Property Tax: ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮ: ಜಿಬಿಎ
ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸ್ವತ್ತುಗಳಿಂದ ಸ್ವೀಕರಿಸಲಾಗುವ ಆಸ್ತಿ ತೆರಿಗೆಯು ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ನಿರ್ವಹಿಸಲು ಬಳಸಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025 ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿ ಆರ್ಥಿಕ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ ವಸೂಲಿ ಮಾಡುವ ವಿಧಾನವನ್ನು ಆಸ್ತಿ ತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ. ಈ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಆಸ್ತಿ ತೆರಿಗೆ ಸುಸ್ತಿದಾರರಿಗೆ ಕಾರಣ ಕೇಳಿ ಪತ್ರ ಹಾಗೂ ಬೇಡಿಕೆ ಪತ್ರಗಳನ್ನು ಜಾರಿಗೊಳಿಸಲಾಗಿದ್ದು, ಸುಸ್ತಿದಾರರ ವಿವರಗಳನ್ನು ಪಾಲಿಕೆಯ ಆಸ್ತಿ ತೆರಿಗೆ ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ (https://bbmptax.karnataka.gov.in ಅಂತರ್ಜಾಲದಲ್ಲಿ ವಿವರಗಳನ್ನು ವೀಕ್ಷಿಸಿ ತೆರಿಗೆ ಪಾವತಿಸಬಹುದು).

ಸಾಕಷ್ಟು ಅವಕಾಶಗಳನ್ನು ನೀಡಿದ ನಂತರವೂ ಬಾಕಿ ಉಳಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ಮೊಬೈಲ್ ಸಂದೇಶಗಳ ಮೂಲಕ ಹಾಗೂ ಸ್ವತ್ತಿನ ಸ್ಥಳದಲ್ಲೇ ಪ್ರೊಕ್ಲಮೇಷನ್ ನೋಟಿಸ್ ಜಾರಿಮಾಡಿ ತೆರಿಗೆ ಪಾವತಿಸಲು ಸೂಚಿಸಲಾಗಿದೆ. ಇದಾದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಾನುಸಾರ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ 17.02.2026, 21.02.2026 ಮತ್ತು 06.03.2026 ರಂದು ಹರಾಜು ಪ್ರಕ್ರಿಯೆ ನಡೆಸಲಾಗಿತ್ತು.
ಹರಾಜಿನಲ್ಲಿ ಮಾರಾಟವಾಗದೆ ಉಳಿದ ಒಟ್ಟು 55 ಸ್ವತ್ತುಗಳನ್ನು (ವಲಯ-1ರಲ್ಲಿ 46 ಮತ್ತು ವಲಯ-2 ರಲ್ಲಿ 9 ಸೇರಿ) ಸರ್ಕಾರದ ಮಾರ್ಗಸೂಚಿ ದರಕ್ಕೆ ನಗರ ಪಾಲಿಕೆ ಖರೀದಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶ ಜಾರಿಯಾದ ದಿನಾಂಕದಿಂದ 30 ದಿನಗಳೊಳಗಾಗಿ ಸುಸ್ತಿದಾರರು ಬಾಕಿ ಇರುವ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು. ಇಲ್ಲವಾದಲ್ಲಿ, ಮಾರ್ಗಸೂಚಿ ದರಕ್ಕೆ ನಗರ ಪಾಲಿಕೆಯ ಆಯುಕ್ತರ ಹೆಸರಿಗೆ ಕ್ರಯಪತ್ರವನ್ನು ನೋಂದಾಯಿಸಲಾಗುತ್ತದೆ. ಬಾಕಿ ಇರುವ ಆಸ್ತಿ ತೆರಿಗೆ, ಉಪಕರ, ದಂಡ, ಬಡ್ಡಿ ಮತ್ತು ಆಡಳಿತ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿದ ಮೊತ್ತವನ್ನು ಖಾತಾದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಂಬಂಧ ಯಾವುದೇ ಅಹವಾಲುಗಳಿದ್ದಲ್ಲಿ ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications