• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯವರ್ಧಕ ಹಣ್ಣು ಮತ್ತು ಸೊಪ್ಪುಗಳು

By Staff
|

ನಾವು ಸೇವಿಸುವ ಆಹಾರ ಮತ್ತು ಮನಸ್ಸಿಗೆ ಒಂದು ಅನ್ಯೋನ್ಯ ಸಂಬಂಧವಿದೆ. ಮನಸ್ಸು ಸೂಕ್ಷ್ಮ ಹಾಗೂ ಸರ್ವವ್ಯಾಪಿ. ಮನಸ್ಸು ಆತ್ಮ ಹಾಗೂ ಶರೀರಗಳ ಮಧ್ಯದ ಸೇತುವೆ. ಮನಸ್ಸು ತನ್ನ ಅಧೀನವಾದ ದೇಹವನ್ನು ನಿಷ್ಕಾಳಜಿ ಮಾಡಿದರೆ ಅದು ತನಗಾದ ನೋವನ್ನು ಕ್ಷಮಿಸುವುದಿಲ್ಲ. ಮನಸ್ಸು ರೋಗಗಳನ್ನು ಸೃಷ್ಟಿಸಬಲ್ಲದು ಹಾಗೂ ಗುಣಪಡಿಸಬಲ್ಲದು. ನೀನೇನು ತಿನ್ನುವಿಯೋ ಅದರಿಂದ ಹೊಟ್ಟೆ ಹುಣ್ಣು ಬರುವುದಿಲ್ಲ; ನಿನ್ನನ್ನೇನು ತಿನ್ನುತ್ತದೆಯೋ ಅದರಿಂದಲೇ ಹೊಟ್ಟೆಯಲ್ಲಿ ಹುಣ್ಣಾಗುವುದು.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಡಾ| ವಸುಂಧರಾ ಭೂಪತಿಯವರು ಬರೆದ 'ಆರೋಗ್ಯಕರ ಹಣ್ಣುಗಳು' ಎಂಬ ಎರಡನೆಯ ಪ್ರಬಂಧ ಸುಮಾರು 30 ಪುಟಗಳಷ್ಟು ಇದೆ. ಕೆಲವು ಮಹತ್ವದ ದಿನನಿತ್ಯ ಬಳಕೆಯ ಹಣ್ಣುಗಳನ್ನು ಆರಿಸಿ ಅವುಗಲ್ಲಿರುವ ಔಷಧೀಯ ಗುಣಗಳ ಬಗ್ಗೆ ಬರೆದಿದ್ದಾರೆ. ಎಲ್ಲ ಹಣ್ಣುಗಳು ಆರೋಗ್ಯಕ್ಕೆ ಹಿತಕರವೇ. ಆದರೆ ಅವುಗಳಲ್ಲಿರುವ ವಿಟಮಿನ್, ಕೊಬ್ಬು, ಕ್ಯಾಲರಿ, ಮತ್ತು ಇತರ ಪೋಷಕಾಂಶಗಳ ವಿವರಗಳನ್ನು ನೀಡುತ್ತಾರೆ.

ಅಂಜೂರ(ಫಿಗ್) ಇದರ ಮೂಲಸ್ಥಾನ ಅರೇಬಿಯಾ. ಅದರ ಗುಣಗಳ ಬಗ್ಗೆ ಕುರಾನಿನಲ್ಲಿ ಬಹಳ ಬರೆಯಲಾಗಿದೆ. ಆಯುರ್ವೇದದ ಧನ್ವಂತರಿ ನಿಘಂಟಿನಲ್ಲಿ ಅಂಜೂರದ ಕುರಿತು ಬರೆಯಲಾಗಿದೆ. (ಇದು ದೇಹ ಪ್ರಕೃತಿಯನ್ನು ತಂಪಾಗಿಡುತ್ತದೆ, ಬಾಯಿ ರುಚಿ ಹುಟ್ಟಿಸುತ್ತದೆ, ದೇಹದ ತೂಕ ಮತ್ತು ವೀರ್ಯ ವರ್ಧಿಸುತ್ತದೆ.). ಗಾಂಧೀಜಿಯವರೂ ಇದರ ಉಪಯುಕ್ತತೆಯ ಬಗ್ಗೆ ಬರೆದಿದ್ದಾರೆ. ಅಂಜೂರಿ ಸೇವನೆಯಿಂದ ಮೂಲವ್ಯಾಧಿಯಿಂದ ಬಳಲುವವರಿಗೆ ವಿಶೇಷ ಲಾಭವಿದೆ. ಒಣ ಅಂಜೂರಿಯನ್ನು ರಾತ್ರಿ ನೀರಿನಲ್ಲಿ ನೆನೆಯಿಟ್ಟು ಬೆಳಿಗ್ಗೆ ಸೇವಿಸುವುದು ರಾಮಬಾಣದಂತೆ ಕೆಲಸ ಮಾಡುತ್ತದೆ. ಕೆಮ್ಮಿಗೆ, ದಮ್ಮಿಗೆ ಬಾಯಿಹುಣ್ಣಿಗೆ, ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಇದು ಒಳ್ಳೆಯದು. ಇದು ಕಾಮೋತ್ತೇಜಕ ಕೂಡ.

ಕರಬೂಜ, ಕಲ್ಲಂಗಡಿಗಳು ಬೇಸಿಗೆಯ ಹಣ್ಣುಗಳು. ವಿಟಮಿನ್ ಎ ಅಧಿಕವಾಗಿರುವ ಕರಬೂಜು ರಾತ್ರಿ ಕುರುಡಿನ ಲಕ್ಷಣಗಳು ಕಂಡುಬಂದಾಗ ಮಕ್ಕಳಿಗೆ ಕೊಡಲು ಆದರ್ಶವಾದುದು. ಮೂತ್ರಕೋಶದಲ್ಲಿ ಕಲ್ಲು ಇರುವವರು, ಮಲಬದ್ಧತೆ ಇರುವವರು ಇದನ್ನು ಸೇವಿಸಬೇಕು. ತೇವಾಂಶ ಹೆಚ್ಚಾಗಿರುವ ಕಲ್ಲಂಗಡಿ ಮಲಬದ್ಧತೆ, ಉರಿಮೂತ್ರ, ಅತಿಸಾರದಿಂದ ಬಳಲುವವರಿಗೆ ಒಳ್ಳೆಯದು. ಬೊಜ್ಜು ಕರಗಿಸಲೂ ಇದು ಸಹಾಯಕಾರಿ. ಕಿತ್ತಳೆಹಣ್ಣು ಔಷಧೀಯ ಗುಣಗಳಿಂದ ತುಂಬಿದೆ. ಸುಶ್ರುತ ಹಾಗೂ ಚರಕ ಸಂಹಿತೆಯಲ್ಲಿ ಇದರ ಗುಣಗಳ ಬಗ್ಗೆ ಬರೆಯಲಾಗಿದೆ. ಇದರ ಹೂವು, ಹಣ್ಣು, ಸಿಪ್ಪೆ ಕೂಡ ಔಷಧೀಯ ಗುಣ ಹೊಂದಿವೆ. ಮಲಬದ್ಧತೆಗೆ, ಹೃದ್ರೋಗಕ್ಕೆ, ರಾತ್ರಿ ಅಂಧತ್ವಕ್ಕೆ, ರಕ್ತಹೀನತೆಗೆ, ಒಸಡಿನ ರಕ್ತಸ್ರಾವಕ್ಕೆ ಇದು ಗುಣಕಾರಿ. ಡಾಳಿಂಬೆಯ ಬೇರು, ಹೂವು ತೊಗಟೆ ಕೂಡ ಔಷಧೀಯ ಗುಣ ಪಡೆದಿದೆ. ಅಜೀರ್ಣ, ಕೆಮ್ಮು, ಪಿತ್ತವಿಕಾರ ಬೇಧಿಗೆ ಇದು ಒಳ್ಳೆಯದು. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು, ಹೃದ್ರೋಗಿಗಳಿಗೂ ಇದು ಒಳ್ಳೆಯದು.

ನಿಂಬೆಹಣ್ಣು ಬಹಳ ಪ್ರಸಿದ್ಧ. ಹಿಂದೆ (15ನೆಯ ಶತಮಾನದಲ್ಲಿ) ರಷ್ಯನ್ನರು ಜಪಾನೀ ಸೈನಿಕರಿಗೆ ಸೋತಿದ್ದರಂತೆ. ಅದಕ್ಕೆ ಮುಖ್ಯ ಕಾರಣ ಅವರಿಗೆ ಉಂಟಾದ ಸ್ಕರ್ವಿ ರೋಗ. ಈ ರೋಗಕ್ಕೆ ಜೀವಸತ್ವ ಸಿ ಕೊರತೆಯೇ ಕಾರಣ. ನಿಂಬೆಯ ರಸದಿಂದ ಸ್ಕರ್ವಿ ರೋಗ ಗುಣಪಡಿಸಬಹುದೆಂದು ಆಗ ಕಂಡುಹಿಡಿಯಲಾಯಿತು. ಅಜೀರ್ಣ, ಎದೆಯುರಿ, ಮಲಬದ್ಧತೆಗೆ ನಿಂಬೆ ರಸ ಒಳ್ಳೆಯದು. ವಾಂತಿಗೆ, ಗಂಟಲ ನೋವಿಗೆ ಉಪಶಮನಕಾರಿ. ಒಂದು ಲೋಟ ನೀರಿಗೆ ಒಂದು ನಿಂಬೆರಸ ಬೆರಸಿ ಎರಡು ಚಮಚೆ ಜೇನುತುಪ್ಪ ಬೆರಸಿ ಖಾಲಿಹೊಟ್ಟೆಯಲ್ಲಿ ಮೂರು ತಿಂಗಳಕಾಲ ಸೇವಿಸಿದರೆ ಬೊಜ್ಜು ಕರಗುವುದು. ಅತಿಸಾರ, ಆಮಶಂಕೆಗೆ ನಿಂಬೆರಸದ ಪಾನಕ ಒಳ್ಳೆಯದು.

ಪರಂಗಿ (ಪಪ್ಪಯ) ಹಣ್ಣಿನ ಎಲೆ ಹಣ್ಣು ಮತ್ತು ಬೀಜ ಔಷಧೀಯ ಗುಣ ಪಡೆದಿವೆ. ಭೋಜನದ ನಂತರ ಸೇವಿಸಿದರೆ ಆಹಾರ ಜೀರ್ಣವಾಗುತ್ತದೆ. ಬಾಣಂತಿಯರು ಸೇವಿಸಿದರೆ ಅವರ ಮೊಲೆಹಾಲು ವರ್ಧಿಸುತ್ತದೆ. ಇದು ಮೂಲವ್ಯಾಧಿಗೂ ಒಳ್ಳೆಯದು, ಬೊಜ್ಜು ಕೂಡ ಇದರಿಂದ ಕರಗುತ್ತದೆ. ಬಾಳೆಹಣ್ಣು ಭಾರತ ಮೂಲದ ಹಣ್ಣು. ಸರ್ವ ಋತುಗಳಲ್ಲಿಯೂ ಸರ್ವ ಕಡೆಗಳಲ್ಲಿಯೂ ಲಭ್ಯವಾಗಿದೆ ಈ ಹಣ್ಣು. ಬಾಳೆಯ ಬೇರು, ಕಾಂಡ, ಎಲೆ, ಹೂ, ಹಣ್ಣು ಎಲ್ಲವೂ ಔಷಧೀಯ ಗುಣದಿಂದ ಸಮೃದ್ಧವಾಗಿವೆ. ಬಾಳೆಹಣ್ಣಿನಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ ಕಣ್ಣಿಗೆ ಒಳ್ಳೆಯದು ಮಲಬದ್ಧತೆ, ರಕ್ತಹೀನತೆ, ಮೂಲವ್ಯಾಧಿಗೂ ಇದು ಒಳ್ಳೆಯದು.

ಸೇಬು ಹಣ್ಣು ಯುರೋಪದ ಹಣ್ಣು, ಭಾರತಕ್ಕೆ ಬಂತು. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರ ಇರಿ ಎನ್ನಲಾಗುತ್ತದೆ. ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಸಂಧಿವಾತದಿಂದ ನರಳುವವರಿಗೂ ಸೇಬು ಒಳ್ಳೆಯದು. ಬೇಲದ ಹಣ್ಣಿನ ಮೂಲ ಭಾರತ. ಆಮಶಂಕೆಗೆ, ಪಿತ್ತವಿಕಾರಕ್ಕೆ, ಕೆಮ್ಮಿಗೆ, ಒಸಡಿನ ರಕ್ತಸ್ರಾವಕ್ಕೆ, ಮೂಲವ್ಯಾಧಿಗೆ ಇದು ಒಳ್ಳೆಯದು. ಸಪೋಟ(ಚಿಕ್ಕು) ದಕ್ಷಿಣ ಅಮೇರಿಕೆಯಿಂದ ಬದ ಹಣ್ಣು. ರಕ್ತಹೀನತೆ, ಅತಿಸಾರ, ನರಗಳ ದೌರ್ಬಲ್ಯಕ್ಕೆ ಇದು ಒಳ್ಳೆಯದು. ಪೇರಲ (ಗ್ವಾವಾ, ಸೀಬೆಹಣ್ಣು) ಅಮೇರಿಕೆಯಿಂದ ಬಂದ ಹಣ್ಣು. ಇದು ಅಕ್ಬರನ ಕಾಲದಲ್ಲಿ ಭಾರತಕ್ಕೆ ಬಂತು. ಇದರ ಬೇರು, ಎಲೆ, ಹೂ ಮತ್ತು ಹಣ್ಣು ಎಲ್ಲವೂ ಔಷಧೀಯ ಗುಣಗಳಿಂದ ತುಂಬಿದ್ದು. ಈ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಇದು ಜೀರ್ಣಶಕ್ತಿಯನ್ನು ವರ್ಧಿಸುತ್ತದೆ. ಇದರ ಸೇವನೆಯಿಂದ ರಕ್ತ ವರ್ಧಿಸುತ್ತದೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಇದು ಕ್ಯಾಲ್ಸಿಯಂ ಪೂರೈಸುತ್ತದೆ.

ಮಾವು ಹಣ್ಣುಗಳಲ್ಲೇ ರಾಜ. ಇದರ ಮೂಲ ಸ್ಥಾನ ಭಾರತ. ಇದರ ತೊಗಟೆ, ಎಲೆ, ಹೂ, ಹಣ್ಣು, ಬೀಜ(ಗೊರಟ) ಎಲ್ಲೆಡೆ ಔಷಧೀಯ ಗುಣ ತುಂಬಿದೆ. ಅಮೀರ ಖುಸ್ರೊ ಇದರ ಮೇಲೆ ಕಾವ್ಯವನ್ನೇ ರಚಿಸಿದ. ಮಾವಿನಲ್ಲಿ ಜೀವಸತ್ವ(ವಿಟಮಿನ್) ಎ ಹೆಚ್ಚಾಗಿರುತ್ತದೆ. ರಾತ್ರಿಕುರುಡಿನಿಂದ ಬಳಲುವವರಿಗೆ ಇದು ಗುಣಕಾರಿ. ಇದರ ಸೇವನೆಯಿಂದ ಹಿಮೋಗ್ಲೋಬಿನ್ ವರ್ಧಿಸುತ್ತದೆ, ಶರೀರದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುತ್ತದೆ. ದ್ರಾಕ್ಷೆಯ ಮೂಲ ರಶಿಯಾ ಎಂದು ಹೇಳಲಾಗುತ್ತದೆ. ದ್ರಾಕ್ಷಾರಸ ಮದ್ಯ ತಯಾರಿಸಲು ಬಹಳ ಉಪಯುಕ್ತ. ಇದನ್ನು ಒಣಗಿಸಿ ಬಹುಕಾಲ ಇಡಬಹುದು, ಸಿಹಿತಿಂಡಿಗಳಲ್ಲಿ ಬಳಸಬಹುದು. ಆಯುರ್ವೇದದ ಲೇಹ್ಯದ ತಯಾರಿಕೆಯಲ್ಲಿ, ಚ್ಯವನಪ್ರಾಶ ಆದಿಯಲ್ಲಿ ಒಣದ್ರಾಕ್ಷೆಯ ಬಳಕೆ ಇದೆ. ಹಲಸಿನ ಹಣ್ಣಿನ ಮೂಲ ಸ್ಥಾನ ಭಾರತ. ಇದರ ಸೇವನೆಯಿಂದ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಇದರಿಂದ ವೀರ್ಯವೃದ್ಧಿಯೂ ಆಗುತ್ತದೆ. ಅತಿಸೇವನೆಯಿಂದ ಮಲಬದ್ಧತೆ ಉಂಟಾಗುತ್ತದೆ. ನೇರಿಳೆ ಕೂಡ ಭಾರತದ ಹಣ್ಣು. ಇದರ ತೊಗಟೆ, ಎಲೆ, ಚಿಗುರು, ಹಣ್ಣು ಮತ್ತು ಬೀಜಗಳನ್ನು ಔಷಧಿಯಾಗಿ ಬಳಸಲಾಗುತ್ತದೆ. ಗಂಟಲು ನೋವಿಗೆ ಈ ಹಣ್ಣಿನ ರಸ ಒಳ್ಳೆಯದು. ಇದರ ಬೀಜದ ಪುಡಿ ಸಿಮೂತ್ರರೋಗಿಗಳಿಗೆ ಉಪಶಮನಕಾರಿ.

ಡಾ| ವಸುಂಧರಾ ಅವರ ಮೂರನೆಯ ಪ್ರಬಂಧ 'ಆರೋಗ್ಯಕರ ಸೊಪ್ಪುಗಳು'. ದಂಟಿನಸೊಪ್ಪು(ರಾಜಗಿರಿ), ಮೆಂತ್ಯದ ಸೊಪ್ಪು, ಪುದಿನಾ, ಹೊನಗೊನೆ ಸೊಪ್ಪು, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ, ಕರಿಬೇವು, ಬಸಲೆ, ಪುಂಡಿ, ಚಕ್ಕೋತ, ಹರಿವೆ, ಕಿರುಕಸಾಲೆ, ನುಗ್ಗೆ, ಚಕ್ರಮುನಿ ಸೊಪ್ಪುಗಳ ಬಗ್ಗೆ ಬರೆಯುತ್ತಾರೆ. ಈ ಸೊಪ್ಪುಗಳ ನಿತ್ಯ ಬಳಕೆ ಮನೆಮನೆಗಳಲ್ಲಿ ನಡೆಯುತ್ತದೆ. ಅವುಗಳು ಆರೋಗ್ಯಕರ ಎಂಬ ತಿಳಿವಳಿಕೆ ಬಹಳ ಜನರಿಗೆ ಇರುವುದಿಲ್ಲ. ಕೆಲವು ಸೊಪ್ಪುಗಳು ಕೆಲವು ರೋಗಿಗಳಿಗೆ ವಿಶೇಷ ಹಿತಕಾರಿಯಾಗಿರುವುದರಿಂದ, ಇದರ ತಿಳಿವಳಿಕೆಯು ಇವುಗಳ ಆಯ್ಕೆಗೆ ಉಪಯುಕ್ತವಾಗುವುದರಲ್ಲಿ ಯಾವ ಸಂದೇಹವಿಲ್ಲ. ಮೂಲವ್ಯಾಧಿ ಹಾಗೂ ಯಕೃತ್ತಿನ ತೊಂದರೆ ಇರುವವರಿಗೆ ದಂಟಿನ(ರಾಜಗಿರಿ)ಸೊಪ್ಪು, ಮಧುಮೇಹ, ಸಂಧಿವಾತದಿಂದ ಬಳಲುವವರಿಗೆ ಮೆಂತ್ಯದ ಸೊಪ್ಪು, ಅಜೀರ್ಣ ಹಾಗೂ ಹೊಟ್ಟೆನೋವು ಇದ್ದವರಿಗೆ ಪುದಿನಾ, ಮೂಲವ್ಯಾಧಿಯಿಂದ ಬಳಲುವವರಿಗೆ ಹೊನಗೊನೆ ಸೊಪ್ಪು, ಮಲಬದ್ಧತೆ ಹಾಗೂ ಅಜೀರ್ಣಕ್ಕೆ ಸಬ್ಬಸಿಗೆ ಸೊಪ್ಪು, ಅಜೀರ್ಣ ವಾಂತಿ ಬಿಕ್ಕಳಿಕೆಗೆ ಕೊತ್ತಂಬರಿ, ಮಧುಮೇಹ ಮೂಲವ್ಯಾಧಿಗೆ ಕರಿಬೇವು, ದೇಹದ ತೂಕ ಹೆಚ್ಚಿಸಲು ಶಕ್ತಿವರ್ಧನೆಗೆ ಬಸಳೆ ಸೊಪ್ಪು, ಕೆಮ್ಮು ವಾಂತಿಗೆ ಪುಂಡಿ ಸೊಪ್ಪು, ಮೂಲವ್ಯಾಧಿ ಉರಿಮೂತ್ರ ನರಗಳ ದೌರ್ಬಲ್ಯಕ್ಕೆ ಚಕ್ಕೋತ ಸೊಪ್ಪು, ಜ್ವರಕ್ಕೆ ಮಲಬದ್ಧತೆಗೆ ಹರಿವೆ ಸೊಪ್ಪು, ಉರಿಮೂತ್ರಕ್ಕೆ ಕಿರುಕಸಾಲೆ ಸೊಪ್ಪು, ಮೂಲವ್ಯಾಧಿ ರಾತ್ರಿಕುರುಡುತನ ಹಾಗೂ ನರಗಳ ದೌರ್ಬಲ್ಯಕ್ಕೆ ನುಗ್ಗೆ ಸೊಪ್ಪು, ಖನಿಜಾಂಶ ಹೆಚ್ಚು ಪಡೆಯಲು ಚಕ್ರಮುನಿ ಸೊಪ್ಪು ಬಳಸಬಹುದು.

'ಆಹಾರ ಮತ್ತು ಮನಸ್ಸು' ಎಂಬ ಡಾ| ವಸುಂಧರಾ ಆವರ ನಾಲ್ಕನೆಯ ಪ್ರಬಂಧ ಚಿಕ್ಕದಾಗಿದ್ದರೂ ಮಹತ್ವದ್ದಾಗಿದೆ. ನಾವು ಸೇವಿಸುವ ಆಹಾರ ಮತ್ತು ಮನಸ್ಸಿಗೆ ಒಂದು ಅನ್ಯೋನ್ಯ ಸಂಬಂಧವಿದೆ. ಮನಸ್ಸು ಸೂಕ್ಷ್ಮ ಹಾಗೂ ಸರ್ವವ್ಯಾಪಿ. ಮನಸ್ಸು ಆತ್ಮ ಹಾಗೂ ಶರೀರಗಳ ಮಧ್ಯದ ಸೇತುವೆ. ಮನಸ್ಸು ತನ್ನ ಅಧೀನವಾದ ದೇಹವನ್ನು ನಿಷ್ಕಾಳಜಿ ಮಾಡಿದರೆ ಅದು ತನಗಾದ ನೋವನ್ನು ಕ್ಷಮಿಸುವುದಿಲ್ಲ. ಮನಸ್ಸು ರೋಗಗಳನ್ನು ಸೃಷ್ಟಿಸಬಲ್ಲದು ಹಾಗೂ ಗುಣಪಡಿಸಬಲ್ಲದು ನೀನೇನು ತಿನ್ನುವಿಯೋ ಅದರಿಂದ ಹೊಟ್ಟೆ ಹುಣ್ಣು ಬರುವುದಿಲ್ಲ; ನಿನ್ನನ್ನೇನು ತಿನ್ನುತ್ತದೆಯೋ ಅದರಿಂದಲೇ ಹೊಟ್ಟೆಯಲ್ಲಿ ಹುಣ್ಣಾಗುವುದು, ಇದನ್ನು ತಿಳಿ ಎಂದವರು ಡಾ| ಜೋಸಫ್ ಎಫ್ ಮಾಂಟಿ. ಜೀವನದ ನಿಜವಾದ ಶ್ರೀಮಂತಿಕೆ ಎಂದರೆ ಆಸೆ, ಆನಂದಗಳೇ ಆಗಿವೆ. ಜೀವನದ ನಿಜವಾದ ಬಡತನ ಎಂದರೆ ನಿರಾಸೆ ಮತ್ತು ಖಿನ್ನತೆ. ವೈದ್ಯರು ಕಾಯಿಲೆಗೆ ಔಷಧಿ ಕೊಡಬಹುದು ಆದರೆ ಆರೋಗ್ಯಕ್ಕೆ ಔಷಧಿ ಕೊಡಲಾರರು. ಆರೋಗ್ಯದ ಸಿದ್ಧ ಔಷಧಿ ಪ್ರತಿಯೊಬ್ಬ ಮನುಷ್ಯನ ಕೈಯಲ್ಲೇ ಇದೆ. ಪಂಚ ಜ್ಞಾನೇಂದ್ರಿಯ ಹಾಗೂ ಪಂಚ ಕರ್ಮೇಂದ್ರಿಯಗಳ ನಿಯಂತ್ರಣ ಮನುಷ್ಯನ ಮನಸ್ಸಿನ ಕೆಲಸವಾಗಿದೆ. ಮಿದುಳಿನ ವಿವಿಧ ಭಾಗಗಳು ಮನಸ್ಸಿನ ವಿವಿಧ ಕೆಲಸ ಹಾಗೂ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ, ನಿರ್ದೇಶಿಸುತ್ತವೆ. ಮಿದುಳಿನ ಮುಂಭಾಗ ನಮ್ಮ ಆಲೋಚನೆ, ವಿಶ್ಲೇಷಣೆ, ಸಾಮಾಜಿಕ ಚಿಂತನೆ, ನಡವಳಿಕೆಗೆ ಕಾರಣವಾಗಿರುತ್ತದೆ. ಮಿದುಳಿನ ಕಪಾಲ ಭಾಗ ಧ್ವನಿ, ವಾಸನೆ ರುಚಿಗಳ ವಿಶ್ಲೇಷಣೆ ಮತ್ತು ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದನ್ನು ಮಾಡುತ್ತದೆ. ಮಿದುಳಿನ ಮಧ್ಯ ಭಾಗದ ಲಿಂಬಿಕ್ ವ್ಯವಸ್ಥೆಯು ಆಹಾರ ಸೇವನೆ, ನಿದ್ರೆ, ಲೈಗಿಕ ಕ್ರಿಯೆ ಹಾಗೂ ಭಾವನೆಗಳನ್ನು ಪ್ರಚೋದಿಸಿದರೆ, ಮಿದುಳಿನ ಮೇಲ್ಮೈ ನಮ್ಮ ಬುದ್ಧಿವಂತಿಕೆ ಮತ್ತು ವಿವಿಧ ಕೌಶಲಗಳನ್ನು ಪ್ರದರ್ಶಿಸಲು ನೆರವಾಗುತ್ತದೆ. ಮಿದುಳಿನ ಬೆಳವಣಿಗೆ ಹಾಗೂ ಮನಸ್ಸಿನ ನೆಮ್ಮದಿಗೆ ಪುಷ್ಟಿಕರ ಆಹಾರ ಬಹು ಮುಖ್ಯ ಕಾರಣವಾಗುತ್ತದೆ.

ಆಯುರ್ವೇದದಲ್ಲಿ ಆಹಾರ ಸೇವಿಸುವ ವಿಧಿಯನ್ನು ವಿವರವಾಗಿ ತಿಳಿಸಿದ್ದಾರೆ. ನಮ್ಮ ದೇಹಕ್ಕೆ ಒಗ್ಗುವ ಆಹಾರವನ್ನೇ ನಾವು ಸೇವಿಸಬೇಕು. ಯಾವ ಆಹಾರವನ್ನು ನಾವು ಜೀರ್ಣಿಸಿಕೊಳ್ಳುವುದಿಲ್ಲವೋ ಅದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಮನಸ್ಸಿನ ಗುಣಗಳು ಮೂರು- ಸತ್ವ, ರಜ ಹಾಗೂ ತಮ. ಮನಸ್ಸು ಉದ್ವಿಗ್ನಗೊಂಡಾಗ, ಕೋಪಗೊಂಡಾಗ, ಶೋಕಭರಿತವಾದಾಗ, ಭಯದಿಂದ ಆವರಿಸಿದಾಗ, ಆಗ ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಅಹಾರದಲ್ಲಿಯೂ ಮೂರು ವಿಧ, ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ. (ಇವುಗಳ ವಿವರ ಕೊಡುತ್ತಾರೆ.) ನಾವು ಸಾತ್ವಿಕ ಆಹಾರ ಸೇವಿಸಬೇಕು. ರಾಜಸಿಕ (ಅಧಿಕ ಮಸಾಲೆಯುಳ್ಳ ಕರಿದ ತೀಕ್ಷ್ಣ ಆಹಾರ) ಹಾಗೂ ತಾಮಸಿಕ (ಅರೆಬೆಂದ, ಸ್ವಾದಗೆಟ್ಟ, ಹಳಸಿದ್ದ, ಫ್ರಿಜ್ಜಿನಲ್ಲಿಟ್ಟ ತಂಗಳನ್ನ) ಆಹಾರ ಬಿಡಬೇಕು. ಆದ್ದರಿಂದ ದೇಹಕ್ಕೆ ಅವಶ್ಯಕವಾದ ಪೌಷ್ಟಿಕಾಂಶಗಳಿಂದ ಕೂಡಿದ ಸಾತ್ವಿಕ ಆಹಾರವನ್ನು, ನಿಯಮಿತವಾಗಿ (ಸಮಯಕ್ಕೆ ಸರಿಯಾಗಿ), ಸಾವಕಾಶವಾಗಿ(ಅವಸರ ಮಾಡದೇ), ಪ್ರಶಾಂತ ಮನಸ್ಥಿತಿಯಿಂದ (ಟಿವಿಯಲ್ಲಿ ಕೆಟ್ಟ ಕಾರ್ಯಕ್ರಮ ನೋಡುದನ್ನು ಬಿಟ್ಟು) ಸೇವಿಸುತ್ತಿದ್ದರೆ ಮನುಷ್ಯರು ಆರೋಗ್ಯಕರ ದೇಹದೊಂದಿಗೆ ಆರೋಗ್ಯಕರ ಮನಸ್ಸನ್ನು ಹೊಂದಿರುವುದು ಸಾಧ್ಯವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X