ಕಾರ್ನಾಡರ ಆಡಾಡತ ಆಯುಷ್ಯದ ಸುತ್ತಮುತ್ತ-3

Girish Karnad's autobiography
1952ರಲ್ಲಿ ಕಾರ್ನಾಡ ಕುಟುಂಬ ಅವರ ಸಂಬಂಧಿಕರಾದ ಸಶಿತ್ತಲ್ ಮಂಗೇಶರಾಯರ ಧಾರವಾಡದ ಸಾರಸ್ವತ ಪುರದ ಮನೆಯಲ್ಲಿ ಬಾಡಿಗೆದಾರರಾಗಿ ಇರಲು ಪ್ರಾರಂಭಿಸಿದರು. ಮಂಗೇಶರಾಯರು ತೀರಿಕೊಂಡು ಹಲವು ವರ್ಷಗಳಾಗಿದ್ದವು. ಅವರ ಹೆಂಡತಿ ಶಾಂತಕ್ಕ (ಗಿರೀಶರ ತಾಯಿಯ ಅಕ್ಕ) ತಮ್ಮ ಕೊನೆಯ ಎರಡು ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದಾಗ ಇವರ ಮನೆಯಲ್ಲಿ ಶಿರಸಿಯಲ್ಲೇ ಕಳೆದರು. ಧಾರಾವಾಡಕ್ಕೆ ಕಾರ್ನಾಡ ಕುಟುಂಬ ಬಂದ ಮೇಲೆ ಅವರು ಬಹಳದಿನ ಬದುಕಿರಲಿಲ್ಲ. ಧಾರವಾಡಕ್ಕೆ ಬಂದ ಮೇಲೆ ಗಿರೀಶ ಬಾಸೆಲ್ ಮಿಶನ್ ಹೈಸ್ಕೂಲ್ ಸೇರಿದರು. ಅವರ ಅಣ್ಣ ವಸಂತ ಕರ್ನಾಟಕ ಕಾಲೇಜು ಸೇರಿದರು.

ತಮ್ಮ ಹೈಸ್ಕೂಲು ಜೀವನ ಮತ್ತು ಕಾಲೇಜು ಜೀವನದ ಬಗ್ಗೆ ಬರೆಯುವ ಮೊದಲು ಸಾರಸ್ವತಪುರದ ಬಗ್ಗೆ ವಿವರವಾಗಿ ಬರೆಯುತ್ತಾರೆ. 1913ರಲ್ಲಿ ಪುಣೆಯಲ್ಲಿ ನಡೆದ ಪ್ರೊವಿನ್ಸಿಯಲ್ ಕೊಆಪರೇಟಿವ್ ಕಾನ್ಫರೆನ್ಸ್‌ನಲ್ಲಿ ಸಹಕಾರಿ ಸಂಘಟನೆಯ ತತ್ತ್ವವನ್ನು ಗೃಹನಿರ್ಮಾಣಕ್ಕಾಗಿ ಯಾಕೆ ಬಳಸಬಾರದು ಎಂಬ ಚರ್ಚೆಯಾಯಿತಂತೆ. ಅದನ್ನು ಕೇಳಿ ಉತ್ತೇಜಿತರಾದ ಎಸ್.ಎಸ್.ತಾಳಮಕ್ಕಿ ಎಂಬ ಸಾರಸ್ವತ ಸದ್ಗೃಹಸ್ಥರು ಕೆಲವು ಬಂಧುಬಾಂಧವರನ್ನು ಕಲೆಹಾಕಿ 1915ರಲ್ಲಿ ಸಾರಸ್ವತ್ ಕೊಆಪರೇಟಿವ್ ಹೌಸಿಂಗ ಸೊಸೈಟಿಯನ್ನು ಮುಂಬಯಿಯಲ್ಲಿ ನೋಂದಣಿ ಮಾಡಿದರು. ಅಷ್ಟೇ ಅಲ್ಲ, ವರ್ಷದಲ್ಲಿ ಕಟ್ಟಡ ಕಟ್ಟಿದರು.

ಅದು ಭಾರತದ ಪ್ರಥಮ ಹೌಸಿಂಗ್ ಸೊಸೈಟಿ. ಅದೇ ಮಾದರಿಯಲ್ಲಿ 1918 ಸೊಸೈಟಿಯೊಂದು ಧಾರವಾಡದಲ್ಲಿ ಪ್ರಾರಂಭವಾಯ್ತು. ಅದೇ ಸಾರಸ್ವತಪುರದ ನಿರ್ಮಾಣಕ್ಕೆ ಕಾರಣವಾಯ್ತು. ಊರ ಹೊರಗೆ ಗುಡ್ಡದ ಮೇಲೆ ಇದ್ದ ನಿವೇಶನ ಅದು. ಆದರಲ್ಲಿ ಎ, ಬಿ, ಸಿ, ಟೈಪ್‌ದ ಬಂಗ್ಲೆಗಳು ನಿರ್ಮಾಣವಾದ ವಿಚಾರ ವಿವರವಾಗಿ ಗಿರೀಶ ಬರೆಯುತ್ತಾರೆ. ಒಟ್ಟು ಐವತ್ತೊಂದು ಮನೆಗಳು. ಸಶಿತ್ತಲ್ ಮಂಗೇಶರಾಯರು ಸಾರಸ್ವತಪುರದಲ್ಲಿ ಒಂದು ಬಂಗ್ಲೆ (ಸಿ-38)ಕೊಂಡಿದ್ದರು. ಬಿ-ಟೈಪ್ ಮನೆಗಳು ವಿಶಾಲವಾಗಿದ್ದವು. ಅತಿವಿಶಾಲವಾದ ಎ-ಟೈಪಿನಲ್ಲಿ ಎರಡೇ ಬಂಗ್ಲೆಗಳಿದ್ದವು. ತಾವೂ ಒಂದು ಬಿ-ಟೈಪ್ ಬಂಗ್ಲೆ ಕೊಳ್ಳಬೇಕೆಂದು ಗಿರೀಶ ಕನಸು ಕಂಡಿದ್ದರು.

ಸಾರಸ್ವತ ಸಮಾಜದ ಬಗ್ಗೆ ಅವರ ನಡೆ ನುಡಿಗಳ ಬಗ್ಗೆ ವಿವರವಾಗಿ ಬರೆಯುತ್ತಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬ್ರಿಟಿಶರು ಪ್ರತಿಯೊಬ್ಬ ಪೌರನಿಗೊಂದು ಅಡ್ಡಹೆಸರು ಇರಲೇಬೇಕೆಂದು ಕಟ್ಟುನಿಟ್ಟು ಮಾಡಿದಾಗ ಚಿತ್ರಾಪುರ ಸಾರಸ್ವತರು ತಮ್ಮ ಊರಿನ ಹೆಸರನ್ನೇ ತಮ್ಮ ಅಡ್ಡ ಹೆಸರು ಮಾಡಿಕೊಂಡರು. (ಕಾರ್ನಾಡ, ಗೋಕರ್ಣ, ನಾಗರಕಟ್ಟಿ, ಮಂಕೀಕರ್, ಬೆನಗಲ್. ಮೂಡಬಿದರಿ, ನಿಲೇಕಣಿ ಮುಂ.) ಗಿರೀಶರು ಹೆಚ್ಚಾಗಿ ಚಿತ್ರಾಪುರ ಸಾರಸ್ವತರ ಬಗ್ಗೆ ಬರೆಯುತ್ತಾರೆ. (ಸಾರಸ್ವತ ಬ್ರಾಹ್ಮಣರಲ್ಲಿ ನಾಲ್ಕು ಮಠಗಳಿವೆ. ಚಿತ್ರಾಪುರಮಠ ಮತ್ತು ಕಾವಳೆಮಠ ಸ್ಮಾರ್ತ ಸಂಪ್ರದಾಯ ಅನುಸರಿಸಿದರೆ, ಕಾಶೀಮಠ ಮತ್ತು ಪರ್ತಕಾಳಿಮಠ ಮಾಧ್ವ ಸಂಪ್ರದಾಯ ಅನುಸರಿಸುತ್ತವೆ. ಉಳಿದ ಮೂರು ಮಠದ ಅನುಯಾಯಿಗಳು ಜಿ.ಎಸ್.ಬಿ.(ಗೌಡಸಾರಸ್ವತ ಬ್ರಾಹ್ಮಣರು) ಎಂದೇ ಪ್ರಸಿದ್ಧರಾಗಿದ್ದಾರೆ.)

ಇವರ ಮನೆಯ ಎದುರಿಗೆ ವಕೀಲರಾದ ಶಿರೂರ ಶಂಕರರಾಯರ ಭವ್ಯ ಬಂಗ್ಲೆ ಇತ್ತು. ಅವರಿಗೆ ಮಕ್ಕಳಿರಲಿಲ್ಲ. ಅವರ ಮನೆ ಸಾರಸ್ವತರ ಸಾಮಾಜಿಕ ಕೇಂದ್ರವಾಗಿತ್ತು. ಚಿತ್ರಾಪುರಮಠದ ಗುರುಗಳು ಧಾರವಾಡಕ್ಕೆ ಬಂದಾಗ ಅವರಲ್ಲೇ ಇಳಿದುಕೊಳ್ಳುತ್ತಿದ್ದರಂತೆ. ಏಳೆಂಟು ದಿನಗಳ ಉತ್ಸವವಾಗುತ್ತಿತ್ತು. ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಮನೆ ಆಶ್ರಯತಾಣವಾಗಿತ್ತು. ಆ ಕಾಲದಲ್ಲಿ ಲಗ್ನಮಂಟಪಗಳು ಇರಲಿಲ್ಲ. ಹೀಗಾಗಿ ಸಮಾಜದ ಮದುವೆ-ಮುಂಜಿಗಳು ಅವರ ಮನೆಯಲ್ಲೇ ಜರಗುತ್ತಿದ್ದವು ಎಂದು ಬರೆಯುತ್ತಾರೆ.

ಧಾರವಾಡದಲ್ಲಿ ಆರು ವರ್ಷ ಇದ್ದು, ಎಂ.ಎ.ಗಾಗಿ ಎರಡು ವರ್ಷ ಮುಂಬೈಗೆ ತೆರಳಿ, ಅಲ್ಲಿಂದ ಮೂರು ವರ್ಷ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಮುಗಿಸಿ, ಮದ್ರಾಸಿನಲ್ಲಿ ಏಳು ವರ್ಷ ನೌಕರಿ ಮಾಡಿ, ಹನ್ನೆರಡು ವರ್ಷಗಳ ಮೇಲೆ ಗಿರೀಶ ಧಾರವಾಡಕ್ಕೆ ಬಂದರು (1973). ತಂದೆಯವರ ಎರಡನೆಯ ಕಣ್ಣಿನ ಆಪರೇಶನ್ ಯಶಸ್ವಿಯಾಗಿ ಆಯಿತು. ತಾಯಿಯವರಿಗೆ ಬಿ-ಟೈಪ್ ಬಂಗ್ಲೆ ಕೊಳ್ಳುವಾಸೆ ಇತ್ತು. ಇವರ ಬಳಿಯಲ್ಲಿ ಮದ್ರಾಸ ನೌಕರಿ ಬಿಟ್ಟಾಗ ಬಂದ ಪ್ರಾವಿಡೆಂಟ್ ಫಂಡ್, ಭಾಭಾ ಫೆಲೋಶಿಪ್‌ನಿಂದಾಗಿ ಕೂಡಿದ ಹಣದ ಸಂಗ್ರಹವಿತ್ತು. ಆಗ ಬಿ-18ರಲ್ಲಿ ಇವರ ಅಣ್ಣ ಭಾಲಚಂದ್ರರ ಮಾವ (ನಾರಾಯಣ ಕೊಪ್ಪೀಕರ್)ಬಹುಕಾಲದಿಂದ ಬಾಡಿಗೆ ಇದ್ದರು. ಅದರ ಮಾಲೀಕರು ಆ ಮನೆ ಮಾರುವವರಿದ್ದರೆಂಬ ಸುದ್ದಿ ಇತ್ತು. ಆ ಮನೆಯನ್ನು ಕೊಳ್ಳುವ ಆಸೆ ಬಹಳ ಗಿರೀಶರಿಗೆ. ಇವರು ಕೊಪ್ಪೀಕರರಿಗೆ ಕೇಳಿದಾಗ ತಮ್ಮ ಮನೆ ಮಾರಲು ಇಲ್ಲ ಎಂದುಬಿಟ್ಟರು. ಪಕ್ಕದ ಮನೆ (ಬಿ-25) ಮಾರಲಿಕ್ಕಿದೆ ಯಾಕೆ ಕೊಳ್ಳಬಾರದು? ಎಂದು ಕೇಳಿದರಂತೆ. ಈ ಸಂದರ್ಭದಲ್ಲಿ ಗಿರೀಶರು ಬರೆಯುತ್ತಾರೆ:

ಆಯೀ ಜೀವನದಾದ್ಯಂತ ಪೋಷಿಸಿಕೊಂಡು ಬಂದಿರುವ ಬಯಕೆಯನ್ನು ಪೂರೈಸಬೇಕು ಎಂದು ನಾನು ನಿರ್ಧರಿಸಿದ್ದೆ. ಅಲ್ಲದೆ ಧಾರಾವಾಡದಲ್ಲಿದ್ದ ಮನೋಹರ ಗ್ರಂಥ ಮಾಲಾ ನನ್ನ ಯಯಾತಿ ನಾಟಕವನ್ನು ಪ್ರಕಟಗೊಳಿಸಿದಂದಿನಿಂದ ನನಗೂ ಧಾರವಾಡದಲ್ಲೊಂದು ಶಾಶ್ವತ ನೆಲೆ ಬೇಕು ಎಂಬ ಮಾತು ಮನದಟ್ಟಾಗಿತ್ತು. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ನಾನು ನಂ.ಬಿ-25ನ್ನು ಕೊಂಡುಕೊಂಡೆ. ಆಯಿಗೆ(ತಾಯಿಗೆ) ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ ನಾವು ಆ ಮನೆಯನ್ನು ಪ್ರವೇಶಿಸಲೇ ಇಲ್ಲ. ಏಕೆಂದರೆ ನಾನು ಪುಣೆಯಲ್ಲಿ ಫಿಲ್ಮ್ ಹಾಗೂ ಟೆಲಿವಿಜನ್ ಸಂಸ್ಥೆಯ ನಿರ್ದೇಶಕನಾಗಿ ನೇಮಕಗೊಂಡೆ. ನಂ. ಬಿ-25ನ್ನು ಬಾಡಿಗೆಗೆ ಕೊಟ್ಟು ನಾನು ಆಯಿ-ಬಾಪ್ಪಾರೊಡನೆ ಪುಣೆಗೆ ಹೋದೆ. ಎಂದು.

ಇವರು ಪುಣೆಗೆ ಹೋದ ಮೇಲೆ ನಾರಾಯಣರಾಯರ ಮನೆ ಮಾರಲಿಕ್ಕಿದೆ ಎಂಬ ಸುದ್ದಿ ಖಚಿತವಾಯ್ತು. ತಮ್ಮ ಅಳಿಯ ಆ ಮನೆ ಕೊಳ್ಳಬೇಕೆಂದು ಅವರ ಇಚ್ಛೆ ಇದ್ದುದರಿಂದ ಆ ಮನೆ ಮಾರಲಿಕ್ಕಿಲ್ಲ ಎಂದು ಹೇಳಿ ಹಾದಿ ತಪ್ಪಿಸಿರಬೇಕು ಎಂಬ ಸಂಶಯ ಗಿರೀಶರಿಗೆ ಬಂತು. ಅಣ್ಣ ಭಾಲಚಂದ್ರನ ಮಕ್ಕಳು ವಿದೇಶದಲ್ಲಿದ್ದುದರಿಂದ ಅವನಿಗೆ ಕೊಳ್ಳುವ ಮನಸ್ಸಿರಲಿಲ್ಲ. ಗಿರೀಶರು ತಮ್ಮ ಉಳಿತಾಯವನ್ನೆಲ್ಲ ಬಿ-25 ಮನೆ ಕೊಳ್ಳಲು ವೆಚ್ಚ ಮಾಡಿಬಿಟ್ಟಿದ್ದರು. ಈಗ ತಾವು ಮೆಚ್ಚಿದ್ದ ಮನೆಯನ್ನು ಕೊಳ್ಳುವುದು ಹೇಗೆ? ಅವರಿಗೆ ನಾರಾಯಣರಾಯರಿದ್ದ ಮನೆಯನ್ನು ಕೊಳ್ಳಲು ಬಹಳ ಮನಸ್ಸಿದ್ದುದರ ಕಾರಣ ಆ ಮನೆಯ ಲೊಕೇಶನ್ ಬಹಳ ಚೆನ್ನಾಗಿತ್ತು. ಇವರು ಮನದಲ್ಲೇ ನಾರಾಯಣರಾಯರನ್ನು ಶಪಿಸುತ್ತಿದ್ದಾಗ ಒಂದು ಅದೃಷ್ಟಕರ ಬೆಳವಣಿಗೆಯಾಯಿತು.

ಇವರ ಅಕ್ಕ ಪ್ರೇಮಾ ಪತಿಯೊಡನೆ ಮಲೇಶಿಯಾದಲ್ಲಿದ್ದಳು. ಅವಳ ಪತಿ ಧಾರವಾಡದಲ್ಲೊಂದು ಮನೆ ಇರಲಿ ಎಂದು ಆ ಮನೆಯನ್ನೇ ಕೊಂಡುಬಿಟ್ಟ. ಮುಂದೆ ಆ ಮನೆಯನ್ನು ಗಿರೀಶರಿಗೇ ಅವರ ಭಾವ ಮಾರಿದರು. ಕೊನೆಗೆ ತಾವು ಹಲವು ವರ್ಷಗಳ ಹಿಂದೆ ಮೆಚ್ಚಿದ ಮನೆ ತಮ್ಮದಾಯಿತು ಎಂಬ ಸಂತಸ ಗಿರೀಶರಿಗಾಯಿತು. ತಮ್ಮ ಹರಯದ ದಿನಗಳನ್ನು ಕಳೆದ ಸಿ-38ಕ್ಕಿಂತ ಬಿ-18 ಮನೆ ಅವರಿಗೆ ಪ್ರಿಯವಾಗಿತ್ತಂತೆ, ಅದು ಅವರ ಧಾರವಾಡವನ್ನು ಪ್ರತಿನಿಧಿಸಿತ್ತಂತೆ. ಆ ಮನೆ ವೈಶಿಷ್ಟ್ಯವೆಂದರೆ ಮಹಾತ್ಮಾ ಗಾಂಧೀಜಿಯವರು ತಮ್ಮ ಧಾರವಾಡ ಪ್ರವಾಸದಲ್ಲಿ ಏಳು ಗಂಟೆ ಆ ಮನೆಯಲ್ಲಿ ತಂಗಿದ್ದರಂತೆ! ಮುಂದೆ ಆ ಮನೆಯನ್ನು ಮಾರುವ ಪ್ರಸಂಗ ಬಂದಾಗ ಅದರ ಸೌಂದರ್ಯವನ್ನು ಉಳಿಸಿಕೊಳ್ಳುವರೆಂ ಭರವಸೆಯಿಂದ ಅದನ್ನು ಧರ್ಮಸ್ಥಳಕ್ಕೆ ಮಾರಿದರಂತೆ.

1952ರಲ್ಲಿ ಗಿರೀಶ ಧಾರವಾಡದಲ್ಲಿ ಬಾಸೆಲ್ ಮಿಶನ್ ಹೈಸ್ಕೂಲು ಸೇರಿದರು. ಅದೇ ವರ್ಷ ನಾನು ಗದುಗಿನ ವಿದ್ಯಾದಾನ ಸಮಿತಿ ಶಾಲೆಯಿಂದ ಎಸ್.ಎಸ್.ಸಿ.ಮುಗಿಸಿ ಧಾರವಾಡಕ್ಕೆ ಬಂದಿದ್ದೆ. ಅದೇ ವರ್ಷ ವಿ.ಕೃ.ಗೋಕಾಕರು ಕೊಲ್ಲಾಪುರ ರಾಜಾರಾಮ ಕಾಲೇಜಿನಿಂದ ವರ್ಗವಾಗಿ ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು. ಗೋಕಾಕರು ತಾವು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ಅದರ ಪ್ರಾಂಶುಪಾಲರಾಗುವ ಕನಸು ಕಂಡಿದ್ದರು. ರ‍್ಯಾಂಗ್ಲರ್ ಡಿ.ಸಿ.ಪಾವಟೆಯವರು ಮುಂಬೈ ರಾಜ್ಯದ ಉಚ್ಚ ಶಿಕ್ಷಣಾಧಿಕಾರಿ (ಡೈರೆಕ್ಟರ್ ಆಫ್ ಪಬ್ಲಿಕ್ ಇನ್‌ಸ್ಟ್ರಕ್ಶನ್) ಆಗಿದ್ದರು. ಆಗಿನ ಮುಂಬೈ ರಾಜ್ಯದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳು (ಧಾರವಾಡ, ಬೆಳಗಾವ, ವಿಜಾಪುರ ಮತ್ತು ಕಾರವಾರ) ಸೇರ್ಪಡೆಗೊಂಡಿದ್ದವು. ಕೊಲ್ಲಾಪುರ ಸರಕಾರಿ ಕಾಲೇಜಿನಿಂದ ಧಾರವಾದದ ಸರಕಾರಿ ಕಾಲೇಜಿಗೆ ವರ್ಗ ಮಾಡುವ ಅಧಿಕಾರ ಪಾವಟೆಯವರಿಗಿತ್ತು. ಗೋಕಾಕರು ಧಾರವಾಡಕ್ಕೆ ಬಂದಾಗ ಧಾರವಾಡದ ಸಾಹಿತ್ಯಿಕ ವಾತಾವರಣವೇ ಬದಲಾಯ್ತು.

ಆ ಕಾಲದಲ್ಲಿ ಉತ್ತರ ಕರ್ನಾಟಕಕ್ಕೆ ಹಳೆ ಮೈಸೂರಿನೊಡನೆ ಸಾಂಸ್ಕೃತಿಕ ಸಂಬಂಧವಿರಲಿಲ್ಲ. ಮೈಸೂರವರಿಗೆ ಉತ್ತರ ಕರ್ಣಾಟಕದವರು ಒರಟರು ಎಂಬ ತಾತ್ಸಾರವಿತ್ತು. ಉತ್ತರ ಕರ್ಣಾಟಕಕ್ಕೆ ಧಾರವಾಡವೇ ಸಾಂಸ್ಕೃತಿಕ ರಾಜಧಾನಿಯಂತಿತ್ತು. ಧಾರವಾಡದಲ್ಲಿ ಹೆಸರಾಂತ ಶೈಕ್ಷಣಿಕ ಸಂಸ್ಥೆಗಳಿದ್ದವು. ಧಾರವಾಡದ ಬೀದಿಯಲ್ಲಿ ಅಡ್ಡಾಡಿದರೆ ಕವಿಗಳು, ಲೇಖಕರು, ಪ್ರಕಾಶಕರು ಎದುರಾಗುತ್ತಾರೆ ಎಂಬ ಐತಿಹ್ಯವಿತ್ತು, ಅದು ತಕ್ಕ ಮಟ್ಟಿಗೆ ನಿಜವೂ ಆಗಿತ್ತೆಂದು ಗಿರೀಶ ಬರೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+