"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಇದು ಕೇವಲ ಕೈದಿಗಳ ಐಷಾರಾಮಿ ಜೀವನದ ಬಗ್ಗೆಯಲ್ಲ, ಬದಲಿಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಹೆಸರು ಕೇಳಿಬಂದಿದೆ. ಜೈಲಿನಲ್ಲಿ ಮೊಬೈಲ್, ಟಿವಿ ಸೇರಿದಂತೆ ರಾಜಾತಿಥ್ಯ ಸಿಗುತ್ತಿದೆ ಎಂದು ಬಿಂಬಿಸುವ ವೈರಲ್ ವಿಡಿಯೋ ವೈರಲ್ ಆಗಿದ್ದು, ವಾಸ್ತವವಾಗಿ ಅಲೋಕ್ ಕುಮಾರ್ ಅವರ ವಿರುದ್ಧ ನಡೆದ ಸೇಡಿನ ಕೃತ್ಯ ಎಂಬ ಸ್ಫೋಟಕ ಸತ್ಯ ಬಯಲಾಗಿದೆ.
ಇತ್ತೀಚೆಗಷ್ಟೇ ಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಮತ್ತು ವಿಐಪಿ ಟ್ರೀಟ್‌ಮೆಂಟ್‌ಗೆ ಬ್ರೇಕ್ ಹಾಕಿದ್ದರು. ಇದರಿಂದ ಕೋಪಗೊಂಡಿದ್ದ ಕೆಲವು ಪ್ರಭಾವಿ ಕೈದಿಗಳು ಮತ್ತು ಜೈಲಿನ ಭ್ರಷ್ಟ ಸಿಬ್ಬಂದಿ ಸೇರಿ ಅಲೋಕ್ ಕುಮಾರ್ ಅವರ ವಿರುದ್ಧ ಷಡ್ಯಂತ್ರ ನಡೆಸಲು ಈ ವಿಡಿಯೋ ಸೃಷ್ಟಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ವಿಡಿಯೋದಲ್ಲಿ ಕೈದಿಗಳು ವ್ಯವಸ್ಥೆಯನ್ನು ಅಣಕಿಸುತ್ತಾ, ಖುದ್ದು ಅಲೋಕ್ ಕುಮಾರ್ ಅವರೇ ತಮಗೆ ಸೌಲಭ್ಯ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು ಎನ್ನಲಾಗಿದೆ.

ಹಾಲಿನ ಪ್ಯಾಕೆಟ್‌ನಲ್ಲಿ ಮೊಬೈಲ್
ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಲರ್ಟ್ ಆದ ಜೈಲು ಅಧಿಕಾರಿಗಳು, ಬ್ಯಾರಕ್ ಸಂಖ್ಯೆ 9ರಲ್ಲಿ ಮಿಂಚಿನ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೈನೇಜ್ ಪೈಪ್‌ಗಳ ಒಳಗೆ ಅತ್ಯಂತ ಚಾಣಾಕ್ಷತನದಿಂದ ಅಡಗಿಸಿಟ್ಟಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ತಪಾಸಣೆಯ ವೇಳೆ ಸಿಕ್ಕಿಬೀಳಬಾರದೆಂದು ಫೋನ್‌ಗಳನ್ನು ಹಳೆಯ ಹಾಲಿನ ಪ್ಯಾಕೆಟ್‌ಗಳಲ್ಲಿ ಸುತ್ತಿ ಕಸದಂತೆ ಕಾಣುವಂತೆ ಪೈಪ್‌ಗಳಲ್ಲಿ ಇರಿಸಿದ್ದು ಗೊತ್ತಾಗಿದೆ.
ಆರೋಪಿಗಳ ತಪ್ಪೊಪ್ಪಿಗೆ
ಈ ಸಂಚಿನ ಹಿಂದೆ ಮೂವರು ಪ್ರಮುಖ ಕೈದಿಗಳಿರುವುದು ಪತ್ತೆಯಾಗಿದೆ. ಹೆಣ್ಣೂರು ಬಂಡೆ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಅಭಿ ಎಂಬುವವರು ಈ ಪಿತೂರಿಯ ಮಾಸ್ಟರ್ ಮೈಂಡ್‌ಗಳು. ಇವರು ಮತ್ತೊಬ್ಬ ಕೈದಿ ಆಂಡ್ರ್ಯೂಸ್ ಎಂಬಾತನಿಗೆ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವಂತೆ ಪ್ರಚೋದಿಸಿದ್ದರು. ವಿಚಾರಣೆ ವೇಳೆ, "ಅಲೋಕ್ ಕುಮಾರ್ ಅವರು ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಮತ್ತು ಅವರನ್ನು ಸಿಲುಕಿಸಲು ನಾವು ಹೀಗೆ ಮಾಡಿದೆವು" ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಅಲೋಕ್ ಕುಮಾರ್ ಅವರು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ವಾರ್ಡನ್‌ಗಳಾದ ಶಿವಾನಂದ, ನಿರಂಜನ ಕಾಮತ್ ಮತ್ತು ಹನುಮಂತಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಹೈ-ಸೆಕ್ಯೂರಿಟಿ ಬ್ಯಾರಕ್‌ಗಳ ಒಳಗೆ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ವರದಿ ನೀಡುವಂತೆ ಜೈಲರ್‌ಗೆ ಸೂಚಿಸಲಾಗಿದೆ. ಪಿತೂರಿ ನಡೆಸಿದ ಮೂವರು ಕೈದಿಗಳನ್ನು ಸದ್ಯ ಕ್ವಾರೆಂಟೈನ್ ಸೆಲ್‌ಗಳಿಗೆ ಶಿಫ್ಟ್ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.












Click it and Unblock the Notifications