ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಧನೆಗೆ ದೃಢ ಸಂಕಲ್ಪ, ಆತ್ಮಾವಲೋಕನ

By * ಡಾ| 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

New Year Resolutions
ಹೊಸವರ್ಷಕ್ಕೆ ಸ್ವಾಗತ ಬಯಸುವಾಗ ಕಳೆದ ವರ್ಷದಲ್ಲಿಯ ಆಗುಹೋಗುಗಳ ಬಗ್ಗೆ ಒಂದು ಸಿಂಹಾವಲೋಕನ ಮಾಡುವ ಪದ್ಧತಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಫಲವಾಗಲಿ ಎಂದು ಹಾರೈಸಿ ಒಂದು ಬಗೆಯ ಸಂಕಲ್ಪ ಮಾಡುತ್ತಾರೆ. ಇಂಗ್ಲೀಷಿನಲ್ಲಿ ನ್ಯು ಇಯರ್ ರೆಸೊಲ್ಯುಶನ್ ' ಎನ್ನುತ್ತಾರೆ. ಹೊಸ ವರ್ಷಕ್ಕಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ನಿರ್ಧಾರ ಕೈಕೊಳ್ಳುತ್ತಾರೆ. ಹಾಗೆ ಪ್ರತಿಯೊಬ್ಬರೂ ಒಂದು ಬಗೆಯ ಅತ್ಮಾವಲೋಕನ ಮಾಡುವುದು ಉಚಿತ.

ಕಳೆದ ವರ್ಷ ಆಲಸ್ಯದಲ್ಲೇ ಕಳೆದುಹೋಯಿತು ಎಂದು ನನ್ನ ಮನಃಸಾಕ್ಷಿ ನುಡಿಯುತ್ತದೆ. ನನ್ನ ಮಿತ್ರರು ಹಿತೈಷಿಗಳ ನೆನಪಾಗುತ್ತದೆ. ಅವರಲ್ಲಿದ್ದ ಜಿಗುಟುತನ ನನ್ನಲ್ಲಿ ಇಲ್ಲವಲ್ಲ ಎಂದು ಬೇಸರ ಬರುತ್ತದೆ. ಮಿತ್ರ ಎಚ್.ಬಿ.ಎಲ್.ರಾಯರು ನೆನಪಾಗುತ್ತಾರೆ. ಅವರಷ್ಟು ಪಾದರಸದಂತೆ ಕ್ರಿಯಾಶೀಲರಾದ ವ್ಯಕ್ತಿಯನ್ನು ನಾನು ಕಂಡಿಲ್ಲ. ಮುಂಬೈಯಲ್ಲಿ ನಿರ್ಮಿತವಾದ ಭವ್ಯ ಕನ್ನಡ ಭವನಕ್ಕಾಗಿ ಅವರು ಪಟ್ಟ ಕಷ್ಟ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಅವರ ಉತ್ಸಾಹ ಅದಮ್ಯ. ಬೈಪಾಸ್ ಸರ್ಜರಿ ಆದ ಈ ವ್ಯಕ್ತಿ, ಎಪ್ಪತ್ತಾರು ಮೀರಿದ ಮೇಲೂ ಇಪ್ಪತ್ತಾರರ ಉತ್ಸಾಹ ತೋರಿ ಯುವಕರನ್ನು ನಾಚಿಸುವಂತಹ ಕೆಲಸಮಾಡುತ್ತಾರೆ. ಬಹುಶಃ ಗಿನ್ನಿಸ್ ರೆಕಾರ್ಡ್ ಸಾಧಿಸಬಹುದಾದ ವ್ಯಕ್ತಿ ಇವರು. ಅವರ ನೆನಪಾದಾಗ ನನ್ನ ಆಲಸ್ಯದ ಬಗ್ಗೆ ನನಗೇ ನಾಚಿಕೆಯಾಗುತ್ತದೆ. ಇನ್ನೊಬ್ಬ ಮಿತ್ರ ಡಾ| ಕೆ.ಎಸ್.ಶರ್ಮಾ ಅವರ ಸಾಹಸ ಪವಾಡ ಸದೃಶ. ವಕೀಲಿವೃತ್ತಿಯಲ್ಲಿ, ಕಾರ್ಮಿಕರ ಪರವಾಗಿ ನಡೆಸಿದ ಹೋರಾಟ ಮತ್ತು ಸಾಧನೆಯನ್ನು ಬದಿಗಿರಿಸಿ ಅವರು ಸಾಹಿತ್ಯಕ್ಕಾಗಿ ದುಡಿದದ್ದನ್ನು ಗಮನಿಸಿದರೂ ಆಶ್ಚರ್ಯವಾಗುತ್ತದೆ. ಸಮಗ್ರ ಬೇಂದ್ರೆ ಸಂಪುಟಗಳನ್ನು ತರುವಲ್ಲಿ ಅವರು ಮಾಡಿದ ಹರಸಾಹಸ ಕನ್ನಡದಲ್ಲಿ ಅಪೂರ್ವ. ನನಗೆ ಹೊಸವರ್ಷದ ಪ್ರಥಮ ದಿನ ನೆನಪಾದ ಇನ್ನೊಬ್ಬ ಅಸಾಧಾರಣ ವ್ಯಕ್ತಿ ರವಿ ಬೆಳಗೆರೆ. ದಿನಕ್ಕೆ 80 ಪುಟ ಬರೆಯುತ್ತಾರೆ ಈ ಆಸಾಮಿ. ಮೂರು ದಿನಗಳಲ್ಲಿ ಒಂದು ಪುಸ್ತಕ ಬರೆದುಬಿಡುವ ಛಲ ಹಾಗೂ ಬಲ ಇವರಲ್ಲಿದೆ. ಅವರಲ್ಲಿದ್ದ ದೈತ್ಯಶಕ್ತಿಯ ಬಗ್ಗೆ ನನಗೆ ಬಹಳ ಸಲ ಅಚ್ಚರಿಯಾಗುತ್ತದೆ. ಅಧ್ಯಾತ್ಮದಲ್ಲೂ ನನಗೆ ಬಹಳ ಆಸಕ್ತಿ ಇದೆ. ಆ ಕ್ಷೇತ್ರದಲ್ಲಿ ನನಗೆ ಆತ್ಮೀಯರಾದ ಡಾ| ಪ್ರಭಂಜನಾಚಾರ್ಯ ಹಾಗೂ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬರವಣಿಗೆ ಹಾಗೂ ಭಾಷಣಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸುತ್ತವೆ. ಈ ಶಕ್ತಿ ಅವರಿಗೆಲ್ಲಿಂದ ಬಂತು ಎಂದು ನಾನು ಬಹಳ ಸಲ ಅಚ್ಚರಿ ಪಟ್ಟಿದ್ದೇನೆ.

ಹೊಸವರ್ಷದ ಶುಭಾರಂಭದಲ್ಲಿ ನನ್ನ ಗುರುಗಳೆಲ್ಲ ನೆನಪಾಗುತ್ತಾರೆ. ಬೇಂದ್ರೆ, ಗೋಕಾಕ, ಮಧುರಚೆನ್ನರ ನೆನಪಾಗುತ್ತದೆ. ಕನ್ನಡ ಸಾಹಿತ್ಯದ ಈ ಮೂವರು ದಿಗ್ಗಜರು ನನಗೆ ಆತ್ಮೀಯರು ಎಂಬ ಹೆಮ್ಮೆ ನನಗಿದೆ. ಅವರ ಸಾಧನೆಯ ಪರ್ವತದ ಮುಂದೆ ನಮ್ಮ ಸಾಧನೆ ಒಂದು ಚಿಕ್ಕ ಮಳಲದಿನ್ನೆಯಂತಹದು. ಇನ್ನು ಜೀವನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಮಹಾತ್ಮರ ನೆನಪಾಗುತ್ತದೆ. ಭಗವಾನ ನಿತ್ಯಾನಂದರನ್ನು ನಾನು 1960ರ ಸಾಲಿನಲ್ಲಿ ಪ್ರತಿವಾರ ಸಂದರ್ಶಿಸುತ್ತಿದ್ದೆ. ನಿತ್ಯಾನಂದ ದರ್ಶನ ಎಂಬ ಪತ್ರಿಕೆಯನ್ನು ಸಂಪಾದಕನಾಗಿ ಒಂದು ವರ್ಷ ನಡೆಸಿದೆ. ಈ ಸಿದ್ಧರ ಶಿಷ್ಯರಾದ ಸ್ವಾಮಿ ಶಿವಾನಂದರ ಸಂಪರ್ಕ ಬಂತು, ಆಶ್ಚರ್ಯವೆನಿಸಿತು. ಅವರು ನಿತ್ಯಾನಂದರನ್ನು ಪ್ರತ್ಯಕ್ಷ ಕಾಣದಿದ್ದರೂ ಸ್ವಪ್ನದಲ್ಲಿ ಕಂಡು ಮಾರ್ಗದರ್ಶನ ಪಡೆದಿದ್ದಾರೆ, ಅಗಾಧ ಸಾಧನೆ ಮಾಡಿದ್ದಾರೆ. ನಾವು ಅವರನ್ನು ಹತ್ತಿರದಿಂದ ಕಂಡು ಕೂಡ ಏನೂ ಸಾಧಿಸಲಿಲ್ಲ. ಗುರುದೇವ ರಾನಡೆಯವರ ನೆನಪಾಗುತ್ತದೆ. ಅವರ ಕೃಪಾಕಟಾಕ್ಷ ಪಡೆದವನು ನಾನು. ಮಹಾತ್ಮರ ಮಾನಸ ಸರೋವರಗಳಲ್ಲಿ ಮಿಂದೆ, ಆದರೆ ಪೂರ್ತಿ ಲಾಭ ಪಡೆಯುವ ಯೋಗ್ಯತೆ ನನ್ನಲ್ಲಿರಲಿಲ್ಲ. ಯೋಗ ವಿಷಯದಲ್ಲಿ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್, ಹಟಯೋಗಿ ನಿಕಂ ಗುರೂಜಿ, ನಿಸರ್ಗೋಪಚಾರ ತಜ್ಞ ಡಾ| ಪದ್ಮನಾಭ ಬೋಳಾರ, ಇತ್ತೀಚೆಗೆ ನನ್ನ ಮೇಲೆ ಪ್ರಭಾವ ಬೀರುತ್ತಿರುವ ಬಾಬಾ ರಾಮದೇವ ಇವರಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ವಲ್ಪ ಕಲಿತಿದ್ದೇನೆ, ಆದರೆ ಕಲಿಯುವುದು ಇನ್ನೂ ಬಹಳ ಇದೆ ಎಂಬ ಎಚ್ಚರ ನನಗಿದೆ.

ಹೊಸ ವರುಷ ಬಂದಾಗ ಅನೇಕ ಅಪೂರ್ಣ ಕೆಲಸಗಳು ನೆನಪಾಗುತ್ತವೆ. ಈ ವರ್ಷ ಅವನ್ನೆಲ್ಲ ಪೂರೈಸಬೇಕೆಂಬ ಸಂಕಲ್ಪ ಮಾಡಬೇಕೆನಿಸುತ್ತದೆ. ಇದಕ್ಕಾಗಿ ಅವಿರತ ಪ್ರಯತ್ನ ಕಾರ್ಯಮಗ್ನತೆ ಅವಶ್ಯ. ನಾನೇ ಹಿಂದೆ ಬರೆದ ಒಂದು ವಚನ ನನಗೆ ನೆನಪಾಗುತ್ತದೆ:

ಮುಂದೆ ಓದಿ : ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ »

English summary
To make the dreams come true one needs to introspect and strong mind to achieve success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X