ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡುಗಡೆ : ಭಾಗ 3

By Staff
|
Google Oneindia Kannada News

ಸುಖ-ದುಃಖಗಳ, ಲಾಭ-ಅಲಾಭಗಳ ಸಮೀಕರಣ

ಸುಖ-ದುಃಖಗಳ, ಲಾಭ-ಅಲಾಭಗಳ ಸಮೀಕರಣಕ್ಕೆ ಹಿಂತಿರುಗುವಾ. ‘ಭರತೇಶ ವೈಭವ’(ಕ್ರಿ.ಶ.1557) ದ ರತ್ನಾಕರವರ್ಣಿ ಹೇಳುವಂತೆ:

‘ಸುಖಕೆ ಉಬ್ಬಿ, ದುಃಖಕೆ ಮರುಗಿದರೆ, ಒಡನೆ ಮುಂದೆ ಅಖಿಳ ಕರ್ಮಗಳು ಕಟ್ಟುವುವು; ಸುಖ, ದುಃಖಕೆ ಅತ್ತಿತ್ತಲಾಗದೆ ಧ್ಯಾನಾಭಿಮುಖದೊಳು ಇದ್ದರೆ ಬಂಧವಿಲ್ಲ !’-
ಎಂಬ, ಆತ್ಮನಿಗೆ ಕರ್ಮವನ್ನು ಸುಡುವ ಸಾಮರ್ಥ್ಯ ಉಂಟೇ ಎಂದು ಚಿಂತಿಸಬಹುದು.
ಇಲ್ಲವೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ(ದ್ದರೆ), ಅವಧೂತರಂತೆ ಪರಿಪಕ್ವ ಮನಸ್ಸಿನಿಂದ, ನಾವು ಹೇಳಬಹುದು:

ಈ ದೇಹ, ನಾಕ- ನರಕಗಳೆಲ್ಲ
ಸೆರೆ-ತೆರವು ಮಾತೇ ಸಲ್ಲ;
ಕಲ್ಪನೆಯೆ ಬೇರೇನಿಲ್ಲ,
ನಾ ಚಿದಾತ್ಮನಿರೆ ಇವೇನು ಬೇಕೇ ಇಲ್ಲ !
(ಶರೀರಂ ಸ್ವರ್ಗ-ನರಕೌ, ಬನ್ಧ- ಮೋಕ್ಷಾಭ್ಯಾಂ ತಥಾ। ಕಲ್ಪನಾಮಾತ್ರಂ ಏವೈ ತತ್‌; ಕಿಂ ಮೇ ಕಾರ್ಯಂ ಚಿದಾತ್ಮನ:।। -ಅಷ್ಟವಕ್ರಗೀತಾ 2)

ಇವೆಲ್ಲಕ್ಕಿಂತ ನೂರಾ ಎಂಬತ್ತು ಡಿಗ್ರಿ ವಿಮುಖರಾಗಿರುವವರು, ನಮ್ಮ ಚಾರ್ವಾಕರ ಮಾತನ್ನು ಅನುಮೋದಿಸುವವರು, ಪಾರಲೌಕಿಕತೆಯನ್ನು ಅಲ್ಲಗಳೆದು ನಿರಾಕರಿಸುವವರು ಹೀಗೆ ದನಿಗೂಡಿಸಬಹುದು:

ಬಾಳು ! ಕಳೆದುದು ಸಿಗದು ! ಸಂತೋಷದಲಿ ಓಲಾಡು !
ಸುಖವ ಅನುಭವಿಸುತ್ತ ಕೊನೆಯುಸಿರ ಹಾಡು !
ಸಾಲವಾದರೂ ಮಾಡು, ತುಪ್ಪ ತಿಂದುಂಡು ನಲಿದಾಡು !
ಮತ್ತೆ ಬಂದೀತೆಲ್ಲಿಂದ ಸುಟ್ಟ ಮೇಲೀ ಗೂಡು !!
(ಯಾವತ್‌ ಜೀವೇತ್‌ ಸುಖಂ ಜೀವೇತ್‌, ಋಣಂ ಕೃತ್ವಾ ಘೃತಂ ಪಿಬ। ಭಸ್ಮೀಭೂತಸ್ಯ ದೇಹಸ್ಯ ಪುನರ್‌ ಆಗಮನಂ ಕುತ:? ।।- ಶ್ರೀ ಮಾಧವಾಚಾರ್ಯ, ಚಾರ್ವಕ ದರ್ಶನ, ಸರ್ವದರ್ಶನ ಸಂಗ್ರಹ.)

-ಹೀಗೆಂದರೂ, ಅವರು ಪಾಪಮಾರ್ಗದಲ್ಲಿ ನಡೆಯಿರಿ ಎಂದೇನೂ ಬೋಧಿಸುವುದಿಲ್ಲ. ‘ಶಾಂತಿ, ಹರುಷ, ಸಜ್ಜನರ ಸಂಗ ಮತ್ತು ವೈಚಾರಿಕ ಚಿಂತನೆಗಳೇ ಆ ಮೋಕ್ಷದ ಅರಮನೆಯ ಬಾಗಿಲನ್ನು ಕಾಯುತ್ತಿರುವ ನಾಲ್ವರು ಪರಿಚಾರಕರು’- ಎಂಬ ಜ್ಞಾನವಾಸಿಷ್ಠದ (ಮೋಕ್ಷದ್ವಾರೇ ದ್ವಾರಪಾಲಾ:, ಚತ್ವಾರ: ಪರಿಕೀರ್ತಿತಾ: । ಶಮೋ, ವಿಚಾರಸ್‌ ಸಂತೋಷ: ಚತುರ್ಥ ಸಾಧು- ಸಂಗಮ:।।)

ಮಾತಿನ ಸಂಕೇತವನ್ನು ಅವರೂ ಒಪ್ಪುತ್ತಾರೆ, ‘ಯಮನೆಲ್ಲೋ ಕಾಣನೆಂದು ಹೇಳಬೇಡ’ ಎಂದು ದಾಸರು ಹೇಳಿದಾಗ, ಸರಿ- ತಪ್ಪುಗಳನ್ನು ಸದಾ ವೀಕ್ಷಿಸುತ್ತಿರುವ ಆ ವೈವಸ್ವತ ಧರ್ಮರಾಜ ಬೇರೆಲ್ಲೋ ಇಲ್ಲ, ಇಲ್ಲೇ ನಮ್ಮ ಶರೀರದಲ್ಲೇ ಹೃದಯದಲ್ಲಿ ಕುಳಿತು ‘ಪಾಪಂ ಪುಣ್ಯಂ ಚ ಸರ್ವಶ: ತತ್ರ ಪಶ್ಯನ್ತಿ’ - ಎನ್ನುತ್ತದೆ ಗರುಡಪುರಾಣ. ನಮ್ಮ ಬಾಳೇ ಒಂದು ಬಗೆಯ ತೀರ್ಥಯಾತ್ರೆ; ಬೇರೊಂದು ಗಂಗೆಯನ್ನ, ಕುರುಕ್ಷೇತ್ರವನ್ನ ಅರಸಿ ಹೋಗಬೇಕಿಲ್ಲ. ಎದೆಯಲ್ಲಿ ಕುಳಿತವನೊಂದಿಗೆ ಚೌಕಾಶಿ ಮಾಡಬೇಕಿಲ್ಲದಿದ್ದಾಗ, ಪಾಪವನ್ನೇ ಮಾಡದಿದ್ದರೆ, ಅದನ್ನು ತೊಳೆಯಲು ಹೋಗಬೇಕೆಲ್ಲಿಗೆ? ಯಾಕೆ? (ಯಮೋ ವೈವಸ್ವತೋ ರಾಜಾ ಯಸ್‌ ತವ ಏಷ ಹೃದಿ ಸ್ಥಿತ: । ತೇನ ಚೇತ್‌ ಅವಿವಾದಸ ತೇ, ಮಾ ಗಂಗಾಂ ಮಾ ಕುರೂನ್‌ ಗಮ: ।। - ಮನುಸ್ಮೃತಿ)

ಸಾವಿತ್ರೀ- ಸತ್ಯವಾನನ ಕತೆಯಲ್ಲಿ (ಮಹಾಭಾರತ, ವನಪರ್ವ, ಅಧ್ಯಾಯ 297) ಯಮನ ಸೋಲಿಗೆ ಕಾರಣವಾದರೂ ಏನಿದ್ದಿರಬಹುದು, ಪೌರಾಣಿಕನ ಉದ್ದೇಶದಲ್ಲಿ? ಮಾತಿನಲ್ಲಿ ಸಿಕ್ಕುಬಿದ್ದು ಸಮವರ್ತಿ ಸೋತನೇ? ಕೃತಾಂತ ಈ ಸಾಧ್ವಿಯ ಸಚ್ಚಾರಿತ್ರ್ಯಕ್ಕೆ ಮಣಿದನೇ? ಕಾಲ ಇನ್ನೂ ಮುಗಿದಿರಲಿಲ್ಲವೆಂದು ಹಿಂತಿರುಗಿದನೇ? ಕಿಂಚಿತ್ತೂ ದಯೆಯಿಲ್ಲದ ಅಂತಕನ ದೂತರಿಂದ ಮಾರ್ಕಂಡೇಯನನ್ನು ಬಿಡುಗಡೆಮಾಡಿಸಿ ಉಳಿಸಿದ ಶಕ್ತಿಯಾದರೂ ಅದಾವುದು? ಕೊನೆಯುಸಿರೆಳೆಯುವ ಆ ಕಾಲ ಸಂಪ್ರಾಪ್ತಿಯಾದಾಗ ಯಾವ ಶಾಸ್ತ್ರಜ್ಞಾನ (ಪಾಣಿನಿಯ ವ್ಯಾಕರಣ ಸೂತ್ರ ‘ಡುಕೃಂ ಕರಣೇ’) ರಕ್ಷಿಸೀತು?
ಕೇಳೋಣವೆಂದರೆ, ಅತ್ತ ಹೋದವರಾರೂ ಹಿಂತಿರುಗಿ ಬಂದಿಲ್ಲ; ಆ ಕತ್ತಲ ಆಚೆಗೆ ಏನಿದೆಯೋ ಯಾರಿಗೂ ಗೊತ್ತಿಲ್ಲ !

ವಿಷ್ಣು ಸ್ಮೃತಿಯಲ್ಲಿ (ಅಧ್ಯಾಯ 20. 39-48) ಈ ವಿಚಾರವಾಗಿ ‘ಕೊನೆಯ ಅಂಕದ ಪರದೆ ಇಳಿವ ಮುನ್ನಿನ ಮಾತು’ಗಳು ಸ್ವಾರಸ್ಯಕರವಾಗಿ ಬರುತ್ತವೆ. ಇದನ್ನು ನಿಮ್ಮ ಮುಂದಿಟ್ಟು, ನಿಮ್ಮಿಂದ ಸಧ್ಯಕ್ಕೆ ಬಿಡುಗಡೆ ಕೇಳಿಕೊಳ್ಳುತ್ತೇನೆ:

ಕರೆದಲ್ಲಿಗಲ್ಲಿಗೆ ನಮ್ಮನನುಸರಿಸಿ ಬಂದಾರು
ಬಂಧುಗಳು ಬಾಂಧವರು ಕೈ ಹಿಡಿದ ಸಂಗಾತಿ;
ಗೊತ್ತೆ ಗಡಿ? ನಡೆಗೆ ತಡೆ? ಕೊನೆಯ ಕಾಣಿಸುವಾತ
ಕರೆದು ಕೊಂಡೊಯ್ಯುವ ಹಾದಿ ಕಟ್ಟೆವರೆಗೆ !

ನಾವು ಗಳಿಸಿದ ಪುಣ್ಯ- ಪಾಪಗಳೆ ನಮ್ಮೊಡನೆಲ್ಲೂ
ಬೆಂಬಿಡದೆ ಜೊತೆ ಬರುವ ನಮ್ಮದೇ ನೆರಳು;
ಅದ ತಿಳಿದು ಸರಿ- ದಾರಿ ಹಿಡಿದು ನಡೆಯಲು ಬಾಳು
ನಾವು ರೂಪಿಸಿಕೊಂಡಂತೇನೇ ಹಗಲು- ಇರುಳು !

ನಾಳೆ ಮಾಡುವುದೇನು ಇಂದೇ ಮಾಡಲು ತೊಡಗಿ,
ಸಂಜೆಗೇತಕೆ ಕಾಯುವುದು? ಮುಂಜಾನೆಯೇ ಮುಗಿಸಿ;
ಮೃತ್ಯು ಕಾಯುವನಲ್ಲ, ಮುಗಿದಿರಲಿ ಮುಗಿಯದೆ ಇರಲಿ-
ಕನಸ ಸಂಕಲ್ಪದ ಕೆಲಸ ಹೋಗುವುದೇ ಉಳಿಸಿ?

ಮನವಂತು ಹರಿದಾಡುತಿದೆ ಮನೆ ಮಠವೊ ಎಲ್ಲೊ
ಗಳಿಸಿ ಉಳಿಸುವ ಅದನು ಕಾಯ್ದಿಡುವ ಪರಿಯ;
ಎತ್ತಲೆತ್ತಲೊ ಗಮನ, ಇದ್ದಕಿದ್ದಂತೆರಗಿ
ಮೃತ್ಯು ಕೊಂಡೊಯ್ದೀತು ತೋಳದೊಲು ಕುರಿಯ !

ಮೇಲು- ಕೀಳುಗಳಿಲ್ಲ, ಹಗೆಯಿಲ್ಲ, ಕೆಳೆಯಿಲ್ಲ,
ಬಲ್ಲ ಕಾಲನಿಗೆ ಸಮವೆ ಎಳಸು ಮಾಗಿದುದೆಲ್ಲ;
ಹಿಂದಿನಂದಿನ ಕರ್ಮ ಈಗೊದಗಿದಾಯಸ್ಸು
ಸವೆ ಸವೆದು ಬರಿದಾಗಲಸು ಅವ ಎಳೆವ ಮಲ್ಲ!

ನೂರು ಬಾಣದ ಮೊನಚು ಎದೆಗೆ ಬಂದೆರಗಿದರೂ
ಕೂಡಿ ಬಾರದೆ ಕಾಲ ಅಸು ನೀಗರೆಂದೂ;
ವೇಳೆ ಬಂದಾಯ್ತೆನಲು ಹುಲ್ಲು ಕಡ್ಡಿಯೆ ಸಾಕು
ಕೊನೆಯುಸಿರನೆಳೆಯಲೊಂದು ನೆಪ ತಗುಲಿತೆಂದು !

ಮದ್ದು ಪಥ್ಯಗಳಿರಲಿ, ಮಂತ್ರ ಪೂಜೆಗಳಿರಲಿ,
ಹೋಮ ಜಪ ತಪಾದಿಗಳೆಲ್ಲ ಅತ್ತ ಇರಲಿ;
ಯಾವುದೂ ಸಿದ್ಧಿಸದು ಮುಪ್ಪಡರಿ ಬಾಗಿಲಲಿ
ನಿಂತಿರಲು ಜವರಾಯ ಹಿಡಿದೊಂದು ಕೊಡಲಿ!

ಏನು ಪ್ರಯೋಜನವಿಲ್ಲ, ಎಷ್ಟು ಮಾಡಿದರಷ್ಟೆ,
ನೂರು ಮುನ್ನೆಚ್ಚರಿಕೆಗಳೇನು ತಪ್ಪಿಸದು, ವ್ಯರ್ಥ!
ಇಂದಿಲ್ಲದೊಂದು ದಿನ ಅದು ಬಂದೆ ಬರುವುದಿರೆ
ತಲೆ ಕೆಡಿಸಿಕೊಳ್ಳುವುದೇಕೆ? ಬಿಡಿ, ಬರಲಿ ಅನರ್ಥ !

ಮಂದೆಯಲಿ ನೂರಾರು ಹಸು- ಕರುಗಳಿದ್ದರೂ
ಕರು ಓಡಿ ತಾಯ ಬಳಿ ಕೂಡಿ ಸೇರುವ ತೆರದಿ
ನಮ್ಮ ಸಂಚಿತ ಕರ್ಮ ಬಿಮ್ಮನರಸುತ ಬಂದು
ಹಮ್ಮೇಳು- ಬೀಳಿನ ವೇಳಾ-ಪಟ್ಟಿ ಯೋಜಿಸಿಹುದು!

ಗೊತ್ತೆ ಮೊದಲೆಲ್ಲಿತ್ತೆಂದು? ಗೊತ್ತಿಲ್ಲ ಮುಂದೇನೆಂದು !
ಈ ನಡುವೆ ಓಲಾಡುವುದರರಿವು ಇದ್ದಂತೆ ಭಾಸ;
ಏಕೀ ಆಟಾಟೋಪ? ಬಿಟ್ಟು ಬಿಡುವುದೆ ಲೇಸು
ತುಂಬ ಯೋಚನೆ ಬೇಡ, ಅದು ಸಲ್ಲದಾಭಾಸ !

(ಮೃತೋ ಅಪಿ ಬಾನ್ಧವಾಃ ಶಕ್ತೋ, ನ ಅನುಗನ್ತುಂ ನರಂ ಮೃತಮ್‌।
ಜಾಯಾ- ವರ್ಜ್ಯಂ ಹಿ ಸರ್ವಸ್ಯ, ಯಾಮ್ಯಃ ಪನ್ಥಾ ವಿರುಧ್ಯತೇ।।
ಧರ್ಮ ಏಕೋ ಅನುಯಾತಿ ಏನಂ, ಯತ್ರ ಕ್ವಚನ ಗಾಮಿನಮ್‌।
ನನು ಅಸಾರೇ ನೃಲೋಕೇ ಅಸ್ಮಿನ್‌, ಧರ್ಮಂ ಕುರುತ ಮಾ ಚಿರಮ್‌।।
ಶ್ವಃ ಕಾರ್ಯಂ ಅದ್ಯ ಕುರ್ವೀತ, ಪೂರ್ವಾಹ್ನೇ ಚ ಅಪರಾಹ್ನಿಕಮ್‌।
ನ ಹಿ ಪ್ರತೀಕ್ಷತೇ ಮೃತ್ಯುಃ, ಕೃತಂ ವಾ ಅಸ್ಯ ನ ಅಕೃತಮ್‌।।)

ಕ್ಷೇತ್ರ ಆಪಣ ಗೃಹ ಆಸಕ್ತಮ್‌, ಅನ್ಯತ್ರ ಗತ ಮಾನಸಮ್‌।
ವೃಕೀ ಇವ ಉರಣಂ ಆಸಾದ್ಯ, ಮೃತ್ಯುರ್‌ ಆದಾಯ ಗಚ್ಛತಿ।।
ನ ಕಾಲಸ್ಯ ಪ್ರಿಯಃ ಕಶ್ಚಿದ್‌, ದ್ವೇಷ್ಯಶ್‌ ಚ ಅಸ್ಯ ನ ವಿದ್ಯತೇ।
ಆಯುಷ್ಯೇ ಕರ್ಮಣಿ ಕ್ಷೀಣೇ, ಪ್ರಸಹ್ಯ ಹರತೇ ಜನಮ್‌।।
ನ ಅಪ್ರಾಪ್ತ ಕಾಲೋ ಮ್ರಿಯತೇ, ವಿದ್ಧಃ ಶರ-ಶತೈರ್‌ ಅಪಿ।
ಕುಶ-ಅಗ್ರೇಣ ಅಪಿ ಸಂಸ್ಪೃಷ್ಟಃ, ಪ್ರಾಪ್ತಕಾಲೋ ನ ಜೀವತಿ।।
ನ ಔಷಧಾನಿ ನ ಮನ್ತ್ರಾಶ್‌ ಚ, ನ ಹೋಮ ನ ಪುನರ್‌ ಜಪಾಃ
ತ್ರಾಯನ್ತೇ ಮೃತ್ಯುನಾ ಉಪೇತಂ, ಜರಯಾ ವಾ ಅಪಿ ಮಾನವಮ್‌।।
ಆಗಾಮಿನಂ ಅನರ್ಥಂ ಹಿ, ಪ್ರವಿಧಾನ ಶತೈರ್‌ ಅಪಿ।
ನ ನಿವಾರಯಿತುಂ ಶಕ್ತಸ್‌, ತತ್ರ ಕಾ ಪರಿದೇವನಾ।।
ಯಥಾ ಧೇನು-ಸಹಸ್ರೇಷು, ವತ್ಸೋ ವಿನ್ದತಿ ಮಾತರಮ್‌।
ತಥಾ ಪೂರ್ವ ಕೃತಂ ಕರ್ಮ, ಕರ್ತಾರಂ ವಿನ್ದತೇ ಧ್ರುವಮ್‌।।
ಅವ್ಯಕ್ತ ಆದೀನಿ ಭೂತಾನಿ, ವ್ಯಕ್ತ-ಮಧ್ಯಾನಿ ಚ ಅಪಿ ಅಥ।
ಅವ್ಯಕ್ತ-ನಿಧನಾನಿ ಏವ, ತತ್ರ ಕಾ ಪರಿದೇವನಾ।।
(-ವಿಷ್ಣು ಸ್ಮೃತಿ, ಅಧ್ಯಾಯ 20.39-48)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X