಲವೂ ಆಹಾರವಾಗಿಬಿಡುವುವು! ಸಕಲ ಚರಾಚರ ವಸ್ತುಗಳೂ ಕೊನೆಗೆ, ಚರಮ ಹಂತದಲ್ಲಿ, ಲೀನವಾಗುವುದು ಈ ‘ಪರಮ- ಆತ್ಮ’ನಲ್ಲಿಯೇ!

ಪರಮ ಆತ್ಮ ! ಅವನಿಂದಲೇ ಎಲ್ಲಾ ಹುಟ್ಟೂ, ಅವನಲ್ಲೇ ಎಲ್ಲವೂ ಅಂತ್ಯ! ತೈತ್ತರೀಯ ಉಪನಿಷತ್‌ (3.1) ಹೇಳುವಂತೆ: ‘ಯತೋ ವಾ ಇಮಾನಿ ಭೂತಾನಿ ಜಾತ್ಯನ್ತೇ। ತೇನ ಜಾತಾನಿ ಜೀವನ್ತಿ। ಯತ್‌ ಪ್ರಯನ್ತಿ ಅಭಿ- ಸಂವಿಶನ್ತಿ ।।’ (ಎಲ್ಲಿಂದ ಇವೆಲ್ಲವೂ ಹುಟ್ಟಿ ಬಂದವೋ, ಯಾವುದರಿಂದ ಇವೆಲ್ಲ ಈಗ ಬದುಕಿರುವುವೋ, ಕೊನೆಗೆ ಅದರೊಳಗೇ ಇವೆಲ್ಲವೂ ಹೋಗಿ ಸೇರುತ್ತವೆ!). ಇದನ್ನೇ ಮಹಾಭಾರತದ ಭೀಷ್ಮ ಪರ್ವ ಅಂತರ್ಗತ ‘ವಿಷ್ಣು ಸಹಸ್ರನಾಮ’ ಪ್ರಾರಂಭದಲ್ಲಿ ನಮಗೆ ನೆನಪಿಸುವುದು:

‘ಯತ: ಸರ್ವಾಣಿ ಭೂತಾನಿ ಭವನ್ತಿ ಆದಿ ಯುಗಾಗ (ದ) ಮೇ।

ಯಸ್ಮಿನ್ಶ್‌ ಚ ಪ್ರಲಯಂ ಯಾತಿ ಪುನರ್‌ ಏವ ಯುಗಕ್ಷಯೇ।।’

(ಈ ಸೃಷ್ಟಿಯ ಮೊದಲ ವೇಳೆಯಿಂದ ಹಿಡಿದು ಕೊನೆಯವರೆಗೂ ಇಲ್ಲಿರುವ ಎಲ್ಲ ಸ್ಥಾವರ ಜಂಗಮ ವಸ್ತುಗಳೂ ಕೊನೆಗೆ ಪ್ರಳಯಕಾಲದಲ್ಲಿ ‘ಅವನ’ಲ್ಲಿಯೇ ಹೋಗಿ ಸೇರಿ ಬಿಡುತ್ತವೆ!)

ಪ್ರತಿ ವ್ಯಕ್ತಿಗೋ ಅವನ ಅಂತ್ಯವೇ ಅವನ ಪಾಲಿನ ಯುಗಕ್ಷಯ, ಪ್ರಳಯ!

‘ಆತ್ಮ’ನನ್ನು ಒಮ್ಮೆ ಅರಿತನೆಂದರೆ, ಊಟದ ಕೊನೆಗೆ ಬರುವ ಉಪ್ಪಿಯಕಾಯಿಯಂತೆ ಇರುವ ಈ ಮೃತ್ಯು ಏನಿದೆ ಅದನ್ನು ‘ಅತಿಕ್ರಮಿ’ಸಲು, ಆತಂಕನ ಹಿಡಿತದಿಂದ ತಪ್ಪಿಸಿಕೊಳ್ಳಲು, ಈ ಮರ್ತ್ಯನಿಗೆ ಸಾಧ್ಯ. ಆದರೆ, ಈ ‘ಆತ್ಮ’ ಎಲ್ಲಿದ್ದಾನೆಂದು ಬಲ್ಲವರಾರು? ಋಗ್ವೇದ 10.129ರ ‘ನಾಸದೀಯ ಸೂಕ್ತ’ದಲ್ಲಿ ಹೇಳುವಂತೆ. ‘ವೇದ ಯದಿ, ವಾ ನ ವೇದ?’- ‘ಗೊತ್ತೋ ಅಥವಾ ಗೊತ್ತೇ ಇಲ್ಲವೋ?’ ಎಂದು ಋಷಿ ಕೇಳುತ್ತಾನೆ! ಬೃಹದ್‌ ಅರಣ್ಯಕ ಉಪನಿಷತ್ತಿನಲ್ಲಿ (1.2.1) ಹೇಳುವಂತೆ, ಈ ಆತ್ಮನಲ್ಲಿ ‘ಮೃತ್ಯು’ವೂ ಅಂತರ್ಗತವಾಗಿ ಬಿಡುತ್ತದೆ!

ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ!

(ಟಿಪ್ಪಣಿ : ಕರ್ನಲ್‌ ಜಾಕೊಬ್‌ ಅವರ ಉಪನಿಷತ್ತುಗಳ ‘ಕನ್ಕಾರ್ಡೆನ್ಸ್‌’ ಗ್ರಂಥದ ಪ್ರಕಾರ, ಇಲ್ಲಿ ಬಿಟ್ಟರೆ ಬೇರೆ ಯಾವ ಉಪನಿಷತ್ತಿನಲ್ಲೂ ಈ ‘ಉಪಸೇಚನ’ ಸಂಸ್ಕೃತ ಪದ ಕಾಣಸಿಗದು; ಇಲ್ಲಿ ಮಾತ್ರಾ ಬರುವ ಈ ‘ಉಪಸೇಚನ’ ಪದಕ್ಕೆ, ಡಾ.ರಾಧಾಕೃಷ್ಣನ್‌ ಅವರು, ಜರ್ಮನಿಯ ಪ್ರೊ.ಪಾಲ್‌ ಡ್ಯುಸನ್‌ರವರೂ ಮತ್ತು ಪ್ರೊ.ರಾಬರ್ಟ್‌ ಹ್ಯೂಂ ಅವರೂ ‘ಸಾಸ್‌’ ಎಂದು ಅರ್ಥ ಮಾಡಿದ್ದರೆ, ಪ್ರೊ.ಪ್ಯಾಟ್ರಿಕ್‌ ಆಲಿವೆಲ್‌ ಅವರು ‘ಸ್ಪ್ರಿಂಕಲ್ಡ್‌ ಸಾಸ್‌’ ಎಂದು ಭಾಷಾಂತರಿಸಿದ್ದಾರೆ; ಪ್ರೊ.ಮ್ಯಾಕ್ಸ್‌ ಮುಲ್ಲರ್‌ ಅವರು, ಸ್ವಾಮಿ ಪ್ರಭವಾನಂದ ಅವರೂ, ಫ್ರೆಡರಿಕ್‌ ಮ್ಯಾನ್ಚೆಸ್ಟರ್‌ ಅವರೂ ‘ಕಾಂಡಿಮೆಂಟ್‌’ ಎಂದು ತೆಗೆದುಕೊಂಡಿದ್ದಾರೆ; ಡಾ.ಎನ್‌.ಎಸ್‌.ಅನಂತರಂಗಾಚಾರ್ಯರು ‘ಕರ್ರಿ’ ಎನ್ನುತ್ತಾರೆ; ಸ್ವಾಮಿ ಗಂಭೀರಾನಂದರ (ಶ್ರೀ ರಾಮಕೃಷ್ಣಾಶ್ರಮದ) ಶಂಕರಭಾಷ್ಯದ ಅನುವಾದದಲ್ಲಿ ‘ಸಪ್ಲಿಮೆಂಟ್‌ ಟು ದಿ ಫುಡ್‌, ಲೈಕ್‌ ಕರ್ರಿ’- ಎನ್ನುತ್ತಾ, ಆಹಾರವಾಗಲು ಅನರ್ಹ ಎಂದು ಅರ್ಥೈಸುತ್ತಾರೆ. ಆಪ್ಟೆ ಅವರು ‘ಜ್ಯೂಸ್‌’ ಎನ್ನುತ್ತಾರೆ; ‘ನೀರು ಚಿಮುಕಿಸುವುದು’ ಎಂಬ ಅರ್ಥವನ್ನು ‘ಶಬ್ದಾರ್ಥ ಕೌಸ್ತುಭ’ ಶಬ್ದಕೋಶದ ಶ್ರೀ ಚಕ್ರವರ್ತಿ ಶ್ರೀನಿವಾಸಗೋಪಾಲಾಚಾರ್ಯರು ಕೊಡುತ್ತಾರೆ. ಅವರದ್ದೇ ಆದ, ನಾನು ಮೊಟ್ಟಮೊದಲು ಓದಿದ ಸಂಸ್ಕೃತ ಬಾಲಬೋಧೆ, ‘ಸಂಸ್ಕೃತ ನವೀನ ಸರಣಿ- ಭಾಗ 1(1947)’ ಯಲ್ಲೂ ‘ವ್ಯಂಜನಾಯ ಆಮಲಕಸ್ಯ, ಜಂಭೀರಸ್ಯ ವಾ ಉಪದಂಶಂ ಆನಯ’- ಎಂದು ಉಪ್ಪಿನಕಾಯಿಗೆ ಪರ್ಯಾಯ ಪದ ಕೊಟ್ಟಿದ್ದಾರೆ; ‘ಸಂಸ್ಕೃತ ಭಾರತಿ’ಯ ‘ಪಲ್ಲವ ಪ್ರಕಾಶನ’ದವರೂ ‘ಉಪಸೇಚನ’ಕ್ಕೆ ‘ಚಟ್ನಿ’ ಎಂದು ಹೇಳಿ, ಉಪ್ಪಿನಕಾಯಿಗೆ ‘ಉಪದೇಶಂ’ ಎನ್ನುತ್ತಾರೆ; ಆದರೆ, ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಸೋಮನಾಥಾನಂದರ ‘ಉಪನಿಷತ್‌ ಭಾವಧಾರೆ’ಯಲ್ಲಿ ಅವರು ಕೊಡುವ ‘ಉಪ್ಪಿನ ಕಾಯಿ’ ಎಂಬ ಅರ್ಥವೇ ‘ಉಪಸೇಚನ’ಕ್ಕೆ ಸೂಕ್ತವೆಂದು ಬಗೆದು, ನಾನಿಲ್ಲಿ ಅದರ ರುಚಿನೋಡುತ್ತಿದ್ದೇನೆ!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more