ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮಧರ್ಮನ ಕಟಕಟೆಯಲ್ಲಿ ಭೂಲೋಕದ ಜೀವಿಗಳು

By * ಡಾ. 'ಜೀವಿ' ಕುಲಕರ್ಣಿ, ಮುಂಬೈ
|
Google Oneindia Kannada News

GV Kulkarni as Yamadharmaraya
ಢಾಣೂಕರ್ ಕಾಲೇಜಿನಲ್ಲಿಯ ಮೂರನೆಯ ವರ್ಷ ಹೊಸ ನಾಟಕ ಎಲ್ಲಿದೆ ನರಕ ಬರೆಯಲು ಉದ್ಯುಕ್ತನಾದೆ. ಹಿಂದಿ ವಿಭಾಗದಲ್ಲಿಯ ತರುಣ ಪ್ರಾಧ್ಯಾಪಕ ಪ್ರೊ. ರಾಧೇಮೋಹನ ಶರ್ಮಾ ನನ್ನ ಅಭಿಮಾನಿಯಾಗಿದ್ದರು. 'ಜೀವಿ ಸಾಹಬ್, ನಿಮ್ಮ ಕನ್ನಡ ನಾಟಕದಲ್ಲಿ ನನಗೂ ಒಂದು ಪಾತ್ರ ಕೊಡಿ' ಎಂದು ಕೇಳಿದ್ದರು. ನಾಟಕಕ್ಕಾಗಿ ವಿಷಯ ಹುಡುಕಲು ಪ್ರಾರಂಭಿಸಿದೆ. ನಾನು ಧಾರವಾಡದಲ್ಲಿ ಜೆ.ಎಸ್.ಎಸ್. ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಅಲ್ಲಿ ನನಗೆ ನಾಟಕದ ಗೀಳು ಹಿಡಿಸಿದ ಕೆ.ಎಸ್.ಶರ್ಮಾ ನನ್ನ ಸಹಪಾಠಿಯಾಗಿದ್ದರು. ಕಾಯದೆ ಡಿಗ್ರಿ ಏನೋ ದೊರೆತಿತ್ತು ಆದರೆ ಅದರ ಪ್ರಯೋಜನವಾಗಿರಲಿಲ್ಲ.

ಒಂದು ಕೋರ್ಟ್ ಸೀನ್ ಇರುವ ನಾಟಕವನ್ನು ಬರೆಯಲು ಪ್ರಾರಂಭಿಸಿದೆ. ಯಮಧರ್ಮನ ನ್ಯಾಯಾಲಯ. ಅಲ್ಲಿ ಯಮನೇ ವರಿಷ್ಠ ನ್ಯಾಯಾಧೀಶ. ಅಲ್ಲಿ ಐದು ಆರೋಪಿಗಳ ವಿಚಾರಣೆ ನಡೆಯುತ್ತದೆ. ಹಾಲಿನಲ್ಲಿ ನೀರು ಬೆರಸಿದ ಭೈಯ್ಯಾ, ವಂಚನೆ ಮಾಡಿದ ಶೇಠಜಿ, ಬೇರೆ ಖೊಟ್ಟಿಹೆಸರುಗಳಲ್ಲಿ ಮೂವರು ಕನ್ಯೆಯರನ್ನು ಮದುವೆಯಾದ ವಂಚಕ ಶಿಖಾಮಣಿ ಪಿಂಟೊ, ಡಿಸ್ಟಿಲ್ಡ್ ವಾಟರ್‌ನ ಇಂಜೆಕ್ಷನ್ ಕೊಟ್ಟು ಹಣಗಳಿಸಿದ ಒಬ್ಬ ಡಾಕ್ಟರ್, ಹಾಗೂ ಕೊನೆಯದಾಗಿ ಯಾವ ತಪ್ಪೂ ಮಾಡದ ದೇಶಭಕ್ತ. ಇವರಲ್ಲಿ ನಾಲ್ವರು ತಾವು ನಿರಪರಾಧಿಗಳೆಂದು ಸಾಬೀತು ಮಾಡಲು ವಕೀಲರ ಸಹಾಯ ಪಡೆಯುತ್ತಾರೆ. ಇವರ ಚಾರ್ಜ್‌ಶೀಟ್ ಓದಿದವ ಚಿತ್ರಗುಪ್ತ. ಅಲ್ಲಿಯೂ ಸರಕಾರಿ ವಕೀಲರಿದ್ದಾರೆ. ಡಿಫೆನ್ಸ್ ಲಾಯರ್ ಇದ್ದಾರೆ. ಅವರ ಮಧ್ಯೆ ರೋಚಕ ವಾದ-ವಿವಾದ ನಡೆಯುತ್ತದೆ.

ನರಕದಲ್ಲಿಯೂ ವಕೀಲರ ವಾದ: ಭೂಲೋಕದಲ್ಲಿ ತಪ್ಪಿತಸ್ಥರು ಹೇಗೆ ಕಾಯದೆಯಲ್ಲಿಯ ಛಿದ್ರಗಳನ್ನು ಹುಡುಕಿ ಪಾರಾಗುತ್ತಾರೋ ಹಾಗೆಯೇ ನರಕಲ್ಲಿಯೂ ಪಾಪಿಗಳು ತಾವು ಪಾಪ ಮಾಡಿಲ್ಲವೆಂದು ವಕೀಲರ ಮುಖಾಂತರ ವಾದ ಮಾಡಿಸುತ್ತಾರೆ. ಕೊನೆಗೆ ಬರುವ ಪಾತ್ರ ದೇಶ ಭಕ್ತನದು. ಅವನು ಯಾವ ತಪ್ಪೂ ಮಾಡಿರುವುದಿಲ್ಲ. ಸುಳ್ಳು, ಕಪಟ, ವಂಚನೆಗಳು ಅವನಿಂದ ದೂರ ಇರುತ್ತವೆ. ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಫಾಶೀ ಶಿಕ್ಷೆ ಅನುಭವಿಸಿ ನರಕದ ನ್ಯಾಯಾಲಕ್ಕೆ ಬಂದಿರುತ್ತಾನೆ. ಚಿತ್ರಗುಪ್ತ ಹೇಳುತ್ತಾನೆ, ಇವನೊಬ್ಬ ಪುಣ್ಯಾತ್ಮ, ಆದರೆ ಇವನಿಗೆ ಗಲ್ಲಿನ ಶಿಕ್ಷೆಯಾದುದರಿಂದ ಇವನ ಕೇಸು ತಪ್ಪಿ ಇಲ್ಲಿಗೆ ಬಂದಿದೆ. ಇವನನ್ನು ಮರಳಿ ಭೂಲೋಕಕ್ಕೆ ಕಳಿಸಬೇಕು ಎನ್ನುತ್ತಾನೆ. ಆದರೆ ದೇಶಭಕ್ತ ತನ್ನ ವಿಚಾರಣೆ ಆಗಬೇಕೆಂದು ಹಟಹಿಡಿಯುತ್ತಾನೆ. ಉಳಿದ ತಪ್ಪಿತಸ್ಥರೆಲ್ಲ ತಮ್ಮನ್ನು ಮತ್ತೆ ಭೂಲೋಕಕ್ಕೆ ಮರಳಿ ಕಳಿಸಬೇಕೆಂದು ಯಮದೇವರಲ್ಲಿ ಯಾಚಿಸಿದರೆ ದೇಶ ಭಕ್ತ ತನಗೆ ನರಕದಲ್ಲಿಯೇ ಒಂದು ಸ್ಥಾನ ಕೊಡಬೇಕೆಂದು ಯಾಚಿಸುತ್ತಾನೆ. ಇತರರು ತಮ್ಮ ಡಿಫೆನ್ಸಿಗಾಗಿ ವಕೀಲರನ್ನು ನಿಯಮಿಸಿದ್ದರೆ ದೇಶಭಕ್ತ ತನ್ನ ಕೇಸಿನ ವಾದ ತಾನೇ ಮಂಡಿಸುತ್ತಾನೆ.

ಇಲ್ಲಿ ನಮ್ಮ ಆಧುನಿಕ ಜೀವನದ ಒಂದು ವಿಡಂಬನೆ ಇದೆ. ಸಾಕಷ್ಟು ಹಾಸ್ಯ ಕೂಡಾ ನಾಟಕದುದ್ದಕ್ಕೂ ಇದೆ. ಹಾಲು ಮಾರುವ ಭೈಯ್ಯಾ(ದುಧೇರಾಮ ದಹೀಕೃಷ್ಣ ಮಖ್ಖನವಾಲಾ) ತಾನು ಹಾಲಿನಲ್ಲಿ ನೀರು ಬೆರೆಸಲೇ ಇಲ್ಲ, ಆದರೆ ನೀರಿನಲ್ಲಿ ಹಾಲು ಸ್ವಲ್ಪ ಬೆರೆಸಿದ್ದುಂಟು ಎಂದು ಹೇಳುತ್ತಾನೆ. ವಕೀಲರು ಕಾಯದೆಯ ಕಲಮು ಪ್ರತಿ ಓದುತ್ತಾರೆ. ಕಾಯದೆಯಲ್ಲಿ ಹಾಲಿನಲ್ಲಿ ನೀರು ಬೆರೆಸಬಾರದೆಂದು ಇದೆ, ಆದರೆ ನೀರಿನಲ್ಲಿ ಹಾಲು ಬೆರೆಸಬಾರದು ಎಂದು ಸ್ಪಷ್ಟವಾಗಿ ಹೇಳಿಲ್ಲ. ಈ ಕಾಯದೆ ತಿದ್ದುಪಡಿಯಾಗದೇ ಭೈಯ್ಯಾನನ್ನು ಶಿಕ್ಷಿಸುವಂತಿಲ್ಲ ಎಂದು ವಾದಿಸುತ್ತಾರೆ. ಯಮಧರ್ಮ ಅವನನ್ನು ಭೂಲೋಕಕ್ಕೆ ಕಳಿಸಬೇಕಾಗುತ್ತದೆ. ಆದರೆ ಮನುಷ್ಯ ಜನ್ಮ ಕೊಡದೇ ಬೆಕ್ಕಿನ ಜನ್ಮ ಕೊಡುತ್ತಾನೆ. ಆದರೆ ಭಯ್ಯಾ ತನ್ನ ಮನೆಯಲ್ಲೇ ಬೆಕ್ಕಾಗಲು ಅನುಮತಿ ಕೇಳುತ್ತಾನೆ.

<strong>ಇದನ್ನೂ ಓದಿ : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ</strong>ಇದನ್ನೂ ಓದಿ : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ

ಸೇಠಜೀ ಕೇಸನ್ನು ತನ್ನ ಪರವಾಗಿ ಮಾಡಲು ಯಮನಿಗೇ ವಶೀಲಿ ಹಚ್ಚಲು ಲಂಚ ಕೂಡ ಕೊಡಲು ಮುಂದಾಗುತ್ತಾನೆ. ಕೋಟ್ಯಾವಧಿ ರೂಪಾಯಿ ವಂಚನೆ ಮಾಡಿ ಕೊನೆಗೆ ತಾನು ದಿವಾಳಖೋರ (ಇನ್‌ಸಾಲ್ವೆಂಟ್) ಎಂದು ಘೋಷಿಸಿರುತ್ತಾನೆ. ಸೇಠಜಿ ಭವದ್ಗೀತೆಯನ್ನು ಉದ್ಧರಿಸುತ್ತ, ಬಟ್ಟೆಯಂತೆ ಬದಲಾಗುವ ನಶ್ವರ ದೇಹಕ್ಕಾಗಿ ನಾನೇಕೆ ಪಾಪಮಾಡಬೇಕು? ಎಂದು ಮರುಸವಾಲು ಹಾಕುತ್ತಾನೆ. ಸರಕಾರಿ ವಕೀಲರು ಇಂಥ ವಂಚಕರಿಗೆ ಶಿಕ್ಷೆಯಾಗಬೇಕೆಂದು ವಾದಿಸುತ್ತ ಸಂತ ತುಕಾರಾಮರ ಕತೆ ಹೇಳುತ್ತಾರೆ. ಸಂತರು ಒಮ್ಮೆ ಚೇಳನ್ನು ಕಂಡಾಗ ತಮ್ಮ ಪಾದರಕ್ಷೆಯಿಂದ ಅದನ್ನು ಹೊಡೆದು ಕೊಂದರಂತೆ. ಆಗ ಒಬ್ಬ ಉಪದ್ವ್ಯಾಪಿ ಕೇಳಿದನಂತೆ, ಏನು ಸಂತರೇ, ನೀವು ಚೇಳನ್ನೇಕೆ ಕೊಂದಿರಿ, ನಿಮ್ಮ ಚೇಳಿನಲ್ಲಿ ರಾಮನಿಲ್ಲವೇ? ಎಂದು. ಆಗ ಸಂತರು ಉತ್ತರಿಸಿದ್ದರಂತೆ, ಅಹುದು, ಇದ್ದಾನೆ. ಆದರೆ ನಮ್ಮ ಪಾದರಕ್ಷೆಯಲ್ಲಿಯೂ ರಾಮನಿದ್ದಾನೆ. ಚೇಳಿನ ರೂಪದ ರಾಮನಿಗೆ ಪಾದರಕ್ಷೆಯ ರೂಪದ ರಾಮ ಶಿಕ್ಷಿಸುತ್ತಾನೆ ಎಂದು.

ಪಿಂಟೋ ಎಂಬವ ಮೂರು ಸುಳ್ಳು ಹೆಸರಿನಲ್ಲಿ (ಕ್ರಿಶ್ಚನ್, ಮುಸ್ಲಿಂ ಹಾಗೂ ಹಿಂದೂ ಹುಡುಗಿಯರನ್ನು) ಮೂವರನ್ನು ಮದುವೆಯಾಗಿ ವಂಚಿಸಿರುತ್ತಾನೆ. ಬಹುಪತ್ನಿಯರನ್ನು ಪಡೆಯುವುದು ಕಾಯ್ದೆಯ ಅನ್ವಯ ಅಪರಾಧ. ಸಾಕ್ಷಿಗಾಗಿ ಅವನ ಮೂರೂ ಹೆಂಡಿರನ್ನು ಭೂಲೋಕದಿಂದ ತಂದು ಹಾಜರ್ ಪಡಿಸುವುದಾಗಿ ಸರಕಾರಿ ವಕೀಲರು ಕೇಳಿದಾಗ ಯಮಧರ್ಮ ತಡವರಿಸುತ್ತಾನೆ. ಅವನ ಮೂರನೆಯ ಹೆಂಡತಿ ಹಿಂದೂ ಆಗಿದ್ದರಿಂದ, ಅವಳು ಸಾವಿತ್ರಿಯಂತೆ ರೋದಿಸತೊಡಗಿದರೆ, ವರ ಕೇಳಿದರೆ ಮತ್ತೆ ತೊಂದರೆಯಾಗಬಹುದು ಎಂದು ಯಮ ಭಾವಿಸುತ್ತಾನೆ. ಮೂರು ಧರ್ಮದ ಹೆಂಡಂದಿರನ್ನು ಕರೆಸಿ ಇಲ್ಲಿ ಮತೀಯ ವ್ಯಾಜ್ಯ ಹೂಡುವುದು ಸರಿಯಲ್ಲವೆಂದು ಮತ್ತೆ ಪಿಂಟೋನನ್ನು ಭೂಲೋಕಕ್ಕೆ ಕಳಿಸಲು ಒಪ್ಪುತ್ತಾನೆ.

ಇನ್ನು ಡಾಕ್ಟರನ ಮೇಲೆ ಅನೇಕ ಅಪಾದನೆಗಳಲ್ಲಿ ಪ್ರಮುಖವಾದದ್ದು ಶುದ್ಧನೀರಿನ ಇಂಜೆಕ್ಶೆನ್ ಕೊಟ್ಟು ಹಣ ಹಳಿಸಿದ್ದು. ಡಿಫೆನ್ಸ್ ವಕೀಲರು ಅಮೇರಿಕೆಯ ಒಂದು ವಿಜ್ಞಾನ ಪತ್ರಿಕೆಯನ್ನು ತಂದು ಶುದ್ಧನೀರನ್ನು ರಕ್ತಧಮನಿಯಲ್ಲಿ ಇಂಜೆಕ್ಟ್ ಮಾಡಿದರೆ ಅನೇಕ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಸಂಶೊಧನೆಯ ಬಗ್ಗೆ ಯಮದೇವನ ಗಮನ ಸೆಳೆಯುತ್ತಾರೆ. ಈ ಡಾಕ್ಟರ್ ಬದುಕಿದ್ದರೆ ಆ ವಿಜ್ಞಾನಿಗೆ ದೊರೆಯಬಹುದಾದ ನೊಬೆಲ್ ಬಹುಮಾನದಲ್ಲಿ ಸ್ವಲ್ಪ ಇವನಿಗೂ ಸಿಗಬಹುದಾಗಿತ್ತು ಕಾರಣ ಇವನು ತನಗರಿಯದೆಯೇ ಇಂಥ ಪ್ರಯೋಗ ಯಶಸ್ವಿಯಾಗಿ ಮಾಡಿದ ಮೇಧಾವಿ ಎಂದು ವಾದಿಸುತ್ತಾರೆ.

ಸತ್ಯಸಂಧ ದೇಶಭಕ್ತ : ಕೊನೆಯ ದೃಶ್ಯ ದೇಶಭಕ್ತನದು. ಅವನ ಕೇಸು ತಪ್ಪಿ ಇಲ್ಲಿ ಬಂದಿದೆ ಎಂದೂ, ಅವನ ವಿಚಾರಣೆಯ ಅಗತ್ಯವಿಲ್ಲವೆಂದು ಕೋರ್ಟಿನ ಕಾರ್ಯಕಲಾಪ ಮುಕ್ತಾಯಗೊಳಿಸುವ ಹಂತದಲ್ಲಿ ಯಮಧರ್ಮನಿದ್ದಾಗ ದೇಶಭಕ್ತ ಪ್ರೇಕ್ಷಕರ ಮಧ್ಯದಿಂದ ಬರುತ್ತಾನೆ, ಕೂಗಿ ಹೇಳುತ್ತಾನೆ, ನ್ಯಾಯಾಲಯವನ್ನು ಮುಕ್ತಾಯಗೊಳಿಸಬೇಡಿ. ನನ್ನ ವಿಚಾರಣೆ ಇನ್ನೂ ಆಗ ಬೇಕಾಗಿದೆ ಎಂದು. ಅವನು ವಿಟ್‌ನೆಸ್ ಬಾಕ್ಸಿಗೆ ಬಂದು ನಾಟಕೀಯವಾಗಿ ನಿಲ್ಲುತ್ತಾನೆ. ತಾನೂ ಪಾಪ ಮಾಡಿರುವುದಾಗಿ ಘೋಷಿಸುತ್ತಾನೆ. ಆದ್ದರಿಂದ ತನಗೆ ನರಕದಲ್ಲಿ ಸ್ಥಾನ ಕೊಡಲು ಕೇಳುತ್ತಾನೆ. ತನಗೆ ವಕೀಲರ ಅವಶ್ಯಕತೆ ಇಲ್ಲವೆನ್ನುತ್ತಾನೆ. ಸುಳ್ಳನ್ನು ಸತ್ಯ, ಸತ್ಯವನ್ನು ಸುಳ್ಳು ಎಂದು ಸಾಬೀತುಪಡಿಸುವಾಗ ಮಾತ್ರ ವಕೀಲರ ಅವಶ್ಯಕತೆ ಇರುತ್ತದೆ ಎಂದು ವ್ಯಂಗ್ಯವಾಗಿ ನುಡಿಯುತ್ತಾನೆ. ತನಗೆ ಸಾಧಿಸುವುದೇನೂ ಇಲ್ಲ. ತಾನು ತಪ್ಪು ಒಪ್ಪಿಕೊಳ್ಳುತ್ತಿರುವುದಾಗಿ ಹೇಳುತ್ತಾನೆ. ತಾನು ಮಾಡಿದ ಐದು ಪಾಪಗಳನ್ನು ವಿಸ್ತರಿಸುತ್ತಾನೆ. ತಾನು ಮಾಡಿದ ಮೊದಲನೆಯ ಪಾಪ ಸತ್ಯವನ್ನು ಮಾತಾಡಿದ್ದು. ಎರಡನೆಯ ಪಾಪ ಸ್ನೇಹದ ದಾನ ಮಾಡಿದ್ದು. ಮೂರನೆಯ ಪಾಪ ಇತರರನ್ನು ಪ್ರೀತಿಸಿದ್ದು. ನಾಲ್ಕನೆಯ ಪಾಪ ಅಹಿಂಸೆಯ ಪ್ರಚಾರ ಮಾಡಿದ್ದು. ಐದನೆಯ ಪಾಪ ಎಲ್ಲ ಜಾತಿಯವರು ಸರಿ ಸಮಾನರೆಂದು ವಾದಿಸಿದ್ದು.

ಆಗ ಯಮಧರ್ಮ ಇವನ ಬುದ್ಧಿಭ್ರಮೆಯಾಗಿರಬೇಕೆಂದು ಭಾವಿಸುತ್ತಾನೆ. ಪುಣ್ಯದ ಕೆಲಸ ಮಾಡಿ ಪಾಪಿ ಎಂದು ಏಕೆ ಕರೆದುಕೊಳ್ಳುವಿ ಎಂದು ಪ್ರಶ್ನಿಸಿ, ಭೂಲೋಕದಲ್ಲಿ ಯಾವ ದೇಶದಲ್ಲಿ, ಯಾರ ಮನೆಯಲ್ಲಿ ಜನ್ಮಬೇಕು ಕೇಳು ಕೊಡುತ್ತೇನೆ ಎನ್ನುತ್ತಾನೆ. ಆಗ ದೇಶಭಕ್ತ, ನಿನ್ನ ನರಕಲ್ಲಿಯೇ ಒಂದು ಚಿಕ್ಕಸ್ಥಾನ ಕೊಡು ಎಂದು ಬೇಡುತ್ತಾನೆ. ಪಾಪಿಗಳೆಲ್ಲರೂ ತಮ್ಮನ್ನು ಭೂಲೋಕಕ್ಕೆ ಕಳಿಸಲು ಇಲ್ಲಿ ಅಪೀಲು ಮಾಡುತ್ತಿದ್ದರೆ, ನೀನೇಕೆ ಇಲ್ಲೇ ಇರಲು ಬಯಸುತ್ತೀ? ಎಂದು ಕೇಳಿದಾದ ದೇಶಭಕ್ತ ಭೂಲೋಕವೇ ಒಂದು ನರಕವಾಗಿದೆ ಎನ್ನುತ್ತಾನೆ. ಸತ್ಯವನ್ನು ನುಡಿದ ಸೊಕ್ರೆಟಿಸನಿಗೆ ಭೂಲೋಕ ವಿಷಕೊಟ್ಟಿತು, ಪ್ರೀತಿಯನ್ನು ಸಾರಿದ ಜೀಸಸ್ ಕ್ರೈಸ್ತನಿಗೆ ಶಿಲುಬೆಗೇರಿಸಿತು, ಗುಲಾಮಗಿರಿಯನ್ನು ವಿರೋಧಿಸಿದ ಅಬ್ರಹಾಂ ಲಿಂಕನ್‌ಗೆ ಗುಂಡಿಕ್ಕಿತು, ರಕ್ತರಹಿತ ಕ್ರಾಂತಿಮಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದ ಗಾಂಧಿಗೆ ಗುಂಡಿಗಾಹುತಿ ಮಾಡಿತು, ವಿಶ್ವಶಾಂತಿಯ ವಿಳ್ಯಹೊತ್ತ ಡಾಗ್ ಹೆಮರ್‌ಶೀಲ್ಡನ ವಿಮಾಕ್ಕೆ ಕೊಳ್ಳೆ ಇಟ್ಟಿತು, ಕರಿಯ-ಬಿಳಿಯ ಭೇದವನ್ನು ಹೊಡೆದು ಹಾಕಲು ಹೊರಟ ಜಾನ್ ಕೆನೆಡಿಯನ್ನು ಕೊಲ್ಲಲಾಯಿತು. ಇದು ಭೂಲೋಕವಲ್ಲ ನರಕ. ಆ ನರಕಕ್ಕಿಂತ ಯಮನ ಲೋಕವೇ ಮೇಲು ಎಂದು ವಾದಿಸುತ್ತಾನೆ. ಕೊನೆಗೆ ಯಮದೇವ ಎದ್ದು ನಿಂತು ತನ್ನ ಕೀರೀಟವನ್ನು ಕೆಳಗೆ ಇಳಿಸಿ ತನ್ನ ಸೋಲನ್ನು ಒಪ್ಪುತ್ತಾನೆ. ತನಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾನೆ.

ದೇಶಭಕ್ತನ ಪಾತ್ರವನ್ನು ಹಿಂದೀ ಪ್ರಾಧ್ಯಾಪಕ ರಾಧೇಮೋಹನ ಶರ್ಮಾ ವಹಿಸಿದ್ದರು. ಅವರಿಗೆ ಶ್ರೇಷ್ಠ ನಟ ಬಹುಮಾನ ದೊರೆಯಿತು. ಮೊದಲಿನ ಎರಡು ವರ್ಷ ಆ ಬಹುಮಾನ ನನಗೆ ದೊರೆತಿತ್ತು. ಈ ನಾಟಕದಲ್ಲಿ ಹಿಂದಿ, ಕನ್ನಡ, ಇಂಗ್ಲಿಷ್ ಭಾಷೆಗಳ ಮುಕ್ತ ಬಳಕೆ ಇತ್ತು. ನಾನು ಯಮಧರ್ಮನ ಪಾತ್ರದಲ್ಲಿ ಎಲ್ಲ ಭಾಷೆಗಳಲ್ಲಿ ಉತ್ತರಿಸುತ್ತಿದ್ದೆ. ಈ ನಾಟಕದ ನಂತರದ ಪ್ರಯೋಗಗಳು ಪೂರ್ತಿ ಕನ್ನಡದಲ್ಲಿ ಆದವು.

English summary
Memories of ML Dahalunkar College by Kannada columnist GV Kulkarni, Mumbai. GV Kulkarni writes about comedy play written by him and characters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X