ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡುಗಡೆ : ‘ಶ್ರೇಯಸ್ಸಿ’ನ ಮಾರ್ಗ ತೋರಿಸು ಗುರುವೇ...

By * ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
|
Google Oneindia Kannada News

S.K.Harihareshwara
ಯಾರಾದರೂ ನಮ್ಮನ್ನು ಅಗಲಿದಾಗ, ಮತ್ತೆ ಬಾರದ ರೀತಿ ದೂರ ದೂರ, ಬಲು ದೂರ ಹೋದಾಗ ಅಥವಾ ಹೋದಾರು ಎಂದು ಭಾಸವಾದಾಗ ನಮ್ಮ ಮನಸ್ಸಿಗೆ ಕತ್ತಲು ಕವಿಯಲು ತೊಡಗುತ್ತದೆ. ನಾವು ಆವಾಗ ಸ್ವಲ್ಪ ತಬ್ಬಿಬ್ಬಾಗಿ, ಕಿಂ-ಕರ್ತವ್ಯ-ಮೂಢರಾಗಿ ಬಿಡುತ್ತೇವೆ, ಏನು ಮಾಡಲೂ ತೋಚದ ಪರಿಸ್ಥಿತಿ ಒದಗುತ್ತದೆ. ಅರ್ಜುನನಿಗೂ ಅದೇ ಪರಿಸ್ಥಿತಿ ಉಂಟಾಗಿತ್ತು ; ಗೀತಾಚಾರ್ಯ ಕೃಷ್ಣನನ್ನು ಕೇಳುತ್ತಾನೆ :

ಈಗೇನು ಮಾಡಲು ಬೇಕೋ ನನಗೆ ತೋಚುತ್ತಿಲ್ಲ ;
ಮಂಕು ಮುಸುಕಿದೆ ಕವಿದು ಬುದ್ಧಿಗೇ ಜಿಪುಣತನ ;
ನಿನ್ನ ಮೊರೆ ಹೋಗಿಹೆನು, ಶಿಷ್ಯನೆಂದನುಗ್ರಹಿಸು-
ನನ್ನ ಒಳಿತೇನೆಂದು ನನಗೆ ತಿಳಿಹೇಳು !

ಇಲ್ಲಿ (ಗೀತಾ 2:7) ಅರ್ಜುನ ಕೇಳಿದ್ದು , ನನಗೆ ಶ್ರೇಯಸ್ಸಿನ ಮಾರ್ಗ ತೋರಿಸು, ಅಂತ. ಅದು ಯಾವ ವಿಶೇಷ ಮಾರ್ಗ? ಜೀವನದಲ್ಲಿ 'ಶ್ರೇಯಸ್ಸು’ ಮತ್ತು 'ಪ್ರೇಯಸ್ಸು’ ಎಂಬ ಎರಡು ಗುರಿಗಳು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತವೆ ಎನ್ನುತ್ತಾರೆ. 'ಪ್ರೇಯಸ್ಸು’ ಎಂದರೆ, ಇಲ್ಲಿ ಇದೀಗ ಸಿಗುವ ಭೌತಿಕ ಸುಖ, ದೈಹಿಕವಾಗಿ ಮಾನಸಿಕವಾಗಿ ನಾವು ಅನುಭವಿಸಬಹುದಾದ ಎಲ್ಲ ಆನಂದ. ಇದನ್ನು ಮೀರಿದ, ಇಲ್ಲಿಂದ ನಾವು ಮರೆಯಾದ ಮೇಲೂ ನಮ್ಮ ಪಾಲಿಗೆ ಉಳಿಯುವ ಮಧುರ ಭಾವವೇ 'ಶ್ರೇಯಸ್ಸು’. ಕಠೋಪನಿಷತ್ತಿನಲ್ಲಿ ಈ ಬಗ್ಗೆ ಒಂದು ಮಾತು ಬರುತ್ತದೆ :

ನಮ್ಮ ಜೀವನ-ಪಥದಿ ಒಂದಲ್ಲ ಒಂದು ದಿನ
ಆ ಕವಲು ದಾರಿಯ ಬುಡವ ಸಂಧಿಸಲೇ ಬೇಕು ;
ಆಗ ಶ್ರೇಯ-ಪ್ರೇಯವು ಬಂದು
ಕೈ ಮುಗಿದು ಕೇಳುವುವು :
'ಇತ್ತ ಬಾ, ಇತ್ತ ಬಾ, ನನ್ನತ್ತ ಬಾ ಬಾ’ರೆಂದು ;
ದೂರದೃಷ್ಟಿಯ ಧೀರ 'ಶ್ರೇಯಸ್ಸ’ ಬಯಸಿದರೆ,
ನಡೆವ ಮಂದಮತಿ ಬರಿ ಯೋಗಕ್ಷೇಮದ
'ಪ್ರೇಯಸ್ಸಿ’ನೆಡೆಗೆ !

(ಶ್ರೇಯಶ್ಚ ಪ್ರೇಯಶ್ಚ ಮನುಷ್ಯಂ ಏತಸ್‌। ತೌ ಸಂಪರೀತ್ಯ ವಿನಕ್ತಿ ಧೀರ :। ಶ್ರೇಯೋ ಹಿ ಧೀರೋ ಅಭಿ ಪ್ರೇಯಸೋ ವೃಣೀತೇ। ಪ್ರೇಯೋ ಮಂದೋ ಯೋಗಕ್ಷೇಮಾತ್‌ ವೃಣೀತೇ।।- ಕಠ ಉಪ. 2)

ಮನುಷ್ಯನ ಹತ್ತಿರ ಬಂದ ಶ್ರೇಯಸ್ಸು - ಪ್ರೇಯಸ್ಸುಗಳು 'ನನ್ನನ್ನು ಆರಿಸಿಕೋ, ನನ್ನನ್ನು ಆರಿಸಿಕೋ’ ಎಂದು ಕೇಳಿಕೊಳ್ಳುತ್ತವೆಯಂತೆ. ವಿವೇಕಿಯಾದವನು/ಳು ಶ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ/ಳೆ, ಎಂಬ ಭಾವ.

ಇದು ಏಕೆ? ಎಲ್ಲರಿಗೂ ಗೊತ್ತಿದ್ದಂತೆ, ನಮಗೆ ಕೊನೆಗೆ ನೆನಪಿನಲ್ಲಿ ಉಳಿಯಬಹುದಾದದ್ದು / ಉಳಿಯುವುದು ಒಬ್ಬ ಮನುಷ್ಯ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳು ವಿನಹಾ ಆ ಮನುಷ್ಯನ ಗಾತ್ರ, ತೂಕ, ಎತ್ತರ ಮುಂತಾದ ದೇಹಕ್ಕೆ ಸಂಬಂಧಿಸಿದ ವಿವರಗಳಲ್ಲ ; ಆ ವ್ಯಕ್ತಿ ಅನುಭವಿಸಿರಬಹುದಾದ ಸುಖ- ಸಂತೋಷಗಳಲ್ಲ . ಆತ ಮಾಡಿದ, ತೊಡಗಿದ ಕೆಲಸಗಳಿಂದ ಆ ವ್ಯಕ್ತಿಗೆ ಒಳ್ಳೆಯ ಅಥವಾ ಕೆಟ್ಟ ಹೆಸರು ಬಂದಿರಬಹುದು, ಜನಗಳಿಗೆ ಉಪಕಾರ ಅಥವಾ ಅಪಕಾರ ಆಗಿರಬಹುದು. ಇವನ್ನು ಜನ ನೆನೆಯುತ್ತಾರೇ ವಿನಾ ಬೇರೆಯದನ್ನು ಅಲ್ಲ . ಇದೇ ಗತಿಸಿದ ವ್ಯಕ್ತಿ ಗಳಿಸಿದ ಶ್ರೇಯಸ್ಸು , ಕೀರ್ತಿ ಅಥವಾ ಅಪಕೀರ್ತಿ.

ಹಾಗಾದರೆ, ಇದ್ದಾಗ ಆ ವ್ಯಕ್ತಿಯನ್ನ ನಾವೆಲ್ಲ ಗುರುತಿಸುತ್ತಿದ್ದುದು ಆತನ/ಳ ದೇಹದ ಮೂಲಕವೇ ಅಲ್ಲವೇ ; ಪ್ರಾಣವೆಂಬುದು ದೇಹದೊಂದಿಗೆ ಇದ್ದಾಗ ದೇಹವೂ ಅದೂ ಒಂದಾಗಿಯೇ ಇತ್ತಲ್ಲ , ಏಕೆ ಹೀಗಾಯ್ತು ?- ಎಂಬುದಕ್ಕೆ ಕೃಷ್ಣ (ಗೀತಾ 2 : 13) ಹೇಳುತ್ತಾನೆ :

ಮೂರು ಮೆಟ್ಟಲು, ಬೆಳೆವ ಈ ಭೌತ ದೇಹಕ್ಕೆ-
ಬಾಲ್ಯ, ಹರೆಯತನ ಮತ್ತೆ ಮುಪ್ಪಡರಿಕೆ ;
ಒಳಗಿರುವ ಜೀವಕ್ಕೆ ಇನ್ನೊಂದು ಇದೆ ಜೊತೆಗೆ-
ಅದೆ ದೇಹಾಂತರ-ಪ್ರಾಪ್ತಿ , ಅಳುಕು ಏತಕೆ?

ಕೌಮಾರ್ಯ (ಬಾಲ್ಯ), ಯೌವನ (ತಾರುಣ್ಯ) ಮತ್ತು ವೃದ್ಧಾಪ್ಯ (ಮುಪ್ಪು )- ಇವು ಶರೀರಕ್ಕೆ ಆಗುವ ಬೆಳವಣಿಗೆಯ ಮಜಲುಗಳು. ಇದರಂತೆ, ದೇಹದೊಳಗಣ ಜೀವಕ್ಕೆ ದೇಹಾಂತರ ಎಂಬ ನಾಲ್ಕನೆಯ ಅವಸ್ಥೆ ಸಹ ಉಂಟಾಗುತ್ತೆ .

ಆದ್ದರಿಂದ, ದೇಹ ಈ ನಾಲ್ಕನೆಯ ಹಂತವನ್ನು , ಮೆಟ್ಟಲನ್ನು ಮುಟ್ಟಿದಾಗ, ಜೀವ ದೇಹತ್ಯಾಗ ಮಾಡಿತು ಎಂದುಕೊಳ್ಳಬೇಕೇ ವಿನಾ, ಮರಣ ಆಯಿತು ಎಂದು ತಿಳಿಯಬಾರದು ; ಮೋಹಗೊಳ್ಳದೆ ದುಃಖಿಸದೆ ಎದೆಗುಂದದೆ ಇರಬೇಕು- ಎನ್ನುತ್ತಾನೆ, ಕೃಷ್ಣ .

ಇನ್ನೊಂದು ರೀತಿಯಲ್ಲಿ ಇದನ್ನು ವಿವೇಚಿಸಬಹುದು : ವಸ್ತುವಿನ ಪರಿಪೂರ್ಣ ಅವಸ್ಥೆ ಎಂದರೆ ವಸ್ತುವೇ ಇಲ್ಲದೇ 'ಇರುವ’ ರೀತಿ ಆಗಿಬಿಡುವುದು ತಾನೇ? ಎಲ್ಲಾ ಚೈತನ್ಯವಾಗಿ ಬಿಡುವುದು ಅಲ್ಲವೇ?

ಕೊನೆ ಮೊದಲಿಲ್ಲದ, ಕೊನೆಗೊಳ್ಳಲೊಲ್ಲದ ಈ 'ಜೀವ’ಕ್ಕೆ ಇನ್ನೊಂದು ಹೆಸರು, ಆತ್ಮ. ಇದರ ಬಗ್ಗೆ ಹೀಗೆ ಹೇಳುತ್ತಾನೆ (ಗೀತಾ 4 : 23) :

ಎಂಥದಿದು ಈ ಆತ್ಮ , ಏನು ಸೋಜಿಗವಯ್ಯ।
ಶಸ್ತ್ರಗಳು ತುಂಡರಿಸಲಳವಲ್ಲ ಇರಿದು ;
ಬೆಂಕಿ ಏನೂ ಸುಡದು ; ತೋಯಿಸದು ನೀರು ;
ಗಾಳಿ ಒಣಗಿಸದಂಥ ವಸ್ತುವಿದು, ಹಿರಿದು !

ಈ ರೀತಿಯ, ಹುಟ್ಟು- ಸಾವು ಇರದ ಶಾಶ್ವತ, ವಿನಾಶವಿಲ್ಲದ್ದು ಅದು, 'ಆತ್ಮ 'ಅವಿನಾಶಿ ತು ತದ್‌ ವಿದ್ಧಿ’, ಅವಿನಾಶಿ ಎಂದು ತಿಳಿ’- ಎಂದು ಪರಿಚಯಿಸುತ್ತಾನೆ, ಕೃಷ್ಣ . ಇದನ್ನೇ ಕಠೋಪನಿಷತ್ತಿ (2 : 18) ನಲ್ಲಿ ನಚಿಕೇತನಿಗೆ ಯಮ ಹೇಳುವುದು ಕೂಡ.

ಹಾಗಾದರೆ 'ಆತ್ಮ’ದ ಈ ದೇಹಾಂತರವನ್ನು ವ್ಯಾವಹಾರಿಕವಾಗಿ ಹೇಗೆ ಅರ್ಥ ಮಾಡಿಕೊಳ್ಳುವುದು? 'ನರ : (ಒಬ್ಬ ಮನುಷ್ಯನು), ಯಥಾ (ಹೇಗೆ), ಜೀರ್ಣಾನಿ (ಹರಿದುಹೋದ), ವಾಸಾಂಸಿ (ಬಟ್ಟೆಗಳನ್ನು) ವಿಹಾಯ (ಬಿಟ್ಟು), ನವಾನಿ (ಹೊಸದಾದ), ಉಪರಾಣಿ (ಅಂಥದೇ ಬಟ್ಟೆಗಳನ್ನು), ಗೃಹ್ಣಾತಿ (ತೆಗೆದುಕೊಳ್ಳುತ್ತಾನೋ), ತಥಾ (ಹಾಗೆಯೇ), ಜೀರ್ಣಾನಿ (ಪರಿಪಕ್ವವಾದ), ಶರೀರಾಣಿ (ದೇಹಗಳನ್ನು), ವಿಹಾಯ (ಬಿಟ್ಟು), ಅನ್ಯಾನಿ (ಬೇರೆ), ನವಾನಿ (ಹೊಸದಾದ ಶರೀರಗಳನ್ನು), ದೇಹೀ (ದೇಹದಲ್ಲಿದ್ದ ಆ ಆತ್ಮನು), ಸಂಯಾತಿ (ಹೋಗಿ ಸೇರಿಕೊಳ್ಳುತ್ತಾನೆ) ’- ಎನ್ನುತ್ತಾನೆ, ಶ್ರೀ ಕೃಷ್ಣ !

ಈ ಜಗತ್ತನ್ನ ಆಳುವ ಯಾವುದೋ ಒಂದು ನಿಗೂಢ ಶಕ್ತಿ ಇದೆ- ಎಂಬ ನಂಬಿಕೆ ಉಳ್ಳವರಿಗೆ, ಆ 'ಪರಮಾತ್ಮ’ ಮತ್ತು ಈ 'ಜೀವಾತ್ಮ’ಗಳ, ಸ್ಥೂಲ-ಸೂಕ್ಷ್ಮ (Macrocosm and microcosm)ಗಳ ಈ ಹೋಲಿಕೆ ರುಚಿಸಬಹುದು (ನೋಡಿ : Jewish Talmud, Qtd by J Albson, in Dr BhagavanDas, "Essential Unity of Religions", pp 281-2) :

ನೋಡಿ, ಆತ್ಮ ಪರಮಾತ್ಮರಿಗೆ
ಒಂದು ಹೋಲಿಕೆಯುಂಟು :
ದೇಹವನು ಆವರಿಸಿ, ಒಳಗಿರಲು ಆತ್ಮ ;
ಜಗವನ್ನೇ ಆವರಿಸಿ 'ಅವನು’ ಇಹನು!
ಇದು ದೇಹ ಹೊತ್ತಂತೆ,
ಜೀವ-ಜಡ ಪ್ರಪಂಚವನೆಲ್ಲ , 'ಅವ’ ಧರಿಸಿರುವನು!
ನೋಡಬಲ್ಲದು 'ಆತ್ಮ’,
ನೋಡಲೆನೆ ಆದರದು, ಇಲ್ಲ , ಗೋಚರಿಸದು!
ಹಾಗೆಯೇ, 'ಅವನೆ’ಲ್ಲವನು
ನೋಡುತಿದ್ದರೂ ನಮ'ಗವನು’ ಕಾಣ ಸಿಗನು!

ಆದರೆ, ಹುಟ್ಟಿದ ದೇಹಕ್ಕೆ 'ಮರಣ’ ಎಂಬುದು ಕಟ್ಟಿಟ್ಟ ಬುತ್ತಿ . 'ಜಾತಸ್ಯ ಹಿ ಧ್ರುವೋ ಮೃತ್ಯು: ’, 'ಹುಟ್ಟಿದುದೆಲ್ಲ ಕೊನೆಗೊಂದು ದಿನ ಸಾಯಲೇಬೇಕು’ - ಎನ್ನುತ್ತಾನೆ ಕೃಷ್ಣ.

ಬಿಡುಗಡೆ : ಭಾಗ 2

English summary
S.K.Harihareshwara, California puts torch on the path we should take in between life and death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X