ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರ್ಶ ಸ್ತ್ರೀ ಕಮಲಾಬಾಯಿ ಪಂಚಮುಖಿ

By Staff
|
Google Oneindia Kannada News

Kamalabai Panchamukhiನಾವು ಜೀವನದಲ್ಲಿ ದೇವಋಣ, ಋಷಿಋಣ, ಪಿತೃಋಣ ತೀರಿಸಬೇಕು ಎಂದು ಹೇಳಲಾಗುತ್ತದೆ. ಸಂಶೋಧನಾಚಾರ್ಯ ಪಂಚಮುಖಿಯವರ ಮೂವರು ಮಕ್ಕಳು ತಾಯಿಯ ಬಗ್ಗೆ ಒಂದು ಅಪೂರ್ವ ಪುಸ್ತಕ ಬರೆದು ತಾಯಿಯ ಋಣವನ್ನು ಅಕ್ಷರರೂಪದಲ್ಲಿ ತೀರಿಸಿದ್ದಾರೆ. ಮಾತೃದೇವೋಭವ ಎಂಬ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ.

ಅಂಕಣಕಾರ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಒಂದು ಅಪರೂಪವಾದ ಪುಸ್ತಕ ಓದಿದೆ. ಅದು ಸಂಶೋಧನಾಚಾರ್ಯ ವಿದ್ಯಾರತ್ನ ಪಂಚಮುಖಿಯವರ ಧರ್ಮಪತ್ನಿಯ ಬಗ್ಗೆ ಬರೆದ ಪುಸ್ತಕ. ಆಧುನಿಕ ಕಾಲದಲ್ಲಿ ನಂಬಲು ಅಸಾಧ್ಯವಾದ ಅನೇಕ ಸಂಗತಿಗಳು ಅದರಲ್ಲಿ ದಾಖಲಾಗಿವೆ. ಅ ಪುಸ್ತಕದ ಶೀರ್ಷಿಕೆ: ಆದರ್ಶ ಸ್ತ್ರೀ ಜೀವನ - ಕಮಲಬಾಯಿ ರಾ. ಪಂಚಮುಖಿ ಇವರ ಸಂಕ್ಷಿಪ್ತ ಜೀವನ ಚರಿತ್ರೆ''. ಇದರ ಲೇಖಕರು ಪುತ್ರರಾದ ವಾದಿರಾಜ, ಪಾರ್ಥಸಾರಥಿ, ಆನಂದತೀರ್ಥ. ಮಾತೃದೇವೋಭವ ಎನ್ನಲಾಗುತ್ತದೆ. ನಾವು ಜೀವನದಲ್ಲಿ ದೇವಋಣ, ಋಷಿಋಣ, ಪಿತೃಋಣ ತೀರಿಸಬೇಕು ಎಂದು ಹೇಳಲಾಗುತ್ತದೆ. ಮೂವರು ಮಕ್ಕಳು ತಾಯಿಯ ಬಗ್ಗೆ ಒಂದು ಅಪೂರ್ವ ಪುಸ್ತಕ ಬರೆದು ತಾಯಿಯ ಋಣವನ್ನು ಅಕ್ಷರರೂಪದಲ್ಲಿ ತೀರಿಸಿದ್ದಾರೆ.

ಎಲ್ಲ ಧರ್ಮದವರಿಗೂ ತಾಯಿ ಪೂಜ್ಯಳೆ. ದೇವರು ತನಗೆ ಎಲ್ಲೆಡೆ ಇರಲು ಸಾಧ್ಯವಾಗುವುದಿಲ್ಲ ಎಂದು ತಾಯಿ'ಯನ್ನು ಸೃಷ್ಟಿಸಿದ' ಎಂಬ ಮಾತು ಇಂಗ್ಲಿಷಿನಲ್ಲಿದೆ. ಇದು ಪಾಶ್ಚಿಮಾತ್ಯರ ದೃಷ್ಟಿ. ಸನಾತನ ದೃಷ್ಟಿಯಿಂದ ತಾಯಿಯ ಬಗ್ಗೆ ಹೀಗೆ ಹೇಳಬಹುದು: ದೇವರು ಸರ್ವತ್ರ ಇದ್ದಾನೆ ಎಂಬುದನ್ನು ತೋರಿಸಲು ದೇವರು ತಾಯಿ'ಯನ್ನು ಸೃಷ್ಟಿಸಿದ'. ಈ ಪುಸ್ತಕದಲ್ಲಿ ಕೆಲ ಅಪರೂಪದ ಸಂಗತಿಗಳು ದಾಖಲಾಗಿವೆ. ಇವುಗಳ ಬಗ್ಗೆ ಬರೆಯುವುದು ನನಗೆ ಪ್ರಸ್ತುತವೆಂದು ತೋರುತ್ತದೆ. ಒಂದು ವೇಳೆ ಬರೆಯದೇ ಇದ್ದರೆ ಮುಂದಿನ ಪೀಳಿಗೆಯವರಿಗೆ ಇಂಥ ಆದರ್ಶ ಸಾಧ್ವಿಮಣಿಗಳು ಇದ್ದರು ಎಂಬುದು ತಿಳಿಯದೇ ಹೋಗಬಹುದು. ಕೆಲವು ಮಹತ್ವದ ಅಂಶಗಳನ್ನಿಲ್ಲಿ ಸಂಕ್ಷಿಪ್ತವಾಗಿ ನಿರೂಪಿಸುವೆ.

ಪಂಚಮುಖಿ ಮನೆತನದ ಬಗ್ಗೆ : ಕಾಶಿಯಲ್ಲಿಯ ಜೋಶಿ ಎಂಬ ಉಪನಾಮದಿಂದ ಖ್ಯಾತವಾದ ಪಂಡಿತ ಮನೆತನವೊಂದು ಹಿಂದೆ ವಿಜಯನಗರದ ಉನ್ನತಿಯ ಕಾಲದಲ್ಲಿ ದಕ್ಷಿಣಕ್ಕೆ ವಲಸೆ ಬಂತು. ಮಂತ್ರಾಲಯದ ಸಮೀಪದಲ್ಲಿ ಇರುವ ಗಾಣಧಾಳ ಗ್ರಾಮದ ಪಂಚಮುಖಿ ಪ್ರಾಣದೇವರ ಉಪಾಸನೆಯಲ್ಲಿ ತೊಡಗಿದ್ದರಿಂದ ಈ ಮನೆತನಕ್ಕೆ ಪಂಚಮುಖಿ' ಎಂಬ ಹೆಸರು ಬಂತು. ಪೇಶ್ವೆಯರ ಕಾಲದಲ್ಲಿ ಈ ಮನೆತನದ ಹಿರಿಯರಾದ ವೇಂಕಟಾದ್ರಿ ಆಚಾರ್ಯರು ತಮ್ಮ ವೈದ್ಯಕೀಯ ಪರಿಣತಿ ಹಾಗೂ ಶಾಸ್ತ್ರ ಪಾಂಡಿತ್ಯದಿಂದ ಪೇಶ್ವೆಯರಿಗೆ ನಿಕಟವರ್ತಿಗಳಾಗಿದ್ದರು. ಪೇಶ್ವೆಯರಿಂದ ಹಾಗೂ ಮಂತ್ರಾಲಯದ ಶ್ರೀ ಮಠದಿಂದ ಇವರಿಗೆ ಹಗಲು ದೀವಟಿಗೆ, ಮೇಣೆ ಇತ್ಯಾದಿ ಮರ್ಯಾದೆಗಳು ಲಭಿಸಿದ್ದವು. ಅಲ್ಲದೆ ಕೆಲವು ಗ್ರಾಮಗಳು ಇನಾಮಾಗಿ ದೊರೆತಾಗ ಇವರು ಬದಾಮಿಯ ಹತ್ತಿರದ ಮಲಪ್ರಭಾ ತೀರದ ಆಚಾರಕೊಪ್ಪ ಗ್ರಾಮಕ್ಕೆ ಬಂದು ನೆಲಸಿದರು. ವಿದ್ಯಾರತ್ನ ಆರ್.ಎಸ್. ಪಂಚಮುಖಿತವರ ತಂದೆ ಸ್ವಾಮಿರಾಯಾಚಾರ್ಯರು ಪಂಡಿತರು ಹಾಗೂ ವೈದಿಕರು. ಇವರ ಸಂಬಂಧಿಕರಾದ ಕಟ್ಟಿ ಶ್ರೀನಿವಾಸಾಚಾರ್ಯರು ಬಾಗಿಲುಕೋಟೆಯ ಪ್ರಸಿದ್ಧ ವಕೀಲರು. ಸ್ವಾಮಿರಾಯಾಚಾರ್ಯರ ಮಗ ರಾಘವೇಂದಾಚಾರ್ಯ (ವಿದ್ಯಾರತ್ನರು) ಬಹಳ ಬುದ್ಧಿವಂತರು. ಅವರಿಗೆ ಉತ್ತಮ ಶಿಕ್ಷಣ ನೀಡಲು ಹಳ್ಳಿಯನ್ನು ಬಿಟ್ಟು ಬಾಗಿಲುಕೋಟೆಯಲ್ಲಿ ಮನೆಯನ್ನು ಮಾಡಲು ಸ್ವಾಮಿರಾಯಾಚಾರ್ಯರು ಯೋಚಿಸುತ್ತಿದ್ದರು. ಆಗ ಶ್ರೀನಿವಾಸಾಚಾರ್ಯರು ಇವರನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಕಲಿಸಲು ಉತ್ಸುಕರಾಗಿದ್ದರು. ಬುದ್ಧಿವಂತ ಹುಡುಗ ತಮ್ಮ ಮನೆಯಲ್ಲಿ ಬೆಳೆದರೆ ತಮ್ಮ ಮಕ್ಕಳಿಗೂ ಅದರಿಂದ ಲಾಭವಾಗುವುದೆಂದು ಬಗೆದಿದ್ದರು. ಅಷ್ಟೇ ಅಲ್ಲ ಅವರನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಳ್ಳುವ ವಿಚಾರವನ್ನೂ ಮಾಡಿದ್ದರು. ಅವರ ಮಗಳಿಗೆ ಅಕ್ಷರಾಭ್ಯಾಸ ಹೇಳಿಕೊಡುವ ಗುರು ರಾಘವೇಂದಾಚಾರ್ಯರೇ ಆದದ್ದು ಯೋಗಾಯೋಗ ಎಂದೇ ಹೇಳಬೇಕು. ಮುಂದೆ ಇವರೇ ಧಾರವಾಡ ಸೇರಿ ವಿಕ್ಟೋರಿಯಾ (ನಂತರದ ವಿದ್ಯಾರಣ್ಯ) ಶಾಲೆಯಿಂದ ಮೆಟ್ರಿಕ್ ಪರೀಕ್ಷೆ ಪಾಸದಾಗ ತಮ್ಮ ಹನ್ನೊಂದು ವರ್ಷದ ಮಗಳನ್ನು (ಪದ್ಮಾವತಿಯನ್ನು) ಧಾರೆ ಎರೆದು ಕೊಟ್ಟರು. ರಾಘವೇಂದ್ರಾಚಾರ್ಯರು ಮುಂದೆ ಪುಣೆಯ ಡೆಕ್ಕೆನ್ ಕಾಲೇಜು ಸೇರಿ ಪದವೀಧರರಾದರು. ಸ್ವಾತಂತ್ರ್ಯಪ್ರೇಮಿಗಳಾದ ಅವರು 1942ರಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು ಕಾಲೇಜು ಬಿಟ್ಟು ಕೆಲಕಾಲ ದೇಶಸೇವೆಯಲ್ಲೂ ತೊಡಗಿದ್ದರು.

ಕಮಲಾಬಾಯಿಯವರ ಜೀವನ : * ಕಮಲಾಬಾಯಿಯವರ ವಿವಾಹಪೂರ್ವದ ಹೆಸರು ಪದ್ಮಾವತಿ. ರಾಘವೇಂದ್ರಾಚಾರ್ಯರು ಅವರ ಮನೆಯಲ್ಲಿ ಪಾಠಹೇಳಿದ ಶಿಕ್ಷರಾಗಿದ್ದರು. ಪದ್ಮಾವತಿ ಅವರಿಂದ ಶಿಕ್ಷೆ ಕೂಡ ಪಡೆದಿದ್ದರು. ಆದರೆ ಅವರು ಎಳಮೆಯಲ್ಲಿ ಮೌನಗೌರಿವ್ರತ ಮಾಡಿದಾಗ ತನಗೆ ಅಕ್ಷರಾಭ್ಯಾಸ ಕಲಿಸಿದ್ದ, ತನ್ನಲ್ಲಿದ್ದ ಬೇಸರವೆಂಬುದನ್ನು ಕಳೆದು ವಿದ್ಯೆಯಲ್ಲಿ ಆಸಕ್ತಿಯನ್ನು ಕುದುರಿಸಿದ ರಾಘವೇಂದಾಚಾರ್ಯರೇ ತನ್ನ ಪತಿಯಾಗಬೇಕೆಂದು ಅವರು ಗೌರಿಯಲ್ಲಿ ಬೇಡಿಕೊಂಡಿದ್ದರು ಎಂಬ ಸಂಗತಿ ಮಕ್ಕಳಿಗೆ ನಂತರ ತಿಳಿಸಿದ್ದರು. ಅವರ ಪ್ರಾರ್ಥನೆ ಫಲಿಸಲೆಂದು ಗೌರಿ ಹರಸಿದ್ದಳಂತೆ. ಪದ್ಮಾವತಿಗೆ ಗೌರಿಯ ಪ್ರಸಾದದ ಮುನ್ಸೂಚನೆಯಾಗಿದ್ದರೂ ಮನೆಯಲ್ಲಿ ಬೇರೆ ವರಗಳ ನಿಷ್ಕರ್ಷೆ ನಡೆದಾಗ ಕಾತರಗೊಂಡು ಮತ್ತೆ ಪ್ರಾರ್ಥಿಸಿದ್ದರಂತೆ. ವಿಚಾರಗಳ ತಾಕಲಾಟದಲ್ಲಿದ್ದಾಗ ರುಕ್ಮಿಣಿದೇವಿಯ ಕತೆ ನೆನಪಾಗಿತ್ತು. ಅಣ್ಣ ರುಕ್ಮನು ತಂಗಿಯನ್ನು ಶಿಶುಪಾಲನಿಗೆ ಕೊಡಬೇಕೆಂದು ನಿಶ್ಚಯಿಸಿದಾಗ ರುಕ್ಮಿಣಿ ದ್ವಾರಕಾದಲ್ಲಿದ್ದ ಕೃಷ್ಣನಿಗೆ ಓರ್ವ ಬ್ರಾಹ್ಮಣನ ಮೂಲಕ ಪತ್ರಕಳಿಸಿದ್ದು ನೆನಪಾಗಿ ಇವರೂ ರಾಘವೇಂದ್ರಾಚಾರ್ಯರಿಗೆ ಪತ್ರಬರೆಯಲು ಮನಸ್ಸು ಮಾಡಿದ್ದರಂತೆ. ಮುಂದೆ ಆ ಪ್ರಸಂಗ ಬರಲಿಲ್ಲ. ಮನೆಯಲ್ಲೆ ಜಾತಕ ಪರಿಶೀಲನೆ ನಡೆದು ಉತ್ತಮ ಗುಣ ಕೂಡಿಬಂದಾಗ ನಿಶ್ಚಿತಾರ್ಥವಾಗಿತ್ತು. ವಿವಾಹ ಬದಾಮಿಯಲ್ಲಿ ವಿಜೃಂಭಣೆಯಿಂದ ನಡೆದಿತ್ತು. ಪದ್ಮಾವತಿ ಕಮಲಾಬಾಯಿ ಆದರು. ಶ್ರೀರಾಯರ ಮಠದ ಶ್ರೀಶ್ರೀ ಸುಶೀಲೇಂದ್ರತೀರ್ಥರು ಹಾಗೂ ಉತ್ತರಾದಿ ಮಠದ ಶ್ರೀಶ್ರೀ ಸತ್ಯಜ್ಞಾನತೀರ್ಥರು ಫಲಮಂತ್ರಾಕ್ಷತೆ ಕಳಿಸಿ ವಧೂವರರನ್ನು ಹರಸಿದ್ದರು.

* ಮದುವೆ ಆದೊಡನೆ ರಾಘವೇಂದ್ರಾಚಾರ್ಯರು ಕಾಲೇಜು ಶಿಕ್ಷಣಕ್ಕಾಗಿ ಪುಣೆಗೆ ತೆರಳಿದರು. ಆಗ ಕಮಲಾಬಾಯಿ ತಂದೆಯ ಮನೆಯಲ್ಲಿದ್ದರು. 1921ರಲ್ಲಿ ಪತಿ ಅಸಹಕಾರ ಅಂದೋಲನದಲ್ಲಿ ತೊಡಗಿದಾಗ ಏಳಿರವ್ವ ಏಳಿರಿ..' ಎಂಬ ರಾಷ್ಟ್ರೀಯ ಭಾವನೆ ಕೆರಳಿಸುವ ಹಾಡು ಬರೆದಿದ್ದರು. ಪತಿಯ ನಿಂದೆಯನ್ನು, ನಿಂದೆ ಮಾಡಿದವರನ್ನು ಅವರು ಸಹಿಸುತ್ತಿರಲಿಲ್ಲ. ಅವರಿಗೆ ಪತಿಯೇ ಪರದೈವವಾಗಿದ್ದರು. ಸದಾ ಪತಿಯ ಶುಶ್ರೂಷೆಯಲ್ಲಿ ತೊಡಗಿರುತ್ತಿದ್ದ ನಿಜ ಪತಿವ್ರತೆಯಾಗಿದ್ದರು. ಪತಿಗೆ ದೇಹಾಲಸ್ಯ ಆವರಿಸಿದರೆ ಇವರು ಧನ್ವಂತರಿ ಹಾಡು (ಗೋಪಾಲದಾಸರು ಜಗನ್ನಾಥದಾಸರ ರೋಗ ಪರಿಹಾರಕ್ಕಾಗಿ ರಚಿಸಿದ ಹಾಡು), ವಟಸಾವಿತ್ರಿ ಹಾಡು, ಶ್ರೀವಾದಿರಾಜಸ್ವಾಮಿಗಳು ರಚಿಸಿದ ಜಯಲಕ್ಷ್ಮಿನಾರಾಯಣ ಹಾಡು, ವಿಜಯದಾಸರ ಕವಚ, ಶ್ರೀರಾಘವೇಂದ್ರಸ್ವಾಮಿಗಳ ಮಂತ್ರದ ಜಪ ಮಾಡುತ್ತಿದ್ದರು.

* ಕಮಲಾಬಾಯಿಯವರು ಆಚರಿಸಿದ ವ್ರತಗಳಿಗೆ ಲೆಕ್ಕವಿಲ್ಲ. ಅವರ ದಿನಚರಿ: ಬೆಳಿಗ್ಗೆ 4ರಿಂದ 4.30ರ ಮಧ್ಯದಲ್ಲಿ ಉದಯ. ದೇವರ ಮುಂದೆ, ತುಲಸೀಕಟ್ಟೆಯ ಮುಂದೆ ರಂಗವಲ್ಲಿ ಹಾಕುವುದು. ಪತಿದೇವರು ಪಾಠಹೇಳುತ್ತಿರುವ ಸ್ಥಳಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಸ್ವಲ್ಪಹೊತ್ತು ಪಾಠಶ್ರವಣ ಮಾಡುವದು. ಯಜಮಾನರ ಊಟವಾದಮೇಲೆ ಅದೇ ಎಲೆಯಲ್ಲಿ ತಮಗಾಗಿ ಇಟ್ಟ ಶೇಷ ಅನ್ನವನ್ನು ಭುಜಿಸುವ ವ್ರತ ಪಾಲನೆ.

* ಪತಿ ಎಂಎ ಪದವೀಧರರಾಗಿ ದೀಪಕ ಸಂಸ್ಕೃತ ಪಾರಿತೋಷಕ ಪಡೆದು ನೀಲಗಿರಿಯಲ್ಲಿ ಎಪಿಗ್ರಾಫಿಸ್ಟ್ ಆಗಿ ಕೆಲಸಕ್ಕೆ ಸೇರಿದಾಗ ಅವರ ಪಗಾರ 70 ರೂಪಾಯಿ. ಅದರಲ್ಲಿ 35 ತಮ್ಮ ತಂದೆಗೆ ಕಳಿಸಿದಾಗ ಉಳಿದ ಹಣದಲ್ಲೇ ಚೊಕ್ಕ ಸಂಸಾರ ಸಾಗಿಸಿದ ಸಾಧ್ವಿ ಕಮಲಾಬಾಯಿ. ನಂತರ ಮದ್ರಾಸಿಗೆ ಸುಪರಿಂಟೆಂಡೆಟ್ ಆಫ್ ಎಪಿಗ್ರಾಫಿ ಆದಾಗ ಸಂಬಳ 120 ಆಗಿತ್ತು. ತಂದೆಗೆ, ಅಣ್ಣಂದಿರಿಗೆ ಹಣ ಕಳಿಸಿದ ಮೇಲೆ, ಉಳಿಯುವ 40-50 ರೂಪಾಯಿಯಲ್ಲೆ ಮನೆ ನಡೆಸಿದರು.

* ಭಗವದ್ಗೀತೆಯ ಬರಿ ಶ್ರವಣಮಾತ್ರವಲ್ಲ, ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದರು. ಚಂಚಲ ಮನವನ್ನು ಹೇಗೆ ನಿಗ್ರಹಿಸಬೇಕು ಎಂದು ಅರ್ಜುನ ಕೃಷ್ಣನಿಗೆ ಪ್ರಶ್ನಿಸಿದ್ದ. ಕೃಷ್ಣನ ಉತ್ತರ ಸರಳವಾಗುತ್ತು. ಚಂಚಲ ಮನವನ್ನು ನಿಗ್ರಹಿಸಲು ಎರಡು ದಾರಿಗಳು. ಒಂದು ಅಭ್ಯಾಸ, ಇನ್ನೊಂದು ವೈರಾಗ್ರ್ಯ. (ವೈರಾಗ್ಯ= ವಿಗತಃ ರಾಗಃ ಯಸ್ಯ ಸಃ ತಸ್ಯ ಭಾವಃ). ವಿ=ಅಂದರೆ ಪರಮಾತ್ಮನಲ್ಲಿ, ರಾಗ= ಸ್ನೇಹ ಇಟ್ಟುಕೊಳ್ಳುವುದೇ ವೈರಾಗ್ಯ ಎನ್ನುತ್ತಿದ್ದರು.ವಿದ್ಯಾರತ್ನರು ಮಕ್ಕಳೊಂದಿಗೆ ಅಧ್ಯಾತ್ಮ ಚರ್ಚಿಸುವಾಗ ಮಾತೋಶ್ರೀಯವರೂ ಭಾಗವಹಿಸಿತ್ತಿದ್ದರು. ವೈರಾಗ್ಯ ಮೊದಲೋ ಅಥವಾ ಪರಮಾತ್ಮ ವಿಷಯದ ಜ್ಞಾನವು ಮೊದಲೋ ಎಂಬ ಚರ್ಚೆ. ಬೀಜ ಮೊದಲೋ ವೃಕ್ಷ ಮೊದಲೋ (ಬೀಜವೃಕ್ಷನ್ಯಾಯ) ಎಂಬಂತೆ ಇರುವ ಸಮಸ್ಯೆ. ಆಗ ಮಾತೆಯವರು ಎಲ್ಲದಕ್ಕೂ ವೈರಾಗ್ಯ ಅಂದರೆ ಅನಾಸಕ್ತಿಯೇ ಮೂಲ ಕಾರಣ.' ಎನ್ನುತ್ತ ಜೀವನದುದ್ದಕ್ಕೂ ಜ್ಞಾನ ಎಂದವರು ಶಠಂಪಠದ ಪಂಡಿತರಾಗುತ್ತಾರೆ ಹೊರತು ವೈರಾಗ್ಯದ ಹಾದಿ ತುಳಿಯುವುದಿಲ್ಲ. ಜ್ಞಾನ ಬ್ಯಾಡ ಅನ್ನೋದಿಲ್ಲ, ಆದರೆ ಮೊದಲು ವ್ರತನಿಯಮ ಮಾಡಿ ದೇಹ ಸವೆಸಿ ವೈರಾಗ್ಯ ಪಡೆಯಬೇಕು.' ಎನ್ನುತ್ತಿದ್ದರು.

* ಕಮಲಾಬಾಯಿ ಕೈಕೊಳ್ಳದ ವ್ರತವೇ ಇರಲಿಲ್ಲ. ಚಿಕ್ಕವರಿರುವಾಗ ಮೌನಗೌರಿ ವಟಸಾವಿತ್ರೀವ್ರತ. ದೊಡ್ದವರಾದ ಮೇಲೆ ಚಾತುರ್ಮಾಸ್ಯ. ಏಕೇಡಿ ಮೂಕೂಟ, ದಿಕ್ ಸಾಧಿಸುವುದು. ಬಲಗೈಯಲ್ಲಿ ನೀರು ಕುಡಿಯುವುದು, ಚಾತುರ್ಮಾಸ್ಯ ದಾನ, ಅಧಿಕಮಾಸದಲ್ಲಿ ಅಪೂಪು ದಾನ. ನಿತ್ಯ ಅಖಂಡವ್ರತ, ಅಧಿಕಮಾಸದಲ್ಲಿ ಧಾರಣಿ-ಪಾರಣಿ, ಅಧಿಕಮಾಸದಲ್ಲಿ ನಿತ್ಯದಾನ, ದ್ವಾದಶೀದಿನ ಗುಪ್ತದಾನ, ವಿಷ್ಣುಪಂಚಕವ್ರತ, ಋಷಿಪಂಚಮಿವ್ರತ, ಲಕ್ಷಬತ್ತಿ, ಲಕ್ಷಹೂಬತ್ತಿ, ಲಕ್ಷ ರಂಗೋಲಿ, ಲಕ್ಷ ನಮಸ್ಕಾರ, ಲಕ್ಷ ಅರಿಷಿಣ ಕುಂಕುಮ, ಲಕ್ಷ ಉಡಿ ತುಂಬುವುದು ಇತ್ಯಾದಿ. (ಏಕೇಡಿ ಮೂಕೂಟವೆಂದರೆ ಊಟಕ್ಕೆ ಕೂಡುವ ಮೊದಲು ಪ್ರಾರಂಭದಲ್ಲಿ ಬಡಿಸಿಕೊಂಡದ್ದನ್ನಷ್ಟೇ ಉಂಡು ಮತ್ತೆ ಬಡಿಸಿಕೊಳ್ಳದೇ ಮಾತನಾಡದೇ ಊಟಮಾಡುವುದು. ದಿಕ್‌ಸಾಧಿಸುವ ವ್ರತವೆಂದರೆ ಒಂದೊಂದು ತಿಂಗಳು ಒಂದೊಂದು ದಿಕ್ಕಿಗೆ ಅಭಿಮುಖವಾಗು ಕುಳಿತು ಊಟಮಾಡುವದು. [ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಮುಖಮಾಡಿದಾಗ ಆಯಾ ದಿಕ್ಕಿನ ದೇವತೆಗಳನ್ನು ಸ್ಮರಿಸುವುದು, ಸಾತ್ವಿಕ ಆಹಾರ ಸೇವಿಸುವುದು]. ನಿತ್ಯ ಅಖಂಡವ್ರತವೆಂದರೆ ಅಧಿಕ ಮಾಸದಲ್ಲಿ ಒಂದುಹೊತ್ತು ಊಟ, ಆಗ ಕುಡಿದಷ್ಟೇ ನೀರು, ಮರುದಿನ ಊಟದವರೆಗೆ ಏನೂ ಸೇವಿಸುವಂತಿಲ್ಲ.

* ಅಧಿಕ ಮಾಸದ ಇನ್ನೊಂದು ವ್ರತ ಧಾರಣಿ-ಪಾರಣಿ. ಒಂದು ದಿನ ಉಂಡ ಊಟ ಕುಡಿದ ನೀರು, ಮರುದಿನ ನಿಶ್ಚಕ್ರ ಉಪವಾಸ. [ನೀರು ಕೂಡ ಸೇವಿಸುವಂತಿಲ್ಲ]. ಹೀಗೆ ತಿಂಗಳಲ್ಲಿ ಹದಿನೈದು ದಿನ ಮಾತ್ರ ಒಪ್ಪತ್ತು ಊಟವಾಗುತ್ತದೆ. ಇದು ಕಠೋರ ವ್ರತ. ವಿಷ್ಣುಪಂಚಕ ವ್ರತದಲ್ಲಿ ತಿಂಗಳಿಗೆ ಐದು ಉಪವಾಸಗಳಿರುತ್ತವೆ. ಹುಣ್ಣಿವೆ, ಅಮಾವಾಸ್ಯೆ, ಎರಡು ಏಕಾದಶಿ, ಶ್ರವಣ ನಕ್ಷತ್ರ ಬಂದಾಗ ವಿಷ್ಣುಪಂಚಕ ಉಪವಾಸ. ಋಷಿಪಂಚಮಿಯ ವ್ರತವೆಂದರೆ ಭಾದ್ರಪದ ಶುಕ್ಲ ಪಂಚಮಿಯ ದಿನ ನದೀಸ್ನಾನ ಮಾಡಿ ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಶಿಷ್ಠ ಋಷಿಗಳನ್ನು, ಅರುಂಧತಿಯನ್ನು, ನದೀತೀರದಿಂದ ತಂದ ಕಲ್ಲುಗಳಲ್ಲಿ ಆವಾಹನೆ ಮಾಡಿ ಭಕ್ತಿಯಿಂದ ಪೂಜೆ ಮಾಡುವುದು. ಈ ರೀತಿ ಎಂಟು ವರ್ಷ ಪೂಜೆ ಮಾಡಿದ ಮೇಲೆ ಉದ್ಯಾಪನೆ ಮಾಡುವುದು. ಚಾಂದ್ರಾಯಣ ಮತ್ತು ಭೀಷ್ಮಪಂಚಕ ವ್ರತಗಳನ್ನು ಮಾಡುವ ಹೆಬ್ಬಯಕೆ ಅವರಿಗಿತ್ತು, ವೃದ್ಧಾಪ್ಯದಿಂದಾಗಿ ಮಾಡಲು ಸಾಧ್ಯವಾಗಲಿಲ್ಲ.

* 1946ರಲ್ಲಿ ಕಾಶಿಯ ಸರ್ವಧರ್ಮ ಸಮ್ಮೇಲನದಲ್ಲಿ ರಾಘವೇಂದ್ರಾಚಾರ್ಯ ಪಂಚಮುಖಿಯವರಿಗೆ ವಿದ್ಯಾರತ್ನ'' ಎಂಬ ಉಪಾಧಿಯನ್ನು ಪ್ರದಾನಮಾಡಲಾಗಿತ್ತು. ಆಗ ಮನೆಯಲ್ಲಿ ಮಗಳ ಬಾಣಂತನ ನಡೆದಿತ್ತು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಕಮಲಾಬಾಯಿಯವರು ಯಾತ್ರೆಗೆ ನಡೆದ ವರ್ಣನೆ ಇದೆ. ಅನನ್ಯಾಶ್ಚಿಂತಯಂತೋ ಮಾಂ' ನೆನಪಾಗಿತ್ತು ಅವರಿಗೆ. ದೇವರೇ ಯೋಗಕ್ಷೇಮ ವಹಿಸಲು ಸಿದ್ಧನಿದ್ದಾಗ ನಮಗೇಕೆ ಈ ಮನೆಯ ಚಿಂತೆ' ಎಂದು ಮನದಲ್ಲಿ ಅಂದುಕೊಂಡಿರಬೇಕು. (ಅಲ್ಲಿದೆ ನಮ್ಮ ಮನೆ, ಇಲ್ಲಿರೋದು ಸುಮ್ಮನೆ') ಈ ದಂಪತಿಗಳು ನಿಶ್ಚಿಂತರಾಗಿ - ದೇವರಲ್ಲಿ ಅನನ್ಯ ಭಕ್ತಿಯಿಟ್ಟು, ಅವನ ಮೇಲೆ ಭಾರಹಾಕಿ, ಯಾತ್ರೆ ಕೈಕೊಂಡು ಬಂದರು.

* 1959ರಲ್ಲಿ ವಿದ್ಯಾರತ್ನರಿಗೆ 61 ವಯಸ್ಸು, ಮಾತೋಶ್ರೀಯವರಿಗೆ 54. ಉತ್ತರ ಭಾರತದಲ್ಲಿಯ ಸಕಲ ತೀರ್ಥಗಳ ಯಾತ್ರೆಮಾಡಲು ಸರ್ಕ್ಯುಲರ್ ರೇಲ್ವೆ ಟಿಕೆಟ್ ಪಡೆದಿದ್ದರು. ಮೊದಲು ಮಂತ್ರಾಲಯಕ್ಕೆ ಹೋಗಿ ಅಲ್ಲಿ ಗುರುಸಾರ್ವಭೌಮರ ಸೇವೆ ಮಾಡಿ ಸುಯಮೀಂದ್ರತೀರ್ಥರಿಂದ ಮಂತ್ರಾಕ್ಷತೆ ಪಡೆದು ಮುಂಬೈ ಮಾರ್ಗವಾಗಿ ಮಥುರಾ ತಲುಪಿದರು. ವೃಂದಾವನದಲ್ಲಿ ಕೃಷ್ಣನ ದರ್ಶನ ಪಡೆದು ದೆಹಲಿಗೆ ಬಂದರು. ಅಲ್ಲಿ ಹಿರಿಯ ಮಗ ವಾದಿರಾಜ ಪಿ.ಎಚ್‌ಡಿ. ಮಾಡುತ್ತಿದ್ದ. ಅವನನ್ನು ಜೊತೆಗೆ ಕರೆದುಕೊಂಡು ಪೇಜಾವರ ಮಠದ ಶ್ರೀಗಳ ಜೊತೆಗೆ ಬದರಿ ಯಾತ್ರೆ ಕೈಕೊಂಡರು. ಜೋಶೀ ಮಠದಿಂದ 20-25 ಮೈಲು ನಡೆದುಕೊಂಡೇ ಆ ಕಾಲದಲ್ಲಿ ಬದರಿ ಯಾತ್ರೆ ಮಾಡಬೇಕಾಗುತ್ತಿತ್ತು. ಕಾಲುನಡಿಗೆಯಲ್ಲಿ ಎಲ್ಲರಿಗಿಂತ ಮೊದಲು ತಲುಪಿದ ಪಂಚಮುಖಿ ದಂಪತಿಗಳನ್ನು ಅಭಿನಂದಿಸಿ ಪೇಜಾವರಶ್ರೀಗಳು, ಪಂಚಮುಖಿ ಪ್ರಾಣದೇವರ ಹೆಸರು ನಿಮ್ಮ ಕುಲಕ್ಕೆ ಇದ್ದುದು ಸಾರ್ಥಕವಾಗಿದೆ.'' ಎಂಬ ಉದ್ಗಾರ ತೆಗೆದಿದ್ದರಂತೆ.

* 1976ರಲ್ಲಿ ಮತ್ತೊಮ್ಮೆ ಬದರಿಯಾತ್ರೆ ಕೈಕೊಂಡಾಗ ತಂದೆಯವರಿಗೆ 78 ವಯಸ್ಸು, ತಾಯಿಯವರಿಗೆ 71. ವೃದ್ಧಾಪ್ಯದಲ್ಲೂ ಅವರ ಉತ್ಸಾಹ ಕಡಿಮೆಯಾಗಿರಲಿಲ್ಲ. ಈ ಸಲ ಅವರ ಜೊತೆಗೆ ಮೂವರೂ ಗಂಡು ಮಕ್ಕಳು, ಐದು ಹೆಣ್ಣುಮಕ್ಕಳಲ್ಲಿ ಇಬ್ಬರು ಬಂದಿದ್ದರು. ಇಬ್ಬರು ಅಳಿಯಂದಿರೂ ಜೊತೆಗಿದ್ದರು. 1981ರಲ್ಲಿ ಡಾ| ಆರ್.ಎಸ್.ಪಂಚಮುಖಿಯವರಿಗೆ ರಾಷ್ಟ್ರಪತಿ ಪ್ರಶಸ್ತಿ ದೊರೆತಾಗ ಕಮಲಾಬಾಯಿಯವರ ಕಾಲಿನಲ್ಲಿ ತ್ರಾಣವಿರಲಿಲ್ಲ. ಆದರೂ ದೆಹಲಿಗೆ ತೆರಳಿದರು, ಮತ್ತೊಮ್ಮೆ ಯಮುನಾಸ್ನಾನಮಾಡಿ ಬಂದರು. ತಾಯಿತಂದೆ ಜಾತಕ ನೋಡಿ ಆರಿಸಿದ ಕನ್ಯೆಯನ್ನು ಎರಡನೆಯ ಮಗ ಪಾರ್ಥಸಾರಥಿಗೆ ಆಯ್ಕೆ ಮಾಡಿದ್ದರು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮಗ ಕನ್ಯೆಯನ್ನು ನೋಡದೆಯೇ ತಂದೆತಾಯಿಯ ಇಚ್ಛೆ ಅನುಸರಿಸಿ ಮದುವೆಯಾದ ವರ್ಣನೆ ಇಲ್ಲಿದೆ. ಇದು ಮಹತ್ವದ್ದು ಏಕೆಂದರೆ ಈ ಶತಮಾನದಲ್ಲಿ ಇಂತಹ ಸಂಪ್ರದಾಯಬದ್ಧ ಕುಟುಂಬಗಳು ಇವೆ ಎಂಬ ದಾಖಲೆ ದೊರೆಯುತ್ತದೆ.

* ಧಾರವಾಡದಲ್ಲಿ ಸ್ವಗೃಹದಲ್ಲಿ ಪತಿಯ ಮುಂದೆ ಮತ್ತೈದೆಯಾಗಿ ಇಹಲೋಕ ತ್ಯಜಿಸುವ ಅವರ ಸಂಕಲ್ಪಕ್ಕೆ ಗೆಲವಾಗಿತ್ತು. ಆಗ ತಂದೆಯವರು ಊರ್ಧ್ವಮೂಲಮಧಃಶಾಖಂ' ಎಂದು ಪುರುಷೋತ್ತಮನಾಮಕ ಶ್ರೀಮದ್ಭಗವದ್ಗೀತೆಯ ಅಧ್ಯಾಯವನ್ನು ಪಾರಾಯಣ ಮಾಡಲು ಪ್ರಾರಂಭಿಸಿದ್ದರು. ಕಿರಿಯ ಮಗ ಆನಂದತೀರ್ಥನ ಭುಜದ ಮೇಲೆ ತಲೆಯೊರಗಿಸಿ ಕೊನೆಯ ಸಲ ದೇವರ ನಾಮ ಜಪಿಸಿದಾಗ, ಅವರ ಬಾಯಲ್ಲಿ ಗಂಗಾಜಲ ಹಾಕಲಾಯಿತು. ಭಾಗೀರಥೀ ಜಲವನ್ನು ಪಾನ ಮಾಡಿ ಅಧಿಕ ದೇಹ ಶುದ್ಧಿಯನ್ನು ಪಡೆದ ಪೂಜ್ಯ ತಾಯಿಯವರು ಎಲ್ಲ ಪ್ರಾಣಗಳನ್ನು(ಪಂಚ) ಉಪಸಂಹರಿಸಿ ನಿರಂತರ ಪರಮಾತ್ಮನ ಧ್ಯಾನಪರವಶರಾದರು. ಆನಂದತೀರ್ಥನು ತಮ್ಮ ತಾಯಿಯ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ತನಗೆ ಜನ್ಮವಿತ್ತ ತಾಯಿಯ ಪ್ರಾಣಪಕ್ಷಿ ಪರಮಾತ್ಮನೆಡೆಗೆ ಅವರ ಬಲಗಣ್ಣಿನಿಂದ ಹಾರಿಹೋಗುತ್ತಿರುವುದನ್ನು ಕಂಡು ಸ್ತಬ್ಧನಾಗಿ ಕುಳಿತಿದ್ದ.''

ಸಂಗೀತಸಿರಿ ಎಚ್.ಯೋಗಾನರಸಿಂಹಂ- ಜನ್ಮಶತಾಬ್ದಿ ಸ್ಮರಣೆ'' ಎಂಬ ಪುಸ್ತಕವನ್ನು ನಾನು ಫಿಲೆಡೆಲ್ಫಿಯಾದಲ್ಲಿ ಎಚ್.ವಾಯ್.ರಾಜಗೋಪಾಲರ ಅತಿಥಿಯಾಗಿದ್ದಾಗ ಅವರ ಮನೆಯಲ್ಲಿ ಓದಿದ್ದೆ. ಯೋಗಾನರಸಿಹಂ ಅವರಿಗೆ ಎಂಟು ಮಕ್ಕಳು. ಹಿರಿಯ ಮಗ ಎಚ್.ವಾಯ್. ಶಾರದಾಪ್ರಸಾದ. ಮಕ್ಕಳೆಲ್ಲ ತಂದೆಯ ಬಗ್ಗೆ ಅಪರೂಪದ ಪುಸ್ತಕ ಬರೆದಿದ್ದಾರೆ. ಕನ್ನಡದ ಅಪರೂಪದ ಪ್ರಕಾಂಡ ವಿದ್ವಾಂಸರಾದ ವಿದ್ಯಾರತ್ನ ಆರ್.ಎಸ್.ಪಂಚಮುಖಿ ಹಾಗೂ ಕಮಲಾಬಾಯಿಯವರಿಗೂ ಎಂಟು ಮಕ್ಕಳು. ಎಲ್ಲರೂ ವಿದ್ವಾಂಸರು. ತಮ್ಮ ತಂದೆಯವರ ಬಗ್ಗೆ ಕನ್ನಡದ ಸಿರಿ ಸಂಶೋಧನಾಚಾರ್ಯ ವಿದ್ಯಾರತ್ನ ಆರ್.ಎಸ್.ಪಂಚಮುಖಿ-ಜನ್ಮಶತಾಬ್ದಿಯ ಸ್ಮರಣೆ' ಎಂಬ ಒಂದು ಗ್ರಂಥ ರಚಿಸಿದರೆ ಅದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X