• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೊಮ್ಮೆ ಅಮೇರಿಕಾ ಪ್ರವಾಸ- ಭಾಗ 9

By Staff
|

*ಡಾ.‘ಜೀವಿ’ ಕುಲಕರ್ಣಿ

ಉಮಾ ಇಟ್ಟಿಗಿ : ಸಂಗೀತ-ನೃತ್ಯ-ನಾಟಕ ಕಲೆಗಳ ತ್ರಿವೇಣಿ ಸಂಗಮ

Uma Ittagi in her dance costumesಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಎರಡನೆಯ ದಿನ. ನಾವು ಭೋಜನಶಾಲೆಯಲ್ಲಿ ಕುಳಿತಿದ್ದೆವು. ಸುಮಾರು ಒಂದು ನೂರು ಟೇಬಲ್‌ ಇರಬೇಕು. ಒಂದು ಟೇಬಲ್‌ನ ಸುತ್ತಲೂ ಎಂಟು-ಹತ್ತು ಕುರ್ಚಿಗಳು. ಬಹಳ ವಿಶಾಲವಾದ ಹಾಲ್‌. ಒಂದೆಡೆ ಒಂದು ಚಿಕ್ಕ ಸ್ಟೇಜ್‌ ಇತ್ತು. ಅಲ್ಲಿ ಕೆಲ ಕಲಾವಿದರು ಸಂಗೀತಸೇವೆ ನಡೆಸಿದ್ದರು. ನಮ್ಮ ಲಕ್ಷ್ಯ ಆ ಕಡೆಗೆ ಇರಲಿಲ್ಲ. ನಂತರ ಬಹಳ ಮಧುರವಾದ ಕಂಠಗಳು ನಮ್ಮನ್ನು ಆಕರ್ಷಿದವು. ನಾವು ಕನ್ನಡ ಚಲನಚಿತ್ರದ ಸಂಗೀತ ಆನಂದಿಸಿದೆವು. ನಮ್ಮ ಊಟ ಮುಗಿದ ಮೇಲೆ ಆ ಕಡೆಗೆ ಹೋಗಿ ಕಲಾವಿದರನ್ನು ಅಭಿನಂದಿಸಿದೆವು. ಆ ಕಲಾವಿದರು ಉಮಾ ಇಟ್ಟಿಗಿ, ಅವರ ಪುತ್ರಿಯರಾದ ಸರಿಣಿ ಮತ್ತು ರಂಜಿನಿ ಎಂದು ಗೊತ್ತಾಯಿತು.

ರಿಚಮಂಡ್‌, ವರ್ಜೀನಿಯಾದ ಪ್ರಸಿದ್ಧ ಮನೋರೋಗ ತಜ್ಞ ಡಾ.ಪ್ರಕಾಶ ಇಟ್ಟಿಗಿ ಅಲ್ಲಿಯೇ ನಿಂತಿದ್ದರು. ಅವರ ಪರಿಚಯವೂ ಆಯಿತು. ಉಮಾ ಅವರ ಕಲೆಯನ್ನು ಮೆಚ್ಚಿ ನಾನು ಅಂದೇ ಪ್ರಕಟವಾಗಿದ್ದ ನನ್ನ ‘ಜೀವಿ ಕಂಡ ಅಮೇರಿಕಾ’ ಗ್ರಂಥದ ಗೌರವ ಪ್ರತಿಯಾಂದನ್ನು ಕೊಟ್ಟೆ. ಉಮಾ ಅವರು ನನಗೆ ಪ್ರತಿಯಾಗಿ ತಮ್ಮ ಏಕಾಂಕ ಸಂಗ್ರಹ ‘At the Dawn’ ಎಂಬ ಪುಸ್ತಕದ ರಡು ಸಂಪುಟಗಳನ್ನು ಕೊಟ್ಟರು. ‘ನಾಳೆ ನಾವು ಮೂವರು ಕೋಬೊ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದೇವೆ, ನೋಡಲು ಮರೆಯ ಬೇಡಿರಿ’ ಎಂದರು ಉಮಾ. ಮೂರನೆಯ ದಿನ ‘ನಾದಪ್ರಿಯ ಶಿವನೆಂಬರು..’ ಎಂಬ ಬಸವೇಶ್ವರರ ವಚನವನ್ನು ಆಧರಿಸಿದ ಭರತನಾಟ್ಯ ಪ್ರಯೋಗವಿತ್ತು. ಜಾಹ್ನವಿ ಜೈಪ್ರಕಾಶರ ಧ್ವನಿಯಲ್ಲಿ , ಹಂಸನಂದಿ ರಾಗ ಆದಿತಾಳದಲ್ಲಿ ರೆಕಾರ್ಡ್‌ಗೊಂಡ ಬಸವೇಶ್ವರರ ವಚನದ ಗತಿಯಲ್ಲಿ ಇಟ್ಟಿಗಿ-ತ್ರಯರ (ಉಮಾ, ಸರಿಣಿ, ರಂಜಿನಿ) ನೃತ್ಯ ನಡೆಯಿತು. ಪ್ರೇಕ್ಷಕರೆಲ್ಲ ಮೆಚ್ಚಿದರು.

ಸಮ್ಮೇಳನದಿಂದ ಮರಳಿ ಮಿನಿಯಾಪೊಲಿಸ್‌ಗೆ ಬಂದ ಮೇಲೆ ನಾನು ಉಮಾ ಅವರ ನಾಟಕಗಳನ್ನು ಓದಿದೆ. ಕರ್ನಾಟಕ ಇತಿಹಾಸ ಹಾಗೂ ಸಂಸ್ಕೃತಿಗಳನ್ನು ಅಮೇರಿಕೆಯಲ್ಲಿ ವಾಸಿಸುವವರಿಗೆ ಬಿಂಬಿಸುವಂತೆ ಬರೆದ 11 ನಾಟಕಗಳು ಎರಡು ಸಂಪುಟಗಳಲ್ಲಿದ್ದವು. ಇವು ಮಕ್ಕಳಿಗಾಗಿ ಬರೆದವುಗಳು ಎಂಬುದನ್ನು ಅರಿತಾಗ, ಅಮೇರಿಕೆಯಲ್ಲಿ ನೆಲಸಿ ಕೂಡ ಇಂತಹ ದೊಡ್ಡ ಕೆಲಸ ಮಾಡುತ್ತಿರುವ ಕನ್ನಡ ಕಲಾವಿದೆಗೆ ಅಭಿನಂದಿಸಲು ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಿದೆ. ಉಮಾ ಅವರು ಸಂತೋಷಿಸಿದರು, ಅಷ್ಟೇ ಅಲ್ಲ ತಮ್ಮ ವೀಣಾ ವಾದನದ ಕೆಸೆಟ್‌ ‘ The Joy of Veena’ ದರೊಂದಿಗೆ ಇನ್ನಷ್ಟು ಸಾಹಿತ್ಯ ಕಳಿಸಿಕೊಟ್ಟರು.

ಎರಡು ದಿನಗಳ ನಂತರ ಪೋನ್‌ ಮಾಡಿ, ‘ನನ್ನ ಕೆಸೆಟ್‌ ಕೇಳಿದಿರಾ?’ ಎಂದು ವಿಚಾರಿಸಿದರು. ನಾನು ಅವರ ಕೆಸೆಟ್‌ ಕೇಳಿ ಆನಂದಿಸಿದ್ದೆ. ಬರಿ ಕೇಳಿ ಆನಂದಿಸಿದೆ ಎಂದರೆ ಸಾಕಾಗಿತ್ತು. ನಾನು ಹೆಚ್ಚಿನ ವಿವರ ಹೇಳುತ್ತ, ‘ನಿಮ್ಮ ಕೆಸೆಟ್‌ ಎರಡನೆಯ ಭಾಗದಲ್ಲಿ ವಾದ್ಯಗಳ ಧ್ವನಿ ಉಚ್ಚವಾಗಿದ್ದು ವೀಣೆಯ ಧ್ವನಿ ಅದರಲ್ಲಿ ಅಡಗಿಹೋಗಿದೆ. ನೀವು ರೆಕಾರ್ಡ್‌ ಮಿಕ್ಸ್‌ ಮಾಡುವಾಗ ವಾದ್ಯದ ಟ್ರ್ಯಾಕ್‌ ಸ್ವಲ್ಪ್‌ ‘ಲೋ’ ಮಾಡಬಹುದಾಗಿತ್ತು.’ ಎಂದೆ. ಉಮಾ ನಗುತ್ತ, ‘ಮುಂದಿನ ಸಲ ರೆಕಾರ್ಡ್‌ ಮಾಡುವಾಗ ನೀವು ಬೆಂಗಳೂರಿಗೆ ಬರಬೇಕು, ಇಂಥ ತಪ್ಪು ಆಗದಂತೆ ನೋಡಬೇಕು’ ಎಂದರು. ನಾಟಕಗಳ ಬಗ್ಗೆ ನನ್ನ ಅಭಿಪ್ರಾಯ ಕೇಳಿದರು.

ರಾಘವೇಂದ್ರ ಸ್ವಾಮಿಗಳ ಒಂದು ಪವಾಡದ ಬಗ್ಗೆ ಕೂಡ ಅವರು ನಾಟಕ ಬರೆದುದರ ಬಗ್ಗೆ ಕೇಳಿದಾಗ - ಡಾ.ರಾಜಕುಮಾರ್‌ ಅವರು ಹಾಡಿದ ಹಾಡುಗಳನ್ನು ಕೇಳಿ, ಅವರು ಸ್ವಾಮಿಗಳ ಮೇಲೆ ನಿರ್ಮಿಸಿದ ಚಿತ್ರ ನೋಡಿ ಪ್ರಭಾವಿತರಾದದ್ದು, ಅವರ ಚರಿತ್ರೆ ಓದಿದ್ದು, ಮಂತ್ರಾಲಯ ಸಂದರ್ಶಿಸಿದ್ದು, ಮುಂತಾದ ವಿಷಯ ಹೇಳತೊಡಗಿದರು. ಒಂದು ಟೆಲಿ-ಸಂದರ್ಶನವೇ ನಡೆಯಿತು.

ಉಮಾ ಮೈಸೂರಿನವರು. ಅವರ ತಂದೆ ಶಿವಬಸಪ್ಪನವರು ಪೋಲಿಸ್‌ ಖಾತೆಯಲ್ಲಿ ಹಿರಿಯ ಅಧಿಕಾರಿಗಳಾಗಿದ್ದರು. ಅಪರಾಧಿಗಳನ್ನು ಶೋಧಿಸುವಲ್ಲಿ ಹೆಸರುಗಳಿಸಿದ್ದರು. ಅವರಿಗೆ ದೇವರಲ್ಲಿ ಅಚಲ ವಿಶ್ವಾಸವಿತ್ತು. ಪ್ರಾಮಾಣಿಕವಾಗಿ ಜೀವನ ನಡೆಸಿದರು. ಸಂಗೀತದಲ್ಲಿ ಅವರಿಗೆ ಆಸಕ್ತಿಯಿತ್ತು. ಉಮಾ 9 ವರ್ಷಕ್ಕೆ ಸಂಗೀತ ಕಲಿಯಲು ಆರಂಭಿಸಿದಳು. ತಂದೆ ಅನೇಕ ಕಲಾವಿದರನ್ನು ಮನೆಗೆ ಕರೆತರುತ್ತಿದ್ದರು.

ಶಿವಬಸಪ್ಪನವರು ಮಗಳನ್ನು ಸಂಗೀತ ಕಚೇರಿಗಳಿಗೆ ಕರೆದೊಯ್ಯುತ್ತಿದ್ದರು. ವೀಣಾವಾದನದಲ್ಲಿ ಆರ್‌.ಕೆ.ಶ್ರೀನಿವಾಸಮೂರ್ತಿ ಹಾಗೂ ದೊರೈಸ್ವಾಮಿ ಐಯ್ಯಂಗಾರರಲ್ಲಿ ಉಮಾ ತರಬೇತಿ ಪಡೆದರು. ಉಮಾ 14 ವರ್ಷದ ಬಾಲಿಕೆಯಾಗಿದ್ದಾಗ ಅವಳ ಗುರುಗಳು ಅವಳಿಗಾಗಿ ಒಂದು ವೀಣೆ ತಯಾರಿಸಿ ಕೊಟ್ಟಿದ್ದರು. ಅದನ್ನು ಅವರು ಅಮೇರಿಕೆಗೆ ಜೋಪಾನವಾಗಿ ಒಯ್ದರು. ಕಸ್ಟಮ್ಸ್‌ ಜನ ಅದರಲ್ಲೇನೋ ಗಂಟಿದೆ ಎಂದು ತೊಂದರೆ ಕೊಟ್ಟರು. ಒಬ್ಬ ಆಂಗ್ಲ ಪತ್ರಕರ್ತ ಉಮಾ ಅವರನ್ನು ಸಂದರ್ಶಿಸಿ ಅವರ ಹಳೆಯ ವೀಣೆಯ ಬಗ್ಗೆ ಕೇಳಿದಾಗ ಅವರು ಅವನಿಗೆ ತಿಳಿಯುವ ಭಾಷೆಯಲ್ಲಿ ಹೇಳಿದ್ದರು, ‘ಹಳೆಯ ವೀಣೆ ಹಳೆಯ ಮದಿರೆ ಇದ್ದಂತೆ. ಅದು ಎಷ್ಟು ಹಳತಾಗಿರುತ್ತದೋ, ಅಷ್ಟೇ ಮಧುರ’ ಎಂದು.

ಉಮಾ ಅವರಿಗೆ ನೃತ್ಯ ಕಲೆಯಲ್ಲಿಯೂ ಅಷ್ಟೇ ಆಸಕ್ತಿ. ಇವರು ಶಾಲೆಯನ್ನು ಮುಗಿಸಿದ ಮೇಲೆ ನೃತ್ಯ ಕಲಿಯಲು ಬಯಸಿದರು. ಅದಕ್ಕೆ ತಂದೆಯವರ ಪ್ರೋತ್ಸಾಹವಿರಲಿಲ್ಲ. ತಮಗೆ ಕೊಟ್ಟ ಪಾಕೆಟ್‌-ಮನಿ ಉಳಿಸಿ ನೃತ್ಯ ಕಲಿತರು. ಗುರು ಧನಂಜಯ ಮತ್ತು ನರ್ಮದಾ ಅವರ ಬಳಿ ಭರತನಾಟ್ಯ ಕಲಿತರು. ನಂತರ ಎಂ.ವಿ.ಎನ್‌.ಮೂರ್ತಿ ಹಾಗೂ ಡಾ. ವೆಂಪತಿ ಚಿನ್ನ ಸತ್ಯಂ ಅವರಲ್ಲಿ ಕುಚಿಪುಡಿ ನೃತ್ಯ ಕಲಿತರು.

ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್‌.ಸಿ ಡಿಗ್ರಿ ಪಡೆದಾಗ ಇವರಿಗೆ ಹತ್ತೊಂಬತ್ತು ವರ್ಷ. ಬಾಸಿಂಗ ಬಲ ಕೂಡಿಬಂತು. 1974 ರಲ್ಲಿ ಡಾ.ಪ್ರಕಾಶ ಇಟ್ಟಿಗಿಯವರೊಡನೆ ವಿವಾಹವಾಯಿತು. ಮೊದಲು ಟೊರೆಂಟೊ(ಕೆನಡಾ)ದಲ್ಲಿ ವಾಸ. ಅಲ್ಲಿ ಕೂಡ ಸಂಗೀತ ಪಾಠ ಹೇಳಿಕೊಡಲು ಆರಂಭಿಸಿದ್ದರು. ನಂತರ 1977ರಲ್ಲಿ ರಿಚ್‌ಮಂಡ್‌, ವರ್ಜೀನಿಯಾದಲ್ಲಿ ಪತಿಗೆ ಒಳ್ಳೆಯ ಕೆಲಸ ಸಿಕ್ಕಿದ್ದರಿಂದ ಇಲ್ಲಿಯೇ ನೆಲಸಿದರು.

ಕನ್ನಡನಾಡಿನಿಂದ, ಭಾರತದಿಂದ ದೂರ ಇದ್ದರೂ, ಪರಿಸರದೊಂದಿಗೆ ಒಂದಾಗಿ ತಮ್ಮತನವನ್ನು ಮರೆಯದೆಯೇ, ಇಲ್ಲಿ ಕೂಡ ತಮ್ಮ ಅಸ್ಮಿತೆಯನ್ನು (identity) ಕಾಪಾಡಿಕೊಂಡು ಬಂದಿದ್ದಾರೆ. ಮೈಸೂರ ಮಲ್ಲಿಗೆಯ ಕಂಪನ್ನು ಇಲ್ಲಿಯೂ ತಂದಿದ್ದಾರೆ. ಇಲ್ಲಿ ವಾಸಿಸುವ ಕನ್ನಡ ಬಾಂಧವರು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲು, ಪರಂಪರೆಯನ್ನು ಮರೆಯದಿರಲು, ಹಬ್ಬ ಹರಿದಿನಗಳಲ್ಲಿ ಅವರ ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ, ‘ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಕವಿವಾಣಿಯನ್ನು ತಮ್ಮ ಜೀವನದಲ್ಲಿ ಸಾರ್ಥಕಗೊಳಿಸಿದ್ದಾರೆ.

ಹಾಡುವುದರಲ್ಲಿಯೂ ಉಮಾ ಅವರಿಗೆ ಅಮಿತ ಆಸಕ್ತಿ. ಕರ್ನಾಟಕದಲ್ಲಿದ್ದಾಗ ಗಾನಕೋಕಿಲೆ ಚೆನ್ನಮ್ಮ ಅವರಲ್ಲಿ, ಅಮೇರಿಕೆಗೆ ಬಂದ ಮೇಲೆ ಉಸ್ತಾದ ಹಮೀದ ಹುಸೇನ್‌ ಅವರಲ್ಲಿ ಸಂಗೀತ ಕಲಿತಿದ್ದಾರೆ. ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ ವಿಶ್ವವಿದ್ಯಾಲಯದಲ್ಲಿ ನಡೆದ ಗಝಲ್‌ ಹಾಡುಗಾರಿಕೆಯ ಸ್ಪರ್ಧೆಯಲ್ಲಿ 1987 ಹಾಗೂ 88 ಎರಡೂ ವರ್ಷ ಉಮಾ ಅವರಿಗೆ ಪ್ರಥಮ ಪಾರಿತೋಷಕ ದೊರೆತಿತ್ತು.

ಅಮೇರಿಕೆಯಲ್ಲಿ ತಮ್ಮ ಕಲೆಗೆ ದೊರೆತ ಮೆಚ್ಚುಗೆಯಿಂದ ಸ್ಫೂರ್ತಿಗೊಂಡ ಉಮಾ ಅವರು, 1989 ರಲ್ಲಿ ‘ಇಟ್ಟಿಗಿ ಫೈನ್‌ ಆರ್ಟ್ಸ್‌ ಅಕಾಡೆಮಿ’ ಎಂಬ ಸಂಸ್ಥೆಯನ್ನು ರಿಚ್‌ಮಂಡ್‌ನಲ್ಲಿ ಪ್ರಾರಂಭಿಸಿದರು. ಅಲ್ಲಿ ಮಕ್ಕಳಿಗೆ ಭಾರತೀಯ ಕಲೆಯಲ್ಲಿ ತರಬೇತಿ ನೀಡುತ್ತಿದ್ದಾರೆ.

ಉಮಾ ಅವರು ಅಮೆರಿಕದಲ್ಲಿ ಉಚ್ಚ ಶಿಕ್ಷಣ ಪಡೆದು ಇತರರಂತೆ ನೌಕರಿ ಮಾಡಬಹುದಾಗಿತ್ತು. ಉಚ್ಚ ಪದವಿ ಗಳಿಸಬಹುದಾಗಿತ್ತು. ಆದರೆ ಇವರು ಹಾಗೆ ಮಾಡದೇ ತಮ್ಮ ಕಲಾಸಕ್ತಿಯನ್ನು ಬಹುಮುಖಗೊಳಿಸಿದರು. ವಾದ್ಯ ಸಂಗೀತ, ನೃತ್ಯ, ಹಾಡುಗಾರಿಕೆಯಿಂದ ತೃಪ್ತರಾಗದೆ ನಾಟಕ ಬರೆದು ಮಕ್ಕಳಿಂದ ಆಡಿಸತೊಡಗಿದರು. ಮಹಾಶಿವರಾತ್ರಿ, ದಸರಾ, ದೀಪಾವಳಿ, ಸಂಕ್ರಾಂತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂತಾದ ಸಂದರ್ಭಗಳಲ್ಲಿ ನಡೆಯುವ ಧಾರ್ಮಿಕ-ಸಾಮಾಜಿಕ ಸಭೆಗಳಿಗಾಗಿ ಸೂಕ್ತವಾದ ವಿಷಯ ಆರಿಸಿ ನಾಟಕಗಳನ್ನು ಇಂಗ್ಲಿಷಿನಲ್ಲಿ ಬರೆಯತೊಡಗಿದರು. ಹಬ್ಬಗಳ ಆಚರಣೆಯಾಂದಿಗೆ ನಮ್ಮ ಸಂಸ್ಕೃತಿಯ ಹಾಗೂ ಪರಂಪರೆಯ ಪರಿಚಯ ಇಲ್ಲಿ ಬೆಳೆಯುತ್ತಿರುವ ಭಾರತೀಯ ಮಕ್ಕಳಿಗೆ ಮಾಡಿಕೊಡುವ ಸದುದ್ದೇಶ ಇವರದಾಗಿತ್ತು. ಇಲ್ಲಿಯ ಹಿಂದೂ ಮಂದಿರಗಳಲ್ಲಿ ಇವರು ಭಾರತೀಯ ಸಂಗೀತ ಹಾಗೂ ನೃತ್ಯ ಹೇಳಿಕೊಡುತ್ತಾರೆ.

ಉಮಾ ಅವರು ಅಮೇರಿಕೆಯಲ್ಲಿ ಹಾಗೂ ಭಾರತದಲ್ಲಿ ಅನೇಕ ಮಹತ್ವದ ಸಭೆಗಳಲ್ಲಿ ವೀಣೆ ನುಡಿಸಿ, ನೃತ್ಯ ಪ್ರದರ್ಶನ ಮಾಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದ್ದಾರೆ. ತಮ್ಮ ಮಕ್ಕಳಿಗೆ ನೃತ್ಯ ಕಲಿಸಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಉತ್ತಮ ಅಂಶಗಳಾದ ಕಲಾಭಿರುಚಿ, ಗುರುಹಿರಿಯರಲ್ಲಿರುವ ಗೌರವ, ಕುಟುಂಬದ ಜನರ ಬಗ್ಗೆ ಇರುವ ಪ್ರೀತ್ಯಾದರಗಳನ್ನೂ, ಇವುಗಳ ಜೊತೆಗೆ ಅಮೇರಿಕೆಯಲ್ಲಿ ಕಂಡುಬರುವ ಉತ್ತಮ ಗುಣಗಳಾದ ಸತತ ಪರಿಶ್ರಮ, ಶಿಸ್ತು, ಸಮಾಜಸೇವೆ ಮುಂತಾದವುಗಳನ್ನು ಜೀವನದಲ್ಲಿ ಅಳವಡಿಸಲು ಪ್ರೋತ್ಸಾಹಿಸಿದ್ದಾರೆ.

ರಿಚ್‌ಮಂಡ್‌ನಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿದ್ದರೂ, ಅತ್ಯಂತ ಸುಂದರವಾದ, ಆಧುನಿಕವಾದ ಮನೆಯನ್ನು ಕಟ್ಟಿ ಅಲಂಕರಿಸಿದ್ದರೂ(ಇವರು ಬಾಟಿಟ್‌ ಚಿತ್ರ ಕಲಾವಿದೆ ಕೂಡ), ಕನ್ನಡ ಸಂಸ್ಕೃತಿಯನ್ನು ಬೆಳಗುತ್ತಿದ್ದಾರೆ. ಅಭ್ಯಾಗತರ ಆದರಾತಿಥ್ಯಕ್ಕೆ, ದಾಸೋಹಕ್ಕೆ ಎಂದೂ ಇವರಲ್ಲಿ ಕೊರತೆಯಾಗಿಲ್ಲ. ಮನೆ ಒಂದು ಗೆಸ್ಟ್‌ಹೌಸ್‌ ಅಲ್ಲ, ಇದು ಒಂದು ಮಂದಿರ ಎಂದು ಭಾವಿಸುತ್ತಾರೆ. ಅದಕ್ಕೆಂದೇ ಬಂದ ಅತಿಥಿಗಳಿಗೆ ಪಾದರಕ್ಷೆ ತೆಗೆದು ಒಳಗೆ ಬರಲು ಹೇಳುತ್ತಾರೆ. ಇದರ ವರ್ಣನೆಯನ್ನು Richmond Times-Dispatch ಪತ್ರಿಕೆಯ ವಿಶೇಷ ವರದಿಗಾರ Roy Procter ಅವರ ಮಾತಿನಲ್ಲಿ ಇಂತಿದೆ:

(ರವಿವಾರ, ಅಗಸ್ಟ್‌ 27, 1995 ರ ಸಂಚಿಕೆ) ತಮ್ಮ ಮನೆಯ ತಳ-ಮಜಲಿನಲ್ಲಿ ನೃತ್ಯ ತರಬೇತಿಗಾಗಿ ಸ್ಥಳಾವಕಾಶಮಾಡಿದ್ದಾರೆ. ಮನೆಯನ್ನು ಎಷ್ಟು ಸುಂದರವಾಗಿ ಅಲಂಕರಿಸಿದ್ದಾರೆಂದರೆ ಜನರು ಸಿನೆಮಾ ಶೂಟಿಂಗಿಗಾಗಿ ಮನೆಯನ್ನು ಬಳಸಲು ಅನುಮತಿ ಕೇಳುತ್ತಾರಂತೆ. ಅನೇಕ ಕನ್ನಡ, ಭಾರತೀಯ ಕಲಾವಿದರು, ಸಂತರು ಇವರ ಮನೆಯನ್ನು ಸಂದರ್ಶಿಸಿದ್ದಾರೆ ಎಂಬ ಅಭಿಮಾನ ಇವರಿಗಿದೆ. Richmond Times-Dispatch ಎಂಬ ನಾಟಕದ ಮೊದಲನೆಯ ಸಂಪುಟದಲ್ಲಿ ಆರು ನಾಟಕಗಳಿವೆ, ಭಕ್ತ ಕನಕದಾಸರ ಮೇಲೆ ಎರಡು ನಾಟಕಗಳಿವೆ, ಒಂದು ಕನಕದಾಸರ ಬಾಲ್ಯ ಜೀವನದಲ್ಲಿ ಅವರ ಕುಶಾಗ್ರಮತಿಯನ್ನು ಬಿಂಬಿಸುತ್ತದೆ. ಗುರುಗಳು ಬೆಂಕಿಗಿಂತ ಬಿಸಿಯಾದದ್ದು ಯಾವುದು ? ಎಂದು ಕೇಳಿದಾಗ, ಭೂಮಿಗಿಂತ ಭಾರವಾದದ್ದು ಯಾವುದು? ಎಂದಾಗ, ಕನಕ ಮಾತ್ರ ಸರಿ ಉತ್ತರ ಹೇಳಿರುವ ಸಂದರ್ಭ. (1. ಕ್ರೋಧ, 2. ಪಾಪ).

ಇತರ ವಿದ್ಯಾರ್ಥಿಗಳು ಮತ್ಸರಿಸಿದಾಗ ಗುರುಗಳು ಯಾರೂ ಇಲ್ಲದ ಪ್ರದೇಶದಲ್ಲಿ ಬಾಳೆಯ ಹಣ್ಣು ತಿನ್ನಲು ವಿದ್ಯಾರ್ಥಿಗಳಿಗೆ ಹೇಳಿದ ಪ್ರಸಂಗ ಇದೆ. ಇನ್ನೊಂದು ನಾಟಕದಲ್ಲಿ ಕನಕನ ಕಿಂಡಿಯಿಂದ ಉಡುಪಿಯ ಶ್ರೀಕೃಷ್ಣ, ಕನಕದಾಸರಿಗೆ ದರ್ಶನ ನೀಡಿದ ಪ್ರಸಂಗ ಇದೆ. ‘ಸುಖದ ಶೋಧ’ವೆಂಬ ನಾಟಕ ಗೌತಮ ಬುದ್ಧನ ಬಗ್ಗೆ ಇದ್ದ ಕಥಾನಕದ ಹಿನ್ನೆಲೆಯಲ್ಲಿ ಹೆಣೆಯಲಾಗಿದೆ. ‘ಅದೃಷ್ಟ ದೇವತೆ’ ಯ ಮಹತ್ವವನ್ನು ರಾಜನಿಗೆ ಬಿಂಬಿಸುವ ಒಬ್ಬ ಮಂತ್ರಿಯ ಜಾಣತನದ ಕಥೆ ಒಂದು ನಾಟಕದ ವಸ್ತುವಾಗಿದೆ. ‘ಮೋಚಿ ಮತ್ತು ಗಂಗಾ’ ಎಂಬ ನಾಟಕವು ಪಂಡಿತನಿಗಿಂತ ಒಬ್ಬ ಸಾಮಾನ್ಯ ಮೋಚಿಯ ಭಕ್ತಿ ಎಷ್ಟು ಉದಾತ್ತವಾಗಿತ್ತೆಂಬುದನ್ನು ತೋರಿಸುತ್ತದೆ.

‘ಪುನರಾವತಾರ’ ಎಂಬ ನಾಟಕದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಮನ್ರೋ ಎಂಬ ಬ್ರಿಟಿಶ್‌ ಅಧಿಕಾರಿಗೆ ಪ್ರತ್ಯಕ್ಷರಾಗಿ ಮಾತಾಡಿದ ಎಂಬ ಪವಾಡವನ್ನಾಧರಿಸಿ ಬರೆದದ್ದು. ಇದರಲ್ಲಿ ನಿವೇದಕನು ಈ ಘಟನೆಗೆ ಪುರಾವೆ ಇದೆ, 1916, ಮದ್ರಾಸ್‌ ಗಝೇಟಿಯರ್‌, ಪುಟ 213 ರಲ್ಲಿದೆ ಎಂದು ಹೇಳುತ್ತಾನೆ. ಎರಡನೆಯ ಸಂಪುಟದಲ್ಲಿ ಐದು ನಾಟಕಗಳಿವೆ. ಒಂದು ಭಕ್ತಿ ಭಂಡಾರಿ ಬಸವೇಶ್ವರರ ಜೀವನವನ್ನು ಆಧರಿಸಿ ಬರೆದ ನಾಟಕ. ಇನ್ನೊಂದು ನರಕಾಸುರನ ವಧೆಯನ್ನು ಕುರಿತ ದೀಪಾವಳಿ ಹಬ್ಬದ ಮಹತ್ವವನ್ನು ಬಿಂಬಿಸುವ ನಾಟಕ. ಮೂರನೆಯದು ಜಿಪುಣನಾದ ಕೃಷ್ಣಪ್ಪ ನಾಯಕ ಪುರಂದರದಾಸನಾಗಿ ಪರಿವರ್ತಿತನಾದ ಕತೆಯನ್ನು ಒಳಗೊಂಡ ನಾಟಕ.

ಇನ್ನು ಎರಡು ನಾಟಕಗಳು ಬಹಳೇ ಮಹತ್ವಪೂರ್ಣವಾಗಿವೆ. ‘ಸರ್ವಂ ಕೃಷ್ಣಮಯಂ’ ಎಂಬ ನಾಟಕದಲ್ಲಿ ಗ್ರೀಕ ದೊರೆ ಅಲೆಕ್ಝಾಂಡರನಿಗೆ ಗಂಗಾವತರಣ ಹಾಗೂ ಗೀತೆಯ ವಿಶ್ವರೂಪ ದರ್ಶನದ ಕಥೆ ಹೇಳುವ ನಾಟಕೀಯ ಕಥಾನಕದಲ್ಲಿ ಲೇಖಕಿಯ ಬಹುಶ್ರುತತ್ವ ಹಾಗೂ ನಾಟಕದ ತಂತ್ರ ಮೆಚ್ಚುವಂತಹದಾಗಿದೆ. ಇಂಥ ನಾಟಕ ವಿದೇಶದ ಮಕ್ಕಳಿಗೆ ರುಚಿಸುವಲ್ಲಿ ಸಂದೇಹವಿಲ್ಲ. ಇನ್ನೊಂದು ನಾಟಕ ‘ಹಕೀಂ ನಂಜುಂಡ’ ಎಂಬುದು. ಈ ನಾಟಕಕ್ಕೆ ಕನ್ನಡದಲ್ಲಿ ನಾಟಕ ಬರೆದಿರುವ ಪ್ರೊ.ಚಂದ್ರಶೇಖರರ ಕೃತಿಯಿಂದ ಸ್ಫೂರ್ತಿ ದೊರೆತಿದೆ ಎಂದು ಲೇಖಕಿ ಹೇಳಿದ್ದಾರೆ.

ಟಿಪ್ಪು ಸುಲ್ತಾನನ ಪಟ್ಟದಾನೆ ‘ಹೈದರ್‌’ ಎಂಬುದು ಕಣ್ಣು ಬೇನೆಯಿಂದ ಬಳಲಿದಾಗ, ಎಲ್ಲ ಹಕೀಮರು ಸೋತಾಗ ಆನೆಯ ಮಾವುತ ಮಾದಪ್ಪನೆಂಬವನು ಅರಸನಿಗೆ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಲು ಸೂಚಿಸುತ್ತಾನೆ. ನಂಜುಂಡೇಶ್ವರ ಹಕೀಮನಾಗಿ ಆನೆಯ ರೋಗ ವಾಸಿಮಾಡಿದ ಐತಿಹಾಸಿಕ ಕಥೆಯನ್ನು ಆಧರಿಸಿದ ಈ ನಾಟಕ ಬಹಳೇ ಆಕರ್ಷಕವಾಗಿದೆ. ನಾಟಕಗಳ ಪ್ರಯೋಗದ ಛಾಯಾ ಚಿತ್ರಗಳನ್ನು ನೋಡಿದರೆ ಈ ನಾಟಕಗಳು ಯಶಸ್ವಿಯಾಗಿ ಪ್ರಯೋಗಗೊಂಡಿರಬೇಕೆಂದು ಮನದಟ್ಟಾಗುವುದು.

ಉಮಾ ಇಟ್ಟಿಗಿ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ಉಳಿಸಿಕೊಂಡು ಅಮೇರಿಕೆಯಲ್ಲಿ ಕನ್ನಡ ನಂದಾದೀಪವನ್ನು ಆರದಂತೆ ಕಾಪಾಡಿಕೊಂಡು ಬಂದಿರುವುದನ್ನು ಕಂಡರೆ ಅವರನ್ನು ನಾವು ಎಷ್ಟು ಅಭಿನಂದಿಸಿದರೂ ಕಡಿಮೆ ಎನಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more