• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಮಗಮಾ ಗಮಾಡಸ್ತಾವ ಮಲ್ಲಿಗಿ...

By Staff
|

ದ.ರಾ.ಬೇಂದ್ರೆಅವರ ಆಯ್ದ ನೂರು ಕವನಗಳ ಸಂಕಲನ ‘ನೂರು ಮರ ನೂರು ಸ್ವರ, ಒಂದೊಂದು ಅತಿ ಮಧುರ’. ಈ ಕೃತಿ ಪರಿಚಯಿಸುವ ಪ್ರಯತ್ನ ಅಂಕಣಕಾರರದು. ಈ ಮಾಲಿಕೆಯ ಎರಡನೇ ಲೇಖನ ಇಲ್ಲಿದೆ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ

jeevi65@gmail.com

Da Ra Bendres portrait in dots‘ಗಮಗಮಾ ಗಮಾಡಸ್ತಾವ ಮಲ್ಲಿಗಿ’ ಪದ್ಯವನ್ನು ಸಂಗೀತಾ ಕಟ್ಟಿಯವರ ಶ್ರೀಕಂಠದಿಂದ ಕೇಳಬೇಕು. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು, ಇಟ್ಟುಕೊಂಡ ಸ್ತ್ರೀಯೆಡೆಗೆ ಹೋಗುತ್ತಿರುವ ಪುರುಷನನ್ನು, ‘ನೀವು ಹೊರಟದ್ದೀಗ ಎಲ್ಲಿಗೆ?’ ಎಂದು ಬಾಳ ಸಖಿ ಪ್ರಶ್ನಿಸುತ್ತಾಳೆ. ಅವಳ ಭಾವ, ಪರಿತಾಪ, ವಿರಹ ಚಿತ್ತವೇಧಕವಾಗಿ ಚಿತ್ರಿತವಾಗಿದೆ.

ಲತಾ ಹಾಡಿದ ‘ಮುಝೆ ಭೂಲ ಗಯೇ ಸಾವರಿಯಾ’ ಹಾಡು ನೆನಪಾಗುತ್ತದೆ. ನಮ್ಮ ಹೃದಯದ ತಂತುಗಳನ್ನೇ ಇಂಥ ಹಾಡುಗಳು ‘ಛೇಡಿಸಿಬಿಡುತ್ತವೆ’, ಅಲ್ಲಾಡಿಸಿಬಿಡುತ್ತವೆ. ‘ಕಣ್ಣ ಕಾಣಿಕೆ’ ಪದ್ಯದ ಸಾಲು ‘ಅಂತರಂಗದಾ ಮೃದಂಗ ಅಂತು ತೋಂ ತನಾನಾ । ಚಿತ್ತ ತಾಳ ಬಾರಿಸುತ್ತಲಿತ್ತು ಝಂಝಣಾಣಾ । ನೆನವು ತಂತಿ ಮೀಟುತಿತ್ತು ತಂತನನ ತಾನಾ ।’ ಇಲ್ಲಿ ಕವಿ ಅಂತರಂಗದ ಮೃದಂಗವನ್ನು ಬಾರಿಸುತ್ತಿದ್ದಾನೆ ಅದೇ ಭಾವಗೀತವಾಗುತ್ತದೆ. ‘ಏಲಾವನ ಲವಲೀ ಬನ ಲವಂಗ ಬನಗಳಲಿ’ ತೇಲಿಬರುವ ‘ಏಲಾಗೀತ’ ನಮ್ಮನ್ನು ಮುಗ್ಧಗೊಳಿಸುತ್ತದೆ.

‘‘ಅನುನಾಸಿಕಗಳ ಬಳಕೆ ಅತ್ಯಂತ ವಿರಳ. ಅವುಗಳಿಗೆ ಬೇಂದ್ರೆ ಚಲಾವಣೆಯಲ್ಲಿ ತಂದದ್ದು ಒಂದು ಹೆಗ್ಗಳಿಕೆ.’’ ಎಂದು ಡಾ। ವಾಮನ ಬೇಂದ್ರೆ ಟಿಪ್ಪಣಿಯಲ್ಲಿ ಬರೆಯುತ್ತಾರೆ.

‘ನಾನು’ ಎಂಬ ಪದ್ಯ ಬಹಳ ಕಾರಣಗಳಿಂದ ಮಹತ್ವದ್ದು. ಇಲ್ಲಿ ಬೇಂದ್ರೆಯವರ ಜೀವನಪಥ ದರ್ಶನವಿದೆ. ಈ ಪದ್ಯದ ಪ್ರಾರಂಭ ಹೀಗಿದೆ.

‘ವಿಶ್ವಮಾತೆಯ ಗರ್ಭ-ಕಮಲಜಾತ-ಪರಾಗ- । ಪರಮಾಣು ಕೀರ್ತಿ ನಾನು । ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ । ನಿಂತಂಥ ಮೂರ್ತಿ ನಾನು’.

ಬೇಂದ್ರೆಯವರಿಗೆ ಐದು ಮಾತೆಯರು. ವಿಶ್ವಮಾತೆ, ಭೂಮಾತೆ, ಭರತಮಾತೆ, ಕನ್ನಡಮಾತೆ ಮತ್ತು ಜನ್ಮಕೊಟ್ಟ ತಾಯಿ ಅಂಬಿಕೆ. ‘ಹೃದಯಾರವಿಂದದಲ್ಲಿರುವ ನಾರಾಯಣನೆ । ತಾನಾಗಿ ದತ್ತ ನರನು । ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ । ಅಂಬಿಕಾತನಯನಿವನು.’

ಪಂಪ, ನಾರಣಪ್ಪ, ಬೇಂದ್ರೆ ಈ ಮೂರು ಕವಿಗಳು ಕನ್ನಡ ಸಾಹಿತ್ಯದ ಸಾವಿರ ವರ್ಷದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕವಿಗಳು ಎಂದು ಡಾ। ಗೋಪಾಲ ಕೃಷ್ಣ ಅಡಿಗರು ಗುರುತಿಸಿದ್ದಾರೆ. ಪಂಪನಿಗೆ ಕಾವ್ಯ ಪೂಜೆಯಾಗಿತ್ತು. ನಾರಣಪ್ಪ ಹೇಳಿದ ‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂದು. ಬೇಂದ್ರೆ ಹೇಳುತ್ತಾರೆ, ಹೃದಯಾರವಿಂದದಲ್ಲಿರುವ ನಾರಾಯಣನು ದತ್ತಗುರುವಾಗಿ ವಿಶ್ವದ ಒಳನುಡಿಯಾಗಿ ಕನ್ನಡಿಸುತ್ತಿದ್ದಾನೆ, ಅಂಬಿಕಾತನಯನ ರೂಪದಲ್ಲಿ’ ಎಂದು.

ಬೇಂದ್ರೆಯವರಿಗೆ ತಾವು ವಿಶ್ವಕವಿ ಎಂಬ ಅರಿವು ಬಹಳ ಹಿಂದೆಯೇ ಮೂಡಿತ್ತು. ಬೇಂದ್ರೆಯವರಿಗೆ ಕರ್ನಾಟಕದ ಒಂದು ವಿಶ್ವವಿದ್ಯಾಲಯದವರು ಡಾಕ್ಟರೇಟ್‌ ಕೊಡಲಿಲ್ಲವಂತೆ. ಒಬ್ಬ ಸಿನೇಟ್‌ ಮೆಂಬರ್‌ ಬೇಂದ್ರೆಯವರನ್ನು ಕಂಡಾಗ ಅದರ ಬಗ್ಗೆ ತನಗಾದ ನೋವು ವ್ಯಕ್ತಪಡಿಸಿದ್ದನಂತೆ. ಆಗ ಬೇಂದ್ರೆಯವರು ಅವನನ್ನು ಸಮಾಧಾನ ಪಡಿಸಲು ಹೇಳಿದ್ದರಂತೆ. ‘ನಾನು ಹುಟ್ಟಾ ಡಾಕ್ಟರ್‌ ಆಗಿದ್ದೇನೆ, ನನ್ನ ಇನಿಶಿಯಲ್ಸ್‌ ನೋಡು, ‘ಡಿಆರ್‌.’ ಇದರ ಬಗ್ಗೆ ನೀನು ಚಿಂತಿಸಬೇಡ.’ ಎಂದು.

‘ಕರಡಿ ಕುಣಿತ’ ಮಕ್ಕಳ ಮನರಂಜನೆಗಾಗಿ ಜಾನಪದ ಗತ್ತಿನಲ್ಲಿ ಬರೆದ ಪದ್ಯವೆಂದು ತೋರಿದರೂ ಅದರಲ್ಲಿ ಅಧ್ಯಾತ್ಮಿಕ ಅರ್ಥವೂ ಅಡಗಿದೆ. ಮಾನವಪ್ರಾಣಿ ಯಾವ ರೀತಿ ಆಟ ಆಡುತ್ತ ಬಂದಿದ್ದಾನೆ ಎಂಬುದನ್ನೂ ಇಲ್ಲಿ ಕವಿ ತೋರಿಸಿದ್ದಾರೆ. ‘ಕಬ್ಬಿಣ ಕೈ ಕಡಗ, ಕುಣಿಕೋಲು, ಕೂದಲು ಕಂಬಳಿ ಹೊದ್ದವ ಬಂದಾನ’ಎನ್ನುವ ಪ್ರಾರಂಭದ ಸಾಲಿನಲ್ಲಿ ಚಿತ್ರ ಕಟ್ಟುವಂತೆ ಬಣ್ಣಿಸಿದ ಕರಡೆ ಆಡಿಸುವವರನ್ನು ನಾವು ನೋಡಿದ್ದೇವೆ. ಇಂದಿನ ಮಕ್ಕಳು ಈ ಚಿತ್ರವನ್ನು ಕಲ್ಪಿಸಬೇಕು ಅಷ್ಟೇ.

ಯಾವುದೋ ಅಡವಿಯಲ್ಲಿ ಜೇನು ಉಂಡು ಸುಖವಾಗಿದ್ದ ಜಾಂಬುವಂತನನ್ನು ತನ್ನ ಹೊಟ್ಟೆಪಾಡಿಗಾಗಿ ಹಿಡಿದು ತಂದಿದ್ದಾನೆ. ‘ಕುಣಿಯಲೆ ಮಗನೆ’ ಎಂದೊಡನೆ ಆ ಕರಡಿ ಕುಣಿಯತೊಡಗುತ್ತದೆ. ‘ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು’ ಕರಡಿ ಬಂಧನ ಪಡೆದಿದೆ ಎನ್ನುತ್ತಾರೆ. ‘ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ । ಪ್ರಾಣದ ಈ ಪ್ರಾಣಿ ಹಿಂದಾನ । ಕರಡಿಯ ಹೆಸರಿಲೆ ಚರಿತಾರ್ಥ ನಡಿಸ್ಯಾನ । ಪರಮಾರ್ಥ ಎಂಬಂತೆ ಬಂದಾನ’ ಎನ್ನುತ್ತಾರೆ. ಈ ಮನುಷ್ಯ ತನಗಾಗಿ ಕವಲೆತ್ತು, ಕೋಡಗ(ಮಂಗ) ಕುಣಿಸುತ್ತ ಬಂದಿದ್ದಾನೆ. ‘ಕರಡೀ ಕುಣಿತಕ್ಕಿಂತ ನರನ ಬುದ್ಧಿಯ ಕುಣಿತ । ಮಿಗಿಲಹುದು ಕವಿ ಕಂಡು ನುಡಿದಾನ’ ಎಂದಾಗ ಈ ಹಾಡು ಶಿಖರಕ್ಕೇರುತ್ತದೆ.

‘ಪಾರ್ವತಿ ನೀನೇ ಸಲಹು’ ಎಂಬ ಪದ್ಯವನ್ನು ಬೇಂದ್ರೆಯವರು ಕರ್ನಾಟಕ ರಾಜ್ಯೋತ್ಸವದ ನಿಮಿತ್ತ 1956ರರಲ್ಲಿ ಬರೆದದ್ದು. ‘ಈಶ್ವರ ನಿರ್ಮಿಸಿದೀ ಸೃಷ್ಟಿಯನು । ಪಾರ್ವತಿ ನೀನೇ ಸಲಹು । ನಿನ್ನದೆ ಈ ನೆಲ, ನಿನ್ನದೆ ಈ ಜಲ । ನಿನ್ನದೆ ಕನ್ನಡ ಗೆಲವು’ ಎಂದು ಪದ್ಯ ಪ್ರಾರಂಭವಾಗುತ್ತದೆ. ಕರ್ನಾಟಕದ ವೈಶಿಷ್ಟ್ಯವೆಂದರೆ ಇಲ್ಲಿ ಧರ್ಮಗಳ ಸಹಬಾಂಧವ್ಯ.

‘ಜೈನರ ಕಾವ್ಯದ ಶರಣರ ವಚನದ । ದಾಸರ ಹಾಡಿನದೀ ನಾಡು । ವಿಶ್ವದ ಕಬ್ಬದ ಹಬ್ಬಹುಣ್ಣಿವೆಗೆ । ಕನ್ನಡ ಹೃದಯವ ಹದಮಾಡು’ ಎನ್ನುತ್ತಾರೆ. ಕನ್ನಡ ವಿಶ್ವಕ್ಕೆ ಮಾದರಿಯಾಗಬೇಕೆಂಬ ಹಂಬಲ ಇಲ್ಲಿಯೂ ವ್ಯಕ್ತವಾಗಿದೆ. ‘ಕನ್ನಡ ನುಡಿದಿತು ಕನ್ನಡ ಹಕ್ಕಿ । ಕನ್ನಡವೆಂದಿತು ಆ ಗೋದೆ । ಕಾವೇರಿಯು ತಂಪಾಯಿತು, ಕನ್ನಡ । ಗಾಳಿಯು ಉಸಿರಿತು ಈ ಬೋಧೆ.’ ಈ ಪದ್ಯವನ್ನು ಬಳ್ಳಾರಿ ಸಾಹಿತ್ಯ ಸಮ್ಮೇಲನದಲ್ಲಿ (1958ರಲ್ಲಿ) ಬೇಂದ್ರೆ ಹಾಡಿದ್ದು ಕೇಳಿದ್ದೇನೆ. ಇಂದಿಗೂ ಆ ಶಬ್ದಗಳು ನಿನಾದಿಸುತ್ತಿವೆ. ಕನ್ನಡ ಒಂದು ಅಗೋದೆ ಎಂದು ಒಂದು ಅರ್ಥವಿದ್ದರೆ ‘ಆ ಗೋದೆ’’ (ಗೋದವರಿ ನದಿಯು) ಕನ್ನಡ ನಾಡಿನ ಏಕೀಕರಣಕ್ಕೆ ತಲೆದೂಗಿತು ಎಂಬ ಶ್ಲೇಷವಿದೆ.

ನೃಪತುಂಗನು ಹೇಳಿದ ‘ಕಾವೇರಿಯಿಂದ ಮಾ ಗೋದಾವರಿಯವರೆಗಿರ್ದ’ ಕನ್ನಡ ನಾಡಿನ ಸೀಮೆಯನ್ನೂ ನೆನಪಿಗೆ ತರುತ್ತದೆ. ‘ಕಾವೇರಿಯು ತಂಪಾಯಿತು’ ಎನ್ನುವಲ್ಲಿ ಹಳೆಯ ಮೈಸೂರಿನವರು ಪ್ರತ್ಯೇಕವಾಗಿ ಉಳಿಯುವ ಮಾತು ಬಂದಾಗ ಏಕೀಕರಣದ ಮಾತಿಗೆ ಕಾವು ಏರಿತ್ತು, ನಂತರ ಅದು ತಂಪಾಯಿತು ಎಂಬ ಶ್ಲೇಷವೂ ಇದೆ.

‘ಸಹಸ್ರತಂತ್ರೀ ನಿಸ್ವನದಂತೆ’ ಪದ್ಯಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಇದೆ. 29 ಫೆಬ್ರುವರಿ, 1956ರಲ್ಲಿ ನಡೆಯಿತೆನ್ನಲಾದ ‘ಸುಪ್ರಮೆಂಟಲ್‌ ಮೆನಿಫೆಸ್ಟೇಶನ್‌’ನ ಪ್ರಭಾವ ಶ್ರೀ ಅರಬಿಂದೋ ಆಶ್ರಮದ ಹೊರಗೆ ಇದ್ದ ಮೂರು ಸಾಧಕರಿಗೆ ಅನುಭವಕ್ಕೆ ಬಂತು ಎಂದು ಹೇಳಲಾಯಿತು. ಅದರಲ್ಲಿ ಒಬ್ಬರು ವರಕವಿ ಅರವಿಂದ ಶಿಷ್ಯ ಬೇಂದ್ರೆಯವರಾಗಿದ್ದರು. ಹಿಂದಿನ ದಿನ ಅವರು ಟ್ರೇನಿನಲ್ಲಿ ಬೆಂಗಳೂರೆಡೆ ಹೊರಟಿದ್ದರು. ಎಲಹಂಕಾದ ಬಳಿ ಅವರಿಗೆ ಮೇಲೆ ತಿರುಗುತ್ತಿದ್ದ ಫ್ಯಾನ್‌ನಲ್ಲಿ ವೇದಮಂತ್ರ ಕೇಳಿಸತೊಡಗಿದವು. ಆ ಅನುಭವ ಗೀತರೂಪದಲ್ಲಿ ಇಲ್ಲಿ ಅವತರಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more