• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ2

By Staff
|

My US Diary - 2002, Dr. G.V. Kulakarniನಾನು ಒಂದು ವಾರ ಮಿನಿಯಾಪೊಲಿಸ್‌ನಲ್ಲಿ ನನ್ನ ಮಗನ ಮನೆಯಲ್ಲಿ ಕಳೆದೆ. ಎರಡು ದಿನ ‘ಜಟ್‌ ಲ್ಯಾಗ್‌’ನಲ್ಲಿ (ವಿಮಾನ ಪ್ರವಾಸದ ನಂತರ ಬರುವ ಸುಸ್ತಿನಲ್ಲಿ) ಕಳೆದೆ. ಉಳಿದ ಐದು ದಿನ ಮನೆತನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹರಟೆ ಹೊಡೆದು ಕಾಲಕ್ಷೇಪ ಮಾಡಿದೆ. ಶುಕ್ರವಾರ 30, ಡೆಟ್ರಾಯಿಟ್‌ನಲ್ಲಿ ಸಮ್ಮೇಳನ ಶುರು ಆಗುವ ದಿನ. ಹಿಂದಿನ ದಿನ ನನ್ನ ಸೊಸೆ ಹಾಗೂ ಮೊಮ್ಮಕ್ಕಳು ನ್ಯೂಯಾರ್ಕಿಗೆ ಮೊದಲೇ ನಿಶ್ಚಿತಗೊಂಡಿದ್ದ ಫ್ಯಾಮಿಲಿ ಪಿಕ್‌ನಿಕ್‌ಗೆ ಹೋದರು. ನನ್ನ ಮಗ ನನ್ನೊಡನೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ.

ನಾರ್ಥವೆಸ್ಟ್‌ ವಿಮಾನ 11-30 ಕ್ಕೆ ಹೊರಡಲಿತ್ತು. ನಾವು ಮೂರು ದಿನ ಊರನ್ನು ಬಿಡಬೇಕಾಗಿತ್ತು. ನನ್ನ ಸೊಸೆಯ ಆಫೀಸು ವಿಮಾನ ನಿಲ್ದಾಣಕ್ಕೆ ಸಮೀಪ ಇರುವುದರಿಂದ ಅಲ್ಲಿ ಕಾರ್‌ ಪಾರ್ಕ ಮಾಡಲು ನನ್ನ ಮಗ ನಿಶ್ಚಯಿಸಿದ. ನಮ್ಮ ಲಗೇಜನ್ನು ಕಾರ್‌ನಲ್ಲಿ ಹಾಕಿಕೊಂಡು ನಾವು 9 ಗಂಟೆಗೆ ಹೊರಟೆವು. ಬ್ಯಾಂಕ್‌ ಆಫ್‌ ಅಮೇರಿಕಾ ಆಫೀಸಿನ ಬದಿಯಲ್ಲಿ ಪಾರ್ಕಿಂಗ್‌ ಜಾಗೆ ಇತ್ತು. ಅಲ್ಲಿ ಅಧಿಕಾರಿಯಾಗಿ ಕೆಲಸಮಾಡುವ ನನ್ನ ಸೊಸೆಯ ಸಹಕರ್ಮಚಾರಿ ರಿಜ್ವಾನ್‌ ಎಂಬವ ನಮ್ಮೊಡನೆ ಬಂದು ನಮಗೆ ಪಾರ್ಕಿಂಗ್‌ ಜಾಗೆ ತೋರಿಸಿದ. ತನ್ನ ಕಾರಿನಲ್ಲಿ ನಮ್ಮ ಸಾಮಾನು ಹಾಕಿಕೊಂಡು ನಮಗೆ ವಿಮಾನ ನಿಲ್ದಾಣಕ್ಕೆ ಕಳಿಸಲು ಬಂದ. ‘ನೀವು ಸೋಮವಾರ ಮರಳಿ ಬರುವಾಗ ನನಗೆ ಫೋನ್‌ ಮಾಡಿರಿ, ನಾನು ನಿಮ್ಮನ್ನು ರಿಸೀವ್‌ ಮಾಡಲು ಬರುವೆ. ನಿಮ್ಮ ಕಾರ್‌ ಇಟ್ಟ ಜಾಗೆಗೆ ಬಿಡುವೆ’ ಎಂದ. ಅವನು ಪಾಕಿಸ್ತಾನದವ.

‘ಹಿಂದುಸ್ತಾನ-ಪಾಕಿಸ್ತಾನ ಜಗಳದ ಪರಿಣಾಮ ಇಲ್ಲಿ ನಿಮ್ಮ ಮೇಲೆ ಆಗಿಲ್ಲವೇ?’ ಎಂದು ನಾನು ಮಗನನ್ನು ಕೇಳಿದಾಗ ಇಲ್ಲವೆಂಬ ಉತ್ತರ ಬಂತು. ಪಾಕಿಸ್ತಾನಿ ನಾಗರೀಕರಿಗೆ ಭಾರತೀಯ ಸಿನೇಮ ಹಾಗು ಆಹಾರ ಬಹಳ ಸೇರುತ್ತದೆಯಂತೆ. ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿ ಅಲ್ಲಿಯ ಅಧಿಕಾರಿಗೆ ನಮ್ಮ ಪಾಸ್‌ಪೋರ್ಟ್‌ ತೋರಿಸಿದೆವು. ನಮ್ಮ ಲಗೇಜ್‌ ಚೆಕ್‌-ಇನ್‌ ಮಾಡಿಸಿದೆವು. ನನ್ನ ಪುಸ್ತಕದ ಬಿಡುಗಡೆ ಆಗುತ್ತಿರುವುದರಿಂದ ನಾನು ಐವತ್ತು ಪ್ರತಿ ಒಯ್ದಿದ್ದೆ. ಅದೇ ಬಹಳ ಭಾರವಾಗಿತ್ತು.

ನಮ್ಮ ವಿಮಾನ 3 ಗಂಟೆಗೆ ತಲುಪಿತು. ಅಲ್ಲಿಯ ಸಮಯ 3-50 ಆಗಿತ್ತು. ನಮ್ಮ ಗಡಿಯಾರ ಸರಿಪಡಿಸಿಕೊಂಡೆವು. ಲಗೇಜ್‌ ಪಡೆಯಲು ಅರ್ಧ ಗಂಟೆ ಬೇಕಾಯಿತು. ಅಲ್ಲಿಂದ ನಾವು ಒಂದು ಶೆಟಲ್‌ ಬಸ್‌ನಲ್ಲಿ ಕೆಲ ಮೈಲುದೂರ ಹೋದ ಮೇಲೆ ಅಲ್ಲಿ ‘ರೆಂಟಲ್‌ ಕಾರ್‌’ ವಿಭಾಗ ದೊರೆಯಿತು. ನನ್ನ ಮಗ ಮೊದಲೇ ಒಂದು ಕಾರ್‌ ಬಾಡಿಗೆಗೆ ಗೊತ್ತು ಮಾಡಿದ್ದ. ನಮ್ಮ ಸಾಮಾನು ಕಾರ್‌ನಲ್ಲಿ ಹಾಕಿ ಡೌನ್‌ಟೌನ್‌ನಲ್ಲಿದ್ದ ‘ಕೋಬೋ’ಹಾಲ್‌ನತ್ತ ಸಾಗಿದೆವು. ಆ ಕಾರಿನ ಬಾಡಿಗೆ ಮೂರು ದಿನಕ್ಕೆ 60 ಡಾಲರ್‌ ಆಗಿತ್ತು.

ಇಲ್ಲಿಯ ಜೀವನದ ಒಂದು ವೈಶಿಷ್ಟ್ಯವೆಂದರೆ ಹೆಚ್ಚಿನ ಕೆಲಸ ಮನೆಯಲ್ಲಿ ಕಾಂಪ್ಯೂಟರ್‌ ಮುಂದೆ ಕುಳಿತು ಮಾಡಬಹುದು. ಬ್ಯಾಂಕ್‌ ವ್ಯವಹಾರ ಕೂಡ ಮನೆಯಿಂದ ಮಾಡಬಹುದು. ಏನಾದರೂ ಕೊಳ್ಳುವದಿದ್ದರೆ ‘ಆನ್‌ ಲೈನ್‌-ಖರೀದಿ’ ಮಾಡಬಹುದು. ನಿಮಗೆ ಒಂದು ಪುಸ್ತಕ ಕೊಳ್ಳುವುದಿದೆ ಎಂದಿಟ್ಟುಕೊಳ್ಳಿ, ಆ ಪುಸ್ತಕ ಪ್ರಕಾಶಕರ ವೆಬ್‌-ಸೈಟ್‌ಗೆ ಹೋಗಿ ಸಂಪರ್ಕ ಸಾಧಿಸಿ ಆ ಪುಸ್ತಕಕ್ಕೆ ಆರ್ಡರ್‌ ಮಾಡಬಹುದು. ನಿಮ್ಮ ಬ್ಯಾಂಕಿನಿಂದ ಅವರಿಗೆ ಹಣ ಕಳಿಸಿ ಪುಸ್ತಕ ಮೇಲ್‌ನಿಂದ ಪಡೆಯಬಹುದು. ಏರ್‌ ಟಿಕೆಟ್‌ ಪಡೆಯುವುದು ಇನ್ನೂ ಸುಲಭ. ನಿಮಗೆ ಬೇಕಾದ ದಿನ ವಿಮಾನಕ್ಕೆ ಮನೆಯಲ್ಲಿ ಕುಳಿತೇ ಟಿಕೆಟ್‌ ಬುಕ್‌ಮಾಡಬಹುದು. ಅದನ್ನು ಪಡೆಯಲು ಹೊರಗೆ ಹೋಗಬೇಕಾಗಿಲ್ಲ. ನಿಮಗೆ ಈ-ಮೇಲ್‌ನಿಂದ ಅವರು ಟಿಕೆಟ್‌ ಕಳಿಸುತ್ತಾರೆ. ಅದರ ಪ್ರಿಂಟ್‌-ಔಟ್‌ ತೆಗೆದು ಕೊಂಡು ನಿಲ್ದಾಣಕ್ಕೆ ಹೋದರಾಯಿತು. ನೇರವಾಗಿ ಪಯಣಿಸಬಹುದು.

ನಾವು ವಿಮಾನ ನಿಲ್ದಾಣದಿಂದ ಇತರ ಪ್ರತಿನಿಧಿಗಳಂತೆ ಟ್ಯಾಕ್ಸಿಮಾಡಿ ಸಮ್ಮೇಳನದವರು ಕಾದಿರಿಸಿದ ಸಮೀಪದ ಹೊಟೇಲಿನಲ್ಲಿ ಉಳಿದುಕೊಳ್ಳಬಹುದಾಗಿತ್ತು. ಆದರೆ ಡೆಟ್ರಾಯಿಟ್‌ನಲ್ಲಿ ನನ್ನ ಮಗನ ಮಿತ್ರ ಶ್ರೀನಿವಾಸರ ಸಂಬಂಧಿಕರಾದ ಕವಿತಾ-ಗಿರೀಶರ ಮನೆಯಿತ್ತು. ಅಲ್ಲಿ ಮೂರು ದಿನ ಉಳಿದುಕೊಳ್ಳಲು ನಮಗೆ ಅನುಕೂಲತೆಯಿತ್ತು. ನಮಗೆ ತಡವಾಗಿದ್ದರಿಂದ ನಾವು ನೇರವಾಗಿ ಕೋಬೋ ಹಾಲ್‌ಗೇ ಹೋದೆವು. ಒಂದು ಚಿಕ್ಕ ಸ್ಟೇಡಿಯಂದಷ್ಟು ದೊಡ್ಡದಾದ ಹೊಟೇಲು. ಹೊಟೇಲಿನವರು ಸಾವಿರಾರು ಕಾರ್‌ಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ತಮ್ಮ ಕಟ್ಟಡದ ಟೆರೇಸ್‌ ಮೇಲೆ ಮಾಡಿದ್ದರು. ಎಲ್ಲೆಡೆ ಹೋಗಲು ನಕ್ಷೆಗಳು ಸಿದ್ಧವಾಗಿರುತ್ತಿದ್ದವು. ಇಡೀ ದಿನ ಕಾರ್‌ ಪಾರ್ಕ್‌ ಮಾಡಲು ನಾಲ್ಕು ಡಾಲರ್‌ ಶುಲ್ಕ ಮಾತ್ರ ಇತ್ತು. ಅಲ್ಲಿಂದ ಲಿಫ್ಟ್‌ ಹಿಡಿದು ನೆಲಮಾಳಿಗೆಗೆ ಬಂದೆವು.

ಸದಸ್ಯತ್ವದ ನೋಂದಣಿ ಮೊದಲೇ ಆಗಿತ್ತು. ಬ್ಯಾಡ್ಜ್‌ ಹಾಗೂ ಸೊವೆನಿಯರ್‌ ‘ಸ್ಪಂದನ ’ ಪಡೆದೆವು. ಕಾರ್ಯಕ್ರಮದ ವಿವರವನ್ನೊಳಗೊಂಡ ‘ಚಂದನ’ ಎಂಬ ಸ್ವಾಗತ ಸಂಚಿಕೆಯನ್ನು ಪಡೆದು ‘ಓಕ್‌ಲ್ಯಾಂಡ್‌ ಹಾಲ್‌’ ಪ್ರವೇಶಿಸಿದೆವು. ನಾಲ್ಕು ಸಾವಿರ ಜನರಿಗೆ ಆಸನವಿರುವ ಭವ್ಯವಾದ ಸಭಾಗೃಹ, ಅಲ್ಲಿ ಮನರಂಜನೆಯ ಕಾರ್ಯಕ್ರಮ ಪ್ರಾರಂಭವಾಗಿದ್ದವು. ಅಲ್ಲಿ ಒಂದೆರೆರಡು ನೂರು ಜನ ಕಾಣಿಸಿದರು. ನಾಲ್ಕು ಸಾವಿರ ಕುರ್ಚಿಗಳು ಹೆಚ್ಚಾಗಿ ಖಾಲಿ ಕಾಣುತ್ತಿದ್ದವು. ಜನರು ಎಲ್ಲಿದ್ದಾರೆ ಎಂದು ನಾವು ಹುಡುಕುತ್ತಿರುವಾಗ ನಮಗೆ ಉತ್ತರ ದೊರೆಯಿತು. ಡೈನಿಂಗ ಹಾಲಿನಲ್ಲಿ ಅಲ್ಪೋಪಹಾರದ ವ್ಯವಸ್ಥೆ ಇತ್ತು. ನಾವೂ ನಮ್ಮ ಎರಡು ಕುರ್ಚಿಗಳನ್ನು ಖಾಲಿ ಮಾಡಿದೆವು, ನೀರುಬಿಡುತ್ತಿದ್ದ ನಾಲಿಗೆಯ ಕರೆಗೆ ಓಗೊಟ್ಟೆವು. ಅಲ್ಲಿ ಬಹಳ ಜನ ಪರಿಚಿತರು ಕಾಣಿಸಿದರು.

ಈ ಸಲವೂ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಕೃಷ್ಣ ಅವರು ಬರುವದಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ನಮ್ಮಂಥವರಿಗೆ ಮತ್ತೆ ಅಸಮಾಧಾನವಾಗಿತ್ತು. ‘ಮತ್ತೆ’ ಎನ್ನಲು ಕಾರಣ ಮೊದಲ ವಿಶ್ವ ಕನ್ನಡ ಸಮ್ಮೇಳನ ಹ್ಯೂಸ್ಟನ್‌ನಲ್ಲಿ ಎರಡು ವರ್ಷದ ಕೆಳಗೆ ಅದ್ದೂರಿಯಾಗಿ ನಡೆದಾಗ ಮುಖ್ಯಮಂತ್ರಿ ಕೃಷ್ಣ ಅವರು ಬಂದಿರಲಿಲ್ಲ. ಆಗ ನೆರೆದ ಪ್ರತಿಯಾಬ್ಬ ಕನ್ನಡಿಗನಿಗೂ ಅಸಮಾಧಾನವಾಗಿತ್ತು. ಆಗ ವೇದಿಕೆಯ ಮೇಲೆ ಮಾತಾಡಿದವರೆಲ್ಲ ‘ಏಳು ಸಲ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ’ ಎಂದು ಅಭಿಮಾನದಿಂದ ಹೇಳಿದಷ್ಟೇ ಸಲ ದಂತಚೋರ, ಚಂದನಗಳ್ಳ ವೀರಪ್ಪನ್‌ ಎಂಬುವ ನಟಸಾರ್ವಭೌಮ ರಾಜಕುಮಾರ್‌ ಅವರನ್ನು ಸೆರೆಹಿಡಿದ ಪ್ರಸಂಗದ ಖಂಡನೆ ಮಾಡದೇ ಇರಲಿಲ್ಲ. ಅದರಿಂದಾಗಿ ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿ ಮುಖ್ಯಮಂತ್ರಿಗಳಿಗೆ ಬರಲಿಕ್ಕೆ ಆಗಿರಲಿಲ್ಲ. ಈ ಸಲ ಕೂಡ ವಿಶ್ವ ಸಮ್ಮೇಳನದ ಸಮಯಕ್ಕೇ ವೀರಪ್ಪನ ಹಾವಳಿ ಉದ್ಭವಿಸಿದೆ , ಈ ಸಲ ನಾಗಪ್ಪ ಅವರನ್ನು ಸೆರೆ ಹಿಡಿದಿದ್ದಾನೆ. ಇದರ ಉಲ್ಲೇಖ ಮಾತ್ರ ಈ ಸಲ ಯಾರೂ ಮಾಡಲಿಲ್ಲ.

ಈ ಸಲ ಪ್ರತಿನಿಧಿಗಳನ್ನು ‘ಆನ್‌ ಲೈನ್‌’ ಬುಕ್‌ ಮಾಡಿದ್ದರು. 1500 ಜನ ಪ್ರತಿನಿಧಿಗಳಾಗಿ ತಮ್ಮ ಹೆಸರು ನೋಂದಾಯಿಸಿದ್ದರು. ಶುಕ್ರವಾರ ಸಂಜೆ ಹೆಚ್ಚಿನ 700 ಜನರು ಪ್ರತಿನಿಧಿಗಳಾದರು. ಹೀಗಾಗಿ ಎರಡನೆಯ ದಿನ ಎರಡುವರೆ ಸಾವಿರ ಜನರ ಅಂದಾಜು ಮಾಡಲಾಗಿತ್ತು. ಆದರೆ ಎರಡನೆಯ ದಿನ ಬೆಳಿಗ್ಗೆ ಪ್ರತಿನಿಧಿಗಳ ಮಹಾಪೂರ ಬಂತು. 1000 ಕ್ಕೂ ಮೇಲ್ಪಟ್ಟು ಜನ ಬಂದರು. ಅವರಿಗೆ ಇಲ್ಲ ಎನ್ನುವ ನಿರ್ದಾಕ್ಷಿಣ್ಯ ತೋರಲಿಲ್ಲ. ಇಷ್ಟು ಜನರ ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಅವ್ಯವಸ್ಥೆಯಾಯಿತು. ಊಟಕ್ಕೆ ಹೋಗುವವರ ‘ಕ್ಯೂ’ ದೊಡ್ಡದಾಯಿತು. ಹಾಲ್‌ ಖಾಲಿಯಾಗತೊಡಗಿತು. ಜನರಿಗೆ ಕಾರ್ಯಕ್ರಮಕ್ಕಿಂತ ಊಟದ ಕಡೆಗೆ ಲಕ್ಷ್ಯ ಹೆಚ್ಚಾಯಿತು. ಮೊದಲನೆಯ ದಿನದ ಕಾರ್ಯಕ್ರಮ ಎರಡನೆಯ ದಿನಕ್ಕೆ ಬಂದವು, ಕೆಲವು ಒಳ್ಳೆಯ ಕಾರ್ಯಕ್ರಮಗಳಿಗೆ ಕತ್ತರಿ ಪ್ರಯೋಗವಾಯಿತು.

ಇದನ್ನೆಲ್ಲ ಬರೆಯಬಾರದು. ಆದರೆ ಮೂರನೆಯ ಸಮ್ಮೇಳನ ಚೆನ್ನಾಗಿ ನಡೆಸುವ ವೀಳ್ಯವನ್ನು ಸ್ವೀಕರಿಸಿದ ಫ್ಲೋರಿಡಾದ ಶ್ರೀಗಂಧ ಕನ್ನಡ ಸಂಘದವರು ಕೂಡ ಈ ಲೇಖನ ಓದುತ್ತಾರೆಂದು ಭಾವಿಸಿ ಅವರ ಅವಗಾಹನೆಗೆ ಕೆಲ ಮಾತು ಹೇಳುತ್ತಿರುವೆ. ಅವರು ಸದಸ್ಯರನ್ನು ಮಾಡುವಾಗ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೂಲೆಗೊತ್ತಿದ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಮರ್ಯಾದೆಯ ಸ್ಥಾನ ನೀಡಬೇಕೆಂದು ಸೂಚಿಸಬಯಸುವೆ. ಮೊದಲನೆಯ ವಿಶ್ವ ಸಮ್ಮೇಳನದಲ್ಲಿ ಆಮಂತ್ರಿತನಾಗಿ, ಕವಿಗೋಷ್ಠಿಯಲ್ಲಿ ಭಾಗವಹಿಸಿದ ಉತ್ಸಾಹದಲ್ಲಿ, ನನ್ನ ಪ್ರಥಮ ಅಮೇರಿಕಾ ಪ್ರವಾಸದ ಬಗ್ಗೆ 280 ಪುಟಗಳ ಒಂದು ಗ್ರಂಥವನ್ನೇ ಬರೆದೆ. ಅದರಲ್ಲಿ 50-60 ಪುಟ ಸಮ್ಮೇಳನದ ಬಗ್ಗೆ ಬರೆದೆ.

(ಮುಂದುವರಿಯುವುದು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more