• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯ

By Staff
|
ಹದಿನಾರು ಸಂಸ್ಕಾರಗಳ ಬಗ್ಗೆ ಬಹಳ ಜನ ಬರೆದಿದ್ದಾರೆ. ಇಂಟರ್‌ನೆಟ್‌ನಲ್ಲಿ ಸರ್ಫ್ ಮಾಡಿದರೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಆದರೆ ಶ್ರೀಕಂಠಕುಮಾರಸ್ವಾಮಿಯವರ 'ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು' ಪುಸ್ತಕದಲ್ಲಿ ದೊರೆಯುವ ವಿವರ ಇನ್ನೆಲ್ಲಿಯೂ ದೊರೆಯುವುದಿಲ್ಲ. ಅವರ ವೈಶಿಷ್ಟ್ಯವೆಂದರೆ ಅವರು ಮಾನವೀಯ ಮೌಲ್ಯಗಳ ಬಗ್ಗೆ ಮಾತಾಡುತ್ತಾರೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಶ್ರೀಕಂಠಕುಮಾರಸ್ವಾಮಿಯವರು ಪೀಠಿಕೆಯಲ್ಲಿ ಒಂದು ಮಹತ್ವದ ಮಾತು ಹೇಳುತ್ತಾರೆ. ಅವರು ವೇದಶಾಸ್ತ್ರಗಳಲ್ಲಿ ಅಚಲ ಶ್ರದ್ಧೆ ಹಾಗೂ ಅಭಿಮಾನದಿಂದ ಪಾಠಹೇಳುತ್ತಿದ್ದಾಗ ಅವರನ್ನು ಒಂದು ಪ್ರಶ್ನೆ ಕಾಡುತ್ತಿತ್ತಂತೆ. ತಾವು ವೇದಾಧ್ಯಯನ ಮಾಡಿದವರು, ಸಂಧ್ಯಾವಂದನೆ ದೇವತಾರ್ಚನೆ ಮೊದಲಾದ ನಿತ್ಯಕರ್ಮಗಳನ್ನು ಶ್ರದ್ಧೆಯಿಂದ ಎಡೆಬಿಡದೆ ಮಾಡುವವರು, ನಾಲ್ಕು ವರ್ಷ ಕಾಶೀವಾಸ ಮಾಡಿದಾಗ (ಬನಾರಸ್ ವಿಶ್ವವಿದ್ಯಾಲ್ಯದಲ್ಲಿ ಇಂಜಿನಿಯರಿಂಗ್ ಓದುವಾಗ) ನಿತ್ಯ ಗಂಗಾಸ್ನಾನ ಮಾಡಿದವರು, ವೇದದ ಪಾಠ ಹೇಳಿದವರು... ಇಷ್ಟಿದ್ದರೂ ತಮ್ಮ ವೈಯಕ್ತಿಕ ಕೋಪ, ಅಸಹನೆ, ಅಸೂಯೆ, ದುರಾಸೆ, ಕಾಮ, ಭಯ, ಕ್ರೌರ್ಯ ಇತ್ಯಾದಿ ಗುಣಗಳಿಂದ ಮುಕ್ತರಾಗದೇ ಜೀವನ ನಡೆಸುವುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಕಾಡುತ್ತಿತ್ತಂತೆ. ತಾವೇನೋ ಯಃಕಶ್ಚಿತ ಮನುಷ್ಯ. ಆದರೆ ಇನ್ನು ಕೆಲವು ಘನ ವಿದ್ವಾಂಸರು, ನಿತ್ಯವೂ ಪ್ರಸ್ಥಾನತ್ರಯ ಭಾಷ್ಯ(ಉಪನಿಷತ್ತು, ಬ್ರಹ್ಮಸೂತ್ರ, ಭವದ್ಗೀತೆ) ಹೇಳಿಕೊಡುವವರು, ವೇದಾಂತದ ಜಟಿಲ ಪ್ರಶ್ನೆಗಳನ್ನುಸುಲಭವಾಗಿ ಎಲ್ಲರಿಗೂ ತಿಳಿಯುವಂತೆ ಹೇಳುವ ಸಾಮರ್ಥ್ಯ ಪಡೆದವರು, ಭಾರತದ ಎಲ್ಲಾ ಪುಣ್ಯಕ್ಷೇತ್ರಗಳ ಯಾತ್ರೆಮಾಡಿ ಮಹಾನದಿಗಳಲ್ಲಿ ಮಜ್ಜನ ಮಾಡಿ ಪುನೀತರಾದವರು ಕೂಡ ಮೇಲ್ಕಾಣಿಸಿದ ದುರ್ಗುಣಗಳಿಂದ ಮುಕ್ತಿ ಪಡೆದಿಲ್ಲವೆಂಬುದನ್ನು ಕಂಡಾಗ, ಅವರಲ್ಲಿ ಈ ದುರ್ಗುಣಗಳು ಮೂರು ನಾಲ್ಕುಪಟ್ಟು ಹೆಚ್ಚಾಗಿರುವುದನ್ನು ಕಂಡಾಗ, ಅವರಿಗೆ ಆಶ್ಚರ್ಯವೂ ಜಿಗುಪ್ಸೆಯೂ ಉಂಟಾಯಿತಂತೆ.

ತಮ್ಮನ್ನು ಕಾಡುತ್ತಿದ್ದ ಪ್ರಶ್ನೆ ಇನ್ನಷ್ಟು ಜಟಿಲವಾಗಿತ್ತು. ಈ ಪ್ರಶ್ನೆಗೆ ಉತ್ತರ ಹೇಳಲು ನಂಜುಂಡ ಘನಪಾಠಿಗಳಲ್ಲಿ ಕೇಳಿದರಂತೆ. ಘನಪಾಠಿಗಳಿಗೂ ಈ ಪ್ರಶ್ನೆ ಕಾಡಿತ್ತಂತೆ, ಆದರೆ ಅವರಿಗೆ ಇದರ ಉತ್ತರ ಗುರುಗಳಾದ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳಿಂದ ದೊರೆತಿತ್ತಂತೆ. ಋಷಿ ಗೌತಮರು ತಮ್ಮ ಧರ್ಮಸೂತ್ರದಲ್ಲಿ ನಲವತ್ತು ಸಂಸ್ಕಾರಗಳನ್ನು ಮತ್ತೆ ಎಂಟು ಆತ್ಮ ಗುಣಗಳನ್ನು ಹೇಳಿದ್ದಾರೆ. ಆತ್ಮಗುಣಗಳಿಲ್ಲದ ಸಂಸ್ಕಾರಗಳು ವ್ಯರ್ಥ(ದಂಡ), ಇದರಿದಾಗಿ ಅಸಾಂಗತ್ಯ ತೋರುತ್ತದೆ ಎಂಬ ಮಾತು ಇವರ ಗುರುಗಳು ಹೇಳಿದ್ದರು. ಮುಂದೆ ಶ್ರೀಕಠಕುಮಾರಸ್ವಾಮಿಗಳು ಐಐಟಿಯಲ್ಲಿ ಕೆಲಸಮಾಡಲು ಮದ್ರಾಸಿಗೆ ಹೋದಾಗ, ತಮ್ಮ ಮಗಳಿಗೆ ಬಿ.ಎ.ಕ್ಲಾಸಿನಲ್ಲಿ ಪಠ್ಯಪುಸ್ತಕವಾಗಿದ್ದ ಗೌತಮ ಧರ್ಮಸೂತ್ರಗಳನ್ನು ಹೇಳಿಕೊಡಲು ಹೊರಟಾಗ, ತಮಗೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆಯಿತು ಎಂದು ಬರೆಯುತ್ತಾರೆ. ತಾವು ಪ್ರಸ್ತುತ ಪುಸ್ತಕದಲ್ಲಿ ಸಂಸ್ಕಾರಗಳೆಂದರೇನು? ಅವುಗಳಿಗೂ ಮಾನವೀಯ ಮೌಲ್ಯಗಳಿಗೂ ಏನು ಸಂಬಂಧ? ಸಂಸ್ಕಾರಗಳಿಂದ ಮಾನವೀಯ ಮೌಲ್ಯಗಳು ಅಥವಾ ಆತ್ಮಗುಣಗಳು ಸಿದ್ಧಿಸಬೇಕಾದರೆ ಏನುಮಾಡಬೇಕು ಎಂಬುದನ್ನು ಆಪಸ್ತಂಬ ಮಹರ್ಷಿಗಳ ಸೂತ್ರಗಳನ್ನು ಪ್ರಮಾಣವಾಗಿಟ್ಟುಕೊಂಡು ಬರೆದಿದ್ದಾರೆ.

ಸಂಸ್ಕಾರಗಳು ಅವುಗಳ ತಾತ್ವಕ ಹಿನ್ನೆಲೆ ಎಂಬ ಅಧ್ಯಾಯದಲ್ಲಿ ಧರ್ಮದ ಬಗ್ಗೆ ಇರುವ ತಪ್ಪು ತಿಳಿವಳಿಕೆ ಹೋಗಲಾಡಿಸುತ್ತಾರೆ. ಈಗ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಪದ್ಧತಿಗಳನ್ನು ನೋಡಿದರೆ ಧರ್ಮದ ಬಗ್ಗೆ ಶ್ರದ್ಧೆ ಇರುವವರಿಗೂ ತಿರಸ್ಕಾರದ ಭಾವನೆ ಮೂಡುತ್ತದೆ. ಧರ್ಮದಲ್ಲಿ ಕ್ರಿಯೆಗೆ ಸ್ಥಾನವಿಲ್ಲವೆಂದಲ್ಲ, ಆದರೆ ಧರ್ಮವು ಕೇವಲ ಕ್ರಿಯಾತ್ಮಕವಲ್ಲ. ಆತ್ಮೋನ್ನತಿಯೊಡನೆ ಇತರರ ಉಪಕಾರಕ್ಕೋಸ್ಕರ ನಡೆಸುವ ಕ್ರಿಯೆಯೇ ಧರ್ಮ. ಆಪಸ್ತಂಬರು ಹೇಳುತ್ತಾರೆ, ಯತ್ತು ಆರ್ಯಾಃ ಕ್ರಿಯಾಮಾಣಂ ಪ್ರಶಂಸಂತಿ ಸಧರ್ಮಃ, ಯದ್ಗರ್ಹಂತೇ ಸಃ ಅಧರ್ಮಃ. (ಪೂಜ್ಯರು ನಾವು ಮಾಡುವ ಕೆಲಸ ಪ್ರಶಂಸಿಸಿದರೆ ಅದು ಧರ್ಮ, ದೂಷಿಸಿದರೆ ಅದುವೆ ಅಧರ್ಮ.) ಸತ್ವರಜತಮೋ ಗುಣಗಳು ಎಲ್ಲರಲ್ಲಿ ಇವೆ. ಸತ್ತ್ವಗುಣಗಳನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟಸಾಧ್ಯ. ಅದರೆ ಅವನ್ನು ಎಲ್ಲರೂ ಗೌರವಿಸುತ್ತಾರೆ. ಸತ್ಯ, ಅಹಿಂಸೆ, ದಯಾ, ಪರೋಪಕಾರ, ಕ್ಷಮಾಗುಣ, ಅಸೂಯೆ ದ್ವೇಷ ಕ್ರೋಧ ಇಲ್ಲದಿರುವುದು, ನಿರಂಹಂಕಾರತ್ವ, ವಿದ್ಯಾರ್ಜನೆಯಲ್ಲಿ ಆಸಕ್ತಿ, ನ್ಯಾಯವಾದ ವಿಷಯದಲ್ಲಿ ನಿರ್ಭೀತಿ, ವಿಷಯಭೋಗಗಳಲ್ಲಿ ನಿರಾಸಕ್ತಿ, ಋಜುಸ್ವಭಾವ (ಮನಸ್ಸು, ವಾಕ್ಕು, ಕಾರ್ಯಗಳಲ್ಲಿ ಒಂದಾಗಿರುವಿಕೆ), ಶುಚಿತ್ವ, ದುರಾಶೆ ಇಲ್ಲದಿರುವುದು, ಇರುವದರಲ್ಲಿಯೇ ಸಂತೋಷಪಡುವದು, ಕೃತಜ್ಞತೆ, ಪ್ರೀತಿ ಮುಂತಾದವುಗಳು ಸತ್ತ್ವಗುಣಗಳು.

ಸತ್ತ್ವ ಗುಣಗಳು ಅಭಿವೃದ್ಧಿಗೊಳ್ಳಬೇಕಾದರೆ ಸತ್ತ್ವಭಾವನಾ ಪೂರ್ವಕವಾದ ಕ್ರಿಯೆಗಳಿಂದ ಸಾಧ್ಯವೇ ಹೊರತು ಭಾವನಾರಹಿತವಾದ ಕ್ರಿಯೆಗಳಿಂದ ಅಲ್ಲ ಎಂದು ಹೇಳುತ್ತಾರೆ.

ಶಾಸ್ತ್ರವಾಕ್ಯ ಹೀಗಿದೆ : ಕ್ರಿಯಾಹೀನಂ ಹತಂ ಜ್ಞಾನಂ, ಜ್ಞಾನ ಹೀನಾ ಹತಾ ಕ್ರಿಯಾ.( ಕ್ರಿಯೆಯಲ್ಲಿ ಇಳಿಸದ ಜ್ಞಾನ ದಂಡ (ವ್ಯರ್ಥ), ಹಾಗೆಯೇ ಜ್ಞಾನವೇ ಇಲ್ಲದೆ ಮಾಡುವ ಕ್ರಿಯೆಯೂ ದಂಡ(ವ್ಯರ್ಥ)). ದಯಾಗುಣ, ಕ್ಷಮಾಗುಣ, ಕೃತಜ್ಞತೆ ಇವು ಭಾವನೆಯಲ್ಲಿ ಮಾತ್ರ ಇದ್ದರೆ ಸಾಲದು, ಇವು ಕ್ರಿಯೆಯಲ್ಲಿ ಇಳಿಯಬೇಕು. ಮನುಷ್ಯನು ಸತ್ತ್ವಗುಣಾಭಿವೃದ್ಧಿಯ ಪ್ರಯೋಜನವನ್ನು ಮುಂದಿಟ್ಟುಕೊಂಡು ಮಾಡುವ ಕ್ರಿಯೆಗಳೆಲ್ಲವೂ ಭಾವನಾ ಪೂರ್ವಕವಾಗಿರಬೇಕು. ಕೇವಲ ಕ್ರಿಯೆಯಿಂದ ಯಾವ ಪ್ರಯೋಜನವೂ ಆಗುವದಿಲ್ಲ ಎನ್ನುತ್ತಾರೆ. ಇದರಿಂದ ನಮ್ಮ ಧರ್ಮವು ಅವಹೇಳನಕ್ಕೆ ಗುರಿಯಾಗುತ್ತದೆ. ಮಂತ್ರಾರ್ಥ ಶ್ಲೋಕಾರ್ಥಗಳನ್ನು ತಿಳಿಯದೆ ಮಾಡುವ ಪೂಜೆ ಹೋಮಗಳಿಂದ ಯಾವ ಪ್ರಯೋಜನವಿದೆ? ಯಾರ ಕೈಯಿಂದಲೋ ಗಣಪತಿ ಹೋಮ, ಚಂಡೀ ಹೋಮ ಮಾಡಿಸಿದರೇನು ಪ್ರಯೋಜನ? ಎಂದು ಕೇಳುತ್ತಾರೆ.

ಕೃತಜ್ಞತೆಯ ಬಗ್ಗೆ ಬಹಳ ವಿವರವಾಗಿ ಬರೆಯುತ್ತಾರೆ. ಸತ್ತ್ವಗುಣಗಳಲ್ಲಿ ಕೃತಜ್ಞತೆ ಎಂಬುದು ಅತ್ಯಂತ ಸುಲಭವಾದ, ಎಲ್ಲರೂ ಅಭ್ಯಸಿಸಬಹುದಾದ ಮುಖ್ಯವಾದ ಗುಣ. ಕೃತಜ್ಞತೆ ಎಂದರೆ ಮಾಡಿದ ಉಪಕಾರವನ್ನು ಸ್ಮರಿಸಿಕೊಳ್ಳುವುದು. ಕೃತಂ ಜಾನಾತೀತಿ ಕೃತಜ್ಞಃ (ಮಾಡಿರುವುದನ್ನು ಸ್ಮರಣೆಯಲ್ಲಿಟ್ಟುಕೊಂಡಿರುವವನು ಕೃತಜ್ಞ.) ಈ ಕೃತಜ್ಞತೆ ವ್ಯಕ್ತಿಗಳಿಂದ, ಸುತ್ತುಮುತ್ತಲಿನ ಪ್ರಕೃತಿಗೂ, ಪ್ರಾಣಿಗಳಿಗೂ, ಗಿಡಮರಗಳಿಗೂ ಅನ್ವಯಿಸುವುದಾದರೆ ಅದು ಔದಾರ್ಯದ ಲಕ್ಷಣ. ಬೆಳಕಿಗೆ, ನಮ್ಮ ಎಲ್ಲ ಚಟುವಟಿಕೆಗಳಿಗೆ, ಆಹಾರದ ಉತ್ಪಾದನೆಗೆ ಕಾರಣನಾದವ ಸೂರ್ಯ. ಅವನಿಗೆ ಕೃತಜ್ಞತೆ ಸಲ್ಲಿಸಲು ತ್ರಿಕಾಲ ಸಂಧ್ಯಾವಂದನೆ ಕಲ್ಪಿಸಲಾಯಿತು. ಸೂರ್ಯನ ನಂತರ ನಮಗೆ ಅಗ್ನಿ ಮಹತ್ವದ ದೇವತೆ. ಹವಿಸ್ಸನ್ನು ಆಯಾ ದೇವತೆಗಳಿಗೆ ತಲುಪಿಸುವವ ಅಗ್ನಿದೇವತೆ. ಈ ಅಗ್ನಿಯಲ್ಲಿ ಮೂರು ವಿಧ. ಗಾರ್ಹಪತ್ಯ, ದಕ್ಷಿಣಾಗ್ನಿ, ಆಹವನೀಯ- ಇವುಗಳ ಬಗ್ಗೆ ವಿವರವಾಗಿ ಬರೆಯುತ್ತಾರೆ. ನಲವತ್ತು ಸಂಸ್ಕಾರಗಳು ಎಂಟು ಆತ್ಮ ಗುಣಗಳ ಬಗ್ಗೆ ವಿವರಣೆ ನೀಡುತ್ತಾರೆ. ಭಗವದ್ಗೀತೆಯ ಹದಿನಾರನೆಯ ಅಧ್ಯಾಯದಲ್ಲಿ ಬರುವ (ಅಭಯಂ ಸತ್ತ್ವ ಸಂಶುದ್ಧಿಃ.._) 26 ದೈವೀ ಸಂಪದ್ಗುಣಗಳ ಬಗ್ಗೆ ಹೇಳುತ್ತಾರೆ. ಹಾಗೆಯೇ ಭಾಗವತದ ಏಳನೆಯ ಸ್ಕಂದದ ಹನ್ನೊಂದನೆಯ ಅಧ್ಯಾಯದಲ್ಲಿ ಬರುವ 30 ಗುಣಗಳ ಬಗ್ಗೆ ಹೇಳುತ್ತಾರೆ. (ಸತ್ಯಂದಯಾ ತಪಶೌಚ ತಿತಿಕ್ಷೇಕ್ಷಾ ಶಮೋದಮಃ..) ಮನುವೂ ಯಾಜ್ಞವಲ್ಕ್ಯರೂ ಹತ್ತು ಧರ್ಮಗಳ ಬಗ್ಗೆ ಹೇಳಿದ್ದಾರೆ. ಅವನ್ನು ಸ್ವಲ್ಪ ಮಾರ್ಪಡಿಸಿ ಪತಂಜಲಿ ಮಹರ್ಷಿಗಳು ಯಮ-ನಿಯಮಗಳನ್ನು ಅಷ್ಟಾಂಗಯೋಗದ ಅಧಾರವಾಗಿ ಹೇಳಿದ್ದಾರೆ. (ಯಮ: ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ; ನಿಯಮ: ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.)

ಅತಃಕರಣದ ಗುಣಗಳು ಕೆಲವೆಡೆ ವಿವರವಾಗಿ ಬಂದಿದ್ದರೆ ಗೌತಮ, ಮನು ಪತಂಜಲಿಗಳು ಎಲ್ಲವನ್ನೂ ಎಂಟು ಹತ್ತರಲ್ಲೇ ಅಡಗಿಸುವ ಪ್ರಯತ್ನ ಮಾಡಿದ್ದಾರೆ. ಮಹರ್ಷಿ ಆಪಸ್ತಂಬರು ತಮ್ಮ ಧರ್ಮ ಸೂತ್ರದಲ್ಲಿ ಬ್ರಹ್ಮದರ್ಶನಕ್ಕೆ ಬೇಕಾದ 22 ಗುಣಗಳ ಪಟ್ಟಿ ಮಾಡಿದ್ದಾರೆ. ಇವೆಲ್ಲ ಸತ್ತ್ವ ಗುಣಗಳು. ಇವೇ ಜೀವನ ಮೌಲ್ಯಗಳು ಎಂದು ಶ್ರೀಕಂಠಕುಮಾರಸ್ವಾಮಿಯವರು ಪ್ರತಿಪಾದಿಸುತ್ತಾರೆ. ಆತ್ಮಗುಣಗಳು ಸಂಸ್ಕಾರದ ಫಲವಲ್ಲ, ಸಂಸ್ಕಾರಗಳನ್ನು ಆತ್ಮಗುಣಾಭ್ಯಾಸಕ್ಕೆ ಅನುಕೂಲವಾಗುವಂತೆ ಮಾಡಬೇಕು. ಅದಕ್ಕೆ ನಾವು ಹೇಳುವ ಮಂತ್ರಗಳು, ಶ್ಲೋಕಗಳು, ವಾಕ್ಯಗಳು ಎಲ್ಲವೂ ಅರ್ಥವಾಗಬೇಕು. ಅವುಗಳ ತಾತ್ವಿಕ ಹಿನ್ನೆಲೆ ತಿಳಿಯ ಬೇಕು. ಎಂದು ಹೇಳಿ ಮುಂದೆ ಮಂತ್ರ ಹಾಗೂ ಅರ್ಥ ಸಹಿತವಾಗಿ ಸಂಸ್ಕಾರಗಳ ಬಗ್ಗೆ ಬರೆಯುತ್ತಾರೆ.

ಯಾವುದೇ ಧಾರ್ಮಿಕ ವಿಧಿಗೆ ಮಹಾಗಣಪತಿಯ ಪೂಜೆ ಅವಶ್ಯಕ. ಗಣಪತಿ ಪೂಜೆಯ ವಿವರಗಳನ್ನು ಕೊಡುತ್ತಾರೆ, ಪಠಿಸಬೇಕಾದ ಮಂತ್ರಗಳನ್ನು ಕೊಡುತ್ತಾರೆ. ಮಹಾಗಣಪತಿಯನ್ನು ಧ್ಯಾನಿಸಿ ಆಹವನಾದಿ ಸಕ ಉಪಚಾರಗಳಿಂದ ಪೂಜಿಸಬೇಕು. ನಮಗೆ ಅತ್ಯಂತ ಗೌರವಾರ್ಹನಾದ ವ್ಯಕ್ತಿ ಮನೆಗೆ ಬಂದರೆ ಏನೇನು ಉಪಚಾರಗಳನ್ನು ಮಾಡುತ್ತೇವೋ ಅವೆಲ್ಲವನ್ನು ಗಣಪತಿಗೆ ಮಾಡುತ್ತೇವೆ ಎನ್ನುತ್ತಾರೆ. ಪ್ರಧಾನ ಕಾರ್ಯ ಬೇರೆ ಇರುವುದರಿಂದ ಪೂಜೆಯ ಅಂಗವನ್ನು ಸ್ವಲ್ಪ ಹ್ರಸ್ವವಾಗಿಯೇ ಮಾಡುವುದು ಉಚಿತ, ಇದನ್ನೇ ದೀರ್ಘ ಮಾಡಿಬಿಟ್ಟರೆ, ಪ್ರಧಾನದಲ್ಲಿ ಅಶ್ರದ್ಧೆ ಬಂದು ಬಿಡಬಹುದು ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ಎಲ್ಲಾ ತರಹದ ವೈದಿಕ ಕರ್ಮಗಳಲ್ಲಿ ಆರಂಭದಲ್ಲಿ ಗಣಪತಿಯ ಪೂಜೆ ಮಾಡಿ ಪುಣ್ಯಾಹ ವಾಚನವೆಂಬ ಕರ್ಮವನ್ನು ಮಾಡುವ ಸಂಪ್ರದಾಯವಿದೆ. ಪುಣ್ಯಾಹ ಎಂದರೆ ಪುಣ್ಯವಾದ ಅಹಸ್ಸು, ಎಂದರೆ ಮಂಗಳಕರವಾದ ದಿನ ಎಂದರ್ಥ. ನಂತರ ಸ್ವಸ್ತಿವಾಚನ, ಎಂದರೆ ಎಲ್ಲವೂ ಮಂಗಳವಾಗಲಿ ಎಂದು ಹೇಳಿಸುವುದು. ಇವುಗಳ ಪರಿಚಯದೊಂದಿಗೆ ಪ್ರಯೋಗದ ಬಗ್ಗೆ (ಮಂತ್ರಗಳ ವಿವರ ) ಬರೆಯುತ್ತಾರೆ.

ನಾಂದೀಶ್ರಾದ್ಧದ ಬಗ್ಗೆ ಬರೆಯುತ್ತಾರೆ. ನಾಂದೀ ಎಂದರೆ ಆರಂಭ ಎಂದು ಅರ್ಥ. ನಾಂದೀ ಎನ್ನುವುದು ಒಂದು ಕರ್ಮವಲ್ಲ. ಶ್ರಾದ್ಧ ಎಂಬ ಹೆಸರು ಭಯವನ್ನುಂಟುಮಾಡುತ್ತದೆ. ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಉಪನಯನ, ವಿವಾಹ ಕಾಲದಲ್ಲೂ ನಾಂದೀಶ್ರಾದ್ಧ ಮಾಡಬೇಕಾಗುತ್ತದೆ. ಅಲ್ಲಿ ಅದಕ್ಕೆ ನಾಂದೀ ಸಮಾರಾಧನೆ ಎಂದು ಕರೆಯುತ್ತಾರೆ. ಏನೆಂದು ಕರೆದರೂ ಅದು ಶ್ರಾದ್ಧವೇ. ಇದರ ವಿವರಣೆ ಕೊಡುತ್ತಾರೆ. ವೇದದ ಕಥೆಯ ಪ್ರಕಾರ ಎಲ್ಲಾ ಸಂಸ್ಕಾರ ಕರ್ಮಗಳಲ್ಲಿಯೂ ಪಿತೃಗಳಿಗೆ ಭಾಗ ಕೊಟ್ಟು ಅವರ ಅನುಗ್ರಹ ಪಡೆಯಬೇಕೆಂದು ಇದೆ. ಪಿತೃಗಳಿಗೆ ಕೊಡುವ ಭಾಗವೇ ಶ್ರಾದ್ಧ. ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನ, ವಿವಾಹ, ಪುಂಸವನ, ಸೀಮಂತ ಮುಂತಾದ ಎಲ್ಲಾ ಸಂಸ್ಕಾರಗಳಲ್ಲಿಯೂ ನಾಂದೀಶ್ರಾದ್ಧವನ್ನು ಅವಶ್ಯ ಮಾಡಬೇಕು ಎನ್ನುತ್ತಾರೆ. ಅದೇ ದಿನ ಮಾಡಲು ಸಮಯಾಭಾವವಿದ್ದರೆ ಒಂದು ದಿನ ಮೊದಲೇ ಮಾಡಬಹುದು ಎನ್ನುತ್ತಾರೆ. ನಾಂದೀಶಾದ್ಧ ಪ್ರಯೋಗದ ಮಂತ್ರಗಳನ್ನು ಕೊಡುತ್ತಾರೆ.

ಪುನಸ್ಸಂಧಾನಪ್ರಯೋಗಃ ಎಂಬ ಅಧ್ಯಾಯದಲ್ಲಿ ಅನೇಕ ಹೊಸ ವಿಷಯಗಳನ್ನು ಸಾಮಾನ್ಯ ಓದುಗನಿಗೂ ತಿಳಿಯುವಂತೆ ವಿವರಿಸುತ್ತಾರೆ. ಇಲ್ಲಿ ಕೂಡ ಗಣಪತಿಯ ಪೂಜೆ ಇದೆ. ನಂತರ ಸರ್ವವ್ಯಾಪಿಯಾದ ಮಹಾವಿಷ್ಣುವಿನ ಪ್ರಾರ್ಥನೆ ಇದೆ. ಎಲ್ಲ ಕಾಲಗಳಲ್ಲಿಯೂ, ಎಲ್ಲಾ ಸ್ಥಳಗಳಲ್ಲಿಯೂ, ಎಲ್ಲಾ ಕಾರ್ಯಗಳಲ್ಲಿಯೂ ಸರ್ವಸ್ವರೂಪನಾದ, ಅನಾದಿಯಾದ ಆ ಮಹಾವಿಷ್ಣುವು ನನಗೆ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಬೇಕು. ಪುನಃ ಸಂಧಾನವೆಂದರೆ, ಬಿಟ್ಟು ಹೋಗಿರುವ ಅಗ್ನಿಯನ್ನು ಪುನಃ ಸಿದ್ಧಗೊಳಿಸುವುದು ಎಂದರ್ಥ. ವಿವಾಹವಾದ ಕೂಡಲೇ ಪ್ರತಿಯೊಬ್ಬನೂ ಔಪಾಸನವನ್ನು ಆರಂಭಿಸಬೇಕು. ಅಗ್ನಿಯನ್ನು ಧಾರ್ಯವಾಗಿಟ್ಟುಕೊಂಡು, ದಿನಾ ಬೆಳಿಗ್ಗೆ, ಸಾಯಂಕಾಲ ಆಹುತಿಯನ್ನು ಕೊಡಬೇಕು ಎಂಬ ನಿಯಮವಿದೆ. ಅಗ್ನಿಯನ್ನು ಕಾಪಾಡದೆ ಇದ್ದರೆ, ಔಪಾಸನಾದಿಗಳನ್ನು ಮಾಡದೆ ಬಿಟ್ಟಿದ್ದರೆ, ಪ್ರಾಯಶ್ಚಿತ್ತಹುತಿಗಳನ್ನು ಕೊಟ್ಟು ಮತ್ತೆ ಔಪಾಸನ ಮಾಡುವ ವಿವರ ಇಲ್ಲಿದೆ. ಅಗ್ನಿಯನ್ನು ನೀರಿನಿಂದ ಶುದ್ಧಗೊಳಿಸುವ ಬಗ್ಗೆ ಬರೆಯುತ್ತಾರೆ. ಪೂರ್ವಾಭಿಮುಖಿಯಾದ ಅಗ್ನಿಗೆ ಪಶ್ಚಿಮಾಮುಖನಾಗಲು ಪ್ರಾರ್ಥಿಸಬೇಕು. ಆಜ್ಯ ಸಂಸ್ಕಾರದ ಬಗ್ಗೆ ಹೇಳಿ ಹೋಮದ ವಿವರ ಬಣ್ಣಿಸುತ್ತಾರೆ.

ಔಪಾಸನಾಗ್ನಿಯು ಒಂದು ದಿನ ನಷ್ಟವಾದರೂ, ಆ ಹೊತ್ತು ಉಪವಾಸ ಇರಬೇಕೆಂಬ ನಿಯಮವಿದೆ. ಮಾರನೆಯ ದಿನ ಪುನಸ್ಸಂಧಾನ ಮಾಡಿಕೊಂಡು, ಓಂ ಭೂರ್ಭುವಸ್ಸುವಃ ಎಂಬ ಪ್ರಾಯಶ್ಚಿತ್ತಾಹುತಿಯನ್ನು ಕೊಟ್ಟು ಔಪಾಸನ ಆರಂಭಿಸಬೇಕಂತೆ. ಈಗಿನ ಕಾಲದಲ್ಲಿ ಇದನ್ನೆಲ್ಲ ಹೀಗೆ ಔಪಾಸನ ಮಾಡುವವರು ಕ್ವಚಿತ್ತಾಗಿ ಲಭಿಸುತ್ತಾರೆ. ಆದರೆ ಇದರ ವಿವರಗಳನ್ನು ತಿಳಿಹೇಳುವ ಕೆಲಸ ಮಾಡುವವರೂ ದುರ್ಲಭರಾಗಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more