• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 3

By Staff
|

*ಡಾ.‘ಜೀವಿ’ ಕುಲಕರ್ಣಿ

ವಿಶ್ವ ಕನ್ನಡ ಸಮ್ಮೇಳನಕ್ಕೆ ಶ್ರೇಷ್ಠ ಸಾಹಿತಿಗಳ ಕರೆಸದಿದ್ದರೆ ಹೇಗೆ ?

Nisar Ahmed speaking at World Kannada Conference, Detraoitಮೊದಲನೆಯ ಸಮ್ಮೇಳನದೊಂದಿಗೆ ಈ ಸಲದ ಸಮ್ಮೇಳನವನ್ನು ಹೋಲಿಸಬಾರದು. ಆದರೆ, ಕೆಲವೆಡೆ ಅನಿವಾರ್ಯದಿಂದ ಹೋಲಿಸಬೇಕಾಗುತ್ತದೆ. ಎರಡನೆಯ ಸಮ್ಮೇಳನದ ಆಯೋಜಕರಿಗೆ ಮೊದಲಿನವರಿಗಿಂತ ಹೆಚ್ಚಿನ ಉತ್ಸಾಹವಿತ್ತು ಆದರೆ ಅವರಲ್ಲಿದ್ದ ಪ್ರತಿಬದ್ಧತೆಯಾಗಲೀ ದೈವೀ ಅನುಕೂಲತೆಯಾಗಲೀ ದೊರೆಯಲಿಲ್ಲ.

ಮೊದಲನೆಯ ಸಮ್ಮೇಳನಕ್ಕೆ 80 ಕಲಾವಿದರ ತಂಡವನ್ನು ಕರ್ನಾಟಕ ಸರಕಾರ ಕಳಿಸಿತ್ತು. ಈ ಸಲ ಕಳಿಸಲಿಲ್ಲ. ಕಾರಣ ಸಮ್ಮೇಳನಕ್ಕೆ ಬರಲು(ಸರಕಾರದ ಖರ್ಚಿನಿಂದ) ಬಹಳ ಜನ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದರು. ರೋಸಿಹೋದ ಮುಖ್ಯ ಮಂತ್ರಿಗಳು ಒಂದು ಪ್ರೆಸ್‌-ಸ್ಟೇಟ್‌ಮೆಂಟ್‌ ನೀಡಿದ್ದರು. ‘ಈ ಸಲ ಯಾರನ್ನೂ ಸರಕಾರದ ವತಿಯಿಂದ ಕಳಿಸುವುದಿಲ್ಲ’ ಎಂದು. ತಾವು ಹಾಗೂ ಕನ್ನಡ ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಮಾತ್ರ ಹೋಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಸಲ ತಾವು ಬರಲಿಲ್ಲ (ಬಹುಶಃ ವೀರಪ್ಪನ್‌ನ ಕುಚೋದ್ಯದಿಂದಾಗಿ) ರಾಣಿ ಸತೀಶ್‌ ಮತ್ತು ಕೆಲ ಅಧಿಕಾರಿಗಳು ಬಂದರು.

ಕಳೆದ ಸಲದ ಸಮ್ಮೇಳನವನ್ನು ಕಂಡವರಿಗೆ ಎರಡರ ಕಾರ್ಯಕ್ರಮಗಳಲ್ಲಿ ಅಜಗಜಾಂತರ ಅಂತರ ಕಂಡರೆ ಅಚ್ಚರಿಯಿಲ್ಲ. ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಜ್ಞಾನಪೀಠ ಪ್ರಶಸ್ತಿ ಪಡೆದ 7 ಜನರಲ್ಲಿ ಇಬ್ಬರು (ಅನಂತಮೂರ್ತಿ, ಕಾರ್ನಾಡ್‌) ಆಮಂತ್ರಿತರಾಗಿದ್ದರು. ಇಬ್ಬರೂ ಕನ್ನಡದಲ್ಲಿ (ಅಲ್ಲ, ಒಬ್ಬರು ಇಂಗ್ಲೀಷಿನಲ್ಲಿ) ಭಾಷಣಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಲ ಮುಖ್ಯ ಅತಿಥಿಯಾಗಿದ್ದ ಧೀಮಂತ ಕವಿ ನಿಸಾರ್‌ ಅಹಮದ್‌ ಅವರನ್ನು ಕರ್ನಾಟಕ ಸರ್ಕಾರವಾಗಲಿ, ಸಮ್ಮೇಳನದ ಆಯೋಜಕರಾಗಲಿ ಕರೆಸಿರಲಿಲ್ಲ. ನಾಲ್ಕು ಜನ ಕನ್ನಡಾಭಿಮಾನಿಗಳು ಸ್ಪಾನ್ಸರ್‌ ಮಾಡಿದ್ದರು ಎಂಬ ವಿಷಯ ಕವಿ ನಿಸಾರರ ಭಾಷಣದಿಂದ ಅರಿತಾಗ ಅನೇಕ ಕನ್ನಡಾಭಿಮಾನಿಗಳ ಹೃದಯದಲ್ಲಿ ಮೂಕ ವೇದನೆಯಾಯಿತು. ಸುಗ್ರಾಸ ಅನ್ನದಲ್ಲಿ ಹರಳು ಬಂದಂತಾಯಿತು.

ಇನ್ನು ಮುಂದೆ ವಿಶ್ವ ಸಮ್ಮೇಳನ ನಡೆಸುವವರು ಶ್ರೇಷ್ಠ ಸಾಹಿತಿಗಳನ್ನು, ಕಲಾವಿದರನ್ನು ಕರೆಸಿ ಸನ್ಮಾನಿಸುವ ಸತ್‌ ಸಂಪ್ರದಾಯವನ್ನು ಪ್ರಾರಂಭಿಸಬೇಕು. ಮೂರನೆಯ ವಿಶ್ವ ಸಮ್ಮೇಳನದ ಸಮಯಕ್ಕೆ ಇನ್ನೊಬ್ಬ ಕನ್ನಡಿಗನಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುವುದೆಂದು ಭಾವಿಸುವಾ. ಅವರನ್ನು ಕಳಿಸಲು ಸರಕಾರದ ಬಳಿ ಹಣವಿರದಿದ್ದರೆ, ಸಮ್ಮೇಳನದ ಆಯೋಜಕರು ತಪ್ಪದೇ ಕರೆಸಬೇಕು. ಪ್ರತಿ ವರ್ಷ ಒಬ್ಬ ಶ್ರೇಷ್ಠ ಸಾಹಿತಿಗೆ ಪಂಪ ಪ್ರಶಸ್ತಿ ದೊರೆಯುತ್ತದೆ, ಅವರನ್ನು ಕರೆಸಬೇಕು.

ಈ ಸಲದ ಸಮ್ಮೇಳನವನ್ನು ನಡೆಸಿದವರಲ್ಲಿ ‘ಅಕ್ಕ’ ಸಂಸ್ಥೆಯದೇ ಪ್ರಧಾನ ಪಾತ್ರವಿದ್ದರೂ, ಅವರೊಂದಿಗೆ ಸಕ್ರಿಯರಾಗಿ ದುಡಿದ ಮಿಶಿಗನ್‌ ಪಂಪ ಕನ್ನಡ ಕೂಟಕ್ಕೆ ಪಂಪನ ಬಗ್ಗೆ ಅಭಿಮಾನವಿದ್ದುದು ಅವರ ಮಾತಿನಲ್ಲಿ ಕಂಡುಬಂತು. ಅದು ಕೃತಿಯಲ್ಲಿ ಕಾಣಬೇಕಿದ್ದರೆ ಅವರು ಪಂಪ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿಯವರನ್ನು ಕರೆಸಬೇಕಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನು ಆಮಂತ್ರಿಸಬಹುದು. ಇದರಲ್ಲಿ ಆಳುವ ಪಕ್ಷದ ಆಯ್ಕೆ, ಚುನಾವಣೆ ಇರುವುದರಿಂದ ಇದನ್ನು ಸರಕಾರಕ್ಕೆ ಬಿಡಬಹುದು. ಆದರೆ, ಸರಕಾರ ಎಂದೊಡನೆ ‘ರಾಜಕಾರಣ’ ಬಂದುಬಿಡುತ್ತದೆ.

ಒಂದು ಉದಾಹರಣೆ ನೆನಪಾಗುತ್ತದೆ. ಮರಾಠೀ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದವರು (ಬಹುಶಃ ಕವಿ ವಸಂತ ಬಾಪಟ ಇರಬೇಕು, ಇಲ್ಲಿ ಹೆಸರು ಮುಖ್ಯವಲ್ಲ) ಶಿವಸೇನೆಯನ್ನು ಟೀಕಿಸಿದಾಗ, ಸರಕಾರದ ರಿಮೋಟ್‌ ಕಂಟ್ರೋಲ್‌ ಆದವರು ಸಮ್ಮೇಳನಕ್ಕೆ ಆರ್ಥಿಕ ಸಹಾಯ ನಿಲ್ಲಿಸಲು ಹೇಳಿದರು. ಮರಾಠಿ ಸಾಹಿತಿಗಳ ಸ್ವಾಭಿಮಾನ ಜಾಗ್ರತವಾಯಿತು. ಬೀದಿಗಿಳಿದು ಜನತೆಯಿಂದ ಹಣ ಸಂಗ್ರಹಿಸಿ ಸರಕಾರದ ಮುಖಭಂಗ ಮಾಡಿದರು. ರಾಜಕಾರಣವೇ ಹೀಗಿರುತ್ತದೆ. ಸರಕಾರ ದುರ್ಲಕ್ಷಕ್ಕೆ ಉತ್ತಮ ಉದಾಹರಣೆ ಎಂದರೆ ಕಾಂತಿಹೀನವಾಗಿ ಧಾರವಾಡದಲ್ಲಿ ತಲೆಯೆತ್ತಿ ನಿಂತಿರುವ ‘ಬೇಂದ್ರೆ ಸ್ಮಾರಕ ಭವನ’. ಕಳೆದ ಎರಡು ಮೂರು ಮುಖ್ಯಮಂತ್ರಿಗಳು ಆ ಭವನದೆಡೆಗೆ ಹಾಯ್ದಿಲ್ಲ. ಅದು ಹೋಗಲಿ, ಬೇಂದ್ರೆ ಜನ್ಮಶತಮಾನೋತ್ಸವಕ್ಕೆ ಬರಲು ಆಗಿದ್ದ ಮುಖ್ಯ ಮಂತ್ರಿಗಳಿಗೆ ಬಿಡುವಿರಲಿಲ್ಲ.

ಎರಡನೆಯ ವಿಶ್ವ ಸಮ್ಮೇಳನದ ಬಗ್ಗೆ ಬರೆಯುವಾಗ ‘ಅಕ್ಕ’ ಸಂಸ್ಥೆಯ ಬಗ್ಗೆ ನಾಲ್ಕು ಮಾತು ಬರೆಯುವದು ಅವಶ್ಯವಾಗಿದೆ. ‘ಅಕ್ಕ’ ಇದು ಲಾಭನಿರಪೇಕ್ಷ, ಶೈಕ್ಷಣಿಕ, ಭಾಷಿಕ ಹಾಗೂ ಸಾಸ್ಕೃತಿಕ ಸಂಸ್ಥೆಯಾಗಿದ್ದು ಫ್ಲೊರಿಡಾ ರಾಜ್ಯದ ‘ನಾನ್‌-ಪ್ರಾಫಿಟ್‌ ಲಾ’ಗೆ ಅನುಗುಣವಾಗಿ ರಚಿತವಾಗಿದ್ದು ಉತ್ತರ ಅಮೇರಿಕೆಯಲ್ಲಿರುವ ಕನ್ನಡಿಗರನ್ನು, ಕನ್ನಡ ಕೂಟಗಳನ್ನು ಒಂದುಗೂಡಿಸುವ, ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಕೊಳ್ಳುವ ಸಂಸ್ಥೆಯಾಗಿದೆ. ಇದರ ವಿಶ್ವಸ್ಥ ಮಂಡಲಿಯ ಸದಸ್ಯರನ್ನು, ನಿರ್ದೇಶಕರನ್ನು ಅಮೇರಿಕೆಯ ಎಲ್ಲ ಭಾಗಗಳಿಂದ ಹಾಗೂ ಕೆನೆಡಾದಿಂದ ಆರಿಸಲಾಗುತ್ತದೆ.

1998 ರಲ್ಲಿ ಅರಿರೆkೂೕನಾದ ಫೀನಿಕ್ಸ್‌ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ , ಕನ್ನಡ ಕಾರ್ಯಕ್ಕಾಗಿ ಕನ್ನಡಿಗರು ತೋರಿದ ಉತ್ಸಾಹದ ಫಲವಾಗಿ ಒಂದು ಕೇಂದ್ರ ಸಂಸ್ಥೆಯನ್ನು ಸ್ಥಾಪಿಸಲು ಒತ್ತಾಸೆ ಮೂಡಿಬಂತು. ಸಮ್ಮೇಳನದ ಕೊನೆಯ ದಿನದ ಭೂರಿಭೋಜನದ ಸಮಯ ‘ಅಕ್ಕ’ ಸಂಸ್ಥೆಯ ಬಗ್ಗೆ ಸೀತಾ ವಿ. ರಾಮಯ್ಯ ಅವರು ಘೋಷಿಸಿದರು. ಅದರ ಸಂಸ್ಥಾಪಕ ಸದಸ್ಯರು ಇಂತಿದ್ದರು: ಎಚ್‌.ಎಸ್‌.ಜಯಸ್ವಾಮಿ (ಇಲಿನಾಯ್‌), ರೇಣುಕಾ ರಾಮಪ್ಪ (ಫ್ಲೋರಿಡಾ), ಸೀತಾ ವಿ. ರಾಮಯ್ಯ (ಅರಿರೆkೂೕನಾ), ಹರೀಶ ಕುಮಾರ (ಕ್ಯಾಲಿಫೋರ್ನಿಯಾ), ಸುಪ್ರಿಯಾ ದೇಸಾಯಿ (ನಾರ್ಥ ಕ್ಯಾಲಿಫೋರ್ನಿಯಾ), ಎಚ್‌.ಕೆ.ರಾಮಚಂದ್ರ (ಅರಿರೆkೂೕನಾ), ವಿ.ಎಂ.ಕುಮಾರಸ್ವಾಮಿ (ಕ್ಯಾಲಿಫೋರ್ನಿಯಾ), ಎನ್‌.ಎಸ್‌.ಶ್ರೀನಿವಾಸ (ಪೆನ್ಸಿಲ್‌ವೇನಿಯಾ). ಅಮೇರಿಕಾ ಹಾಗೂ ಕೆನಡಾದಲ್ಲಿ ವಾಸಿಸುವ ಕನ್ನಡ ಮಾತಾಡುವ ಜನತೆ, ಫೀನಿಕ್ಸ್‌ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ (ಫೆಬ್ರುವರಿ 13-15, 1998) ಒಂದು ಕೇಂದ್ರ ಕನ್ನಡ ಸಂಸ್ಥೆ ಸ್ಥಾಪಿಸಲು ನಿರ್ಣಯಿಸಿದರು. ಅದುವೆ ಕನ್ನಡದಲ್ಲಿ ‘ಅಮೇರಿಕಾ ಕನ್ನಡ ಕೂಟಗಳ ಆಗರ’ ಎಂದು ಕರೆಯಲಾಯಿತು. ಅದರ ಸಂವಿಧಾನ(ಘಟನೆ) ಸಿದ್ಧಪಡಿಸಲಾಯಿತು. ಇದು ಅಮೇರಿಕೆಯಲ್ಲಿರುವ ಎಲ್ಲ ಕನ್ನಡ ಕೂಟಗಳ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯಾಯಿತು. ‘ಅಕ್ಕ’ದ ಧ್ಯೇಯ ಉದ್ದೇಶಗಳನ್ನು ನಿಶ್ಚಿತಗೊಳಿಸಲಾಯಿತು. ಇದರಲ್ಲಿ ಕನ್ನಡಿಗರ ಸರ್ವತೋಮುಖ ಬೆಳವಣಿಗೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಯಿತು.

‘ಅಕ್ಕ’ದ ಧ್ಯೇಯ ಉದ್ದೇಶಗಳು :

 • ಅಮೇರಿಕೆಯ ಮಹತ್ವದ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠ ಪ್ರಾರಂಭಿಸುವುದು
 • ಎಲ್ಲ ಕ ನ್ನಡ ಕೂಟಗಳು ‘ಅಕ್ಕ’ದ ಸದಸ್ಯತ್ವವನ್ನು ಹೊಂದುವಂತೆ ಪ್ರೇರೇಪಿಸುವುದು
 • ಕನ್ನಡ ಕಲಾವಿದರನ್ನು ಕರೆಸಿ ಅವರನ್ನು ಪ್ರೋತ್ಸಾಹಿಸುವುದು
 • ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಯುವಪೀಳಿಗೆಯನ್ನು ಪ್ರೇರೇಪಿಸುವುದು
 • ಅಮೇರಿಕೆಯಲ್ಲಿ ನೆಲಸಿದ ಕನ್ನಡಿಗರ ಮಕ್ಕಳಿಗೆ, ಕರ್ನಾಟಕದಲ್ಲಿ ನೆಲಸಿದ ಕನ್ನಡೇತರ ಮಕ್ಕಳಿಗೆ (ಬೇಸಿಗೆ ರಜೆಯಲ್ಲಿ) ಕನ್ನಡ ಕಲಿಸುವ ಕಾರ್ಯಕ್ರಮ ರೂಪಿಸುವುದು
 • ಕನ್ನಡ ಪುಸ್ತಕಗಳನ್ನು ಕೊಳ್ಳಲು, ತರಿಸಲು ಅನುಕೂಲತೆ ಒದಗಿಸುವುದು
 • ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನ ಬಳಸಿ ಕನ್ನಡಿಗರಿಗೆ ಸಹಾಯ ಮಾಡುವುದು
 • ಹಳ್ಳಿಗಳಲ್ಲಿ ವಾಸಿಸುವ ಯುವಕರಿಗೆ ವಿದ್ಯಾರ್ಥಿವೇತನ ನೀಡುವುದು. ಹಳ್ಳಿಗಳ ಆಧುನೀಕರಣಕ್ಕೆ ಸಹಕಾರ ನೀಡುವುದು
 • ಎರಡು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸುವುದು
 • ಯುರೋಪಿಯನ್‌, ಆಫ್ರಿಕನ್‌, ಹಿಸ್ಪ್ಯಾನಿಕ್‌ ಯಾ ಇತರ ಜನಾಂಗಗಳು ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೆಚ್ಚುವಂತೆ ಮಾಡುವುದು
 • ಅಮೇರಿಕೆಯಲ್ಲಿ ‘ಕನ್ನಡ ಭವನ’ ಸ್ಥಾಪಿಸಿ ಕರ್ನಾಟಕದೊಂದಿಗೆ ಉದ್ಯಮ, ವ್ಯಾಪಾರ ಹಾಗೂ ಸಾಂಸ್ಕೃತಿಕ ಆದಾನ-ಪ್ರದಾನ ವರ್ಧಿಸುವುದು
 • ಅಮೇರಿಕೆಗೆ ಬರುವ ಕನ್ನಡಿಗರಿಗೆ ಆರ್ಥಿಕ ಸಹಾಯ ನೀಡುವುದು ಮುಂತಾದವು...

ಹ್ಯೂಸ್ಟನ್‌ನಲ್ಲಿ ನಡೆದ ಮೊದಲನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ‘ಅಕ್ಕ’ ಸಂಸ್ಥೆ ರಥದ ಹಿಂಭಾಗದಲ್ಲಿತ್ತು. ಈ ವರುಷ ಮುಂಚೂಣಿಯಲ್ಲಿದೆ, ಎಲ್ಲ ಸೂತ್ರ ತಾನೇ ವಹಿಸಿಕೊಂಡಿದೆ. ಈ ವರುಷದ ಕಾರ್ಯಕ್ರಮದಲ್ಲಿ ಸ್ಥಳೀಯ ಪಂಪ ಕನ್ನಡ ಕೂಟ ಸರಸ್ವತಿ ನದಿಯಂತೆ ಗುಪ್ತವಾಗಿ ಹರಿಯಿತು. ಇದರಿಂದಾಗಿ ದೊಡ್ಡ ಪ್ರಮಾಣದ ಸಮ್ಮೇಳನ ನಡೆಸಲು ಸಾಧ್ಯವಾಯಿತು. ಆದರೆ ಕಾರ್ಯಕ್ರಮಗಳಲ್ಲಿ ಉತ್ತಮಿಕೆಯ ಮಟ್ಟ ಕಡಿಮೆಯಾಯಿತು. ಕೆಲವು ಮನರಂಜನೆಯ ಕಾರ್ಯಕ್ರಮಗಳಂತೂ ಶಾಲಾಕಾಲೇಜು ಗ್ಯಾದರಿಂಗ್‌ ಮಟ್ಟಕ್ಕೆ ಇಳಿದವು. ಕೆಲವು ಖ್ಯಾತ ಕಲಾವಿದರಿಗೆ ಅವಕಾಶ ದೊರೆಯದೆ ಮರಳುವ ಪ್ರಸಂಗ ಬಂತು. ಈ ಮಾತು ಅಪ್ರಿಯವಾದ ಸತ್ಯ.

ಪ್ರಸ್ತುತ ವರ್ಷದ ‘ಅಕ್ಕ’ ಕಾರ್ಯಕಾರಿ ಸಮಿತಿಯಲ್ಲಿ ಅಮರನಾಥ ಗೌಡರು(ಅಧ್ಯಕ್ಷರು), ಡಾ. ಎಚ್‌.ವಿ.ಕೃಷ್ಣಮೂರ್ತಿ ಹಾಗೂ ಡಾ.ರೇಣುಕಾ ರಾಮಪ್ಪ (ಉಪಾಧ್ಯಕ್ಷರು), ಡಾ. ಎಚ್‌.ಎನ್‌.ವಿಶ್ವಾಮಿತ್ರ(ಕಾರ್ಯದರ್ಶಿ), ವಿ.ಎಂ.ಕುಮಾರಸ್ವಾಮಿ (ಉಪ-ಕಾರ್ಯದರ್ಶಿ), ಎಂ. ಕೃಷ್ಣಮೂರ್ತಿ(ಖಜಾಂಚಿ), ರಂಗ ತಿರುಮಲ (ಉಪ-ಖಜಾಂಚಿ), ಇವರಲ್ಲದೆ 5 ಜನ ಡೈರೆಕ್ಟರರು, 11 ಜನ ವಿಶ್ವಸ್ಥರು ಇದ್ದಾರೆ. ಇವರೆಲ್ಲರೂ ಅಮೇರಿಕೆಯಲ್ಲಿ ಸ್ಥಾನಮಾನ ಪಡೆದ ಪ್ರಭಾವೀ ಜನ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಮೊದಲ ದಿನದ ಕಾರ್ಯಕ್ರಮದಲ್ಲಿ ರಂಗದ ಪೂಜೆಯಾಯ್ತು. ‘ಅಕ್ಕ’ ಕರೆಯೋಲೆ ಸ್ವಾಗತಗೀತವಾಯ್ತು. ಕರ್ನಾಟಕ ಸರಕಾರದ ಪ್ರತಿನಿಧಿಯಾಗಿ ಬಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ರಾಣಿ ಸತೀಶ್‌ ಅವರು ದೀಪ ಬೆಳಗಿಸಿದರು. ನಂತರ ಅವರ ಭಾಷಣವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡೈರೆಕ್ಟರರೂ, ಕನ್ನಡದಲ್ಲಿ ಐ.ಎ.ಎಸ್‌.ಪರೀಕ್ಷೆಯಲ್ಲಿ ಉತ್ತರ ಬರೆದು ಆಯ್ಕೆಗೊಂಡ ಪ್ರಥಮ ಕನ್ನಡಿಗ ಎಂಬ ಖ್ಯಾತಿವೆತ್ತ ಸಿ. ಸೋಮಶೇಖರ್‌ ಅವರು ನಿರರ್ಗಳವಾಗಿ ಕನ್ನಡದಲ್ಲಿ ಭಾಷಣ ಮಾಡಿ ಪ್ರೇಕ್ಷಕರ ಮೆಚ್ಚಿಗೆ ಗಳಿಸಿದರು. ರಾತ್ರಿ ಭೋಜನದ ನಂತರ ಮತ್ತೆ ಮನರಂಜನೆಯ ಕಾರ್ಯಕ್ರಮ ನಡೆದವು.

(ಮುಂದುವರಿಯುವುದು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X