• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-2

By Staff
|

Swamy Jagadatmanandaಬದುಕಿಗೊಂದು ಬೆಳಕು ಬೇಕು. ಆದರೆ ಆ ಬೆಳಕು ಬರುವುದಾದರೂ ಎಲ್ಲಿಂದ? ಬಾಹ್ಯದಿಂದಲೇ ಅಥವಾ ಆಂತರ್ಯದಿಂದಲೇ? ಆಂತರ್ಯದಿಂದಲೇ ಎನ್ನುವುದಾದರೆ ಅದನ್ನು ಬಡಿದೆಬ್ಬಿಸುವ ಬಗೆಯಾದರೂ ಎಂತಹುದು? ಪ್ರಗತಿಪಥದಲ್ಲಿ ಸಾಗಬೇಕಾದ ಪ್ರತಿ ವಿದ್ಯಾರ್ಥಿಯೂ ಓದಲೇಬೇಕಾದ ಪುಸ್ತಕವಿದು.

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ

ಅಧ್ಯಾಯ ಎರಡು : ನಿಮ್ಮಲ್ಲಿದೆ ಅಪಾರ ಶಕ್ತಿ

ಮನುಷ್ಯನಾಗಿ ವಿಜೃಂಭಿಸುವ ಆತ್ಮದ ಪರಮ ಮಹಿಮೆಯ ಯಥಾವತ್ ಗುಣಗಾನ ಮಾಡಲು ವಿಜ್ಞಾನದ, ಧರ್ಮದ ಅಥವಾ ಇನ್ನಿತರ ಯಾವುದೇ ಗ್ರಂಥಗಳಿಗೆ ಈ ತನಕ ಸಾಧ್ಯವಾಗಿಲ್ಲ. ಭೂಮಿಯ ಮೇಲೆ ಇದ್ದ, ಇರುವ ಹಾಗೂ ಇರಬಲ್ಲ ಸರ್ವಶಕ್ತ, ಸರ್ವವೈಭವೋಪೇತ ದೇವರೆಂದರೆ ಮನುಷ್ಯ ಮಾತ್ರನೇ."" - ಸ್ವಾಮೀ ವೀವೇಕಾನಂದ

ನಮ್ಮ ಶಕ್ತಿಸಾಮರ್ಥ್ಯದ ನೆಲೆಯಾಗಿ, ಪರಿಪೂರ್ಣತೆಯ ಗಣಿಯಾಗಿರುವ ಸಂಪತ್ತೆಷ್ಟೋ ಮನದಂತರಾಳದಲ್ಲಿ ಇಂದಿಗೂ ಶೋಧಿಸಲ್ಪಡದೆ ಜಡವಾಗಿಯೇ ಬಿದ್ದಿದೆ."" - ಡಾ| ಎಲೆಕ್ಸಿಸ್ ಕೆರೆಲ್

ಬಿಂದುವಿನಲ್ಲಿ ಸಿಂಧು' ಎಂಬ ಮಾತು ಪ್ರತಿ ವ್ಯಕ್ತಿಗೂ ಅನ್ವಯಿಸುತ್ತದೆ. ನಮ್ಮ ದೇಹದ ರಚನೆಯನ್ನು ನೋಡಿದರೆ ಈ ಮಾತು ಮನದಟ್ಟಾಗುತ್ತದೆ. ನಮ್ಮ ದೇಹದ ಒಂದು ಬಿಂದು ರಕ್ತದಲ್ಲಿ 5 ಮಿಲಿಯ ಕೆಂಪು ರಕ್ತದ ಕಣಗಳಿವೆ, 10 ಸಾವಿರ ಬಿಳಿಯ ರಕ್ತದ ಕಣಗಳಿವೆ, 5 ಲಕ್ಷ ಪೆಟ್‌ಲೆಟ್‌ಗಳೂ ಇವೆ. ಮನುಷ್ಯನ ಆಂತರ್ಯದಲ್ಲಿ ಅಪಾರ ಶಕ್ತಿಯಿದೆ.' ಕಳೆದ ಐವತ್ತು ವರ್ಷಗಳಲ್ಲಿ ನೆಡೆದ ವೈಜ್ಞಾನಿಕ ಪ್ರಗತಿಯನ್ನು ಗಮನಿಸಿದರೆ ಅದು ಯಾರನ್ನಾದರೂ ದಂಗುಬಡಿಸುವಂತಿದೆ. ಮನುಷ್ಯನ ಬಾಹ್ಯ ಪ್ರಪಂಚದಲ್ಲಿ ಪ್ರಗತಿ ಆದಂತೆ ಅಂತರಂಗದಲ್ಲೂ ಪ್ರಗತಿ ಆಗಬೇಕು.

ಮನುಷ್ಯನು ಎಷ್ಟೇ ಪ್ರಗತಿಯನ್ನು ಹೊರಗೆ ಸಾಧಿಸಿದರೂ ತನ್ನ ಒಳಗಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವುಗಳನ್ನು ಗೆಲ್ಲದಿದ್ದರೆ ಅನಾಹುತವಾಗುತ್ತದೆ. ನೋಬೆಲ್ ಬಹುಮಾನ ವಿಜೇತ, ಬೆಲ್ಜಿಯಮ್‌ನ ಲೇಖಕ, ಮೌರಿಸ್ ಮೆಟರ್‌ಲಿಂಕ್, ತನ್ನ ದಿ ಗ್ರೇಟ್ ಬಿಯಾಂಡ್' ಗ್ರಂಥದ ಪೀಠಿಕೆಯಲ್ಲಿ ಹೇಳುತ್ತಾನೆ, ಅತಿ ದೊಡ್ಡ ಇಂಜಿನಿಯರ್, ಗಣಿತಜ್ಞ, ವೈದ್ಯ ಅಥವಾ ಆಕಾಶವಿಜ್ಞಾನಿ ಕೂಡ ಶೋಷಕನೂ, ಮಹಾಮೂರ್ಖನೂ ಆಗಬಲ್ಲ ಎಂಬುದನ್ನು ಜನ ಗಮನಿಸುತ್ತಿಲ್ಲ ಅಥವಾ ಮರೆಯುತ್ತಾರೆ.'" ಎಂದು. ಜಗತ್ತಿನ ಸುಮಾರು 21 ನಾಗರಿಕತೆಗಳಲ್ಲಿ 19 ನಾಗರಿಕತೆಗಳು ಅವಸಾನ ಹೊಂದಿದ್ದು ಬಾಹ್ಯ ಆಕ್ರಮಣಗಳಿಂದಲ್ಲ, ಆಂತರಿಕ ನೈತಿಕ ಕುಸಿತದಿಂದ.'" ಎಂದು ಪ್ರಸಿದ್ಧ ಇತಿಹಾಸಜ್ಞ ಅರ್ನಾಲ್ಡ್ ಟೊಯನ್ಬೀ ಹೇಳಿದ್ದಾನೆ.

ಜೀವಶಾಸ್ತ್ರದಲ್ಲಿ ತನ್ನ ಸಂಶೋಧನೆಗಾಗಿ ನೊಬೆಲ್ ಬಹುಮಾನ ಗಳಿಸಿದ ಡಾ| ಅಲೆಕ್ಸಿಸ್ ಕೆರೆಲ್ ತನ್ನ ಅಜ್ಞಾತ ಮಾನವ' ಎಂಬ ಗ್ರಂಥದಲ್ಲಿ ಹೇಳುತ್ತಾನೆ, ಜೀವಿಯಲ್ಲಿರುವ ಅದ್ಭುತ ಶಕ್ತಿಶಾಲಿಯಾದ ಮನವನ್ನು ಶರೀರ ಶಾಸ್ತ್ರಜ್ಞರೂ, ಅರ್ಥಶಾಸ್ತ್ರಜ್ಞರೂ ನಿರ್ಲಕ್ಷಿಸಿದ್ದಾರೆ. ವೈದ್ಯರ ಗಮನವೂ ಆ ಕಡೆಗೆ ಹರಿದಿಲ್ಲ.'' ಎಂದು.

ಹಿರಿಯ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯಿಡ್ ಎಂದಿದ್ದಾರೆ, ನಾನು ಇನ್ನೊಮ್ಮೆ ನನ್ನ ಜೀವನವನ್ನು ಪ್ರಾರಂಭಿಸುವುದಾದಲ್ಲಿ ಮನೋವಿಶ್ಲೇಷಣೆಗಿಂತ ಅತೀಂದ್ರಿಯ ವಿಚಾರಗಳ ಸಂಶೋಧನೆಗೆ ನನ್ನ ಜೀವನವನ್ನು ಮೀಸಲಾಗಿಡುತ್ತೇನೆ'' ಎಂದು.

ಸಂತರ, ಭಗವದ್ಭಕ್ತರ ಚಿತ್ರಗಳಲ್ಲಿ ಮುಖ್ಯವಾಗಿ ತಲೆಯ ಸುತ್ತಲೂ ಪ್ರಭಾವಲಯ ಚಿತ್ರಿಸಿರುವುದನ್ನು ಕಾಣುತ್ತೇವೆ. ಸೈಕೀ ಎಂದು ಕರೆಯಲಾದ ನಮ್ಮ ಮನಸ್ತತ್ವ ಅಥವಾ ಜೀವತತ್ವವು ಎಲುಬು, ರಕ್ತಮಾಂಸ, ನರಮಂಡಲಗಳಿಂದ ಕೂಡಿದ ನಮ್ಮ ಸ್ಥೂಲದೇಹದಿಂದ ಭಿನ್ನವಾದುದು. ಸತ್ತುಹೋದ ಪ್ರಾಣಿಗಳಲ್ಲಾಗಲೀ ಮನುಷ್ಯ ಶರೀರದಲ್ಲಾಗಲೀ ಪ್ರಭಾವಲಯದಿಂದ ಕೂಡಿದ ಈ ಶಕ್ತಿಶರೀರವು ಕಾಣಿಸುವುದಿಲ್ಲ." ಈ ಶಕ್ತಿ ಶರೀರವನ್ನೇ ನಮ್ಮ ದೇಶದ ಮನೀಷಿಗಳು ಸೂಕ್ಷ್ಮಶರೀರವೆಂದು ನಿರ್ದೇಶಿಸಿದ್ದರು. ಮಿದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ಸಿದ್ಧಹಸ್ತರಾದ ಡಾಕ್ಟರ್ ವೈಲ್ಡರ್ ಪೆನ್‌ಫೀಲ್ಡ್, ಮಿದುಳಿಗಿಂತ ಮನಸ್ಸು ಸ್ವತಂತ್ರ ಅಸ್ತಿತ್ವ ಹೊಂದಿದೆ ಎಂದು ಒಪ್ಪಿಕೊಳ್ಳುವ ಕಾಲ ಸನ್ನಿಹಿತವಾಗಿದೆ.' ಎನ್ನುತ್ತಾರೆ.

ಮನುಷ್ಯನಲ್ಲಿ ಚೈತನ್ಯದಾಗ್ನಿ ಮಲಗಿ ನಿದ್ರಿಸುತ್ತಿದೆ. ಜಗತ್ತಿಗೆ ಬೆಳಕು ನೀಡುವವ ಸೂರ್ಯ ಎಂಬುದು ಎಲ್ಲರಿಗೂ ಗೊತ್ತು. ಸೂರ್ಯೋದಯವಾದ ಮೇಲೆಯೇ ಮನುಷ್ಯ ತನ್ನ ಕೆಲಸ ಪ್ರಾರಂಭಿಸುತ್ತಾನೆ. ಸೂರ್ಯ ಅಸ್ತನಾದಾಗ ಚಂದ್ರ ಬೆಳಕು ನೀಡುತ್ತಾನೆ. ಇಬ್ಬರೂ ಇಲ್ಲದಾಗ ಬೆಳಕು ಯಾರು ನೀಡುತ್ತಾರೆ? ಅಂದರೆ, ಅಗ್ನಿ' ಎಂದನಂತೆ ಯಾಜ್ಞವಲ್ಯ. ಅಗ್ನಿ ಇಲ್ಲದಾಗ? ಎಂದು ಕೇಳಿದಾಗ ಶಬ್ದವೇ ಬೆಳಕು' ಎಂದನಂತೆ.

ಗೌತಮ ಬುದ್ಧ ತನ್ನ ಹಿಂದಿನ ಐನೂರು ಜನ್ಮಗಳ ಘಟನಾವಳಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಲ್ಲವನು ಆಗಿದ್ದನಂತೆ. ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ದೇಹೇಂದ್ರಿಯ ಮನಸ್ಸುಗಳಿಂದ ಪಡೆದ ಸಂಸ್ಕಾರಗಳನ್ನು ಬೆಳಗುವ ಆ ನಿತ್ಯ ನಿರಂತರವಾದ ಬೆಳಕು ಯಾವುದು? ಅದೇ ಸತ್ಯದ ಬೆಳಕು. ಸಚ್ಚಿದಾನಂದದ ಬೆಳಕು. ಸಾವಿಲ್ಲದ ನೋವಿಲ್ಲದ ಶಾಶ್ವತವಾದ ಅರಿವಿನ ಬೆಳಕು'.

ಮುಖ್ಯವಾದ ವಿಚಾರ ನಾನು ಯಾರು?' ಎಂಬುದನ್ನು ಅರಿಯಬೇಕು. ಕುರಿಯ ಸಹವಾಸದಲ್ಲಿ ಬೆಳೆದ ಹುಲಿಯ ಮರಿಯಂತೆ ನಮ್ಮ ಬಾಳಾಗಿದೆ. ಅಜ್ಞಾನದಿಂದಾಗಿ ನಾವು ನಮ್ಮ ನಿಜರೂಪವನ್ನು ಮರೆತಿದ್ದೇವೆ" ಎನ್ನುತ್ತಾರೆ.

ತಿರಸ್ಕಾರ, ನಿಂದೆ ಮತ್ತು ಶೋಷಣೆಗೊಳಗಾದ ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಾಗಲಿ, ಮೇಲಿನವರು ಅಥವಾ ಆಳುವವರು ತಮ್ಮ ಮೇಲೆ ಹೇರುವ ದುಷ್ಟ, ನೀಚ, ಅಯೋಗ್ಯ, ಕೆಲಸಕ್ಕೆ ಬಾರದವ, ಅಪ್ರಯೋಜಕ' ಎಂಬಂಥ ಭಾವನೆಗಳು ತಿರಸ್ಕೃತರ ಅಥವಾ ದಬ್ಬಾಳಿಕೆಗೊಳಗಾದವರ ಸ್ವವ್ಯಕ್ತಿತ್ವ ಚಿತ್ರದಲ್ಲಿ ಅಂಟಿಕೊಂಡುಬಿಡುತ್ತವೆ. ಈ ಭಾವನೆಗಳು ವ್ಯಕ್ತಿಯ ಪರಿಪೂರ್ಣ ಬೆಳವಣಿಗೆಗೆ ಅಘಾತವುಂಟುಮಾಡುತ್ತವೆ'' ಎಂಬ ಮನೋರೋಗ ತಜ್ಞರ ಮಾತನ್ನು ಉದ್ಧರಿಸಿ ಇದರ ಪರಿಣಾಮದ ದುರಂತದ ಕಡೆಗೆ ನಮ್ಮ ಗಮನ ಸೆಳೆಯುತ್ತಾರೆ.

ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ತಮ್ಮನ್ನು ತಾವು ಕೀಳರೆಂದು ತಿಳಿದುಕೊಂಡವರು ಮೊದಲು ತಮ್ಮ ಕೀಳರಿಮೆಯನ್ನು ಕಿತ್ತೆಸೆಯಬೇಕು.

ತನ್ನನ್ನು ಅಶಕ್ತನೆಂದೂ ಪಾಪಿಯೆಂದೂ ಭಾವಿಸುವದೇ ಅತಿದೊಡ್ಡ ಪಾಪ. ನೀವು ಏನನ್ನಾದರೂ ನಂಬಬೇಕಿದ್ದರೆ, ನಾವು ಭಗವಂತನ ಮಕ್ಕಳೆಂದೂ, ಅವನ ಅಂಶಗಳೆಂದೂ, ಅವನ ಅನಂತ ಶಕ್ತಿ ಮತ್ತು ಆನಂದದ ಪಾಲುಗಾರರು' ಎಂದೂ ನಂಬಿರಿ.'' ಎಂದು ವಿವೇಕಾನಂದರು ಹೇಳುತ್ತಿದ್ದರು.

ದ್ವೇಷ ಒಳ್ಳೆಯದಲ್ಲ. ಒಲವಿನ ಮಾರ್ದನಿ ಆಲಿಸುವುದು ಒಳ್ಳೆಯದು. ಅಹಂ' ಇದಕ್ಕೆ ಅಸಂಖ್ಯ ವೇಷಗಳಿವೆ. ನಾನು'ವಿನ ಆಳದಲ್ಲಿ ನಾವೆಲ್ಲಾ ಒಂದೇ. ಅಹಂ'ನ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟದ ಭಾರವನ್ನು ಕಡಿಮೆ ಮಾಡುವ ಕಲೆಯನ್ನು ನಾವು ಇನ್ನೂ ಕಲಿತಿಲ್ಲ. ಈ ವಿಚಾರಗಳನ್ನು ವಿವರವಾಗಿ ಚರ್ಚಿಸುತ್ತಾರೆ.

ಪ್ರಸಿದ್ಧ ಅಣುಭೌತ ವಿಜ್ಞಾನಿ ಡಾ| ಫಿಜೋ ಕಾಪ್ರಾ ಅವರು ಉಪನಿಷತ್ತು, ಬೌದ್ಧ ಧರ್ಮ ಮತ್ತು ಟಾವೋ ಮತಗಳನ್ನು ಅಭ್ಯಸಿಸಿ ವಿಶ್ವದ ಮೂಲಭೂತ ತತ್ವಗಳಲ್ಲಿರುವ ಸಾಮ್ಯಗಳನ್ನು ತಮ್ಮ ಟಾವೋ ಇನ್ ಫಿಜಿಕ್ಸ್' ಪುಸ್ತಕದಲ್ಲಿ ವಿವರಿಸಿದ್ದನ್ನು ಚರ್ಚಿಸುತ್ತಾರೆ. ಆತನ ಸಾನ್ನಿಧ್ಯ ಸದಾ ನಮ್ಮಲ್ಲಿ ಇದ್ದೇ ಇದೆ. ನಾವು ಅವನಿಂದಲೇ ಅಸ್ತಿತ್ವ-ಸತ್ವ-ಶಕ್ತಿಗಳನ್ನು ಪಡೆದು, ಅವನಲ್ಲೇ ಬದುಕಿ, ಅವನೆಡೆಗೇ ಹಿಂದಿರುಗುತ್ತೇವೆ' ಎನ್ನುತ್ತಾರೆ.

ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು | ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು | ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ | ನಮ್ಮೊಳಗಿರ್ದ ಮಹಾಘನವರಿಯರು ಚೆನ್ನಮಲ್ಲಿಕಾರ್ಜುನ'' ಎಂಬ ಅಕ್ಕ ಮಹಾದೇವಿಯ ವಚನ ಇಲ್ಲಿ ಉದ್ಧರಿಸುತ್ತಾರೆ. ಬಹಳೆ ಸೂಕ್ತವಾದ ವಚನಾಮೃತವಿದು. ನಂಬಿಕೆಯ ನಾಕ ನರಕ' ಎಂಬ ವಿಷಯದ ಬಗ್ಗೆ ಬರೆಯುತ್ತ ಕೆಲವು ರೋಚಕ ಉದಾಹರಣೆಗಳನ್ನು ಕೊಡುತ್ತಾರೆ.

ದೆಹಲಿಯ ಸಮೀಪದಲ್ಲಿಯ ಹಳ್ಳಿಯ ಹೊಲವೊಂದರಲ್ಲಿ ದುಡಿಯುವ ರೈತನೊಬ್ಬ ಅಸ್ತಮಾದಿಂದ ಬಳಲಿ, ರೋಗ ಉಲ್ಬಣಿಸಿದಾಗ ನಗರದ ಪ್ರಸಿದ್ಧ ಆಸ್ಪತ್ರೆಗೆ ಬಂದು ಡಾಕ್ಟರರನ್ನು ಕಾಣುತ್ತಾನೆ. ಡಾಕ್ಟರರು ಇವನನ್ನು ತಪಾಸಿಸಿ ತಮ್ಮ ಡಿಗ್ರಿಗಳಿಂದ ಅಂಕಿತಗೊಡ ದೊಡ್ಡ ಹಾಳೆಯಲ್ಲಿ ಔಷಧಿ ಬರೆದು, ಇದನ್ನು ಹದಿನಾಲ್ಕು ಭಾಗ ಮಾಡಿ ದಿನಕ್ಕೆರಡು ಸಲ ಸೇವಿಸಿ ನೀರುಕುಡಿ. ವಾರದ ನಂತರ ಮತ್ತೆ ಬಾ' ಎನ್ನುತ್ತಾರೆ. ರೈತ ಎರಡು ವಾರಗಳ ನಂತರ ಗುಣಮುಖನಾಗಿ ಡಾಕ್ಟರರನ್ನು ಹರಸುತ್ತ ಅವರ ರಾಮ-ಬಾಣ ಔಷಧಿಯ ಗುಣಗಾನ ಮಾಡುತ್ತ ಬರುತ್ತಾನೆ. ಡಾಕ್ಟರರಿಗೆ ಅಚ್ಚರಿ. ತಾವು ಯಾವ ಔಷಧಿ ಬರೆದೆವೆಂಬುದು ನೆನಪಾಗದೇ, ಕುತೂಹಲದಿಂದ, ನಾನು ಕೊಟ್ಟ ಪ್ರಿಸ್ಕ್ರಿಪ್ಶನ್ ಪೇಪರ್ ತೋರಿಸು' ಎನ್ನುತ್ತಾರೆ. ಹಳ್ಳಿಯ ರೈತ ಆ ಕಾಗದವನ್ನೇ ಹದಿನಾಲ್ಕು ಭಾಗ ಮಾಡಿ ಸೇವಿಸಿದೆ, ಡಾಕ್ಟರರೇ' ಎನ್ನುತ್ತಾನೆ. ಈ ಘಟನೆ ಕೆಲವು ವರ್ಷಗಳ ಹಿಂದೆ ದಿ ಹಿಂದೂ' ಪತ್ರಿಕೆಯಲ್ಲಿ ವರದಿಯಾಗಿತ್ತು ಎಂದು ಬರೆಯುತ್ತಾರೆ.

ಫಾಶೀ ಶಿಕ್ಷೆಯಾದ ವ್ಯಕ್ತಿಯೊಬ್ಬನನ್ನು, ನ್ಯಾಯಾಧೀಶನ ಅನುಮತಿಯಿಂದ, ತನ್ನ ಪ್ರಯೋಗಾಲಯಕ್ಕೆ ಒಬ್ಬ ಮನಶ್ಶಾಸ್ತ್ರಜ್ಞ ತಂದನಂತೆ. ಅವನನ್ನು ಮಲಗಿಸಿ, ಕಣ್ಣಿಗೆ ಪಟ್ಟಿ ಕಟ್ಟಿ, ಕಾಲುಕಟ್ಟಿ, ಅವನ ರಕ್ತನಾಳಕ್ಕೆ ಗಾಯ ಮಾಡಿ, ಬದಿಯಲ್ಲಿ ಒಂದು ಟೂಬನ್ನು ಜೋಡಿಸಿದನು. ಅವನಿಗೆ ಕೇಳಿಸುವಂತೆ ಒಬ್ಬ ಹಿರಿಯ ತಜ್ಞ ಇನ್ನೊಬ್ಬನಿಗೆ ಹೇಳಿದ. ಇವನಿಗೆ ನೇಣು ಶಿಕ್ಷೆ ಆಗಿದೆ. ಇವನಿಗೆ ನೋವಾಗದಂತೆ ಸಾಯಿಸಬೇಕೆಂದು ಇಲ್ಲಿಗೆ ತಂದಿದ್ದೇವೆ. ಇಲ್ಲಿ ಅವನ ರಕ್ತ ಹನಿಹನಿಯಾಗಿ ಟೂಬಿನಿಂದ ಕೆಳಗಿಟ್ಟ ಟಬ್ಬಿನಲ್ಲಿ ಬೀಳುತ್ತಿದೆ. ಅದು ಮೂರೂವರೆ ಲೀಟರ್ ಆದರೆ ಇವನು ಸಾಯುತ್ತಾನೆ.'' ನಂತರ, ಅರ್ಧ ಲೀಟರಾಯಿತು, ಒಂದು ಲೀಟರ್ ಆಯಿತು ಎನ್ನುತ್ತ ಕೊನೆಗೆ ಮೂರುವರೆ ಲೀಟರ್ ಆಯಿತು ಎಂದಾಗ ಅವನು ನಿಜವಾಗಿ ಸತ್ತುಹೋದನಂತೆ. ಟೂಬಿನಿಂದ ಕೆಳಗೆ ಬೀಳುತ್ತಿದ್ದ ದ್ರವ ಅವನ ರಕ್ತವಾಗಿರಲಿಲ್ಲ, ನೀರಾಗಿತ್ತು. ಅವನಿಗೆ ತನ್ನ ರಕ್ತವೇ ಸೋರುತ್ತಿದೆ ಎಂಬ ಭ್ರಮೆಯಾಗಿತ್ತು.

ಸಭಾಕಂಪನದಿಂದ ಮಾತಾಡಲು ಸಾಧ್ಯವಾಗದ ಒಬ್ಬ ವ್ಯಕ್ತಿಗೆ, ಅವನ ಸುಪ್ತಾವಸ್ಥೆಯನ್ನು ಉದ್ದೇಶಿಸಿ ನೀನು ಸಲೀಸಾಗಿ ಮಾತನಾಡ ಬಲ್ಲೆ, ಮಾತನಾಡುತ್ತಿ' ಎಂಬ ಸಂದೇಶ ಕೊಟ್ಟಾಗ, ಅವನು ಸುಪ್ತಾವಸ್ಥೆಯಲ್ಲಿಯೇ ಎದ್ದು ನಿಂತು ಮಾತಾಡತೊಡಗಿದನಂತೆ. ಇಂತಹ ಹಲವಾರು ಉದಾಹರಣೆಗಳು ಇಲ್ಲಿವೆ. ಜಪಾನ್ ದೇಶವದರು ಬುದ್ಧಿಶಕ್ತಿಯಲ್ಲಿ, ದೈಹಿಕ ಶಕ್ತಿಯಲ್ಲಿ ಭಾರತೀಯರಿಗಿಂತ ಹೆಚ್ಚಿನವರೇನಲ್ಲ. ಆದರೂ ಅವರೇಕೆ ಬಹಳ ಮುಂದೆ ಬಂದಿದ್ದಾರೆ? ಮಕ್ಕಳಿಗೆ ಬಾಲ್ಯದಿಂದ ದೊರೆಯುವ ಶಿಕ್ಷಣ. ಉದಯರವಿ"ಯ ದೇಶದವರು ನಾವು. ಯಾರಿಗಿಂತಲೂ ಕಡಿಮೆ ಇಲ್ಲ' ಎಂಬ ಅಭಿಮಾನ ಅವರಲ್ಲಿ ಬಿತ್ತಲಾಗುತ್ತದೆ. ಇಸ್ರೇಲಿನ ಪ್ರಗತಿಗೆ ಕಾರಣ ಅವರ ದೇಶಪ್ರೇಮ, ಪ್ರತಿಭೆ ಮತ್ತು ಪರಾಕ್ರಮ ಎನ್ನುತ್ತಾರೆ.

ಶ್ರದ್ಧೆಯಿಂದ ಶಕ್ತಿವೃದ್ಧಿ', ಕತ್ತಲೆಯನ್ನು ದ್ವೇಷಿಸಿದರೆ ಸಾಲದು, ಬೆಳಕನ್ನು ಪ್ರೀತಿಸಲು ಕಲಿಯಬೇಕು' ಎನ್ನುತ್ತಾರೆ. ಶ್ರದ್ಧೆ ಒಂದು ಆತ್ಮಗುಣ. ಮನಸ್ಸಿನ ಒಂದು ಮಹಾ ಅಸ್ತ್ರ. ಅದರ ಉಪಯೋಗವನ್ನು ಎಲ್ಲರೂ, ಎಲ್ಲ ಕಾಲದಲ್ಲೂ ಪಡೆಯಬಹುದು. ನಮ್ಮ ಆಯಸ್ಸು, ಆರೋಗ್ಯ, ಉದ್ಯಮ, ಆನಂದ - ಈ ಎಲ್ಲವುಗಳ ಮೇಲೆ ಶ್ರದ್ಧೆಯ ಸತ್-ಪರಿಣಾಮ ಶತಃಸಿದ್ಧ. ಮಕ್ಕಳ ಪಾಲನೆಯ ಬಗ್ಗೆ ವಿವರವಾಗಿ ಬರೆಯುತ್ತಾರೆ. ವಿದ್ಯಾರ್ಥಿಗಳು ಅಭ್ಯಾಸಮಾಡುವಂತೆ ಹೇಗೆ ಹುರಿದುಂಬಿಸಬೇಕು ಎನ್ನುವ ಬಗ್ಗೆ ಬರೆಯುತ್ತಾರೆ. ಶ್ರದ್ಧಾವಾನ್ ಲಭತೇ ಜ್ಞಾನಂ', ವಿದ್ಯಾರ್ಥಿಗಳಲ್ಲಿ ಶ್ರದ್ಧೆಯನ್ನು ಕುದುರಿಸಿದರೆ ಅವರು ಜ್ಞಾನಾರ್ಜನೆಯನ್ನು ಸುಲಭವಾಗಿ ಮಾಡಬಹುದು. ಬದುಕಿಗೊಂದು ಬೆಳಕು ಬೇಕು'. ಅದರಿಂದ ಪ್ರಗತಿ ಸಾಧ್ಯ ಎನ್ನುತ್ತಾರೆ. ಬಹುಜನ ಹಿತಾಯ' ನಮ್ಮ ಜೀವನ ಮುಡಿಪಾಗಿರಬೇಕು. ಅದರಿಂದ ದೇಶದ ಉದ್ಧಾರ ಸಾಧ್ಯ ಎನ್ನುತ್ತಾರೆ.

ಕತ್ತಲೆಯನ್ನು ದ್ವೇಷಿಸಿದರೆ ಸಾಲದು, ಬೆಳಕನ್ನು ಪ್ರೀತಿಸಲು ಕಲಿಯಬೇಕು.

ಬರಿ ಬುದ್ಧಿವಾದ ಹೇಳಿದರೆ ಸಾಲದು, ನುಡಿದಂತೆ ನಡೆದು ತೋರಬೇಕು.

ಮಕ್ಕಳನ್ನು ಪ್ರೀತಿಸಿದರೆ ಸಾಲದು, ಸರ್ವ ವಿದಧ ತ್ಯಾಗಕ್ಕೆ ಸಿದ್ಧರಾಗಿರಬೇಕು.

ದಿನಗಳನ್ನು ನೂಕಿದರೆ ಸಾಲದು, ಬಾಳ್ವೆಯಲ್ಲಿ ಶ್ರದ್ಧೆಯ ಬೀಜ ಬಿತ್ತಬೇಕು.

ಬೆಳಕಿಗಾಗಿ ಹುಡುಕಾಡಿದರೆ ಸಾಲದು, ತಾನೆ ಬೆಳಕಾಗಿ ಮಾರ್ಗ ತೋರಬೇಕು.

(ಜೀವಿ" ವಚನ 54-4)

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more