• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವಸೂರಿಗಳು ಕಂಡ ಕಾಶ್ಮೀರ

By Super
|

ಭಾರತೀಯರ ಅತಿದೊಡ್ಡ ರಮ್ಯ ಕನಸು‘ಕಾಶ್ಮೀರ’ ; ಅತಿದೊಡ್ಡ ದುರಂತವೂ ಕಾಶ್ಮೀರ! ಇದನ್ನು ವಿಪರ್ಯಾಸ ಅನ್ನುತ್ತೀರಾ, ವಿಧಿ ವಿಪರೀತ ಅನ್ನುತ್ತೀರಾ ? ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಬೇಕಿದ್ದ ಚೆಲುವಿನ ಪವಿತ್ರ ಕೊಳ್ಳದಲ್ಲಿ ನಿತ್ಯ ರಕ್ತಪಾತ. ಕಾಶ್ಮೀರ ಕೊಳ್ಳದ ನೆತ್ತರ ಕತೆಗಳ ಕೇಳಿ ಕೇಳಿ ಮನಸ್ಸುಗಳು ಜಡ್ಡುಗಟ್ಟಿವೆ. ಕಾಶ್ಮೀರ ಎಂದರೆ- ಕಣ್ಣ ಮುಂದೆ ಬರುವುದು ಪ್ರಕೃತಿಯ ಸುರ ಸೌಂದರ್ಯ, ಸೇಬು, ಶೀತಲ ಗಾಳಿ, ಸುಂದರ ಸ್ತ್ರೀ ಪುರುಷರು... ಉಹ್ಞೂಂ.. ಕೋವಿ ಗುರಿಯಲ್ಲಿ ಬದುಕು ಸವೆಸುತ್ತಿರುವ ಭಯಗ್ರಸ್ತ ಮುಖಗಳೇ ಕಣ್ಣೆದುರು ಕುಣಿಯುತ್ತವೆ. ನಮ್ಮ ಕಾಶ್ಮೀರ ಹೇಗಿತ್ತು ಗೊತ್ತಾ ? ಇಂಥದೊಂದು ಸಾಂಸ್ಕೃತಿಕ ಅಧ್ಯಯನದ ಲೇಖನಮಾಲೆ ದಟ್ಸ್‌ಕನ್ನಡಲ್ಲಿ ಪ್ರಾರಂಭವಾಗುತ್ತಿದೆ. ಪ್ರತಿ ಬುಧವಾರ ಪ್ರಕಟವಾಗುವ ಶಿಕಾರಿಪುರ ಹರಿಹರೇಶ್ವರ ಅವರ ಈ ಲೇಖನ ಮಾಲೆ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ಕಾಶ್ಮೀರ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಹೇಗಿತ್ತು ಗೊತ್ತಾ? ಪೂರ್ವಸೂರಿಗಳು ಕಂಡ ಕಾಶ್ಮೀರಕ್ಕೆ ನಿಮಗೆಲ್ಲ ಸ್ವಾಗತ.

ನಮ್ಮ ಕನ್ನಡದ ಕೆಲವು ಪ್ರಾಚೀನ ಕವಿಗಳ ಹೆಸರಿನಲ್ಲಿ ಒಂದು ಸಾಮ್ಯವಿದೆ; ರನ್ನ, ಜನ್ನ, ಪೊನ್ನ- ಇವೆಲ್ಲ ‘ನ್ನ’ ಅಂತವಾಗಿವೆ. ಆಂಧ್ರ ಪ್ರದೇಶದಲ್ಲಿನ ಆಸುಪಾಸಿನಲ್ಲಿದ್ದ ಕೆಲವು ಕನ್ನಡಿಗರ ಹೆಸರುಗಳು ಹೀಗೆಯೇ ‘ಗ’ ಅಂತವಾಗಿವೆ : ಪೊನ್ನಿಗ, ಜನ್ನಿಗ, ಅರಿಗ ಇತ್ಯಾದಿ. ಸಂಸ್ಕೃತದಲ್ಲಿ ‘ಮೃಚ್ಛಕಟಿಕ’ ಎಂಬ ನಾಟಕವಿದೆ. ‘ಮೃತ್‌’ ಎಂದರೆ ಮಣ್ಣು, ‘ಕಟಿಕ’ ಎಂದರೆ ಗಾಡಿ, ಶಕಟ, ಬಂಡಿ. ಈ ‘ಮಣ್ಣಿನ ಬಂಡಿ’ ನಾಟಕವನ್ನು ಬರೆದವನು ಸುಮಾರು ನಾಲ್ಕು-ಐದನೆಯ ಶತಮಾನದ ‘ಶೂದ್ರಕ’ ಎಂಬ ಕವಿ. ಬಹುಷಃ ‘ವಸಂತ ಸೇನೆ’ ಎಂದರೆ, ‘ಚಾರುದತ್ತ’ ಎಂದರೆ, ಆ ದಿವಂಗತ ಸುಬ್ಬಯ್ಯ ನಾಯ್ಡು ಅವರ ನಾಟಕ ಮತ್ತು ಅದೇ ಹೆಸರಿನ ಸಿನಿಮಾ ಥಟ್ಟನೆ ಓದುಗರಿಗೆ ನೆನಪಿಗೆ ಬರುತ್ತದೋ ಏನೋ. ಸಂಸ್ಕೃತದ ಈ ನಾಟಕವನ್ನು ಕನ್ನಡದಲ್ಲಿ ಹಲವರು ಕನ್ನಡಿಸಿದ್ದಾರೆ. ( ನೋಡಿ : ಎ. ಆರ್‌. ಕೃಷ್ಣ ಶಾಸ್ತ್ರಿ, ‘ಸಂಸ್ಕೃತ ನಾಟಕ’, ಪುಟ 108-121) ಈ ಶೂದ್ರಕ ಮಹಾಶಯನೂ ಆಂಧ್ರಭೃತ್ಯರ ಮೂಲಪುರುಷನಿರಬಹುದೆಂಬ ಸಂಶೋಧಕರ ಮತವೊಂದಿದೆ. ಈ ಮೂಲಪುರುಷನ ಹೆಸರು ಒಂದೊಂದು ಪುರಾಣದಲ್ಲಿ ಒಂದೊಂದು ರೂಪದಲ್ಲಿ ದೊರೆಯುತ್ತದಂತೆ. ಶಿಮಿಖ , ಸಿಂಧುಕ, ಶಿಶುಕ, ಶೂದ್ರಕ, ಇತ್ಯಾದಿ.

‘ಕ’ ಅಂತವಾದ ಹೆಸರಿನ ಮೋಜು ನೋಡಬೇಕೆ ? ಅದೇ ಶೂದ್ರಕನ ‘ಮೃಚ್ಛಕಟಿಕ’ಕ್ಕೇ ಹೋಗಿ; ಈ ನಾಟಕದಲ್ಲಿ ಬರುವ ಒಟ್ಟು ಮೂವತ್ತು ಪಾತ್ರಗಳಲ್ಲಿ ಸುಮಾರು ಅರ್ಧದಷ್ಟು ಜನರ ಹೆಸರು ‘ಕ’ಕಾರದಲ್ಲಿ ಮುಗಿಯುತ್ತದೆ: ಸಂವಾಹಕ, ಮದನಿಕಾ, ಶರ್ವಿಳಕ, ಆರ್ಯಕ, ಚಂದನಕ, ವೀರಕ, ನಂದನಕ, ಸ್ಥಾವರಕ, ಪಾಲಕ, ಜೊತೆಗೆ ವಿದೂಷಕ ಇತ್ಯಾದಿ. ಹೇಗೂ ‘ಬೃಹತ್‌ಕಥೆ’ಯಿಂದ ಚಾರುದತ್ತ ಪ್ರಕರಣವನ್ನು ಶೂದ್ರಕ ಎರವಲು ಪಡೆದಿರಬಹುದು ಎನ್ನುತ್ತಾರಲ್ಲ ; ಹಾಗಾದರೆ ಅದರಲ್ಲಿ ಬರುವ ‘ವಸಂತ-ತಿಲಕ’ ಎಂಬ ‘ಕ’ಕಾರಾಂತ ಅಭಿಧಾನವನ್ನೇ ಏಕೆ ಉಳಿಸಿಕೊಳ್ಳದೆ ‘ವಸಂತ ಸೇನೆ’ಯನ್ನಾಗಿಸಿದನೋ ಈ ‘ಮಣ್ಣಿನ ಗಾಡಿಯ’ ಕುಂಬಾರ ಶೂದ್ರಕ ತಿಳಿಯದು !

***

ಇದೇ ಬಗೆಯಲ್ಲಿ ಕಾಶ್ಮೀರದ ಪ್ರಾಚೀನ ಕವಿಗಳ ಹೆಸರೂ ಮೋಜಿನದೇ: ರಾಜತರಂಗಿಣಿಯ ‘ಕಲ್ಹಣ’ನ ಪ್ರಸ್ತಾಪ ಹಿಂದೆಯೇ ಬಂದಿದೆ. ‘ಕಲ್ಹಣ’ ಎಂಬುದು ‘ಕಲ್ಯಾಣ’(ಸಂಸ್ಕೃತ)ದಿಂದ ‘ಕಲ್ಲಾಣ’ (ಪ್ರಾಕೃತ)ವಾಗಿ, ಕೊನೆಗೆ ಅಪಭ್ರಂಶ ರೂಪದಲ್ಲಿ ‘ಕಲ್ಹಣ’ವಾಗಿರಬೇಕು ಎಂದು ಸಾಧಿಸುತ್ತಾರೆ ಡಾ. ಸ್ಟೈನ್‌ ಅವರು, ರಾಜತರಂಗಿಣಿಯ ವಿಸ್ತುತ ಟಿಪ್ಪಣಿಗಳಲ್ಲಿ. (ವಿವರಗಳನ್ನು ಮುಂಬರುವ ರಾಜತರಂಗಿಣಿಯ ಮೇಲಣ ಲೇಖನದಲ್ಲಿ ತಿಳಿಯೋಣ). ‘ಬಿಲ್ಹಣ’ನ ಬಗ್ಗೆ, ಅವನ ಜನಪ್ರಿಯ ‘ಕಳ್ಳ-ಪ್ರಣಯಿಯ ಐವತ್ತು ಪದ್ಯಗುಚ್ಛ’ದ ಆಯ್ಕೆಯನ್ನೂ ಹಿಂದೆ ಒಂದು ಲೇಖನದಲ್ಲಿ ಓದಿದೆವು. (ಕರ್ನಾಟಕಕ್ಕೆ ಬಂದು ಇದ್ದು, ಮೆರೆದ ಇವನ ‘ವಿಕ್ರಮಾಂಕ ದೇವ ಚರಿತ’ದ ಬಗ್ಗೆ ವಿವರವಾದ ಇನ್ನೊಂದು ಲೇಖನ ಕಾದಿದೆ !) ಮಲ್ಹಣನನ್ನು ನಮ್ಮ ಹಂಪೆಯ ಹರಿಹರನು ಕಾಶ್ಮೀರ ಶಿವಶರಣರ ಸಾಲಿನಲ್ಲಿ ನೆನೆಯುವುದನ್ನೂ ಕಂಡಿರಿ. ಒಬ್ಬ ಜಲ್ಹಣನಿದ್ದಾನೆ. ಸುಸ್ಸಲ ಎಂಬ ಕಾಶ್ಮೀರದ ರಾಜನಿಗೆ ‘ರಿಲ್ಹಣ’ ನೆಂಬ ಒಬ್ಬ ಆಪ್ತ ಮಂತ್ರಿ ಇದ್ದ. ಇವನು ಆಮೇಲೆ ಜಯಸಿಂಹ ರಾಜನ (ಕ್ರಿ. ಶ. 1128- 49) ಪ್ರಧಾನ ಅಮಾತ್ಯನಾಗುತ್ತಾನೆ. ಸಾಹಿತಿಗಳನ್ನು ಪೋಷಿಸುತ್ತಿದ್ದ ಪ್ರಧಾನಿಯೆಂದು ಕಲ್ಹಣ ಕೊಂಡಾಡುವ ( ರಾಜ. ತ. 8 : 2404) ಗಣ್ಯವ್ಯಕ್ತಿ ಈತ.

ಸಲ್ಹಣ’ ಎಂಬುವನ ಪ್ರಸ್ತಾಪ ರಾಜತರಂಗಿಣಿಯಲ್ಲಿ ಬರುತ್ತದೆ (7:1473, 1487; 8: 376-8, ಇತ್ಯಾದಿ). ಕತೆ ಬಹಳ ರೋಚಕವಾಗಿದೆ. ಗರ್ಗನಿಂದ ಪಟ್ಟಾಭಿಷಿಕ್ತನಾದ ಅಲ್ಪಾವಧಿಯ ದೊರೆ ಈತ (ಕ್ರಿ. ಶ. 1111-12). ಒಂದೇ ದಿನದಲ್ಲಿ ನಾಲ್ಕು ಪ್ರಹರಗಳಲ್ಲಿ , ಮೂರು ಜನ ಕಾಶ್ಮೀರದ ರಾಜರುಗಳು ಪಟ್ಟವನ್ನು ಅಲಂಕರಿಸುತ್ತಾರೆ. ಸಂಜೆ ಉಚ್ಚಲ ರಾಜ, ಬೆಳಗ್ಗೆ ರಡ್ಡ ಎಂಬ ರಾಜ, ಮಧ್ಯಾಹ್ನ ಈ ಸಿಲ್ಹಣ ರಾಜನಾಗುತ್ತಾನೆ. ಕಲ್ಹಣ ಹೇಳುತ್ತಾನೆ :

‘ಹಾ ಧಿಕ್‌ ! ಚತುರ್ಣಾಂ ಯಾಮಾನಾಂ ಅನ್ತರೇ ನೃಪತಿ- ತ್ರಯೀ ।

ಅಹಸ್‌ ತ್ರಿ-ಯಾಮೇ ತತ್ರ ಆಸೀದ್‌ ದೃಶ್ಯಾ ಪುರುಷಾಯುಷೈ : ।।

ಯೇ ಸಾಯಂ ಉಚ್ಚಲ ನೃಪಂ, ಪ್ರಾಹ್ನೇ ರಡ್ಡುಂ ಸಿಷೇವಿರೇ।

ಮಧ್ಯಾಹ್ನೇ ಸಲ್ಹಣಂ ಪ್ರಾಪುರ್‌, ದೃಷ್ಟಾನ್‌ ತೇ ರಾಜಸೇವಕಾ : ।। (8 : 377-378)’

ಆಮೇಲಿನ ಕತೆಯನ್ನು ರಾಜತರಂಗಿಣಿಯ ರಜತಪರದೆಯ ಮೇಲೆ ನೋಡಿ ನೀವು ಆನಂದಿಸಿರಿ!

ಕಾಶ್ಮೀರದ ರಾಣಿ ಸೂರ್ಯಮತಿಯ (ಕ್ರಿ.ಶ.1063) ತಮ್ಮ ಒಬ್ಬ ಸಿಲ್ಹನ ಎಂಬುವನ ಪ್ರಸ್ತಾಪ (ರಾಜ. ತ 8 : 183) ಬರುತ್ತದೆ. ಕಲ್ಹಣನೆ ಇದಕ್ಕೆ ಮೊದಲು (8: 182) ಹೇಳುತ್ತಾನೆ, ಈ ಸೂರ್ಯಮತಿ ರಾಣಿಗೆ ಇನ್ನೊಬ್ಬ ತಮ್ಮ ‘ಕಲ್ಲನ’ ಇದ್ದ ; ಅವನನ್ನು ಪ್ರೀತಿಯಿಂದ ‘ಆಶಾಚಂದ್ರ’ ಎಂದು ಕರೆಯುತ್ತಿದ್ದರಂತೆ. ಇವರಲ್ಲದೆ, ‘ಸಿಲ್ಹಾರ’ ಎಂಬ ಇನ್ನೊಬ್ಬ ಕಲ್ಹಣ (8: 866 ರಲ್ಲಿ) ಹೆಸರಿಸುತ್ತಾನೆ. ಇವರೆಲ್ಲ , ಈ ಕಾಶ್ಮೀರದ ‘ಣ’ ಕಾರಾಂತರುಗಳು ಬೇರೆ, ಬೇರೆ.

***

ಈಗ ಶಿಲ್ಹಣನ ವಿಚಾರಕ್ಕೆ ಬರೋಣ:

‘ಶಿಲ್ಹಣ’ ಒಬ್ಬ ಕಾಶ್ಮೀರದ ಕವಿ. ಅವನ ಕಾಲ ಅನಿರ್ದಿಷ್ಟವಾಗಿದ್ದರೂ, ‘ಸದುಕ್ತಿ ಕರ್ಣಾಮೃತ’ (ಕ್ರಿ.ಶ.1205)ದಲ್ಲಿ ಶಿಲ್ಹಣನ ಉಲ್ಲೇಖ ಇರುವುದರಿಂದ, ಇವನು ಅದಕ್ಕಿಂತ ಹಿಂದಿನವನು, ಎನ್ನುತ್ತಾರೆ ಪ್ರೊಫೆಸರ್‌ ಎ.ಬಿ.ಕೀಥ್‌ ಅವರು (ನೋಡಿ: ‘ಸಂಸ್ಕೃತ ಸಾಹಿತ್ಯ ಚರಿತ್ರೆ’, ಪುಟ 232-233). ಶಿಲ್ಹಣ ಆಮೇಲೆ ಬಂಗಾಳಕ್ಕೂ ಹೋಗಿದ್ದಿರಬಹುದು. ಭರ್ತೃಹರಿಯನ್ನು ತುಂಬಾ ಮೆಚ್ಚಿದವ ಈತ. ಅವನ ಶ್ಲೋಕಗಳನ್ನು ಎರವಲು ಪಡೆದೋ, ಅಲ್ಪಸ್ವಲ್ಪ ಬದಲಾಯಿಸಿಯೋ, ಆ ಶೈವ ಭರ್ತೃಹರಿಯಂತೆ ತಾನು ಪಕ್ಕಾ ವೈಷ್ಣವನಂತೆ ತೋರಿಸಿಕೊಳ್ಳಲು ಪ್ರಯತ್ನಿಸಿ ಲಾಭಪಡೆಯುತ್ತಾನೆ. ‘ಶಿಲ್ಹಣ ಶತಕ’ ದಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಸಾಮ್ಯವಿರುವ ವಿಷಯಗಳಿಗೆ ಆದ್ಯತೆ ಇದೆ. ಕೆಲವರು ಅವನ ಶೈಲಿಯನ್ನು ಮೆಚ್ಚಿದರೆ, ಅದಕ್ಕಿಂತ ಅವನು ಆರಿಸಿಕೊಳ್ಳುವ ವಿಷಯಗಳೇ ಸ್ವಾರಸ್ಯಕರ ಎನ್ನುವವರಿದ್ದಾರೆ. ಈಗ ‘ಶಿಲ್ಹಣ ಶತಕ’ದಿಂದ ಆಯ್ದ ನಾಲ್ಕು ಪದ್ಯಗಳ ಭಾವಾನುವಾದವನ್ನು ಪರಾಂಬರಿಸಿ :

ಕಾಡಲ್ಲಿ ಇದ್ದರೇನಾಗಲಾರದೆ ತಪ್ಪು ? ಇದನೊಪ್ಪಿ:

ಅವರವರ ಅತ್ತಿತ್ತ ಎಳೆತ-ಸೆಳೆತಗಳೇನೇ ರೋಗ, ಮದ್ದು !

ಮನೆಯಲಿದ್ದೂ ಇದ್ದು, ಕಣ್ಣೂ ಕಿವಿ ಮೂಗು ನಾಲಗೆ ಮೈಯ್ಯನು ಗೆದ್ದು

ತಪವನಾಚರಿಸಲಾಗದೇನಯ್ಯ ಮೀರದೆಯೆ ಹದ್ದು ?

ಅಂಟಿಕೊಳ್ಳದೆ ಕಳಚಿ, ಹೊರಗಡೆಯೇ ಉಳಿದವಗೆ

ಮನೆಯಾದರೇನದುವೆ ಕಾಡು, ಅದು ತಪದ ಬೀಡು !

(ವನೇ ’ಪಿ ದೋಷಾ: ಪ್ರಭವನ್ತಿ ರಾಗಿಣಾಮ್‌।

ಗೃಹೇ’ಪಿ ಪಂಚೇಂದ್ರಿಯಾಣಿ ನಿಗ್ರಹಸ್‌ ತಥಾ ।।

ನಿವೃತ್ತರಾಗಸ್ಯ ಗೃಹಂ ತಪೋವನಮ್‌ ।।1।।)

ಓ ಹೊಟ್ಟೆ, ನೀನೇ ಸರಿ; ನಿನಗೆ ಬೇರೇನೂ ಬೇಕಿಲ್ಲ;

ಈ ಇಷ್ಟು ಶಾಖಾಹಾರದಿಂದಲೇ ನೀನಲ್ಪ ತೃಪ್ತ ;

ಹೃದಯವನು ನೋಡಿದೆಯ ? ಅದು ನಿನ್ನಂತೇನೂ ಅಲ್ಲ-

ನೂರಾರು ಭಾರಿ ಆಸೆ ಅಭಿಲಾಷೆಗಳದಕೆ, ತಣಿಸಲಳವಲ್ಲ !

(ತ್ವಾಂ, ಉದರ, ಸಾಧು ಮನ್ಯೇ, ಶಾಕೈರ್‌ ಅಪಿ ಯದ ಅಸಿ ಲಬ್ಧ- ಪರಿತೋಷಮ್‌।

ಹತ ಹೃದಯಮ್‌ ! ಹಿ, ಅಧಿಕಾಧಿಕ-ಶತ-ದುರ್ಭರಂ ನ ಪುನ: ।।2।।)

ನಮ್ಮ ಹೃದಯವ ಮುಸುಕಿ ಮೂಢತೆಯು ಆವರಿಸಿರೆ

ಈ ವಿಷಯಸುಖಗಳೇ ಎಲ್ಲ ಎನಿಸಬಹುದು ;

ಆದರೊಳಗಣ ತಿರುಳ ಬಲ್ಲವರ ಮಾತೇ ಬೇರೆ :

‘ವಿಷಯಗಳೆತ್ತಣವೋ, ಸುಖವೆಲ್ಲೋ, ಹೊಂದುವುದು ಇನ್ನು ಎಲ್ಲೆಲ್ಲೋ !’

(ದಧಾತಿ ತಾವದ್‌ ಅಮೀ ವಿಷಯ ಸುಖಮ್‌ ।

ಸ್ಫುರತು ಯಾವದ್‌ ಇಯಂ ಹೃದಿ ಮೂಢತಾ ।

ಮನಸಿ ತತ್ವ ವಿದಂ ತು ವಿವೇಚಕೇ

ಕ್ವ ವಿಷಯಾ:, ಕ್ವ ಸುಖಂ, ಕ್ವ ಪರಿಗ್ರಹ :’ ।।3।।

ಮರದ ತೊಗಟೆಯೇ ಉಡುಪು, ಚಿಗುರೆಲೆಯೇ ಹಾಸಿಗೆ, ಬೆಳೆದ

ಆ ಮರದ ಬುಡವೇ ಮನೆಯಾಯ್ತು, ಊಟ ಕಂದ ಮೂಲ ಫಲ ;

ಗಿರಿಯ ನಡು ನಡು ಹರಿವ ಝರಿಯೇ ದಾಹ ಶಮನದ ನೀರು ;

ಎಳೆ ಚಿಗುರಿಗಳೊಡನಾಟ, ಹಕ್ಕಿಗಳ ಸ್ನೇಹವಿದೆ, ಚಂದ್ರ ಸೊಡರು-

ಇಷ್ಟೆಲ್ಲ ವೈಭವವಿರಲು, ನೀವೇ ಹೇಳಿ, ಆ ಬಡವ ಬೇಡುವುದೇಕೆ, ಏಕೆ ?

(ವಾಸೋ ವಲ್ಕಲಂ, ಆಸ್ತ್ರಂ ಕಿಸಲಯಾನಿ, ಓಕಸ್‌ ತರೂಣಾಂ ತಲಂ ;

ಮೂಲಾನಿ ಕ್ಷತಯೇ ಕ್ಷುಧಾಂ, ಗಿರಿನದೀತೋಯಂ ತೃಷ್ಣಾ ಶಾಂತಯೇ ।

ಕ್ರೀಡಾ ಮುಗ್ಧ ಮೃಗೈರ್‌, ವಯಾಂಸಿ ಸುಹೃದೋ, ನಕ್ತಂ ಪ್ರದೀಪಾ: ಶಶೀ

ಸ್ವಾಧೀನೇ ವಿಭವೇ ತಥಾಪಿ ಕೃಪಣಾ ಯಾಚನ್ತಿ ಇತಿ ಅದ್ಭುತಮ್‌ ।।4।।)

English summary
Shikaripura Harihareshwara writes on Celestial view of Kashmir : Shilhanas poetry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X