• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಿಚುಂಚನಗಿರಿಯ ನೆತ್ತಿಯಲ್ಲಿ ಪುಣ್ಯಧಾಮ...

By Staff
|

ಆದಿಚುಂಚನಗಿರಿಯ ನೆತ್ತಿಯಲ್ಲಿ ಪುಣ್ಯಧಾಮ...

ಜಾತಿ ಧರ್ಮ ವರ್ಗಗಳನ್ನು ಮೀರಿ ಮಾನವ ಕಲ್ಯಾಣಕ್ಕಾಗಿ ದುಡಿಯುವ ಧರ್ಮಗುರುಗಳು ವಿರಳ. ಅಂಥವರಲ್ಲಿ ಮಕುಟಮಣಿಗಳಾಗಿರುವವರು ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಎಂದರೆ ಅತಿಶಯೋಕ್ತಿಯಲ್ಲ. ಈ ಪುಣ್ಯ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳು ಮುಂದುವರೆದಿವೆ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
ಪುರಾಣ ಪ್ರಸಿದ್ಧವೂ, ಪವಿತ್ರವೂ ಆದ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಮೈಸೂರಿನಿಂದ ತುಮಕೂರಿಗೆ ಹೋಗುವಾಗ ದಾರಿಯಲ್ಲಿರುವ ಬೆಳ್ಳೂರಿಂದ (ಬಿ.ಎಂ.ಶ್ರೀ.ಯವರ ಹುಟ್ಟೂರು) ಎರಡು ಮೈಲು ದೂರದಲ್ಲಿ ಚುಂಚನಗಿರಿಯ ತಪ್ಪಲು ಇದೆ.

ಪ್ರಕೃತಿಯ ಮಡಿಲಲ್ಲಿರುವ, ಹಸಿರು ಗಿಡಗಳಿಂದ ಕಂಗೊಳಿಸುವವ ರಮಣೀಯ ಕ್ಷೇತ್ರವಿದು. ಇದರ ಸುತ್ತಲೂ ಪುಣ್ಯಕ್ಷೇತ್ರಗಳೇ ಇವೆ. ಶ್ರವಣ ಬೆಳ್ಗೊಳದ ಗೊಮ್ಮಟೇಶ್ವರ ಕ್ಷೇತ್ರ, ಎಡೆಯೂರ ಸಿದ್ಧಲಿಂಗೇಶ್ವರ ಕ್ಷೇತ್ರ, ಮೇಲುಕೋಟೆಯ ಚೆಲುವರಾಯಸ್ವಾಮಿಯ ಕ್ಷೇತ್ರ, ಹಾಲ್ತಿಯ ಪರಶುರಾಮ ಕ್ಷೇತ್ರ - ಇವುಗಳ ಮಧ್ಯದಲ್ಲಿ ಇರುವುದು ಶ್ರೀ ಭೈರವೇಶ್ವರನ ಆದಿ ಚುಂಚನಗಿರಿಯ ಪಾವನ ಕ್ಷೇತ್ರ.

ಸಿದ್ಧಯೋಗಿಯ ಅವತಾರವನ್ನು ತಾಳಿದ ಪರಶಿವನು ಗಜಾರಣ್ಯದ ಚುಂಚುನಕಟ್ಟೆಗೆ ಬಂದು ಕಾವೇರಿಯ ತಟದಲ್ಲಿ ತಪೋಮಗ್ನನಾದನೆಂದು ಪುರಾಣದ ಕತೆ ಇದೆ. ಈ ಗಿರಿಯ ದಟ್ಟವಾದ ಅರಣ್ಯದಲ್ಲಿ ಚುಂಚ, ಕಂಚರೆಂಬ ಸೋದರ ರಾಕ್ಷಸರು ವಾಸವಾಗಿದ್ದರು. ಇವರು ಜನರಿಗೆ ಹಿಂಸೆ ಕೊಡುತ್ತಿದ್ದರು. ಶಿವನು ಅವರನ್ನು ಸಂಹರಿಸಿದ. ಚುಂಚು ವಾಸಿಸಿದ ಗಿರಿಗೆ ‘ಆದಿಚುಂಚನಗಿರಿ’ ಎಂಬ ಹೆಸರು ಬಂತು. ಜನಪದ ಸಾಹಿತ್ಯದಲ್ಲಿ ಇದರ ವರ್ಣನೆ ಇದೆ.

ಚುಂಚನಕಟ್ಟೆಯಿಂದ ಒಂದು ಘಳಿಗೆಗೆ ಬಂದು

ಪಂಚಮುಖದ ಪ್ರಧಾನಿ । ಗಂಗಾಧರ

ಗಿರಿ ಒಳ್ಳೆದೆಂದು ನೆಲೆಗೊಂಡ।।

Sri Balagangadharanatha Swamiji‘ಶ್ರೀ ಆದಿಚುಂಚನಗಿರಿ ಸ್ಥಳ ಮಹಾತ್ಮೆ’ಯ ಪ್ರಕಾರ 12 ಜನ ನಾಥರಲ್ಲಿ ಪ್ರಥಮನೂ ಶಿವಸ್ವರೂಪನೂ ಆದ ಸಿದ್ಧಯೋಗಿಯು ಸಂಚಾರ ಮಾಡುತ್ತ ಧರ್ಮವನ್ನು ಉಪದೇಶಿಸುತ್ತ ಚುಂಚನಗಿರಿಗೆ ಬಂದನಂತೆ. ಇಲ್ಲಿ ತಪಸ್ಸು ಆಚರಿಸಿದ. ಇವನನ್ನು ಕಂಡು ಸುಪ್ರೀತನಾದ ಪರಶಿವನು ಪಂಚಲಿಂಗ ಸ್ವರೂಪದಲ್ಲಿ ಆವಿರ್ಭವಿಸಿದನಂತೆ. ಸಿದ್ಧಯೋಗಿಯು ಈ ಕ್ಷೇತ್ರದಲ್ಲಿ ನೆಲಸಿ ಗಂಗಾಧರೇಶ್ವರ ದೇವಾಲಯ ಕಟ್ಟಿಸಿದ. ನಂತರ ಲೋಕವ್ಯವಹಾರ ತ್ಯಜಿಸಿ, ತಪಸ್ಸಿಗೆ ಹೊರಡುವಾಗ ಕರ್ಮನಾಥನಿಗೆ ಸಿದ್ಧ ಸಿಂಹಾಸನವನ್ನು ವಹಿಸಿದನು ಎಂದು ಕತೆಯಿದೆ. ಆದಿಚುಂಚನಗಿರಿ ಮಠಕ್ಕೆ ಧರ್ಮಗುರುಗಳ ಪರಂಪರೆ ಇದೆ. ಈ ಶಕ್ತಿಪೀಠದ 71ನೆಯ ಗುರುಗಳೇ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು.

ಕ್ಷೇತ್ರ ಪರಿಚಯ :

ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಕಂಬದಮ್ಮ (ಇಲ್ಲಿ ಆದಿಶಕ್ತಿ ಸ್ಥಂಬರೂಪದಲ್ಲಿ ನೆಲೆಸಿದ್ದಾಳೆಂದು ಪ್ರತೀತಿ ಇದೆ), ಬಿಂದು ಸರೋವರ (ಮಠದ ದಕ್ಷಿಣಕ್ಕಿರುವ ಸರೋವರ- ಇಲ್ಲಿ ಗಂಗೆಯ ವಾಸವಿದೆ), ಕಾಲಭೈರವೇಶ್ವರ ಸ್ವಾಮಿಯ ದೇವಾಲಯ, ಶ್ರೀ ಜ್ವಾಲಾಪೀಠ ( ಶಿವನು ತಪಸ್ಸಿಗೆ ಕುಳಿತ ಪವಿತ್ರ ಸ್ಥಳ, ಇದುವೆ ಆದಿಚುಂಚನಗಿರಿಯ ಪೀಠ), ಪಂಚಲಿಂಗಗಳು (ಗಂಗಾಧರೇಶ್ವರ, ಕತ್ತಲೆ ಸೋಮೇಶ್ವರ, ಚಂದ್ರಮೌಳೀಶ್ವರ, ಗವಿಸಿದ್ಧೇಶ್ವರ ಮತ್ತು ಮಲ್ಲೇಶ್ವರ) ಇವೆ.

ಇದಕ್ಕೆ ದಕ್ಷಿಣಕಾಶಿ ಎಂಬ ಹೆಸರೂ ಇದೆ. ಚುಂಚನಗಿರಿಗೆ ದಕ್ಷಿಣೋತ್ತರವಾಗಿ ಎರಡು ಶಿಖರಗಳಿವೆ (ಶ್ರೀ ಆಕಾಶಭೈರವ ಮತ್ತು ಚೇಳೂರಕಂಬ). ಅನ್ನಪೂರ್ಣೇಶ್ವರಿಯ ವಿಗ್ರಹವು ಜ್ವಾಲಾಪೀಠದ ಹಿಂಭಾಗದಲ್ಲಿದೆ. ಜಗಜ್ಜನನಿ ಪಾರ್ವತಿಯು ಶ್ರೀ ಅನ್ನಪೂರ್ಣೇಶ್ವರಿಯಾಗಿ ಶ್ರೀಕ್ಷೇತ್ರದಲ್ಲಿ ನೆಲೆಸಿರುವುದರಿಂದ ಈ ಮಠಕ್ಕೆ ‘ಅನ್ನದಾನಿ ಮಠ’ ಎಂಬ ಪರ್ಯಾಯನಾಮವೂ ಬಂದಿದೆ.

ಹಳೆಬೀಡಿನ ಬಲ್ಲಾಳರಾಯ, ಸಾಳ್ವ ನರಸಿಂಹರಾಜ ಒಡೆಯರು ಚುಂಚನಗಿರಿಯ ಭಕ್ತರಾಗಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಿದೆಯಂತೆ. ಚೋಳರು, ಹೊಯ್ಸಳರು, ಬಲ್ಲಾಳರು, ವಿಜಯನಗರದ ಅರಸುಮನೆತನದವರು ಯಲಹಂಕ ಪ್ರಭುಗಳು ಮೊದಲಾದವರು ಶ್ರೀ ಕ್ಷೇತ್ರಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು ಎಂದು ತಿಳಿದುಬರುತ್ತದೆ.

ಹಿನ್ನೆಲೆ :

ಹೊಯ್ಸಳರಾಜನಾದ ವೀರ ನರಸಿಂಹದೇವರು, ಯಲಹಂಕನಾಡ ಪ್ರಭುಗಳು ಶ್ರೀ ಕ್ಷೇತ್ರದ ಭೈರವೇಶ್ವರನಿಗೆ ದತ್ತಿ ಕೊಟ್ಟಿದ್ದರಂತೆ. ಶ್ರೀ ಕ್ಷೇತ್ರವು ನಾಥ ಸಂಪ್ರದಾಯವನ್ನು (ಮತ್ಸೇಂದ್ರನಾಥ, ಗೋರಖನಾಥರ ಸಂಪ್ರದಾಯ) ಅಂಗೀಕರಿಸಿದ ಕಾಲದಿಂದ, ಎಂದರೆ 1400 ವರ್ಷಗಳ ಹಿಂದಿನಿಂದ ಶೈವ ಕ್ಷೇತ್ರವಾಗಿತ್ತು ಎಂದು ಹೇಳಲಾಗುತ್ತದೆ.

1924ರಲ್ಲಿ ಶ್ರೀಮಠವು ಒಕ್ಕಲಿಗ ಸಮುದಾಯಕ್ಕೆ ಸೇರಿತು. 1928ರಲ್ಲಿ ಇಲ್ಲಿಯ ಭಕ್ತರೆಲ್ಲ ಸೇರಿ ಪಾಂಡುಪುರದ ಸಮೀಪದ ದರಸಗುಪ್ಪೆ ಗ್ರಾಮದ ಗುರು ರಾಮಯ್ಯ ಅವರನ್ನು ಭಕ್ತನಾಥಸ್ವಾಮಿಗಳೆಂಬ ನಾಮಧೇಯವನ್ನಿತ್ತು ಪೀಠಾಧಿಪತಿಗಳನ್ನಾಗಿಸಿದರು. ಇದಕ್ಕೆ ಆಗಿನ ಮೈಸೂರು ಶ್ರೀಮನ್ಮಹಾರಾಜರು ಅಂಗೀಕಾರವನ್ನಿತ್ತಿದ್ದರಂತೆ. ಪ್ರಥಮ ಸ್ವಾಮಿಗಳು ನಲವತ್ತು ವರ್ಷಗಳಕಾಲ ಪೀಠವನ್ನಾಳಿದರು. ಅವರು 1967ರಲ್ಲಿ ವಿದ್ವಾಂಸರಾದ ಶ್ರೀ ಚಂದ್ರಶೇಖರಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿ ಎಂದು ಆಯ್ಕೆ ಮಾಡಿದರು.

ಎರಡನೆಯ ಸ್ವಾಮಿಗಳು ಮಠದಲ್ಲಿ ಮಾಧ್ಯಮಿಕ ಶಾಲೆಯನ್ನು ಹಾಗೂ ಉಚಿತ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಇವರ ನಂತರ ರಾಮಾನಂದ ಸ್ವಾಮಿಗಳು ಮೂರನೆಯ ಪೀಠಾಧಿಪತಿಗಳಾದರು. ಅವರು 1974ರಲ್ಲಿ ಶಿವೈಕ್ಯರಾದರು. ಅತ್ಯಂತ ಮೇಧಾವಿ, ಕಾರಣಪುರುಷ, ಕರ್ಮಯೋಗಿ ಆದ ಶಿಷ್ಯ ತಮ್ಮ ಉತ್ತರಾಧಿಕಾರಿ ಆಗಬೇಕು ಎಂದು ತಮ್ಮ ‘ವಿಲ್‌’ನಲ್ಲಿ ಬರೆದಿಟ್ಟಿದ್ದರು.

ಆದಿಚುಂಚನಗಿರಿ ಮಠದ ಪರಮ ಭಕ್ತರಾದ ಸುಭೇದಾರ ಮನೆತನದ ಶ್ರೀ ಚಿಕ್ಕಲಿಂಗಪ್ಪ ಮತ್ತು ಶ್ರೀಮತಿ ಬೋರಮ್ಮ ಅವರಿಗೆ ಆರು ಮಕ್ಕಳು. ಗಂಗಾಧರೇಶ್ವರನ ಹರಕೆಹೊತ್ತು ಪಡೆದ ಗಂಡು ಮಗು ಜನಿಸಿದ್ದು 18-1-1945 ಗುರುವಾರ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ. ದೇವ ಗಂಗಾಧರನ ಕೃಪೆಯಿಂದ ಜನಿಸಿದ ಮಗುವಿನ ನಾಮಕರಣ ಮಾಡಿದ್ದು ಗಂಗಾಧರಯ್ಯ ಎಂದು. ಅವರ ತಾತ ತಿಮ್ಮೇಗೌಡರಿಗೆ ಜ್ಯೋತಿಷ್ಯದಲ್ಲಿ ಗತಿ ಇತ್ತು.

ಜಾತಕ ನೋಡುವುದಕ್ಕಿಂತ ಮೊದಲು, ಮಗುವಿನ ಮುಖದರ್ಶನದಿಂದಲೇ ಹೇಳಿಬಿಟ್ಟರು, ‘ಈ ಮಗು ಸಾಮಾನ್ಯನಲ್ಲ, ಕಾರಣ ಪುರುಷನಾಗಲಿರುವವ, ಪೀಠಾಧಿಪತಿಯಾಗುವ, ಜಗದ್ಗುರು ಆಗುವ’ ಎಂದು. ಮಗು ಆದರ್ಶ ವಿದ್ಯಾರ್ಥಿಯಾಗಿ, ಶಿಕ್ಷಕರ ಕಣ್ಮಣಿಯಾಗಿ, ಸ್ನೇಹಿತರ ಆಪದ್ಬಾಂಧವನಾಗಿ, ಅಭ್ಯಾಸದಷ್ಟೇ ಆಟಪಾಟಗಳಲ್ಲಿ ಆಸಕ್ತನಾಗಿ, ರಾಷ್ಟ್ರಪ್ರೇಮದೊಂದಿಗೆ ದೈವಭಕ್ತಿಯಲ್ಲಿ ನಿಸ್ಸೀಮನಾಗಿ ಬೆಳೆದ. ತಾತನಿಂದಾಗಿ ಲೌಕಿಕ ವ್ಯವಹಾರ, ಅಧ್ಯಾತ್ಮಿಕ ಚಿಂತನೆ ಜೊತೆಗೆ ಜ್ಯೋತಿಷ್ಯ ಹಾಗೂ ವೈದ್ಯಕೀಯ ವಿಷಯಗಳಲ್ಲಿ ಆಸಕ್ತಿ ಪಡೆದ.

ಬಿ.ಎಸ್ಸಿ., ಪದವೀಧರನಾದ. ಇವನ ಗುಣಗಳನ್ನು ಗುರುತಿಸಿದ ಆದಿಚುಂಚನಗಿರಿಯ 70ನೆಯ ಮಹಾಸ್ವಾಮಿಗಳಾದ ಶ್ರೀಶ್ರೀ ರಾಮಾನಂದರು ಗಂಗಾಧರಯ್ಯನಿಗೆ ಸನ್ಯಾಸ ದೀಕ್ಷೆ ನೀಡಿ ‘ಶ್ರೀ ಬಾಲಗಂಗಾಧರನಾಥ’ ಎಂಬ ಹೊಸ ಅಭಿಧಾನವನ್ನು ನೀಡಿದರು. ಬೆಂಗಳೂರಿನ ಕೈಲಾಸಾಶ್ರಮಕ್ಕೆ ಕಳಿಸಿದರು. ನಂತರ ಸಂಸ್ಕೃತ ಶಿಕ್ಷಣವನ್ನು ಪಡೆಯಲು ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸರ್ಕಾರಿ ಸಂಸ್ಕೃತ ಮಹಾಪಾಠಶಾಲೆಗೆ ಕಳಿಸಿದರು. ಇವರೇ ಉತ್ತರಾಧಿಕಾರಿಯಾಗಬೇಕೆಂದು ಶ್ರೀಗಳು ಬರೆದಿಟ್ಟಿದ್ದರು. ಶ್ರೀಗಳ ಆಸೆಯಂತೆ 14-9-1974ರ ಶುಭ ಮುಹೂರ್ತದಂದು ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಆದಿಚುಂಚನಗಿರಿ ಶಕ್ತಿಪೀಠವನ್ನು ಅಲಂಕರಿಸಿದರು, 71ನೆಯ ಪೀಠಾಧಿಪತಿಗಳಾದರು.

ಬಾಲಗಂಗಾಧರರ ಸಮಾಜ ಮುಖಿ ಕೆಲಸಗಳು :

ಶ್ರೀಗಳು ಪೀಠವನ್ನೇರಿದಾಗ ಮಠವು ಸುಸ್ಥಿತಿಯಲ್ಲಿರಲಿಲ್ಲ. ಆಶ್ರಮದ ವಿದ್ಯಾರ್ಥಿಗಳಿಗೆ, ಭಕ್ತರಿಗೆ ಪ್ರಸಾದ ನೀಡುವುದೂ ಕಷ್ಟಕರವಾಗಿತ್ತು. ಅನಾದಿಕಾಲದಿಂದ ನಡೆದುಬಂದ ಅನ್ನದಾನ ಹಾಗೂ ದಾಸೋಹವನ್ನು ಮುನ್ನಡೆಸುವ ಜವಾಬ್ದಾರಿ ಇವರದಾಗಿತ್ತು. ಗುರುಗಳು ಬೇಸಾಯದ ಕಡೆಗೆ ತಮ್ಮ ಲಕ್ಷ್ಯವನ್ನು ಹರಿಸಿದರು. ತಾವೇ ಹೊಲದಲ್ಲಿ ರೈತರಂತೆ ದುಡಿಯತೊಡಗಿದರು. ತಾವೇ ಕರ್ಮಯೋಗಿಗಳಾದರು, ನೇಗಿಲಯೋಗಿಗಳಾದರು. ‘ಕರ್ಮತ್ಯಾಗವು ಸನ್ಯಾಸವಲ್ಲ, ಕರ್ಮಫಲತ್ಯಾಗವೇ ನಿಜವಾದ ಸನ್ಯಾಸ’ ಎಂಬುದನ್ನು ತೋರಿಸಿದರು. ಮಠದ ಪ್ರಗತಿ ನಾಗಾಲೋಟ ಪಡೆಯಿತು.

ಶ್ರೀಗಳು ಶಕ್ತಿಪೀಠದ ಸಿಂಹಾಸನವನ್ನೇರಿ ಮೂರು ದಶಕಗಳಾಗಿವೆ. ಮಠದ ಇತಿಹಾಸದಲ್ಲಿ ಇದು ಸುವರ್ಣಯುಗ. ಇಂದು ಆಶ್ರಮದಲ್ಲಿ ಸರಸ್ವತಿ, ಲಕ್ಷ್ಮಿ, ಅನ್ನಪೂರ್ಣೇಶ್ವರಿ, ಮೂವರೂ ಜೊತೆಜೊತೆಯಾಗಿ ವಾಸಿಸತೊಡಗಿದ್ದಾರೆ. ವಿದ್ಯೆಯ ಅವಶ್ಯಕತೆಯನ್ನು ಅರಿತ ಶ್ರೀಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಾಡಿನ ಮೂಲೆಮೂಲೆಗಳಲ್ಲಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.

ಶಿಶುವಿಹಾರದಿಂದ ಹಿಡಿದು ಕಲಾ-ವಿಜ್ಞಾನ-ವಾಣಿಜ್ಯ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವರೆಗೆ- ತಾಂತ್ರಿಕ, ವೈದ್ಯಕೀಯ ವಿದ್ಯಾಲಯಗಳಿಂದ ಹಿಡಿದು ಜೈವಿಕ ವಿಜ್ಞಾನ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆಯವರೆಗೆ- ಸುಮಾರು 380 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. 50 ಸಾವಿರ ವಿದ್ಯಾರ್ಥಿಗಳು ಈ ಸಂಸ್ಥೆಗಳ ಲಾಭ ಪಡೆಯುತ್ತಿದ್ದಾರೆ. 6 ಸಾವಿರ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಡನೆ ಉಚಿತ ಊಟ ವಸತಿಯ ಸೌಕರ್ಯ ಲಭ್ಯವಿದೆ. ಇದೊಂದು ವಿದ್ಯಾಕ್ಷೇತ್ರದಲ್ಲಿಯ ವಿನೂತನ ಕ್ರಾಂತಿ, ಅನುಪಮ ವಿಕ್ರಮ!

ಪಾಶ್ಚಾತ್ಯ ಸಂಸ್ಕೃತಿಯ ಪ್ರವಾಹದಲ್ಲಿ ಕೊಚ್ಚಿಹೋದ ಅನಿವಾಸಿ ಭಾರತೀಯರಿಗೆ ನಮ್ಮ ಸಂಸ್ಕೃತಿಯ ಗಂಗಾಪ್ರವಾಹಕ್ಕೆ ಮರಳಿ ತಂದಿದ್ದಾರೆ. ಹಲವಾರು ಸಲ ವಿದೇಶ ಸಂಚಾರ ಕೈಕೊಂಡಿದ್ದಾರೆ. ಮಲಯ, ಸಿಂಗಾಪುರ, ಜಪಾನ್‌, ಜರ್ಮನಿ, ಇಂಗ್ಲೆಂಡ್‌, ಉತ್ತರ ಅಮೆರಿಕಾ, ಕೆನಡಾಗಳನ್ನು ಸಂದರ್ಶಿಸಿ ಅಲ್ಲಿಯ ಭಕ್ತರನ್ನು ಅಯಸ್ಕಾಂತದಂತೆ ತಮ್ಮೆಡೆಗೆ ಎಳೆದಿದ್ದಾರೆ. ಭಕ್ತರಿಂದ ‘ಅಭಿನವ ವಿವೇಕಾನಂದ’ ಎಂದು ಕರೆಸಿಕೊಂಡಿದ್ದಾರೆ. ಸದಾ ಪರ್ಯಟನದಲ್ಲಿ ತೊಡಗಿದ ಸ್ವಾಮಿಗಳು ನಿಜವಾಗಿಯೂ ಪರಿವ್ರಾಜಕರು, ತಟ್ಟಿದ ನೆಲವನ್ನು ಪಾವನಗೊಳಿಸುವಂತಹ ಆತ್ಮತೇಜ ಪಡೆದವರು.

ಕನ್ನಡದ ಕಣ್ವ ಎಂದೇ ಪ್ರಸಿದ್ಧರಾದ ಬಿ.ಎಂ.ಶ್ರೀ. ಅವರ ಜನ್ಮಶತಮಾನೋತ್ಸವದಲ್ಲಿ ಶ್ರೀಗಳು ಮುಂದಾಗಿ ಅದನ್ನು ಅವಿಸ್ಮರಣೀಯಗೊಳಿಸಿದರು. ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಲನ ನಡೆಸಲು ಸಹಾಯಮಾಡಿದರು. ಪ್ರತಿ ವರ್ಷ ಸಪ್ಟಂಬರ್‌ ತಿಂಗಳಲ್ಲಿ(ತಮ್ಮ ಪೀಠಾರೋಹಣದ ತಿಂಗಳು) ‘ಜನಪದ ಮೇಳ’ ನಡೆಸುತ್ತ ಬಂದಿದ್ದಾರೆ. ಸಂಸ್ಕೃತ ಭಾಷೆಯನ್ನು ಪ್ರೋತ್ಸಾಹಿಸಲು ಸಂಸ್ಕೃತ ಕಾಲೇಜನ್ನೇ ಸ್ಥಾಪಿಸಿದ ಕೀರ್ತಿ ಇವರದು. ಕರ್ನಾಟಕ ಸಂಸ್ಕೃತ ಪರಿಷತ್ತನ್ನು ಪ್ರೋತ್ಸಾಹಿಸಿ ‘ಸಂಸ್ಕೃತ ಸಮ್ಮೇಲನ’ ನಡೆಸಲು ಸಹಾಯ ಮಾಡಿದರು.

ಶ್ರೀಗಳ ಸಾಧನೆಯ ಬಗ್ಗೆ ಸ್ವಲ್ಪದಲ್ಲಿ ಬರೆಯುವುದು ಅಸಾಧ್ಯ, ಕರಿಯನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನದಂತೆ ಕಷ್ಟಕರ. ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಅರಿತ ಶ್ರೀಗಳು ಅಖಿಲ ಭಾರತ ಪ್ರಕೃತಿ ಚಿಕಿತ್ಸಾ ಸಮ್ಮೇಲನ ಕರೆಯಲು ಪ್ರೋತ್ಸಾಹಿಸಿದರು (1998).

ಉತ್ತರ ಭಾರತದಂತೆ ಕುಂಭ ಮೇಳವನ್ನು ದಕ್ಷಿಣದಲ್ಲಿ ಆಯೋಜಿಸಲು ಮುಂದಾದರು( ಟಿ ನರಸೀಪುರ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ 2001ರಲ್ಲಿ ಪ್ರಥಮ ಕುಂಭಮೇಳ ಆಯೋಜಿಸಿದರು). ವೃದ್ಧಾಶ್ರಮ ಸ್ಥಾಪಿಸಿದ್ದಾರೆ. ಮಹಿಳಾ ಸೇವಾಶ್ರಮ ಸ್ಥಾಪಿಸಿದ್ದಾರೆ. ಜನರ ಆರೋಗ್ಯ ತಪಾಸಣಾ ಉಚಿತ ಕೇಂದ್ರ ತೆರೆದಿದ್ದಾರೆ. ಜನಜಾಗೃತಿ ಶಿಬಿರ ನಡೆಸಿದ್ದಾರೆ. 5 ಕೋಟಿ ಸಸಿಗಳನ್ನು ನೆಡುವ ಅಭೂತಪೂರ್ವ ಯೋಜನೆಯನ್ನು ರೂಪಿಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಹೊಯ್ಸಳ ಶೈಲಿಯ ಭವ್ಯವಾದ 4 ಗೋಪುರಗಳುಳ್ಳ ಭೈರವೇಶ್ವರ ದೇವಾಲಯವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಜಾತಿ ಧರ್ಮ ವರ್ಗಗಳನ್ನು ಮೀರಿ ಮಾನವ ಕಲ್ಯಾಣಕ್ಕಾಗಿ ದುಡಿಯುವ ಧರ್ಮಗುರುಗಳು ವಿರಳ. ಅಂಥವರಲ್ಲಿ ಮಕುಟಮಣಿಗಳಾಗಿರುವವರು ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಎಂದರೆ ಅತಿಶಯೋಕ್ತಿಯಲ್ಲ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more