Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ
ಕನ್ನಡ ಬಿಗ್‌ಬಾಸ್ ವಿಜೇತ, ನಟ ಪ್ರಥಮ್ ಅವರು ದಿಢೀರನೆ ಬೆಂಗಳೂರು ತೊರೆದ ನಿರ್ಧಾರ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವಿನ ಇತ್ತೀಚಿನ ಗಲಾಟೆಗಳೇ ಪ್ರಥಮ್ ಅವರ ಈ ನಿರ್ಧಾರಕ್ಕೆ ಕಾರಣ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ಈ ಎಲ್ಲ ಊಹಾಪೋಹಗಳಿಗೆ ಸ್ವತಃ ಪ್ರಥಮ್ ಅವರೇ ಈಗ ತೆರೆ ಎಳೆದಿದ್ದು, ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.
"ಯಾರೋ ನಟ ಅಥವಾ ಗಲಾಟೆ ಕಾರಣವಲ್ಲ"
ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಥಮ್, "ನಾನು ಬೆಂಗಳೂರು ಬಿಟ್ಟಿದ್ದೇನೆ ಎಂದಲ್ಲ, ಆದರೆ ಬೆಂಗಳೂರು ನನಗೆ ಸಾಕು ಎನಿಸಿತು. ಯಾರೋ ಒಬ್ಬ ನಟ ಅಥವಾ ಇನ್ಯಾವುದೋ ಗಲಾಟೆಗಾಗಿ ನಾನು ಈ ನಿರ್ಧಾರ ತಗೊಂಡೆ ಎಂದು ಜನ ಭಾವಿಸಿದ್ದಾರೆ, ಆದರೆ ಅದು ಸುಳ್ಳು. ಏನೂ ಇಲ್ಲದ ನನಗೆ ಬಿಗ್ ಬಾಸ್ ಗೆಲ್ಲಿಸಿ, ಆರು ಸಿನಿಮಾಗಳಲ್ಲಿ ಹೀರೋ ಮಾಡಿದ್ದೀರಿ. ಇದಕ್ಕಿಂತ ಹೆಚ್ಚು ನಾನು ಏನನ್ನು ಆಸೆ ಪಡಲು ಸಾಧ್ಯ?" ಎಂದಿದ್ದಾರೆ ಪ್ರಥಮ್.

ತಮ್ಮ ನಟನಾ ಕೌಶಲದ ಬಗ್ಗೆಯೂ ವಿನಮ್ರವಾಗಿ ಮಾತನಾಡಿರುವ ಅವರು, "ನಾನೇನು ಆಸ್ಕರ್ ಪಡೆಯುವಂತಹ ಅದ್ಭುತ ಕಲಾವಿದನಾ? ಬೆಂಗಳೂರಿನಲ್ಲಿ ನನಗಿಂತಲೂ ಎಷ್ಟೋ ಪಟ್ಟು ಹೆಚ್ಚು ಪ್ರತಿಭಾವಂತ ನಟರಿದ್ದಾರೆ. ನನಗೆ ಸಿಕ್ಕಿರುವ ಯಶಸ್ಸು ಸದ್ಯಕ್ಕೆ ಸಾಕು. ಬಿಗ್‌ಬಾಸ್ ಆಯ್ತು, ಡಿಕೆಡಿ ಆಯ್ತು, ಸಿನಿಮಾಗಳೂ ಆದವು, ಅವಾರ್ಡ್‌ಗಳೂ ಬಂದವು. ಇಷ್ಟೆಲ್ಲ ಸಿಕ್ಕ ಮೇಲೆ ಇನ್ನೇನು ಬೇಕು?" ಎಂದಿದ್ದಾರೆ.
ಚಿತ್ರರಂಗದ ಇಂದಿನ ಪರಿಸ್ಥಿತಿಗೆ ಬೇಸರ
ಸಿನಿಮಾ ಬಿಡಲು ಅಥವಾ ದೂರ ಸರಿಯಲು ಪ್ರಮುಖ ಕಾರಣ ಚಿತ್ರಮಂದಿರದ ಸ್ಥಿತಿ ಎನ್ನುತ್ತಾರೆ ಪ್ರಥಮ್. "ಈಗ ಮೊದಲಿನಂತೆ ಸಿನಿಮಾಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಥಿಯೇಟರ್‌ಗೆ ಜನರು ಬರುತ್ತಿಲ್ಲ. ಅಂತಹ ಚಿತ್ರಗಳನ್ನು ಆಯ್ಕೆ ಮಾಡುವುದೂ ಕಷ್ಟವಾಗುತ್ತಿದೆ" ಎಂದು ಚಿತ್ರೋದ್ಯಮದ ಇಂದಿನ ಸವಾಲುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ಧುರಂಧರ್' ಸಕ್ಸಸ್ ಮತ್ತು ಜನರ ಮನಸ್ಥಿತಿ
ತಮ್ಮ ಇತ್ತೀಚಿನ 'ಧುರಂಧರ್' ಸಿನಿಮಾ ಗೆದ್ದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಥಮ್, ಸಮಾಜದ ಕೆಲವು ವಿಪರ್ಯಾಸಗಳ ಬಗ್ಗೆ ಕಿಡಿಕಾರಿದ್ದಾರೆ. "ಧುರಂಧರ್ ಸಿನಿಮಾ ಪಾಕಿಸ್ತಾನಕ್ಕೆ ಬೇಜಾರಾಗುವಂತಹ ಸಿನಿಮಾ. ನಮ್ಮ ಭಾರತೀಯ ಸಿನಿಮಾ ಗೆದ್ದಿದ್ದಕ್ಕೆ ಪೋಸ್ಟ್ ಹಾಕಿದರೆ ಇಲ್ಲೂ ಕೆಲವರಿಗೆ ನೋವಾಗುತ್ತದೆ ಎಂದರೆ ಜನರ ಮನಸ್ಥಿತಿ ಹೇಗಿದೆ ಅರ್ಥ ಮಾಡಿಕೊಳ್ಳಿ. ಗಾಜಿನ ಮನೆಯಲ್ಲಿರುವ ನಮಗೆ ಕಲ್ಲು ಹೊಡೆಯುವವರು ತುಂಬಾ ಜನ ಇರುತ್ತಾರೆ. ಇಂತಹವರ ನಡುವೆ ಬದುಕುವುದು ಕಷ್ಟ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಯಾವುದೇ ವ್ಯಕ್ತಿಯ ಅಥವಾ ಗಲಾಟೆಯ ಭಯದಿಂದ ಪ್ರಥಮ್ ಬೆಂಗಳೂರು ಬಿಟ್ಟಿಲ್ಲ. ಬದಲಿಗೆ ತೃಪ್ತಿಯ ಭಾವ ಹಾಗೂ ಬದಲಾದ ಸನ್ನಿವೇಶಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಪ್ರಥಮ್ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications