ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಶ್ರೇಯಸ್ಸಿ’ನ ಮಾರ್ಗ ತೋರಿಸು ಗುರುವೇ : ಭಾಗ 2

By * ಎಸ್‌.ಕೆ.ಹರಿಹರೇಶ್ವರ, ಮೈಸೂರು
|
Google Oneindia Kannada News

ಇಲ್ಲಿ ಎರಡು ಕತೆಗಳು ಜ್ಞಾಪಕಕ್ಕೆ ಬರುತ್ತವೆ :
ಪಾಂಡವರು ವನವಾಸ ಮಾಡುತ್ತಾ , ದ್ವೆ ೖತವನದಲ್ಲಿ ಇದ್ದಾಗ, ಒಂದು ದಿನ ಪ್ರಯಾಣಮಾಡುತ್ತಾ , ಮಾಡುತ್ತಾ ಬಿಸಿಲಿನಲ್ಲಿ ಬಳಲಿ, ಬಾಯಾರಿಕೆಯಿಂದ ನರಳುತ್ತಾ ಇದ್ದಾಗ, ದೂರದಲ್ಲಿ ಒಂದು ಸರೋವರ ಕಾಣುತ್ತೆ . ನೀರನ್ನು ತರಲು ಒಬ್ಬೊಬ್ಬರಾಗಿ ಹೋದ ಸಹದೇವ, ನಕುಲ, ಅರ್ಜುನ ಮತ್ತು ಭೀಮ- ಯಾರೂ ಹಿಂತಿರುಗುವುದಿಲ್ಲ ; ಒಬ್ಬೊಬ್ಬರೂ ಆ ಸರೋವರದ ಅಧಿಪತಿ 'ಯಕ್ಷ’ನು ಕೇಳಿದ ಪ್ರಶ್ನೆಯನ್ನು ಕಡೆಗಣಿಸುತ್ತಾರೆ, ಅಸು ನೀಗಿರುತ್ತಾರೆ! ಕೊನೆಗೆ ಹೋದ ಯುಧಿಷ್ಠಿರನು ಯಕ್ಷನ ಪ್ರಶ್ನೆಗಳಿಗೆ ಉತ್ತರಿಸಿ ಗೆಲ್ಲುತ್ತಾನೆ. ಅವುಗಳಲ್ಲಿ ಒಂದು ಪ್ರಶ್ನೆ ಮುಖ್ಯವಾದದ್ದು : 'ಕಿಂ ಆಶ್ಚರ್ಯಮ್‌?’ ಅಂದರೆ,

ಪ್ರಶ್ನೆ : 'ಜಗತ್ತಿನಲ್ಲಿ ಎಲ್ಲವನ್ನೂ ಮೀರಿಸುವ ತುಂಬಾ ಆಶ್ಚರ್ಯಕರವಾದ ವಿಷಯ ಏನು?’
ಉತ್ತರ : ಅನುದಿನವೂ ಜವರಾಯನತ್ತ
ಮತ್ತೆ ಹೋಗುತ್ತಲಿವೆ ಪ್ರಾಣಿಗಳು;
ಇದ ತಿಳಿದೂ ತಾನಿಲ್ಲಿ ಸ್ಥಿರನೆಂದು ಬಗೆವುದೇನಚ್ಚರಿಯೋ !
'ಹುಟ್ಟಿದವರೆಲ್ಲ ಕೊನೆಗೊಂದು ದಿನ ಸಾಯಲೇ ಬೇಕು ಎಂದು ಗೊತ್ತಿದ್ದರೂ, ಅದನ್ನು ಮರೆತು ಜನರು ಈ ಬಾಳು ಶಾಶ್ವತ ಅಂತ ಭ್ರಮಿಸಿ, ಏನೇನೋ ಮಾಡುತ್ತಾ ಇರುವುದು ಎಂಥ ದೊಡ್ಡ ಆಶ್ಚರ್ಯ !’ (ಅಹನಿ ಅಹನಿ ಭೂತಾನಿ ಗಚ್ಛನ್ತಿ ಇಹ ಯಮಾಲಯಮ್‌। ಶೇಷಾ: ಸ್ಥಾವರಂ ಇಚ್ಛನ್ತಿ, ಕಿಂ ಆಶ್ಚರ್ಯಂ ಅತ: ಪರಮ್‌।। - ಮಹಾಭಾರತ, ವನಪರ್ವ 313 : 116)

ಇನ್ನೊಂದು ಕಿಸಾಗೌತಮಿಯ ಕತೆ:

ತನ್ನ ಮುದ್ದಿನ ಹಸುಗೂಸನ್ನ ಕಳೆದುಕೊಂಡ ಇನ್ನೂ ಚಿಕ್ಕ ವಯಸ್ಸಿನ ತಾಯಿ ಒಬ್ಬಾಕೆ, ಗೌತಮ ಬುದ್ಧನ ಬಳಿ ಬಂದು ಅಂಗಲಾಚುತ್ತಾಳೆ: ' ಹಲವರಿಗೆ ಜ್ಞಾನೋದಯ ಮಾಡಿದ ಸಿದ್ಧಪುರುಷರು ನೀವು ; ಮಹಾಮಹಿಮರು ನೀವು ! ನನಗಿರುವುದೊಂದೇ ಮಗು ; ಇದನ್ನ ಬದುಕಿಸಿ ಕೊಡಿ !’ ಎಂದು ಬೇಡುತ್ತಾಳೆ.

ಕಡುದುಃಖದಲ್ಲಿ ಮುಳುಗಿದ ಅವಳಿಗೆ ಏನು ಬುದ್ಧಿ ಹೇಳುವುದು ? ಏನು ತಿಳುವಳಿಕೆ ಮೂಡಿಸುವುದು ? ಯಾವ ರೀತಿ ಸಮಾಧಾನ ಮಾಡುವುದು?
ಬುದ್ಧ ಹೇಳುತ್ತಾನೆ: 'ಆಗಲಿ, ತಾಯಿ. ಒಂದು ಕೆಲಸ ಮಾಡು. ಒಂದಿಷ್ಟು ಸಾಸಿವೆಯನ್ನು ತೆಗೆದುಕೊಂಡು ಬಾ. ಅದನ್ನು ಮಂತ್ರಿಸಿ, ನಿನ್ನ ಮಗುವಿನ ಮೇಲೆ ಚಿಮುಕಿಸುತ್ತೇನೆ. ಮಗು ಮತ್ತೆ ಬದುಕಿ ಬಂದೀತು !’

'ಈಗಲೇ ಓಡಿ ಹೋಗಿ ಸಾಸಿವೆ ತರುತ್ತೇನೆ’, ಎನ್ನುತ್ತಾಳೆ, ಹೊರಡತೊಡಗುತ್ತಾಳೆ, ಅವಳು.
'ತಡಿ, ತಾಯಿ ! ’, ಬುದ್ಧ ತಡೆಯುತ್ತಾನೆ. 'ಸಾವು ಆಗಿಲ್ಲದ ಮನೆಯಿಂದ ಸಾಸಿವೆ ತಾ’. ಎಂದು ಕಳಿಸಿಕೊಡುತ್ತಾನೆ, ಅವಳನ್ನ.

ಪಾಪ. ಸಾವಿಲ್ಲದ ಮನೆ ಅವಳಿಗೆ ಸಿಗುವುದಾದರೂ ಹೇಗೆ ? ಸುತ್ತಿ, ಸುತ್ತಿ, ಅರಿವು ಮೂಡಿದ ಬಳಿಕ ಬುದ್ಧನ ಬಳಿಗೆ ಅವಳು ಮರಳುತ್ತಾಳೆ. ಬುದ್ಧ ಮತ್ತು ಅವಳು ಬಗೆಹರಿಯದ ಈ ಸಮಸ್ಯೆಯ ಬಗ್ಗೆ ಅಳುತ್ತಾರೆ!

ಅದಕ್ಕೇನೆ ಶ್ರೀಕೃಷ್ಣ ಅರ್ಜುನನ ನೆಪ ಮಾಡಿಕೊಂಡು, ನಮಗೆ ಹೇಳಿದ್ದು: 'ತಸ್ಮಾತ್‌ (ಆದ್ದರಿಂದ), ಅಪರಿಹಾರ್ಯೇ ಅರ್ಥೆ(ಪರಿಹರಿಸಲಾಗದ ಈ ಹುಟ್ಟು-ಸಾವುಗಳ ವಿಷಯದಲ್ಲಿ), ಶೋಚಿತುಮ್‌ ನ ಅರ್ಹಸಿ (ಶೋಕಿಸಬೇಕಾಗಿಲ್ಲ, ಅತ್ತರೆ ಪ್ರಯೋಜನವಿಲ್ಲ !)’

ಹಾಗಾದರೆ, ಬೇರೆ ಏನು ಮಾಡಬಹುದು ? 'ಮರಣ’ದ ಮಾತು ಬಂದಾಗ, ಕೇಳಿದಾಗ, 'ಜೀವ ದೇಹದಿಂದ ಮುಕ್ತವಾಯಿತು. ಬಿಡುಗಡೆ ಹೊಂದಿತು’- ಎಂದು ಸಮಾಧಾನ ಮಾಡಿಕೊಳ್ಳಬೇಕು. ಹೇಳುವುದು ಸುಲಭ, ಆದರೆ ತುಂಬಾ ಹತ್ತಿರದ ಬಂಧುಗಳಿಗೆ ಆದ ನೋವು, ದುಃಖವನ್ನು ತಡೆದುಕೊಳ್ಳುವುದು ಬಲು ಕಷ್ಟ. 'ತುಂಬಾ ಒಳ್ಳೆಯವರನ್ನ, ಪುಣ್ಯದ ಕೆಲಸ ಮಾಡುತ್ತಾ ಪರಿಶುದ್ಧ ಆತ್ಮವುಳ್ಳವರನ್ನ 'ದೇವರು’ ತನ್ನ ಬಳಿ ಬೇಗ ಕರೆದುಕೊಂಡು ಬಿಡುತ್ತಾನೆ’ - ಎಂಬ ಮಾತುಗಳಿಂದ ನೊಂದವರನ್ನು ಸಂತೈಸಬಹುದು. ಅದಕ್ಕೇನೇ ನಾವು ಸಾವನ್ನಪ್ಪಿದ, ಗತಿಸಿದ, ಕೊನೆಯುಸಿರೆಳೆದ, ದೇಹ ಚೆಲ್ಲಿದ, ನಿಧನರಾದವರನ್ನು ಕಣ್ಮರೆಯಾದರು, ಬಯಲಾದರು, ದಿವಂಗತರಾದರು, ಸ್ವರ್ಗಸ್ಥರಾದರು, ಕೈವಲ್ಯ ಹೊಂದಿದರು, ವೈಕುಂಠ-ವಾಸಿಗಳಾದರು, ಪರಂಧಾಮ-ವನೈದಿದರು, ಶಿವೈಕ್ಯರಾದರು- ಎಂದು ಅಶ್ರುತರ್ಪಣ ಸೂಚಿಸುವುದು, ಶ್ರದ್ಧಾಂಜಲಿಯನ್ನ ಅರ್ಪಿಸುವುದು.

'ಬಿಡುಗಡೆಯೇ ಮೋಕ್ಷ’ ಎಂಬ ಮಾತಿನಲ್ಲಿ ಅರ್ಥವಿದೆ. ಈಗ ತೊಡಗಿ ಇರುವವರು ಆ ಬಿಡುಗಡೆಯ ದಿನವನ್ನು ಸಮಚಿತ್ತದಿಂದ ನಿರೀಕ್ಷಿಸುವ, ಕಾಯುವ ಸ್ಥೈರ್ಯ ತಂದುಕೊಳ್ಳಬೇಕು: 'ಹುಟ್ಟುತ್ತಾ ಬಂದಾಗ, ನಾವು ಅಳುತಿದ್ದೆವು; ಹತ್ತಿರದ ಬಂಧುಗಳು ನಗುತ್ತಾ ಸಂತೋಷಿಸುತ್ತಿದ್ದರು. ಬಾಳನ್ನ ಹೇಗೆ ಕಳೆಯಬೇಕೆಂದರೆ, ಸಾಯುವ ವೇಳೆ ನಾವು ನಗು ನಗುತ್ತಾ ಕೊನೆಯುಸಿರೆಳೆಯಬೇಕು ; ಸುತ್ತಲೂ ನೆರೆದವರು ಕಣ್ಣೀರ್ಗರೆಯುತ್ತಿರಬೇಕು !’ ಇದನ್ನೇ 'ಶರಣರ ಗುಣವನ್ನ ಮರಣದಲ್ಲಿ ನೋಡು’ಎಂದಾಗ, ಇಚ್ಛಾಮರಣಿ ಭೀಷ್ಮನ ಕತೆ ನೆನಪಾಗುತ್ತದೆ; ಯೋಗಾಭ್ಯಾಸಿಗಳ 'ಸಮಾಧಿ’ ಸ್ಥಿತಿಯ ವಿಚಾರ, ಬುದ್ಧ ಬೋಧಿಸಿದ 'ನಿರ್ವಾಣ’ದ ಸಮ್ಯಕ್‌ ಜ್ಞಾನ ಬೆಳಕೂಡುತ್ತದೆ; ಏಳನೆಯ ಶತಮಾನದ ಪೂರ್ವಾರ್ಧದ ಹಳೆಗನ್ನಡದ, (ಹೆಚ್ಚೂ ಕಡಿಮೆ ಮೊಟ್ಟ ಮೊದಲ) ಪ್ರಾಚೀನ ಗದ್ಯ ಗ್ರಂಥ, ಶಿವಕೋಟ್ಯಾಚಾರ್ಯನ 'ವಡ್ಡಾರಾಧನೆ’ಯಲ್ಲಿ ಬರುವ ಜೈನ ಮುನಿಗಳು ಅನುಭವಿಸಿದ ಅಂತ್ಯದ ದಿನಗಳ ಚಿತ್ರ ಎದುರಾಗುತ್ತದೆ.

ಶ್ರೀಮದ್‌ ಭಾಗವತದ ಕವಿ ಚಮತ್ಕಾರ-ಪೂರ್ವಕವಾಗಿ 'ತಮ್ಮದಲ್ಲದ ದೇಹವನು ಬಿಟ್ಟು ಹೋದುದಾದರೂ ಎಂತು ?’ ಎಂದು ಈ ಬಗ್ಗೆ ಪ್ರಶ್ನಿಸುವುದನ್ನು ಕೇಳಿ :

ತಮಗಾಗಿ ಜೀವಿಸದೆ ಪರರಿಗೇ ಇದ್ಧಂಥವರು ಇವರು,
ಎಲ್ಲರುನ್ನತಿಯನ್ನ ಮೂಲೋಕದೊಳಿತ ಬಯಸುತ್ತಿದ್ದವರು,
ಅನುದಿನವೂ ಮನಸಾರೆ ಹಾಡಿ ಈ ಹೊಗಳಬೇಕಾದವರು-
ಯಾರ ಕೇಳದೆ ದೇಹ ಬಿಟ್ಟು ಹೋದುದಾದರೂ ಹೇಗೆ ?
(ಶಿವಾಯ ಲೋಕಸ್ಯ, ಭವಾಯ ಭೂತಯೇ, ಯ ಉತ್ತಮ-ಶ್ಲೋಕ-ಪರಾಯಣಾ ಜನಾ : । ಜೀವನ್ತಿ ನ ಆತ್ಮಾರ್ಥಂ ಅಸೌ ಪರಾಶ್ರಯಂ, ಮುಮೋಚ ನಿರ್ವಿದ್ಯ ಕುತ್‌ : ಕಳೇವರಮ್‌ ।। ಭಾಗವತ 1 : 4: 12)
'ಮಾಡಬೇಕಾದ್ದನ್ನೆಲ್ಲಾ ಮಾಡಿ ಮುಗಿಸಿದವರು, ತಮಗೆ ಇಷ್ಟನಾದ ಅತಿಥಿಯನ್ನು ಸ್ವಾಗತಿಸಲು ಕಾದಿರುವಂತೆ, ಸಾವನ್ನು ನಿರೀಕ್ಷಿಸುತ್ತಿರುತ್ತಾರೆ’ ('ಕೃತಕೃತ್ಯಾ: ಪ್ರತೀಕ್ಷ್ಯನ್ತೇ ಮೃತ್ಯುಂ ಪ್ರಿಯಂ ಇವ ಅತಿಥಿಮ್‌।’)- ಎಂಬ ಮಾತೊಂದಿದೆ. ಅದಕ್ಕೆ ಪೂರಕವಾಗಿ ಇಲ್ಲಿ ನೋಡಿ :

ಮೃತ್ಯುವಿಗೆ ಭಯಪಡುವೆ, ಮೂಢ, ನೀ ಆಶಿಸುವೆ :
ಯಮ ನನ್ನ ಬಿಟ್ಟಾನು ; ಪಾಪ !, ಹೆದರಿದನೆಂದು ;
ಇದು ಗುಟ್ಟು :
'ಮುಟ್ಟನೋ ಆ ಹುಟ್ಟದವನನ್ನ ಯಮ,
ಮತ್ತೆ ಹುಟ್ಟದ ಹಾಗೆ ನೀ ಬಾಳಿ ಬದುಕೋ!’

('ಮೃರ್ತ್ಯೋರ್‌ ಭಿಭೇಷಿ ಕಿಂ ಮೂಢ !, ಭೀತಂ ಮುಂಚತಿ ಕಿಂ ಯಮ:। ಅಜಾತಂ ನೈವ ಗೃಹ್ಣಾತಿ, ಕುರು ಯತ್ನಂ ಅಜನ್ಮನಿ।।’)

ಅಂದರೆ ನಾವು ಇಲ್ಲಿ ಹೇಗೆ ಬಾಳುತ್ತೇವೋ ಅದನ್ನ ಅವಲಂಬಿಸಿದೆ ನಮ್ಮ ಮುಂದಿನ ಬಾರಿಯ ಪ್ರಯಾಣ - ಎಂಬ ಭಾವ, ಪುನರ್ಜನ್ಮವನ್ನು ನಂಬಿದವರ ವಿಶ್ವಾಸ. ಅಥವಾ, ಸಂಸ್ಕೃತ ನಾಟಕಕಾರ ಭಾಸ ತನ್ನ 'ಪಾಂಚರಾತ್ರ’ದಲ್ಲಿ ಹೇಳಿದಂತೆ-,

'ಮಾಡಿದೊಳ್ಳೆಯದಕ್ಕೆ ಸತ್ತು, ಸ್ವರ್ಗಕೆ ಹೋದ’-
ಎಂಬ ಮಾತೇನಿಹುದು, ಅದು ಹಸಿಯ ಸುಳ್ಳು !
ಸ್ವರ್ಗ- ನರಕಗಳೆಲ್ಲ ಪರೋಕ್ಷ ಬೇರೆಲ್ಲೋ ಇಲ್ಲ
- ಎಲ್ಲವೂ ಫಲಿಸುವುದು ಇಲ್ಲೆ ಇಲ್ಲೇ !
(ಮೃತೈ: ಪ್ರಾಪ್ಯ ಸ್ವರ್ಗೋ ಯದ್‌ ಇಹ ಕಥಯತಿ ಏತದ್‌ ಅನೃತಮ್‌।
ಪರೋಕ್ಷೋ ನ ಸ್ವರ್ಗೋ, ಬಹುಗುಣಂ ಇಹ ಏವ ಏಷ ಫಲತಿ ।। - ಭಾಸ ಪಾಂಚರಾತ್ರ)

ಇನ್ನೇಕೆ ಮತ್ತೆ ಹುಟ್ಟುವ ಮಾತು ? ಜೀವನದ ಹಲವು ಹೆದ್ದಾರಿಗಳಲ್ಲಿ ತೆವಳಿ, ಕುಪ್ಪಳಿಸಿ, ನಡೆದು, ಓಡಿ ಏನೇನೋ ಪ್ರಾಣಿಗಳಾಗಲಿಲ್ಲವೇ ನಾನು? ಎಂಥದೆಂತದೋ ಪಾತ್ರಗಳನ್ನು ವಹಿಸಿ, ನಾಟಕವಾಡಲಿಲ್ಲವೇ ನಾನು ?- ಎನ್ನುತ್ತಾ ,

ಮತ್ತೆ ಹುಟ್ಟುವುದೇನೂ ಬೇಕಿಲ್ಲ, ನಾನಿಲ್ಲೆ
ಹಲವು ಜನ್ಮಗಳನ್ನು ಎತ್ತಿರುವೆನಲ್ಲ !
ಅನುಭವದ ಮೂಸೆಯಲಿ ಕರಗಿ ನೀರಾಗೆದ್ದು,
ಘನಿಸಿ ರೂಪಗಳೆನಿತೋ ತಳೆದಿರುವೆನಲ್ಲ !
ಎಂದು ವಾದಿಸುವವರೂ ಇರಬಹುದು. ಅಂಥವರು ಈ ಬಂಧ-ಮೋಕ್ಷ ಎರಡೂ ನಮ್ಮ ಮನಸ್ಸಿನ ವ್ಯಾಪಾರ ಮಾತ್ರ ಎನ್ನುತ್ತಾ,

ಬಂಧನಕು ಬಿಡುಗಡೆಗೂ
ಮನೆವೊಂದೆ ಕಾರಣ, ಜಾಣ;
ಅಂಟಿಕೊಂಡಿರೆ ಅದೇನೆ ಸೆರೆ,
ತಗಲದಲೆ ಇರೆ ಮೋಕ್ಷ ಕಾಣ !
(ಮನ ಏವ ಮನುಷ್ಯಾಣಾಂ, ಕಾರಣಂ ಬಂಧ ಮೋಕ್ಷಯೋ : । ಬಂಧಯಾ ವಿಷಯಾಸಂಗೀಂ, ಮೋಕ್ಷೋ ನಿರ್ವಿಷಯಾ ಸ್ಮೃತಮ್‌।। - ಮೈತ್ರೀ ಉಪನಿಷತ್‌: 6 : 34) - ಎನ್ನಬಹುದು. ಹೌದು, ಮನಸ್ಸೇ ಎಲ್ಲಕ್ಕೂ ಮೂಲ. ಸ್ವರ್ಗದೋಪಾದಿಯ ಆದರ್ಶ ಸುಖ, ನರಕ- ಸದೃಶ ಪರಮ-ಯಾತನೆ, ಅದರ ಸಮ್ಮಿಶ್ರತತೆಯ ಈ ಮರ್ತ್ಯಲೋಕಾನುಭವ ಎಲ್ಲಕ್ಕೂ ಕಾರಣ ಈ ಮನಸ್ಸಿನ ತುಡಿತ ಮಿಡಿತಗಳೇ ತಾನೆ(ಯೋಗ ವಾಸಿಷ್ಟ) :

ಚಿತ್ತವೇ ಮೂಲ ಎಲ್ಲಕ್ಕೂನು,
ಮೂಲೋಕ ಹುದುಗಿದೆ ಅಡಗಿ ಅಲ್ಲೇ;
ಅದು ಕ್ಷಯಿಸೆ ಮುಳುಗೀತು ಇದು,
ಬೇಕು ಬುದ್ಧಿಗೆ ಮುದ್ದು, ಗುದ್ದು, ಮದ್ದು!
(ಚಿತ್ತಂ ಕಾರಣಂ ಅರ್ಥಾನಾಂ, ತಸ್ಮಿನ್‌ ಸತಿ ಜಗತ್‌ ತ್ರಯಮ್‌। ತಸ್ಮಿನ್‌ ಕ್ಷೀಣೇ ಜಗತ್‌ ಕ್ಷೀಣಂ, ತತ್‌ ಚಿಕಿತ್ಸ್ಯಂ ಪ್ರಯತ್ನತಃ ।।- ಯೋಗವಾಸಿಷ್ಟ, ರಾಧಾಕೃಷ್ಣನ್‌ ಉಲ್ಲೇಖ, ಪುಟ 846)

ಮನಸ್ಸಿನ ವ್ಯಾಪಾರ ? ಜೀವನವೇ ಉದ್ದಕ್ಕೂ ಒಂದಲ್ಲ ಒಂದು ಬಗೆಯ ಕೊಡುವ ಕೊಳ್ಳುವ ಸಂಪಾದಿಸುವ ಅಮೂಲ್ಯ ವ್ಯಾಪಾರವೇ ಅಲ್ಲವೇ ?

ಶಿಕಾರಿಪುರದ ಒಂದು ಪ್ರಾಚೀನ ಶಾಸನದಲ್ಲಿ (ಶಾಸನ 100-112) ಬರುವ ಆ ಊರಿನ ವರ್ತಕರ ಸ್ವಾರಸ್ಯಕರವಾದ ಈ ವರ್ತನೆಯನ್ನು ಕೇಳಿ:
'ಕಿಡುವೊಡಮೆಯನ್‌ ಒಂದನೆ ಕೊಟ್ಟೆಡೆ ಮಡಗದೆ, ಇಹಪರಂಗಳೆಂಬ ಎರಡುಮನಂ ಅಂಗಡಿಯಾಳ್‌ ಕಿಡದ ಒಡಮೆಯನ್‌ ಅಡಿಗಡಿಗೆ ಅರ್ಜಿಪರಲ್ಲಿ ನೆಗಳ್ದ ಪುರದ ಜನಂಗಳ್‌।’- ಅವರಂತೆ !

(ಅಲ್ಲಿಯ ಊರಿನ ಜನರು ಅಂಗಡಿಗಳಲ್ಲಿ 'ಕಿಡುವೊಡೆಗಳ’ ನ್ಯಾಯವಾದ ಮಾರಾಟದಿಂದ 'ಇಹ-ಪರ’ಗಳೆಂಬ, ಎರಡೂ ಕೆಡದ ಒಡವೆಗಳನ್ನು ಸಂಪಾದಿಸುತ್ತಿದ್ದರಂತೆ, ಕೀರ್ತಿ ಪಡೆಯುತ್ತಿದ್ದರಂತೆ !) ಇದಕ್ಕಿಂತ ಮಿಗಿಲಾದ ಲಾಭ ಬೇಕೆ?

ಬಿಡುಗಡೆ : ಭಾಗ 3

English summary
S.K.Harihareshwara, California puts torch on the path we should take in between life and death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X